Wednesday, January 25, 2017

ಗೊಂಚಲು - ಎರಡ್ನೂರಾರು.....

ಆರು ವರುಷಗಳ ಹುಂಬ ನಡಿಗೆ.....

ಯಾರದೇ ಅಗಾಧತೆಯನ್ನು ಒಪ್ಪದ ನನ್ನ ಹುಳುಕುಟ್ಟೆ ಮನಸು -
ಸೂರ್ಯ ಸುಡುವ ಬೆಂಕಿ,
ಚಂದಿರನೋ ಬೆಳಕಲ್ಲ ಬೆಳಕ ಬಿಂಬ,
ಕಡಲಿದು ಅಶಾಂತ ಒಡಲು,
ಕಾಡೆಂದರೆ ಮಳೆ ಬೆಳಕ ಹಾಡಷ್ಟೇ ಅಂತೆಲ್ಲ ಕವಿತೆ ಬರೆದು ಬೀಗಿತು...

ಇಲ್ಲಿ ಯಾರ ಬದುಕೂ, ಯಾವ ಭಾವವೂ ಸಂಪೂರ್ಣ ಸ್ವಂತವಲ್ಲ - ಎಲ್ಲವೂ ಒಂದಿಲ್ಲೊಂದು ರೀತಿಯಲ್ಲಿ ನಕಲಿಯಂತೆಯೇ ತೋರುತ್ತೆ...  
ಇಂತಿಪ್ಪಾಗ ಇದು ಹೊಸತು ಅನ್ನುವ ಧೈರ್ಯ ನಂಗಂತೂ ಇಲ್ಲ... 

ನನ್ನ ಸ್ವಾರ್ಥವ ನಾನೇ ಒಪ್ಪಿದ ಕ್ಷಣ ನಿಜದ ಸಂತನಾದೇನು - ಆದರೆ ಬೆಳಕನೇ ಉಟ್ಟುಂಬ ಬಯಲಂಥ ಬೆತ್ತಲೆಗೆ ಒಗ್ಗುವ ಆ ಪರಿ ಧೈರ್ಯವ ಎಲ್ಲಿಂದ ಹೆಕ್ಕಿ ತರಲಿ...

ನಿಲುವುಗನ್ನಡಿಯಲ್ಲೂ ನನ್ನ ಬೆನ್ನ ನಿಲುವು ನಂಗೆ ಅಸ್ಪಷ್ಟ...
ನಿನ್ನೆ ಇಂದನು ಹಾಯ್ದು ನಾಳೆಯ ಸೇರುವಾಗ ನಲಿವೂ ಅಳುವಾಗಿ ಬದಲಾಗೋ ವಿಪರ್ಯಾಸದ ದಾರಿಯಲಿ 
ಹೆಜ್ಜೆಗಳಲಿ ನಗೆಯ ಗುರುತುಳಿಸುವುದು ಸುಲಭವಿಲ್ಲ...

