Tuesday, July 7, 2020

ಗೊಂಚಲು - ಮುನ್ನೂರಾ ನಲವತ್ತು ಮೇಲೊಂದು.....

ಇಂತಿ - ಭಾವ ಬಂಧ ಪುರಾಣ.....

ಆ ಹಾದಿಯಲ್ಲಿ ಹೆಟ್ಟಿದ ಮುಳ್ಳಿನ ನವೆಯ ಅನುಭವದಲ್ಲಿ ಈ ಹಾದಿಯ ಹಾಯುವಾಗ ಚಪ್ಪಲಿ ತೊಟ್ಟು ಹೊರಡುವುದು ಪ್ರಜ್ಞಾವಂತಿಕೆ ಸರಿ...
ಆದ್ರೆ, 
ಹಳೇ ನೋವಿನ ನೆನಪಲ್ಲೇ ಕನಲುತ್ತಿದ್ದು, ನಲಿವು ನಡೆದು ಬರಬಹುದಾದ ಹೊಸ ಹಾದಿಗಳಿಗೆಲ್ಲ ಬೇಲಿಯನೇ ಕಟ್ಟಿ ಕೂರುವ ನನ್ನ ಮನಸಿನ ಬಾಲಿಶತೆಗೆ ಏನನ್ನಲಿ...
ಆ ಹಾದಿಯಲಿನ ಅನುಭವದ ಬೇಸರ, ಕೋಪಗಳನೆಲ್ಲ ಅಲ್ಲಿಗಲ್ಲೇ ಚುಕ್ತಾ ಮಾಡಿಕೊಳ್ಳದೇ, ಅಲ್ಲಿಯ ಅಪಸವ್ಯಗಳನೆಲ್ಲ ಎಳೆತಂದು ಇಲ್ಲಿಯ ಕವಲುಗಳಿಗೂ ಆರೋಪಿಸಿಕೊಂಡು ಈ ದಾರಿಯ ಮೇಲೆ ಪ್ರತೀಕಾರಕ್ಕಿಳಿದಂಗೆ ವರ್ತಿಸುತ್ತಾ, ಮೇಲಿಂದ ನಗೆಯ ಕವಾಟಗಳೆಲ್ಲ ಬಾಗಿಲು ಹಾಕಿ ಕೂತಿವೆ ಎಂದು ಸ್ವಯಂಚಾಲಿತ ಸ್ವಯಂಮರುಕ ಬೇರೆ...
ನನ್ನೆಡೆಗಿನ ಹೊಸ ಹರಿವಿನ ಹಾದಿಗೆ ಅಡ್ಡಲಾಗಿ ನನ್ನೆದೆಯ ಹಳೆ ಕಸಗಳ ಒಡ್ಡು ಕಟ್ಟಿ ಮತ್ತೆ ನಾನೇ ಮೂಗು ಮುಚ್ಚಿ ಅಳುತ್ತೇನೆ - ಜನ್ಮಜಾತ ಮೂರ್ಖತನವಲ್ಲವಾ...
#ಭಾವ_ಬಂಧ_ಸಂಬಂಧ_ಕನಸು_ನಾಳೆ_ಇತ್ಯಾದಿ...
⇜⇞⇟⇝

ಅಲ್ಲೀಗ ಹಸಿವಿಲ್ಲ ಅಥವಾ ನಾನಲ್ಲಿ ಹಳತಾಗಿದ್ದೇನೆ - ಬಿಚ್ಚಿಡದ ಸತ್ಯ...
ಜಗತ್ತು ಸಮಯದ ಮೇಲೆ ಆರೋಪ ಪಟ್ಟಿ ಸಲ್ಲಿಸುತ್ತೆ - ನಂಬಲೇಬೇಕಾದ ಸಬೂಬು...
#ಒಡನಾಟ...
⇜⇞⇟⇝

ಧೈರ್ಯಮಾಡಿ ಒಳಗಡಿಯಿಡಲಷ್ಟೇ ದಾರಿ ಅಲ್ಲಿ... 
ಒಳಗೆಳೆದರೆ ಮುಗೀತು - ಹೊರ ಬರುವುದಾದರೆ ಸತ್ತು ಅಥವಾ ಕಡಿದು ಬಿದ್ದ ತುಂಡುಗಳಷ್ಟೇ..‌. 
ಅದಕೇ ಅದು ಒಳ ಸುಳಿಗಳ ಚಕ್ರವ್ಯೂಹ...
#ಬದುಕು_ಭಾವ_ಬಂಧ_ಸಂಬಂಧ...
⇜⇞⇟⇝

'ನೀವು' 'ತಾವು' ಅಂತ ಪರಿಚಯವಾಗಿ ಕೈಕುಲುಕಿ, 'ನಾನು' 'ನೀನು' ಎಂದು ನಗುವಾಗಿ ಅರಳಿ ಗಲಗಲಿಸಿ, ಮತ್ತೆ ಮರಳಿ ಅದೇ 'ನೀವು' 'ತಾವು' ಆಗಿ ಸುರಕ್ಷಿತ ಅಂತರ ಕಾಯ್ದುಕೊಂಡು ನೆಲೆಯಾಗುವಲ್ಲಿ ಒಂದು ಬಂಧದ ಒಂದು ಆವರ್ತನ ಸಮಾರೋಪ...
ಎದೆಯಲಿನ್ನೂ ಹಳೆಯ ಪ್ರೀತಿ ಗಂಧ ಚೂರು ಅಂಟಿಕೊಂಡಿದ್ದರೆ ಹಳೆಯದೆಲ್ಲ ಮತ್ತೆ ಹೊಸತಾಗಿ ಜೊತೆಯಾಗಬಹುದು - ಹಸಿವಿದ್ದು ಕಾಯುವ ಕಸುವಿದ್ದರೆ ಕಾಯಬಹುದು - ಕಾಯುವ ಕಸುವೇ ಪ್ರೀತಿಯ ಕಾಯುವುದು...
ಬದಲಾವಣೆ ಜಗದ ನಿಯಮವಂತೆ - ಆವರ್ತನ ಕಾಲದ ನೇಮವಂತೆ...
#ಪ್ರೀತಿ_ನೇಹ_ಭಾವ_ಭಕುತಿ_ಇತ್ಯಾದಿ...
⇜⇞⇟⇝

