Thursday, December 12, 2019

ಗೊಂಚಲು - ಮೂರು ನೂರಾ ಹದ್ನೇಳು.....

ಇಷ್ಟಕಾಮೇಷ್ಟಿಯಾಗ.....  

ತೋಳ್ದೆರೆದ ನೀನಿಲ್ಲಿ ತಂಪಿರುಳ ಅಗ್ಗಿಷ್ಟಿಕೆ - ರತಿ ಹೋಮದ ಅಧ್ವರ್ಯು...
ಉಸಿರುಸಿರು ಉಸುರುವ ಮಂದ್ರ, ತಾರಕ ಮಂತ್ರ ನಾದ...
ಏರು ತಿರುವಿನ, ಬಾಗು ಬಳುಕಿನ ತಿಳಿಗತ್ತಲಿಗಂಟಿದ ಹೋಮ ಧೂಮದ ಘಮ...
ತೆಕ್ಕೆ ತಾರುಣ್ಯದ ಮಥನದಲಿ ಉರಿದುರಿದು ಕರಗೋ ಜೀವಕಾಯಗಳ ಹವಿಸ್ಸು...
ಧಗಧಗಿಸುತಿರಲಿ ಸೃಷ್ಟಿಶೀಲ ನಾಭಿಕುಂಡ - ನಿತ್ಯೋಪಾಸನೆಯಾಗಲಿ ಪ್ರೇಮಯಜ್ಞ...
#ಇಷ್ಟಕಾಮೇಷ್ಟಿಯಾಗ...
⇴⏪⏩⇴

ಯಾರೋ ನೆಟ್ಟ ಯಾವುದೋ ತಿರುವಿನ ಗಿಡ...
ಸೂರ್ಯನ ಕುಡಿದ ಬೇರು ಚಂದ್ರನಿಗೆ ಬೆಳದಿಂಗಳಿನಷ್ಟೇ ಮೆದು ಮೈಯ್ಯ ಹೂ ಮುಡಿಸಿ ನಲಿಯುತ್ತದೆ...
ಗಾಳಿಗೊಲಿದ ಗಂಧ ಮೈಮುರಿದು ಆ ತಿರುವಿಗೆ ನನ್ನ ಕರೆಯುತ್ತದೆ...
ಇದೀಗ ದಿಂಬಿನ ಹೆರಳಿಗೂ, ನನ್ನ ಬೆರಳಿಗೂ ಸುರುಳಿ ಸುರುಳಿ ಘಮದ ನಂಟಿನ ಅಂಟು...
ಮುಚ್ಚಿದ ಕಣ್ಣಾಳದಲ್ಲಿ ಅಲ್ಲೆಲ್ಲೋ ಕಾಲ್ಬೆರಳ ನಟಿಕೆ ಮುರಿವ ಅವಳ ಸೆರಗು ನಲುಗಿದಂತೆ ಕನಸುತ್ತದೆ ಕಳ್ಳ ಮನಸು...
#ಪಾರಿಜಾತ...
⇴⏪⏩⇴

ಗಂಡು ರಸಿಕ ಕಂಗಳಿಗೆ ಇನ್ನಷ್ಟು ಯಾಚನೆ ಕಲಿಸೋ ಅಯಾಚಿತ ಹೆಣ್ಣು ಕ್ರಿಯಾ ವಿಧಿಗಳು...
#ಮುಡಿಬಿಗಿದು_ಸೆರಗೆಳೆದುಕೊಂಡಳು..‌.

ಕೋಪದಿಂದ ಅದುರೋ ಅವಳ ತುಟಿಗಳೂ ಮಡಿ ಮೀರಿದ ಹುರಿಮೀಸೆಯ ಹದುಳದ ಚುಂಬನಕೆ ಜೇನನ್ನೇ ತುಂಬಿ ಕೊಡುತ್ತವೆ...
#ಉಪಶಮನ...

ಸಳ ಸಳ ಬೆವರಿನ ಹಸಿ ಹಸಿ ಮಿಡಿತಗಳ ಮಿಂಚಿನ ಸಂಚಿಗೆ ಮಟಮಟ ಮಧ್ಯಾಹ್ನವೊಂದು ಇಷ್ಟಿಷ್ಟೇ ಕರಗಿ ಮಗ್ಗುಲಾಗುವ ಸುಖೀ ಸಂಭ್ರಾಂತಿ - ಸಖೀ ಸಲ್ಲಾಪ...
#ಅವಳಂಬೋ_ಮೋಹದ_ಮೋಹಕ_ಮೈತ್ರಿ...
⇴⏪⏩⇴

ಈ ತೋಳ ತಿರುವಿಗಂಟಿದ ಕಡು ಸ್ವಾರ್ಥ ಅವಳು...
"ಹೇಟ್ ಯೂ" ಅನ್ನೋದು "ಲವ್ ಯೂ" ಅನ್ನೋದ್ರ ಸಮಾನಾರ್ಥಕ ಪ್ರಿಯ ಪದವಾಗಿ ಕಿವಿ ತುಂಬುತ್ತದೆ ಅವಳು ಕೆನ್ನೆ ಕೆಂಡವಾಗಿಸ್ಕೊಂಡು ಮೂತಿ ತಿರುವಿ ಉಲಿಯುವಾಗ...
ಕುಪ್ಪಸದಂಚಿನ ಖಾಲಿ ಬೆನ್ನ ಮೇಲಿನ ಮಚ್ಚೆಯ ಸವತಿಯಂಥ ನನ್ನದೇ ಉಗುರ ಗೀರನು ಸುಮ್ಮನೆ ಕಣ್ಣಲೇ ಸವರುತ್ತೇನೆ ಒಮ್ಮೆ...
ಬೆನ್ನಿಗೂ ಕಣ್ಣಿರುವ ಹೆಣ್ಣು ಸೆರಗಿನ ಚುಂಗನು ಹಿಂದೆಳೆದು ಬಿಗಿದು ಬುಸುಗುಡುತ್ತಾಳೆ - ಮುನಿಸು ಮದನನಿಗೆ ಸೋಲುವ ಮೊದಲ ರೂಹದು...
ಬೆರಳ ಹಣಿಗೆಗೆ ಸಿಕ್ಕಿ ಉಸಿರ ತೀಡುವ ಹೆರಳ ಘಮದಲ್ಲಿ ಪೀಠಸ್ಥ ಸ್ವರ್ಗ - ಮುಂದಿನದು ರತಿಯ ಚಿತ್ತ...
#ಕೇದಗೆಯ_ಬನದಲ್ಲಿ_ಪ್ರಣಯ_ಕಲಹ...
⇴⏪⏩⇴

ಹಾಸಿಗೆಯ ಒಂಟಿತನಕೆ ನಿನ್ನ ಆವಾಹಿಸಿ ಹೊದ್ದುಕೊಂಡೆ - ಸೆಜ್ಜೆವನೆಯ ತುಂಬಾ ಲಜ್ಜೆ ಬೆಳುದಿಂಗಳು...
ಮುಚ್ಚಿದ ಕಣ್ಣ ಪಾಪೆಯೊಳಗೆ ಇಂಚಿಂಚೂ ಬಿಚ್ಚಿಕೊಳುವ ಉನ್ಮತ್ತ ಜೀವನ್ಮೋಹೀ ಚಿತ್ರಶಾಲೆ...
ಬೆತ್ತಲೆ ಮಡಿಯುಟ್ಟು ನೀ ಅರಳುವ ಕನಸಿಗೆ ಹೊರಳ್ಹೊರಳಿ ಮರಮರಳಿ ಅರಳುವ ನಾನು...
#ಸ್ವಪ್ನ_ಸುರತ...
⇴⏪⏩⇴

ಇರುಳ ಕೊರಳನು ಛಳಿ ಬಳಸಿದ ಋತು ಇದು...
ಹೈದನ ಹರೆಯದ 'ನಡು'ಗಡಲಲ್ಲಿ ವಿಪರೀತ ಉಬ್ಬರ..‌
ತುಟಿಯ ಕೊಂಕಿನಲೇ ಛಳಿಯ ಪೊರೆ ಕಳಚುವ ಬಿನ್ನಾಣಗಿತ್ತೀ -
ಉಕ್ಕುವ ಉಸಿರಲೆಗೆ ತೋಳ ರೇವಿನಲಿ ಚೂರು ಪ್ರೀತಿ ಹಕ್ಕಿನ ತಾವು ಕೊಡು...
ಹಸಿದ ಹಸಿ ಹರೆಯಕಿಷ್ಟು ಪ್ರಣಯ ಕಂಬಳ ಬಾಗಿನವಿಟ್ಟು ಇರುಳ ಉಡಿಯ ತುಂಬಿ ಕೊಡು...
ಕರಡಿ ಮುದ್ದು ಕಲೆಯಾಗಿ, ಮೋಹ ಬೆವರಾಗಿ, ಇಹಪರವೆಲ್ಲ ಒಂದೇ ಆಗಿ, ಸುಖವು ಸವಿ ನಿದ್ದೆಯಾಗಿ ಹೊರಳೋ ಘಳಿಗೆ ಹಣೆಯ ಬಿಂದಿ ಎದೆಗಂಟಲಿ...
ಬೆತ್ತಲೆ ಸರ್ಪಬಂಧ ಗಾಳಿಗೂ ಎಡೆ ಕೊಡದಂಗೆ ಅವುಚಿಕೊಂಡೇ ಇರುಳ ಝೋಮು ಕಳೆದು ಬೆಳಗಾಗಲಿ...
#ಮಾಗಿ_ಪಲ್ಲಂಗ...
⇴⏪⏩⇴

ಅಷ್ಟೇ -
ನಿನ್ನೆದುರು ಬಂದುದೇ ಆದರೆ ಕಣ್ಣಲ್ಲೇ ಮುಕ್ಕಳಿಸಿ ನೀ ನನ್ನ ಓದುವ ಚಂದಕ್ಕೆ ಅರಳಿದ ನನ್ನೊಳಗಿಂದ ಒದ್ದು ಬರುವ ಪುಳಕಗಳ ಧಾಳಿಗೆ ಪಕ್ಕಾ ಸೋಲುತ್ತೇನೆಂಬ ಭಯಕ್ಕೆ ಇಷ್ಟು ದೂರವೇ ನಿಲ್ಲುತ್ತೇನೆ...
ಹರೆಯದ ಹಸಿ ಹಸಿವಿನ ಎದೆಯ ಏರು ಬಿಸಿಯ ಅಡವಿಟ್ಟುಕೊಂಡ ಬೇಶರತ್ ಪ್ರಣಯ ನೀನು - ನಿನ್ನ ಮೀಟಿ ಬಹ ತಿಳಿ ಗಾಳಿಗೂ ಅಣುರೇಣು ರೋಮಾಂಚವ ಹೊದ್ದು ತಿರುಗೋ ಮರುಳ ಕಬೋಜಿ ನಾನು...
#ನೀನೊಂದು_ಮೋಹಕ_ಮೋಹ...
⇴⏪⏩⇴

ಹೊರ ಗಾಳಿಯ ನಡುಕ - ಒಳ ಬೆಂಕಿಯ ಪುಳಕ...
ನಾಭಿ ಸುಳಿಯಲ್ಲಿ ಮಿಡುಕೋ ನೀಲಿ ಚಿಟ್ಟೆ...
ಎಲ್ಲೆಗಳ ಬೇಧಿಸೋ ಬೆರಳುಗಳ ಯಕ್ಷಿಣೀ ವಿದ್ಯೆ...
ಉಗ್ಗುವ ಉಸಿರುಸಿರ ಉರುವಣಿಗೆ...
ಊರು ಕೇರಿಯ ಹುಚ್ಚು ಭಣಿತ...
ಏಕಾಂತದ ರುದ್ರ ಛಳಿಗೆ ರಮಣೀಯ ಮಿಲನ ಹೊದಿಕೆ...
#ಮಾಗಿಯ_ಧಗೆ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

ಗೊಂಚಲು - ಮೂರು ನೂರಾ ಹದ್ನಾರು.....

ಅತೃಪ್ತಾತ್ಮ..... 
(ಮುರಿದ ಕೊಳಲಿನ ಧ್ಯಾನ...)

ಮಾತು ಮರೆಸಲು ಸಮರ್ಥನೆಗಳ ಹುಡುಕಾಟ ಶುರುವಾದಲ್ಲಿಂದಲೇ ಬಂಧದ ಸಾವಿನ ಹಾದಿಯೂ ತೆರೆದುಕೊಳ್ಳುತ್ತದೆ...
#ಜಗಳವೂ_ಹುಟ್ಟದ_ಸಾವಿನ_ತಂಪು...
↱↜↯↝↰

ಈ ಮುಖವಾಡಗಳು ಅದೆಷ್ಟು ಸಲೀಸಾಗಿ ಒಂದನ್ನೊಂದು ಎದುರುಗೊಳ್ತವೆ, ಅದೇನು ವಯ್ಯಾರ...
ಈ ಮುಖಗಳದ್ದೇ ಸಮಸ್ಯೆ - ಮುಖ ತೊಳೆದ ಮೇಲೆ ಕನ್ನಡಿ ನೋಡೋದೂ ಕಷ್ಟ ಕಷ್ಟ...
#ನಾನು_ನೀನು...
↱↜↯↝↰

ಬದುಕು ಕರುಣೆ ಕಳೆದು ಎದುರಿಗಿಡೋ ದೊಡ್ಡ ಪೆಟ್ಟಿನದೊಂದು ತೂಕವಾದರೆ, ನಮ್ಮವರು ನಮ್ಮ ಹಾದೀಲಿ ಬಿತ್ತೋ ಪುಟ್ಟ ಪುಟ್ಟ ಯಾತನೆಗಳದೇ ಒಂದು ದಡೆ... ಯಾವುದು ಹೆಚ್ಚು ನರಳಿಸುತ್ತೆ ಅಂತ ಕೇಳಿದರೆ ಕಣ್ಣು ಸುತ್ತ ಹೊರಳ್ಹೊರಳಿ ನಮ್ಮವರ ಹುಡುಕುತ್ತೆ...
#ಗಾಯ_ಮತ್ತು_ನಡವಳಿಕೆ...
↱↜↯↝↰

ನೀ ತಣ್ಣಗೆ ಕಳಚಿಕೊಂಡೆ - ನನ್ನ ನಾನು ಚೂರು ಚೂರೇ ಆಯ್ದುಕೊಳ್ಳುತ್ತಿದ್ದೇನೆ... ಧೂಳು ಹಾದೀಲಿ ನಂದ್‌ನಂದೇ ಪುಟ್ಟ ಪುಟ್ಟ ಹೆಜ್ಜೆ ಗುರುತು ಈಗ...
ಧ್ಯಾನವೆಂದರೂ, ಉತ್ಸವ ಎಂದರೂ ಇದೇ ಇರಬೇಕೆನಿಸುತ್ತಿದೆ...
#ಮಣ್ಣು...

ಉಹೂಂ.‌‌.. ಸೋಲುವುದು ನನ್ನ ಜನ್ಮ ಜಾಯಮಾನದಲ್ಲೇ ಇಲ್ಲ - ಅದಕ್ಕೇ ಬಿಟ್ಟುಕೊಟ್ಟು ನಿಸೂರಾಗೋದು ಸದಾ...
#ಪ್ರೀತಿ_ವೃತ್ತಾಂತ...

ಜೀವಂತವಿದ್ದೇನೆ - ಕುರುಹುಗಳ ಕೇಳಬೇಡಿ...
ಸಾಧನೆ...?
ಅದೇ ಹೇಳಿದ್ನಲ್ಲ - ಜೀವಂತವಿದ್ದೇನೆ...
#ಬೂದಿಯೂ_ಉಳಿಯಬಾರದು...
↱↜↯↝↰

ಎದೆಯ ನೋವು ಕಣ್ಣಿಗೆ ಅರಿವಾಗದಂತೆ ಬೇಯಬೇಕು...
ಸಾಕಿಕೊಂಡ ನಗೆಯ ನಾಯಿ ಸಾಯದಂತೆ ಕಾಯಬೇಕು...

ಸತ್ತವನನ್ನು ಬಡಿದು ಸುಖಿಸುವ ದೈವತ್ವ...
ಯಾರದೂರಲಿ? ಯಾವುದೂ ನನ್ನದೆನಿಸದ ಊರಲ್ಲಿ...

ಎಷ್ಟೇ ವರುಷ ಬದುಕಿದರೂ ನಿನ್ನೆಗಳ ಭೇಟಿಯಾಗಲಾರೆ...
ಭೂಮಿ ಗುಂಡಗಿದೆ; ಆದರೆ, ಕಾಲ ಸಂಜೆಯ ನೆರಳು...

ಕೆಲ ಹೆಗಲುಗಳೇ ಹಾಗೆ, ನಿಜ ನರಕವ ಹೊತ್ತು ತಿರುಗೋ ಮುರುಕು ತೇರು...
ಅಳಲು ತಿಳಿಯದವನ ಅಳಲಿಗೆ ಕತ್ತಲೂ ಮೂಕ ಚಿತ್ರ...
#ಎಲ್ಲ_ಮಣ್ಣು...
#ತುಳಸಿ_ನೀರಿನ_ಕನಸು...
↱↜↯↝↰

ಕಿವಿಯಷ್ಟೇ ಆಗಬೇಕಿತ್ತು - ಆದರೆ ನಾಲಿಗೆಗೆ ಬಹು ಚಪಲ...
ಕಲ್ಲಿಗೆ ಎದೆಗಣ್ಣೆಲ್ಲಿದೆ, ಕರುಳ್ಯಾವುದು...
#ನಾನು...
↱↜↯↝↰

ಬರುವಾಗ ಎಲ್ಲ ವಿಶೇಷವೇ, ಈ ಹಿಂದಿನಂತಲ್ಲ ಯಾವುದೂ; ಹೊಸತು ನೋಡೀ...
ಹೋಗುವಾಗ ಮಾತ್ರ ಎಲ್ಲ ಉಳಿಸುವುದು ಕೆರ್ಕೊಂಡು ಸುಖ ಪಡೋಕೆ ಹಳೆಯದರಂಥದ್ದೇ ಹೊಸ ಗಾಯ - ಒಂದನ್ನ ಕೆರ್ಕೊಂಡ್ರೆ ಸಾಲಾಗಿ ಎಲ್ಲಕ್ಕೂ ನವೆ ಹತ್ತೋ ಹಂಗೆ...
***ಅಪವಾದಗಳ ಹೊರತುಪಡಿಸಿ...
#ಸಂಬಂಧ...
#ಮಸಣ_ಕಾಯುವವನ_ಕಣ್ಣಿಂದ_ನಿರ್ಲಿಪ್ತಿಯನಿಷ್ಟು_ಭಿಕ್ಷೆ_ಪಡೆಯಬೇಕು...
↱↜↯↝↰

ಆಸೆಗಳ ಅದುಮಿಡುವ ಹಣಾಹಣಿಯಲ್ಲೇ ಜೀವದ ಬಹು ದೊಡ್ಡ ಪಾಲು ಶಕ್ತಿ ಕೊಚ್ಚಿ ಹೋಗುವ ದುರಂತವನ್ನು ಕಣ್ಣ ಹನಿ ಕತ್ತಲೆಗೆ ಕಥೆಯಾಗಿ ಹೇಳುತ್ತದೆ...
#ಸುಭಗತನ...
↱↜↯↝↰

ಜಗತ್ತು ತನ್ನಿಚ್ಛೆಯಂತೆ ನನ್ನ ಹುಡುಕುತ್ತೆ - ನಾನೋ ನನ್ನಿಚ್ಛೆಯಂತೆ ಜೀವಿಸೋ ಮಾತಾಡುತ್ತಾ ಜಗದಿಚ್ಛೆಯಂತೆ ಬದುಕಲು ಹೆಣಗುತ್ತೇನೆ - ಸಮಾಧಿಯ ಮೇಲಣ ಗರಿಕೆ ಸುಸ್ತಾದಂಗೆ ನಗುತ್ತದೆ...
#ಅತೃಪ್ತಾತ್ಮ...

ಖಾಲಿತನದ ಭಾರ ಮತ್ತು ಉಸಿರಿನ ಸುಸ್ತು...
#ಮರಳ_ಗೂಡಿನ_ಮೋಹಿತ...

ಎದೆಯ ಬೇನೆಗೆ ಮದ್ದಿಲ್ಲ - ಕನಸಿಲ್ಲದೆ ಹಬ್ಬವಾಗುವುದಿಲ್ಲ...
#ಮುರಿದ_ಕೊಳಲಿನ_ಧ್ಯಾನ...

ಬೆಳಕಿನಲ್ಲಿ ಕಳೆದು ಹೋಗಿ ಕತ್ತಲಲ್ಲಿ ಸಿಕ್ಕ ನೆಳಲು...
#ಕಣ್ಣಧಾರೆ...

