Thursday, December 13, 2018

ಗೊಂಚಲು - ಎರಡ್ನೂರೆಂಬತ್ತೆಂಟು..‌‌...

ಮಣ್ಣ ಋಣ.....

ಯಾವ ಕನಸಿನ ನಾವೆಗೆ ಯಾವ ಕಣ್ಣಿನ ಹಾಯಿಯೋ - ಆ ದಿಗಂತದ ಛಾಯೆಯೋ...
ನೀರಿಗಿಳಿಸದೇ ತೆರೆಯ ಕೋರೆಯ ಸೀಳಿ ದೋಣಿ ತೇಲೀತೇ - ಗಾಳಿ ಗುಮ್ಮನ ಗುದ್ದಿಗೆ ಎದೆಯೊಡ್ಡಿ ನಿಲ್ಲದೇ ಬದುಕ ಹಣತೆ ಬೆಳಗೀತೇ..‌.
#ಹಲವು_ಚಿತ್ರ_ಒಂದು_ಚೌಕಟ್ಟು...
⇱⇲⇳⇱⇲

ಕಣ್ಣ ಹನಿಯನ್ನ ರೆಪ್ಪೆ ಮರೆಯಲ್ಲೇ ಬಚ್ಚಿಡಬಹುದು ಜಗದ ಜಗುಲಿಗೆ ಬೀಳದಂತೆ - ಎದೆಯ ಧಾರೆಯ ಅವುಡುಗಚ್ಚಿ ಬಚ್ಚಿಡುವುದೆಲ್ಲಿ ಮತ್ತು ಹೇಗೆ ಇರುಳ ಕಣ್ಣು ಉಕ್ಕದಂತೆ...
#ಬಿಕ್ಕಳಿಕೆ...
⇱⇲⇳⇱⇲

ಮಾತು ಹುಟ್ಟದ, ಮೌನ ಒಗ್ಗದ, ನನಗೇ ನಾನು ಅಪರಿಚಿತ...
ಎಚ್ಚರಕೆ ನೂರೆಂಟು ಬಾವು - ತಬ್ಬಬಾರದೇ ನಿದ್ದೆಯ ಸೆರಗಿನ ತಂಪು ತಾವು...
ಕಾಯುವ ಕಷ್ಟ ಮತ್ತು ಅನಿವಾರ್ಯತೆ...
#ಮಣ್ಣ_ಋಣ...
⇱⇲⇳⇱⇲

ನಾಲಿಗೆಯ ಸಾವಿರ ಬಡಬಡಿಕೆಗಳೂ ಮನದ ಮೌನದ ಗೋಡೆಯ ಕೆಡವಲಾರದೆ ಕಂಗೆಡುವಾಗ - ಖಾಲಿ ಬೀದಿಯ ಕವಲುಗಳಲಿ ಹುಡುಕುತ್ತೇನೆ ಒಂದು ಸಣ್ಣ ನಗುವಿನ ಕಡ ಸಿಕ್ಕೀತಾ...
ಅಲ್ಲೇಲ್ಲೋ ಮೂಲೆಯಲಿ ಸುಳಿದಂತಾಗುವ ಬೆಳಕ ಬೆನ್ನಿನ ನೆರಳು ಇಲ್ಲಿಂದ ಎದ್ದು ಹೋದವರದ್ದೇ ಇರಬೇಕೆನಿಸುತ್ತೆ - ಮೌನ ಮತ್ತಷ್ಟು ಬಲಿಯುತ್ತದೆ...
#ಹೆಗಲು...
⇱⇲⇳⇱⇲

ನಿನಗೆ ನಾನು ಬೇಡವಾಗಿ - ನನ್ನೇ ನಾನು ಕಳೆದುಕೊಂಡೆ...
ನನ್ನ ನನಗೆ ಪರಿಚಯಿಸಿದ ತೀರಾ ತೀರಾ ಆತ್ಮೀಯ ಕತ್ತಲು - ಬೆಳಕಿನಲ್ಲಿ ಅಪರಿಚಿತ...
ಬದುಕಿಗೊಂದು ಗುರುತೂ ಇಲ್ಲ - ಶೃದ್ಧಾಂಜಲಿ ಸಭೆಯಲ್ಲಿ ಹೆಸರು ಜಗಜ್ಜನಿತ...
#ಅಳುವ_ಕಡಲಿನ_ಅಲೆಗಳು... 
⇱⇲⇳⇱⇲

ಬೆಳಕನ್ನು ವಾಚಾಮಗೋಚರ ಹಾಡಿ ಹೊಗಳೋ ಮನುಷ್ಯನಿಗೆ ಕತ್ತಲೆಂದರೆ ಕಡು ವ್ಯಾಮೋಹ...
#ನಾನೆಂಬ_ಬಣ್ಣಬಣ್ಣದ_ಮುಖವಾಡಗಳು...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Monday, December 10, 2018

ಗೊಂಚಲು - ಎರಡ್ನೂರೆಂಬತ್ತು ಮತ್ತೇಳು.....

ಭಾವತರ್ಪಣ..... 

ಬೆವರು, ನೀರು, ಕಣ್ಣೀರು - ಬಣ್ಣ, ರೂಪಗಳೊಂದೇ ನನ್ನದು ನಿನ್ನದು; ರಾಗ, ರುಚಿ, ಭಾವ ಮಾತ್ರ ನಾ ತುಂಬಿದಂತೇ ನನ್ನದು...
#ಅನಾವರಣ...
↢↖↗↭↘↙↣

ಅಚ್ಚರಿಯು ಏನಿಲ್ಲ...
ಹಗಲು ವೇಷದ ಹಾದಿಯಿದು - ಹಳಿಯ ಹಂಗಿನ ನಡಿಗೆ...
ಮೆಚ್ಚುಗೆಯ ಮುಚ್ಚಳಿಕೆಯ ಬೂದಿ ಭಾರದ ಗಳಿಕೆ...
ಮಳೆಯೂ - ಬಿಸಿಲೂ - ಮಳೆಬಿಲ್ಲೂ; ಕಪ್ಪನ್ನು ಮುಚ್ಚಿಟ್ಟ ಬಯಲಿಗಷ್ಟೇ ಬಣ್ಣದ ಮೆರಗು...
ಕ್ಷಣ ಕ್ಷಣದ ಬಣ್ಣ ಊಸರವಳ್ಳಿಗೆ ಅಳಿವು ಉಳಿವಿನ ಗುರಾಣಿ...
ನಾನಿಲ್ಲಿ ತಳ್ಳಲಾಗದ ಕ್ಷುದ್ರ ನೆನಪು ಮತ್ತು ತಬ್ಬಲಾಗದ ಕೆಟ್ಟ ಕನಸು - ಒಂದು ನಿಮಿಷ ಮೌನ...
#ನಗುವೆಂಬೋ_ಛದ್ಮವೇಷ...
↢↖↗↭↘↙↣

ಮೌನವೇ - ನಿನ್ನಿಂದ ಕಲಿತ ಮಾತೊಂದು ನಿನ್ನಲ್ಲೇ ಉಳಿದ ತನ್ನ ನೂರೆಂಟು ಸಂಗಾತಿಗಳ ಹುಡುಕಾಡಿಕೊಂಡು ಸೋತ ಮಾತಿನ ಸ್ವಾನುಕಂಪದ ಅರೆಹುಚ್ಚು ಬಡಬಡಿಕೆಗಳ ಬಾಜಾರಿನಲ್ಲಿ ಅವಿರತ ಅಂಡಲೆಯುತಿದೆ...
ತಪ್ಪಿಯೂ ಸುಳಿಯದಿರು ಈ ಎದೆ ಬೀದಿಯೆಡೆಗೆ - ನಿನ್ನೆತ್ತರವ (?) ಹಾಡುವ ನಾಲಿಗೆ ಸತ್ತೀತು...
#ಒಂದು_ಘಳಿಗೆ_ಮೌನ...
↢↖↗↭↘↙↣

