Thursday, December 24, 2015

ಗೊಂಚಲು - ಒಂದು ನೂರಾ ಎಪ್ಪತ್ತಾರು.....

ಮತ್ತಿಷ್ಟು ಬಿಡಿ ಭಾವಗಳು.....

ಕವಿತೆ - ಎದೆಯ ಕಪಾಟಿನೊಳಗೆ ಬಚ್ಚಿಟ್ಟ ಎಂದೂ ಕರಗದ ಒಲವಿನ ಒಡವೆ, ಅವಳ ನೆನಪಿನ ನಿರಂತರ ಒರತೆ...
ಬದುಕು - ಗತದ ಗತಿಯ ನೆನಪನೇ ನೇವರಿಸುತ್ತಾ ಅವಳಿಲ್ಲದೆಯೂ ನಗುತಿರುವ ಸುದೀರ್ಘ ಕವಿತೆ...
ಇದೀಗ - ಬದುಕೆಂದರೂ, ಕಪ್ಪು ಹುಡುಗಿಯೆಂದರೂ ಸಾವಿನ ಸಂಗದಲ್ಲಿ ಕಳೆದುಕೊಂಡ ಕಣ್ಣಂಚ ನಗೆಯ ಕನಸು...
^^^^^
ಜಡಿದು ಸುರಿವ ಅಡ್ಡ ಮಳೆಗೆ ನೆತ್ತಿ ಬಿರಿವಂತೆ ತೋಯ್ದರೂ, ಜೋರು ಗಾಳಿಯ ಕೊರೆವ ಛಳಿಗೆ ಒರಟು ಮೈಯಲೂ ನಡುಕವೆದ್ದರೂ ಒಳಗಿನ ಬೆಂಕಿ ಆರುವುದಿಲ್ಲ...
ಹೌದು - ಕರುಳ ಕುದಿಯ ಕ್ರುದ್ಧ ನೆನಪುಗಳಿಗೆಂದೂ ಸಾವಿಲ್ಲ...
ಅಂತೆಯೇ;
ನಿನ್ನೆಯ ಗಾಯಗಳ ಹಸಿ ರಕ್ತವ ಜೀರ್ಣಿಸಿಕೊಂಡು ಮತ್ತೆ ಹಸಿವಿಗೆ ಕೆರಳದ ಎದೆಯಲ್ಲಿ ಕನಸು ಹುಟ್ಟುವುದಿಲ್ಲ...
ನಿದಿರೆಯ ಅಡವಿಟ್ಟು, ಒಂದಿನಿತು ಕನಸುಗಳ ಸರಳ ಪಥ ಬದಲಿಸಿ ಏದುಸಿರಿನ ಕಾಲು ಹಾದಿಯಲಿ ಬೆವರಾಗಿ, ಕಣ್ಣೀರ ಕಂದಾಯ ಕಟ್ಟಿಯಾದರೂ ಬದುಕ ಗೆದ್ದುಕೊಳ್ಳದೇ ಹೋದರೆ ನನ್ನ ಕಣ್ಣ ನಗೆಯ ಶವ ಯಾತ್ರೆಗೆ ನಾನೇ ಹೆಗಲು ಕೊಡದೆ ವಿಧಿಯಿರುವುದಿಲ್ಲ...
ಸಾವಿಗೂ ನಗೆಯ ಸಾಲ ಕೊಡುವುದಾ..?
ನಗೆಯ ಸಾವಿಗೇ ಸಾಕ್ಷಿಯಾಗುವುದಾ..??
ಎತ್ತಿಡುವ ಪ್ರತಿ ಹೆಜ್ಜೆಗೂ ಮುನ್ನ ಕೇಳಿಕೊಳ್ಳಬೇಕಿದೆ ನಾನೇ ನನ್ನ - ಮನಸೇ ಯಾವುದು ನಿನ್ನ ಆಯ್ಕೆ...???