ಸತ್ಯದ ಹಾದೀಲೇ ನಡೆಯುವವನಿದ್ದೆ , ಆದರೆ ಸುಳ್ಳಿನ ಉನ್ಮತ್ತ ಸೌಂದರ್ಯ ಸೆಳೆಯಿತು...
#ನಾನು...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

ಗೊಂಚಲು - ಮೂರು ನೂರಾ ಹದ್ನೈದು.....

ಮುಗಿದಿಲ್ಲ ಇನ್ನೂ ಇಲ್ಲಿಯ ಬಡಿವಾರ..... 

ನಗುವುದಕ್ಕೂ ನಶೆಯೊಂದು ಬೇಕು - ಆ ನಶೆ ನೋವಿನದಾದರೆ ನಗೆ ಇನ್ನೂ ಚುರುಕು...
#ಹೊಸ_ರುಚಿಯ_ಕಣ್ಣೀರು...

ನನ್ನಲ್ಲಿ ನನ್ನನ್ನ ಹುಡುಕಿಕೊಂಡರೆ ನಿನ್ನನ್ನು ಪಡೆಯಬಹುದಾ ಅಥವಾ ಬೇಶರತ್ ನಿನ್ನನ್ನು ಪಡೆದರೆ ನಂಗೆ ನಾನು ಹೂಬೇಹೂಬು ಸಿಗಬಹುದಾ...
ಮನಸಿನ ಇಂಥಾ ಹುಚ್ಚು ಗೊಂದಲಗಳಿಗೆ ಪ್ರಜ್ಞೆಯ ಉತ್ತರ ಯಾವತ್ತೂ ಖಾಲಿ ನೋಟವಷ್ಟೇ...
ಹಾಗೆಂದೇ,
ನಾನೆಂದರಿಲ್ಲಿ ಹಸಿದ ಹಳೆಯ ಮುದಿ ನೋವೊಂದರ ಹಪ್ಪು ಪಿರಿ ಪಿರಿ...
#ಮುಗಿದಿಲ್ಲ_ಇನ್ನೂ_ಇಲ್ಲಿಯ_ಬಡಿವಾರ...

ಎದೆಯ ಮೇಲಣ ಗಾಯದ ನೋವು ಮಾಯಲೇ ಇಲ್ಲ...
#ನಿನ್ನ_ಗುರುತು...

ಬಗೆದರೆ ಸಾವನ್ನೇ ಬಗೆಯಬೇಕು - ಬದುಕನ್ನು ಬಗೆದರೂ ಸಿಗೋದು ಅದೇ ಅಲ್ಲವೇ...
#ಪ್ರಶ್ನಾತೀತ_ಪ್ರಶ್ನೆ...

ನೋವಿನ, ಸಾವಿನ ಜಾತಕವ ಉದ್ಘೋಷಿಸುವವನೊಬ್ಬ - ಹೋಮ ಧೂಮದಲಿ ದೇವರ ಹುಡುಕೋ ಇನ್ನೊಬ್ಬ - ಇಬ್ಬರದ್ದೂ ಕಾಲು ತೊಳೆದರೆ ಮಾತ್ರ ನಾನು ಸಾಚಾ...
ಸ್ವಂತ ಹಾದಿಯಾಸೆಯ ಹುಂಬ ನಾನು, ನನ್ನ ಕೊಂದುಕೊಂಡು ಸುಭಗನಾಗಲಾ - ಅವರ ಧಿಕ್ಕರಿಸಿ ರಕ್ಕಸನಾಗಲಾ...
#ಬಯಲಲ್ಲೂ_ಉಸಿರುಗಟ್ಟುವಂತಿದೆ...
#ಹರಸುವುದಾದರೆ_ಸಾವನ್ನೇ_ಹರಸಿ..‌.
↨↤↥↦↨

#ಪ್ರವಚನ...

*ಶಾಶ್ವತತೆಯ ಅಮಲಿಳಿದ ಮೇಲೆಯೇ ಬದುಕಿನ ಈ ಕ್ಷಣದ ರುಚಿ ಸಿಕ್ಕಿವುದು...

**ಪೂರಾ ಪೂರಾ ಖಾಲಿಯಾಗುವುದೊಂದೇ ಪರಿಹಾರ - ಹೇಗೆಂಬುದನ್ನು ನಿಮ್ಮಲ್ಲಿ ನೀವೇ ಕಂಡುಕೊಳ್ಳಿ...

***ಯಾರನ್ನೂ ಹುಡುಕಬೇಡಿ ನಿಮಗೆ ನೀವೂ ಸಿಗ್ಲಿಕ್ಕಿಲ್ಲ...

****ನನ್ನ ನಾ ಹುಡುಕುತ್ತಿದ್ದೆ, ಪಕ್ಕನೆ ದೇವರು ಸಿಕ್ಕಿಬಿಟ್ಟ - ಇಲ್ಲೇ ರಕ್ಕಸ ಪ್ರೀತಿಯ ಹಾಡಿಯಲ್ಲಿ...
↨↤↥↦↨

ನಾ ಹೇಳಿದ್ದನ್ನು ಮರೆತಷ್ಟು ಸುಲಭ ನಿನ್ನಿಂದ ಕೇಳಿಸಿಕೊಂಡದ್ದನ್ನು ಮರೆಯಲಾಗುವುದೇ ಇಲ್ಲ...!!!
#ಮಾತು...
↨↤↥↦↨

ಹಾರು ಹಕ್ಕಿಯ ರೆಕ್ಕೆ ಬಂಧಿಸಿ ಮನೆಯಂಗಳದ ಮೂಲೆ ಅಂದವೆನ್ನುವಾಗ ಹುಟ್ಟದ ಪಾಪಪ್ರಜ್ಞೆ, ಸುಳ್ಳೇ ತಂದು ತಂದು ಒಟ್ಟಿ ಕಪಾಟು ತುಂಬಿಸಿಟ್ಟ ರಂಪ ರಾಮಾಯಣದ ಪುಸ್ತಕಗಳ ಮಗ್ಗುಲಲಿನ್ನೂ ಅಲೆದಿಲ್ಲ ಎಂಬುದು ನೆನಪಾದಾಗ ಕಾಡುತ್ತೆ...!!!
#ದೊಡ್ಡಸ್ತಿಕೆ...
↨↤↥↦↨

ಊಟದಲ್ಲಿ ಸಿಕ್ಕ ಕಲ್ಲು ಹಲ್ಲು ಮುರಿಯದೇ ಹೋದರೂ ರುಚಿಯ ಆಸ್ವಾದಕ್ಕೆ ಬಾಧೆಯಂತೂ ಹೌದೇ ಹೌದು...
ಅಂತೆಯೇ,
ಮನದ ಆಪ್ತತೆಗೊಂದು ಪ್ರಜ್ಞಾಪೂರ್ವಕ ಬೇಲಿ - ನಡುವೆ ತೊಡುವ ಅನಗತ್ಯ ಔಪಚಾರಿಕತೆ...
#ನೇಹ_ಮತ್ತು.........
↨↤↥↦↨

ಕರುಳಿಗೆ ಪ್ರೀತಿಯೊಂದೇ ಮಾಪಕ - ಹಾಗೆಂದೇ ಕರುಳು ಮಾತು ಮರೆತು ಕೂತಿದೆ...
ನಾಲಿಗೆಗೆ ತನ್ನ ಹಿತ ಮತ್ತು ಗೆಲುವೊಂದೇ ಸಾಧನೆ - ಹಾಗಾಗಿಯೇ, ಸುಳ್ಳಲ್ಲ ಖರೆಯಲ್ಲ ಎಂಬಂತೆ ಸಮಯಾ ಸಮಯಕ್ಕೆ ಗಂಟಲ ಮೇಲಿನ ಮಾತಿಗೆ ನೂರು ಬಣ್ಣ...
ಕರುಳಾಳದಿಂದ ದನಿ ಬಿರಿದು ಕೂಗಬಾರದೇ ಒಳಗಿನ ಸತ್ಯವನ್ನೇ; ಕಹಿಯಾದರೂ ಕರುಳ ಸ್ಪರ್ಶದಲಿ ನಾಲಿಗೆ ಮಿಡಿದರೆ ಹೆಸರಿಲ್ಲದ ಭಾವಾನುಸಂಧಾನಕೆ ಹಿಡಿ ಉಸಿರು ಸಿಕ್ಕೀತು - ಬಂಧವೊಂದು ಹುಟ್ಟಿನ ಹಸಿ ಪ್ರೀತಿಯ ಘಮದೊಂದಿಗೇನೆ ಕಾಲಕೂ ಉಳಿದೀತು...
#ನೇಹ_ಪ್ರೀತಿ_ಇತ್ಯಾದಿ...
↨↤↥↦↨

ಕಳೆದು ಹೋದರು ಅನ್ನಿಸಿ ನೋವಾಯ್ತು...
ನೆನಪಾಗಿ ಉಳಿದು ಹೋದರು ಅನ್ಕೊಂಡೆ - ಸಣ್ಣ ಸಮಾಧಾನ ಈಗ...

ಪ್ರೀತಿ ಸಾಯುವುದಿಲ್ಲ ಅಂದರು - ಸೂತಕ ಕಳೆದುಕೊಂಡೆ...

ಭಾವ ಸ್ಖಲನಕ್ಕೆ ಕಾಲನೂ ಬೇಲಿಯಾಗಲಾರನೇನೋ...
ಹುಡಿ ಹುಡಿ ಭಾವಗಳ ಅಕ್ಷಯಾಂಬುಧಿ ಈ ಮನಸಿನ ನಡೆಯ ಪ್ರಶ್ನಿಸಲೆಂತು...
#ಸೋತ_ಕಥೆಗಳೇ_ಎಲ್ಲ...
↨↤↥↦↨

ಅಷ್ಟೆಲ್ಲ ಆಗಿಯೂ ಕೊನೇಲಿ ನಮ್ಗೆ ನೆನಪಲ್ಲುಳಿಯೋದು 'ನಾವು ಕೊಟ್ಟ', ಯಾವ್ಯಾವುದೋ ಕಾರಣಕ್ಕೆ "ನಾವು ಕೊಟ್ಟ" ಪ್ರೀತಿ ಒಂದೇ...
#ನಾನು...
↨↤↥↦↨

ಹಾದಿ ಹೇಳಿದ ಪಾಠ: ಒಳಗಿಳಿದು ನೋಡು - ಮುಳುಗಿದಷ್ಟು ಆಳ; ಹೊರ ನಿಂತು ಆಲಿಸು - ತೇಲಿದಷ್ಟು ವಿಸ್ತಾರ...
ಆದ್ರೆ -
ಸ್ವಾನುಭವದಿಂದಲೂ ಪಾಠ ಕಲಿಯಲೊಲ್ಲದವರೆದುರು ಬದುಕೂ ಸೋಲುತ್ತದೇನೋ ಶಿಕ್ಷಕನಾಗಿ...
ಶಿಕ್ಷೆಗೂ ಬಗ್ಗದ ಖಡ್ಡ ನಾನು...
....... ಅದಷ್ಟೇ ಸತ್ಯ, ಉಳಿದದ್ದೆಲ್ಲ ಬರೀ ಪೊಳ್ಳು ಸಮಾಧಾನಗಳಷ್ಟೇ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Sunday, November 3, 2019

ಗೊಂಚಲು - ಮೂರು ನೂರಾ ಹದ್ನಾಕು.....

ಬೇಲಿ - ಬಡಿವಾರ..... 

ಬಟಾಬಯಲ ಬಾನ್ಬೆಳಕಲ್ಲಿ ಪಾವಿತ್ರ್ಯತೆಯ ಹೆಣ ಭಾರ ಹೊತ್ತು ಹೆಗಲು ಊನವಾದ ಪ್ರೇಮ ತಾ ಅನಾಥವಾಗಿ ನಿಂತು ಉಮ್ಮಳಿಸಿ ಬಿಕ್ಕುವುದ ಕಂಡೆ...
#ಎಲ್ಲಕಿಂತ/ಎಲ್ಲರಿಗಿಂತ_ಎತ್ತರವಾದಷ್ಟೂ_ಎಲ್ಲದರಿಂದ/ಎಲ್ಲರಿಂದ_ದೂರ...   
↶↷↕↶↷

ಬೆಳೆದದ್ದೆಲ್ಲಾ ತೊಳ್ದೋದ್ಮೇಲೆ ಬೆಳಕ್ಹುಡ್ಕುದೆಲ್ಲಿ...  😔😔
#ಮಳೆ_ದೀಪಾವಳಿ...
↶↷↕↶↷

ದೇವರ ಕಾಣಲೆಂದು ಗುಡಿ ಬಾಗಿಲಲಿ ದೀಪ ಹಚ್ಚಿದೆ -
ಎದೆಯ ಬಾಗಿಲ ಸುಟ್ಟು ನಿನ್ನ ನೀನೇ ಕಾಣು ಅಂದಿತು -
ದೇವರು ನಸುನಕ್ಕ...
ಎದೆಯ ಬೆಳಕು ಕಣ್ಣಾಗಿ ಕಾಯಲಿ...
#ದೀವಳಿಗೆ...
↶↷↕↶↷

ಮುಟ್ಟಿ ಗಾತ್ರದ ಹೃದಯ - ಸೂಜಿ ಮೊನೆಯ ಗಾಯ - ನೋವಿಗಾದರೋ ಮೈತುಂಬಾ ರಿಶ್ತೇದಾರರು...
#ಇರುಳ_ಕರುಳಿನ_ಗಂಟುಗಳ_ಹರಿಯುವ_ಕಣ್ಣ_ಹನಿಯ_ಕವಿತೆಗಳು...
↶↷↕↶↷

ಸಾಕ್ಷಿಗಳ ಕೊಲ್ಲಬಹುದು - ಅಂತಃಸ್ಸಾಕ್ಷಿಯನಲ್ಲ...
#ನಾನು...
↶↷↕↶↷

ನೇಹಕ್ಕೆ ನೇಹವೆಂದಲ್ಲದೇ ಬೇರೆಲ್ಲಾ ಹೆಸರೂ ಹೆಸರಷ್ಟೇ...
ದೇವರಿಗೆ ದೇವರೆನ್ನದೆ ಬೇರೆ ಕೂಗಲೇನಕ್ಕೆ...
#ಆತ್ಮಾನುಸಂಧಾನ...
↶↷↕↶↷

ಹೆಗಲ ಮೇಲಿಂದ ಚಿಟ್ಟೆಯ ಹೆಣ ಇಳಿಸಿ ಹೂ ಕನಸಿನ ಡೋಲಿಯ ಕಮಾನು ಕಟ್ಟೋ ಹೊತ್ತಾಯಿತು - ಎಂದಿನಂತೆ ಸಂಜೆಯಾಯಿತು...
#ಖೊಟ್ಟಿ_ನಸೀಬಿನ_ಜಾತ್ರೆಯಲಿ_ಕಳೆದು_ಹೋದವನು...
↶↷↕↶↷

ಅಳು ಹುಟ್ಟಿನ ಬಳುವಳಿ - ಈ ನಗುವಿದ್ಯಲ್ಲಾ ಅದ್ರದ್ದೇ ಭಲೇ ಹಡಾಹುಡಿ; ನಾವೇ ಬಡಿದಾಡಿ ದಕ್ಕಿಸಿಕೋಬೇಕು...
ಪಾಪಿ ಬದುಕು ರೆಕ್ಕಗಳ ಮುರಿದು ಹಾರಾಡೋ ಚಂದದ ಬಗ್ಗೆ ಕವಿತೆ ಗೀಚುತ್ತೆ...
#ಬಡಿವಾರ...
↶↷↕↶↷

ಜಿನುಗು ಮಳೆಯ ಸಂಜೆ ಮಸಣದ ಬೇಲಿಗೆ ಹೂಬಳ್ಳಿಯ ನೆಟ್ಟು ಬಂದೆ...
#ನಿಜ_ಪ್ರೀತಿಯಲ್ಲಿದ್ದೇನೆ...
↶↷↕↶↷

ಕೇಳಿ ಪಡೆಯುವ, ಕೊಟ್ಟು ಸುಖಿಸುವ ಸಣ್ಣ ಸಹನೆಯಲಿ ಪ್ರೀತಿ ಜೀವಂತ...
#ಮೌನ_ಕೊಲ್ಲದ_ಬಾಂಧವ್ಯ...
↶↷↕↶↷

"ಎಷ್ಟು ಜನರೋ ಅಷ್ಟು ವ್ಯಾಖ್ಯಾನಗಳು ಪ್ರೀತಿ ಹೆಸರಿಗೆ ಮತ್ತು 'ಪ್ರೀತಿ' ಎಲ್ಲಾ ವ್ಯಾಖ್ಯಾನಗಳಾಚೆ ನಗುವ ಆತ್ಮದ ವಸನ..."
#ವ್ಯಸನ_ಮತ್ತು_ಬಯಲು...
↶↷↕↶↷

ನೀನೊಬ್ಬನೇ ಅಂತನ್ನೋದು ನಂಗೊತ್ತಿಲ್ಲ - ನೀನಿಷ್ಟ ಅಂತಷ್ಟೇ ಅನ್ನೋನಿಗೆ ನೀ ಒಲಿಯುವುದಿಲ್ಲ...
#ಬೇಲಿ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

ಗೊಂಚಲು - ಮೂರು ನೂರಾ ಹದಿಮೂರು.....

ಶೃಂಗಾರ ಎಂಬೋ ದಿವ್ಯ ಧ್ಯಾನ.....

ಉರಿ ಉರಿ ಉಸಿರುಸಿರ ರುದ್ರ ವೇಗಕೆ
ನಡುವ ಸನಿಹ ಸುಳಿವ ಕೈಯ ಸುಳಿ ಚಿತ್ರಕೆ
ನರ ನಾಡೀ ಕುದಿ ರಕುತದ ಅಗ್ನಿ ಪರುಷಕೆ
ನಡುಗೋ ಎದೆಯ ಉನ್ಮತ್ತ ನಗಾರಿ ನಾದಕೆ
ಮರಮರಳಿ ಮೈಮರೆವ ರತಿ ಮದನ ಕದನಕೆ...
ಛಳಿ ಧೋ ಮಳೆಯಂತೆ ಸುರಿವ ಸರಿ ಇರುಳ ಕಡು ಮೋಹದ ಈ ಜಾಲಕೆ
ನಿನ್ನಿರವೇ ಅಗ್ಗಿಷ್ಟಿಕೆ...
*** ಚಾದರಕಂಟಿದ ಬೆವರು ಕಳ್ಳ ನಗೆಯಲ್ಲಿ ಪಿಸುನುಡಿವ ಕಥೆಗೆ ನಿನ್ನದೇ ಹೆಸರು...
⟲⟳⟴➤

"ಕೊರಳ ಕೆಳಗಣ ಸಣ್ಣ ಬಯಲಲ್ಲಿ ನಿನ್ನ ಉಸಿರ ಕಿಡಿ, ತುಟಿಯ ತೇವ ಕೂಡಿ ಬರೆವ ಹೆಸರ ಹಸೆ ಅದರಾಚೆಯ ಗಿರಿ ಶೃಂಗವ ಮೈದುಂಬಿ ಶೃಂಗರಿಸುತ್ತೆ ಕಣೋ ಕನಸಿನಲೆಮಾರಿ ಜೋಗಯ್ಯಾss" ಹಾಗಂತ ಅದ್ಯಾವತ್ತೋ ಇರುಳಿಗೂ ಅರ್ಧಪಾದ ಮುನ್ನ ಬೆಳದಿಂಗಳ ತಬ್ಬಲು ಸಿಂಗರಗೊಳ್ಳೋ ಗಡಿಬಿಡಿಯಲಿ ಸಾಗರದಲೆಗಳು ಕಿನಾರೆಯ ತೀಡುವಾಗ, ನೆಂದ ಹೆಜ್ಜೆಯ ಗೆಜ್ಜೆಯಿಂದ ಗೀರುತ್ತಾ ನೀ ಕಿವಿಯಲಿ ಬಿಸಿ ಉಸಿರ ತುಂಬಿ ಉಸುರಿದ ಮಾರ್ದವತೆ ಅನುಕ್ಷಣದ ನಶೆಯಾಗಿ ನನ್ನ ಕರುಳ ಸೇರಿಬಿಟ್ಟಿದೆ...
ಹೀಗ್ಹೀಗೆ ಬೆಮರ ಅತ್ತರು ಪೂಸಿಕೊಂಡ ನೀನೆಂಬ ನೆನಪ ಮಲ್ಲಿಗೆ ಅರಳಿ ಸರಿ ಇರುಳ ಕೊರಳ ಬಳಸುವಲ್ಲಿ‌...
ಕಿಬ್ಬೊಟ್ಟೆಯೊಳಗೆಲ್ಲೋ ಇರುವೆ ಸಾಲು ಸರಿದಂಗೆ - ಕಿವಿಯ ತಿರುವಲ್ಲಿ ಬೆಂಕಿ ಬಳ್ಳಿ ಹಬ್ಬಿದಂಗೆ - ಉಸಿರ ಸಂವಾದಿಯಾಗಿ ರಕುತದ ಹರಿವು ದಿಕ್ಕುದೆಶೆ ತಪ್ಪಿದಂಗೆ...
ಹೊದ್ದ ರಜಾಯಿಯಡಿಗೀಗಿಲ್ಲಿ ಬೆಳಕನುಟ್ಟು ನೆಣೆಬಿದ್ದ ನೀನೆ ನೀನು‌‌‌‌...
ನಿನ್ನ ತೋಳ ಕೋಟೆಯಲ್ಲಿ ಸ್ವಯಂ ಬಂಧಿ ಪರಮ ಹುಚ್ಚ ನಾನು...
#ಶೃಂಗಾರ_ಎಂಬೋ_ದಿವ್ಯ_ಧ್ಯಾನ...
⟲⟳⟴➤