ನಿನ್ನಿಂದ ತುಂಬಿಕೊಂಡದ್ದು ನೆರಳಾಗಿ ಬೆನ್ನಲ್ಲೇ ಇದ್ದರೂ ಲಕ್ಷ್ಯವಿಲ್ಲ, ಲೆಕ್ಕವಿಲ್ಲ - ನಿನ್ನ ಕಳೆದುಕೊಂಡು ಖಾಲಿಯಾದ ಮಡಿಲನ್ನು ಯಾವ ಬೆಳಕೂ ತುಂಬಲಾಗುತ್ತಿಲ್ಲ - ತಪ್ಪಿಹೋದ ಘಳಿಗೆ ಮತ್ತೆ ಕೈಗೆಟುಕದಿದ್ದರೂ ನೆನಪಲ್ಲಿ ಮಾಯೆಯಂತೆ ಎದುರಿಗೇ ಬಂದು ಬಂದು ಕಣ್ಣ ತೀರವ ಗುದ್ದಿ ಗುದ್ದಿ ಕಾಡುತ್ತದೆ...
ಇನ್ನಾದರೂ ಎಲ್ಲ ಕೊಡವಿಕೊಂಡು ಏಳಬೇಕು - ಇಲ್ಲಿಯ ಖಾಲಿಯಲೆಲ್ಲ ನಿನ್ನಿಂದ ಹೆಕ್ಕಿಕೊಂಡ ನನ್ನೇ ನಾ ತುಂಬಿಕೊಳ್ಳಬೇಕು...
ನೀಲಿಯೇ ಕೂಗಿ ಕೂಗಿ ಹೇಳಬೇಕು:
.......... ಹಿಂಗಿಂಗೆ ಹಿಂಗಾಡ್ತಾ ಹಿಂಗಿದ್ದ ಇಂಥೋನು ಇನ್ನಿಲ್ಲ ಎಂದು ತಿಳಿಸಲು ವಿಶಾಧಿಸುತ್ತೇನೆ....
#ನಿನ್ನೆಗಳ_ಆ_ನನಗೆ_ಭಾವಪೂರ್ಣ_ಶ್ರದ್ಧಾಂಜಲಿ...
↢↖↗↭↘↙↣

ಒಂದು: ಗೋಡೆ ಕಟ್ಟಿಕೊಂಡು ಬೇಯುತ್ತಿದ್ದೆ, ಪ್ರೀತಿಯಿದ್ದದ್ದೇ ಆದರೆ ನೀ ಗೋಡೆಯ ಹಾರಿ ಬರಲೀ ಎಂದು - ಪರೀಕ್ಷೆ ತಪ್ಪಾ...?
ಇನ್ನೊಂದು: ಕುಂಟು ನನಗೆ, ಬಾಗಿಲು ತೆರೆದು ಬಂದೀಯೆಂದು ಕಾಯ್ದು ಕೂತಿದ್ದೆ ಇಲ್ಲೇ ಹೊರಗೆ - ನಿರೀಕ್ಷೆ ತಪ್ಪಾ...??
ಪ್ರೇಮ: ಸೇತುವಾಗಲೆಂದು ಒಳಸುಳಿದೆ ಗೋಡೆ ಮಾಡಿ ಹೊರಗುಳಿದಿರಿ - ಕಾಯ್ದುಕೊಳ್ಳಬೇಕಿತ್ತಲ್ಲವಾ ನಿಮ್ಮೊಳಗೆ, ಹುಡುಕುತ್ತಲೇ ಸವೆದಿರಿ ನನ್ನ ಪರರೊಳಗೆ...
#ಸೋಲು_ಯಾರದ್ದು...

ಪ್ರೇಮ ಪ್ರೇಮಿಯಲ್ಲಿ ಸೋಲುವುದು ತಾನು, ತನ್ನಂತೆ, ಕೇವಲ ತನ್ನದೆಂಬೋ ಹಸಿ ಹಸಿ ಸ್ವಾರ್ಥದಲ್ಲೇ ಅಲ್ಲವಾ...??
#ಸ್ವಂತಕ್ಕೆ_ಕುರುಡು_ಪರರದ್ದು_ಸುಳ್ಳು...

ನನ್ನದೇ ಜೀವ ಭಾವಕ್ಕೆ ನನ್ನನ್ನ ಅಪ್ರಾಮಾಣಿಕನಾಗಿಸೋ ಆತ್ಮ ವಂಚನೆ ಅನೈತಿಕವೇ ಅಲ್ಲವಾ...??
ಸೃಷ್ಟಿ ಸಹಜ ಕಾಮ ಅಪವಿತ್ರ ಹೇಗಾಯ್ತು...!!!
↢↖↗↭↘↙↣

ನಾ ಕರೆದಿರಲಿಲ್ಲ ನಿನ್ನ...
ಬಂದ ಮೇಲೆ ಹೊರಗೂ ಬಿಟ್ಟಿಲ್ಲ ನೀ ನನ್ನ...

ಹೊಟ್ಟೆ ತುಂಬಿರಬೇಕಲ್ಲ...
ತುಂಬ ಹಸಿವಲ್ಲೂ ತೇಗು ಬರತ್ತೆ ಅಲ್ವಾ...

ಬಕಾಸುರ ಹಸಿವು ಪ್ರೀತಿಗೆ - ತುಂಬೀತೇ ಬಡಪೆಟ್ಟಿಗೆ...
ಒಳಮನೆಯ ಕತ್ತಲ ರಾವು ಅಂಗಳಕೂ ಬಂದಲ್ಲಿ ತುಂಬೀತು ಯಾವ ಹಸಿವಿನ ಜೋಳಿಗೆ...

ಹಾವು ಸಾಯಡಾ ಕೋಲು ಮುರೀಯಡಾ...
"ಮೌನವ ಕಲಿಸು ಇಲ್ಲಾ ಮೌನದಿ ಮಲಗಿಸು..."
#ಭಾವತರ್ಪಣ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

ಗೊಂಚಲು - ಎರಡ್ನೂರೆಂಬತ್ತಾರು.....

ಮರುಳನ ವ್ಯರ್ಥಾಲಾಪಗಳು.....

ನಟ್ಟ ನಡು ಸಂತೆಯ ಮಟ ಮಟ ಮಧ್ಯಾಹ್ನ ಗಕ್ಕನೆ ಎದೆಯ ಹೊಕ್ಕೋ ಮಸಣ ಮೌನ - ನಿನ್ನ ನೆನಪು...

ಕಣ್ಣ ತೀರದ ಹನಿಯಾಗಿ ಇಳಿದು ಹೋದ ಕನಸಿಗೊಂದು ಹೆಣಭಾರದ ಪತ್ರ ಬರೆದು ಮಳೆಯ ಮೋಡದ ಬೆನ್ನಿಗಂಟಿಸಿದ ಮರುಳತನ ನನ್ನ ಕವಿತೆ...

ಪ್ರೀತಿಯ ದೀಪವಾಗಬೇಕಿತ್ತು - ಅಷ್ಟಿಷ್ಟು ಕೊಟ್ಟು ತುಂಬಿಕೊಳ್ಳುತ್ತಾ.....
ಬಂಜರು ದ್ವೀಪವಾದೆ - ಎಗ್ಗುಸಿಗ್ಗಿಲ್ಲದೇ ಪಡೆಪಡೆದು ಖಾಲಿಯಾಗುತ್ತಾ.....