ಒಮ್ಮೆ ಸಿಗ್ಬೇಕು - ಒಂದಿಷ್ಟೇನೋ ಹೇಳೋಕಿದೆ, ಕೇಳಿಸ್ಕೊಳ್ಳೋಕಿದೆ...
ಮತ್ತೆ ಸಿಗೋಣ - ಈಗಿಲ್ಲಿಗೆ ನಿಲ್ಲಿಸಬೇಕಿದೆ, ಇಲ್ಲಾ ಈ ಸಧ್ಯಕ್ಕಿಲ್ಲಿ ನಿಲ್ಲಿಸೋ ತುರ್ತಿದೆ...
ಮತ್ತೆ ಮತ್ತೆ ಸಿಗ್ತಾ ಇರೋಣ  - ಸಹ ಪ್ರಯಾಣ ಹಿತವಾಗಿದೆ...
ಎಲ್ಲಿ, ಹೇಗೆ, ಯಾವಾಗ - ಅವರವರ ಪ್ರಾಪ್ತಿ...
#ಇಂತಿ_ಭಾವ_ಬಂಧ_ಪುರಾಣ...
⇜⇞⇟⇝

ಬಲ ಕೂಡಿಸಿಕೊಂಡು ಹೊರಟು ನಿಂತವರನ್ನ ಬಲವಂತವಾಗಿ ಹಿಡಿದು ನಿಲ್ಲಿಸಿ ಉಳಿಸಿಕೊಂಡೆ ಅಂತ ಬೀಗೋದು ಸಂಸ್ಕಾರ ನೀಡದೇ ಹೆಣ ಕಾಯ್ದಂಗೆ ಅಷ್ಟೇ...
ಕಾರಣ,
'ಭಾವ' ಹೊರಟು ಕಾಲವಾದ ಮೇಲೆಯೇ 'ಹೊರಡೋ ಮಾತು' ಹೊರಳುವುದು, 'ನೆಪ'ವೊಂದು ಕೊಡವಿಕೊಳ್ಳೋ ಕ್ರಿಯೆಯಾಗುವುದು...
ಅರಿವಾಗಬೇಕಾದ್ದು ಇಷ್ಟೇ:
ರೋಗ, ರುಜಿನ, ಆಯಸ್ಸುಗಳೆಲ್ಲ ಬರೀ ಜೀವಕ್ಕಷ್ಟೇ ಅಲ್ಲ ನಮ್ಮೊಳ ಭಾವಕ್ಕೂ ಅನ್ವಯ...
ಕೈಕುಲುಕುವಾಗಿನ ಕಣ್ಣ ಹೊಳಪು, ಕೈಬೀಸುವಾಗಿನ ಕಣ್ಣ ಹನಿ - ನಡುವೆ ಹೆಗಲನಾತು ಹಾಯ್ದ ಹಾದಿಯ ನೆನಪಷ್ಟೇ ನಮ್ಮ ನಿಮ್ಮ ಗಳಿಕೆ, ಉಳಿಕೆ...
ಹಾಗೆಂದೇ,
ಎದೆಯ ಅನುಗೊಳಿಸಿ ವಿದಾಯವ ಸಂಭಾಳಿಸುವುದೊಳಿತು ಹೊರಡಲನುವಾದವರಿಗೆ ಹೊರೆಯಾಗದಂಗೆ - ಸಾಸಿರ ಅಲೆಗಳ ದಂಡೆ ತಾ ಮೌನದಲೇ ನೀಗಿಕೊಂಡಂಗೆ...
#ಸುಡುಗಾಡು_ಬಂಧ_ಸಂಬಂಧ...
⇜⇞⇟⇝

ಕಣ್ಣಾಳಕಿಳಿದಷ್ಟೂ ನಾಲಿಗೆಯ ಜೊಳ್ಳು ಎದೆಯ ಇರಿಯುತ್ತೆ...
ಎದೆಯ ಕಸ ಕಣ್ಣ ಕನ್ನಡಿಯಲ್ಲಿ ಗೊಬ್ರ, ಎದೆಯೊಳಗಣ ಪ್ರೀತಿ ಕಣ್ಣ ಕುಡಿಕೆಯಿಂದ ತುಳುಕೋ ದೃಗ್ಬಾಷ್ಪ...
ನಾಲಿಗೆ ಪ್ರೀತಿಯ ಪಠಿಸುವಾಗ ಕಣ್ಣಲ್ಲಿ ಒಳಗಿನ ಉರಿ ಕಂಡ್ರೆ ಸೆಟೆದು ನಿಲ್ಲಬಹುದೂ - ಆದ್ರೆ ಮೌನ ನಿಷ್ಠುರ ನುಡಿವಾಗ ನೋಟ ಕರುಳ ಪ್ರೀತಿಯ ಸಾರಿಬಿಟ್ಟರೆ ಮಾತ್ರ ಬದುಕು ಚಡಪಡಿಸಿಬಿಡತ್ತೆ...
ಅದಕೆಂದೇ -
ಎನ್ನೊಳಗೊಳಗೆ ಭಾವ ಯುದ್ಧಕೆ ಸಿದ್ಧನಾಗದೇ ಯಾರದೇ ಕಣ್ಣಲ್ಲಿ ಕಣ್ಣಿಡಲಾರೆ...
#ಕಣ್ಬೆಳಕು...
⇜⇞⇟⇝

