Sunday, April 17, 2011

ಗೊಂಚಲು - ಹನ್ನೆರಡು...

ಪ್ರೇಮದ  ಘೋರಿಯ  ಮೇಲೆ  ಕುಳಿತು.....


ಪ್ರೇಮ - 'ಮನದ ಯಾವುದೋ ಒಂದು ಮೂಲೆಯಲ್ಲಿ ಗೊತ್ತೇ ಆಗದೆ ಹುಟ್ಟಿ, ಅಷ್ಟೇ ನಿಶ್ಯಬ್ದವಾಗಿ ಸತ್ತೂ ಹೋಗಬಹುದಾದ ಮಧುರ ಭಾವ...'

ಪ್ರೇಮ - 'ಸಂಪೂರ್ಣ ಅಭಿವ್ಯಕ್ತಿಸಲಾಗದ ಅವ್ಯಕ್ತ ಭಾವಗಳ ಗೊಂಚಲು...'

ಪ್ರೇಮ - ಅದು ನನ್ನಲ್ಲಿ ಹುಟ್ಟಿದ ಭಾವ ಬಿಂದು ಯಾವುದು ?
             ಸತ್ತ ಕಾರಣವೇನು ?
ಉತ್ತರ ಸಿಗದ ಪ್ರಶ್ನೆಗಳಿಗೆ ಸಿಲುಕಿ ಬಳಲಿ ಹೋಗಿದ್ದೇನೆ.

ಸತ್ತ ಪ್ರೇಮ ಉಳಿಸಿ ಹೋದ ಸ್ತಬ್ಧತೆಯಿಂದ ಆಚೆ ಬರಲಿ ಹೇಗೆ...?

ಒಮ್ಮೊಮ್ಮೆ ಆಸೆ ಆಗುತ್ತೆ...
ಮನಸಾರೆ ಬಿಕ್ಕಳಿಸಬೇಕೆಂದು - ಪ್ರೇಮದ ನಿಶೆಯೆಲ್ಲ ಇಳಿದುಹೋಗುವಂತೆ...
ಮನದ ಭಾವಗಳನೆಲ್ಲ ಆಚೆಸುರಿದು ಮಾತಾಗಬೇಕೆಂದು...
ಮತ್ತೆ ನಗಬೇಕೆಂದು - ಜಗದ ನಗುವೆಲ್ಲ ನನ್ನೊಬ್ಬನದೇ  ಎನುವಂತೆ...

ಒಮ್ಮೊಮ್ಮೆ ಹೀಗೂ ಅನ್ನಿಸತ್ತೆ...
ಈ ಸಮಾಜದ ಮಿತಿಗಳನೆಲ್ಲ ಮೀರಬೇಕೆಂದು...
ಸೂಳೆ ಮನೆಯಲ್ಲಾದರೂ ಸರಿ ಗಂಡಸಾಗಬೇಕೆಂದು...
ಒಂದಿಷ್ಟು ಕೆಟ್ಟವನಾಗಬೇಕೆಂದು...

ಎಲ್ಲಕ್ಕಿಂತ ತೀವ್ರವಾಗಿ ಆಸೆ ಆಗ್ತಿದೆ...
ಮತ್ತೆ ಬದುಕಬೇಕೆಂದು - "ನಾನಾಗಿ ನಾನು"
                                     ಕೇವಲ
                                  "ನನಗಾಗಿ ನಾನು"


ಎದೆಯಂಗಳ ಖಾಲಿಯಿದೆ. ಅಲ್ಲ ಮತ್ತೆ ಖಾಲಿಯಾಗಿದೆ.
ಕನಸ ಗಿಡ ನೆಡ ಬಯಸುವವರು ಸಂಪರ್ಕಿಸಬಹುದು...

Monday, April 4, 2011

ಗೊಂಚಲು - ಹನ್ನೊಂದು...

ದೋಸ್ತಿ.....