^^^^^
ಕನಸೆಂದರೆ ಮುಚ್ಚಿದ ಕಂಗಳೊಳಗೂ ಮಿರುಗುಡುವ ಬೆಳಕು...
ಹನಿದುಂಬಿದ ಕಂಗಳಲ್ಲಿ ಬೆಳಕು ಕೂಡಾ ಸದಾ ಅಸ್ಪಷ್ಟ...
ಎಷ್ಟೇ ಬೆಳೆದರೂ, ಬೆಳಕಲ್ಲಿ ನಡೆದರೂ ಲಡ್ಡಾಗಿ ಮುಡಿಯಿಂದ ಜಾರದ ಆರು ವಿಷಗಳ ಒಟ್ಟಾಗಿ ಕಟ್ಟಿರುವ 'ನಾನೆಂಬೋ ನಾರು...'
ಅಂಗಳದಲ್ಲಿ ಬೆಳದಿಂಗಳ ಸಾಯಲು ಬಿಟ್ಟು - ಹೊಸ್ತಿಲ ಹಣತೆಯ ಆರಿಸಿ ಇಟ್ಟು - ಕತ್ತಲಿಗಂಜುತ ಕಂಗಳ ಮುಚ್ಚಿ - ಒಂಟಿ ತಾನೆಂದು ಬದುಕಿಡೀ ಕನಲುತ್ತ ಕಳೆಯುವ ಸ್ವಯಂ ಕರುಣೆಯ ಪ್ರಿಯ ಮನುಜ ಪ್ರಾಣಿಗಳೆಡೆಗೆ ನಂಗೆ ಕರುಣೆಯೂ ಹುಟ್ಟದಷ್ಟು ತೀರದ ಅಸಮಾಧಾನ...
^^^^^
ಮತ್ತೆ ಮತ್ತೆ ಭಾವದ ಗೂಡು ಒಡೆಯುತ್ತಲೇ ಇರಬೇಕು - ಆ ಗಾಯವೇ ಜಡ್ಡುಗಟ್ಟಿ ನಡೆಗೆ ನಿರ್ಲಿಪ್ತಿ ಮೈಗೂಡಬೇಕು - ಅಂದಾಗ ಹದಗೊಂಡ ನಿರ್ಲಿಪ್ತಿಯೇ ಬೆಳೆದು ಸ್ಥಿತಪ್ರಜ್ಞೆಯಾದೀತು...
^^^^^
ಓ ಸ್ನೇಹವೇ - ಕನಸಿಲ್ಲದ ನನ್ನ ಕತ್ತಲ ಕಾಡು ದಾರಿಗೆ ನಿನ್ನ ಅಕ್ಕರೆಯ ತಂಪು ನೋಟವೇ ಕೈದೀವಿಗೆ...
ಈ ಎದೆ ಜೋಳಿಗೆಯ ತುಂಬಾ ನಿನ್ನ ಭರವಸೆಯ ತುಂಟ ಕಿರುನಗೆಯ ನೆನಪ ಹೋಳಿಗೆ...
ಹಗಲ ನೆರಳು, ಇರುಳ ಬೆಳಕು, ನಿನ್ನ ಆರೈಕೆಯ ಹೂದೋಟವೀ ಬದುಕು...
^^^^^
ಮಗುವ ಕಪ್ಪು ಕಂಗಳಲ್ಲಿ ನಗೆಯು ಚಂಡೆ ಮದ್ದಳೆಯಾಗಿ ಹೊಂಗನಸುಗಳ ಓಕುಳಿಯಾಟ - ಬಾಲ್ಯವದು ನೆನಪಲ್ಲಿಯೂ ಹೊಂಗೆ ನೆರಳಂಗೆ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Monday, December 21, 2015

ಗೊಂಚಲು - ಒಂದು ನೂರಾ ಎಪ್ಪತ್ತು ಮತ್ತೈದು.....

ಅದದೇ ಬಿಡಿ ಬಿಡಿ ಭಾವಗಳು.....