ಅವರು ಬೇಲಿ ಹಾಕಿ ಜೀವ ಹಿಂಡ್ತಾರೆ ಅಂತ ಅವರಿಂದ ಎದ್ದು ಬಂದದ್ದು...
ಇವರು ಬೇಲಿಯೊಳಗೆ ನಿಲ್ತಾ ಇಲ್ಲ ಅಂತ ಇವರನ್ನು ದೂರ ಮಾಡಿದ್ದು...
ಬಂಧ ತನ್ನದಾಗುವುದೆಂದರೆ ತನ್ನಾಣತಿಯಂತೆ ನಡೆಯುವುದಾ...!?
ಸಂಬಂಧಕೆ ಬೇಲಿ ಹೆಣೆಯುವ ಸಮನ್ವಯ ಯಾವುದು...??
ಬಯಲಿಗೆ ಬೆಳಕಿನ ಬೇಲಿ ಸಾಲದಾ...???
ಬಯಲು, ಬೆಳಕು, ಬೇಲಿ ಎಲ್ಲವೂ ಒಟ್ಟಾಗಿ ಪ್ರೀತಿಯಾದರೆ, ಪ್ರೀತಿಯೇ ಆದರೆ ಆಗದಾ...????
#ಭಾವ_ಬಂಧ_ಅನುಬಂಧ_ಸಂಬಂಧ...
⇜⇞⇟⇝

'ಅವಕಾಶ ಆದಾಗ' ಅನ್ನೋದು ನಂಗೆ ಬೇಕಾದಾಗಷ್ಟೇ ಅನ್ನೋದನ್ನ ಧ್ವನಿಸುವಲ್ಲಿ, ನಿನ್ನ ಬದುಕಿಗೆ ಜೊತೆಯಾಗಿ ಒಂದೆರಡಾದರೂ ಇರಲಿ 'ಅವಕಾಶ ಮಾಡ್ಕೊಂಡು ಮಾತಾಡ್ತೀನಿ' ಅನ್ನೋ ಅಂತ ಆಪ್ತ ಹೃದಯಗಳು...
"ಘಂಟೆಗಳ ಲೆಕ್ಕ ಬೇಡ - ಭಾವ ತೀವ್ರತೆಯ ಸಣ್ಣ ಗುರುತು ಸಾಕು..."
#ಬಂಧ_ಸಂಬಂಧ_ಇತ್ಯಾದಿ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

ಗೊಂಚಲು - ಮುನ್ನೂರರ ಮೇಲೆ ನಲವತ್ತು.....

ಮದನೋತ್ಸವ ಮೋಹಶಕೆ.....

ಕಾಳಿಂದಿ -
ನಿನ್ನೆಡೆಗಿನ ಹಗಲುಗನಸೊಂದು ಚಂದಿರನೂರಿನ ತಂಬೆಲರ ಮೀಯುತ್ತಾ ನನ್ನ ಮೃತ ಸಂಜೆಗಳನು ಸಂಜೀವಿನಿಯಂತೆ ಸಲಹುತ್ತದೆ...
ಮತ್ತು
ಕಣ್ಮುಚ್ಚಿ ನಿನ್ನ ಇನ್ನಷ್ಟು ಕಾಣುತ್ತೇನೆ...
ನಿನ್ನ ಕಾಣುವಾಟದ ಉನ್ಮತ್ತ ಉತ್ತುಂಗದಲೂ ಕಣ್ಮುಚ್ಚಿ ಸುಖಮತ್ತ ಸಮಾಧಿಸ್ಥನಾಗುತ್ತೇನೆ...
#ನನ್ನ_ಧ್ಯಾನ...
⇴↯⇎↯⇴

ಏನ್ಗೊತ್ತಾ,
ಈ ಆಷಾಢದ ಮಗ್ಗುಲಿನ ದಟ್ಟ ತಂಪಿನ ರಾತ್ರಿಗಳಲಿ ಅಂಗಳದ ಮಣ್ಣ ಘಮ ಉಸಿರಲ್ಲಿ ಚಕ್ರ ಸುಳಿವಾಗ ಥಟ್ಟನೆ ನಿನ್ನ ಕಿವಿ ಹಿಂದಿನ ತಿರುವಿನ ಹೆಣ್ಣು ಕಂಪು ನೆನಪಾಗುತ್ತೆ ನೋಡು...
ಅಲ್ಲಿಂದಾಚೆ ಮೃಗವಾಂಛೆಯ ಒಂದೊಂದೇ ಪುಟಗಳು ಇರುಳ ಗಾಳಿಗದುರಿ ಪಟಪಟಿಸುತ್ತವೆ...
ನಿನ್ನ ಉಡುಗೆ ತೊಡುಗೆ ತೊಡೆದುಹಾಕಿ ಬೆತ್ತಲಾಚೆಯ ಬಹುವಿಧ ಅಲಂಕಾರಗಳ ಕೆಡಿಸಬೇಕು...
ಕಣ್ಣ ಚಮೆಯನು ಕುಂಚವಾಗಿಸಿ ನಿನ್ನ ಎದೆ ಗುಂಬದ ಮೊನಚು ತುದಿಯ ಸುತ್ತಾ ನನ್ನ ನಾನೇ ಬರೆಯಬೇಕು...
ಉಸಿರುಸಿರ ಮಾರುತ ಮೈಯ್ಯ ಆಳ ತೀರಗಳನೆಲ್ಲ ತೀಡಿಯಾಡಿ ಮೈಮರೆಸಬೇಕು...
ನಾ ನಿನ್ನೊಳಿಳಿದು ಜೀವಂತ ಚಿತ್ರವಾಗಬೇಕು - ನಿನ್ನ ಕೂಡೋ ಪರಮ ಪೋಲಿ ಪಾತ್ರವಾಗಬೇಕು...
ಕೇಳು,
"ನಾನು ಬ್ರಹ್ಮ ಬರೆದ ಅಲಂಕಾರಕ್ಕೆ ಬೇಶರತ್ ಸೋತವನು..."
ಹಾಗೆಂದೇ ನಿನ್ನ ಹಾಯೋ ನನ್ನ ಕನಸೆಲ್ಲ ಹಸಿಹಸಿ ಅಂಗಳಕೆ ಬಿದ್ದ ಉನ್ಮತ್ತ ಬಾನು...
#ಮದನೋತ್ಸವ_ಶಕೆ...
⇴↯↯⇴

