Thursday, July 30, 2026

ಗೊಂಚಲು - ನಾಕ್ನೂರ್ತೊಂಭತ್ತು.....

 ಬೆಳಗೆಂದರೆ ಪ್ರೀತಿಯ ದೈವ ದರ್ಶನ.....


ಶುಭದ ಬೆಳಕು ಸುರಿದು
ಯೆನ್ನೆದೆಯ ನಗುವು ನಿನ್ನೆದೆ ಗೂಡಲಿ ಬೆಳೆದು
ನಿನ್ನೆದೆಯೊಲವು ಎನ್ನೆದೆಯಂಗಳದ ಕೊಳೆಯ ತೊಳೆದು
ಬೆಳಕಾಗಲಿ, ಬೆಳಕೇ ಆಗಲಿ ಕತ್ತಲು ಮೆತ್ತಿದ ನನ್ನಾ ನಿನ್ನಾ ಒಳಮನೆ...
ಬೆಳಗಾಗುವ ಹೊತ್ತಿಗೆ... 
ಶುಭದಿನ... 🤝🫂

ಎನ್ನ ಇರುಳಿಗೆ ಜೋ
ಗುಳದ ತೆರದಿ ಶುಭ ಹಾರೈಸಿ ಮಮತೆಯ ತೊಟ್ಟಿಲಲಿ ತೂಗಿದವರೇ ಹಗಲಾಗುವ ಹೊತ್ತಿಗೆ ಶುಭ ಸುಪ್ರಭಾತದ ಪ್ರಾರ್ಥನೆಯಿಂದೇ ತಟ್ಟಿ ಎಬ್ಬಿಸುತ್ತಾರೆ; ಕನಸ ಗೆಲ್ಲೂ ದಾರಿ ನೋಡು ಎಂದು ಅಕ್ಕರೆಯಿಂದ ಕಿವಿ ಹಿಂಡಿ ಕಣ್ಣ ಜೊಂಪನು ತೊಡೆಯುತಾರೆ... 
ಒಳಿತೇ ಆಗುವುದು...
ಹಗಲಿರುಳ ನೆತ್ತಿ ಕಾಯುವುದು - ಒಳಿತು ಹರಸುವವರ ಪ್ರೀತಿ ನೆಳಲು... 
ಶುಭದಿನ... 🤝🫂

ಎನ್ನ ಹೆಸರಿನ ಆಯಸ್ಸಿನ ಖಾತೆ ಕಿರ್ದಿಯಲಿ ಇನ್ನೊಂದು ಹೊಸ ಹೂ ಬೆಳಗು ಸೇರಿತೆಂಬುದು ಎಂಥಾ ಧನ್ಯತೆ... 
ಇಷ್ಟೇ ಇಷ್ಟು ಬೆಳಕಿನ ದರ್ಶನಕೆ ಮತ್ತೆ ಒಂದು ಅನಾಯಾಸದ ಅವಕಾಶ... 
ನಿನ್ನ ನಗೆಯ ಹೊನಲಿನಲ್ಲಿ ಮನ ಮುಳುಗಿ  ಮೀಯುವ ಮತ್ತು ಎನ್ನ ಆನು ಗೆದ್ದುಕೊಳ್ಳುವ ಚಂದ (?) ಬಡಿದಾಟವಿನ್ನೂ ಜೀವಂತ... 
ಶುಭದಿನವೇ ಸರಿ... 🤝🫂

ಯೆದೆಯ ಬೆಳಕಿಗೆ ಕನ್ನಡಿಯಾಗಲಿ ಬೆಳಗು... 
ಶುಭದಿನ... 🤝🫂

ಗೋಡೆ ಮೇಲಿನ ಅವಳ ಚಿತ್ರದ ನಗುವೂ ಎಷ್ಟು ಜೀವಂತವಿದೆ...!!
ಬೆಳಕು ಒಳಗಿದ್ದರೆ ಬೆಳಗು ಶುಭವನ್ನೇ ಹಾಡುತ್ತದೆ...!! 
ಅನಿಶ್ಚಿತ ಬದುಕ ನೂರು ಶರಗಳಿಗೆದೆ ಕೊಟ್ಟೂ ನಗೆಯ ಧಾರಣೆ ಮಾಡುವ ಶುಭದ ಸಂಕಲ್ಪವಾಗಲಿ ಬೆಳಗು... 
ಶುಭದಿನ... 🤝🫂

