Friday, May 1, 2020

ಗೊಂಚಲು - ಮುನ್ನೂರ್ಮೂವತ್ನಾಕು.....

ಪ್ರಣಯಾಗ್ನಿರಾಗ.....

ಈ ಎದೆಯ ಬಡಿತ ಆ ಎದೆಯ ಮಿಡಿತ ಬೆರೆತ ಸುರತದಲಿ ಸಳಸಳನೆ ಸುರಿದ ಸುಖದ ಬೆವರು...
ಸ್ವರ್ಗದೂರಿನ ಹಾದಿಯ ಮಳೆಯಂಥ ಆ ಸ್ವೇದಸೆಲೆಯೇ ಇರುಳ ಸೌಂದರ್ಯದ ಭಾಷೆ, ಭಾಷ್ಯ ಎರಡೂ...
#ಪ್ರಣಯ_ಪ್ರಮೋದ...
↺↜⇞↝↻

ಬಿನ್ನಾಣಗಿತ್ತೀ -
ಕನಸಲ್ಲಿ ನೀ ಬಿಂಕದಿ ಸೊಂಟ ತಿರುವಿ, ನಾಚಿಕೆಯ ವಸನವಳಿದು ಇಷ್ಟಿಷ್ಟೇ ಅರಳೋ ಚಂದವ ಬೆಳದಿಂಗಳ ಕಿವಿಯಲ್ಲುಸುರಿದೆ - ಚಂದಿರನೋ ಹೊಟ್ಟೆಕಿಚ್ಚಿನಲಿ ಮೋಡವ ಹೊದ್ದುಕೊಂಡ...
ಕಣ್ಣ ಗೋಳದ ಅಂಚಿನಲಿ ಮುಚ್ಚಳವಿಲ್ಲದ ಬಣ್ಣದ ಕುಡಿಕೆಗಳು ಉರುಳಿ ಬಿದ್ದಿವೆ...
#ಅಂತಃಪುರದ_ಬೆತ್ತಲೆ_ಬೆಳಕು...
↺↜⇞↝↻

ಗರಿ ಬಿಚ್ಚಿದ ನವಿಲು - ಗುಮಿಗುಡುವ ಮೋಡ ಬಾನು - ಹಸಿರು ಹೊದ್ದ ಗಿರಿ ಕಣಿವೆ - ಘಮ್ಮೆನ್ನೋ ಮಣ್ಣ ಬಯಲು; ಯಾವುದು ಸಮವಿಲ್ಲಿ ಹೆರಳಿನಾಚೆ ಕೈಚಾಚಿ ಕಿರುನಗುವ ಅರಳು ಹರೆಯದ ಹೆಣ್ಣ ಒನಪಿಗೆ, ಎಲ್ಲ ಆಪೋಶನ ಅವಳೆದೆಯ ಬಿಚ್ಚು ಬೆಳಕಿಗೆ...
#ಪ್ರಣಯಗಂಧಿ...
↺↜⇞↝↻

ಬಿಸಿ ಉಸಿರಿನೊಡಗೂಡಿ ತಂಪು ಬೆಳದಿಂಗಳೂ ಬರಿಮೈ ಬೆಂಕಿಯಲಿ ಹಾಯುವ ನಟ್ಟಿರುಳ ಸೊಬಗು - ಬಿಸಿಲ ಮಚ್ಚಿನ ಏಕಾಂತದಲಿ ಕಾಂತಾಕಾಂತೆ ಉತ್ಕಂಠ ಪ್ರಣಯ ಸಂಹಿತೆ...
ಮೈಯ್ಯ ಯಾವ ತಿರುವಲ್ಲೂ ಚೂರೇ ಚೂರೂ ಹಸಿವು ಬಾಕಿ ಉಳಿಯದ ಹಾಗೆ ಅಡಿ ಮುಡಿ ಹಿಡಿ ಹಿಡಿ ಆವರಿಸಿ ಜೀವತಂತುಗಳ ಮೀಟಿ ಚೆಲುವನುಂಡು ಸುಖವನುಣಿಸಿ ನುಲಿಸಿ ನಲಿವ ಕಾಂಕ್ಷೆಯ ಕುದಿಯಲ್ಲಿ ಕರಗಿ ವಿವಶವಾಗುವ ಜೀವಭಾವೋತ್ಸವ ರಾಗ ಸಂಯೋಗ...
ಸುಖದ ಸವಿ ಸುಸ್ತಿನಲಿ ತೂಗುವ ಮತ್ತ ಮುಂಜಾವಿನ ಕಣ್ಣ ಸರಸಿಯಲಿ ತೇಲುವ ಪ್ರೇಮ ದೀಪ...
#ನೀಲಿ_ನೀಲಿ_ಕನಸಿನಂತಃಪುರದ_ಬೆಚ್ಚಾನೆ_ಬೆಳಕು...
↺↜⇞↝↻