ನಾನು 'ನಡು'ಪಂಥೀಯ...
"ಹಾಗೊಂದು ನಶೆಯಿಲ್ಲದ ಬದುಕೂ ಬದುಕೇ..‌‌..!!!"
ಇವಳೇ -
ಹೆದೆಯೇರಿದ ಎದೆ ಬಿಲ್ಲನು ಮುಚ್ಚಿದ ಹೆರಳ ಜೊಂಪೆ ಜೊಂಪೆ ಬಿಳಲುಗಳು ಕಣ್ಣ ಕಾಣ್ಕೆಯ ಕೆಣಕುತ್ತವೆ...
ಒಂದೇ ರಾಗದಲ್ಲಿ ಧೋsss ಸುರಿಯುತಿರೋ ಮಳೆಗೆ ಇರುಳ ಗೂಡು ತೋಯ್ದು ತೊಪ್ಪೆಯಾಗಿದೆ...
ಸೆಜ್ಜೆವನೆಯ ಬಾಗಿಲ ವಾಡೆಯಲಿ ಛಳಿಯ ಮಿಂಚು ಸಿಡಿದು ಅಪಾದಮಸ್ತಕ ಆಸೆ ಸೆಳಕು...
ನಗೆ ಬೆಳುದಿಂಗಳ ಅಮಲುಗಣ್ಣ ಕರೆಯಲಿ ಉನ್ಮಾದವ ತುಳುಕಿಸಿ, ತೋಳ ಬಿಗಿ ಬಂಧಕೆ ನೀ ಬಂದು - ಗಾಳಿ ರಥದಲಿ ಮದನ ಒಳಮನೆಗೆ ಅಡಿಯಿಟ್ಟು - ನಡು ನಡುಗಿ, ಎದೆ ಬಿರಿದರಳಿ, ರತಿಯೊಡಲ ಬೆಂಕಿ ಉಸಿರು ನರನಾಡಿ ಸಿಡಿದು...
ಆಹ್...!!
ಹೆಣ್ಣೆದೆ ಗಂಡೆದೆಯ ಕೂಡಿ ತೀಡಿ ಕೊಂಡಾಟವಾಡಿ ಬೆನ್ನಿಗಿಳಿದ ಬೆವರೇ ಯಾಮಿನೀ ಸಿಂಗಾರವಲ್ಲವೇ...
ಹೌದು -
ಸೋತವರೇ ಎಲ್ಲ ಇಲ್ಲಿ - ಸರಸದ ಸರಸಿಯಲಿ ಮೀಯುವಲ್ಲಿ...
ಕತ್ತಲ ಕೋಣೆಗೆ ಬೆತ್ತಲೆ ಬೆಳಕು...
ಹಾಂ....
ಸೋಲೊಂದೇ ಗೆಲುವು ಇಲ್ಲಿ - ಸೋತವರೇ ಎಲ್ಲ ಇಲ್ಲಿ - ಮಧುರ ಪಾಪದ ಹಾದಿಯಲ್ಲಿ...
ಸೋತೂ ಸೋಲೆನಿಸದ, ಸೋಲೂ ಸೋಲಲ್ಲದ ಮೈಮನ ಕುಣಿವ ಪ್ರಣಯ ಪಯಣದಾಟದಲಿ...
#ಸುಖದ_ದಿಬ್ಬಣ...
#ಮಳೆ_ಇರುಳ_ಮದನೋತ್ಸವ...
⟲⟳⟴➤

ಅಮಾವಾಸ್ಯೆಯ ಕಾರಿರುಳಲ್ಲೂ ಬೆಳದಿಂಗಳ ತಬ್ಬಿ ಮಲಗಿದ್ದೇನೆ...
ಏನಿಲ್ಲ, ಕನಸಲ್ಲವಳು ಮೈಯ್ಯಾರೆ ಅರಳುತ್ತಿದ್ದಾಳೆ...
#ಸ್ವಪ್ನದೂಟ...
⟲⟳⟴➤

ಕಣ್ಣ ಚಮೆಯಿಂದ ಕೆನ್ನೆಗುಳಿಯ ತೀಡಿ,
ತುಟಿಯ ತೀರಗಳ ತುಟಿಯಲೆ ಬೆಸೆದು,
ನಾಲಿಗೆಯಿಂದ ನಾಲಿಗೆಗೆ ಸ್ವರ್ಗ ತಂತುವ ದಾಟಿಸಿ...

ಬೆತ್ತಲೆ ಯಜ್ಞಕ್ಕೆ ಬೆರಳುಗಳ ಅವಸರ...
ಮೋಡದ ಸೆರಗು ಸರಿದು ಬೆಳುದಿಂಗಳು ಬಯಲಿಗೆ ಬಂದಂತೆ ವಸನಗಳ ಕತ್ತಲಿಂದ ಅವಳು ಇಷ್ಟಿಷ್ಟೇ ಅರಳುವ ಪರಿಗೆ ಕಣ್ಣ ಕುಂಡದಿಂದ ಉಸಿರ ಜಾಲಕ್ಕೆ ಅಗ್ನಿ ಸ್ಪರ್ಶ...

ನಾಲಿಗೆ ಮೊನೆಯು ತುಂಬು ಎದೆಗೊಂಚಲ ಶೃಂಗಗಳ ತೀಡುವಲ್ಲಿ,
ಊಟೆವೊಡೆವ ಮೊದಮೊದಲ ಸ್ವೇದಬಿಂದುಗಳಿಗೆ ಕಂಕುಳು ಘಂಮ್ಮೆಂದು ನಾಸಿಕವರಳಿ...

ತುಂಬು ಎದೆಗುಂಭಗಳು ಒರಟು ಮರ್ಧನಕೆ ಹಿತದಿ ನರಳುವಾಗ,
ಹೊಕ್ಕುಳ ತೀರದಲಿ ಉಸಿರು ಸರಸಕಿಳಿದರೆ,
ಬುಗಬುಗನೆ ಊರು ದಿನ್ನೆಗಳು ಉರಿದು,
ಕಾಲ್ಕಣಿವೆ ತೇವದಲಿ ಗಂಡು ನಾಲಿಗೆಯ ಪಾರುಪಥ್ಯಕೆ ನಾಕ ಬೆವರುವುದು ಸುಖದ ಆಹಾಕಾರದಲಿ...

ಹೆಣ್ಣು ಸರಸಿಯಲಿ ಉನ್ಮತ್ತ ಆಸೆ ಝರಿ ಉಕ್ಕುಕ್ಕಿ,
ನೇಗಿಲು ನೆಲ ಹೂಳಲು ದನಿ ತೆರೆದು ಕರೆವ ಕೊರಳು...
ಆಹಾ ಸುಖ ಪ್ರಮೋದವೇ...
#ಸ್ವರ್ಗ_ಕಾಲಿನಿಕ್ಕಳದ_ಬಂಧಿ‌‌‌...
⟲⟳⟴➤

"ಎದೆಯ ಚಿಪ್ಪನು ಒಡೆದೆ - ನವಿಲ್ಗರಿಯ ಮರಿ ನಕ್ಕಿತು...
ರೂಹನುಳಿಸದ ಮರಳ ಮೇಲೆ ಹೂ ಹೆಜ್ಜೆಯ ಹಾಡು - ಅವಳ ಪ್ರೀತಿ..."
ಅಲೆಗಳ ಸೀಳುವ ಗಲಿಬಿಲಿಯಲ್ಲಿ ಅಯಾಚಿತವಾಗವಳ ಮುಂಗೈ ಹಿಡಿದೆ - ಧುಮುಗುಡುತ್ತಿದ್ದ ಯಾವುದೋ ಮಳ್ಳು ಜಗಳ ಹುಸಿ ಕೋಪದ ಮಗ್ಗುಲಾಗಿ ಹೊರಳಿತು...
ನಾಲ್ಗೆ ಮೇಲೆ ಮಚ್ಚೆ ಇದೆ ನಂಗೆ, ಬೈದ್ರೆ ಒಳ್ಳೇದಾಗಲ್ಲ ಅನ್ನುತ್ತಾ ತುಟಿ ಕೊಂಕಿಸಿ ಹತ್ತಿರ ಸರಿದಳು...
ನಿನ್ನ ನಾಲಿಗೆಯ ಕಳ್ಳ ಶಾಪವಾದರೂ ನಿಜವಾಗಲಿ - ಈ ಜಡ ಪಕೀರನ ಸಂಜೆಗಳಿಗೊಂದು ವಿರಹವಾದರೂ ಜೊತೆಯಾಗಲಿ ಅಂದು ಕಣ್ಮಿಟುಕಿಸಿದೆ...
ಅಲೆಗಳ ಕೆಣಕುವ ಸಣ್ಣ ಮೌನ...
ಕಾಡುಗತ್ತಲಲ್ಲಿ ಕಳೆದು ಹೋಗಬೇಕು - ಬಟಾಬಯಲ ಬೆಳಕಿನಲ್ಲಿ ಕರಗಿ ಹೋಗಬೇಕು - ಸುಟ್ಟು ಹೋಗಬೇಕು - ಸುಟ್ಟು ಹೋಗಿ ನಗೆಯ ಪಾದದ ಪ್ರೀತಿ ಧೂಳಾಗಬೇಕು; ಮರಳ ಮೇಲೆ ಪ್ರೀತಿಯ ಬರೆಯುತ್ತ ನಿದ್ದೆಯಂತ ನಶೆಯಲ್ಲಿ ಗುಣುಗಿದಳು...
ಮಿಂದು ಬಂದವಳ ಮುಂಗುರಿಳಿಂದ ಇಳಿದ ಹನಿ ಕಳೆದು ಹೋದ ಅದೇ ಗಿರಿ ಕಣಿವೆಯ ಕತ್ತಲಲ್ಲೇ ನಾನೂ ಉಸಿರ ಚೆಲ್ಲಬೇಕು ಅಂದೆ...
ಪಾಪೀsss ಅಂತ ಬೈದು ಸೆರಗೆಳೆದುಕೊಂಡವಳ ಕೆನ್ನೆಗುಳಿಯಲ್ಲಿ ಸಂಜೆ ಸೂರ್ಯ...
ಪಾಪಿಯೆದೆಯ ಕವಿತೆಯ ಒರತೆಯೂ ನೀನೇ ಕಣೇ; ಇರುಳ ಗಲಿಬಿಲಿಗಳಿಗೂ ನಿನ್ನದೇ ಹೆಸರಿಡಬೇಕು ನಾನು - ನೀ ನಕ್ಕ ನಗುವಲ್ಲಿ ಈ ನಸೀಬುಗೆಟ್ಟವನ ಹಡಬೆ ಕನಸೊಂದು ಉಸಿರು ಜೀಕಲು ಹೆಣಗುತ್ತದೆ ನಿರಂತರ, ಬೇಲಿಗಳ ಮುರಿದು ಬಯಲಿಗೆ ಬಾ ಅಂತಂದು ಕಂಗಳಾಳಕಿಳಿಯುತ್ತೇನೆ...
ಉಸಿರು ಬಿಗಿ ಹಿಡಿದು ನೀರಿನಾಳಕೆ ನುಸುಳಿ ಮೀನ ಹೆಜ್ಜೆಯ ಹುಡುಕೋ ಹುಚ್ಚು - ಅವಳ ಕಣ್ಣಲ್ಲಿ ನನ್ನ ಹುಡುಕುವ ಆಟ...
ನನ್ನ ಕನಸುಗಳ ಕೋಟೆ - ಅವಳೆದೆಯ ಮೇಲಿನ ಚಿತ್ರ...
ಕಾಡ ಮಗ್ಗುಲಿನ ಮನೆಯ ಹಾದಿಯಲ್ಲಿ ಅಂದ ಗಂಧದ ಶರವ ಹೂಡಿ ಮನವ ಬಂಧಿಸಿದ ಅಪರಿಚಿತ ಹೂವಿಗೆ ಅವಳ ಹೆಸರಿಟ್ಟು ನಗುತ್ತೇನೆ - ಶೀರ್ಷಿಕೆ ಇಲ್ಲದ ಕವಿತೆ ನಾನು ಅನ್ನುತ್ತಾಳೆ...
"ಒಳಹೊರಗರಳುವ ಅಂದವೇ ಪ್ರೇಮ..."
ಕಾಡು ಈಗ ಅವಳ ಮನೆ ಮತ್ತು ನನ್ನ ಹಂಬಲದ ಗೂಡು...
ನಾನೆಂದರಿಲ್ಲಿ ನಿಜ ಗಾಂಧರ್ವಳ ಹೊತ್ತು ತಿರುಗೋ ಮುರುಕು ತೇರು...
#ಅವಳೆಂಬ_ಹುಚ್ಚು_ಸ್ವಪ್ನ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

ಗೊಂಚಲು - ಮೂರು ನೂರಾ ಹನ್ನೆರಡು.....

ನೇಹ ಪ್ರೀತಿ ಇತ್ಯಾದಿ.....

ಜುಮುರು ಮಳೆ ಅಂಗಳದ ತುಳಸಿಯೆದುರಿನ ರಂಗೋಲಿಯನು ಹನಿ ಹನಿಯಾಗಿ ಕೆಡಿಸುತಿರುವಾಗ, ಎದುರು ಬಂದಾಗೆಲ್ಲ ಗಟ್ಟಿ ಕಟ್ಟಿಕೊಂಡ ಮುಡಿಯನು ಸುಖಾಸುಮ್ಮನೆ ಬಿಚ್ಚಿ ಕಾಡುವ ನಿನ್ನ ನೆನಪಾಯ್ತು ಕಣೋ ಅಂದಳು - ಮತ್ತು ಹೀಗೆ ಬಾಗಿಲ ಪಟ್ಟಿಗೆ ಬೆರಳು ಎಡಗುವಂತಾ ಸಣ್ಣ ಸಣ್ಣ ಕಾರಣಗಳಲ್ಲೇ ದಿನಕ್ಕೊಂದಾವರ್ತಿಯಾದರೂ ನೆನಪಲ್ಲಿ ನಗೆಯಾಗುವ ಟೊಣಪ ನೀನು ಅಂತಾಳೆ...
ಇಷ್ಟೇ, ಇಷ್ಟಿಷ್ಟೇ ಬದುಕ ಬೆರಳಿಗಂಟಿದ ಸಂಜೀವಿನಿಯಂತ ವಿನಾಕಾರಣ ಪ್ರೀತಿಗಳೇ ಚಿಟ್ಟೆ ಹೆಜ್ಜೆಯಂತೆ ನನ್ನ ನಡಿಗೆಯ ಕಾಯುತ್ತವೆ...
ಅಗುಳೊಂದು ಹಸಿದ ಕರುಳ ಸೇರೋ ಅಮೃತ ಘಳಿಗೆಯಲಿ ನೆನೆಯುತ್ತೇನೆ ಅಂಥ ಪ್ರೀತಿಗಳ - ನಚ್ಚಗಿರಲಿ ಅಂಥ ಮಡಿಲುಗಳು...
"ಪ್ರೀತಿಯೊಂದೇ ಸತ್ಯವಾಗಲಿ - ಸಡಿಲವಾಗದಿರಲಿ ನಗುವಿನಪ್ಪುಗೆ..."
#ಲವ್ಯೂ_ಬದುಕೇ...
↜↝↜↝

ಶತದಡ್ಡ ನಾನು - ದಡ್ಡನೆದೆಯ ಕವಿತೆ ನೀನು...
#ಹುಟ್ಟಿಲ್ಲ_ಸಾವಿಲ್ಲ...
↜↝↜↝

ನಾ ಮಣ್ಣಾಗಬೇಕು - ನೀ ಮಳೆಯಾಗುವಲ್ಲಿ...
#ಒಲವೇ...
↜↝↜↝

ಕಳೆದೋಗಬೇಕು ಇಲ್ಲಾ ಅಳಿದೋಗಬೇಕು...
#ನಿನ್ನಲ್ಲಿ_ನಿನ್ನಿಂದ...
↜↝↜↝

ನೆನಪ ಬಿಕ್ಕಳಿಕೆಗಳ ತುಳಿಯುತ್ತ ಇರುಳ ಹಾಯುವಲ್ಲಿ ಸೋತ ಕಣ್ಣಿಗೆ ನಿದ್ದೆ ಹೇಳುವ ಸಾಂತ್ವನಕ್ಕೆ ಮತ್ತೆ ನಿನ್ನದೇ ಹೆಸರಿಡಲೇ...
#ಬಣ್ಣವಿಲ್ಲದ_ಕಣ್ಣಹನಿ...
↜↝↜↝

ಮನೆಯೊಳಗೆ ನಾವಿಬ್ಬರೇ ತಂಗಿರಬೇಕು...
ಮನೆ ತುಂಬಾ ನಮ್ಮಿಬ್ಬರ ಬೆತ್ತಲೆ ಬೆಳಕು ಚೆಲ್ಲಬೇಕು...
#ಶೃಂಗಾರಾಲಂಕಾರ...
↜↝↜↝

ಉನ್ಮಾದದ ಜೀವಂತಿಕೆಯ ನಶೆಯೊಂದಿಲ್ಲದ ಬೆತ್ತಲೆ‌...
ಬೆತ್ತಲೆ ಉಸಿರಾಟದ ಬೆಂಕಿ ಇರದ ಕತ್ತಲೆ...
ನಿರ್ಜೀವ ನಿಶೆಯ ಇನ್ಹೇಗೆ ವರ್ಣಿಸಲಿ...
#ಸೂತಕದಿರುಳು...
↜↝↜↝

ಮುಂಬಾಗಿಲ ಪ್ರವೇಶವನ್ನು ಖಡ್ಡಾಯವಾಗಿ ನಿಷೇಧಿಸಲಾಗಿದೆ - ಕಾರಣ ಅಗಣಿತ ಮೋಹದ ಹಾದಿಯಲ್ಲಿ ಹಾಯ್ದು ಬಂದ ಪ್ರೇಮ ಅನೈತಿಕವಂತೆ ಇಲ್ಲಿ...
ಹೈದನೆದೆಯ ಭಾವ ಕಂಡು ಸಂಭ್ರಮಿಸೊ ಹುಡುಗಿಯೂ, ಅವಳೆದೆ ಗೊಂಚಲ ಅಂದ ನೋಡಿ ಕಂಪಿಸುವ ಹುಡುಗನೂ ಇರುಳ ತಲಬಾಗಿಲಲ್ಲಿ ಎಡವಿ ಬಿದ್ದು.......
ಸೋಕಿದ ಉಸಿರಿಗೆ ಮುಚ್ಚಿದ ಕಣ್ಣು ಎಲ್ಲಾ ಹೇಳಿತ್ತು...
ಒದ್ದೆ ತುಟಿಯ ಕಂಪಿಗೆ ಕಂಪಿಸಿದ ಊರುಗಳ ಬೇಲಿ ಮುರಿದಿತ್ತು...
ಇಲ್ಲಿಗೀಕಥೆ ಮುಗಿಯಿತು ಎನ್ನುವಲ್ಲಿಂದಲೇ ನಿಜವಾದ ಕಥೆ ಶುರುವಾಗುತ್ತೆ...
#ಹಿತ್ಲಬಾಗಿಲ_ತಿಳಿಬೆಳಕು...
↜↝↜↝

ನಿನ್ನೆಯ ಪ್ರೀತಿ ಇಂದು ಇನ್ನೇನೋ ಅಪದ್ಧವಾಗಿ ಬದಲಾಯ್ತು ಅನ್ನುವಲ್ಲಿ ಪ್ರೀತಿಯನ್ನೇ ಶಂಕಿಸುತ್ತೇನೆ...
ಯಾರನ್ನೇ/ಯಾವುದನ್ನೇ "ತುಂಬಾ ಪ್ರೀತಿಸಿದ್ದೆ" ಅನ್ನೋ ಪ್ರಯೋಗವೇ ಪ್ರೀತಿಗೆ ಮಾಡಬಹುದಾದ ಅತಿ ದೊಡ್ಡ ಅವಮಾನ...
"ಪ್ರೀತಿ ಏನಿದ್ದರೂ ವರ್ತಮಾನದ ಜೀವಿಸುವಿಕೆ ಆಗಿರುವಲ್ಲಿ ಮಾತ್ರ ಸತ್ಯ..."
ಭೂತ ಭವಿಷ್ಯತ್ ಕಾಲಗಳಲ್ಲಿ ಪ್ರೀತಿಯನ್ನು ವರ್ಣಿಸುತ್ತಿದ್ದೇವಾದರೆ ಅದು ನಮ್ಮ ಇನ್ಯಾವುದೋ ತಿಕ್ಕಲಿಗೆ ನಾವಿಟ್ಟುಕೊಂಡ ಸುಂದರ ಸುಳ್ಳು ಹೆಸರಷ್ಟೇ...
#ನಾನು...
#ಪ್ರೀತಿ_ಗೀತಿ_ಇತ್ಯಾದಿ...
↜↝↜↝

"ನೀನು" ಹುಟ್ಟು "ನಾನು" ಸಾವು...
ನಾವಾಗಬಹುದಾದರೆ ಬದುಕು...
#ನೇಹ_ಪ್ರೀತಿ_ಇತ್ಯಾದಿ...
↜↝↜↝

ಹುಡುಕುವಾಗ ಇದ್ದ ಸಂಯಮ ಹಾಗೂ ಸಮಯ ಸಿಕ್ಕಿದ್ದನ್ನು ಕಾಯ್ದುಕೊಳ್ಳುವಲ್ಲಿ ಇರದೇ ಹೋಗುವ ನನ್ನದೇ ಮನದ ಉಪದ್ವ್ಯಾಪಿ ಮೊಂಡಾಟವನು ಏನೆಂದು ಕರೆಯುವುದು...?
#ಪ್ರೀತಿ_ನೇಹ_ನೆಂಟಸ್ತಿಕೆ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Saturday, October 5, 2019

ಗೊಂಚಲು - ಮೂರು ನೂರಾ ಹನ್ನೊಂದು.....