ಹಂಡೆ ಉರಿ ನೀರ ಮಿಂದು ಬಂದವಳ ಎದೆ ಗೊಂಚಲ ಮೆತ್ತೆಯ ತೀರಗಳಿಂದ ಹೊರಟ ಸೋಪಿನ ಅತ್ತರು ಮೆತ್ತಿದ ಬೆಚ್ಚಾನೆ ಎಳೆ ಬೆವರ ನವಿರು ಕಂಪು ಎನ್ನ ಉಸಿರ ಬಳ್ಳಿಯ ಹಿಡಿದು ನೇರ ನಾಭಿಮೂಲವ ಸೇರಿ ಅಡಿ ಮುಡಿಯ ಊರು ಕೇರಿಗಳಲೆಲ್ಲ ಅಬ್ಬರದ ಕಾಮನ ಹಬ್ಬ...
ಏರಬೇಕಾದ ಉನ್ಮತ್ತ ಉರ ಏರಿ, ಇಳಿಯಬೇಕಾದ ಇರುಕಲ ಮಡು ಆಳ, ಬೆಳಕು ಕತ್ತಲ ಮಡತೆಗಳಲಿ ದಿಕ್ಕು ದೆಸೆಯಿಲ್ಲದೇ ಅಲೆದಲೆದು ದಣಿವ ಕಣ್ಣು, ಮತ್ತೆ ಮತ್ತದೇ ಅಂದಕೆ ಮಣಿದು ಅಂಕೆ ತಪ್ಪುವ ಉಸಿರ ಹೋರು...
ಆಹಾ...
ಸೋಲು ಕೂಡಾ ಅದೆಷ್ಟು ಮಧುರವೋ ಇಲ್ಲಿ - ಹೆಣ್ಣ ಅಸೀಮ ಚೆಲುವಿನ ಸೊಬಗು ಸಿರಿವಂತಿಕೆ ಎದುರಲ್ಲಿ...
ಆ ಬೊಮ್ಮನ ಕುಂಚ ಕೌಶಲಕೆ ಮಾರ ನಮನ...
ಕತ್ತಲಲೂ ಬೆತ್ತಲನು ಅರೆಗಣ್ಣಲ್ಲಿ ಹೀರೋ ತೀವ್ರತಮ ಸಭ್ಯ ನಾನು, ನಡು ಹಗಲ ಸೌಂದರ್ಯ ಸಮರದಿ ಶರಂಪರ ಸೆಣಸಿ ಬೇಶರತ್ ಸೋಲುವಲ್ಲಿ ನಡುಬೀಡು ಪುಡಿ ಪುಡಿ...
#ಆಹ್_ರತಿಸದನ_ಮೋಹಾಘಾತವೇ...
⇴↯↯⇴