ಅವಳ ಎದೆ ಕಣಿವೆಯ ಕಿರು ದಾರಿಯ ಶುರುವಾತಿನ ತಿಳಿಗತ್ತಲ ಮಗ್ಗುಲಲ್ಲಿ ಹೊಸ ಮಚ್ಚೆಯೊಂದು ಅರಳಿದೆ - ಗಿರಿ ಚೆಲುವಿಗೆ ಕಣ್ಣೆಸರು ತಾಕದಂಗೆ ಕಾಯೋ ಕಿಲ್ಲೆದಾರನಂತೆ ಮಿರುಗಿದೆ...
ಅದೀಗ ನನ್ನ ಸುಡು ತುಟಿಗಳ ಮೊದಲ ಮುದ್ದಿನ ಹಕ್ಕುದಾರ...
#ಪ್ರಣಯಾಗ್ನಿರಾಗ...
↺↜⇞↝↻

ಬೆಳುದಿಂಗಳ ಬಯಲ ಸೆರಗಿನ ನಿನ್ನಂದದ ಒಳ ಮಡತೆಗಳ ಮಿಡಿತಗಳ ಸುಳಿ ಸುಳಿ ಕಾವ್ಯಾನಂದ...
ಬೆಳಕಿನುಸಿರ ಕಲಕುವ ಅರೆಗತ್ತಲ ಪತ್ತಲ ಹೊದ್ದ ಗಿರಿ ಕಂದರ ಕಿಲ್ಲೆಗಳ ಆರೋಹಣ ಅವರೋಹಣಗಳ ಮಹಾಮೋಹದ ಸಾಹಸೀ ದಿವ್ಯಾನಂದ...
ಹಿತವಾಗಿ ಸುಡುವ ನಿನ್ನ ನವಿರು ಬೆತ್ತಲೆ ಬೆಳಕು...
ಸದಾ ಎಚ್ಚರ ನಿನ್ನೆಡೆಗೆ ಈ ಮಧುರ ಪಾಪದ ಹಸಿವು...
#ನೀನೆಂಬೋ_ಭಾವದೊಕ್ಕಲು...
↺↜⇞↝↻

ನಾಭಿ ಬಳ್ಳಿಯ ಮಿಂಚಿನ ಸೆಳಕಾದ ಕನಸೇ - 
ನಿನ್ನ ನಶೆಯಲ್ಲಿ ಮರೆತೆಲ್ಲ ಕೆಲಸಗಳ ಪಟ್ಟಿ ಮಾಡಬೇಕು...
ಆ ಮೃದುಲ ತಪ್ಪುಗಳಿಗೆಲ್ಲ ರಸಜ್ಞ ಬೊಮ್ಮನನೇ ಹೊಣೆ ಮಾಡಬೇಕು...
#ಸಮಯಾಸಮಯವುಂಟೇ_ಚೆಲುವು_ಕಾಡಲು...
↺↜⇞↝↻

ಮುಸ್ಸಂಜೆಯ ಕಣ್ಣಿಗೆ ಬೆತ್ತಲೆ ಬೆಳಕನುಡಿಸಿ ಎದೆ ಹಸಿವ ಮೀಟುವವಳೇ -
ಕಣ್ಣಿಂದ ಕರುಳಿಗಿಳಿದ ನಿನ್ನ ಚೆಲುವೆಂಬೋ ಶರಾಬಿನ ಖದರಿಗೆ ನಾಭಿಚಕ್ರ ಸುಡುತಲಿದೆ...
ಇರುಳ ರಂಗಮಂಚದಲಿ ಕನಸು ನಾಗ ನೃತ್ಯೋತ್ಸವ...
ಕತ್ತಲೆಯ ಗೂಡಿನ ಬೆಚ್ಚಾನೆ ಬೆಳಕೇ -
ಭಾವದಲ್ಲೊಂದು ತೀವ್ರ ನಶೆಯಿಲ್ಲದೇ ನಿನ್ನೊಳಿಳಿದು ನಿನ್ನ ತಾಕುವುದಾದರೂ ಹೆಂಗೆ...
#ಸಂಭ್ರಾಂತಿ...
↺↜⇞↝↻

ನನ್ನ ತೋಳಲ್ಲರಳುವ ಸುಖದ ಹೂವಲ್ಲಿ ನಿನ್ನ ಪ್ರೇಮದ ಚಂದ ಬಂಧ...
ಇರುಳ ಸುಗ್ಗಿ ಕುಣಿದೆದ್ದ ನನ್ನ ಬೆವರಲ್ಲಿ ನಿನ್ನ ಗಂಧ...
#ಈ_ಇರುಳೆಷ್ಟು_ಚಂದ...
#ಸುರತ_ಲೋಬಾನೆ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

ಗೊಂಚಲು - ಮುನ್ನೂರ್ಮೂವತ್ಮೂರು.....

ಕೌದಿಯೊಳಗಣ ಸಜೀವ ಕೆಂಡ.....