ಬೆಳಕಿಗೆ ಮುಖ ಮಾಡಿ, ಯೆದೆಯಲಿ ನಗೆಯ ಹೂವರಳಿ, ದಿನವೆಲ್ಲ ಪ್ರೀತಿಯ ಪರಿಮಳ ಚೆಲ್ಲಾಡಲಿ... 
ನೇಹದ ಬಳ್ಳಿ ಯೆದೆಯಿಂದಲೆದೆಗೆ ಹಬ್ಬಲು ಬೆಳಗು ಚಪ್ಪರವಾಗಲಿ...
ಶುಭದಿನ... 🤝🫂 

ಬೆಳಕಿನ ಹಸಿವಲಿ ದೇಹೀ ಅಂದಾಗಲೆಲ್ಲ ಪ್ರೀತಿ ಅನ್ನವನಿತ್ತು ಯೆನ್ನೆದೆಯೊಳು ನಗೆಯ ಬಿತ್ತಿದವರನೆಲ್ಲ ಹುಳುಕಿಲ್ಲದೇ ನೆನೆಯಬೇಕು 'ನಾನು' - ಬೆಳಗಾಗುವ ಹೊತ್ತಿಗೆ... 
ಶುಭವೆಂದರೇ ಪ್ರೀತಿ ಪರಿಕ್ರಮ - ಎದೆ ಹೂವಂತಾಗಲಿ ಮೆತ್ತಗೆ... 
ಶುಭದಿನ... 🤝🫂

ಬೆಳಕಿನ ಕಡಗೋಲು 
ಕಡೆಕಡೆದು ಯೆದೆಗಡಲ ಹಾಲಾಹಲವ 
ತೇಲಲಿ ಪ್ರೀತಿ ನವನೀತ...
ಶುಭದಿನ... 🤝🫂

ಯೆದೇನ ತಿವಿದು ಎಬ್ಬಿಸೋ ಮುಂಬೆಳಗಿನ ನಿನ್ನ ಮಡಿಲ ಕನಸ ಕವಲು... 
ಬೆಳಗಿಗೆ ಕಣ್ತೆರೆದು 'ಕರಾಗ್ರೇ__' ಅಂದು ಮಣಮಣಿಸುವಲ್ಲಿ ಬೊಗಸೆ ತುಂಬಾ ನಿನ್ನ ನೆನಪ ಚಿತ್ರ ಸಾಲು... 
ಬದುಕ ಪ್ರೀತೀನ ನೀ ಕಾಯುವ ಬಗೆ ನನ್ನ ಪ್ರತಿ ಬೆಳಗಿನ ಶುಭದ ನಗೆ... 
ಶುಭದಿನವೇ ಮತ್ತೆ... 🤝🫂

ಬೆಳಕಿನ ರೂಪವೂ, ಪ್ರೀತಿಯ ಕಣ್ಣೂ ನಗೆಯೇ ಇರಬಹುದು... 
ಅದಕೇ
ಯೆದೆಗಿಳಿದ ಬೆಳಕೂ, ಪ್ರೀತಿಯೂ ಶಾಂತ ನಗೆಯಾಗಿ ಹೊರ ಚಿಮ್ಮುವುದು... 
ಬೆಳಗು ಸಂಪನ್ನವಹುದು - ನಗೆಯು ನುಡಿಯಾಗಿ ಯೆದೆಯಿಂದಲೆದೆಗೆ ಹರಿದು... 
ಶುಭದಿನ... 🤝🫂

ಬೆಳಕಿನ ಪ್ರೀತಿಯೇ ಹಂಗೆ
ಅಥವಾ 
ಪ್ರೀತಿಯ ಬೆಳಕೇ ಹಾಂಗೆ
ಯೆದೆಯ ಭಾವ ಹಾಯುವ ವಿಸ್ತಾರದ್ವರೆಗೂ ಶುಭದ ಸಂವೇದನೆಯನೇ ತೋರುತ್ತದೆ... 
ಏಳಿ ಏಳಿ ಬೆಳಗನು ಎದುರ್ಗೊಂಬಲು ಯೆದೆಯ ಒಪ್ಪ ಮಾಡಿಕೊಂಡು ಅಣಿಯಾಗುವಾ... 
ಶುಭದಿನ... 🤝🫂