ನಿಸ್ತಂತು ಬದುಕು.....  

ನಿನ್ನೆಡೆಗಿನ ಚೂರು ಮೋಹಕ್ಕಾಗಿ ನಾನಲ್ಲದ ನನ್ನನ್ನು ಬದುಕಿ ಸುಸ್ತಾಗುತ್ತೇನೆ - ಪ್ರತಿ ನಿತ್ಯದ ಪ್ರತಿ ಘಳಿಗೆ ಒಳಗೊಳಗೇ ಮತ್ತೆ ಮತ್ತೆ ಸಾಯುತ್ತೇನೆ - ನಂಗ್‌ನಂಗೇ ಅಂತ ಒಂಚೂರೂ ಜಾಗಕ್ಕಾಗಿ ಮಂಚದ ಮನೆಯಲ್ಲೂ ತಡಕಾಡುತ್ತೇನೆ...
"ಪ್ರೀತಿಯಿಂದ ಪಡೀಬೇಕಿತ್ತು ಇಲ್ಲಾ ಪ್ರೀತಿಯಿಂದ ಬಿಟ್ಕೊಡಬೇಕಿತ್ತು" - ಒಂದೂ ಬಗೆಹರಿಯದೇ ಸಾಕಿಕೊಂಡದ್ದು ಹಳಹಳಿಕೆಯನ್ನಾಯಿತು...
ರೂಢಿಗತ ಈಗ - ಜೀವಂತ ತಲ್ಲಣಗಳನು ಹೊದ್ದು ಸಾವಿನಂತ ನಿದ್ದೆಗೆ ಕಾಯುತ್ತಾ ಇರುಳ ಮಡಿಲಿಗೆ ಜಾರುತ್ತೇನೆ...
ಹಾಂ... ಹೌದು... ನಿನ್ನ ಬೆನ್ನಿಗೆ ಕಣ್ಣಿಟ್ಟು ಊಳಿಡುತಿರುವುದು; ಅದು ನನ್ನದೇ ಕಳೇಬರ...
#ಘೋರಿ_ಮೇಲಿನ_ನೆರಳು...
↰↲➤➤➤↲↱

ಕೇಳಿಲ್ಲಿ -
ಹೊಸ ಹೊಸ ರೂಪದಲ್ಲಿ ಗೋಳುಗಳಷ್ಟೇ ಎಡತಾಕುವ ನಿಸ್ಸಾರದ ಈ ಹಾದಿಯಲ್ಲಿ ನೀನಾದರೂ ಒಂದು ಘಳಿಗೆ ಕಾಲಾಡಿಸಬಾರದೇ - ನೋವ ಗೆದ್ದು ಕೊಡುವುದಕ್ಕಲ್ಲ, ನಗೆಯ ಮಿಂಚೊಂದ ನನ್ನಲೇ ಹುಡುಕುವ ಹುಕಿ ಹುಟ್ಟಿಸಲಾದರೂ...
ನಿನ್ನದೊಂದು ಘಮದ ಋಣಭಾರವಾದರೂ ಜೊತೆಗಿದ್ದಿದ್ದರೆ ಈ ಪಯಣಕೆ ಹೇಳಿಕೊಳ್ಳಲೊಂದು ಉದ್ದೇಶವಾದರೂ ಕಾಣುತ್ತಿತ್ತಲ್ಲ...
#ಬೇವರ್ಸಿಯ_ಖಾಲಿ_ಜೋಳಿಗೇನ_ಬಿಟ್ಟಿಕನಸು_ಕೂಡಾ_ಮೂಸುವುದಿಲ್ಲ....
↰↲➤➤➤↲↱

ಹೊಸತೊಂದು ನೋವಾದರೂ ಬೇಕು ಹೆಣಗಾಡಿ ನಗುವುದಕ್ಕೆ - ಈ ಹಾಳು ಸುರಿವ ಖಾಲಿಗಿಂತ..‌.
#ನಿಸ್ತಂತು_ಬದುಕು...
↰↲➤➤➤↲↱

ಸಂತೆಯ ಅಟಾಟೋಪಕ್ಕೆ, ಜಂಗುಳಿಯ ಆಡಂಬರಕೆ ಒಳಗೊಳಗೇ ಬೆಚ್ಚುತ್ತಾ ಅಲ್ಲೇ ಅಲೆಯುತ್ತಿರುತ್ತೇನೆ ಗುಂಪಿಗೆ ಸೇರದ ಪದವೊಂದು ಗುಂಪಿನಲ್ಲಿ ಎದ್ದು ಕಾಣುವಂತೆ...
#ಮೌನದ_ಭಯಕ್ಕೆ_ಬಿದ್ದ_ಜಂಗಮ...
↰↲➤➤➤↲↱

ಸಂತೆಯನ್ನೇ ಮನೆ ಮಾಡಿಕೊಂಡರೂ ಖಾಲಿತನಕ್ಕೆ ಮದ್ದು ಸಿಗುತ್ತಿಲ್ಲ - ಒಳಮನೆಯ ವಾಸ್ತುವೇ ಸರಿಯಿಲ್ಲವೇನೋ...
#ಒಣಕಲು_ಎದೆ...
↰↲➤➤➤↲↱

ಕನಸಿದಂತದ್ದೇ ಅಂತ್ಯವ ತಲುಪಲಾರದ ಅನುಮಾನದ ಭರದಲ್ಲಿ ಆರಂಭವನ್ನೂ ಪ್ರೀತಿಸದೇ ಹೋದರೆ ನಡಿಗೆಯೇ ಇಲ್ಲ, ಸೋಲಿನ ಅನುಭವವೂ ಇಲ್ಲ...
#ಹೊರಟು_ನೋಡು_ಸಿಕ್ಕೀತು_ನಗೆಯ_ಜಾಡು...
↰↲➤➤➤↲↱

ಅವಳ ಹಾಡಿ ಹೊಗಳಿ ಮಣಗಟ್ಟಲೆ ಬರೆದೇ ಬರೆದೆ..‌.
ಅಬ್ಬಾ, 'ಎಷ್ಟೊಂದು ಪ್ರೀತಿಸ್ತೀಯಲ್ಲೋ ಅವಳನ್ನ!!' ಅಂತ ದೈವೀಕವೆಂದರು ಓದಿದ, ಕೇಳಿದ ಎಲ್ಲ...
ಉಹುಂ, ಪ್ರೀತಿಸಿದ್ದಲ್ಲ ನಾ ಅವಳನ್ನ - ಎದೆಯ ಸತ್ಯ ಬೇರೆಯೇ ಇದೆ ನನ್ನದು...
ಕೊಡಬೇಕಿದ್ದ ಹೊತ್ತಲ್ಲಿ, ಕೊಡಬೇಕಿದ್ದ ಪ್ರೀತಿಯನ್ನ, ಕೊಡಬೇಕಾದ ರೀತಿಯಲ್ಲಿ, ಕೊಡಲಾಗದ ಸೋಲನ್ನು ಬರೆದದ್ದು; ಶಬ್ದಗಳ ಸುಳಿಯಲ್ಲಿ ಒಳಗಿನ ಅಸಹಾಯಕತೆಯ ನೀಗಿಕೊಂಡಂತೆ ನಿಡುಸುಯ್ದದ್ದು ಅಷ್ಟೇ, ಅದಷ್ಟೇ...
ಆದರೆ,
ಓದು ಬಾರದ ಅವಳ ಕಣ್ಣ ಬಟ್ಟಲಲ್ಲಿ ನಿಜ ಪ್ರೀತಿ ಗಂಗೆ ತುಳುಕಿ ನಗುವಾಗಲೆಲ್ಲ ನಾನು ಮುಕ್ಕಾಗುತ್ತೇನೆ - ಒಳಗೇ ಸಾಯುತ್ತೇನೆ...
ಸುಳ್ಳು ಸಮಾಧಾನಕ್ಕೆ ಕಥೆ, ಕವಿತೆಯ ಬಣ್ಣ - ಕತ್ತಲನ್ನು ಹೇಗೂ ಬಣ್ಣಿಸಬಹುದಲ್ಲ...
ದಾಟಬಹುದಾದರೆ ಅದು ಬದುಕನ್ನಷ್ಟೇ - ಸಾವನ್ನು ಹಾಯಲಾದೀತೆ..‌.
"ನಾನು ಹುಟ್ಟಿದೆ - ಅವಳು ಸತ್ತೋದಳು‌‌‌..."
#ಅವಳು...
↰↲➤➤➤↲↱

ಕುಂಚ: ಅಮನ್.
ಈ ಜಗತ್ತಿನಾಚೆಯ ಒಂದು ಅತಿರೇಕದ ಬದುಕನ್ನು ಒಂದ್ಹತ್ತು ವರ್ಷವಾದ್ರೂ ಬದುಕಬೇಕು...
ಹಡಬೆ ದನದ ಹುಚ್ಚು ಬದುಕೊಂದು ನಂದ್‌ನಂದೇ ಆಗಿ ನಂಗಿರಬೇಕು...
ಬೆಳಕ ಬಟ್ಟೆಯನುಟ್ಟ ಬಯಲ ಬೆತ್ತಲೆಯಲ್ಲಿ ನನ್ನೊಳಿಲ್ಲದ ನನ್ನ ನಿನ್ನೊಳು ಬೆದಕಬೇಕು...
ಚಿತ್ರದೊಳಗಣ ನಗುವ ಚೂರುಪಾರು ಚಿತ್ತಕಿಳಿಸಿಕೋಬೇಕು...
#ಬೇವರ್ಸಿ_ಕನಸು...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

ಗೊಂಚಲು - ಮೂರು ನೂರಾ ಹತ್ತು.....

ಅಳಿದುಳಿದ ನಾನು..... 

ಇಳೆ, ಬೆಳಗು ಜೋಡಿ ಜಳಕ ಮಳೆಯ ಮಾಯಕದಲ್ಲಿ...
ಇಲ್ಲಿ ಮಳೆ...
ಬೆಳ್ಳಾನ ಬೆಳಗ್ಗೆ ಚೂರು ನೆಂದು ಬಂದೆ - ನೆತ್ತಿಯಿಂದ ಜಾರುತಿವೆ ತಂಪು ತಂಪು ಹನಿ ಬಳಗ...
ಎದ್ದೇಳೋ ಬೆಳಗಾಯ್ತೂ ಅಂತಂದು ನೀನೆನ್ನ ಮುಂದಲೆಯ ತೀಡಿ ಹಣೆಯ ಮುದ್ದಿಸಿದಂತೆ ಸವಿಭಾಸ...
ಕರಗೋ ಮೋಡದ ಸೆರಗ ಮರೆಯಲಿ ಸೂರ್ಯ ಕಣ್ಮುಚ್ಚಿ ಕೂತಿರುವಂತಿದೆ ಬೆಳಗು - ಥೇಟು ನಿನ್ನ ತುಂಬೆದೆಯ ನೆರಳಲ್ಲಿ ನಾ ಹಗಲ ಕಳ್ಳ ನಿದ್ದೆಯ ಸವಿವಂತೆ..‌.
#ತುಂತುರು_ಬೆಳಗು..‌.🌦
⇛⇖↢↣⇗⇚

ಹುರಿಗಟ್ಟಿಯೂ ಸುರಿಯಲೊಲ್ಲದೇ ಗಾಳಿಯ ರೆಕ್ಕೆ ಕಟ್ಟಿಕೊಂಡು ಎಲ್ಲಿಂದೆಲ್ಲಿಗೋ ಹಾರುವ ಒಂದಿಷ್ಟು ಮತ್ತು ಹಳೆಯ ಹುಸಿ ಮುನಿಸೊಂದು ಮತ್ತೆ ನೆನಪಾಗಿ ಸುಳ್ಳೇ ಸೆಟೆದು ನಿಂತಂತೆ ನಿಂತ ಮತ್ತಿಷ್ಟು ಕರಿ ಕರಿ ಮೋಡದ ಹಕ್ಕಿಗಳು...
ನಾವ್ಯಾರೂ ಈ ಲೋಕಕ್ಕೆ ಸಂಬಂಧಿಸಿದವರೇ ಅಲ್ಲ ಅನ್ನೋ ಭ್ರಮೆಯಲ್ಲಿ ಹುಳ್ಳಹುಳ್ಳಗೆ ಮುಖ ಮಾಡಿಕೊಂಡು ಶಾಪಗ್ರಸ್ಥ ಗಂಧರ್ವರಂತೆ ಗಡಿಬಿಡಿಯಲ್ಲಿ ಓಡಾಡೋ ನಗರ ಜೀವಿಗಳು ಮತ್ತು ಮುಖ ಮುಖಗಳ ಮಿಕಮಿಕ ನೋಡುತ್ತಾ ಗುಂಪಿನ ಮೂಲೇಲಿ ಬೆರ್ಚಪ್ಪನಂತೆ ನಿಲ್ಲೋ ಅವರೊಲ್ಲೊಬ್ಬ ನಾನು...
ಎಲ್ಲಿಗೂ ತಲುಪದ, ಗಾಳಿಗೆಗರಿ ಬಿದ್ದ ಹರಿದ ಉತ್ತರೀಯದಂತ ತುಂಡು ತುಂಡು ಹಾದಿಗಳು - ಅವುಗಳೆಡೆಯಲ್ಲೇ ಅಲ್ಲಲ್ಲಿ ಬಣ್ಣ ಬಳಕೊಂಡ ಕಾಂಕ್ರೀಟಿನ ಅಟಾಟೋಪಕ್ಕೆ ಹೆದರುತ್ತಲೇ ತನ್ನ ಅಸ್ತಿತ್ವಕ್ಕೆ ಹೆಣಗಾಡಿ ಹುಯ್ದಾಡೋ ಹೊಗೆ ಮೆತ್ತಿದ ಹಸಿರು - ಎಲ್ಲಿಗೋ ತಲುಪುವ ವಿಚಿತ್ರ ಹುಕಿಯಲ್ಲಿ ಬುರ್ರಬುರ್ರನೆ ಎಗರೆಗರಿ ಓಡೋ ತರಹೇವಾರಿ ಗಾಡಿಗಳು...
ಹುಸಿ ಮಳೆಯ ಮುಂಜಾವೊಂದು ಹಿಂಗೆ ಬಿಚ್ಚಿಕೊಳ್ಳುತ್ತೆ...
ಬೆದರು ಬೊಂಬೆ ಬೆಚ್ಚುವಾಗ ಕಾಗೆಯೊಂದು ಅದರ ಭುಜದ ಮೇಲೆ ಹಿಕ್ಕೆ ಹಾಕಿ ಸಮಾಧಾನಿಸಿತು...
#ಮಾಯಾಬಜಾರಿನ_ಬೆಳಗು...
⇛⇖↢↣⇗⇚

ನಿನ್ನೊಡಲ ಹಿಡಿ ಮೌನವ ಭಿಕ್ಷೆಯನಿಕ್ಕು ಮಳೆಯ ಮಿಂದ ಇಳೆಯೇ - ಈ ಬಡಕಲು ಬದುಕಿಂಗೆ ಚಿಟಿಕೆ ಪ್ರೀತಿ ನಗೆಯ ಮಾತನೂಡಬೇಕಿದೆ...
#ಪ್ರಾರ್ಥನೆ...
⇛⇖↢↣⇗⇚

"ಎತ್ತರ ಭಯ, ಎತ್ತರ ಬಲ ಮತ್ತು ಎತ್ತರ ನನ್ನೊಳಗಿಂದ ನಾ ಕೂಗಿ ಕೂಗಿ ಕರೆವ ನಿನ್ನ ಹೆಸರು..."
ಗಾಳಿ ಕಾಲಿಗೆ ಗೆಜ್ಜೆ ಕಟ್ಟಿ ಬಿಟ್ಟದ್ದು ನೀನೇ ಇರಬೇಕು - ಕಿವಿಯ ಶಂಖದ ತುಂಬಾ ನಿನ್ನದೇ ಗುನುಗು ದನಿಯ ಇಂಪು...
ಇಲ್ಲೆಲ್ಲೋ ಕಳೆದೋದವನು ಅಲ್ಲೆಲ್ಲೋ ಸಿಗಬಹುದಾ - ಆ ಅಂಚಲಿ - ಗಾಳಿಯಲ್ಲಿ ನೀ ತುಂಬಿಕೊಟ್ಟ ಉಸಿರು ನನ್ನೆದೆಯಲ್ಲಿ ಭಾವೋತ್ಸವ ರಾಗವ ತಾರಕದಿ ಮಿಡಿವಾಗ...
ಹೆಗಲು ಹರಿದರೂ ಕಣ್ಣು ತುಳುಕಿಸದೆ ಎಳೆದೇ ಎಳೆವ ಹುಚ್ಚು ಹಸಿವಿನ ತೇರು - ಕತ್ತಲನು ಸಿಂಗರಿಸಿ ಬೆಳಕನ್ನು ಎದುರ್ಗೊಂಬುವ ಬಿಚ್ಚುಗೈಯ್ಯ ಪಯಣ...
ಇಷ್ಟೆಲ್ಲಾ ಆಗುವಾಗಲೂ "ನಿನ್ನ ಅರಸುತ್ತಿಲ್ಲ ನಾನು - ನನ್ನ ಉಳಿಸಿಕೊಳ್ಳುತ್ತಿದ್ದೇನಷ್ಟೇ..."
#ಪ್ರತೀಕ್ಷೆ...
⇛⇖↢↣⇗⇚

ನನ್ನ ಸಾವಿರ ಮಾತು ಕೊಲ್ಲಲಾಗದ್ದನ್ನು ನಿನ್ನದೊಂದೇ ಒಂದು ಜಾಣ ಮೌನ ಸೀಳಿಹಾಕಿತು...
ನಾಕು ದಿನ ಗಟ್ಟಿಯಾಗಿ ಬಾಯಿ ಹೊದ್ಕೊಂಬಿಟ್ರೆ ಜಗಳವೂ ಉಳಿಯುವುದಿಲ್ಲ - ಸಂವಹನ ಸತ್ತರೆ ಪ್ರೀತಿಯ ಸ್ವಚ್ಛಂದ ಹರಿವಿಗೆ ಕಡ್ಡಾಯ ಸೂತಕ...
"ಮುಚ್ಚಿದ ಬಾಗಿಲು ಯುದ್ಧವ ತಡೆಯುತ್ತೋ ಇಲ್ಲವೋ ಗೊತ್ತಿಲ್ಲವಾಗಲೀ, ಒಳಬರುವ ಪ್ರೀತಿ ಬೆಳಕನ್ನಂತೂ ಸಮರ್ಥವಾಗಿ ತಡೆಯುತ್ತೆ..."
#ಮೌನ...
#ಮೃತ್ಯುಗಂಧ...
⇛⇖↢↣⇗⇚