ಸೋನೆ ಮಳೆಯ ಮೈಗೆ ಮಣ್ಣ ಘಮ ಅಂಟಿದೆ...
ಅಧರ ಮಧುವ ಕುಡಿಯುವಾಗ ಪುಪ್ಪುಸ ಸೇರಿದ ನವಿರು ಕಂಪು ಅಲ್ಲೇ ಮನೆ ಮಾಡಿದೆ...
ವಿರಹದಿರುಳ ಮರುಳಿನಲ್ಲಿ ನಿನ್ನಂದದ ಸ್ವಪ್ನವನು ಹಾಸುವುದಾ ಇಲ್ಲಾ ಹೊದೆಯುವುದಾ...
ಅದಲೀ ಬದಲಿ ಕೂಟದಲ್ಲಿ ತಳಕಂಬಳಕ ತೆಕ್ಕೆ ಬಿದ್ದ ಬಿಗಿಯ ನಡುವೆ ಗಾಳಿಗೆಲ್ಲಿ ಜಾಗ ಬಿಡಲಿ...
#ಕಾಮನಮಲು...
↞↟↡↠

ಸಜೀವ ವಿಗ್ರಹವೇ -
ತಂಬೂರಿಯ ಮೀಟಿ ಬಂದ ಕೈಯ್ಯ ರಸಿಕ ಗುಂಗಲ್ಲಿ ಅಂಗನೆಯೆ ನಿನ್ನಂಗದ ಮೃದು ಗುಂಬಜುಗಳ ಬರೆದಂತಿದೆ ಆ ಬೊಮ್ಮ...
ಅಂದೆಂದೋ ಸಮೃದ್ಧ ಕೊಂಡಾಟದ ಇಡೀ ಇರುಳು ನಿನ್ನ ಎದೆ ಗೊಂಚಲ ಕೊರಕಲಿನಲಿ ಉಸಿರು ಸುಸ್ತಾಗಿ ಪವಡಿಸಿದ ಸುಖೀ ಘಳಿಗೆಯ ನೆನಪೊಂದು ಮತ್ತೆ ಮತ್ತೆ ನಾಭಿಮೂಲದಿಂದ ನಡುನೆತ್ತಿಯವರೆಗೆ ಸುಳಿಸುಳಿದು ಜೀವವ ಝಲ್ಲೆನಿಸುವಲ್ಲಿ ಈ ಮೂರಡಿ ಆರಡಿ ಜೀವನದ ದುರ್ಭಿಕ್ಷ ರಾತ್ರಿಗಳೂ ಸಹನೀಯ ನೋಡು...
#ಸ್ವಪ್ನ_ಸಂಗಾತ...
↞↟↡↠

ಎದೆ ಮಿದುವಿನೇರಿ - ಚಂದ್ರನ ಕಲೆಯಂದದ ಒಂಟಿ ಮಚ್ಚೆ - ಕುಪ್ಪಸದಲಿ ಅವನನೇ ಬಚ್ಚಿಟ್ಟುಕೊಂಡಂತ ಅಬ್ಬರ...
ಕಾರಣ -
ಮಚ್ಚೆಯ ಕಚ್ಚಿಹಿಡಿವ ಅವನ ಕಣ್ಣ ಮೋಹದ ಮುದ್ರೆಯುಂಗುರ...
#ದೃಷ್ಟಿ...
↞↟↡↠

ಅಯ್ಯೋ ನನ್ನ ದಾಹವೇ - ಬಗೆದು ಮುಗಿಯದ ಮೋಹವೇ...
ತುಟಿಯು ತುಟಿಯ ಕಚ್ಚಿ - ನಡುವಿಗಾದ ಗಾಯ...
ಹಲ್ಲ ಬೇಲಿಯ ದಾಟಿ ನಾಲಗೆಯು ಜಿಹ್ವೆಯಾಳವನೆಲ್ಲ ತೀಡಿ - ರತಿಯ ರಣರಾಗದ ಓಂಕಾರಕೆ ಕಣ ಕಣ ಶ್ರುತಿಗೊಂಡು ಮಿಡಿದ ನರನಾಡಿ...
ಕರತಲ ಇಂದ್ರಜಾಲ ಮಂತ್ರ ತಂತ್ರಕೆ - ಎವೆ ಮುಚ್ಚಿದ ಸಮ್ಮೋಹಕ ಆಹಾಕಾರಕೆ...
ಆಹ್...
ಎಲ್ಲಾ ಇಲ್ಲೆಲ್ಲಾ ಮಾಯವು - ಅದೂ ಇದೂ ಉಳಿದೆಲ್ಲವೂ ಮಿಥ್ಯವು - 'ಕಾಮಾ' ನೀನೊಂದೇ ಸತ್ಯವು...
ಇಂತಾಗಿ -
ಹಿಂಗದಿರು ನನ್ನೊಳ ದಾಹವೇ - ಮತ್ತೆ ಮತ್ತೆ ಹೊಸತೇ ಆಗಿ ಹುಟ್ಟುತಿರು ಮೋಹವೇ...
#ನಶೆ...
↞↟↡↠