ಒಂದು ಸಣ್ಣ ನೋವನ್ನಾದರೂ ಬಿತ್ತುತಿರು - ಇರುವಿಕೆಯ ಅರಿವಿನ ಸಮಾಧಾನ...
#ಬದುಕು_ಭಾವ...
ππ¡¡¡ππ

ಗಿಜಿಗುಡುವ ರಸ್ತೇಲಿ ಹೆಜ್ಜೆಗೊಮ್ಮೆ ಕಾಲ್ತೊಡರಿ ಮುಗ್ಗರಿಸ್ತೇನೆ - ಕಾಲ್ತುಳಿತಕ್ಕೆ ಕಣ್ಣಿಲ್ಲದ ಭಯ; ಅದೇ ಖಾಲಿ ಖಾಲಿ ಹಾದಿಯೆಂದರೆ ನನ್ನ ಕಾಲ ಸಪ್ಪಳಕೆ ನಾನೇ ಬೆಚ್ಚಿ ಸಣ್ಣ ಕರುಳಿನಾಳದಿಂದ ವಿಪರೀತ ಭೀತಿ...
ಹೇಗೆ ನಡೆಯುವುದಿಲ್ಲಿ ಎದೆ ನಡುಗದೇ...
#ನೆನಪ_ಕೈಚೀಲ_ಕನಸ_ಕಂದೀಲು...
#ಭಾವ_ಬಂಧ_ಸಂಬಂಧ...
ππ¡¡¡ππ

ಒಂದೊಂದು ಮುರ್ಕಿಯಲ್ಲೂ ಯಾವ್ಯಾವುದೋ ಹಿಂದುಮುಂದಿನ ಎಳೆತಕ್ಕೆ ಒಂದೊಂದೇ ಕೊಂಡಿ ಕಳಚಿಕೊಳ್ಳುತ್ತದೆ...
ನನ್ನ ಮಾತಿನ ಆಖೈರು ಪೀಕನೆಲ್ಲ ತನ್ನ ಮೌನದ ಕಣಜದಲ್ಲಿ ದಾಸ್ತಾನು ಮಾಡಿಟ್ಟುಕೊಂಡ ಬಿಕನಾಸಿ ಬದುಕಿನೆದುರು ಅರೆಪಾವು ನಗುವಿಗಾಗಿ ಕೈಚಾಚಿ ನಿಲ್ಲುತ್ತೇನೆ ಪ್ರತಿ ಹೆಜ್ಜೆಗೂ...
ಕೂಡುವುದೊಂದು ಕಾಲ - ಕಳೆಯುವುದೊಂದು ಕಾಲ; ಕೊರಳ ಘಂಟೆ ಕಟ್ಟಿಕೊಂಡು ತುಡುಗು ಮೇಯಲು ಹೊರಟ ಕಳ್ಳ ದನದಂತ ಮನಸು...
#ನಾನು...
ππ¡¡¡ππ

ಹಿಂತಿರುಗಿ ನೋಡಿದರೆ ಬರೀ ಹಾಯ್ದು ಬಂದ ಕಲ್ಲು ಮುಳ್ಳುಗಳ ರಾಶಿ ರಾಶಿಯಷ್ಟೇ ಕಾಣುತ್ತೆ - ಮುಂದಾದರೋ ಅಸೀಮ ಕತ್ತಲ ಬಯಲು...
ಹೇ ಜೀವವೇ ನೀ ಅಲ್ಲಲ್ಲಿ ಆಗೀಗ ದಾಟಿದ ಮೀಟಿದ ಚೂರುಪಾರು ನಗೆಯ ಬೆಳಕನ್ನೇಕೆ ನೆನೆದು ಹಾಡುವುದೇ ಇಲ್ಲ...!!!
ಮನಸಿದು ಹಾದಿ ತಪ್ಪಿದ್ದೆಲ್ಲಿ; ಹರಿದ ಪಾದದ ರಕ್ತದ ಕಲೆಯಲ್ಲಾ, ಮಂಜುಗಣ್ಣಿನ ಹನಿಯ ಕರೆಯಲ್ಲಾ...???
ಜೀರ್ಣವಾಗದ ನಿನ್ನೆಗಳು ಹರಳುಗಟ್ಟಿ ಸಣ್ಣ ಕರುಳಿನಾಳದಲ್ಲಿ ಮುಳ್ಳು ಮುರಿವ ಮೃತ ಸಂಜೆ...
#ಮಸಣ_ಮೌನದ_ಮನಸು...

ತೀಕ್ಷ್ಣ ನಾಲಿಗೆ, ಮಂದ ಕಿವಿ, ವಿಕ್ಷಿಪ್ತ ತರ್ಕಗಳ ವಿಲೋಮ ಹಾದಿ...
#ನಾನು...

ಕಾಲು ಎಡವಿದ್ದು ಹಿಂತಿರುಗಿ ನೋಡಿದ್ದಕ್ಕಾ ಅಥವಾ ಮುಂದಿಟ್ಟ ಅಡಿಗೆ ಅನುಭವದ ಆಸರೆ ಇಲ್ಲದ್ದಕ್ಕಾ...??
ಬದಲಾವಣೆ ಜಗದ ನಿಯಮ - ಅದ್ನಾ ಅರಗಿಸ್ಕೊಳ್ಳೋಕಾಗ್ದೇ ಇದ್ದಿದ್ದು ನನ್ ಕರ್ಮ...
#ಹಾದಿ...
ππ¡¡¡ππ

...............ಪಾಪಿ ಚಿರಾಯುವಂತೆ - ನನ್ನಂತೆ, ನಿನ್ನಂತೆ.....

ಬಂದ ದುಪ್ಪಟ್ಟು ವೇಗ ಹೋಗುವಾಗ ಪ್ರೀತಿಗೆ...
ಅದಕೇ ವೇಗವೆಂದರೆ ಭಯ ಈಗ ಈ ಪಾಪಿ ಪ್ರಾಣಿಗೆ...
ಸಾವಧಾನವ ಕಲೀರೋ ಅನ್ನೋಳು ಅಜ್ಜಿ ಮಾತಿಗೊಮ್ಮೆ - ಸೋತ ಹಾದೀಲಿ ನೆನಪೀಗ ಅಜ್ಜಿ ಹೆಜ್ಜೆಗೊಮ್ಮೆ...

ಅಳುವಾತನ ಜತೆ ಕೂತು ಅಳುವುದು ಎನಗೊಗ್ಗದ ಮಾತು...
ಅಳು ಅಳುವನ್ನೇ ಹಡೆವ ಭಯವಿದೆ ನೋವಿಗೆ ನಗೆಯೊಂದು ಭರವಸೆಯ ಹೆಗಲಾಗದ ಹೊರತು...
ಬರೀ ಕರುಣೆಗೆ ಹುಟ್ಟಿದ ಕೂಸು ಬಾಳಿದ್ದು ಭ್ರಾಂತು...
ಪ್ರೀತಿ ಪ್ರೀತಿಗೇ ಹುಟ್ಟಬೇಕಾದ ತಂತು...