ಸಾಹಿತ್ಯ ಸಾಗರದ ಗುಟುಕು ನೀರಿನ ರುಚಿಯೂ ಗೊತ್ತಿಲ್ಲದ ನಾನು - ನನ್ನ ಬದುಕು ಕಟ್ಟಿಕೊಟ್ಟ ಅನುಭವಗಳು, ಅವು ನನ್ನಲ್ಲಿ ರೂಪಿಸಿದ ಚಿತ್ರ ವಿಚಿತ್ರ ಭಾವಗಳು, ಮನಸಿನ ಹುಚ್ಚು ಹಂಬಲಗಳು, ಇನ್ನೂ ಎನೇನೋ ಸೇರಿಸಿ ಹೀಗೆ ಹಾದಿಗುಂಟ ಹಾಯುವಾಗ ಹೆಕ್ಕಿಕೊಂಡ ನಗುವ ಇಲ್ಲಾ ನಡುಗುವ ಎಂತೆಂತೋ ಮಿಣ ಮಿಣ ಭಾವಗಳನೆಲ್ಲ ಶಬ್ಧಗಳ ಮಣಿಮಾಲೆಯಾಗಿಸಿ ಜೋಳಿಗೆಗೆ ತುಂಬಿಟ್ಟೆ - ಆ ಜೋಳಿಗೆಗೋ "ಭಾವಗಳ ಗೊಂಚಲು" ಎಂದು ಅಕ್ಕರೆಯ ಹೆಸರಿಟ್ಟೆ - ನೀವಾದರೋ ಅವನೆಲ್ಲ ನಮ್ಮದು ಕೂಡಾ ಅಂತಂದು ಎತ್ತಿ ಮುದ್ದಿಸಿದಿರಿ...
ಅರೇ ಅನ್ಯಾಯವಾಗಿ ಬರಹಗಾರ ಆಗಿಬಿಟ್ಟೆ... 
ಹಾಗೆ ಬ್ಲಾಗ್‌ ಮಾಡಿ ನನ್ನ ಆ ಆ ಕ್ಷಣಗಳ ಅನುಭವ, ಅನುಭಾವಗಳನ್ನು ಅಕ್ಷರಕ್ಕಿಳಿಸುವ ಹುಂಬತನಕ್ಕಿಳಿದು ಇಂದಿಗೆ ಭರ್ತಿ ಆರು ವರುಷ ತುಂಬಿ ಹೋಯ್ತು...!!!

ನಿನ್ನೆಗಳ ಹಳಹಳಿಕೆಯಲಿ - ನಾಳೆಗಳ ಕನವರಿಕೆಯಲಿ ಕಣ್ಣು ಮೀಯುವಾಗ, 
ಹಾಗಲ್ಲದ _ ಹೀಗೂ ಅಲ್ಲದ _ ಹೇಗ್ಹೇಗೋ ಹೊರಳುವ ಸರಳವಿಲ್ಲದ ವಿಚಾರಗಳಲಿ ಬುದ್ಧಿ ಕೆರಳುವಾಗ, 
ನಾನಿಲ್ಲದ ನಾನು ಬೆಳಕಲ್ಲಿ ನಿಲ್ಲಬೇಕಾದಾಗ,
ಅವರಿವರ ಕಣ್ಣಲ್ಲಿ ನನ್ನ ಹುಡುಕಿ ಸೋತಾಗ,
ನನ್ನವರ ಕಣ್ಣಲ್ಲೇ ನಾ ವಿರೂಪಗೊಂಡಾಗ,
ಇಂಥ ಎಲ್ಲಾ ಸಂದರ್ಭಗಳಲ್ಲೂ ಎದೆಯ ಹಗುರಾಗಿಸಿದ್ದು ಅಕ್ಷರಗಳು... 
ಅಂತೆಲ್ಲ ಅಕ್ಷರಗಳು ಭಾವಗಳ ಗೊಂಚಲೆಂಬ ಹೆಸರಲ್ಲಿ ಇಲ್ಲಿ ದಾಖಲಾಗುತ್ತ ಹೋಗಿ ನಿಮ್ಮ ತಾಕಿದವು... 

ನನ್ನೀ ಪಯಣದಲಿ ದೊಡ್ಡ ಪಾತ್ರ ನಿಮ್ಮದೇ...
ಬರೆದದ್ದನ್ನೇ ಬರೆದೂ ಬರೆದು ಏನನ್ನ ಪಡೆದೆ ಅಂತ ಯಾರಾದರೂ ಕೇಳಿದರೆ ನನ್ನ ಗೆಲುವಿನ ನಗೆ ನೋಟ ನಿಮ್ಮೆಡೆಗೆ...
ಮೊದಲ ದಿನಗಳ ಅದೇ ಭಾವಗಳು ಇಂದಿಗೂ ಬೇರೆ ಬೇರೆ ಪದಪಾದಗಳಲಿ ಹೊರಳುತಲಿದ್ದರೂ ಅಂದಿನದೇ ಪ್ರೀತಿಯಿಂದ ಓದಿ ನನ್ನ ಭಾವಗಳೊಡನೆ ಮಾತಿಗಿಳಿಯುವ ನಿಮ್ಮ ನೇಹದ ಅಕ್ಕರೆಗೆ ಏನಂತ ಹೆಸರಿಡಲಿ... 
ಈ ಪ್ರೀತಿ, ಈ ವಿಶ್ವಾಸ ಹೀಗೇ ನಗುತಿರಲಿ ಎಂಬ ಆಶಯದೊಂದಿಗೆ ನನ್ನೆಲ್ಲ ನೆನಕೆಗಳು ನಿಮಗೆ ಸಲ್ಲುತ್ತವೆ... _/\_ 
                                                       