ಹಸಿದ ಕೂಸಿನ ಹಾಲ್ಬಾಯಿ ಕನಸು ಹಾಳು ಸುರಿವ ರಾತ್ರಿಗಳ ಬೆವರಿಳಿಸೋ ನಿನ್ನ ಬೇಹದ್ ಮಾದಕತೆ...
ನಿನ್ನ ತಾಜಾ ಚೆಲುವಿನ ತೆಕ್ಕೆಯಲ್ಲಿ ನನ್ನ ಹುಟ್ಟಾ ಪೋಲಿತನವೆಲ್ಲ ಮದವಳಿದು ಸುಟ್ಟು ಕಮ್ಮನೆ ಹಬೆಯಾಗಿ ಹರಡಿದ ಅನಿರ್ವಚನೀಯ ಸುಸ್ತಲ್ಲಿ ಇರುಳ ಮೈಯ್ಗೀಗ ಜನ್ಮಾಂತರ ತಾಜಾತನ...
ಸ್ವಪ್ನ ಸುರಿದ ಸುಖಕ್ಕೆ ಸಾಕ್ಷಿ ಚಂಚಲ ಮಿಂಚಿನ ಕಣ್ಣುಗಳೇ...
#ಕೌದಿಯೊಳಗಣ_ಸಜೀವ_ಕೆಂಡ...
↞↟↡↠

ನಡು ಮಧ್ಯಾಹ್ನದ ನಡು ಮಡುವ ಮತ್ತೇರಿಸೋ ಮೃದ್ವಂಗೀ -
ನಿನ್ನ ಚೆಲುವ ಪರಿಪಾಕ ಸಹವಾಸದಲಿ ಕಣ್ಣು ತೂಗಿ, ನಾಭಿ ಚಕ್ರದಾಳದಿಂದ ಭಗ್ಗೆನುವ ಬೆಂಕಿ ಸುಳಿಯೆದುರು ಸುಡು ಸೂರ್ಯನೂ ಮಂಕು ಮಂಕು...
ನನ್ನೆಲ್ಲಾ ಪೋಲಿ ಪ್ರಲಾಪ ಪ್ರತಾಪಗಳೂ ನಿನ್ನ ತೋಳಲ್ಲೇ ಗತಿ ಕಾಣಲಿ...
#ಸುಖ_ಸಂಕ್ರಮಣ...
↞↟↡↠

"ಹೆಣ್ಣನು ಹಾಡದೇ ಚೆಲುವನು ಹೇಳಲಿ ಹೇಗೆ..."
ಹೆಣ್ಣೇ ನಿನಗೆ ನಿನ್ನ ಅಂದ ಚಂದವೆಲ್ಲ ನಿನ್ನ ಕನ್ನಡಿಯಲಿನ ಮೆರಗಷ್ಟೇ ಇದ್ದೀತು - ನನ್ನೆದೆಯ ಕಣ್ಣಿಗಲ್ಲವಾ ಅದು ಲಾವಣ್ಯದ ಸುಗ್ಗಿ ಸೊಬಗು...
ಪ್ರಕೃತಿಗೆ ವಸಂತವೂ, ಗ್ರೀಷ್ಮವೂ ಸಹಜಾತಿಸಹಜ ಚರ್ಯೆ... 
ಅದನ್ನ ನೋಡೋ ಕಣ್ಣಿಗೆ, ಅದರೊಡನಾಡೋ ರಸಿಕ ಜೀವಿಗಲ್ಲವೇ ಅದರ ನಲಿವು, ನೋವು, ಬೆಡಗು, ಬಿನ್ನಾಣಗಳ ಭಾಷ್ಯದ ಹಂಗು ಗುಂಗು...
#ಪರಾಕು...
↞↟↡↠

ಹೊಕ್ಕುಳ ಸುಳಿ ಚುಂಬನ - ನಿತಂಬ ದಿಬ್ಬ ಆಲಿಂಗನ - ಪಥ್ಯ ಅರಿಯದ ಬೆರಳುಗಳ ಮೈ ದಂಡೆಯ ಓತಪ್ರೋತ ಸಂಚರಣ - ದಿಕ್ಕು ತಪ್ಪಿದ ಉಸಿರು - ಊರು ಕಣಿವೆಯ ಭೇರಿ - ನರ ನರ ನುರಿ ನುರಿ ಹುರಿಗಟ್ಟಿ ಸಿಡಿದು ಸೊಕ್ಕಿ ಹರಿಯುವ ನೆತ್ತರು - ಮರಮರಳಿ ಉರುಳುರುಳಿ ಅಪಾದಮಸ್ತಕ ತುಯ್ಯುವ ಚರಮಸೀಮೆಯ ಆಭೋಗ - ಆ ಸುಖಾಂತ ಸೀಮೆಯಲಿ ಮಳೆ ಮಣ್ಣು ಮಿಳಿತ ಮೆದು ಗಂಧ ಬಯಲ ಸೇರಿದಂಗೆ ಹೆಣ್ಣು ಘಮ, ಗಂಡು ಘಾಟು ಕರುಳ ತಬ್ಬಿ ಮೈನೆರೆದರೆ ಆ ನಶೆಯ ಮೈಮರೆವಿಗೆ ನನ್ನ ನಿನ್ನ ಹೆಸರು...
#ಮಿಳನ_ಅಂಗರಾಗ...
↞↟↡↠

ಬೆನ್ನ ಹುರಿಗುಂಟ ಬೆರಳು ಬರೆದು ಹೊಕ್ಕುಳಾಳದಲಿ ಪ್ರಕಟಗೊಂಡ ಮಿಥುನ ಕಾವ್ಯ - ಅಂಟಿಕೊಂಡ ಜೋಡಿ ಹೆಸರು...
#ಶ್ರೀ______

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

ಗೊಂಚಲು - ಮುನ್ನೂರ್ಮೂವತ್ತೆರಡು.....