ಇನ್ನಾಗದೂ ಅನ್ನಿಸಿದಾಗ ಬಾಂಧವ್ಯದ ಕೊಂಡಿ ಹರಿದದ್ದು ಅಥವಾ ಹರಿದುಕೊಂಡದ್ದಲ್ಲ ಸೋಲು; ಬದಲಿಗೆ ಬಿಡಿ ಬಿಡಿಯಾಗೋ ಪ್ರಕ್ರಿಯೆಯಲ್ಲಿ ಇನ್ನಿಲ್ಲದಂತೆ ಭಾವದ ಸೆಲೆಯ ಕಲುಷಿತಗೊಳಿಸಿದ್ದು ಅಥವಾ ಗಬ್ಬೆಬ್ಬಿಸಿಕೊಂಡದ್ದು ನಿಜದ ಸೋಲು...
#ನಾನು...

ಇರಲಿ ಕೋಟೆ ಗೋಡೆಗೊಂದು ಕಳ್ಳಗಂಡಿ - ಒಂದು ಹೆಜ್ಜೆ ಬಯಲಿಗೆ; ಮಸಣ ಮೌನ ಕಾಡುವಾಗ ರಣ ಕೇಕೆಯೂ ತುಸು ಜೀವಂತಿಕೆ...

#ಅರ್ಥ_ಕೇಳಬೇಡಿ_ಮರುಳನ_ವ್ಯರ್ಥಾಲಾಪಗಳಿಗೆ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

ಗೊಂಚಲು - ಎರಡ್ನೂರೆಂಬತ್ತು ಮತ್ತೈದು.....

ಪೊಕ್ಕು ವ್ಯಾಖ್ಯಾನ..... 

ಏನಯ್ಯಾ ನಿನ್ನ ಸಾಧನೆ...?
ಬೆಳಕೇ -
ಸಾಧನೆ ಗೀಧನೇ ಮಣ್ಣು ಮಸಿ ಎಲ್ಲ ಗೊತ್ತಿಲ್ಲ...
ನೋವನೆಲ್ಲ ನಿನ್ನುಡಿಗೆ ಸುರಿದು ನಿಸೂರಾಗಿ ನಿನ್ನೆದೆ ಕುಡಿಕೆಯ ನೇಹದ ಪ್ರೀತಿ ಬೆಣ್ಣೆಯ ಮೆದ್ದವನ ಮುಡಿಯ ಸಿರಿಯೊಂದಿದೆ - ಅದು ಕರುಬುಗಳ ಖಬರಿಲ್ಲದ ಖುಲ್ಲಂಖುಲ್ಲಾ ಹುಚ್ಚು ನಗು...
ಈಗಿಲ್ಲಿರೋದೂ, ಹಾಂಗೆ ಚೂರು ಪಾರು ಅಲ್ಲಿಲ್ಲಿ ಕೊಡಬಹುದಾದದ್ದೂ ಎಲ್ಲ ಅದೊಂದೇ - ನಡೆಗೆ ಪಡಿ ಕೊಟ್ಟು ಸಲಹಿದ ನಾಲ್ಕಾಣೆ ನಂಜಿಲ್ಲದ ನಗು...
#ನೀನೇ_ಸಾಕಿದ_ಕಳ್ಳ_ಮತ್ತವನ_ಗಳಿಕೆ_ಉಳಿಕೆ...
↧↧↧↤↰↱↦↥↥↥

ಚಂದಿರನ ಪಾಳಿ ಮುಗಿವ ಮುನ್ನವೇ ಕರುಳ ಗಂಟಿನ ನಟಿಕೆ ಮುರಿದು ಮನದ ಮೇವಿನ ಮೋಹಕೆ ನಗೆ ಅಗುಳು ಕರೆದ ಕಡೆಗೆ ನಡೆವ ಕವಿ ಬದುಕಿನ ಕಾವ್ಯದ ವ್ಯಾಕರಣದ ಪಾದ ತಪ್ಪಿದ ಮೇಲೆ ತಾ ಗೀಚಿದ ಎಲ್ಲಾ ಕವಿತೆಯ ಪಾದಕ್ಕೂ ಪ್ರಾಸ, ಅನುಪ್ರಾಸ, ಗಣ, ಲಯ, ಮಾತ್ರೆ, ಉಪಮೇಯ, ಉಪಮಾನ ಅಲಂಕಾರ ಎಂತೆಲ್ಲಾ ಛಂದೋಬದ್ಧ ವ್ಯಾಕರಣದ ವಜನು...!!
ಶಬ್ದಗಳ ಸೌಹಾರ್ದದಲಿ "ನೋವು ನಗೆಯ ಸಾಂತ್ವನಿಸಿದಂತೆ ಎದೆ ಬಗೆದ ಕವಿತೆ..."
ಈ ಬಯಲಾಟ ಮುಗಿಯುವುದೆಂದು...???
#ಕಣ್ಣಾಮುಚ್ಚೇ_ಕಾಡೇ_ಗೂಡೆ...
↧↧↧↤↰↱↦↥↥↥

ನಾನು:
ನಿನ್ನೊಳಗಿನ ಹಂಬಲದ ತೀವ್ರತೆ ಇಳಿಮುಖವಾಗ್ತಿದ್ದಂಗೇ ಹುಟ್ಟಿಕೊಳ್ಳುವ ಸಬೂಬುಗಳ ಕೌದಿಯ ಹೊದ್ದ ಕ್ಷುದ್ರ ನಿರ್ಲಕ್ಷ್ಯದ ಧಾಳಿಗೆ ನನ್ನೊಳಗಿನ ಆರ್ದ್ರ ಕೊಂಡಿ ತಣ್ಣಗೆ ಕಳಚಿಕೊಳ್ಳುತ್ತ ಸಾಗುತ್ತದೆ - ಇಲ್ಲೆಲ್ಲೋ ಕಳಚಿಕೊಂಡು ಅಲ್ಲೆಲ್ಲೋ ಹುಡುಕುವ ಆಟಕ್ಕೆ ಏನೇನೋ ಸುಂದರ ಸುಳ್ಳಿನ ಹೆಸರ ಹಚ್ಚೆ...

ಪ್ರಜ್ಞೆ:
ಆರೋಪಿ ನೀನಲ್ಲ - ಬದಲಾವಣೆ ಜಗದ ನಿಯಮ; ಆರೋಪ ನಿನಗಿಲ್ಲ - ಬೆಳಕು ಪಡಿಮೂಡುವಲ್ಲಿ ಬದಲಾವಣೆ ಜೀವದ ಚಂದ...

ಮನಸು:
ನೀ ನಡೆವ ಹಾದಿಯಲಿಂದು ಸಾವಿರ ಹುಣ್ಣಿಮೆ ಕನಸುಗಳು ಬೊಗಸೆ ತುಂಬಿಯಾವು - ಆದರೇನು, ಅಂದೆಂದೋ ನಿನ್ನ ಕಾಲಿಗೆಡವಿದ ನಾನೆಂಬ ಸಣ್ಣ ಹಣತೆಯ ಉರಿಯ ಸೌಗಂಧವ ಅವೆಂದೂ ತೊಳೆಯಲಾರವು...

ಮೌನ:
ನನ್ನನ್ನು ನನ್ನಲ್ಲಿ ಮಾತ್ರ ಹುಡುಕು...