ನೀ ತೇಲಿ ಬಿಟ್ಟ ಕಾಗದದ ನಾವೆಯ ಒಳಪದರದ ಚಿತ್ತುಕಾಟಿನಲಿ ಸಣ್ಣ ಕನವರಿಕೆಯಂತೆ ನನ್ನ ಹೆಸರಿದ್ದಿತ್ತಾ...?!
ದಾರಿ ಕವಲಿನಲಿ ನಿನ್ನ ಕಣ್ಣು ಉದುರಿಸಿ ಹೋದ ಹನಿಯೊಂದು ಜಟಾಯುವಿನ ಮುರಿದ ರೆಕ್ಕೆಯಂತೆ ಕಾಡುತ್ತಿದೆ...
ಬಯಲಲ್ಲಿ ತೇಲುವಂಥ ಖುಷಿಯಲ್ಲಿರುವಾಗ ಛಕ್ಕನೆ ನಿನ್ನ ನೆನಪಾಗಿಬಿಡುತ್ತೆ ಮತ್ತು ನಗುವಿನೊಡನೆ ಬಿಕ್ಕಳಿಕೆ ಜೊತೆಯಾಗುತ್ತೆ...
ನನ್ನ ನಾ ಹುಡುಕುತ್ತಿದ್ದೇನೆ ಈಗ - ಹನಿ ಮಳೆಯಲ್ಲಿ, ಹರಿವ ಹೊಳೆಯಲ್ಲಿ, ಧಿಮಿಗುಡುವ ಜಲಪಾತದಡಿಯಲ್ಲಿ, ನಾವೆ ತೇಲಬಹುದಾದ, ಉರುಳಬಹುದಾದ ಎಲ್ಲೆಂದರಲ್ಲಿ, ಮುರಿದು ಬಿದ್ದಿರಬಹುದಾದ ದಡಗಳಲ್ಲಿ...
#ನಾನಿಲ್ಲಿ_ಬರೀ_ಸುಳ್ಳು_ನಗೆಯು...
⇛⇖↢↣⇗⇚

ಮೂಲೇಲಿ ಕಾದಿಟ್ಟ ಅದೇ ತುಂಡು ಗಂಧದ ಕೊರಡನು ತೇಯ್ದು ತೇಯ್ದು ಹೊಸತು ಹೊಸತೇ ಘಮವೆಂದು ಮೂಗರಳಿಸಿ ನಿನ್ನೆಯ ಮುಕ್ತಗೊಳಿಸುವ ಈ ಇಂದು...
ನನ್ನೊಡನೆ ನನ್ನ ಅದದೇ ಹಳೆಯ ಯುದ್ಧಕೆ ಹೊಸದಾಗಿ ಕತ್ತಿಯ ಮಸೆಯುವ ಬಿಕರಿಯಾಗದ ಸರಕಿನಂತ ಸುಳ್ಳು ಕನಸು...
ಇರುಳ ಕಣ್ಣಿನ ತೇವ - ಹಗಲ ಕೊರಳಿನ ಹಾಡು...
#ಅಳಿದುಳಿದ_ನಾನು...
⇛⇖↢↣⇗⇚

ಒತ್ತಾಯದಿಂದ ತುಂಬಿದ್ದೆಲ್ಲ ವಾಂತಿಯಾಗೋದೇ ಹೆಚ್ಚು - ಪ್ರೀತಿಯಾದರೂ ಅಷ್ಟೇ...
#ಗೆರೆ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Friday, October 4, 2019

ಗೊಂಚಲು - ಮೂರು ಸೊನ್ನೆ ಒಂಭತ್ತು.....

ಕೃಷ್ಣ ಸಖ್ಯ..... 

ಹರಿದ ಸೀರೆ ತೊಟ್ಟಿಲಲ್ಲೂ ಕೃಷ್ಣ ನಗುತಾನೆ - ಅಮ್ಮನ ಕಣ್ಣ ಜಿನುಗನು ನವಿಲುಗರಿ ಒರೆಸುತ್ತೆ - ಅವನು ಮಡಿಲಲಾಡಿದರೆ ಹರಳುಗಟ್ಟಿದ ಹಾಲಾಹಲವೂ ಎದೆಯ ಹಾಲಾಗುವುದಂತೆ...
ಹೆಣ್ಣಾದರೂ, ಗಂಡಾದರೂ ಒಡಲ ಕೂಸು ಅಮ್ಮನಿಗೆ ಕೃಷ್ಣನೇ - ಅಮ್ಮನ ಕೈಯ್ಯ ಹದ ಮೊಸರ ಕಡೆಯದೇ ಪ್ರೀತಿ ಬೆಣ್ಣೆ ತೇಲೀತು ಹೇಗೆ...
ಮಡಿಲ ಜೋಲಿಯಲಿ ಕೃಷ್ಣನ ತೂಗಿದ ಎಲ್ಲ ಅಮ್ಮಂದಿರಿಗೂ ಅವನ ದಿನದ ಶುಭಾಶಯವು...
           _______ 23.08.2019
↹↯↹↺↻↹↯↹

ಮರಳ ಗೂಡು, ಸಾಗರದಲೆ ಮತ್ತು ಕೃಷ್ಣ ಸಖ್ಯ:

ಆಪ್ತತೆಯ ಅಪ್ಪುಗೆ ಎಂಬೋ ಆತ್ಮದ ವೈಭವದ ಕಿಡಿಗೆ ಗಂಟಲಲಿ ಗಂಟು ಬಿದ್ದ ಉಸಿರು ಕರಗಿ ಕಣ್ಣಿಂದ ಇಳಿದು ಹೋಗಲಿ...
#ನವಿಲ್ಗರಿ...

ಆಡಿ ಸುಖವಿಲ್ಲದ ಫಾಲ್ತು ಫಾಲ್ತು ಮಾತುಗಳೇ ತುಂಬಿರೋ ಈ ಎದೆಯಲ್ಲಿ ನಿನ್ನದಿಷ್ಟು ನಾದದ ಮೌನವ ತುಂಬಿಕೊಡಬಾರದೇ...
#ಮುರಳೀ...

ಎದೆ ಬಾಗಿಲನು ಸಣ್ಣಗೆ ತಟ್ಟುವಾಗ ನೀನು - ಸತ್ಯದ ನೋವೂ, ಸುಳ್ಳಿನ ಸುಖವೂ ಜಿದ್ದಿಗೆ ಬೀಳುತ್ತವೆ - ನಾನು ಆಯ್ದುಕೊಳ್ಳುವ ಗೊಂದಲದಲಿ ಹೈರಾಣಾಗುತ್ತೇನೆ...
#ಪಾಂಚಜನ್ಯ...
↹↯↹↺↻↹↯↹

ಕರಿಯನ ನಿದ್ದೆಯಲಿ ರಾಧೆ ಕೊಳಲ ಸಿಂಗರಿಸುತಾಳೆ...
ರಾಧೆಯುಸಿರಲಿ ಕೃಷ್ಣ ಬೆರಳಾಡಿ ಮಿಡಿವಾಗ ಕೊಳಲಿಂದ ಪ್ರೇಮ ನಾದ...
ಯಮುನೆಯಲಿ ಮಿಂದ ತಂಪು ತಿಳಿ ಗಾಳಿಯಲಿ, ಕಡಗೋಲಿಗಂಟಿದ ಬೆಣ್ಣೆಯಲ್ಲಿ, ಕಪಿಲೆ ಕರುವಿನ ಜೊಲ್ಲಿನಲ್ಲಿ ರಾಧೆಯ ಗೊಲ್ಲ ನುಡಿಯುತ್ತಾನೆ - "ಕಾಯುವ" ಸುಖ ಮತ್ತು ದುಃಖಕ್ಕೆ ರಾಧೆ ಮೌನದ ಗೆಜ್ಜೆ ತೊಡಿಸುತ್ತಾಳೆ...
ಅಲ್ಲಿ ಮಥುರೆಯ ಸಂಜೆಗಳಲ್ಲಿ ಶರಧಿಗೆ ವಿಪರೀತ ಉಬ್ಬರ, ಮನಸು ಬಿಕ್ಕಿದ್ದನ್ನು ಶ್ಯಾಮ ಕಣ್ಣಿಗೂ ಅರುಹಲಾರ, ಬೆಳದಿಂಗಳು ಕಣ್ಣನಿರಿಯುವಾಗ ಬೆರಳು ಬರೆದರೆ ಅವಳ ಹೆಸರನು ಅಲೆಗಳು ಆ ಗುರುತನುಳಿಸುವುದಿಲ್ಲ - ಎದೆಯ ಗಾಯವ ಮರೆಯಲು ಕೃಷ್ಣ ನಾಭಿಯಿಂದ ಉಸಿರನೆಳೆದು ಪಾಂಚಜನ್ಯವನೂದುತ್ತಾನೆ...
ಹಾದಿ ಕವಲಿನ ಕೊನೇಯ ನೋಟದಲಿ ಬಂಧಿಯಾದ ಖಾಲಿ ಬೆನ್ನು ಆಡಿದ ಮಾತುಗಳಿಗೆಲ್ಲ ಭಾಷ್ಯ ಬರೆಯಬಹುದೇ...
#ವಿರಾಗ...
↹↯↹↺↻↹↯↹

"ನನ್ನ ಪಡೆವುದೆಂದರೆ ಅನಾಮತ್ತು ನಿನ್ನ ಕಳಕೊಳ್ಳುವುದಲ್ಲವೇ ಹುಚ್ಚೀ; ನಿನ್ನಲ್ಲಿ ನೀನಾಗಿ ಬೆಳೆಯುತ್ತಾ ನನ್ನಲ್ಲಿ ಬೆರೆವ ಸ್ವಾತಂತ್ರ್ಯ, ನನ್ನಾಚೆಯೂ ಉಳಿವ ನಿನ್ನ ನಗೆಯ ಸೌಂದರ್ಯ ಪ್ರೇಮ" ಅಂದವನು ನನ್ನ ಮಾಧವ...
ರಣ ಹಕ್ಕಿನಿಂದೆಂಬಂತೆ ಓಡೋಡಿ ಕೂಡುವ ಸಾಗರ ಸಂಗಮವಷ್ಟೇ ಅಲ್ಲ ಪ್ರೇಮ; ಹರಿವ ಹಾದಿಯ ಹಸಿರು, ಜೀವ ಜಂತುಗಳ ಉಸಿರೂ ನಿಜ ಪ್ರೇಮ ಎಂಬುದನು ತಬ್ಬಿ ತಿಳಿಹೇಳಿದವನು, ಮೋಡದ ಬಸಿರಿಗೆ ನವಿಲಾಗುವುದ ಕಲಿಸಿದವನು...
ಯಮುನೆ ಮಡುವಿಗೆ ಬಿದ್ದ ಚಂದಿರ ತಿಳಿ ಅಲೆಯಲ್ಲಿ ಕಲಸಿ ಹೋಗುವುದನು ಕಳೆದೋದ ಮನಸಲ್ಲಿ ಕಣ್ಣಿಟ್ಟು ನೋಡುವಾಗ ಆತುಕೊಂಡ ಬಿದಿರ ಮೆಳೆಯ ಚಿಗುರು ಮುಂಗುರುಳ ಸವರುವಲ್ಲಿ ಕೊಳಲಾಗಿ ನಗುವ ನನ್ನ ಶ್ಯಾಮ - ಸುಳಿ ಗಾಳಿ ಹೊರಳಿಗೆ ಹಗಲ ಸುಸ್ತು ಒಣಗುವಲ್ಲಿ, ಗಂಗೆ ಕರು ನೊಸಲ ನಡುವಿಗುಜ್ಜುವಲ್ಲಿ ಅವನ ಧ್ಯಾನ...
ಅವನೆಂದರೆ - ಸೆರಗ ಚುಂಗಿಗಂಟಿದ ನನ್ನದೇ ಹಣೆಯ ಬೆವರು...
ಅದಕೆಂದೇ -
"ಯಮುನೆಯಷ್ಟು ಹತ್ತಿರ ಹಾಗೂ ಮಥುರೆಯಷ್ಟೇ ದೂರ ನನ್ನ ಪ್ರೇಮ..."
#ರಾಧೆ...
↹↯↹↺↻↹↯↹

ಕಂಗಳು ಚೆಲುವನು ಓದಲು ಕಲಿತಾಗಿನಿಂದ ಎದೆ ಪಟ್ಟಿಯ ಕೊನೇ ಪುಟದಲ್ಲಿ ಗೀಚಿ ಗೀಚಿಟ್ಟ ಕಿಶೋರಿಯರ ಹೆಸರುಗಳನೆಲ್ಲ ಸೇರಿಸಿ ಕವನಸಂಕಲನವೊಂದನು ಮಾಡಬಹುದಾ ಅಂತ...
#ಸಂಸ್ಕಾರ...
↹↯↹↺↻↹↯↹

ನಗೆಯ ಮುಗುಳೊಂದು ಹೆಗಲೇರಿ ನೆತ್ತಿ ಕಾಯಲಿ - ಒಡೆದ ಹೃದಯ ಗೂಡಿನ ಬಿರುಕಿನಿಂದಲೂ ಪ್ರೀತಿ ಸೊನೆಯೇ ಜಿನುಗಲಿ - ಸಣ್ಣದೊಂದು ಹಸಿರು ಹರಿವು ಬದುಕಿನೆಡೆಗೆ...
'ಹಿಗ್ಗಿದ' ಹೃದಯದ ಪುಟಾಣಿ ಆಶಯ - ಜೀವಂತ ನಗೆ ಬೆಳಕಿನ ಪ್ರಾರ್ಥನೆ...
#ಹೃದಯದ_ದಿನವಂತೆ...
           ___ 29.09.2019
↹↯↹↺↻↹↯↹

ಅವಳ ಹಾದಿಯ ತುಂಬ ಬೆಳಕು ಆಳಾಗಲಿ - ಮಳೆಯು ಹಾಲೂಡಲಿ - ಹಸಿರು ನೆಳಲೀಯಲಿ...
ಎಲ್ಲ ತುಳಿಯುವ ಓಣಿಯಲ್ಲೂ ನಗೆಯ ಹೂವ ಬಿತ್ತಿ ಬೆಳೆಯುವ ಅವಳ ಹಾದಿಯ ತುಂಬಾ ಅವಳೇ ಅವಳಾಗಲಿ...
#ಪ್ರೀತಿ_ಪ್ರಾರ್ಥನೆ...
↹↯↹↺↻↹↯↹

ಕರಿ ಮೋಡ ಕರಗಿ ತಿಳಿ ನೀಲ ಹರಿವಾಗಿ ನೆಲವ ತೊಳೆದಂತ ಶುದ್ಧ ನಿರಾಳ ನಿರಾಳ ಹಗಲಂತೆ ನಾನೇ ಖುದ್ದು ಒಡನಾಡಿ, ವ್ಯಕ್ತವಾಗಿಸಿ, ಕೊಟ್ಟು, ಕೇಳಿ ಪಡೆಯದೇ ಹೋದರೆ ಯಾವುದೂ ನಂದ್‌ನಂದು ಅನ್ನಿಸುವುದಿಲ್ಲ - ನಂದೂ ಅನ್ನೋ ಮುಕ್ತ ಆಪ್ತತೆ 'ನಾ ಹೇಳದೇ ನೀನೆನ್ನ(ಲ್ಲ) ಅರಿಯಬೇಕೆಂಬೋ ಖೊಟ್ಟಿ ಕನಸುಗಳ ಜಾತ್ರೆಯಲಿ ಮೌನದ ಬೆನ್ನಿಗಂಟಿ ಕಳೆದು ಹೋದರೆ' ಜೊತೆಗೂಡಿ ಬಹು ದೂರ ಹೆಗಲಿಗಾತು ನಡೆವುದು ಹ್ಯಾಂಗೆ, ನಗುವುದು ಹ್ಯಾಂಗೆ...!?
#ಪ್ರೀತಿ_ನೇಹ_ನೆಂಟಸ್ತಿಕೆ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Wednesday, September 18, 2019

ಗೊಂಚಲು - ಮೂರು ಸೊನ್ನೆ ಎಂಟು.....

ಅಳಿಸಿಹೋದ ನಾನು.....  

ಅವಳು
ಮಾರುತನ ಅಂಗೈಲಿಟ್ಟು ನಾ ಕಳುಹಿದ ಮುದ್ದೊಂದನು ಕುಪ್ಪಸ ಗೂಡಲ್ಲಿ ಬಚ್ಚಿಟ್ಟುಕೊಂಡಳಂತೆ - ಇಲ್ಲೀಗ ಮೋಡಕ್ಕೆ ಬೆಂಕಿ ಬಿದ್ದಿದೆ...

ಅವಳು
ನಿದ್ದೆಗಣ್ಣ ಹೊಳಪಿನಲ್ಲಿ ಬಿದ್ದೆದ್ದ ಒದ್ದೊದ್ದೆ ಶಬ್ದಗಳ ಸಾಲು ಸಾಲು ಸಂಪದವ ತುಟಿಗೆ ಸುರಿದು ಬಿರಿದ ತೊಡೆಯಿಂದ ಕಟಿಯ ಬಳಸುವಳು...

ಅವಳು
ಅವಳ ಬೆನ್ನ ಬಯಲ ಖಾಲಿಯಿಂದ ಹಿಡಿದು ಹೊಕ್ಕುಳ ದಂಡೆಯ ನವಿರಿನವರೆಗೆ ನನ್ನ ಬೆರಳು ಬರೆವ ಓತಪ್ರೋತ ಪ್ರೇಮ ಗೀತೆಯ ಉಸಿರ ಲಯದಲ್ಲಿ ನನ್ನೆದೆ ರೋಮಗಳಿಗೆ ಓದಿ ಹೇಳುವಳು...

ಅವಳು
ಹಾಸಿಗೆಯ ಮಡಿಲಿಗೆ ಸ್ವರ್ಗವ ಉಡಿ ತುಂಬಿದವಳು - ಜನುಮಗಳ ಜಡ ಕಳೆದು ಬೆವರಿಗೂ ಸುಖದ ಮುಲುಕು ಕೊಟ್ಟವಳು - ಪ್ರೇಮ ಪೂಜೆಯಲ್ಲಿ ಕರಡಿಯಾಗದಂತೆ ಚಂದ್ರನಿಗೆ ತಾಕೀತು ಮಾಡುತ್ತಾಳೆ - ಕತ್ತಲನು ಬೆತ್ತಲ ಬೆಳಕಿನ ಸೆಳಕಲ್ಲಿ ಮತ್ತೆ ಮತ್ತೆ ಮೀಯಿಸುತ್ತಾಳೆ...

ಅವಳು
ಮಿಂದ ಮಧ್ಯಾಹ್ನ, ನೆಂದ ಮುಸ್ಸಂಜೆ, ಸಾವಿನಂತ ಖಾಲಿ ಖಾಸಗಿ ಇರುಳಲ್ಲೂ ನನ್ನ ನಾಭಿ ನಾಳದಲ್ಲಿ ಸುಳಿ ಸುಳಿದು ಸತಾಯಿಸೋ ರಣ ರಣ ಹಸಿವು...

"ಭಯ ಮತ್ತು ಖುಷಿ ಒಟ್ಟೊಟ್ಟಿಗೆ ಹುಟ್ಟುವ ಪುಳಕ - ಆಷಾಢದ ಮಳೆಯೊಂದಿಗೆ ಅವಳ ಭೇಟಿ..."
#ಹಸಿಮಣ್ಣ_ಮೆತ್ತಿಕೊಂಡ_ಚೌಕಟ್ಟಿಲ್ಲದ_ಕಪ್ಪು_ಚಿತ್ರ...
↯↯↺↹↻↯↯

ಗಾಳಿ ಕೊಳಲಿನ ಗೀತೆ - ನದಿಯ ಬೆರಳಿನ ಉಂಗುರ - ಗರ್ಭ ಧರಿಸಿದ ಮೋಡ - ಹದ್ದು ಕಣ್ಣಿನ ಹಸಿವು - ಅಮಲುಗಣ್ಣಿನ ನಡಿಗೆ - ತೊಡೆಯ ತಿವಿಯುವ ಹೆಸರಿಲ್ಲದ ಒದ್ದೆ ಹೂವಿನ ಬಾಣ...
ಎದೆಯ ರೋಮದ ಮೇಲೆ ನವಿಲುಗರಿ ಆಡಿದಂಗೆ ನಿನ್ನ ಉಸಿರ ಹೊರಳಿನ ಆ ಸಂಜೆಗಳ ನೆನಹ ನೆಗ್ಸು...
ನಾನಿಲ್ಲಿ ಒಂಟಿ ನಡೆಯುತ್ತಿಲ್ಲ - ನಿನ್ನೊಳಗೆ ನನ್ನ ಹಡೆಯುತ್ತಿದ್ದೇನೆ...
#ಅಳಿಸಿಹೋದ_ನಾನು...
↯↯↺↹↻↯↯

"ಅವಳ ಕಿರು ಬೆರಳ ಹಿಡಿದು ರತಿ ತಾ ಮೆರೆಯುತ್ತಾಳೆ - ತನ್ನ ತಾ ಮರೆಯುತ್ತಾಳೆ..."
ಎದೆಯ ರೋಮದ ಮರೆಯಿಂದ ಇಣುಕೋ ಮೂಗುತಿ ಹಾಕಿದ ಹಚ್ಚೆ - ಬೆನ್ನ ಬಿರುಸಿನ ತುಂಬಾ ಗಡಿಬಿಡಿಯಲಿ ಓಡಾಡಿದ ಎಡಗೈಯ್ಯ ಒಂಟಿ ಬಳೆಯ ಪ್ರೀತಿ ಗುರುತು - ಭುಜವ ತಾರಕದಿ ಮೀಟಿದ ಹಲ್ಲು - ಕುಣಿದು ಮಣಿಸುವಲ್ಲಿ ಗೆಜ್ಜೆಯಿಂದ ಕಳಚಿಬಿದ್ದ ಗಿಲಕಿ - ಉಸಿರಿಗೇ ಅಂಟಿ ಕೂತ ಹೆಣ್ಣು ಗಂಧ...
ಸುಡುಸುಡುವ ಕತ್ತಲು ಜೋಡಿ ಬೆವರ ಕುಡಿದು ಹಗುರಾದ ಕಥೆಯ ಹಗಲ ಕನ್ನಡಿಗೆ ಬಚ್ಚಲಿನ ಬೆತ್ತಲು ಬಿಗುಮಾನದಿ ಹೇಳುತಿದೆ...
#ಸುರತ_ವೈಭವ.‌‌..
↯↯↺↹↻↯↯

ಎರಡು ರಮ್ಯ ಕವಿತೆಗಳು ಒಟ್ಟಿಗೆ ಮಿಂದವು...
#ಮಿಥುನ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

ಗೊಂಚಲು - ಮೂರು ಸೊನ್ನೆ ಏಳು.....