ಸ್ವಪ್ನ ಸೋಮಪಾನ.....

ನೀಲಿ ಹಾಸಿನ ಮಾಯಾ ಲೋಕದ ಅಲಂಕಾರಗಳಲಿ ಬೆರಗಿಂದ ಕಣ್ಣು ತೋಯುತ್ತ ನಿನ್ನ ಸಹವಾಸದ ನೆನಪಿನೂಟ - ಮಡಿ ಅರಿಯದ ಮನಸಿನ ಕಚಗುಳಿಯ ಮೋಹದಾಟ...
ತಾರೆಗಳ ತೋಟಕ್ಕೆ ಬೇಲಿಯಿಲ್ಲವಷ್ಟೇ - ಬಾನೆಂಬ ಬೆಳಕ ಬಯಲೆನಗೆ ನಿನ್ನ ನಗೆಯಷ್ಟೇ...
ಇಲ್ಲೀಗ ನೀನಿರಬೇಕಿತ್ತು - ಬೆಳದಿಂಗಳಲ್ಲಿ ನೆರಳ ಅಳೆಯುವ ಆಟದಲ್ಲಿ ಎದೆಯ ಹಾಡನು ಮತ್ತೆ ಕೇಳಬಹುದಿತ್ತು...
ಮೋಹ ಕವಿತೆಯಾಗುವ ಮುತ್ತು - ಬೆಳದಿಂಗಳೂಟ ಕವಿತೆ ಈ ಹೊತ್ತು...
#ಮುಸ್ಸಂಜೆ_ಕನಸು...
⇐⇎⇒

ನಿನ್ನ ನೆನಪಿನ ತಂಪಲ್ಲಿ ಸುಡುಸುಡುವ ಮಧ್ಯಾಹ್ನಗಳ ಪ್ರಾರ್ಥನೆ: 
"ಬದುಕು ಬೇಯುವುದಾದರೆ ನಿನ್ನ ತೋಳ ಬೆಂಕಿಯಲ್ಲಿ ಬೇಯಬೇಕು..."
ಸ್ವಯಂ ಬಂಧಿ ಕೋಣೆಯ ತುಂಬಾ ಬಯಕೆ ಧೂಪ ಹೊಗೆಯಾಡುತ್ತದೆ...
ಪರವಶ ಹರೆಯದ ಮೈ ಹೂ ಅರಳಲು ಹೊತ್ತು ಗೊತ್ತಿಲ್ಲ...
#ಸುಭಗತನವ_ಕದಡೋ_ಮಧ್ಯಾಹ್ನಗಳು...
⇐⇎⇒

ಯಾರೂ ಸೋಕಿರದ ಎನ್ನೆದೆಯ ಮಿದುವು ನಿನ್ನ ನೋಟದ ಬಿಸಿಗೆ ಬಿಗಿಯಾಗುವಾಗ - ಕತ್ತಲು ಬಿಚ್ಚಿಕೊಳ್ಳುವ ಮೂರು ಘಳಿಗೆ ಮುನ್ನವೇ ಕನಸ ಸೆರಗು ಸುಖದ ಮೈಮುರಿಯುತ್ತೆ...
ಹೆಣ್ಣೆದೆಯ ಕನಸು ಕಲ್ಪನೆಯಲಿ ಗಂಡು ನೀ ಹಸಿವಾಗಿ ಅರಳುವ ಪರಿಗೆ ಒಂಟಿ ಇರುಳಲ್ಲೂ ನಾಚಿಕೆಯ ಬಳ್ಳಿ ಮೈಯ್ಯೆಲ್ಲಾ ಹಬ್ಬುವುದು - ಪುರುಷಾಕಾರವೇ ನಿನ್ನ ಇನ್ಹೇಗೆ ಹೊಗಳುವುದು...
#ನೀನೀಗ_ಬಿರಿದ_ಮೊಲೆಹೂ_ಕಿಬ್ಬಿಗಳಿಂದ_ಸಿಡಿದ_ಹನಿಹನಿ_ಬೆವರು...
⇐⇎⇒

ನಿಶೆಯ ಕನಸಲ್ಲಿ ಕೂಡಿಯಾಡಿದ ಮಧುರ ಪಾಪದ ಗಾಯ - ಹಗಲೆಲ್ಲ ತುಟಿ ಸವರೋ ನಾಲಿಗೆಯಲಿ ಆ ನೆನಹಿನ ಪೇಯ...
ಕಣ್ಣ ಹಸಿವು - ನಿನ್ನ ಚೆಲುವು - ರುಚಿಯಾದ ಮರುಳು...
#ಸ್ವಪ್ನ_ಸೋಮಪಾನ...
⇐⇎⇒