ಉಪಸಂಹಾರ:
ನೀನು ಬಿಟ್ಟಿಲ್ಲ - ನಾನು ಸಿಕ್ಕಿಲ್ಲ; ಸ್ವಗತದಲ್ಲೂ ಆರೋಪ ಪ್ರತ್ಯಾರೋಪ - ಬಾಂಧವ್ಯದ ಹಾದಿಯಲೀಗ ಮುಳ್ಳುಕಂಟಿ...
↧↧↧↤↰↱↦↥↥↥

ಸುಳ್ಳು ಹುಟ್ಟಾ ಪರಮ ಸ್ಫುರದ್ರೂಪಿ - ಮೇಲಿಂದ ಅದಕ್ಕೆ ಸುಣ್ಣ ಬಣ್ಣ ಬಳಿದು ಸಭ್ಯತೆಯ ಹೆಸರಲ್ಲಿ ಮಾರುಕಟ್ಟೆಗೆ ಬಿಡ್ತೇನೆ - ಆಹಾ!!! ಭಲೇ ವ್ಯಾಪಾರ, ಜೇಬಿನ ತುಂಬಾ ಫರಾಕುಗಳ ಗರಿ ಗರಿ ಬಿರುದು ಬಾವಲಿಗಳು...
ಸತ್ಯವೋ - ಬಿಡಿ ಅದು ಬೆಳಕಿನ ಹಣೆಗಣ್ಣು...
#ಪೊಕ್ಕು_ವ್ಯಾಖ್ಯಾನ...
↧↧↧↤↰↱↦↥↥↥

ಹೆಡ್ಡ ನಾನು - ಚೂರೂ ನೋವಿನ ನೆಲಗಟ್ಟಿಲ್ಲದ ಸುಖದ ಸೂರು ಬಲುಬೇಗ ಜಾಳು ಜಾಳೆನಿಸುತ್ತೆ ನನಗೆಂದೂ...
ಮತ್ತೆ ಹೇಳ್ತೇನೆ - ಸ್ವರ್ಗದ ಏಕತಾನ ಸುಭೀಕ್ಷ ಸೌಖ್ಯಕಿಂತ ನರಕದ ಶಿಕ್ಷೆಯ ವೈವಿಧ್ಯ ಹೆಚ್ಚು ಸಹಜ, ಸ್ವಾಭಾವಿಕ ಮತ್ತು ಅತೀವ ಆಕರ್ಷಕ ಅನ್ಸತ್ತೆ ನಂಗೆ; ಅದಕೆಂದೇ ಸದಾ ಸುಖವ ಹಳಿಯುವ ನರಕದಂತ ಬದುಕಿನೆಡೆಗೆ ಅಸೀಮ ವ್ಯಾಮೋಹವಿದೆ ಅಫೀಮಿನ ನಶೆಯಂಗೆ...
ಹಾಗೆಂದೇ, "ಪೂರ್ಣ ಸ್ವಂತವೆನಿಸುತಿದ್ದ ಆ 'ಕಪ್ಪು ಹುಡುಗಿ' ಸತ್ತ ಮೇಲೂ ಇನ್ನೂ ಹತ್ತಾರು ವಸಂತಗಳ ಬದುಕಿದೆ ಈ ಹಂಸೆ..."
ಪಾಳು ಗುಡಿಯ ಅಂಗಳದಲಿ ನಿಂತೇ ಇದೆ ಗರುಡಗಂಭ...
ಉಹುಂ, 'ನಾನು' ಸಾಯುವುದಿಲ್ಲ - ನನಗಿಲ್ಲಿ ನಾನೇ ಎಲ್ಲ...
#ಉಸಿರಿನೊಂದು_ಕನಸು...
↧↧↧↤↰↱↦↥↥↥

ಜೀರ್ಣ ಆಗದೇ ಹೋದಲ್ಲಿ ಮಾತು, ಮೌನ, ಭಾವ, ಬಂಧ ಎಲ್ಲವೂ ಅಷ್ಟೇ; ಅಜೀರ್ಣವಾದದ್ದೆಲ್ಲ ಬೇಧಿಗೆ ಹಾದಿಯೇ - ಅನ್ನವಾದರೂ, ಪ್ರಾಣವಾದರೂ...
#ಬೇಧಿ_ಬೇಗುದಿ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Tuesday, December 4, 2018

ಗೊಂಚಲು - ಎರಡ್ನೂರೆಂಬತ್ನಾಕು.....

ಚಿಟ್ಟೆ ಪಾದದ ಧೂಳು.....
(ಕಪ್ಪು ಹುಡುಗಿಯೆಂಬ ಕನಸ ಕನವರಿಕೆ - ಮಾಗಿ ಬಾಗಿಲಲ್ಲಿ...) 

ಈಗಷ್ಟೇ ತನ್ನ ವರ್ಷದ ಪಾಳಿ ಆರಂಭಿಸಿದ ಛಳಿ ತನ್ನ ಬಾಗಿಲಲಿ ಬಿಡಿಸಿದ ರಂಗೋಲಿಯನು ಕಳ್ಳ ದಾರಿಯಲಿ ಬಂದ ಸಣ್ಣ ತುಂತುರು ಮಳೆಯೊಂದು ಅಳಿಸುತ್ತಿದೆ...
ಕಾರಣ, ಅಲ್ಲೆಲ್ಲೋ ಕಡಲ ಗರ್ಭದಲಿ ಸಿಡಿದ ಗಾಳಿಯಲೆಯ ಉದ್ವೇಗಕ್ಕೆ ಇಲ್ಲಿಯ ಎಂದೋ ಹೆಪ್ಪಾದ ತುಂಡು ಮೋಡಗಳು ಕರಗಿ ಕವಿತೆಯಾಗುತ್ತಿವೆ...
ಹೊಸ ಹಗಲು ಅರಳುವ ಹೊತ್ತಲ್ಲಿ ಅಂಥಾ ಛಳಿ ಮಳೆಯ ತಿಲ್ಲಾನಕ್ಕೆ ಮೈಯ್ಯೊಡ್ಡಿ ಇದ್ಯಾವುದೋ ರಣ ಗಡಿಬಿಡಿಯ ಬೀದಿ ನಡುವಿನ ಕವಲಿನಲ್ಲಿ ಕೆಲಸವಿರದ ಖಾಲಿ ಕೈಯ್ಯ ಅಬ್ಬೆಪಾರಿಯಂತೆ ನಿಂತಿದ್ದೇನೆ...
ವಿನಾಕಾರಣ ಎದೆಯ ಪದ ಪಾದವ ತೋಯಿಸೋ ನಿನ್ನ ನೇಹದ ನೆನಪಾಗುತ್ತಿದೆ - ಅರ್ಥವಾಗದ ನವಿರು ಮಾಧುರ್ಯವೊಂದು ಮೈಮನವ ಹೊಕ್ಕಿ ಸುಳಿಸುತ್ತುತ್ತೆ; ಮಾಗಿಯ ಇರುಳಿಗೆ ಗಟ್ಟಿ ಹೊದ್ಕೊಂಡ ಮೇಲೂ ಒಂದು ಸಣ್ಣ ಛಳಿ ಉಳಿದು ಮುದ ನೀಡುತ್ತಲ್ಲಾ ಹಾಗೆ...
ಭಾವದ ಬಿಗಿತ ಬೆಳೆಯುತ್ತಾ ಸಾಗಿ ಅಪರಿಚಿತ ಹಾಡಿಯಲಿ ಕಣ್ಣು ಕೋಡಿ ಹರಿದರೆ ನೀನೇ ಹೊಣೆ ಹೊರಬೇಕು - ನೋವಿಗೆ ಕಲ್ಲಾದ ಎದೆಯನೂ ಪ್ರೀತಿಗೆ ಕಣ್ಣು ತುಳುಕುವಂತೆ ಕೆತ್ತಿದ್ದು ನೀನೇ ತಾನೆ...
ಹೇಳಿದ್ದು ನೀನೇ ಅಲ್ಲವಾ, "ಎದೆಯ ಮೌನವ ಆಲಿಸು - ಕರುಳ ಮಾತನು ಲಾಲಿಸು; ನಗೆಕಾವ್ಯನಾದೋಪಾಸನೆಯ ನೈವೇದ್ಯವಾಗಲೀ ಬದುಕು..."
ನೋಡಿಲ್ಲಿ, ಮಾಗಿಬಾಗಿಲ ಮಳೆಗೆ ನಿನ್ನ ಸೆರಗಿನಂಚು ಹಿಡಿದ ಮೂಗ ಹಾಡಾಗುತಿದ್ದಾನೆ - ಮಡಿಲ ಮಗುವಾಗಿಸಿಕೋ...
#ಬೆಳಕವಳು_ಕಪ್ಪು_ಹುಡುಗಿ...💞
§§¿?¿?§§