ಧೋ ಮಳೆಯೊಂದಿಗೆ ಕಪಿಲೆ ಕರುವಿನ ಘಂಟೆ ದನಿ ಸೇರಿದಂತೆ ಒಳಮನೆಯಲಿ ಆಯಿ ಶಾಂತ ಲಹರಿಯಲಿ ಹರಿನಾಮವ ಗುನುಗುತಿರುವಾಗ ಮೆತ್ತಿ ಯೆಂಚಿನ ಮೂಲೆಯಲಿ ನಿನ್ನ ತುಟಿಯಿಂದ ಕದ್ದ ಏದುಸಿರ ಮುತ್ತಿನ ಪುರಾತನ ಪುಳಕದ ಮೆಲುಕಿನಲಿ ನಾನಿಲ್ಲಿ ತುಂತುರುವಿಗೆ ಎದೆ ತೆರೆದರೆ ನಿನ್ನನ್ನೂ ಮಳೆಯಲಿ ಮೀಯಿಸಿದಂತೆಯೇ ಲೆಕ್ಕ...
ಎಳೆ ಹೆಣ್ಣ ಹೊಳೆ ಭಾವ ಬಸುರಿನ ಅಸ್ಥಿರ ಬಯಕೆಗಳ ವಿಚಿತ್ರ ತಲ್ಲಣದ ಯಾವುದೋ ದ್ಯಾಸದಲಿ ನೀನೊಮ್ಮೆ ಸುಮ್ಮನೆ ಕೂತಲ್ಲೇ ಕಾಲು ಕುಣಿಸಿದರೂ ಆ ಗೆಜ್ಜೆ ಕಿಂಕಿಣಿ ನನ್ನೇ ಕೂಗಿದಂಗೆ ಭಾಸ...
ಮನ್ಸು ಬಯಸಿದ ಅಮೃತ ಘಳಿಗೆಗೆ ಬೆರಳಂಚಿಗೆ ನಾ ಸಿಗದೇ ಹೋದಾಗ ನೀ ನಿನ್ನ ಸುಳ್ಳು ಅಸಹನೆಯ ಗಂಟು ಮುಖದಲ್ಲಿ ನನ್ನ ಹುಡುಕಿಕೊಳ್ಳುವ ಚಡಪಡಿಕೆಯ ಮೋದವ ಸವಿಯಲು ಮತ್ತೆ ಮತ್ತೆ ಕಳೆದೋಗಬೇಕೆನಿಸುತ್ತಿತ್ತಲ್ಲ...
ಸಣ್ಣ ಛಳಿಯ ಮಧ್ಯಸ್ಥಿಕೆಯಲಿ ಆ ಮುನಿಸು ಮುರಿಯುವ ರಾಜೀ ಸೂತ್ರದ ರಮ್ಯ ರಸಿಕ ಕ್ಷಣಗಳ ಬ್ರಹ್ಮ ಲಿಪಿಯ ಶೃಂಗಾರ ಕವಿತೆಗಳನು ವಿರಹ ಕಾಲದಲಿ ಕನ್ನಡಿಯೆದುರಿನ ಬೆತ್ತಲಲಿ ಮತ್ತೆ ಮತ್ತೆ ಓದಿಕೊಳ್ಳುತ್ತೇನೆ...
#ಹ್ಯಾಂಗೆ_ಮಣಿಸೋದು_ಹೇಳು_ಆಜನ್ಮವಿರಹಿಯ_ಪೋಲಿ_ಸಂಜೆಗಳ_ಕಾವನು...
⇴↯↯⇴

ಹನಿ ಗರ್ಭದ ಮೋಡವೇ -
ವಸಂತ ವನ ಪುಷ್ಪದ ಎಸಳಿನಂತೆ ನಗೆಯ ಚಿಗುರು ಬೆರಳಲ್ಲಿ ಇರುಳ ಪಕ್ಕೆಯ ತಿವಿದು ಬೆಳಕಿಗೆ ಕಚಗುಳಿ ಇಡುತೀಯೆ...
ನೀ ಬಿಡಿಸಿ ತಂದ ಪಾರಿಜಾತವ ಉಸಿರ ಬೊಗಸೆಗೆ ಸುರುವಿಕೊಂಡೆ...
ಈಗ ಎದೆಯ ಚೊಬ್ಬೆಯ ತುಂಬಾ ನಿನ್ನದೇ ಕನಸ ಪರಿಮಳ...

ಜೀವದ ಜೀವವೇ -
ಚಂದಿರನೂರಲ್ಲಿ ಹುಣ್ಣಿಮೆ ಹಬ್ಬವಂತೆ...
ಪೆಂಡೆ ಪೆಂಡೆ ನೆನಪು, ಕನಸುಗಳೆಲ್ಲ ಬಾನ್ಬಯಲಿಗೆ ತೋಳ್ದೆರೆದು ದಿವಿನಾಗಿ ಬಿರಿಯುವ ಇಂಥ ಇಳಿ ಸಂಜೆಯ ಹೆಗಲನಾತು ನೀನಿದ್ದರೂ, ಇರದೇ ಹೋದರೂ ಇರುಳ ಜೀವ ವದ್ದೆ ವದ್ದೆ...

ಕೂಸೇ -
ಜೊಂಪೆ ಜೊಂಪೆ ಹೆರಳ ಮಾಲೆಯಲಿ ಎದೆಗೊಂಚಲ ಏರಿಗೆ ತೆರೆ ಕಟ್ಟಿ, ಕಣ್ಣ ಕುಮುದ ಶರದಲೇ ಎನ್ನೆದೆ ಸೀಮೆಯ ನಿರಾಯಾಸದಿ ಗೆದ್ದು ಬಿಂಕದಿ ಬೀಗುವ ನೀನೆಂಬ ನೀ ಚೂರುಪಾರು ಸಿಗುವ ಮುಸ್ಸಂಜೆಗಳ ಅಂಗಳದಲಿ ಗುಮಿಗೂಡೋ ನೆರೆಹೊರೆಯ ಸಂತೆಯನು ಮನಸಾರೆ ಹಳಿಯುತ್ತೇನೆ...
ಕಾರಣ,
ತುಟಿಗಳು ತುಟಿಗಳ ಸೇರಿ ಜೇನೂಡಲು ಹವಣಿಸೋ ಬಿಸಿಯೂಟದಂತ ಹರೆಯ ಹಸಿವಿನ ತೀರಾ ಸಾಮಾನ್ಯ ಮಧುರ ಪಾಪಕೂ ಒಂದು ಸಣ್ಣ ಕಿರುಗತ್ತಲ ಮೂಲೆಯ ಏಕಾಂತವೂ ದಕ್ಕಗೊಡದಂತೆ ಸುತ್ತ ಉರಿವ ಕವಳ ಕುತೂಹಲದ ನೂರು ಕಂಗಳು - ಪ್ರಣಯ ಫಲಿಸದ ಪ್ರೇಮದೆದೆಯಲಿ ಉರಿವ ವಿರಹದ ಹಿಡಿಶಾಪವಿದೆ ಜಂಗುಳಿಗೆ...
#ಅಂಗಳದ_ಹಾಡು_ಹಸೆ...
⇴↯↯⇴