ಸಿಹಿ ಸವಿ ಸೋಲು..... 

ಈ ಇರುಳ ತಂಗಾಳಿಗೆ ಬೆಂಕಿ ಬಿದ್ದರೆ ಕಾರಣ ನೀನೇ, ಹೆಸರೂ ನಿನ್ನದೇ...  

ಎಡ್ಹೊತ್ತಿನ ಹುಚ್ಚು ಕನಸಿಂದಾಗಿ ಅವಳ ಮೈಯ್ಯ ಕಿರು ಕತ್ತಲ ಬಳುಕುಗಳಲಿ ಚಿಗುರೊಡೆವ ಸಣ್ಣ ಬೆಮರ ಹನಿಗಳು ಪಿಸುನುಡಿವ ರೋಮಾಂಚಕ ಕಥೆಗಳ ತುಂಟ ನಾಯಕ ನಾನೇನಂತೆ...
#ಮುಸುಕಿನೊಳಗಣ_ಮುಲುಕು...

ಮಳೆಯಲ್ಲಿ ನೆಂದು ಬಂದವಳು ಹೊಸಿಲಲ್ಲಿ ಮುಡಿ ಕೊಡವಿದಳು - ಉಸಿರಿಗೆ ಹೊತ್ತಿದ ಬೆಂಕಿ ಒಳಮನೆಯಲಿ ಹೊರಳುತಿದೆ - ಮಳೆ ನಿಲ್ಲುತ್ತಿಲ್ಲ; ಬೂದಿಯಾಗೋ ಬೆತ್ತಲಿಗೆ ಯಾರು ಹೊಣೆ...
#ಬೆವರಿಗೂ_ಮಣ್ಣ_ಘಮ_ಈಗ...

ಕಿಬ್ಬೊಟ್ಟೆಯಾಳದ ಕಿರು ನಡುಕಗಳ ಅಲೆಗಳು ಎದೆಯಲ್ಲಿ ಹುಟ್ಟಿಸುವ ಭಯಕ್ಕೆ ಅವಳು ನನ್ನ ಹೆಸರಿಟ್ಟಳು...
#ಸಿಹಿ_ಸೋಲಂತೆ...

ಎದೆ ಗೊಂಚಲ ಕಣಿವೆಯ ಇಕ್ಕಟ್ಟಿನಲಿ ಉಸಿರು ಕಳಕೊಂಡವನ ಬೊಗಸೆಯಲಿ ಎತ್ತಿ ಮತ್ತೆ ತುಟಿ ಅಮೃತವನುಣಿಸಿ ಜೀವತುಂಬಿ ಊರು ಕಾಲುವೆಯ ಹಸಿಯಲಿ ಜೀಕಲು ಬಿಟ್ಟಳು...
#ಸ್ವರ್ಗ_ಸಂಸರ್ಗ...

ಸೊಗಸುಗಾರ ನಾನು - ಅವಳ 'ಎದೆ'ಗಂಟಿದ ಹುಚ್ಚು ಬೇತಾಳವಂತೆ...
#ಸುಖೀ_ಕತ್ತಲು...

ಮುಸ್ಸಂಜೆಗೂ ಮುನ್ನವೇ ಚೌತಿ ಚಂದ್ರನ ನೋಡ್ಬಿಟ್ಟೆ - ಅವ್ಳು ಎದ್ರಿಗೇ ಬಂದ್ಬಿಟ್ಳು...
#ಕಿಶೋರ_ಚಂದ್ರಿಕೆ...

ಒಂದೇ ಬಿಂದಿಗೆ ನೀರು ಬೆಸೆದೆರಡು ಬಿಸಿ ಎದೆಗಳ ನಡುವಿಂದ ಬೆವರ ತೊಳೆದಿಳಿವಾಗ....
#ರತಿ_ಮಜ್ಜನ...

ಹೆಚ್ಚೇನಲ್ಲ -
ಈ ತಂಪು ತಂಪು ಸಂಜೆಯ ಉಸಿರ ತಿಲ್ಲಾನಗಳನೆಲ್ಲ ನಿನ್ನ ಮೈಯ್ಯ ಕತ್ತಲ ತಿರುವುಗಳ ಬಿಸಿಯಲ್ಲಿ ಅಲ್ಲಿಷ್ಟು ಇಲ್ಲಿಷ್ಟು ಜೋಪಾನ ಮಾಡೋ ಹಂಬಲಕೆ ಚೂರು ಸಹಕರಿಸಬಾರದೇ ಕನಸೇ...
#ಹಸಿ_ಹುಚ್ಚು...

ಹಕ್ಕಿ ಹಗುರಿನ ಪಾದ ಎದೆಯ ಹೊಸಿಲನು ತುಳಿದರೆ, ಬರಿಗೈಯ್ಯ ಬಡಪಾಯಿ ಪೋಲಿ ಹೈದ ನಾನು ಒಡಲಾಳದಿಂದೆತ್ತಿ ಸವಿ ಮುತ್ತೊಂದನಲ್ಲದೇ ಮತ್ತೇನ ಕೊಟ್ಟೇನು...
#ಉಡುಗೊರೆ...

ಮುಚ್ಚಿದ ಕಣ್ಣಲ್ಲಿ ನೀನು ಬೆಳಕಿನುಡುಗೆಯಲಿ ದಳದಳವಾಗಿ ಅರಳುತ್ತೀ - ಈ ನರ ನಾಡಿ ವೀಣೆ ಬಿಗಿದು ಉಸಿರ ಹರಿವಿಗೆ ಸುಖದ ಹಸಿವಿನ ಬೆಂಕಿ ಅನಾಯಾಸ  ತುಂಬುತ್ತೆ...
#ಇರುಳ_ಸಂಸರ್ಗ...

ಬೆನ್ನ ಬಯಲ ತುಂಬಾ ಬೆರಳಿಟ್ಟ ಚುಕ್ಕಿಗಳನು ತುಟಿ ಒಂದೊಂದಾಗಿ ಜೋಡಿಸಿದಾಗ ಸ್ವರ್ಗದ ಬಾಗಿಲಿಗೆ ರಂಗೋಲಿಯಿಟ್ಟಂತಾಯ್ತು...
ಕಿನ್ನರಿಯ ಎದೆ ಸಿರಿಯ ಕುಪ್ಪಸ ಗೂಡಿನ ಬೀಗಕ್ಕೀಗ ಕೋಟೆ ಕಾಯುವ ಒಂಟಿ ಭಟನ ನಿತ್ರಾಣ ಒತ್ತಡ...
#ಆರಂಭ...

ಈ ತಣ್ಣನೆ ಇರುಳಿನ ನಿದ್ದೆಗೂ ಮುನ್ನ ಹೊಕ್ಕುಳ ತಿರುವಿನ ಬಿಸಿಯನಿಷ್ಟು ಸಾಲ ಕೊಡುವೆಯಾ.‌‌..
#ನಿನ್ನನ್ನೇ_ಹೊದ್ದಂತೆ_ಭಾಸ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Thursday, August 1, 2019

ಗೊಂಚಲು - ಮೂರು ಸೊನ್ನೆ ಆರು.....

ಉದ್ದ ನಾಲಿಗೆ ಮತ್ತು ಸಣ್ಣ ಬೊಗಸೆ.....   
(ಜೀವಿಸಬೇಕಿತ್ತು - ಬದುಕಿದ್ದೇನೆ...)

ದಾಟಿದ ಆ ನಿನ್ನೆಗಳ ಮರೆತೇ ಬಿಡಬಹುದಿತ್ತು - ಕಂಡರಿಯದ ಆದಾವುದೋ ನಾಳೆಗಳ ನಿರ್ಲಕ್ಷಿಸಲೂಬಹುದಿತ್ತು - ಇಲ್ಲಿ ಈಗ ಹೆಗಲೇರಿ ತಿವಿಯುತಿರೋ ಈ ಘಳಿಗೆಯ ಗೆಲ್ಲುವ ಬಲ ತುಸುವಾದರೂ ಇದ್ದಿದ್ದರೆ...
"ಹುಟ್ಟು ಚಂದವೇ - ಬದುಕು ಜೊತೆ ನಿಂತರೆ..."
ತಾಳ ತಪ್ಪಿದರೆ,
ಎದೆಗೆ ಚುಚ್ಚಿದ ಮುಳ್ಳನು ನೇವರಿಸಿ................ ದಿಂಬಿನಂಚಲಿ ಕನಸುಗಳ ಗುಪ್ಪೆ ಹಾಕಿ ಹಾಕಿ.......... ಅನಾಯಾಸೇನ ಮರಣಂ ಎಂದು ಜಪಿಸುತ್ತಾ........ ಭ್ರಮೆಗಳಿಗೆ ಬಣ್ಣ ಮೆತ್ತಿ ಮೆರವಣಿಗೆ ಹೊರಡುವುದು...
"ನೈಜ ನಗೆಯ ಹೆಣ ಹೊತ್ತು,  ಹೆಗಲು ಬಾವಿಗೆ ಸುಳ್ಳು ಖುಷಿಯ ಮದ್ದು ಮೆತ್ತುತ್ತಾ  ಹಾಂಗೆ ಸಾಗುತ್ತಾ ಸಾಗುತ್ತಾ ಇದು ಮೂವತ್ತೇಳನೇ ಪಾದ..."
#ರುಚಿಯಿಲ್ಲದ_ಕಣ್ಣಹನಿ...
↜↹↺↻↹↝

ಅಲ್ಲೆಲ್ಲೋ ಕಳಚಿಕೊಂಡ ಕಿರು ಬೆರಳ ಕೊಂಡಿ ಹುಟ್ಟಿಸಿದ ತಬ್ಬಲಿತನವ ಈ ಸಂತೆಯಲ್ಲಿ ಅದೆಷ್ಟೋ ಹೆಗಲು ತಬ್ಬಿದಾಗಲೂ ತುಂಬಿಕೊಳ್ಳಲಾಗದೇ ಹೆಣಗುತ್ತೇನೆ.....
#ನವಿಲುಗರಿ...
↜↹↺↻↹↝

ಮರೆಯಲೇ ಬೇಕಿದ್ದದ್ದನ್ನೂ ಮರೆತು ನಿದ್ರಿಸಬೇಕೆಂದರೆ ಮರಣವೇ ಜೊತೆಯಾಗಬೇಕೇನೋ...
#ಗಾಯ...
↜↹↺↻↹↝

ಎಷ್ಟೇ ಸುಖವುಂಡರೂ ಲೆಕ್ಕವಿಟ್ಟರೆ ಅರೇ ಇಷ್ಟೇನಾ ಅನ್ಸತ್ತೆ - ಇಷ್ಟೇ ಇಷ್ಟು ನೋವಿನ ಲೆಕ್ಕವೂ ಅಯ್ಯೋ ಇಷ್ಟೊಂದಾss ಅನ್ಸತ್ತೆ...
ಒಡೆದ ಪಾದದ ಬಿರುಕುಗಳಲಿ ಬರೀ ಧೂಳೇ ಧೂಳು...
"ಸವಿ ನೆನಪುಗಳ ಕಾಲಿಗೆ ನಾನೇ ಕಟ್ಟಬೇಕು ಗೆಜ್ಜೆ, ಕಿವಿಯ ಇಂಪಿಗೆ...
ನೋವ ನೆನಪಿಗಾದರೋ ಜನ್ಮಜಾತ ಘಂಟೆ ಇದೆ, ಸುಮ್ಮನೆ ಕೊರಳು ಕೊಂಕಿದರೂ ಕಿವಿ ಸಿಡಿಯುತ್ತೆ ಸದ್ದಿಗೆ..."
#ಇರುಳಿನ್ನೂ_ಎಚ್ಚರವಾಗಿದೆ_ಯಾವ_ಕಾವಿಗೆ...!!!
↜↹↺↻↹↝

* ಮತ್ತೆ ಮತ್ತೆ ಮಗುವಾಗಲು ಹೊರಡುತ್ತೇನೆ - ಜಗತ್ತು ಹುಚ್ಚನೆಂದು ಕೂಗುತ್ತದೆ...
#ನೋಟ...

** ಕೋಗಿಲೆ ಹಸಿವಿನಿಂದ ಕೂಗಿದ್ದೂ ಕವಿಯ ಕಿವಿಗೆ ಸಂಗೀತವೇ...
#ಕವಿತೆ...

*** ಮಸಣದಿಂದ ಹೊರಟವರು ತಿರುಗಿ ನೋಡಬಾರದಂತೆ - ಬದುಕಿನಿಂದ ಹೊರಟಾಗ ತಿರುಗಿ ನೋಡೋ ಸಣ್ಣ ಅವಕಾಶವಾದರೂ ಎಲ್ಲಿದೆ...
#ಹಾದಿ...
↜↹↺↻↹↝

ನಿದ್ದೆಯಿಲ್ಲದ ಒಂಟಿ ಹಕ್ಕಿಯೊಂದು ಹೊತ್ತಿಗೂ ಮುಂಚೆ ಒಂದೇ ರಾಗದಲ್ಲಿ ಅರಚುತ್ತಿದೆ - ಯಾವ ವೇದನೆಯೋ, ಅದೇನು ಕೆಟ್ಟ ಕನಸೋ...
ಇರುಳ ಮೂರನೇ ಝಾವ -  ಸಂತೈಸುವ ದೇವನೂ ನಿದ್ದೆಯಲ್ಲಿದ್ದಾನು...
ಭಾಷೆ ಬರದ ನಾನು ನಿದ್ದೆಗಾಗಿ ಒಳಗೇ ಗೊಣಗುತ್ತ ಮಗ್ಗಲು ಬದಲಿಸುತ್ತೇನೆ - ನನ್ನ ಒಂಟಿ ತಲ್ಲಣಗಳಿಗೆ ವಿಚಿತ್ರ ಸುಳ್ಳು ಸಮಾಧಾನವೊಂದು ಜೊತೆಯಾಗುತ್ತೆ...
ಹಕ್ಕಿ ದನಿ ಇಷ್ಟಿಷ್ಟೇ ಇಂಗಿತು - ಗಂಟಲು ಸೋತಿತಾ ಇಲ್ಲಾ ನನಗೇ ಮಂಪರಾ...
ಕಣ್ಣೊರೆಸೋ ದಿಂಬಿಗೆ ಪ್ರಶ್ನೆಗಳು ಅರ್ಥವಾಗುವುದಿಲ್ಲ...
ಹೊದ್ದ ಚಾದರದಾಚೆ ಸುಂದರ ಸುಳ್ಳು ಭರವಸೆ - ಕತ್ತಲು ಕಳೆಯಿತು...
#ಹಕ್ಕಿ_ಗೂಡಿಗೆ_ಬೆಕ್ಕು_ಅಥಿತಿಯಾದೀತಾ...
↜↹↺↻↹↝

ಸಾವನ್ನು ಕಣ್ಣೀರಲ್ಲಿ ತೊಳೆಯುವುದು ಬದುಕಿನ ಬಹುದೊಡ್ಡ ಸಂಭ್ರಮ...
*** ಅರ್ಥಗಿರ್ಥ ಕೇಳಿ ಕೊಲ್ಲಬೇಡಿ...
↜↹↺↻↹↝

ಅರೇ ಬದ್ಕಿದ್ಯಾ ಇನ್ನುವಾ...!!! ಜೋರು ಮಳೇಲಿ ತೊಳ್ದೋದ್ಯನ ಅಂದ್ಕಂಡಿದ್ದೆ...

ಹಹಹಾ... ಹೋಪುದೇ ಆಯ್‌ತ್ತು, ಆದ್ರೆ ಈ ಧೋ ಮಳೇಲಿ ಹೋದ್ರೆ ನಿನ್ಗೆ ಅಪರ ಕಾರ್ಯ ಮಾಡೂದು ಕಷ್ಟ ಅವ್ತು ಹೇಳಿ ಹೊಯ್ದ್ನಿಲ್ಲೆ... ಈಗಂತೂ ರೇಶನ್ನಲ್ಲಿ ಚಿಮಣೀ ಎಣ್ಣೇನೂ ಕೊಡ್ತ್ವಿಲ್ಲೆ, ಸುಡೂದಕ್ಕೇ ಒದ್ದಾಡೆಕವ್ತು...

ಮಳೆಗಾಲ ಮುಗತ್ತು ಇನ್ನು ತಯಾರಿ ನಡ್ಸಲಡ್ಡಿಲ್ಲೆ...
ಅಯ್ಯೋ ಈ ಛಳೀಲಿ ಹೋದ್ರೆ ಕಾರ್ಯಕ್ಕೆ ಬಂದವ್ಕೆಲ್ಲ ಹಾಸಲೆ ಹೊದೀಲೆ ವಸ್ತ್ರ ಭರ್ತಿ ಮಾಡ್ಲವ್ತಾ ನಿನ್ಕಲ್ಲಿ... ಶೀತದಲ್ಲಿ ಎಲ್ಲವ್ವೂ ಬೈಕಂಬಂಗಪ್ಲಾಗ ನೋಡು...

ಸುಡು ಸುಡು ಬೇಸಿಗೆ... ಮತ್ತದೇ ಪ್ರಶ್ನೆ...
ಹಲಸು, ಮಾವು ಎಲ್ಲಾ ಬಲಿಯೋ ಕಾಲ ಮಳೆಗಾಲಕ್ಕೆ ನಿಂಗೆ ಕುರುಕುರು ತಿಂಬ್ಲೆ ತಯಾರ್ ಮಾಡಿಡವಲಿ... ಅಲ್ಲದ್ದೆ ನೆಂಟರಿಷ್ಟರಲ್ಲಿ ಎಷ್ಟ್ ಮುಂಜಿ ಮದ್ವೆ ಎಲ್ಲಾ ಇದ್ದು... ಇದಲ್ಲಾ ಬಿಟ್ಟಿಕ್ಕಿ ಹೋಪುದಾರೂ ಹೆಂಗೆ... ಶುಭಕಾರ್ಯ ಮಾಡವ್ಕೆ ಸೂತಕ ಹೇಳ್ವಂಗೆ ಆವ್ತು...

ಇನ್ನೂ ಏನ್ಕಂಡು ಏನ್ಕಾಣವಾ ಶಿವನೇ ಎಂದ ಮಗ್ಗುಲಲ್ಲೇ, ಹಿಂಗೆ ಹಿಂಗಿಂಗೆ ಋತುವಿಗೊಂದು ರಾಗ ಹಾಡಿ ಸಾವನ್ನು ಗೇಲಿ ಮಾಡುತ್ತಾ, ಬಾಗಿಲಾಚೆ ಸಾವನ್ನು ಮಂಡಿ ನಡುವೆ ತಲೆ ಹುಗಿಸಿ ಇವಳೇ ನಿಲ್ಲಿಸಿದ್ದಾಳೆನೋ ಅನ್ನುವಂತೆ ಬದುಕಿಗೆ ನಗು ತುಂಬಿಕೊಳ್ಳುತ್ತಾಳೆ - ಬಲು ಜಿಡ್ಡಿನ ಎಪ್ಪತ್ತರಾಚೆಯ ಎಳೆ ಹುಡುಗಿ... ಮೈಮನವ ಹಿಂಡುವ ರೋಗ ರಾಗಗಳಿಗೆಲ್ಲ ಅದ್ಯಾವ ಮೋಹಾಮಾಯೆಯ ಸಿರಪ್ಪು ಕುಡೀತಾಳೋ ನಾ ಕಾಣೆ...
#ಆಯಿ_ಎಂಬ_ಅಶ್ವತ್ಥ...
*** ಅವಳ ನೆನೆಯದೇ ಜನುಮ ದಿನಕೇನು ಗೆಲುವಾದೀತು... 