ಬೆಳದಿಂಗಳು ಕತ್ತಲನು ಹನಿಹನಿಯಾಗಿ ತೊಳೆಯುವಂತೆ ನಿನ್ನಂದವ ಇಷ್ಟಿಷ್ಟೇ ಪರಿಚಯಿಸುತ್ತಾ ಲಾಗಾಯ್ತಿನಿಂದಲೂ ದುಪ್ಪಟಿಯೊಳಗಿನ ಹಸಿ ಹರೆಯದ ಕ್ರುದ್ಧ ಏಕಾಂತಕೆ ಬೆಚ್ಚಾನೆ ಉಸಿರ ಬಣ್ಣ ತುಂಬುತ್ತಿರೋ ಕನಸ ಮುಲುಕುಗಳಿಗೆ ಬೆಳಕಲ್ಲಿ ನೀನೊಂದು ಚೌಕಟ್ಟಿಲ್ಲದ ಅಪರಿಚಿತ ಭಾವ ಎಂಬುದರೆಡೆಗೆ ಕಿಂಚಿತ್ತೂ ಕಸರಿಲ್ಲ ನೋಡು...
#ನೀನೆಂಬೋ_ಸುಖಸ್ವಪ್ನ...
⇐⇎⇒

ಹೇ ಗುಡುಗಿನ ನಗೆಯವನೇ -
ನನ್ನ ನನಗೆ ಕೊಟ್ಟು ಹೋಗು...
ನಿನ್ನೆದೆಯಲಿನ ಕರಡಿ ಪ್ರೀತಿ - ಕಣ್ಣಲ್ಲಿನ ರಕ್ಕಸ ಬಯಕೆ - ಅಲ್ಲೇ ಡ್ರಾ ಅಲ್ಲೇ ಬಹುಮಾನ ಅನ್ನುವಂತ ಚೂರೂ ಕಸರಿಲ್ಲದ ವಾಚಾಳಿತನ - ಹುಸಿ ಮುನಿಸಿಗೂ ಭಯಬಿದ್ದು ಮಾರು ದೂರ ಓಡೋ ಮಳ್ಳು ಬೋಳೇತನ - ಬೆನ್ನಲ್ಲೇ ಅಟ್ಟಾಡಿಸಿ ಕಾಡಿ ಹೆಣ್ಣಾಸೆ ಅರಳಿಸುವ ಹುಚ್ಚುಚ್ಚು ತುಂಟತನ - 'ತೋಳ ಬಂಧಕೆ ಸಿಕ್ಕಿ ನೋಡು' ಅನ್ನುವಾಗಲೆಲ್ಲ ಸ್ವರ್ಗಾನೇ ಕದ್ದು ತಂದು ನಡುವ ಮೇಲಿಟ್ಟೀಯೇನೋ ಅನ್ನಿಸಿ ಒಂದೊಮ್ಮೆ ಕರಗಿಬಿಡೋ ಕಳ್ಳಾಸೆ ಮೂಡಿಸೋ ಪರಮ ಪೋಲಿತನ - ಎಲ್ಲೋ ಒಂದೆಡೆ ನೆಲೆ ನಿಲ್ಲುವ ಸಾಚಾತನ ಇಲ್ಲದ ಜಾರ ನೀನೆಂದು ಬೈಯ್ಯುವಾಗಲೂ ಈ ಕ್ಷಣ ಪೂರಾ ಪೂರಾ ನಿನ್ನವನು ಎಂದು ನನ್ನೆದೆ ಮಿದುವನು ಮಗುವಂತೆ ಸವಿದು ಹಿಗ್ಗಿ ಹಿಗ್ಗಿಸುವ ಕಳ್ಳತನ - ಹಸಿಕಾಮದಬ್ಬರ ಇಳಿದ ಮೇಲೂ ಬೆವರಿನಂಟು ಆರಗೊಡದೆ ಎದೆಗವುಚಿಕೊಂಡು ಮತ್ತೆ ಮತ್ತೆ ಮುತ್ತಿನ ಲಾಲಿಯೊಡನೆ ಕುಚ್ಚು ತಟ್ಟಿ ಸವಿ ನಿದ್ದೆಗೆಳೆಯೋ ಅಪರೂಪದ ಗಂಡಸುತನ...
ಇಂಥವೇ ಸಣ್ಣ ಸಣ್ಣ ಕಾರಣಗಳು ಅಲೆಅಲೆಯಾಗಿ ಭಾವಕೋಶದಲಿ ತುಯ್ದು ನಿನಗಾಗಿ ಕಾಯುವ, ಎಲ್ಲ ಬೇಲಿಗಳ ಮುರಿದು ನಿನ್ನೆದೆಗೆ ಹಾಯುವ ಹೆಣ್ಣಾಗಿಸಿಬಿಡುತ್ತೆ ಕಣೋ ನನ್ನ - ಗಂಡು ದರ್ಪವಿಲ್ಲದ ನಿನ್ನ ಹಗುರ ಸ್ಪರ್ಶ ಸೋಕಿದ್ದು ಮೈಯ್ಯನಾದರೂ ಅದರ ಗುರುತುಳಿದದ್ದು ಮನದಲ್ಲಿ ಕಣಾ ಬೈರಾಗೀ...
ಇವನೆಲ್ಲ ಹೇಳಬಹುದೋ, ಹೇಳಬಾರದೋ ನಾ ನಿನಗೆ - ಹೇಳಿದರೂ, ಹೇಳದೇ ನುಂಗಿದರೂ ಮರು ಹಗಲು ನಿನ್ನ ಹೆಗಲಲ್ಲಿ ತಿರುಗಿ ನೋಡದ ಜೋಳಿಗೆ...
ನಿನ್ನ ಕೂಡಿದ, ಕೂಡಬಹುದಾದ ಕಾಡು ಹಾದಿಯ ಮಗ್ಗುಲ ಕಿರು ತೊರೆಯ ನೀರ ತಂಪು ಮೈ ಕೊರೆದಷ್ಟೂ ಏಕಾಂತ ಸುಡುತಲಿದೆ...
ಆವರ್ತನದಲಿ ಎರಡನೇ ಇರುಳು ನೀ ನೆಲೆ ನಿಂತ ಕೇರಿಯ ಹೆಸರಿದ್ದರೆ ಹೇಳೋ...
ಅಂಟಿಕೊಳ್ಳುವ ಭಯದಲ್ಲಿ ಅದೆಷ್ಟು ಊರೂರು ಅಲೆಯುವಾ ಮರುಳೋ...!!
#ಹೆಸರಿಲ್ಲದ_ಕಪ್ಪು_ಹುಡುಗಿ...
⇐⇎⇒