                                     ವಿಶ್ವಾಸ ವೃದ್ಧಿಸಲಿ - ಶ್ರೀವತ್ಸ ಕಂಚೀಮನೆ   
ಚಿತ್ರ ಕಾಣ್ಕೆ: ಆತ್ಮ ಬಂಧು_"ಸುಮತಿ ದೀಪ" 







Monday, January 16, 2017

ಗೊಂಚಲು - ಎರಡ್ನೂರೈದು.....

ಅವಿರೋಧ ವಿರೋಧಗಳು..... 

ಹಸಿವಿಲ್ಲದೇ ಬದುಕಿಲ್ಲ...
ಕತ್ತಲಿಗೆ ಬೆಳಕಿನ ಹಸಿವು...
ಬೆಳಕಿಗೋ ಬಯಲಿನ ಹಸಿವು...
ಕೊನೆಗೆ ಎಲ್ಲ ನುಂಗುವ ಸಾವಿಗೂ ಮರು ಜನುಮದ ಹಸಿವಂತೆ...
ರೂಹುಗಳನುಳಿಸದೇ ಅಳಿವುದೆಂತು...!!

ಬೆಳಕಲ್ಲಿ ಕಳಕೊಂಡ ನಗುವನು ಇರುಳಲ್ಲಿ ಅರಸುತ್ತೇನೆ - ಮರುಳ ನಾನು; ಷರಾಬಿನಂಗಡಿ ಒಡೆಯ ನಷೆಯನಷ್ಟೇ ಮಾರುತ್ತಾನೆ...
ಅಬ್ಬರದ ಶರಧಿಯಲಿ ನೈದಿಲೆ ಅರಳೀತೇ...??

ಮುಸ್ಸಂಜೆ ತಿರುವಲ್ಲಿ ತೊರೆದೋದ ಜವನಿಕೆಯ ಮುಂಬೆಳಗ ಸೊಕ್ಕಿನಲಿ ಹುಡುಕುತ್ತೇನೆ - ಹುಂಬ ನಾನು; ಕಾಸಿಗೆ ಕೊಂಡ ಸುಖದ ಬೆವರಲ್ಲಿ ತುಸುವೂ ಪ್ರೇಮ ಗಂಧವಿಲ್ಲ...
ಆಗಸದ ತಾರೆ, ಚಂದಿರ ಅಂಗಳದ ಕೊಳದಲ್ಲಿ ಬಿಂಬವಷ್ಟೇ...!!!

ಆಸೆ ಮಡಿಲಲ್ಲಿ ಅಳುವ ಬದುಕೆಂಬೋ ಹಸುಳೆಯ ಸಂತೈಸಲು ಎಷ್ಟೆಲ್ಲ ವೇಷ ತೊಡುತ್ತೇನೆ - ಜಿಗುಟ ನಾನು; ಸಾವಿನ ಹೊಟ್ಟೆಯ ಬೆಂಕಿ ಆರಿದ ಕುರುಹಿಲ್ಲ...
ಮಡಿದ ಮಗುವ ಹಡೆದು ಯಾರಿಗೆ ಹಾಲೂಡಲಿ...???

ಇಲ್ಲಿ ಕರುಳ ತೂಗುವ ಪರಿಪ್ರಶ್ನೆಗಳಿಗೆ ಉತ್ತರವಿಲ್ಲ...

Thursday, January 12, 2017

ಗೊಂಚಲು - ಎರಡ್ನೂರಾ ನಾಕು.....