ಇಂದು ಸಂಜೆ ಅಲ್ಲಲ್ಲಿ ಸುರಿದ ತುಂತುರಿನ ಪರಿಣಾಮ ಹರೆಯದೂರಿನ ಎದೆ ಕಾಲುವೆಗಳಲ್ಲಿ ಹಸಿ ಬಿಸಿ ಕನಸುಗಳ ಒಳ ಹರಿವು ದಿಢೀರ್ ಹೆಚ್ಚಾಗಿ ಪೋಲಿ ಪಲ್ಲಂಗಗಳಲ್ಲಿ ನೆಲ - ನೇಗಿಲ ಪೂಜೆಯ ಕಾರ್ಯಕ್ರಮಗಳಿಗೆ  ಚುರುಕು ಮೂಡಿರುವದರಿಂದ ಬೆವರಿನ ಪ್ರವಾಹ ಎದುರಿಸಲು ಕೋಣೆಗಳು ಸಜ್ಜಾಗುವಂತೆ ಪಡ್ಡೆಗಳ ಹವಾಮಾನ ಅಡ್ಡೆ ಸೂಚಿಸಿದೆ...
<3 <3 <3
ಮಳೆ ಹನಿದ ಮುಸ್ಸಂಜೆಯಲಿ ಅವಳ ನೇಹದ ನೆನಹಿನಾಟ ವಿಪರೀತ...
ಎನ್ನ ಹೃದಯದ ಒದ್ದೆ ಭಾವಗಳ ಗದ್ದೆಯಂಚಲಿ ಮಳೆಯ ರಾಗಕೆ ಗೆಜ್ಜೆ ಘಲಿರಿನ ಶ್ರುತಿ ಸೇರಿಸಿ ನಲಿವ ಅವಳ ಕೊರಳ ಕೊಂಕಿನ ಬಿಗುಮಾನಕೆ ಬೆಳ್ಳಕ್ಕಿ ಗೂಡಲ್ಲಿ ಮತ್ಸರದ ಹಾಡು...
ಜಗುಲಿ ಕಟ್ಟೆಯ ಪಡುವಣ ಮೂಲೇಲಿ ಗೋಡೆಗಾತು ಕೂತು ಎನ್ನೆದೆಯ  ಲಗಾಮಿಲ್ಲದ ಒಲವ ಕನವರಿಕೆಗಳ ಮಾತಿನ ಕೇಳಿಯನಾಲಿಸಿ ಮೆಲ್ಲುತಿರೋ ಆಯಿಯ ರಟ್ಟೆಗಳಲ್ಲಾಗಲೇ ತೊಟ್ಟಿಲ ತೂಗೋ ಮಧುರ ಚಡಪಡಿಕೆ...
ಅಷ್ಟಲ್ಲದೇ ಕನ್ನಡಕ ಮೇಲೇರಿಸಿಕೊಂಡು ನಾ ತನ್ನ ಮಡಿಲ ಅಂಬೆಗಾಲಿನ ಕೂಸಾಗಿದ್ದಾಗ ನನಗೆ ತೊಡಿಸಿದ್ದ ಕಂಚುಕವ ಕಪಾಟಿನ ಯಾವ ಖಾನೆಯಲ್ಲಿಟ್ಟಿದ್ದೇನೆಂದು ನೆನಪ ನೇವರಿಸಿಕೊಳ್ಳುತ್ತಾಳೆ...
ಕಪ್ಪು ಹುಡುಗಿ ಅವಳು - ಕಪ್ಪು ಮೋಡದ ತುಂಡು - ನನ್ನ ಪುಟ್ಟ ಚಾವಡಿಯ ಭರವಸೆಯ ಮೇಲ್ಛಾವಣಿಗವಳು ನಕ್ಷತ್ರ ಮಾಲೆಯಾಗುತಾಳೆ - ಆಯಿಯ ಕನಸುಗಳ ಹಿತ್ತಲಿನ ತೊಂಡೆ ಚಪ್ಪರದ ಬೇರಿಗೆ ಜೀವ ಜಲವಾಗಿ ಸುರಿಯುತಾಳೆ...