"ಎದೆ ಮಿದುವನಾಳಿ ಗಂಡಸಾಗಬಹುದು, ಗಂಡನೂ ಆಗಬಹುದು; ಹೇಳು, ಎದೆಯ ಭಾವಕೆ ಮಿಡಿಯದವನ ಗೆಳೆಯಾ ಅನ್ನಬಹುದು ಹೇಗೆ..."
ಅವಳಂತಾಳೆ: ಗೆಳೆಯನಾಗಲು ಸೋತ ಗಂಡನೂ ಬರೀ ಗಂಡಸೇ...
ಪಾತ್ರ ಬದಲಾದರೆ ಅವನೂ ಅದನ್ನೇ ಹೇಳ್ತಾನೆ...
ಶಿವ ಶಿವಾ - ಕೃಷ್ಣ ಕೃಷ್ಣಾ...
#ಅಂತಃಪುರದ_ನಿಟ್ಟುಸಿರು...
⇴↯↯⇴

ನಾನು ಕಾಮದೇವನ ತುಂಡು - ನೀನು ಪ್ರೇಮದ ಪೂಜಾರಿ; ಸೇರಿಸಿ ನೊಗವ ಕಟ್ಟಿದ ನಶೆ ಯಾವುದು...? ಬದುಕ ಹೂಳಿದ ನೇಗಿಲ್ಯಾತರದ್ದು...??
#ಬಗೆಹರಿಯದ_ಭಾವಸಖ್ಯದ_ಗಣಿತ...
⇴↯↯⇴

ಕೊಟ್ಟ ಕೊನೇಯ ಕಾಗೆಯೂ ಗೂಡು ಸೇರಿ ನಿರಭ್ರ ಸಂಜೆಯೊಂದು ಇರುಳಿಗೆ ದಾಟುವ ಆತ್ಯಂತಿಕ ಘಳಿಗೆಯಲ್ಲಿ ಸುರಿದು ಕೆಂಪಾದ ಕಣ್ಣನೊರೆಸಿಕೊಳ್ತಾ ನಾನೂ ಬರಿದಾಗಿ ಹಗುರಾದೆ ಅಂದುಕೊಳ್ತೇನೆ...
ಉಹೂಂ...
ಹಾಗಾಗುವುದೇ ಇಲ್ಲ...
ನಿಶಿದ್ಧ ಮೌನವೊಂದು ಹೂಂಗುಟ್ಟಂತೆ ಎದೆ ಪಕ್ಕೆಯ ಗಟ್ಟಿ ಚಿವುಟಿ ಅಲ್ಲಿ ನೀನಿರುವುದನು ತೋರಿಬಿಡುತ್ತದೆ...
ಮತ್ತೆ ಎಲ್ಲ ಎಂದಿನಂತೆ...
ಮನಸಿದು ಎನ್ನದು ಅದದೇ ಭಾರಗಳ ಒಪ್ಪ ಮಾಡಿ ಹೊಸ ಬೆಲೆಯಿಟ್ಟು ಮಾರುವ ಸಂತೆ...
ನೋಡು,
ಈ ಖಾಲಿಯೆಂಬ ಖಾಲಿಯಲ್ಲೂ ಖಾಲಿಯಾಗದ ಎಷ್ಟೆಲ್ಲಾ ಇದೆ...
#ಪಾರಿಜಾತ_ಅರಳೋ_ಹೊತ್ತಾಯ್ತು...
⇴↯↯⇴

ಕೇರಿಯಾಚೆಯ ಪಾಳು ಮನೆಯಲಿ ದೇವರೂ ಇರಬಹುದು - ನಿನ್ನ ಗೆಜ್ಜೆ ಮಂತ್ರ, ಕೊರಳ ಶಂಖದ ಮಾಯೆ ಅಲ್ಲಿಯ ನೆಳಲ ಹಾಸಲಿ ಆಯಾಸ ನೀಗಿಕೊಂಬ ಬಡ ಗೋಪನ ಕಣ್ಣ ಕೊಳಲಲಿ ಕನಸ ರಾಗ ಬಿತ್ತಬಹುದು...
ಇಂಥವೇ -
ನನ್ನದೇ ಹಪ್ಪು ಹಳೇ ಅನಾಥ ಶಬ್ದಗಳ ಅರಿಕೆಗೆ ಹೊಸ ಹುಡುಗಿ ನಿನ್ನ ಕಣ್ಣು ಕಲಮಲಿಸಿದರೆ ಹೊಸದಾಗಿ ಬರೆಯಬಹುದು ಪ್ರಣಯ ಕವಿತೆಯ - ನಿನಗೆಂದೇ, ನಿನ್ನೊಳಿಳಿದು...
ವಸಂತ ನಗುವುದೆಂದರೆ ಹಳೆ ಬೇರು ಹೊಸ ಹೂವ ಹಡೆವುದೂ ಅಲ್ಲವಾ...
ಹೇಳು, ಎದೆಯ ಎಡೆಯಿಟ್ಟು ಮಂಡಿಯೂರಿ ಕೈ ಚಾಚಲಾ...
ಕಂಗಾಲು ಬೈರಾಗಿಯ ಖಾಲಿ ಬೊಗಸೆಯಲ್ಲಿ ಅನುರಾಗದ ಮಳೆಯಾದೇಯಾ...
#ಆಲಾಪ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

ಗೊಂಚಲು - ಮುನ್ನೂರ್ಮೂವತ್ತೊಂಭತ್ತು.....

ನದಿಯಾಗಬೇಕು.....