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Thursday, July 4, 2019

ಗೊಂಚಲು - ಮೂರು ಸೊನ್ನೆ ಐದು.....

ಅಸುನೀಗಿದ ಕವಿತೆ.....  

ಜನ್ಮಕ್ಕಂಟಿದ ಶಾಪ ಮತ್ತು ಬದುಕು ಕೊಟ್ಟ ಕೆಟ್ಟ ಉಡುಗೊರೆ...
#ಅಪ್ಪ_ಮತ್ತು_ದೇವರು...
^^^!!!^^^

ಸುಖದ ಒಂದು ಹನಿ ವೀರ್ಯ 'ಅಪ್ಪ'ನ ಪಟ್ಟ ಕೊಟ್ಟುಬಿಡಬಹುದು... ಆದರೆ "ಅಮ್ಮ" ಅನ್ನಿಸಿಕೊಳ್ಳೋಕೆ ಕನಿಷ್ಟ ನವಮಾಸ ಬಸಿರು ಹೊತ್ತು ಹೆರಿಗೆ ಬೇನೆಯ ಹಾದಿ ಸವೆಸಬೇಕು...
ಪ್ರೀತಿಯದಲ್ಲ ವಿಷಯ - ಜವಾಬ್ದಾರಿಯದ್ದು... ಕೊಡಲಾಗದೇ ಹೋದರೆ ಅದು ಅ‌ಸಹಾಯಕತೆ - ಅದಕ್ಕೆ ಮಾಫಿ ಇದೆ; ಆದ್ರೆ ಬುಧ್ಯಾಪೂರ್ವಕ ಕೊಡದೇ ಹೋದರೆ ಅದು ಅಪ್ರಾಮಾಣಿಕ ಶಕ್ತಿಯ ವಂಚನೆ - ಅದಕ್ಕೆ ಕ್ಷಮೆ ಅಷ್ಟು ಸುಲಭ ಅಲ್ಲ...
ಅನುಭವಕ್ಕೆ ನೇರ ದಕ್ಕೋ ಕೆಲ ಸತ್ಯಗಳು ತುಸು ಜಾಸ್ತಿಯೇ ಕಠೋರ...
#ಅಪ್ಪನ_ದಿನದಂದೂ_ಅಮ್ಮನನೇ_ನೆನೆಯುತ್ತೇನೆ...
#ಹೇಳಬಾರದಿತ್ತೇನೋ_ಹೇಳಿಯಾಯಿತು...
^^^!!!^^^

ನಾನೋ ಇದ್ಬದ್ದ ಕ್ರೌರ್ಯವನೆಲ್ಲ ರಕ್ಕಸ ಸಂತತಿ ಅಂತ ಆರೋಪಿಸಿ ಗುಡುಗುತ್ತೇನೆ - ಆದರಿಲ್ಲಿ ತನ್ನದೇ ಸೃಷ್ಟಿಯ ಕೂಸಿನ ಒಡಲಲೆಷ್ಟೋ ವೈಕಲ್ಯಗಳ, ಅಸಹಾಯಕತೆಯ ಬೇಗುದಿಯ ತಾನೇ ತುಂಬಿ, ಅವನೆಲ್ಲ ಮೀರಲು ತನ್ನನೇ ಭಜಿಸು ಎಂದು ತಣ್ಣಗೆ ನಗುತ್ತ ಕೂತಿದ್ದಾನೆ ದೇವರೆಂಬೋ ಕರುಣಾ ಮೂರುತಿ...
ಹಣೆಬರಹ ಗೀಚಿ ಹಣೆ ಹಚ್ಚಿಸಿಕೊಳ್ಳೋ ದರ್ಪವ ಏನಂತ ಕೂಗಲಿ...
#ಕರುಳಹಿಂಡಿ_ತೊಟ್ಟಿಲತೂಗಿ...
#ತೇನವಿನಾ...🙂
^^^!!!^^^

ಎದೆ ಬಾಗಿಲ ಪಕ್ಕೆಯ ಮೂಳೆಗಳೆಲ್ಲ ಮುರಿದು ಅಂಗಳಕ್ಕೆ ಬಿದ್ದಿವೆ...
ಚಂದಿರ ಬೆಳುದಿಂಗಳ ನಾಲಿಗೆ ಚಾಚಿ ಮೂಳೆಗಂಟಿದ ಹಸಿ ರಕ್ತ ನೆಕ್ಕುತ್ತಾನೆ...
ನಾನು ನಿನ್ನ ನೆನಪ ತೊಡೆಯ ಬೆಂಕಿಯಲ್ಲಿ ಇಷ್ಟಿಷ್ಟಾಗಿ ಸಾಯುತ್ತೇನೆ...
ಇರುಳ ಕಣ್ಣಲ್ಲಿ ನಗೆಯೊಂದು ಹುಟ್ಟಿ ನನ್ನ ಸಾವನ್ನು ಬದುಕಿನಂತೆ ಅಣಕಿಸುತ್ತದೆ...
ಹಚ್ಚದೇ ಉಳಿದ ಹಣತೆಯ ಎಣ್ಣೆಯಲ್ಲಿ ಬೆಳಕು ಕತ್ತಲೊಂದಿಗೆ ಸುರತದಲ್ಲಿ ಲೀನ...
#ನಾನು_ಅಸುನೀಗಿದ_ಕವಿತೆ...
          ___ಮುಂದುವರಿದೇನಾ...!?
^^^!!!^^^

ಸಾವಿನೊಂದಿಗೆ ಜಗಳವೂ ಸಾಧ್ಯವಿಲ್ಲ - ಮೌನ ಅನುಸಂಧಾನ...
ಜಗಳಕ್ಕೂ ಬದುಕೇ ಬೇಕು - ಪ್ರೀತಿ ಅಂದ್ರೆ ಜೀವಂತ ಸಂವಹನ...
ಮುನಿಸಿನೊಡನೆ ಜಗಳ ಹುಟ್ಟದೇ, ಮೌನದೆದುರು ಪ್ರಶ್ನೆ ನಿಲ್ಲದೇ, ಮಾತೆಲ್ಲ ಸಾವನ್ನು ಒಪ್ಪಿಕೊಂಡ ಮೇಲೆ ಇಲ್ಲಿ ನಾನೂ ನೀನೂ ಬತ್ತಿ ಬರಡಾದ ನದಿಯ ತೀರಗಳು...
ಸಂವೇದನೆಯ ಸೆಲೆ ಒಣಗಿ, ಸಂವಹನದ ರುಚಿ ಸತ್ತಾನಂತರ ಹಬ್ಬಿದ್ದ, ತಬ್ಬಿದ್ದ ಹಾದಿ ಹರಹು ಎಲ್ಲ ನಿಸ್ಸಾರವೇ - ಬದುಕಾದರೂ ಅಷ್ಟೇ, ಬಂಧವಾದರೂ ಅಷ್ಟೇ...
ಅಳದೇ ಅಮ್ಮನೇ ಹಾಲೂಡಿಸುವುದಿಲ್ಲ - ವ್ಯಕ್ತವಾಗದೇ ಪ್ರೀತಿಗೆ ವಿಸ್ತಾರವಿಲ್ಲ...
ಸೋಲುವುದು, ಸೋತ ಸೋಲನ್ನು ಗೌರವಿಸುವುದು ಪ್ರೀತಿಯನ್ನು ಗೆಲ್ಲಲಿಕ್ಕಿರುವ ಹಗೂರದ ದಾರಿ - ಬದುಕಲ್ಲಾದರೂ, ಬಂಧದಲ್ಲಾದರೂ...
'ನಾನು' ಚೂರು ಸೋಲ್ಬೇಕಿತ್ತು... ಉಹೂಂ!! ಅದಾಗಲ್ಲ... ಇಷ್ಟೆಲ್ಲಾ ಹೇಳಿಯೂ ನಾನು ಸೋಲುವುದಿಲ್ಲ... ಯಾವಾಗ್ಲೂ ನಾನೇ ಯಾಕೆ ಸೋಲ್ಬೇಕು? ಸಿರ್ರನೆ ಹುಟ್ಟಿಕೊಳ್ಳೋ ನನ್ನತನದ ಗುತ್ತಿಗೆ ತಕೊಂಡ ಅಡ್ನಾಡಿ ಅಹಂಭಾವ ಸುತಾರಾಂ ಸೋಲಗೊಡುವುದಿಲ್ಲ... ಅಲ್ಲಿಗೆ ಬಂಧಗಳು ಬರ್ಕತ್ತಾಗಲ್ಲ - ಬದುಕಿಂಗೆ ರಸವಿಲ್ಲ...
#ನಾನು_ಮತ್ತು_ಪ್ರೀತಿ... 
^^^!!!^^^

ಎಂಥದ್ದೇ ಜಗಳದಾಚೆಯೂ ಜೊತೆಗಿರ್ತಾರೆ ಅನ್ನೋದು ಸಲಿಗೆ...
ಹೆಂಗೇ ನಡೆಸಿಕೊಂಡ್ರೂ ಬಿದ್ದಿರ್ತಾರೆ ಬಿಡು ಅನ್ನೋದು ಸದರ...
#ಪ್ರೀತಿಮತ್ತುರದ್ದಿ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

ಗೊಂಚಲು - ಮೂರು ಸೊನ್ನೆ ನಾಕು.....

ಉರಿಉರಿ ಮೋಹ..... 

ಮಿಂದು ಬಂದ ಆಸೆ ಹೆಣ್ಣು ಒದ್ದೆ ಮುಡಿಯ ಹನಿ ಸಿಡಿಸಿ ಜನುಮಗಳ ಹಸಿವು ಸಾಕಿಕೊಂಡ ನನ್ನ ಗುಂಡಿಗೆಯ ಬಿಚ್ಚು ನಗೆಯಲೇ ಮಿಡಿವಳು...
ಮೋಡ ಮುಸುಕಿದ ಮಧ್ಯಾಹ್ನದ ಆಲಸ್ಯವ ಅವಳ ಕಂಕುಳ ಘಮದ ನಶೆಯಲ್ಲಿ ನೀಗಿಕೊಂಡು, ಎದೆ ಗೊಂಚಲ ಮಿದುವಲ್ಲಿ ಉಸಿರು ಕಳಕೊಂಡವನ ಬೊಗಸೆಯಲೆತ್ತಿ ತುಟಿ ಜೇನ ಅಮೃತವನೂಡಿ ತೋಳ ತುಂಬಿಕೊಂಬಳು...
ಮತ್ತೆ ಮತ್ತೇರಿ ಹೆಣ್ಮೈಯ್ಯ ತೀರಗಳನಾಳಲು ಹೊರಟ ಗಂಡುಸಿರು ಅವಳ ನಾಭಿ ಕಮಲದ ಕೊರಳಲ್ಲಿ ಮೈಮರೆಯಲು, ಬೆನ್ನ ಸೀಳಿ ಬಾಚಿ ಸೆಳೆದು ನೀಳ ತೊಡೆಗಳ ಹಸಿ ಬಿಸಿ ಬಿರುಸಿನಿಕ್ಕಳದಲ್ಲಿ ಪೀಠಸ್ಥವಾಗಿಸಿ ಜೀವರಸ ಕಡೆದು ಕುಡಿದು ಪ್ರಕೃತಿ ಧರ್ಮವ ಮೆರೆಸುವಳು...
ಹಾಡಹಗಲೇ ಹರೆಯ ಸೊಕ್ಕಿ ಉಕ್ಕುಕ್ಕಿ ತೊಯ್ಯುವಾಗ ಕಡಲೂ ತುಸು ನಾಚೀತು.‌‌..
ಬೆನ್ನಿಂದ ಜಾರೋ ಬೆವರ ಹನಿಗಳಲಿ ಸುಖದ ಸುಸ್ತಿನ ಕಾಮನ ಬಿಲ್ಲು...
ಕರಡಿ ಪ್ರೇಮಕ್ಕೆ ಮೈಯ್ಯ ಮಡಿಯೆಲ್ಲ ಕರಗುವ ನಡು ಹಗಲಿಗೆಲ್ಲ ಅವಳದೇ ಹೆಸರು - ಇನ್ನು ಇರುಳ ಕಥೆ ಇರುಳಿಗೇ ಗೊತ್ತು...
#ಅವಳೆಂದರೆ_ಜನುಮಗಳ_ಹಸಿವು #ಉಂಡು_ತೀರದ_ದಾಹ...
↼↺↰↱↻⇀

ಮಧುರ ಪಾಪಗಳಿಗಿಷ್ಟು ಮಾಫಿ ಇದ್ಯಂತೆ ಅವಳಲ್ಲಿ - ಮುಸ್ಸಂಜೆಯ ಪಿಸುನುಡಿಯ ಸಂಭ್ರಮವ ಹೇಗೆ ಹೇಳಲಿ ಇಲ್ಲಿ...
ಹೇ ಇರುಳೇ ತುಸು ಉದ್ದುದ್ದವಾಗು - ಅವಳ ವಯ್ಯಾರದ ತಿರುವುಗಳಲಿ ನನ್ನ ಕಣ್ಣ ನಶೆ ಹಾದಿ ತಪ್ಪುವಾಗ, ಉಸಿರಿಗುಸಿರು ತೀಡಿ ಜೀವದಾದ್ಯಂತ ಬೆಂಕಿ ಹೊತ್ತುವಾಗ; ತೆಕ್ಕೆ ಬಿಗಿಯಲ್ಲಿ, ಬೆವರ ಹೊಳೆಯಲ್ಲಿ ಜನ್ಮಗಳ ಹಸಿವು ಕಳೆದೋಗುವಾಗ...
#ಉರಿಉರಿ_ಮೋಹ...
↼↺↰↱↻⇀

ನನ್ನೊಳಗಿನ ನಿನ್ನಿರುವಿಕೆಯೇ ಕವಿತೆ...
#ಬದುಕಿನ_ಸಮಗ್ರ_ಸಂಪುಟ...
↼↺↰↱↻⇀

ಮುಸ್ಸಂಜೆ:
ಅಪರಿಚಿತಳಾಗುಳಿದೇ ನಗೆಯ ಪರಿಚಯಿಸಿದವಳೇ -
ಸತ್ಯವಾ ಈ ನಗು - ನಂಗೊತ್ತಿಲ್ಲ; ನೀ ಬಿತ್ತಿ ಹೋದ ನಗೆಯ ನೀನೇ ಮೇಯಬೇಕು...
ಇರುಳು:
ನುಗ್ಗೆ ಹೂವಿನ ಘಮಕೆ ಉಸಿರು ನಜ್ಜುಗುಜ್ಜಾಗುವಾಗ - ಶುದ್ಧ ಸುಭಗನ ಪೋಲಿ ಕನಸೊಂದು ಮುಂಜಾನೆಗೂ ಮೂರು ಘಳಿಗೆ ಮುನ್ನ ಕನಸಲ್ಲೇ ಸ್ಖಲಿಸುತ್ತದೆ...
ಆಗಾಗ ಹಾದಿ ತಪ್ಪಬೇಕು ಹೀಗೆ - ತಪ್ಪು ಹಾದಿಯ ತಿರುವಲ್ಲೇ ಮಧುರ ಪಾಪಗಳ ಬೆಚ್ಚನೆ ಅರವಟಿಕೆಗಳು ಸಿಗೋದು ಅಂತಂದು ಕಂಪಿಸುತ್ತದೆ ಛಳಿಯ ತೆನೆ...
ಹಂಬಲದ ಹಾದಿ:
ಇನ್ನೀಗ ಒಂಟಿ ಅಲೆಯಬೇಕು ನಾನು ನಿನ್ನ ದಿಟ್ಟಿ ಪಾತಳಿಯಲ್ಲಿ - ಗುಂಪಿನಲ್ಲಿ ಕಂಗಳವು ಚಂದ ಚಂಚಲ...
ಸುತ್ತ ಹಿಂಡು ಗದ್ದಲವ ಕಟ್ಟಿಕೊಂಡಲೆವವನು ಕಣ್ಣಿಂದ ಎದೆಗಿಳಿದು ನೆಲೆಯಾದಾನು ಹೇಗೆ - ಮೋಹವೇ ಆದರೂ ಎದೆಗಿಳಿದು ಕಾವು ಕೂರದೇ ಆಸೆ ನಡು ಬಾಗಿಲು ತೆರೆದೀತು ಹೇಗೆ...
#ಬೆಳದಿಂಗಳ_ನೆಳಲಲ್ಲಿ_ಸ್ವಪ್ನಸ್ಖಲನ...
↼↺↰↱↻⇀

ಜುಮುರು ಮಳೆಯಲ್ಲಿ ನೆಂದು ಬಂದ ಗಾಳಿ ಕಿವಿಯಲೇನೋ ಉಸುರಿ ಮೈಮನದಿ ಸುಡು ಬಿಸಿಯ ಭಾವಗಳ ತುಂಬುವ ತಂತುವಿಗೆ ನೀನೆಂದು ಹೆಸರು...
#ಕಪ್ಪುಹುಡುಗಿಯೆಂಬ_ಉಸಿರ_ನೆಳಲು...
↼↺↰↱↻⇀

ಯಾವುದೋ ಮಾಯದ ಮಂಕಲ್ಲಿ ಹಸಿ ತುಟಿಯ ತಿರುವನ್ನು ಅನಾಯಾಸದಿ ಕಚ್ಚಿದ ಹಲ್ಲು ನಿನ್ನ ನೆನಪ ತೀಡುತ್ತದೆ...
ಇರುಳ ಬಾಗಿಲ ಕಿಬ್ಬೊಟ್ಟೆಯಲಿ ನಿನ್ನ ಘಮಲಿನುಬ್ಬರ...
ಸಂಜೆ ತಂಪು ಗಾಳಿಯಲ್ಲೂ ಎದೆ ಮೆದುವ ಕಿಬ್ಬಿಗಳಲಿ ಕುಡಿಯೊಡೆವ ಬೆವರ ಹನಿಗಳು ಮೊದಲಾಗಿ ಆಷಾಢವ ಹಳಿಯುತ್ತವೆ...
ನಿನ್ನ ಘಮವೇ ನಿನ್ನಲ್ಲಿ ನನ್ನ ಹಸಿವ ತುಂಬಿ, ನನ್ನ ಘಮವನರಸಿ ನೀ ಹಿಂದಿಂದೆ ಸುಳಿದು ಆವರಿಸಿ ಕತ್ತಲ ಮೂಲೆಗಳಿಗೆ ಉಸಿರ ಬೆಂಕಿ ಹಚ್ಚುತಿದ್ದ ಹುಚ್ಚು ದಿನಗಳ ನೆನಪ ಕಿಡಿಗಳು ಹೊಕ್ಕುಳ ಸುತ್ತ ಕುಣಿಯುತ್ತವೆ...
ನಾಚಿಕೆ ಹರಿದ ಮೂರು ಕ್ಷಣಗಳಾಚೆ ನಿನ್ನ ಒರಟು ಹೂಂಕಾರವ ಬಳಸಿ ಬಂಧಿಸುತಿದ್ದ ಈ ಬೆತ್ತಲೆ ತೋಳು ಕಾಲ್ಗಳು ಇಲ್ಲಿ ತಮಗೆ ತಾವೇ ಬಳ್ಳಿಯಾಗಿ ಬಿಗಿದು ಚಡಪಡಿಸುತ್ತವೆ...
ಕೂತಲ್ಲಿ ನಿಂತಲ್ಲಿ ಘಳಿಗೆಗೊಮ್ಮೆ ದೊಡ್ಡ ಉಸಿರು ಚೆಲ್ಲುವ ನನ್ನೆಡೆಗೆ ಅಮ್ಮ ಗೊತ್ತಾಯ್ತು ಬಿಡು ಅನ್ನುವಂತ ತುಂಟ ನಗೆ ಬೀರುತ್ತಾಳೆ - ಅಪ್ಪನ ಕಣ್ತಪ್ಪಿಸಿ ಓಡಾಡುತ್ತೇನೆ...
ನೀ ಬಳಸಿದ ಹಳೆ ಅಂಗಿಯೊಂದನು ತೊಳೆಯದೆ ಹಾಗೇ ಹೊತ್ತು ತಂದಿದ್ದೇನೆ - ಅದನ್ನು ಹೊದ್ದ ದಿಂಬೋ, ಟೆಡ್ಡಿಯೋ ತೋಳ ಬಿರುಸಿಗೆ ಸಿಕ್ಕಿ ಸುಖಾಸುಮ್ಮನೆ ತಣ್ಣಗೆ ನಲುಗುತ್ತವೆ...
ನನ್ನ ಕಥೆಯೇ ಹಿಂಗಾದರೆ ನಿನ್ನ ಒದ್ದಾಟ ಇನ್ನೆಷ್ಟಿರಬಹುದು - ನೆನೆದು ನಖ ಶಿಖಾಂತ ಕಂಪಿಸಿ ಆ ರೋಮಾಂಚಕ್ಕೆ ಮತ್ತಷ್ಟು ದ್ರವಿಸುತ್ತೇನೆ...
ವಿರಹದ ನಿಟ್ಟುಸಿರ ಉಂಡುಂಡು ಕೊಬ್ಬಿದ್ದಕ್ಕಾ ಈ ಆಷಾಢದ ದಿನಗಳು ಇಷ್ಟೊಂದು ಉದ್ದುದ್ದ...!?
#ಹಸಿಬಿಸಿ_ಆಷಾಢ...
↼↺↰↱↻⇀

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Saturday, June 8, 2019

ಗೊಂಚಲು - ಮೂರು ಸೊನ್ನೆ ಮೂರು.....