ಸಮಾನ ಅಭಿರುಚಿಗಳಿಂದ ಹುಟ್ಟಿದ ಗೆಳೆತನ ದೀರ್ಘಕಾಲ ಉಳಿಯುತ್ತೆ ಹಾಗೂ ಗಾಢವಾಗಿ ಬೆಳೆಯುತ್ತೆ ಮತ್ತು ತುಂಬಾ ತುಂಬಾ ಬದುಕನ್ನು ಪ್ರೀತಿಸುವಂತೆ ಮಾಡುತ್ತೆ. ಯಾಕೇಂದ್ರೆ ಅಭಿರುಚಿಯಿಂದ ಹುಟ್ಟಿ ಬಂದ ಗೆಳೆತನದಲ್ಲಿ ಸಣ್ಣ ಸಣ್ಣ ಅಪಸವ್ಯಗಳೆಲ್ಲ ಲಕ್ಷಕ್ಕೆ ಬರಲಾರವು. ನಮ್ಮ ಇತರೆ ಖುಷಿಗಳಿಗೆ ಅವರು ಎರವಾಗದಿದ್ದಾಗಲೂ ಕೂಡ ಅದೊಂದು ಗೆಳೆತನ ಬೆಳೆಯುತ್ತಲೇ  ಇರುತ್ತದೆ. ಅಭಿರುಚಿಯೇ ಆ ಗೆಳೆತನವನ್ನು ಗಟ್ಟಿಯಾಗಿಡುತ್ತದೆ. ಒಳ್ಳೆಯ ಅಭಿರುಚಿಯ ಅಂತರ್ಗತ ಸೆಳವಿನಿಂದಾಗಿಯೇ, ವಯಸ್ಸಿನ ಅಂತರ ಮತ್ತು ಆರ್ಥಿಕ ಅಂತರಗಳಿದ್ದಾಗ್ಯೂ, ಬದುಕಿನುದ್ದಕ್ಕೂ ಒಂದು ಚೆಂದನೆಯ ಸ್ನೇಹದ ಬಳ್ಳಿ ಹಸಿರಾಗಿ ಹಬ್ಬಿ ಹರಡಿರುತ್ತೆ.

ಒಂದು ಚಂದನೆಯ ಗೆಳೆತನವನ್ನು ನಿಭಾಯಿಸಬೇಕಾದಾಗ ಆ ಗೆಳೆಯನ ಸಣ್ಣ ಪುಟ್ಟ ದೌರ್ಬಲ್ಯಗಳನ್ನು ಸಹಿಸುವುದು ಅನಿವಾರ್ಯ. ತೀರ ಅದು ನಮ್ಮ ವ್ಯಕ್ತಿತ್ವಕ್ಕೇ ಮತ್ತು ಸಾಧನೆಗಳಿಗೇ ಅಡ್ಡಿಯಾಗುತ್ತೆ ಅಂದಾಗ ಆ ಗೆಳೆಯನನ್ನು ಧಿಕ್ಕರಿಸೋದು ಅನಿವಾರ್ಯವಾದರೂ ಉಳಿದ ಸಂದರ್ಭಗಳಲ್ಲಿ ಅವನ ಆ ದೌರ್ಬಲ್ಯಗಳೆಡೆಗೆ ನಿರ್ಲಿಪ್ತರಾಗಿರೋದು ಅವಶ್ಯಕ. ಆತ ಆತನ ದೌರ್ಬಲ್ಯಗಳನ್ನು ನಮ್ಮ ಮೇಲೆಯೂ ಹೇರುವಂತೆ ಕಂಡಾಗ ನಯವಾಗಿ ನಕ್ಕು ತಿರಸ್ಕರಿಸಿ ಅದರಿಂದ ನಾವು ಹೊರಗುಳಿದು ನಮ್ಮನ್ನು ರಕ್ಷಿಸಿಕೊಂಡರಾಯಿತಷ್ಟೇ. ಹಾಗಂತ ಅವನ ದೌರ್ಬಲ್ಯಗಳನ್ನು ಖಂಡಿಸಬಾರದೆಂತಲ್ಲ. ಅಗತ್ಯವಾಗಿ ಖಂಡಿಸಬೇಕು ಮತ್ತು ದೃಢ ಅಭಿಪ್ರಾಯಗಳಿಂದ ಮನಗಾಣಿಸಲು ಪ್ರಯತ್ನಿಸಬೇಕು. ಅದು ಗೆಳೆತನಕ್ಕೆ ಅಗತ್ಯ ಕೂಡ. ಹಾಗಾದಾಗಲೇ, ಅಭಿಪ್ರಾಯಗಳು ಘರ್ಷಿಸಿದಾಗಲೇ, ಅವರವರ ವ್ಯಕ್ತಿತ್ವಗಳು ಹೊರಹೊಮ್ಮಲು ಮತ್ತು ಗಟ್ಟಿಗೊಳ್ಳಲು ಸಾಧ್ಯ.