ಯೋಗ್ಯನಲ್ಲದವನ ತಪಸ್ಸು ಫಲಿಸಿದರೆ ಅಸ್ತು ಅಂದ ಒಡಲಿಗೇ ಶಾಪವಾಗಿ ಸುತ್ತೀತು... #ಬಂದಳಕ...
↺↹↻

ನಾ ಲಘುವಾಗಿ ಕಣ್ತೆರೆದೆ - ನೀ ಗುರುವಾಗಿ ಬೆಳಕೆರೆದೆ...
ಬದುಕೇ -
ನಾನೆಂಬ ಪ್ರಶ್ನೆಗೆ ನೀನೆಂಬೋ ಬೆರಗು ಉತ್ತರವಾಗಿ ಜವನ ಕೈಯ್ಯಲ್ಲಿ ನನ್ನ ನಗೆಯ ಅಂಕಪಟ್ಟಿ...
#ಗುರು_ನಕ್ಕರೆ_ಹುಣ್ಣಿಮೆ...
↺↹↻

ನಿರಾತಂಕದಲಿ ಜಗಳಾಡುವ ಸ್ವಾತಂತ್ರ್ಯವ ಕೊಟ್ಟು ನೋಡು - ನಿರಂತರ ಪ್ರೀತಿಸುವುದ ಕಲಿಸುತ್ತೇನೆ...
#ಮಾತು...
↺↹↻

ಒಳಗಿಲ್ಲದ ನಗುವನ್ನು ಹೊರತೋರುವ ಹೆಣಗಾಟದಲ್ಲಿ ಒಳಗು ಇನ್ನಷ್ಟು ಬರಡಾಗಿ ಬೀಳು ಬೀಳುತ್ತದೆ...
"ದಯವಿಟ್ಟು ತುಂಬಾ ನಗಿಸಬೇಡಿ - ಎದೆ ಸಡಿಲಾದರೆ ಅಳು ನುಂಗುವುದು ಬಲು ಕಷ್ಟ..."
#ತೆರೆದೇ_ಇರುವ_ಗೂಢ_ಕಂಗಳಲಿ_ಕಲೆಸಿಹೋದ_ಬಣ್ಣಗಳು...
↺↹↻

ಪ್ರಜ್ಞೆಯ ಪೂರ್ಣ ಪ್ರಮಾಣದ ಹುಚ್ಚು, ಇಲ್ಲಾ ಪ್ರಜ್ಞೆಯನು ಬಡಿದು ಮಲಗಿಸಬಲ್ಲ ಹುಚ್ಚುಚ್ಚೆನಿಸೋ ಮಧುರ ನಶೆ ಇವೆರಡೇ ತಾನೆ ಮೈಮನದ ನೋವಿನ ಜಡ್ಡನು ಅಲ್ಲಲ್ಲೇ ಮರೆಸೋಕಿರೋ ಮದ್ದು...
#ಎದೆಯ_ಗಾಯ_ಮಿದುಳ_ತಲುಪಬಾರದು...
↺↹↻

ಅಕ್ಷರಕಕ್ಷರ ಉಜ್ಜಿ ಪದ ಪಾದ ಭಾವದ ಕಿಡಿ ಹೊತ್ತಿ - ಅಂತರಂಗವ ಹೂಳಿ ಚೈತನ್ಯದ ಬೀಜವ ಬಿತ್ತಿ - ವ್ಯಾಸಪೀಠವನಾತು ಮೌನದೆ ಕುಳಿತಿತ್ತು ಹೊತ್ತಿಗೆ...
#ಪುಸ್ತಕ: ಬಯಲಿಗೆ ಬಿದ್ದ ಎದೆಯ ಬೆಳಕು...
↺↹↻

ನೋಡಿದ್ದು ಯಾರು ಎಂಬುದರ ಮೇಲೆ ನೋಟದ ಗುಣ, ಪರಿಣಾಮಗಳ ನಿರ್ಧಾರ...
#ಸ್ವಭಾವ... #ರುಚಿ...
↺↹↻

ನಿನ್ನ ಬಗ್ಗೆ ಹೇಳೋ ಅಂದಳು...
ಭಯವಾಯಿತು - ಪ್ರಶ್ನೆ ಪತ್ರಿಕೆ ಎದುರಿನ ದಡ್ಡ ಹುಡುಗನ ಖಾಲಿತನ, ಸಾವಿನೆದುರಿನ ಸುಸ್ತು...
ಏಸು ಜನುಮ ಓದಿದರೆ ನನಗೆ ನಾನು ತಿಳಿದೇನು - ಒಳಗು ಬೆಳಗಾದಲ್ಲಿಗೆಲ್ಲ ಮುಕ್ತ ಮುಕ್ತ ಅಲ್ಲವಾ...?

ಹೋಗ್ಲೀ ನನ್ ಬಗ್ಗೆ ಆದ್ರೂ ಹೇಳೂ ಅಂದ್ಲು...
ಭಯಂಕರ ತಳಮಳ ನನ್ನೊಳಗೆ - ಯಾವುದೋ ದ್ಯಾಸದಲಿ ಸಿಗರೇಟಿನ ಬೆಂಕಿಯನು ಬುಡಮಟ್ಟ ಜಗ್ಗಿ ಉಸಿರ ಜೊತೆ ತುಟಿ ಸುಟ್ಟಾಗಿನ ಕಕ್ಕಾಬಿಕ್ಕಿ, ಮೊದಲ ಹಸ್ತ ಮೈಥುನದ ಪಾಪ ಭೀತಿ...
ಅಪರಿಚಿತತೆಯೇ ಸೆಳೆತವ ಕಾಯುವುದಲ್ಲವಾ - ಎಲ್ಲ ತಿಳಿದರೆ ನೀನೆಂಬ ಬೆರಗೆಲ್ಲಿಯದು...?