ತುಟಿ ಒಡೆದದ್ದು ಸುರಿವ ಶೀತಕ್ಕೆ ಅಂತಂದು ಆಯಿಯ ನಂಬಿಸಿದೆ...(?)
ಉಫ್... ಛಳಿಗೆ ಮಾತು ಬರುವುದಿಲ್ಲ ನೋಡಿ - ಅಬ್ಬ ಬಚಾವಾದೆ...
ತಂಪು ಮುಸ್ಸಂಜೆಗಳಲಿ ಬಲು ತುಂಟಿ ಅವಳು - ಅವಳ ಸನ್ನಿಧಿಯಲಿ ನಾ ಚಂದಿರನನೂ ಮೆಚ್ಚಬಿಡೆನೆಂಬ ಹಠದವಳು...
ಎನ್ನೆದೆ ಮಾಳವ ಶೃಂಗಾರದಿ ಸಿಂಗರಿಸಿ ಆಳಿ ತಾರೆಗಳ ಅಣಕಿಸಿ ಮೆರೆವ ಕಾರ್ತೀಕ ದೀಪ...
#ನನಗೆಂದೇ_ಉರಿವ_ಕಪ್ಪು_ಹುಡುಗಿಯ_ಕರುಳ_ಹಣತೆ...
§§¿?¿?§§

ಅದೇನಂದ್ರೆ -
ಮಾಸ್ತರ್ ಗೋಡೆಯ ಕರಿ ಹಲಗೆ ಮೇಲೆ ರೇಖಾ ಗಣಿತದ ಬೇರೆ ಬೇರೆ ಕೋನಗಳ ಚಿತ್ರ ಬಿಡಿಸುವಾಗ ಅವಳ ಬಿಂದಿ, ಮೂಗುತಿ ಹಾಗೂ ಝುಮ್ಕಿಗಳನು ಕಣ್ಣ ರೇಖೆಯಲಿ ಸೇರಿಸಿ ಎದೆಯ ರೇವಿನಲಿ ಮಳ್‌ಮಳ್ಳ ಕನಸುಗಳ ಚಿತ್ರ ಬರೆಯುತಿದ್ದ ಅಡ್ಡ ಬೆಂಚಿನ ಹೆಡ್ಡ ನಾನು...
ಸಣ್ಣದೊಂದೂ ಸುಳಿವೀಯದೇ ಸಟಕ್ಕನೆ ನನ್ನೆಡೆಗೆ ತಿರುಗಿ ಅರಳುತ್ತಿದ್ದ ಆಕೆಯ ಜೋಡಿ ಬಿಂಬಿರಿಯಂಥ ಚಂಚಲ ಕಂಗಳು ನನ್ನ ಉಸಿರಿನೆಲ್ಲಾ ಬಿಳಲಿನಲೂ ಪೆಕರು ಪೆಕರಾಗಿ ಎಬ್ಬಿಸುತಿದ್ದ ಕಮ್ಮನೆ ಕಂಪನಕೆ ಎಂದಿಗೂ ಭಾಷೆಯ ವಿವರಗಳಿಲ್ಲ ಬಿಡಿ...
ಎನ್ನೆದೆಗೆ ಕಣ್ಣೋಟದ ಕಿಡಿ ತೂರಿ ಮರು ಘಳಿಗೆ ಮುಂಗುರುಳನು ಕಿವಿಗೆ ಮುಡಿಯುವ ನೆವದಿ ಅವಳ್ಯಾಕೋ ಅಡಗಿಸಿಡಲು ಹೆಣಗುತಿದ್ದ ತುಟಿಯಂಚಿನ ಸಣ್ಣ ನಗೆ ಲಾಸ್ಯ ಇಂದಿಗೂ ಒಗಟೇ ನನ್ನಲ್ಲಿ...
ನಿನ್ನೆಗಳ ಕಡೆದು ಕಾಯ್ದಿಟ್ಟ ನಗೆಯ ಅಫೀಮು ಅವಳು - ಎದೆಯ ಹೊಕ್ಕುಳಲಿ ಹೊಯ್ದಾಡೋ ಜೊಂಪೆ ಜೊಂಪೆ ನೆನಪ ಕಂಪು...
ಅಂದು ನನ್ನಾ ಹೊಸ ಹರೆಯದ ಬೀಗವಿಲ್ಲದ ಬಾಗಿಲಿಗೆ ಜೇನ್ದುಂಬಿ ಕನಸುಗಳ ಬಲೆ ನೇಯ್ದು ಕೊಟ್ಟ ಪಾಪದ ಕೂಸು - ಇಂದೀಗ ಯಾವ ಪ್ರೇಮದ ತೋಳಿನ ಅರಳು ಮಲ್ಲಿಗೆ ಹೂವೋ...
ಎದೆಯ ದೈವವದು ಎಲ್ಲಿದ್ದರೇನಾತು - ನಚ್ಚಗಿರಲಿ ಇದ್ದಲ್ಲಿ ಆ ನವಿಲ್ಗರಿಯ ಮರಿ...
#ಚಿಟ್ಟೆ_ಪಾದದ_ಧೂಳು...
§§¿?¿?§§

ಹೆಣ್ಣೇ -
"ಪ್ರಕೃತಿಗೆ ತನ್ನ ತಾ ಸಿಂಗರಿಸಿಕೊಳ್ಳೋ ಆಸೆ ಅತಿಯಾದಾಗ ನಿನ್ನ ಸೃಷ್ಟಿಸಿ ಮೈಮುರಿದು ನಾಚಿತು..."
ಎನ್ನೆದೆ ರೇವಿನ ಖಾಲಿಯ ತುಂಬ ನಿನ್ನ ಮನದ ಹುಕಿಯಂತೆ ನೀ ನಡೆದಾಡಿದ ನಿಂದೇ ಗೆಜ್ಜೆ ಪಾದದ ಗುರುತು...
#ಹೆಣ್ಣೆಂದರೇ_ಸೊಬಗು...