ಹೌದು, ಮಳೆ ಹನಿದ ಮುಸ್ಸಂಜೆಯಲಿ ಅವಳ ನೇಹದ ನೆನಹಿನಾಟ ವಿಪರೀತ...❤❤
<3 <3 <3
ಭುವಿಯೊಡಲ ಬೆವರ ಕಂಪಿಗೆ ಆಗಸ ಮತ್ತೇರಿ ಸುರಿಯುತಿದೆ...
ನೆನಪುಗಳು ಹಸಿವಿನಂತೆ ಬಿಟ್ಟೂ ಬಿಡದಂಗೆ ಮರಮರಳಿ ಹಾಡುತ್ತವೆ...
ನಾಭಿ ಮೂಲದಲ್ಲಿ ಮಡಿ ಮರೆತ ರಣ ಹಸಿವು...
ಕನಸಿನ ಹಕ್ಕಿಯ ರೆಕ್ಕೆಯ ತಬ್ಬಿ ಹಸಿ ಮೈಯ ಅವಳು ಬಿಸಿಯೇರಿ ನಗುತಾಳೆ...
ಮೊನ್ನೆ ತಾನೆ ಹೆಗಲ ಹಳೆಯ ಗಾಯದ ಮೇಲೆ ಮೂರುವರೆ ಮಾಸದ ಮುದ್ದು ಮಗಳು ಉಚ್ಚೆ ಹೊಯ್ದದ್ದು ಮತ್ತಿಲ್ಲಿಯೂ ಬೆಚ್ಚಗೆ ಕಾಡುತ್ತದೆ...
ಮುಂದಿನ ದಶಮಿಗೆ ಮನೆ ತುಂಬುವ ಮಗಳಿಗೆಂದೇ ಹೊಸ ಲಾಲಿಯೊಂದಕೆ ಪದ ಕಟ್ಟಬೇಕು...
ಅರೆ ಇದೇನೀಗ ಬಿಕ್ಕಳಿಕೆ - ಚಿನ್ನಿಗೆ ಹಾಲುಣಿಸುತ್ತ ಅವಳಲ್ಲಿ ಹೊಸ ಪುಳಕದಲ್ಲಿ ನನ್ನ ನೆನೆದಿರಬೇಕು...
ಅಲ್ಲವೇ - ಸಂಜೆಯೊಂದು ಇರುಳಿಗೆ ದಾಟುವ ಹಾದಿಯಲ್ಲಿ ವಿರಹಿ ಪಥಿಕನಿಗೆ ಸೋಬಾನೆಯಂತೆ ದನಿತೆರೆದು ಜಿಟಿಗುಡುವ ಮಳೆಯೊಂದು ಮಧುರ ಶಾಪ...
<3 <3 <3
ಕತ್ತಲೆಂದರೂ ಬೆಳಕೆಂದರೂ ದೀಪದ ಗರ್ಭದ ಕುಡಿಗಳೇ...
ತೆರೆದಿಟ್ಟರೆ ಬಾಗಿಲ, ಹಚ್ಚಿಟ್ಟರೆ ಹಣತೆಯ ಬಯಲು ಆಲಯವೆಲ್ಲ ಬೆಳಕೇ ಬೆಳಕು...
ಮುಚ್ಚಿಟ್ಟು ಕೂತ ಬಾಗಿಲ ವಾಡೆಯ ಮೂಲೆಯ ಸಂದಿನಿಂದ ಬೆಳಕ ಕುಡಿಯೊಂದು ಒಳ ಸೇರಲಿ - ಕತ್ತಲ ಕೋಟೆಯ ಒಡಲಿಗೂ ಬೆಳಕ ನಂಜೇರಲಿ...
ದೀಪವೆಂದರೆ ಅರಿವು - ಅರಿವೆಂದರೆ ಆತ್ಮದೆಚ್ಚರ...
