Wednesday, August 1, 2018

ಗೊಂಚಲು - ಎರಡ್ನೂರಾ ಅರ್ವತ್ತೆಂಟು.....

ಸಾವಿನ ಖಾತೆಗೆ ಬಿದ್ದ ಬದುಕ ಬುತ್ತಿಯ ಮತ್ತೊಂದು ತುತ್ತು.....
(ಕಾಡು ಬಾ ಅಂತಿದೆ - ಊರು ಬಿಡ್ತಿಲ್ಲ... #ಮೋಹ...)

ನಗೆಯ ಬಿತ್ತಿ ಸಾವನ್ನು ಕಾವಲಿಗಿಟ್ಟೆ - ಬದುಕ ಕಣಜ ನಗೆಯಲೇ ತುಂಬೀತೆಂದು ಮನದ ಹವಣಿಕೆ...
ನಾ ಬಿತ್ತಿದ್ದೇ ನನ್ನ ಬೆಳೆ ಅಂತಾದರೆ ಒಳಮನೆಯ ಖುಷಿಯ ಕಿವುಚೋ ಅಳು ಯಾತರದ್ದು...!?
ಅಥವಾ ಬಿತ್ತಿದ್ದರಲ್ಲೇ ಎಂತಾರೂ ಹೈಗೈ ಆಯ್ದಾ...!?
ಬಯಲ ಬಾಗಿಲಿಗೆ ಹಚ್ಚಿಟ್ಟ ನನ್ನದೇ ನಗುವ ಮೇಲೆ ನನಗೀಗ ಅನುಮಾನ...
---
ಸುಟ್ಟಾರೆ ಸುಟ್ಟದ್ದು ಬೆಂಕಿಯ ಕ್ರೌರ್ಯವಾ ಅಥವಾ ರೆಕ್ಕೆಯ ಮೋಹವಾ...!??
#ಸಾವು_ಹುಟ್ಟುವ_ಘಳಿಗೆಗೆ_ಸಾಕ್ಷಿ_'ನಾನೇ'...
---
ಉಸಿರೇ ನಿಲ್ಲುವ ಜೀವದ ಸಾವಿಗೆ ಕಣ್ಣು ಹನಿದದ್ದಿಲ್ಲ - ಆಪ್ತತೆಯ ಗೂಡಿನ ಪುಟ್ಟ ಪುಟ್ಟ ಭಾವಗಳ ಚುಚ್ಚುವ ಸಣ್ಣ ಉಪೇಕ್ಷೆಯ ಮುಳ್ಳಿನದೇ ಯಮಯಾತನೆ...
#ಹಾದಿಯ_ಸೂತಕ_ಕಳೆಯುವುದೇ_ಇಲ್ಲ...
---
ಕೆಲವರ ಹಾದಿಯೇ ಹಾಗೆ - ಹೊರಾಕಾರವಷ್ಟೇ ಕಾಣುವ ನೆರಳ ಹಾಗೆ...
ನದಿಯೇ ಮನೆ ಎಂದಮೇಲೆ ಎಂಥದ್ದೇ ನೋವಿಗೂ ಅಳುವಂತಿಲ್ಲ ಮೊಸಳೆ...
#ಬಣ್ಣ...
---
ಎಂದಿನಂತಲ್ಲದ ಸಣ್ಣ ಹೊಯ್ದಾಟಕ್ಕೂ ದೊಡ್ಡ ತಲ್ಲಣ ಈಗೀಗ; ಸಾವಿನೆದುರೂ ಸಾಯದಂತೆ ಸಾಕಿಕೊಂಡ ಅಹಂಕಾರದ ಅಣಿ ಎದೆಗೂಡಿನ ಸಣ್ಣ ನೋವಿನೆದುರು ಮಂಡಿಯೂರುವಾಗ...
ಅಯಾಚಿತ ಅನಾರೋಗ್ಯದ ಅಳಲು ಹಾಗೂ ಹೊದ್ದ ಅಭಿಮಾನದ ವಸ್ತ್ರವಿಹೀನ ಕ್ಷಣಗಳನು ಹೊತ್ತು ಬರಬಹುದಾದ ಕಾಣದ ನಾಳೆಯ ಬಗ್ಗೆ ಕಲ್ಪನೆಯಲೂ ಭಯದ ಬುಗ್ಗೆ............
#ಕಣ್ಣ_ಹನಿಯ_ಬಣ್ಣ_ಕತ್ತಲು...
---
ಅಗೋ ಆ ಬೇಲಿಯಾಚೆ ಅರೆಬಲಿತ ಪುಟ್ಟದೊಂದು ಕನಸಿದೆ: "ಸ್ವಯಂಪಾಕದ ಬದುಕು..."
ಗುದ್ದಾಡಿ ಗೆದ್ದ ನಗೆಯ ಗೂಡಿನಲಿ ಕಣ್ಣ ಹನಿಯ ಬಚ್ಚಿಟ್ಟ ಕತ್ತಲ ಮೂಲೆಯೊಂದಿದೆ: ಕೇದಗೆಯ ಕಂಪಿಗಂಟಿದ ಸರ್ಪದುಸಿರು...