ಕೆಲವೆಲ್ಲ ಕನಸುಗಳು ಸುತಾರಾಂ ನನಸಾಗದೆಯೂ ನಿರಂತರ ಹಿತ ಭಾವದಲ್ಲಿ ತೋಯಿಸುತ್ತಿರುತ್ತವೆ ಮತ್ತೆ ಮತ್ತೆ - ಉದಾಹರಣೆಗೆ ನೀನು...
ಇನ್ನಷ್ಟು ವಿವರ ಬೇಕಾ - ಧಿಮಿಗುಡುವ ಮಳೆ, ನಿನ್ನ ಮೃದು ಸ್ಪರ್ಷಕೆ ಸುಳಿ ಗಾಳಿಯ ಸೀಳಿ ನಯವಾಗಿ ಓಡೋ ಬೈಕ್, ಹಿಂದಿನಿಂದ ನಿನ್ನ ಗಟ್ಟಿ ತಬ್ಬಿ ಕುಳಿತ ನಾನು ಮತ್ತು ನಿಂತಲ್ಲೇ ನಿಂತು ಮೈಮರೆತು ಮುಗುಳ್ನಗುವ ಕಾಲ...
#ಸತ್ತೋಗೋಷ್ಟು_ಖುಷಿಯಾಗೋ_ಪುಟ್ಟ_ಆಸೆ...
§§¿?¿?§§

ಈ ಮಾಗಿಯ ಅಟಾಟೋಪಕ್ಕೆ ಎಲುಬಿನಾಳದಿಂದೆದ್ದು ಬರೋ ಛಳಿ ಮಗ್ಗಲು ಬದಲಿಸದೇ ಕಾಡುವಾಗ "ನಾಚಿಕೆಯ ಕದವ ಮುಚ್ಚಿ, ಬೆತ್ತಲ ದೀಪವ ಹಚ್ಚಿ, ಎನ್ನೆದೆಯ ಮಂಚವನೇರಿ ಮಲಗೇ ಮಲಗೆನ್ನ ಮಡಿಲ ಹೂವೇ - ಕಾಮನೊಲೆಯ ಹಚ್ಚಿ, ಹರೆಯ ಮದವ ಮಥಿಸಿ, ಸುಖದ ನಿತ್ರಾಣದಲಿ ಛಳಿಯ ಸೊಕ್ಕನು ಸುಡುವ ಬಾರೇ ಬಾರೆನ್ನ ತೋಳ ಕಾವೇ" ಅಂತೆಲ್ಲಾ ಹುಚ್ಚುಚ್ಚು ಬಡಬಡಿಸಿ ಸಂದೇಶ ಬರೆದು ನಿಂಗೆ ಕಳಿಸದೇನೇ ನಿಂಗೆ ತಲುಪಿತು ಅನ್ಕೊಂಡು ಮುಸುಕೆಳೆದುಕೊಳ್ತೇನೆ...
ಬೆಳಗಿನ ಮೂರು ಜಾವ ಮುಂಚೆ, ಅಲಾರಾಂ ಕೂಗೋಕೂ ಮೂರೂವರೆ ನಿಮಿಷ ಮುನ್ನವೇ ಸ್ವಪ್ನ ಮೇಳನದ ಸೂರು ಹರಿದು ಎಚ್ಚರಾಗಿಬಿಡತ್ತೆ; ಮುಂಬೆಳಗಿನ ಕನಸು ನಿಜವಾಗುವುದಂತೆ ಕಣೇ ಹುಡುಗೀ - ಆಸೆ ಬಲಿಯುತಿದೆ ಈ ಕಾರ್ತೀಕದ ಮಗ್ಗುಲಿಗಾದರೂ ಉಸಿರ ಬೆವರಿನ ಸಂಕಲನದಿ ಮೈಯ ಬಯಲು ಮಿಂದೀತೇ...
#ತೋಳ_ಕಸುವಿಗೆ_ನಿನ್ನ_ತೂಗುವ_ಕನಸು...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Saturday, December 1, 2018

ಗೊಂಚಲು - ಎರಡ್ನೂರೆಂಬತ್ತರಮೇಲ್ಮೂರು.....

ಇದೀಗ.....  

ಎಲ್ಲೆಲ್ಲಿಂದಲೋ ಏನೇನೆಲ್ಲ ಖುಷಿ ಖುಷಿಯ ನಶೆಯ ಬಣ್ಣಗಳ ಬರಗಿ ತಂದು ಕೀಲಿಸಿ ಕೀಲಿಸಿ ತುಂಬಿದರೂ ಎದೆ ಗರ್ಭದಾಳದ ಸಾವಿನಂತ ಖಾಲಿತನ ಮಿಸುಕಾಡದೆ ಹಾಗ್ಹಾಗೇ ಉಳಿದೇ ಹೋಗುತ್ತದೆ...
#ಮಸಣಕ್ಕೆ_ಬೇಲಿ_ಹಾಕಿ_ಸಾವಿಗೆ_ಕಾಯುವುದು...
↰↲↳↱↝↜↰↲↳↱

ಭರವಸೆಯ ಪಸೆ ಆರದಿರಲೆಂದು ಹಚ್ಚಿಟ್ಟ ಸೂತಕದ ಮನೆಯ ತಲೆ ಬಾಗಿಲ ಹಣತೆಗೆ ಎಣ್ಣೆ ಸುರಿಯುವ ತುಂಬು ತೋಳಿನ ಕಸುವನೂ ಗಡಗೆಡಿಸುತ್ತದೆ ಹೆಗಲಿಗೆ ಗಟ್ಟಿ ಮೆತ್ತಿಕೊಂಡ ಸಾವಿನ ಕರಕಲು ವಾಸನೆ...
#ಎಲ್ಲ_ನೆನಪಾಗುತಿದೆ...

ಬದುಕು ಮುನಿಸಿಕೊಂಡಲ್ಲಿ ಸಾವು ಅತೀ ಕರುಣೆ ತೋರಬಾರದು...
#ಕೊಳೆತದ್ದೆಲ್ಲ_ದುರ್ನಾತವೇ...

ಹುಟ್ಟಿಯೇ ಇಲ್ಲದ್ದನ್ನು ಹುಡುಕುವ ಪುರುಡು ಧಾವಂತ ನೀ ಬದುಕೇ...
#ಅಸ್ತಿತ್ವ...

ಎಲ್ಲೆಲ್ಲೋ ಸುಳಿದು ಅಲ್ಲೇ ಬಂದು ನಿಲುವ ನೆನಹು - ವಾಚಾಳಿಯ ಗಂಟಲ ಹುಣ್ಣು...
#ನಿನ್ನೆ...

ಸತ್ತವನ ಎದೆಯ ಬದುಕಿರುವ ಕನಸು - ಆ ಕಪ್ಪು ಹುಡುಗಿ...
#ನಾಳೆ...

ನನ್ನ ಪಾತ್ರವಿಲ್ಲಿ ಖಾಲಿ ಗೋಡೆಯ ಚಿತ್ರವಷ್ಟೇ...
#ಇದೀಗ...
↰↲↳↱↝↜↰↲↳↱

ಸಾವಕಾಶದಿ ಸಾಯುತಿರೋ ಸಹನೆ ಹಾಗೂ ಹೆಣೆದುಕೊಂಡಿದ್ದ ಕೊಂಡಿಗಳೆಲ್ಲ ಒಂದಾನ್ಕೆ ಲಡ್ಡಾಗಿ ತುಂಡು ತುಂಡಾಗುತಿರುವಂತ ವಿಲೋಮ ಭಾವ ಪ್ರಕ್ಷುಬ್ಧತೆಗೆ ಎದೆಯ ಹೊಸ್ತಿಲು ಕಿರಿದಾಗುತ್ತಾಗುತ್ತಾ ಅದರ ಹಾದಿ ಇನ್ನಷ್ಟು ಒರಟೊರಟು - ಒಳಗೆಲ್ಲಾ ಸಂತೆಮಾಳದ ಬೀದಿಗುಂಟ ಗಾರುಹಿಡಿದ ಅಪರಾತ್ರಿಯಲಿ ಗೋಳುಸುರಿವ ಕುಂಟು ಬೆಳಕಿನ ವಿಚಿತ್ರ ಅಸ್ವಸ್ಥ ಖಾಲಿತನ - ನಂದ್‌ನಂದೇ ಅನ್ನಿಸೋ ಗಳಿಕೆ, ಉಳಿಕೆಯೆಲ್ಲ ಈಗಿಲ್ಲಿ ಈ ಕೊನೆಮೊದಲಿಲ್ಲದ ಖಾಲಿತನವೊಂದೇ......
ಬದುಕಿನಂಥಾ ಬದುಕಿನ ಹುಚ್ಚು ನಶೆಯೂ ತುಂಬಲಾರದ ಈ ನಿರ್ವಾತವ ನೀನಾದರೂ ತುಂಬಬಲ್ಲೆಯಾ ನಿರ್ವಾಣಿ ನಿದ್ದೆಯೇ...
#ಬೆಳದಿಂಗಳ_ನಿತ್ಯಶ್ರಾದ್ಧ...
↰↲↳↱↝↜↰↲↳↱