ಹಬ್ಬವೆಂದರೆ ನಗು - ನಗುವೆಂದರೆ ಒಲವ ಆರೈಕೆಯ ಅಕ್ಕರದ ಕೂಸು ಕಂದಮ್ಮ...
ಪ್ರತಿ ದಿನವೂ ಹಬ್ಬವಾಗಲಿ - ಪ್ರತಿ ಘಳಿಗೆಯೂ ನಗೆಯ ಹಡೆಯಲಿ...
ಶುಭಾಶಯಗಳು...
<3 <3 <3
ಹೇ ಆತ್ಮದುರಿಯೇ -
ನಿನ್ನೂರಿನೆಡೆಗೆ ಹೊರಳುವ ದಾರಿಯಲ್ಲಿ ಯಾವ ಬೇಸರಕೂ ತಾವಿಲ್ಲ...
ಆ ಅಸೀಮ ದೂರ, ಸವೆಸಬೇಕಾದ ಒಂಟಿ ಹೆಜ್ಜೆ, ಇಕ್ಕೆಲದ ನಾಲಗೆಯ ಕುಹಕಗಳು, ನಿನ್ನೆಯ ಜಗಳದ ಮುನಿಸು, ಅರ್ಥವಾಗದೆ ಹೋದ ನಿನ್ನದದ್ಯಾವುದೋ ನಡೆಯ ಕಂಗಾಲು, ಉಹುಂ ಯಾವುದಕ್ಕೂ ಅಲ್ಲಿ ನೆರಳಿಲ್ಲ - ಅವೆಲ್ಲವೂ ನನ್ನಂತರಂಗದ ನಿನ್ನ ಸ್ನೇಹದೆಡೆಗಿನ ತುಡಿತದ ತೀವ್ರತೆಯ, ನಿಷ್ಠೆ, ನಿಯತ್ತಿನ ಬಿರುಸಿಗೆ ಆಪೋಶನವಾಗುತ್ತವೆ...
ಸಾಗರನೆಡೆಗಣ ಅದಮ್ಯ, ಅಪರಿಮಿತ ಅಥವಾ ಪರ್ಯಾಯವಿಲ್ಲದ ಸೆಳೆತದ ಉತ್ಕಟತೆಯೇ ಅಲ್ಲವಾ ನದಿಯ ಹರಿವಿನ ಮೂಲ ಶಕ್ತಿ...??
ನಾ ಇಲ್ಲಿಂದ ಹೊರಟಾಗಿದೆ - ಅಲ್ಲೆಲ್ಲೋ ನೀ ತೋಳ್ದೆರೆದು ಕಾಯ್ದಿರುವ ಸುದ್ದಿ ಈ ಜಿಟಿ ಮಳೆ, ತಂಪು ಗಾಳಿಯಲ್ಲಿ ಹಾಡಾಗಿ ಮತ್ತೆ ಮತ್ತೆ ನನ್ನ ಕರೆಯುತ್ತಿದೆ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Tuesday, December 15, 2015

ಗೊಂಚಲು - ನೂರಾ ಎಪ್ಪತ್ನಾಕು.....

ಶುಭಾಶಯಗಳು..... 

ನನ್ನೊಳಗಿನ ಕನಸುಗಳನೆಲ್ಲ ಹೊಂಬೆಳಕಲ್ಲಿ ಮೀಯಿಸಿ, ಕಾಡಿಗೆಯ ಬೊಟ್ಟಿಟ್ಟು ಸಿಂಗರಿಸಿ ಗೆಲುವಿನಶ್ವಯಾಗಕೆ ಅಣಿಗೊಳಿಸಬೇಕಿದೆ - ಬೆಳಗಾಯಿತು...
!!!