ಹುಟ್ಟಿನೊಂದಿಗೇ ಹುಟ್ಟಿದ ಅಳುವಿನ ಜೊತೆಗೆ ಬದುಕಿಂಗೇನೋ ಮೋಹದ ನಂಟಿದೆ: ತೊರೆಯಲಾರದ ಅಳಲ ನೆನಪು...
ಕಾಯುವ ಸುಖ ಮತ್ತು ಹಾಯುವ ಸಂಕಟದ ಸಮ್ಮಿಳಿತದೀ ಜೀವಂತ ಹಾದಿಯ ನಿರಂತರ ಪ್ರಾರ್ಥನೆ: "ನಿರಾಯಾಸದ ಸಾವು..."
#ನನ್ನ_ಹಾದಿ...
---
ಖಾಲೀ ಸಂಜೆಗಳ ಹೆಣಭಾರಕ್ಕೆ ಕುಸಿದ ಹೆಗಲು...
ನಿರ್ವಾತದ ನಿಶೀತದ ಅಳಲು ಸಾವಿಗಾದರೂ ಕೇಳಬಾರದೇ...
ಹಾಳು ಗೋಳಿನ ಹಾದಿ ಮುಗಿಯುವುದೇ ಇಲ್ಲ...
---
ಪ್ರಿಯ ಕನಸೇ,
ನಿಶ್ಯಂಕೆಯಿಂದ ನಂಬಲೇಬೇಕು ನೀನು... ಸತ್ತಮೇಲೂ ಒಂದು ಬದುಕಿದೆ... ತಾಜಾ ಉದಾಹರಣೆ: ನೀನಿಲ್ಲದ "ನಾನು..."
                                     ಇಂತಿ ನಿನ್ನ ...........
#ಓಲೆ...#ಕಥೆ...
---
ಸಾವಿಲ್ಲದ ಮನೆಯಿಲ್ಲ ನಿಜ, ಅಂತೆಯೇ ವ್ಯಥೆಯ ನಿಟ್ಟುಸಿರ ಕುದಿಯಲ್ಲಿ ಯಮನ ಶಪಿಸದ ತಾಯಿಲ್ಲದ ಮನೆಯೂ ಇಲ್ಲ...
ಕರುಳ ಉರಿಯ ಆರಿಸೀತೇ ಯಾವ ವಿಪ್ರ ಉಪದೇಶ...
#ಕರುಳ_ವೃತ್ತಾಂತ...
---
ಆಯಿಯ ಮರುಹುಟ್ಟಿಗೆ ನನ್ನ ಹೆಸರಿಟ್ಟ ಇದೇ ತೇದಿಯ ದಿನ...
ಸಾವಿನ ಹಾದಿಯ ಮೊದಲ ಹೆಜ್ಜೆ...
ಅಲ್ಲಿಂದ ಇಲ್ಲಿಯ ತಂಕಾ ಎಷ್ಟು ಕಾಲ ಬದುಕಿಬಿಟ್ಟೆ - ಏನೇನೂ ಸಾಧಿಸದೇ, ನಗೆ ಮುಗುಳ ಸಂಧಿಸದೇ, ಖಾಲಿ ಖಾಲಿ ಹಾದಿಯ...!!!
ಇನ್ನೆಷ್ಟು ಬಾಕೀ ಇದೆಯೋ ಸೃಜಿಸಲು ಬೂದಿಯ... 
ಏನೇ ಆದರೂ ಇದ್ದದ್ದು, ಕಳೆದದ್ದು ಎರಡೂ ನನ್ನದೇ ಅಲ್ಲವಾ - ಹಾಗೆಂದೇ ಬರುವ ನಾಳೆಗೊಂದು ಇರಲಿರಲಿ ಸಣ್ಣ ಸದಾಶಯದ ಶುಭಾಶಯ... 
---
ಈಗಿಲ್ಲಿ ಪ್ರೀತಿ ಸವಿಯನುಂಡು ತೇಗಿದ ಹಕ್ಕಿ ಕಸುವಿನ ಧನ್ಯತೆ ಎನ್ನದು...
ನಗೆಯ ಉಣಿಸಿದ ಪ್ರತಿ ಜೀವಾಭಾವಕೆ ನನ್ನೆದೆಯ ಆರ್ದ್ರ ಭಾವನಮನ...
ಈ ಅಕ್ಕರದ ಸಕ್ಕರೆ ಸವಿಭಾವ ಇರಲಿರಲಿ ನಾಳೆಯೂ ಹೀಗೆಯೇ...💞
                       ____ಶ್ರೀವತ್ಸ ಕಂಚೀಮನೆ

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)