ಚಿತ್ರಗುಪ್ತನ ವಿಳಾಸ ಸಿಕ್ಕೀತಾ...?
ಯಾರು ಕೊಟ್ಟಾರು...??
ಮತ್ತೇನಲ್ಲ, ಖಾಸಾ ಮಸಣ ಪೂಜೆಗೆ ಮುಹೂರ್ತ ಕೇಳಲಿಕ್ಕಿತ್ತು...
ಕಾಡು ಹಾದಿಗೆ ಎರಡಾದರೂ ಗಟ್ಟಿ ಹೆಗಲು ಹೊಂದಿಸಿಕೊಳ್ಳಬೇಕಲ್ಲ...
#ಬಡ_ಬದುಕಿನ_ಸಿದ್ಧತೆ...
↰↲↳↱↝↜↰↲↳↱

ಫಕ್ಕನೆ ಗೆಲುವೊಂದು ದಕ್ಕಿಬಿಟ್ಟಾಗಲೂ, ಎಲ್ಲ ಸರಾಗ ನಡೆಯುತ್ತಿದೆ ಅಂದಾಗಲೂ ತುಂಬ ಭಯವಾಗುತ್ತೆ - ವಿಚಿತ್ರ ತಳಮಳ - ರುಚಿಯೇ ಬೇಧಿಯ ಮೂಲವಲ್ಲವಾ...
ಅಮ್ಮನೂರಿನ ಹಾದಿಯಲ್ಲೂ ಕನಸ ಹೂಳಿದ ಗುರುತು ಕಣ್ಣಿಗಡರುತ್ತೆ - ದಕ್ಷಿಣ ಬಾಗಿಲ ಊರ ದೊರೆ ಅಡಿಗಡಿಗೆ ಮುಳ್ಳಾಗಿ ನಗುತಾನೆ - ಶಾಪಗ್ರಸ್ತ ಪಯಣ...
ನಿನ್ನೆಯ ಮೋಹಕೆ ಕರುಳು ಕಲಮಲಿಸಿದರೆ ಯಾರ ಹೊಣೆ ಮಾಡಲಿ...
ಗ್ರೀಷ್ಮದಲ್ಲೇ ಕಣ್ಣ ಕೊಳದಿ ನೆರೆ ಉಕ್ಕುವುದಂತೆ...

ತಯಾರಿ ಇರಬೇಕಂತೆ ಹೊರಡೋ ಮುಂಚೆ - ಏನ್ಮಾಡೋದು ಹಾಳು ಆಲಸ್ಯ, ಹುಟ್ಟು ಎದೆಯ ಜಡ್ಡು, ಎಲ್ಲ ಸೇರಿ ತಯಾರಿಯ ತರಾತುರಿ ಶುರುವಾಗುವ ಮುನ್ನವೇ ಹೊರಡೋ ಹೊತ್ತು ಮೀರಿರುತ್ತೆ...
ರಣ ಗಡಿಬಿಡಿಯ ಕಾಲವೋ ನನಗೆಂದು ಚೂರೂ ಕಾಯುವುದಿಲ್ಲ - ಜವನ ಕೋಣಕ್ಕೆ ಕುಣಿಕೆ ಇಲ್ಲ...
ಹೌದೂ, ಕಂದಮ್ಮಗಳ ಹೀಚು ನಗೆಯನೂ ತಿಂದು ತೇಗುವ ಆ ಗಡವ ಕಾಲನ ಕ್ರೂರ ಹಸಿವಿಗೆ ಅಮ್ಮಂದಿರ ಬೆಂದ ಕರುಳ ಶಾಪ ತಟ್ಟುವುದಿಲ್ಲವೇ...

ಹೇಗಿಷ್ಟು ಮರೆಗುಳಿಯಾದೆ ನಾನು - ಗೋಳು ಸುರಿವ ನನ್ನ ಉಳಿವಿನ ಅಂಬಲಿಯ ಹಂಬಲಕೆ ನಿನ್ನನೂ ಮರೆತುಬಿಡುವಷ್ಟು...
                       .............ಇನ್ನು ಹೊರಡಬಹುದು...

ಭಾವಗಳೆಲ್ಲಾ ಸುತ್ತಲಿನ ಕಣ್ಗಳಲ್ಲಿ ಇಷ್ಟಿಷ್ಟೇ ಸೋಲ್ತಾ ಇವೆ - ಜೀವ ಹೋಗಿಲ್ಲ ಎಂದು ಘೋಷಿಸಲು ತೇಕು ತೇಕು ಉಸಿರಾಟವೊಂದೇ ಪ್ರಮಾಣ - ಬದುಕೆಂಬೋ ಬದುಕು ತೀವ್ರ ನಿಗಾ ಘಟಕದ ಮೂಲೆಯ ಬೆಡ್ ನಂ...‌‌‌‌.......
#ಇದೆಂತಾ_ಕರ್ಮ_ಮಾರಾಯ್ರೆ...
↰↲↳↱↝↜↰↲↳↱

ಅಲ್ಲೊಂದು ಮಡಿಲ ನಗು - ಇನ್ನೆಲ್ಲೋ ಎದೆಯ ಸೂರು - ಎಷ್ಟೆಲ್ಲ ಕಿತ್ತು ತಿಂದರೂ ಜವನ ತಿಜೋರಿಗೆ ಬರ್ಕತ್ತಿಲ್ಲ; ಯಾರೂ ಕರೆಯದೆ, ಯಾರನೂ ಹೇಳದೇ ಕೇಳದೇ, ಯಾವ ಮಂತ್ರ ಏನು ತಂತ್ರಕೂ ತಲೆಕೊಡದೇ ತಲೆಗಳುರುಳಿಸಿ ಕಣ್ಣೀರ ಕೋಡಿ ಕುಡಿವ ಅಚಲ ಕಾಯಕ ನಿಷ್ಠೆ ಅವನದು...
ಅವನ್ಯಾರೋ ದೇವನಂತೆ, ಶಿಷ್ಟ ಶಿರವ ಕಾವನಂತೆ - ಎಲ್ಲಿದ್ದಾನೆ ಅವ...
ಮುಗುಳು ನಗೆಯ ಬೆರಗನು ಕಾಯದ ದೈವವಿದ್ದರೆ ಅವನಿಗೆನ್ನ ಧಿಕ್ಕಾರವಿರಲಿ - ಅಸಮ ಸಾವು ವಿಜೃಂಭಿಸುವಲ್ಲಿ ದೇವನಿರವಿನ ನಂಬಿಕೆಗೆ ಬಲವಿಲ್ಲ...
ಉಹುಂ - ಚಿತೆಯ ಎದುರು ನಿಂತವನಲ್ಲಿ ಕರ್ಮಾಕರ್ಮದ ವಾದಕ್ಕೆ ಕೂರಬೇಡಿ...
#ನಿನಗಿದೋ_ಹಿಡಿಶಾಪ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)