"ಎರಡು ಬೆಳೆದ ವ್ಯಕ್ತಿತ್ವಗಳ ನಡುವಿನ ಸ್ನೇಹಕ್ಕೆ 'Celebration of Personalities' ಅನ್ನಬಹುದೇನೋ..."


ಎರಡು ಬೆಳೆದ ವ್ಯಕ್ತಿತ್ವಗಳ ಮಧ್ಯದ ಸ್ನೇಹದಲ್ಲಿ ಅಭಿಪ್ರಾಯ ಭೇದಗಳು ಸರ್ವೇಸಾಮಾನ್ಯ. ಅದರಿಂದಾಗಿ ಖಂಡನೆ ಮಂಡನೆಗಳು ಅನಿವಾರ್ಯ. ಆ ಎಲ್ಲ ಖಂಡನೆ ಮಂಡನೆಗಳ, ಅಭಿಪ್ರಾಯ ಭೇದಗಳ, ಭಿನ್ನ ವಿಚಾರ ಧಾರೆಗಳ ನಡುವೆಯೂ ಸ್ನೇಹವನ್ನು ಚೆನ್ನಾಗಿಟ್ಟುಕೊಳ್ಳಬೇಕು ಅಂದರೆ - ಇಬ್ಬರ ನಡುವೆಯೂ ಆತ್ಮೀಯತೆ ಮತ್ತು ಒಬ್ಬರೆಡೆಗೆ ಇನ್ನೊಬ್ಬರಿಗೆ ಪ್ರೀತಿ ಮಿಶ್ರಿತ ಗೌರವವಿರಬೇಕು. ಅಭಿಪ್ರಾಯಗಳನ್ನು ಆಲಿಸುವ ಮತ್ತು ಗೌರವಿಸುವ ಮನಸ್ಥಿತಿಯಿರಬೇಕು. ಗೆಳೆಯನ ಒಂದು ಆರೋಪಕ್ಕೆ ಪ್ರತ್ಯಾರೋಪ ಮಾಡದೇ ಆತನ ಖಂಡನೆಯನ್ನೂ ಪಾಸಿಟಿವ್ ಆಗಿ ತೆಗೆದುಕೊಳ್ಳುವ ವೈಶಾಲ್ಯತೆ ಇಬ್ಬರ ಮನಸಿಗೂ ಇರಬೇಕು. ಆತನ ಆರೋಪದಲ್ಲಿನ ಸತ್ಯಾಸತ್ಯತೆಯನ್ನು ವಿಶ್ಲೇಷಿಸುವ ಗುಣವಿರಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಮಾಡಬೇಕಾಗಿರುವ ಖಂಡನೆಯನ್ನು ಸರಿಯಾದ ಸಮಯದಲ್ಲಿ, ಸಂದರ್ಭೋಚಿತವಾಗಿ, ನಯವಾದ ಶಬ್ದಗಳಲ್ಲಿ, ನಾಜೂಕಾಗಿ, ಮನಮುಟ್ಟುವಂತೆ ಮಾಡುವ ಕಲೆಯಿರಬೇಕು.