ಒಂದ್ನಾಕು ಉಪದ್ವ್ಯಾಪಿ ಭಾವಗಳು......   

ಆ ಆ ಸಮಯಕ್ಕೆ ಸಲ್ಲುವಂತೆ, ಎದುರಾದ ಅವಕಾಶಗಳು ಸಲಹಿದಂತೆ, ಬದಲಾದ ಸಂದರ್ಭಗಳು ಬಯಸಿದಂತೆ ತನ್ನ ಇಷ್ಟಾನಿಷ್ಟಗಳಿಗೆ ತನ್ನಿಷ್ಟದ ಹೆಸರಿಟ್ಟುಕೊಳ್ಳುತ್ತಾ, ಅದೇ ಸತ್ಯ ಎಂದು ನಂಬಿಕೊಳ್ಳುತ್ತಾ ನಡೆಯುವ ಈ ಮನಸು ಮಹಾ ಮಾಯಕ... 
ಮತ್ತದು ಕ್ಷಣ ಕ್ಷಣಕೂ ಹುಟ್ಟಿಕೊಳ್ಳುವ ಸಾವಿರ ಸಾವಿರ ಉಪದ್ವ್ಯಾಪಿ ಸಂಚಾರಿ ಭಾವಗಳ ಮಹಾಮನೆಯನ್ನು ನಿಭಾಯಿಸಬೇಕಾದ ಅದರ ಸಹಜ ಸಂಕಟಕ್ಕೆ ಸರಳ ಮದ್ದೂ ಇರಬಹುದು... 
ನಡೆವ ಹಾದಿ, ಹಾದಿಯ ಹೆಸರು, ದಿಕ್ಕುಗಳೆಲ್ಲ ಬದಲಾದರೂ ನಡಿಗೆ ನಿಲ್ಲಬಾರದು - ಕಾರಣ ಬದುಕ ನೆತ್ತಿಯ ಮೇಲೆ ಸಾವಿನ ಋಣಭಾರವಿದೆ...
ಅರೇ - 
ಮೂರೇ ಮೂರು ಹೆಜ್ಜೆ
ಒಂದೇ ಒಂದು ದಿನ
ಅಷ್ಟರಲ್ಲೇ ಈ ಹೆಗಲಿಗೆ ಏಸೊಂದು ಋಣದ ಸುಂಕ...!!!
ಜನ್ಮದ್ದು, ಅನ್ನದ್ದು, ಭಾವದ್ದು, ಬಂಧದ್ದು, ಇನ್ನೂ ಏನೇನೋ...
ಬದುಕಿದು ಋಣಾಋಣಗಳ ಮೂರುಸಂಜೆಯ ಮರಿಸಂತೆಯಂತಿದೆ...
ಇಂತಿಪ್ಪ ಹೊತ್ತಲ್ಲಿ ತನ್ನುಳಿವಿಗೆ ಮನಸು ಮಂಗನಂತಾಡಿದರೆ ಹಳಿಯುವುದು ಹೇಗದನು...
```!!!```
ಇಲ್ಲಿ ಹೆಜ್ಜೆ ಹೆಜ್ಜೆಗೂ 'ಪ್ರೇಮಿ'ಗಳು - ಹುಡುಕಹೋದರೆ 'ಪ್ರೇಮ' ಮಾತ್ರ ಮರೀಚಿಕೆ...
ಕೇರಿಗೆ ಮೂರು ಶ್ರೀಮಂತ ಗುಡಿಗಳು - ಬಾಗಿಲ ಸೇವಕನ ಮನೇಲಿ ದಿನವೂ ಏಕಾದಶಿ...
'ಪ್ರೇಮ' ಮತ್ತು 'ಭಕ್ತಿ'ಗಳೆಲ್ಲ ನಾಮಪದಗಳಷ್ಟೇ -  ಮಡಿ, ಮಂತ್ರ, ತಂತ್ರ, ಅಲಂಕಾರ, ಅಹಂಕಾರಗಳೇ ವಿಜ್ರಂಭಿಸುವಲ್ಲಿ...
```!!!```
ಜನ್ಮ ಸಾವಿರ ಸಿಕ್ಕರೇನು ಎದೆಯ ಕನಸೇ ತೊರೆದ ಮೇಲೆ...
ಎಲ್ಲ ಹಸಿರಿನ ನಡುವೆ ನಾನಿಲ್ಲಿ ಬೇರು ಬೆಂದ ಒಂಟೊಂಟಿ ಬೋಳು ಮರ...
ಏನ್ಗೊತ್ತಾ -
ಶಬ್ಧಕೋಶವ ಕವಿತೆಯೆಂದು ಬಣ್ಣಿಸಿದಂತಿದೆ ಕನಸಿಲ್ಲದೀ ಹಾದಿ...
```!!!```
ಹೇ ಇರುಳ ಸವತಿಯೇ -
ಈ ಮಾಗಿಯ ಮುಂಜಾವಿನ ಅಡ್ನಾಡಿ ಮಳೆಯಲಿ ಕೊಡೆಯಿಲ್ಲದೆ ನಡೆವಾಗ ನನ್ನ ಹುಚ್ಚು ಹರೆಯ ನಿನ್ನೆದೆ-ನಡುವಿನ ಬೆಂಕಿಯ ಕನವರಿಸಿದರೆ ಪೋಲಿ ಎಂದು ಬೈಯ್ಯದಿರೇ ಹುಡುಗೀ; ಕಾರ್ತೀಕ ಕಳೆದಿದೆ ಇಲ್ಲಿ ಊರ ಹೆಬ್ಬಾಗಿಲಲಿ ತೋರಣ, ವಾಲಗಗಳದ್ದೇ ಕಾರುಬಾರಿನ ಕಾಲ ಕಣೇ... ;)
```!!!```
ಅವಳೆಂದರೆ ಹಾಡು...
ಅವಳೆಂದರೆ ಗೂಡು...
ಅವಳೆಂದರೆ ಮಳೆ...
ಅವಳೆಂದರೆ ಇಳೆ...
ಅವಳೆಂದರೆ ಮೊಳಕೆ...
ಥತ್ - ಅವಳಿಗಿದೆಲ್ಲ ಯಾವ ಹೋಲಿಕೆ...
ಅವಳೆಂದರೆ ಅವಳು ಅಷ್ಟೇ...
ನನ್ನಾಸೆಯ ಕನಸಿನ ಕಿಡಿ...
ನನ್ನಾತ್ಮದ ನೆನಪಿನ ಹುಡಿ...
..................ಮತ್ತೇನಿಲ್ಲ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Monday, January 2, 2017