ಊರು ಮುಗಿಯುವ ಕೊಟ್ಟಕೊನೇ ತಿರುವಿನಲ್ಲೂ ಮತ್ತದೇ ನೆನಹು - ಆ ಚಣ ಆ ಮನೆಯ ಒಳಜಗ್ಳಿಯ ತಿಳಿಗತ್ತಲಲ್ಲಿ ಸುತ್ತ ಸುಳಿದ ಮೋಹದ ನೆರಳು...
ಹರೆಯವ ಘಮ ಘಮಿಸಿ ಕಾಯದ ಒಳ ಭಾವಗಳಿಗೆಲ್ಲ ಹಸಿ ಬಿಸಿ ಕಾವು ತುಂಬಿದ ಆ ಆಸೆ ಕಂಗಳ ಜೀವದ ಹೆಸರು ಕೇಳಲು ಸೋತೆ...
#ನೀನು...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

ಗೊಂಚಲು - ಮುನ್ನೂರ್ಮೂವತ್ತೊಂದು.....

ಅಂಕಿತನಾಮವ ಬೇಡದ ಕವಿತೆ.....

ನನ್ನ ಭಾವ ಸಂವಾದವೇ ಇಲ್ಲದೆ ತನ್ನ ಸುಖದ ಕೊನೇಯ ಹನಿಯನ್ನೂ ನನ್ನುದರಕೆ ಸುರಿದು ಮಗ್ಗುಲಾದವನ ಗಡುಸು ಬೆನ್ನಲ್ಲಿ ಪ್ರೇಮವ ಹುಡುಕುವ ಸಾಹಸದಲ್ಲಿ ಕಣ್ಣು ಮಳೆಯಾಗುತ್ತದೆ...
ಭಾವಗಳ ಎದೆಯ ಮೇಲೆ ರಕ್ತದ ಕಲೆ ಉಳಿಯುವುದಿಲ್ಲ - ಪ್ರೇಮದ ಶವಪರೀಕ್ಷೆಯಲ್ಲಿ ಇರುಳ ಕಣ್ಣೀರಿನ ಕಲೆ ಸಾಕ್ಷಿಯಾಗುವುದಿಲ್ಲ...
#ಶುಷ್ಕ_ಸಂಬಂಧ...
↜↰↱↝

ನಂದು, ಕೇವಲ ನಂದ್‌ನಂದೇ, ನಾನು ಅಧಿಕಾರದಿಂದ ಅನುಭವಿಸಬಹುದಾದ ವ್ಯಾಪ್ತಿಯದ್ದು ಅಂತೆಲ್ಲ ಮೆರೆಯುವ, ಒಟ್ನಲ್ಲಿ ಈ ಸ್ವಂತ ಅನ್ನೋ ಭಾವದ ಹಪಹಪಿ ಭದ್ರತೆಯ ಕಟ್ಟಿ ಕೊಡೋಕಾ ಅಥವಾ ನಮ್ಮ ಅಹಂ ಅನ್ನು ತುಂಬಿ ಕೊಡೋಕಾ...!?
#ಪ್ರೇಮ_ಕಾಮ_ಬಂಧ_ಬಂಧನ_ಇತ್ಯಾದಿ...
↜↰↱↝

ಅಸಮ ಜೀವ ಭಾವಗಳ ಕೊಡುಕೊಳ್ಳುವಿಕೆಯನು ತಕ್ಕಡಿ ಸಮನಾಗಿ ತೂಗಲಾದೀತೇ...!?
ಪರಿಹಾಸ ಅಂದರೆ,
ಸಮಭಾವ ಕೋಡಿ ಕೂಡಿ ಜೀವಜೇನು ಕೊಂಡಾಟವಾಡೋ ಪರಮ 'ಪರಾವಲಂಬಿ' ದಿವ್ಯ ಸುಖಗಳವು...
#ಪ್ರೇಮ_ಕಾಮ_ಇತ್ಯಾದಿ...
↜↰↱↝