ಬೆಳಕು ಪ್ರೀತಿಯ ಗತಿ ತೋರುವಾಗ,
ಪ್ರೀತಿ ಬೆಳಕಿನದೇ ಪಥ ಪಂಥವಾಗಿರುವಾಗ,
ಬೆಳ್ಳಂಬೆಳಗು ಕಣ್ಣಿಂದ ಇಳಿವ ನಗೆಯ ಹನಿಯಲಿ 
ಬದುಕಿನ ಬಣ್ಣದ ಬಿಲ್ಲರಳುವುದು... 
ನಗೆಯ ವರ್ಷವಾಗಲಿ ದಿನವೆಲ್ಲ... 
ಶುಭದಿನ... 🤝🫂

ಶುಭ ಶುಭ ಮುಂಜಾವು... 
ಬೆಳಕು ಯೆದೆಯಾ ತಬ್ಬಿ ಪ್ರೀತಿಯ ನಂಜೇರ್ಯಾವು... 
ಬೆಳಗಾನ ಬಾಗಿಲು ಬೆಳಗಿ ನೇಹ ನಗೆಯಾಗಿ ಹರಡ್ಯಾವು... 
ಶುಭ ಶುಭ ಮುಂಜಾವು... 🤝🫂

ದಟ್ಟ ಕಾನನದ ಪುಟ್ಟ ದಾರಿಯೂ
ಬೆಟ್ಟ ಬೆಳಗುವ ಬೆಳಕೂ
ಕೈಕೈ ಹಿಡಿದು ನಡೆಯುವಾಗ
ಪ್ರೀತಿ ಯೆದೆದುಂಬಿ ನಕ್ಕಂತೆ ಪ್ರಚ್ಛನ್ನ ಬೆಳಗು... 
ಶುಭದಿನ... 🤝🫂

ಪಿಳ್ಳಂಗೋವಿಯ ಕರೆಗೆ
ಗೋಪಿಯೆದೆ ಕರಗಿ
ಬೆಳಕನು ಮಿಂದ ಪ್ರೀತಿ 
ತಂಪು ನೀರಾಗಿ ಹರಿದು
ಬೆಳಗು ಜೀವನ್ಮುಖಿ... 
ಶುಭದಿನ... 🤝🫂

ಬೆಳಗು ಕಣ್ಣಲಿ ಕಲೆತು ಎನ್ನ ಎದೆಗಂಟಿರುವ ಕತ್ತಲನೂ ತೊಡೆಯಲೀ... 
ಬೆಳಗಾಯಿತು - ಬೆಳಕಾಗಲಿ... 
ಶುಭದಿನ... 🤝🫂

ಆ ದಿನಮಣಿಗೆ, ಅರೆ ಘಳಿಗೆ ಬಿಡದಲೇ ಒಡಲುರಿಸಿಕೊಂಡು ಜಗ ಬೆಳಗಿ ಮರಳಿ ಸಿಕ್ಕಿದ್ದೇನು...?!
ಪ್ರೀತಿಗೆ ಇದಕಿಂತ ದೊಡ್ಡ ಆಖ್ಯಾನ/ವ್ಯಾಖ್ಯಾನ ಬೇರೆ ಇದ್ದೀತೇನು...!!
ಬೆಳಗಿಂದ 'ನಾನು' ಏನನ್ನೋ ಕಲಿಯಬೇಕಿದೆ; ಕಲಿತರಾಗದೇ...
ಶುಭದಿನ... 🤝🫂

ಬೆಳಗು ಗುರುವಾಗಿ ಎದೆಯ ಬೆಳಗಲಿ...
ಶುಭದ ಸಾರಥಿ ಬೆಳಗು...
ಶುಭದಿನ... 🤝🫂

ಸೋತಿದ್ದಕ್ಕೆ ಕೊಡುವುದಾ, ಕೊಟ್ಟು ಕೊಟ್ಟು ಸೋಲುವುದಾ... !!
ಗೆದ್ದು ಕೊಟ್ಟೆನೆಂದು ಬೀಗುವುದಲ್ಲ; ಕೊಟ್ಟು ಗೆಲ್ಲಿಸಿ ಮುಗುಳ್ನಗುವುದು... 
ಬೆಳಗೆಂಬ ಪ್ರೀತಿ ಪರಿಪಾಕ... 
ಶುಭದಿನ... 🤝🫂

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :)

No comments:

Post a Comment