ನಮ್ಮ ಬಗ್ಗೆ ಅನ್ನೋದೀಗವಳ ಕಣ್ಣ ಪ್ರಶ್ನೆ...
"ಬೆತ್ತಲು ಕೂಡಾ ಒಂದಿನಿತು ಕತ್ತಲನು ಉಳಿಸಿಕೊಂಡಿರುತ್ತದೆ..."
ಬದುಕಿನ್ನೆಷ್ಟೋ, ಸಾವು ಇನ್ಹೇಗೋ - ಬಯಲು ಕೂಡಾ ಕಣ್ಣ ವ್ಯಾಸದಷ್ಟೇ ಬಯಲಾಗುವುದು - ಇನ್ನು ನೀನು, ನಾನು...?
ಎಲ್ಲ ಅರ್ಧಂಬರ್ಧ ಮತ್ತು ಈ ಅರೆಬರೆಯೇ ಚಂದ ಅಲ್ಲವಾ...?
'ನಾನು' 'ನೀನು' ಕೂಡಿ ಪೂರ್ಣವಾದೆವು ಅನ್ನೋ ಜೊಳ್ಳು ಪ್ರಭಾವಳಿ 'ನಾವಲ್ಲ' - ಪ್ರಾಮಾಣಿಕ 'ನಾನು' 'ನೀನು' ಹಂಗಂಗೇ ಇದ್ದಂಗೇ 'ಜೊತೆ ನಡೆಯುವ' ಸಹಜ ಸೊಬಗಿನ ಪಯಣ 'ನಾವು...'

ನನ್ನ ತಿಳುವಳಿಕೆ ಇಷ್ಟೇ ಕಣೇ:
"ಹರಿದಲ್ಲೆಲ್ಲ ಹನಿ ಪ್ರೀತಿಯ ಪಸೆ ಉಳಿಸಬೇಕು - ನದಿಯಾಗಬೇಕು..."
ಅಲೆಯ ಹೋರು - ದಡದ ಮೌನ - ಬದುಕ ಶ್ರೀಮಂತಿಕೆ...
ಸಾವು ಕೂಡಾ ತಡೆಯಲಾಗದ ಹರಿವು ಪ್ರೀತಿಯೊಂದೇ ಇದ್ದೀತಲ್ಲವಾ - ಉಹುಂ, ಆ ಅರಿವು ಪ್ರೀತಿಯೊಂದೇ ಆಗಿರಬೇಕು ಅಲ್ಲವಾ...
ಅರ್ಥ ಅನರ್ಥಗಳ ಹಂಗನಳಿದು ಹರಿದರಾಗದೇ ಸುಮ್ಮನೇ - ಸಲಿಲದ ಹನಿ ಹನಿ ಹರಿದಂತೆ ಮೆಲ್ಲನೆ; ಸಾಗರಕಿಷ್ಟು, ಮೋಡಕ್ಕಿಷ್ಟು...

ನಸು ನಗೆಯ ಉತ್ತರ ಈಗ ಅವಳು - ಬೆಸೆದು ಜನುಮದ ಬೆರಳಿಗೆ ಬೆರಳು...
#ಈಹೊತ್ತಿಗೆ_ಇಂತಿಷ್ಟು...
↺↹↻

ಎಲ್ಲಾ ಮರೆವಾಗೋ ವರವಾಗಿ ಬಾ...
#ನಿದ್ದೆ...
↺↹↻

ಅಂದಿನಂತೇಯೇ, ಅಂದಿನಷ್ಟೇ ಇಂದೂ ಪ್ರೀತಿಸ್ತೇನೆ ಗೊತ್ತಾ...?!
ಅರೇ, ಅಲ್ಲೇ ನಿಂತುಹೋದೆಯಾ - ಅಲ್ಲಿಂದಿಲ್ಲಿಗಿಷ್ಟು ಬೆಳೆಯಬೇಕಿತ್ತಲ್ಲವಾ - ಬೇರನಿಷ್ಟು ಆಳಕಿಳಿಸಿ, ಗೆಲ್ಲುಗಳ ಅಗಲಗಲಿಸಿ...
ನಿಂತು ಮಲೆತದ್ದಾ, ಹರಿದು ಕಲೆತದ್ದಾ ಅಂದರೆ ಹರಿವನ್ನೇ ಬೆರಗಿನಿಂದ, ಬೆಡಗಿನಿಂದ ತಬ್ಬುತ್ತೇನೆ...
"ಹಕ್ಕಿಯ ಚೆಲುವನು ರೆಕ್ಕೆಯ ಸ್ವಾತಂತ್ರ್ಯದಲ್ಲಿ ಕಾಣು - ದಾರಿ ನೆಳಲಿನೆಡೆಗೆ ಹಾಯುವುದು..."
#ಪ್ರೀತಿ_ಬೇಡಿಯಲ್ಲ_ಬಯಲ_ಬೆಳಕು...

ನಿನ್ನೊಂದಿಗೆ ಗುದ್ದಾಡಿ ಗೆದ್ದಾಗಲೆಲ್ಲ ಮತ್ತೆ ಮತ್ತೆ ಸತ್ತಿದ್ದೇನೆ ಒಳಗೇ - ಸೋತ ಮುಹೂರ್ತವಿದೆಯಲ್ಲ ಅದು ಮಾತ್ರ ಚೂರು ಜೀವಿಸಿದ್ದಕ್ಕೆ ದೊಡ್ಡ ಸಾಕ್ಷಿ...
#ಹರಿಯುವುದೆಂದರೆ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)