ಗೊಂಚಲು - ಎರಡ್ನೂರಾ ಮೂರು.....

ಹೀಗಿಷ್ಟು ಹಲುಬಾಟ.....

ನನ್ನ ಕೂಡುವ ಯಾವ ನೋವಿಗೆ ಎಷ್ಟು ಕಣ್ಣೀರು, ಯಾವ ನಲಿವಿಗೆ ಎಷ್ಟು ನಗು ಆಯ್ಕೆ ನನ್ನದೇ...
ಕಾಲಿನ ಕಸುವು, ದಾರಿಯ ಏರು - ತಿರುವು; ಉಹುಂ ಬದುಕ ಕರುಣೆಯ ಬಗೆಗೀಗ ತಕರಾರುಗಳಿಲ್ಲಿಲ್ಲ...
ಬದುಕು ಪೂರಾ ಪೂರಾ ಅರ್ಥವಾಯಿತೆಂಬ ಕೊಂಬಾಗಲೀ, ಅರ್ಥವಾಗಲೇಬೇಕೆಂಬ ಹುಂಬತನವಾಗಲೀ ಉಳಿದಿಲ್ಲ...
ಗೊತ್ತು ಸಾವಿಲ್ಲದ ಮನೆಯ ಸಾಸಿವೆಯ ತರಲಾಗದು - ಬದಲು ಸಾವಿನ ಮನೆಯಲೂ ಒಂದಿನಿತು ನಗೆಯ ಹೆಜ್ಜೆಗುರುತನುಳಿಸಬಹುದಲ್ಲ - ಬದುಕಿರುವವರ ಬದುಕಿಗಾಗಿ...
ನಗು ನನ್ನ ಅಂತಿಮ ಆಯ್ಕೆ - ಸಾವಿನಲ್ಲೂ...
ಸಾವಿಗೂ ನಗೆ ತುಂಬುವಾಸೆ ಅಹಂಕಾರವಾದರೆ ನಾನು ದುರಹಂಕಾರಿ...
~_~_~_~_~