ಸರ್ಪಸರಸ.....  

ಅಹ್...!!!
"ಕಣ್ಮುಚ್ಚೋ ಬೆತ್ತಲೆಗಿಂತ ಅಲಂಕಾರವುಂಟೇ ಇರುಳಿಗೆ..."
ಮೂಗುತಿ ಇಟ್ಟ ಮುತ್ತಿಗೆ ಉಸಿರ ಸದ್ದೇ ಢಮರುಗ...
ಕಣ್ಣ ಕಾಂಕ್ಷೆಗೆ ಅಡಗಲಾರದೆ ಶರಣು ಬಂದ ಮತ್ತ ಮಚ್ಚೆಗಳು...
ಅಣು ರೇಣು ಮೃಗ ವಾಂಛೆ - ಮೇರು ಮಥನಕೆ ದಾರಿ ತೋರೋ ನಾಚಿಕೆಯ ಬೆಳಕು...
ಕಣಿವೆ ಕುಲುಮೆಯಲಿ ಈಸು ಯುದ್ಧ - ಹೆಣಿಗೆ ತೋಳ್ಗಳ ತುಂಬಾ ಸುಖದ ಬಣ್ಣಗಳ ಸುರಿವ ಬಣ್ಣವಿಲ್ಲದ ಬೆವರು...
"ಗೆಲುವುದಲ್ಲದೆ ಇದು ಗೆಲ್ಲಿಸುವ ಆಟ..."
ಉಳಿದರೆ ಉಳಿಯಲಿ ಉತ್ಖನನದ ಗಾಢ ಕಲೆಗಳು ಪ್ರೇಮದ ಮೈಮೇಲೆ - ಹಗಲಿನ ಧ್ಯಾನಕೆ...
#ಜೀವೈಕ್ಯ_ಮಿಥುನರಾಗ...
🔀🔁🔃

ಮಳೆಯ ಭಣಿತಕ್ಕೆ ಖುಷಿಯ ತೋಳ ಕಸುವಿನ ಮತ್ತೇರಿ; ಮಳೆ ಬಿದ್ದ ಮರು ಘಳಿಗೆ ಮೈಮನಸಲರಳೋ ಮಲ್ಲಿಗೆಯ ನಶೆಗೆ ನಿನ್ನ ಹೆಸರು...
#ಕರಡಿ_ಹಸಿವು...
🔀🔁🔃

ನನ್ನ ದಿವ್ಯ ಏಕಾಂತವೆಂದರೆ ನಿನ್ನೊಡನಾಡುವ ಆತ್ಮಬಂಧೀ ಭಾವ ಸಾಂಗತ್ಯ...
#ಭೂಮಿ_ಭಾರ_ಹಕ್ಕಿ_ಹಗೂರ_ಕಣ್ಣ_ಹನಿಗಳು...
🔀🔁🔃

ದುಂಬಿ ಕಾಲಿನ ಹಸಿ ಧೂಳು, ಹೂ ಗರ್ಭದ ಹದ ಬಿಸಿ - ಪ್ರೇಮವೆಂದರೆ ಅಷ್ಟೇ, ಹೂ ಚಿಟ್ಟೆ ಮೌನ...
#ಸೃಷ್ಟಿ_ಸೌಗಂಧ...
🔀🔁🔃

ತುಂಟ ಸೆರಗು ಒಂಟಿ ಕಣ್ಣ ಮುಚ್ಚಿದೆ - ಇಣುಕೋ ಹರೆಯದ ಸಿರಿಯ ಭಾರ ಹೈದನೆದೆಯ ಚುಚ್ಚಿದೆ...
ಬೆಟ್ಟ, ಬಯಲು ಬಳಸಿ ಕಣಿವೆಯಾಳಕೆ ಜಾರೋ ಬಿಸಿ ಉಸಿರ ಉತ್ಸವ...😍😉
#ಕನಸಲ್ಲಿ_ಸರ್ಪಸರಸ...
🔀🔁🔃

ಆ ಬೇಲಿ ಮೂಲೆಯ ಹೂವು ಗಾಳಿರಾಯನ ಪಕ್ಕೆ ತಿವಿದರೆ ಈ ದುಂಬಿ ನಾಭಿಯಲಿ ಆಸೆ ಅರಳುವುದು ಶುದ್ಧ ಧ್ಯಾನ...

ಬೆಳುದಿಂಗಳ ತೋಪಿನಲಿ ಒಳಭಾವ ಉಮ್ಮಳಿಸಿ ಕವಿ ಕವಿತೆಯಾಗುವ ಪರ್ವ ಶುದ್ಧಾನುಶುದ್ಧ ದಿವ್ಯ ಮೌನ...
🔀🔁🔃

ಮುಕ್ಕರಿಸಿ ಮುರಿದು ನೆಲಕೆ ಬೀಳುತಿದೆ ಕರಿ ಮೋಡ ಹನಿಹನಿಯಾಗಿ ಒಡೆದು; ಒಳನಾಡಿಗಳ ಬಿಸಿ ಉಕ್ಕಿಸಿ ಸಡಿಲ ವಸನದಲಿ ತೋಳ್ದೆರೆದು ಕರೆದ ವಸುಧೆಯ ಮೋಹಕ ಮೋಹಕೆ ಸೋತು...
ಋತುಗಾನ ಸೆಳೆತಕೆ, ರತಿರಾಗ ಮಿಡಿತಕೆ, ಗುಡುಗುಡುಗಿ ಸರಸದಲಿ, ಮಿರಿ ಮಿಂಚಿ ಚಂದಾನ ಬೆಳಗಿ, ಮಡಿ ಕಳಚಿ ಮುಡಿ ಬಿಚ್ಚಿ, ಸಹಜ ಪ್ರೇಮವೆ ಪಲ್ಲಂಗವಾಗಿ ಪ್ರಕೃತಿ ತಾ ಮಿಳನ ಮೇಳನದಿ ಸಂಭ್ರಮಿಸುತ್ತದೆ - ಹಸಿದ ಬೀಜ ಸುಖದಿ ಸಿಡಿದು ಹಸಿರ ಚಿಗುರಾಗಿ ಅರಳಿ ಬರುವ ನಾಳೆಗೆ ನವೋದಯ ಸಂಲಗ್ನ ಸಂಭವಿಸುತ್ತದೆ...
ನಾನಿಲ್ಲಿ ಕತ್ತಲ ಕೋಣೆಯ ಗೋಡೆಗೆ ಮೆತ್ತಿಕೊಂಡು ಹಸಿದ ಹಲ್ಲಿಯಂತೆ ಲೊಚಗುಡುತ್ತೇನೆ - ಬೊಗಸೆಯಲಿ ಹನಿಗಳ ಹಿಡಿದು ಸೋಕಿ ಕಣ್ಣೀರ ತೊಳೆಯುತಿದ್ದ ಆ ಕಪ್ಪು ಹುಡುಗಿಯ ನೆನೆನೆನೆದು ಬಿಗಿವ ಕೊರಳ ಸೆರೆ ಬಿಡಿಸಿ ಕವಿಯಾಗಲು(?) ಹೆಣಗುತ್ತೇನೆ...
#ಮತ್ತೆಮಳೆ_ಒಂದುಹನಿಮೌನ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

ಗೊಂಚಲು - ಮೂರು ಸೊನ್ನೆ ಎರ್ಡು.....

ಸೂತಕ..... 

ಬಿಡಿಸಲಾಗದ ಗಂಟು ಅಂದರು - ಎಷ್ಟು ಚಂದದ ಭೇಟಿ, ಎಷ್ಟೊಳ್ಳೆ ನಾಮಕರಣ... ಒಂದೂ ಸುಳ್ಳಲ್ಲ... ಗಂಟೂ ಹಂಗೇ ಇದೆ - ಅಕ್ಕ ಪಕ್ಕ ಹಗ್ಗ ಹರಿದಿದೆ ಅಷ್ಟೇ...
#ನಂಟು...
₹₹₹₹₹

ಸತ್ತಾರೆ ಸಾಯಬೇಕು ಸುಖ ಸುತ್ತಿದ ತೋಳಲ್ಲಿ ಅಂಬೋ ಆಸೆಬುರುಕ ಆಸಾಮಿಯ ಮುಖ ಮುಚ್ಚಿ ಹೊಡೆದ ಹಾಗೆ ಮಾತಿನ ಮಡಿಲಲ್ಲಿ ಕ್ರುದ್ಧ ಮೌನದ ಬೀಜ ಬಿತ್ತಿ ಹೋದ ಕನಸುಗಳನೆಲ್ಲ ರಾಶಿ ಹಾಕಿ ಬೆಳದಿಂಗಳ ಉರಿಯಲ್ಲಿ ಸುಡುತ್ತೇನೆ - ಬೂದಿಗುಡ್ಡೆಗೆ ನನ್ನದೇ ಹೆಸರು... ನನಗೇ ನನ್ನೆದೆ ಶ್ರದ್ಧಾಂಜಲಿ....
#ಆಜನ್ಮ_ಸೂತಕ...
₹₹₹₹₹

ನಿಶೆ - ನಶೆ - ಸಂಗಾತ - ಸೆಳೆತ - ನಿಲ್ಲದ ವಿಕ್ಷಿಪ್ತ ಹರಿವು...
ಹೆಸರಿಟ್ಟರೆ ಬೇಲಿ - ಉಸಿರಿಟ್ಟರೆ ಬಯಲು...
#ಸಮೃದ್ಧ_ಸಾವು...
₹₹₹₹₹

ಇನ್ನೊಂಚೂರು ಮರೆವು ವರವಾಗಿ ದಕ್ಕಿದ್ದರೂ ನಗುವಿಗಿಷ್ಟು ಸ್ವಂತ ಕಸುವಿರುತಿತ್ತು...
#ನಿನ್ನೆಗಳು_ಮತ್ತು_ನೀನು...
₹₹₹₹₹

ನನ್ನ ಕಣ್ಣಿಗಷ್ಟೇ ಗೊತ್ತು ನನ್ನ ಚಿತ್ರ(ತ್ತ)ದ ಹುಳುಕು...
#ಮಸಣದಂತವನು...
₹₹₹₹₹

ಅದೇ ಕಾಲ್ಹಾದಿಯಲ್ಲಿ ಅದಾಗಲೇ ಎಡವಿದ ಕಾಲೇ ಮತ್ತೆ ಮತ್ತೆ ಎಡವುತ್ತೆ - ತಪ್ಪು ಕಾಲಿನದ್ದಾ? ದಾರಿಯದ್ದಾ...?
ಎದೆಯ ಗಾಯಕ್ಕೆ ಬುದ್ಧಿ ಎಷ್ಟು ಮಟ್ಟಿಗೆ ಮದ್ದಾದೀತು...?
ಮುರಿದ ಕೈಯ್ಯಲ್ಲಿ ಕಂಗಳ ಸಾಂತ್ವನಿಸಿಕೊಳ್ಳುವಾಗ ನಗೆಯೊಂದು ದೊಡ್ಡ ಕ್ಲೀಷೆಯಲ್ಲವೇ...?
ಸುಟ್ಟುಬಿಡಲಾದೀತೇ ಸಾಕ್ಷಿಗಳ - ರಕ್ತದ ಕಲೆಗಳು ಸಂಜೆಗಳ ಕೊಲ್ಲದಂತೆ...?
#ಸತ್ತುಹೋಗಿದ್ದೇನೆಮತ್ತೆ...
₹₹₹₹₹

ಬೆರಳ ನಡುವಿನ ಕಿಟಕಿಯಿಂದ ಜಾರಿ ಹೋಗೋ ಮರಳು ಸ್ಪರ್ಶದಿಂದ ಸುದ್ದಿ ಹೇಳಿದರೂ ನಿಲ್ಲಿಸಲಾಗದೆ ಸೋಲುತ್ತೇನೆ ಕೈ ಖಾಲಿಯಾಗುವುದನು...
#ಭಾವಬಂಧ...
₹₹₹₹₹

ಕಳಕೊಂಡಲ್ಲೇ ಆದರೂ ಹುಡುಕುವುದು ಹೇಗೆ - ಕಳಕೊಂಡದ್ದು ಕಣ್ಣೇ ಆದರೆ...
#ನೀವು...
₹₹₹₹₹

ಕಾಲ ಕಾಯುವುದಿಲ್ಲ ಗೆಲುವಿಗೆ - ಕಾಲ ಸರಿಯುವುದಿಲ್ಲ ಸೋತ ಕಾಲಿಗೆ...
₹₹₹₹₹

ಕೆಲವೆಲ್ಲ ಕರುಳ ನೋವುಗಳಿಗೆ ಕಾಲನೂ ಮದ್ದೀಯಲಾರ ಅನ್ಸುತ್ತೆ - ಪಾದದಂಚಲಿ ಮುರಿದ ಕಿರು ಮುಳ್ಳು ಹೆಜ್ಜೆ ಎತ್ತಿಟ್ಟಾಗಲೆಲ್ಲ ಎದೆಯ ಕುಕ್ಕುತ್ತದೆ...
#ನೀನು...
₹₹₹₹₹

ಈ ಅಂಕುಡೊಂಕು ಕೊರಕಲು ಹಾದಿಯ ಯಮ ಸುಸ್ತಿನ ಪಯಣ ಎಷ್ಟೆಲ್ಲ ಮಾತಾಡುತ್ತೆ... ಆದರೆ ಬಲು ಜಾಣ ಕಿವುಡ ನಾನು...
#ಸೋತ_ಕಾಲು...
₹₹₹₹₹

ಮೌನದ ಪರೋಕ್ಷ ಹೇರಿಕೆಗೆ ಸೋತು ಮಾತಿನ ಎಲ್ಲಾ ನೇರಪ್ರಸಾರಗಳನ್ನು ಇಂದು ನಾಳೆಗಳಲ್ಲಿ ಬಲವಂತವಾಗಿ ತಡೆಹಿಡಿಯಲಾಗಿದೆ...
#ರದ್ದಿನೀತಿ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

ಗೊಂಚಲು - ಮೂರು ಸೊನ್ನೆ ಒಂದು.....

ಕಣ್ಣಿಗಂಟಿದ  ಕಾವ್ಯ...  

ಚಿಟ್ಟೆ ವಿರಹದುರಿಯಲಿ ಹೂವು ಬಾಡುವಾಗ ಕಾಯಿ ನಕ್ಕಿತು...
#ಪ್ರೇಮ...
÷×=÷=×÷

ಎಲ್ಲೆಲ್ಲೋ ಅಲೆಯುತ್ತೇನೆ - ನಿನ್ನಲ್ಲಿ ಕರಗುತ್ತೇನೆ...
ಕೆಲವು ನೋಟಗಳು ಕಾಡಲಿಕ್ಕೆಂದೇ ಕೂಡುತ್ತವೇನೋ...
ಕೂಡು ಹಾದಿಯಲಿನ ನಿನ್ನ ಗೂಡಿಗೆ ನನ್ನ ಹೆಸರಿದೆಯಂತೆ...
ಗುಬ್ಬಚ್ಚಿ ಎದೆಯಲ್ಲಿ ಸಾಗರನ ತುಂಡು...
ಆ ಸ್ವರ್ಗಕ್ಕೆ ಸಾವೇ ದಾರಿಯಂತೆ - ಆ ದಾರಿ ಆಯಾಸಕ್ಕೆ ನರಕ ಸುಖಗಳೇ ನೆರಳಂತೆ...
#ಕೊಂಡಾಟ...
÷×=÷=×÷

ಕದ್ದು ಇಣುಕೋ ಕಣ್ಣಿನಲ್ಲಿ ರೆಕ್ಕೆ ಕುಣಿಸೋ ಮರುಳ ಮೋಹದ ತುಂಟ ಚಿಟ್ಟೆ ಮರಿ...
ಕಳ್ಳ ಆಸೆಯ ತೇವ ತೇವ ತುಟಿಗಳಲ್ಲಿ ಮಳೆ ಹನಿಯ ಕಚ್ಚಾ ರುಚಿ...
ಮಳೆಯ ಇರುಳಲಿ ಹರೆಯ ಕಣ್ಣಿ ಕಳಚಿದ ಕರು...
#ಬಯಲಿಗೆ_ಬಿದ್ದ_ಎದೆಯ_ಬಿಸಿ...
÷×=÷=×÷

ಸೃಷ್ಟಿ ಕಾವ್ಯವೇ -
ಈ ಶುಭ ಇರುಳಿನಲಿ ಭುವಿಯ ಮೈಯ್ಯಲಿಳಿವ ಮಳೆ ಪ್ರೇಮೋನ್ಮಾದ ಸ್ಫೋಟಿಸಿದ ನನ್ನ ನಿನ್ನ ಆ ಖಾಸಗಿ ಸಂಜೆಯ ಹಗೂರ ಬೆವರ ಸಾಲಿನ ಕಂಪನು ಎಳೆ ತಂದು ಚಾದರದೊಳಗಿನ ಒಂಟಿತನವ ಕೆಣಕಿದರೆ ಯಾರ ದೂರಲಿ...
#ಭಾರಭಾರ_ಈ_ಒಂಟೊಂಟಿ_ಮಳೆ_ರಾತ್ರಿ...
÷×=÷=×÷

ಕಳ್ಳಭಟ್ಟಿ ಏರಿಸಿ ಚಿತ್ತಾದವನ ಕರುಳಿನಲಿ ಕಳ್ಳ ಪ್ರೇಮವೊಂದು ಕತ್ತು ಕುಣಿಸಿದರೆ - ಷರಾಬಿಗೂ ಪ್ರಣಯಾಗ್ನಿಗೂ ನಶೆಯ ಜಿದ್ದಾಜಿದ್ದಿ...
#ಬಡಬಡಿಕೆಗೆ_ಮಳೆಯ_ಸಾಕ್ಷಿ...
÷×=÷=×÷

ಇಲ್ಲಿ, ಕಾಯುವ ಮಾತೇನೂ ಕೊಟ್ಟಿರಲಿಲ್ಲ - ಕಾಯುವಿಕೆ ನಿಂತಿಲ್ಲ... ಅಲ್ಲಿ, ಕಾದು ನಿಲ್ಲುವ ಆಣೆ ಪ್ರಮಾಣಗಳೆಷ್ಟೋ - ಕಾಯಲು ಪುರ್ಸೊತ್ತಿಲ್ಲ...

ಅಗೋ...... ಆ ಹಾದಿ.......‌.... ಕಣ್ಣರಳಿಸಿ ತುಂಬಿಕೊಳ್ಳಲು ಬಯಸಿದ್ದು..... ಅಂಥವೆಷ್ಟೋ ಕಿರು ಕಾಲು ಹಾದಿಗಳು..... ಅದೊಂದು ಸುಂದರ ಕನಸು......... ಮತ್ತದು ಅಷ್ಟೇ.......
÷×=÷=×÷

ಕರಿಮುಗಿಲ ಗೆಳತಿ ಅವಳು ಕರಗಿ ಸುರಿಯುತ್ತಾಳೆ - ಕರಿಬಂಡೆ ಎದೆಯಲ್ಲೂ ಬಣ್ಣದ ಹೂ ಅರಳಿ ನಗುತ್ತದೆ...
#ಕಪ್ಪು_ಹುಡುಗಿ...
÷×=÷=×÷

ಕಾಯುತ್ತಾ ನಿಂತ ಹಾದಿಯ ಕಿಬ್ಬಿಗಳಲಿ ಕಣ್ಸೆಳೆವ ಅಪರಿಚಿತ ಗೆಜ್ಜೆಗಳ ಕಿಂಕಿಣಿ ಘಲಿರು - ಆಹಾ! ಈ ಬೆಳಗಿನೆದೆಯಲಿ ಚಂದಾನೆ ಚೆಲುವು ಚೆಲ್ಲಾಡಿ ಕಣ್ಣಾಲಿ ಚಡಪಡಿಕೆಯಲಿ ಸೋಬಾನೆ ಸೊಬಗು...
#ಕಣ್ಣಿಗಂಟಿದ_ಕಾವ್ಯ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)