ಒಂದು ಮುಟಿಗೆ ಬಾನ ಹೂಗಳು ಮತ್ತು ಒಂದು ಬೊಗಸೆ ಬೆಳದಿಂಗಳನು ಕಣ್ಣ ಬಟ್ಟಲಲ್ಲಿ ತುಂಬಿಕೊಂಡು ಮುಸುಕೆಳೆದುಕೊಂಡೆ... 
ಇರುಳ ಬೀದಿಯಲೀಗ ಕನಸುಗಳ ಕರಗೋತ್ಸವ...
ಶುಭರಾತ್ರಿ...
!!!
ನೆನಪು ಗೊಬ್ಬರ - ಕನಸಿನ ಹೊಸ ಚಿಗುರು - ಮತ್ತದೇ ಹಸಿ ಹಸಿ ಬೆಳಗು...ಶುಭದಿನ...
!!!
ಇರುಳ ಪ್ರಥಮ ಪಾದವಿದು ಪ್ರೇಮೋನ್ಮಾದದ ಕವಿತೆಯ ಕಸೂತಿಗೆ ದೇಹಗಳು ಹಲಗೆ ಬಳಪಗಳಾಗಿ ಕನಸಿನೂರಲ್ಲಿ ನಾವೀರ್ವರೂ ಸಲಿಗೆಯ ಸರಹದ್ದು ಮೀರುವ ಹೊತ್ತು ...
ಶುಭರಾತ್ರಿ...
!!!
ಇರುಳ ಕೌದಿಯೊಳಗಿಂದ ಇಣುಕೋ ನಿಟ್ಟುಸಿರ ಕನಸುಗಳದೂ ತಲೆ ನೇವರಿಸಿ ಶಕ್ತಿ ತುಂಬಬಲ್ಲನವ - ಕುಶಲ ಕೇಳಿ ಎದೆ ಗೂಡಿಗೊಂದಿಷ್ಟು ಕಸುವ ಸುರಿದು ಹೋಗಲು ಹೆಳವನ ಮನೆ ಬಾಗಿಲಿಗೂ ಬಂದೇ ಬರುವ - ಬೊಗಸೆ ಒಡ್ಡಿದವನ ಜೋಳಿಗೆ ತುಂಬಾ ಬೆಳಕ ಭಿಕ್ಷೆ ಅದು ದಿನಮಣಿಯ ಕರುಣೆ...
ಬೆಳಗಾಯಿತು - ಶುಭದಿನ...
!!!
ಇರುಳ ಮುಸುಕಿನೊಳಗೆ ಎದೆಗೂದಲ ಕೇದಗೆಯ ಪೊದೆಯಲ್ಲಿ ಮೂಗುತಿಯ ಮೊನೆಯಿಂದ ತನ್ನ ಹೆಸರ ಬರೆದು ನನ್ನೊಳಗಣ ಆಸೆಯ ತಾರೆಗಳಿಗೆ ಕಿಡಿ ಹೊತ್ತಿಸಿ ನಾಭಿಯಾಳದಿ ಸ್ಪೋಟಿಸೋ ಅವಳೆಂಬೋ ಮುಗಿಯದ ಕವಿತೆಯ ಕನಸಿಗೆ ಚಂದಮನ ನೆಂಟಸ್ತಿಕೆ...
ಶುಭರಾತ್ರಿ...
!!!
ರಾಧೆಯ ಮನೆಯಂಗಳದಿ ಕೃಷ್ಣ ಬೀರಿದ ಚುಕ್ಕಿ ಚೌಕಟ್ಟಿಲ್ಲದ ಪಾರಿಜಾತದ ರಂಗೋಲಿ...
ಒದ್ದೆ ಹೆರಳ ಕೊಡವುತ್ತ ಬೆಳಕಿಗೆ ಕದವ ತೆರೆದ ಗಂಧವತಿಯ ಕಣ್ಣ ಬಯಲಲ್ಲಿ ಇರುಳೆಲ್ಲ ಆ ಕರಿಯನ ಕೈಯ ಕೊಳಲಾಗಿ ನುಡಿದು ದಣಿದ ಅನುರಾಗದ ಸುವ್ವಾಲಿ...