ಉಸಿರಿಗೆ ಬಿಸಿ ತುಂಬದ ಯಾವ ಭಾವವೂ ಉತ್ಕಟ ಅನ್ನಿಸದಿರುವ ಪಾಪಿ ಪ್ರಾಣಿ ನಾನು...
ಪವಿತ್ರತೆಯ ಹಂಗಳಿಯದ ಪ್ರೇಮವ ಮಾತಾಡಲಾರೆ...
ಕಾಮದ ಪಾವಿತ್ರ್ಯವ ಪ್ರಕೃತಿ ಎದುರು ಪ್ರಶ್ನಿಸಲಾರೆ...
ಪ್ರಾಕೃತಿಕ ಸಹಜತೆಯನುಳಿದು ಇನ್ಯಾವ ಔನ್ನತ್ಯವನ್ನೂ ಒಪ್ಪಲಾರೆ...
#ಪ್ರೇಮವೂ_ಒಂದು_ಕಾಮವೇ...
↜↰↱↝

ಹಸಿದ ತೋಳಲ್ಲಿ ಕಲ್ಲಾಗುವ ಕಾಯ...
ಪ್ರೇಮ ಸತ್ತದ್ದಕ್ಕೆ ಸುಖದ ತಿರಸ್ಕಾರಕಿಂತ ದೊಡ್ಡ ಸಾಕ್ಷಿ ಬೇಕಾ...
#ಮುಗಿದ_ಅಧ್ಯಾಯ...
↜↰↱↝

ಬಂಧ ಸಂಬಂಧಗಳ ನಡೆಯಲ್ಲಿ ಅಧಿಕಾರದ ಬಾಧ್ಯತೆ ಅನ್ನೋದು ಆಪ್ತತೆಯ ಆದ್ಯತೆಯನ್ನೂ ಹಿಂದ್ಹಿಂದೆ ನಿಲ್ಲಿಸುತ್ತೆ...
#ಹಾದಿ_ಕವಲಾದಾಗ...
↜↰↱↝

ಬದುಕಿನ ಒರಟುತನ ಭಾವಕ್ಕೆ ದಕ್ಕದೇ, ಒಗ್ಗದೇ ಹೋಗುವ ಒದ್ದಾಟವೇ ಬಲಹೀನವಾಗಿಸುತ್ತದಾ ಜೀವವ...
ಕರುಳ ಮಡತೆಗಳಲಿ ಮುಚ್ಚಿಟ್ಟ ನೋವುಗಳೆಲ್ಲ ದಿಂಬಿನೊಂದಿಗೆ ಮಾತಿಗೆ ಕೂರುತ್ತವಂತೆ...
ಇರುಳೆಂದರೆ ಎದೆಯು ಸಣ್ಣಗೆ ಬೆಚ್ಚುತ್ತಾ, ಒಂಚೂರೂ ಹಗುರಾಗುತ್ತಾ ನಿಟ್ಟುಸಿರ ಹಾಯಿ ಮೇಲೆ ತೇಲುತ್ತಾ ದಾಟುವ ಕಾಲ...
#ಹೆಸರಿಲ್ಲದ_ಹಾದಿ...
↜↰↱↝

ಬರೆದ ನಗು ನಿನ್ನದೂ ಕೂಡಾ ಅಂತಾದ್ರೆ ನಕ್ಕು ಬೀಗಬಹುದು - ಆದರೆ ನೋವಿಗೆ ನೋವೇ ಉತ್ತರವಾಗಿ ಬರುವ ಸಂದಿಗ್ಧವ ಬರೆದು ಏಗಲಿ ಹೇಗೆ...
#ಅಂತಃಕರಣ...
↜↰↱↝

ನಿನ್ನ ಹಿಂದ್ಹಿಂದೆ ಅಲೆಯೋ ಹುಚ್ಚೇನೂ ಇಲ್ಲ - ನಿನ್ನೊಡಗೂಡಿ ಜೊತೆ ನಡೆವ ಮೋಹಕ್ಕೆ ನೀನಲ್ಲದೆ ಮದ್ದಿಲ್ಲ...
ಮಳೆ ಬರುವ ಗಾಳಿ ಸುದ್ದಿಯಿದೆ - ಕಾಯುವ ಸುಖಕ್ಕೆ ರೆಕ್ಕೆ ಮೂಡಿದೆ...
#ಎರಡು_ಹನಿ...
↜↰↱↝

ಬೆಳಕೇ ಬೆಳಕಾದ ಬಾನ ಬಯಲು ನೀನು - ಅಸೀಮ ಆಪ್ತತೆ...
ಎದೆಯ ಕತ್ತಲ ಭಾರವನಿಳಿಸುವ ದಿವ್ಯ ನೀಲಾಂಜನ ನಿನ್ನ ಪ್ರೀತಿ...
"ಕಳ್ಳ ನಾನು - ಕದಿಯಲಾಗದ ಪ್ರೀತಿ ಅಂದ ನೀನು..."
#ಅಂಕಿತನಾಮವ_ಬೇಡದ_ಕವಿತೆ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)