ನಿರಂತರ ಅಳುವಿಗೆ ಒಗ್ಗಿ ಹೋಗಿ ನಿತ್ಯದ ಚಿಕ್ಕ ಪುಟ್ಟ ಖುಷಿಗಳನು ನಿರಾಕರಿಸೋ ಮನಸಿಗೆ ಅರ್ಥವಾಗಬೇಕಾದದ್ದಿಷ್ಟೆ:
ಹಾದಿ ತಿರುವಿದ್ದಷ್ಟೂ ಹೊಸತನ ಮತ್ತು ಬಿದ್ದೆದ್ದ ಕಲೆಗಳಿದ್ದಷ್ಟೂ ಎಚ್ಚರ ನಡಿಗೆಗೆ...
ಒಂದೇ ಲಯದಲ್ಲಿ ಬದುಕ್ತಾ ಬದುಕ್ತಾ ಬದುಕೋದೂ ಗಾಣದೆತ್ತಿನ ಖಾಯಂ ಕಾಯಕವಾಗಿ ಹೋಗುತ್ತೆ...
ಸಹಜ ಅಭ್ಯಾಸವಾದ ಎಲ್ಲವೂ ಏಕತಾನದ ಸುಳಿಗೆ ಬಿದ್ದು ಜಡವಾಗುತ್ತ ಸಾಗುತ್ತೆ...
ಉಸಿರಿಗೊಮ್ಮೆ ಸಾವಿನ ಘಮಲು ಸೋಕಿತಾ - ಅಲ್ಲಿಂದಾಚೆ ಬದುಕ ವೇಗ, ಆವೇಗಗಳೇ ಬೇರೆ...
~_~_~_~_~

ಬೆಳಕು ಬಯಲ ಬೈರಾಗಿ - ಒಳಮನೆಗೋ ಅದು ಬರೀ ಅಥಿತಿ...
ಕತ್ತಲು ಗೃಹ ಬಂಧಿ - ಬಯಲಿಗೆ ಬಿದ್ದರೆ ಅಲ್ಲೇ ಅದರ ಸಮಾಧಿ...
ಬಯಲಾಗಲಿ ಈ ಬದುಕು...
~_~_~_~_~

ಮೌನ ಮನಸಿನ ರಕ್ಷಣಾ ಗೋಡೆ...
ಮಾತು ಪ್ರೀತಿಯ ವಾಹಕ ನಡೆ...
ಮಾತಾಗಲಿ ಎಲ್ಲ ಕನಸೂ...
~_~_~_~_~

ಎಷ್ಟು ಬಡಿಸಿದರೂ ಇಂಗಿತೆಂಬುದಿಲ್ಲದ ಈ ಬದುಕಿನ ಹಸಿ ಹಸಿ ಹಸಿವು - ನಗು...
ತುಸುವೇ ತಿಂದರೂ ತುಂಬಿ ಉಬ್ಬರಿಸಿ ಉರಿ ಉರಿ ತೇಗು - ನೋವು...
~_~_~_~_~

ಉಫ್!!!
ನನ್ನ ಮೆದುಳಿನ ಸಂಯೋಜನೆಯೇ ಖರಾಬಿರಬಹುದೇನೋ..!!
ಅದರ ಯೋಚನಾ ಲಹರಿಯಲ್ಲೇ ಐಬಿರಬಹುದೆನಿಸುತ್ತೆ..!!!

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)