"ಸ್ನೇಹ ಅಂದರೆ - ಎರಡು ವ್ಯಕ್ತಿತ್ವಗಳು, ಎರಡು ಭಿನ್ನ ಅಭಿಪ್ರಾಯಗಳು, ಅಭಿರುಚಿಗಳು, ಭಿನ್ನ ವಿಚಾರಧಾರೆಗಳು ತಮ್ಮೆಲ್ಲ ವೈರುಧ್ಯಗಳ ನಡುವೆಯೇ  ಒಟ್ಟಾಗಿ ಬೆಸೆದು ಎರಡು ಜೀವಗಳ ಜೀವನವನ್ನು ಆಹ್ಲಾದಮಯವನ್ನಾಗಿಸುವ, ಎರಡು ಮನಸುಗಳ ನಡುವಿನ ಅಲೌಕಿಕ ಬಾಂಧವ್ಯ." ಹಾಗಂತ ನಾನು ನಂಬಿದೀನಿ. ಅಂಥ ಆಹ್ಲಾದಮಯ ಅಲೌಕಿಕ ಅನುಭೂತಿಯನ್ನ ನಾನು ತುಂಬ ಅನುಭವಿಸಿದ್ದೇನೆ - ರಘು ಮತ್ತು ರಾಘು ಇವರುಗಳ ಬೆಚ್ಚನೆಯ ಗೆಳೆತನದ ಸನ್ನಿಧಿಯಲ್ಲಿ.


ಗೆಳೆತನದ ಸನ್ನಿಧಿಯಲ್ಲಿ - ಶುದ್ಧ ಕಾಡು ಹರಟೆ, ನಗೆಯ ವಿಸ್ಫೋಟ, ಪ್ರಬುದ್ಧ ವೈಚಾರಿಕ ವಿಶ್ಲೇಷಣೆ, ಪುಟ್ಟ ಜಗಳ, ಜಗಳದ ನಂತರದ ಹ್ಯಾಂಗೋವರ್,ಕೊನೆಗೆ ಕಣ್ಣುಗಳಲ್ಲೇ ಕೇಳಿಕೊಳ್ಳುವ ಅಪಾಲಜಿ ಎಲ್ಲ ಸಮ್ಮತವೇ ಮತ್ತು ಸುಂದರವೇ.


ಎಂದೋ ಸುಮ್ಮನೆ ಕುಳಿತು ಕಳೆದ ಬದುಕಿನ ಪುಟಗಳನ್ನು ತಿರುವಿ ಹಾಕುವಾಗ, ತಕ್ಷಣ ಮುಖವರಳಿ, ತುಟಿಯಂಚಿನಲ್ಲಿ ತಂತಾನೇ ಮುಗುಳು ನಗೆಯೊಂದು ಮಿಂಚಿದರೆ ಅದಕ್ಕೆ ಕಾರಣ ಒಂದ್ಯಾವುದೋ ಮಧುರ ಗೆಳೆತನದ ನೆನಪಿನ ನರುಗಂಪೇ ಆಗಿರುತ್ತದೆ. ಅಂಥದೊಂದು ಬಿಸುಪು ಗೆಳೆತನಕ್ಕೆ ಮಾತ್ರ ಇರೋಕೆ ಸಾಧ್ಯ. ಮನಸು ಮಗುಚಿ ಬಿದ್ದಂತಾದ ಒಂದು ಘಳಿಗೆಯಲ್ಲಿ ಗೆಳೆತನದ ನೆನಪು ಎಷ್ಟೋ ಹಾಯಾಗಿರುತ್ತದೆ. ಮನಸು ಮತ್ತೆ ಚೇತರಿಸಿಕೊಳ್ಳುವಂತಾಗುತ್ತೆ. ಇವೆಲ್ಲ ಅನುಭವಜನ್ಯ ಸತ್ಯಗಳು.


"ಉಷಃ ಕಾಲದಲ್ಲಿ ಬಾಲ ಭಾಸ್ಕರನ ಹೊಂಗಿರಣದಂತೆ, ಇರುಳ ಬೆಳಗುವ ಚಂದಿರನ ಬೆಳದಿಂಗಳಂತೆ - ಬಾಳ ಪ್ರತಿ ಕ್ಷಣವೂ ಆಹ್ಲಾದಕರವಾಗಿರಲು ಸದಾ ನನ್ನ ಜೊತೆಗಿರಲಿ - ಒಲವು ತುಂಬಿದ ಗೆಳೆತನದ ನರುಗಂಪು."