ಹುಚ್ಚು ಜೀವನ್ಮೋಹಿಗಳ ಸನ್ನಿಧಿಯಲ್ಲಿ ಒಲವಿಗೋ ಪ್ರತೀ ಬೆಳಗಲೂ ಎದೆಯ ಹಿಗ್ಗಿನ ಪದಕವಾಗಿ ತಾ ಮತ್ತೆ ಮತ್ತೆ ಮೈನೆರೆವ ಖಯಾಲಿ...
ಶುಭದಿನ...
!!!
ನಿದಿರಮ್ಮನ ಮಡಿಲ ತುಂಬಾ ಕನಸುಗಳ ಬಿಡಿ ಬಿಡಿ ಹೂಗಳು - ನೆನಪುಗಳ ಕಣ್ಣೀರ ಕುಡಿದೂ ಅಳಿಯದೆ ಅರಳಿದ ಹೂಗಳಿಗೂ ಬಣ್ಣ ಬಣ್ಣದ ಹೊನಲಿದೆ ಅವಳಲ್ಲಿ...
ಒದ್ದೆ ದಿಂಬಿನ ಕಥೆ ಮುಸುಕಿನೊಳಗೇ ಮುಗಿದು ಹೋಗಲಿ - ಬೆಳಗಲ್ಲೂ ಹೂಗಳು ಬಾಡದಿರಲಿ...
ಶುಭರಾತ್ರಿ...
!!!
ಕರುಳು ತೂಗಿದ ಕನಸುಗಳನೆಲ್ಲ ತೊಟ್ಟಿಲಿನಿಂದೆತ್ತಿ ಒಂಚೂರು ಭರವಸೆಯ ಹಾಲನುಣಿಸಿ ಬದುಕಿಗಾಗಿ  ಯುದ್ಧಕ್ಕೆ ಅಣಿಮಾಡಿ ಬಯಲಿಗೆ ಅಟ್ಟುವುದು - ಬೆಳಕಲ್ಲೂ ಹೆಜ್ಜೆಯೂರಿ ನಿಲ್ಲಬಲ್ಲ, ಹಗಲ ಬಡಿವಾರಗಳಿಗೆ ಎದೆ ಕೊಡಬಲ್ಲ ಕಂದಮ್ಮಗಳು ಗೆದ್ದು ಬರುತ್ತವೆ - ಹಸಿವಿಲ್ಲದ, ಹದವಿಲ್ಲದ ಮರಿಗಳು ಮರೆಯಾಗಿ, ನೆನಪ ಹೊರೆಯಾಗಿ ಇರುಳ ಹನಿಯಾಗುತ್ತವೆ...
ಹಗಲೆಂದರೆ ಭರವಸೆ - ಇರುಳೆಂದರೆ ಸಾಂತ್ವನ...
ಶುಭದಿನ....

Thursday, December 10, 2015

ಗೊಂಚಲು - ನೂರೆಪ್ಪತ್ಮೂರು.....

ಸುಡುವ ಬಿಡಿ ಭಾವಗಳು.....

ಸಂಜೆ ಸೋನೆ - ಮರಳಿ ಮರಳಿ ನಿನ್ನ ನೇಹದ ನೆನಹು - ಕನಸ ಕೌದಿಯೊಳಗೆ ಕಾಡು ಸುರಗಿಯ ಕಂಪು - ಎದೆಯ ಗೂಡನಾವರಿಸಿದೆ ಹೊಡತ್ಲ ಕೆಂಡಕ್ಕೆ ಕೈಕಾಸಿದ ಸುಖದ ಬೆಚ್ಚನೆ ಭಾವ...
ಸವಿಭಾವ ನಿನ್ನಲೂ ಕನವರಿಸಿ ಸಹಕರಿಸಿದರೆ ಇರುಳ ಕಾವಲಿಯಲಿ ನಾಚಿಕೆಯ ಚಿಪ್ಪೊಡೆದು ಮೈಯ ಬೀದಿಯ ಉದ್ದಕೂ ಮುತ್ತಿನೋಕುಳಿಯಾಟ...