"ನಮ್ಮನ್ನು ಪ್ರೀತಿಸುವ ಗೆಳೆಯರಿರೋರು ಅದೃಷ್ಟವಂತರು. ಅವರಿಗಿಂತ ಅದೃಷ್ಟವಂತರು - ನಮ್ಮನ್ನು ಪ್ರೀತಿಸುತ್ತಲೇ ನಮ್ಮ ತಪ್ಪುಗಳನ್ನು ದೃಢ ಅಭಿಪ್ರಾಯಗಳ ಮೂಲಕ ಖಂಡಿಸಿ, ನಮ್ಮ ವ್ಯಕ್ತಿತ್ವದ ವಿಕಾಸಕ್ಕೆ ನೆರವಾಗಬಲ್ಲಂಥ ಮಿತ್ರರಿರೋರು."


ನಾವು ದೌರ್ಬಲ್ಯಗಳೆಡೆಗೆ ಜಾರಿದಾಗಲೆಲ್ಲ ತಮ್ಮ ಶುದ್ಧ ಹಸ್ತದಿಂದ ನಮ್ಮ ಕೈ ಹಿಡಿದು ಜಗ್ಗಿ, ಕಿವಿ ಹಿಂಡಿ ಎಚ್ಚರಿಸಿ, ಸಾಧನೆಯ ಮಾರ್ಗದೆಡೆಗೆ ಮುಖ ತಿರುಗಿಸಿ ನಿಲ್ಲಿಸಬಲ್ಲಂಥ ಗೆಳೆಯರನ್ನು, ತಮ್ಮ ಕ್ಷುಲ್ಲಕ ದೌರ್ಬಲ್ಯಗಳಿಗಾಗಿ ಕಳೆದುಕೊಳ್ಳುವಂಥವರು ಮೂರ್ಖರೇ ಸರಿ.


ನನ್ನ ಸನ್ಮಿತ್ರರಿಗೆ - ಒಂದ್ಯಾವುದೋ ಒಳ್ಳೆಯ ವಾಕ್ಯ ಓದಿದಾಗ, ಒಂದು ನಗೆಯ ಸಮ್ಮುಖದಲ್ಲಿ, ಬಾಳ ಮುಸ್ಸಂಜೆಯ ಒಂದು ಮೌನ ಸಂಜೆಯಲ್ಲಿ - ಕಳೆದ ಬದುಕಿನ ಮಧುರ ಘಳಿಗೆಗಳನ್ನು ನೆನಪಿಸಿಕೊಂಡು ಮುದಗೊಳ್ಳುವಾಗ - ಜೊತೆಗೆ ಅವನಿದ್ದಿದ್ದರೆ ಅಂತ ಈ ಮಿತ್ರನ ನೆನಪಾದರೆ ಈ ಜೀವಕ್ಕೆ, ಈ ಜೀವದೊಂದಿಗಿನ ಸ್ನೇಹಕ್ಕೆ ಅಷ್ಟೇ ಸಾರ್ಥಕ್ಯ.




"ಗೆಳೆತನದ ನರುಗಂಪು ನೆರಳಂತೆ ಜೊತೆಗಿರಲಿ.


ಸ್ನೇಹದ ಗಂಗೆ ಜಗದೆಲ್ಲೆಡೆಯಿಂದ ನನ್ನೆಡೆಗೆ ಹರಿದು ಬರಲಿ.


ನನ್ನ ಮನದ ಖುಷಿಯ ಭಾವಗಳ ಕಣಜಾನ ಶ್ರೀಮಂತಗೊಳಿಸಲಿ.


ಭವಿಷ್ಯದ ಪ್ರತಿ ದಿನವೂ ಹೇಮಂತದ ಪೌರ್ಣಿಮೆಯಾಗಲಿ."