ಉಸಿರ ಹಾಡಿಯಲ್ಲಿ ಬಿಸಿ ಗಾಳಿ ಸುಳಿದಿರುಗಿ - ನಡುವಿನೂರಲ್ಲಿ ಸಕಾಲ ನೆರೆ...
ಅರುಣೋದಯದ ಸಾಕ್ಷಿಯಾಗಿ ಸವಿ ಸುಸ್ತಲಿ ಮೈಮುರಿವಾಗ ಜೋಡಿ ಕಂಗಳು ಬಿಡಿಗಾಸಿನ ಗೋಲಕವ ಅರಸುತ್ತವೆ - ತೊಟ್ಟಿಲ ಕೊಳ್ಳುವ ಕನಸಿಗಾಗಿ ದುಡಿದ ಮಧುರ ಇರುಳ ನೆನೆನೆನೆದು...
@@@@@
ಬಣ್ಣಗೆಟ್ಟ ಬಿಡಿ ಹೂಗಳಂಥ ನೆನಪುಗಳು - ಬಣ್ಣದ ಹಾಳೆಯ ಹೂ ಮಾಲೆಯಂಥಾ ಕನಸುಗಳು...
ಕರುಣೆ ಕಾಣದ ಹಸಿ ಹಸಿ ಮಾತು - ಕಾಲಕೂ ಕಾಡುವ ಶಾಪದಂಥಾ ಬಿಸಿ ಮೌನ...
ಎದೆಗಿಳಿಯದ ಮಳೆಯ ಹಾಡು...
ಮಲ್ಲಿಗೆ ಘಮಲಿಗೂ ಬೆವರದ ಖಾಲಿ ಖಾಲಿ ಕತ್ತಲು...
ಮುಂಬೆಳಗಿಗೆ ಬಳ್ಳು ನನಗೆಂದೇ ಕೂಗಿದ ಹಾಗಿದೆ...
(*** "ಬಳ್ಳು" - ರಾತ್ರಿ ಹೊತ್ತು ವಿಕಾರವಾಗಿ ಕೂಗೋ ಕಾಡು ಹಕ್ಕಿ; ಬೆಳಗಿನ ಜಾವ ಕೂಗಿದರೆ ಅನಿಷ್ಠ ಎಂಬುದು ನನ್ನೂರ ನಂಬಿಕೆ...)
@@@@@
ಆ ಕಣ್ಣ ಕೊಳದಲ್ಲಿ ನಗೆ ಹಾಯಿ ತೇಲಲಿ ಮತ್ತೆ ಮತ್ತೆ...
ಧನ್ವಂತರಿ ಕೇಳದಿರಲಿ ಯಾರದೇ ಕನಸುಗಳ ಒತ್ತೆ...
@@@@@
ಮತ್ತೆ ಮತ್ತದೇ ಬೆಳಕ ಬಿಂಬ ಆ ಅಕ್ಷಿ ಕಕ್ಷೆಯಲಿ ಮರಳಿ ಮೂಡಲಿ...
ಕನಸ ಕೆನ್ನೈದಿಲೆ ಅರಳೋ ಕೊಳಗಳಲ್ಲಿ ಝರಿ ಬತ್ತದಿರಲಿ...
ಧನ್ವಂತರಿಯ ಕರುಣೆಯ ಕಣ್ಣು ಎಲ್ಲಾ ಬದುಕುಗಳ ನಗುವ ಕಾಯಲಿ...
@@@@@
ಹಿಮ್ಮೇಳದ ಸಾರಥ್ಯಕ್ಕೆ ಕ್ಷುದ್ರ ನೆನಪುಗಳಷ್ಟೇ ಕೂತಿರುವಾಗ ಮುಸ್ಸಂಜೆಯ ಕನಸು, ಕನವರಿಕೆಗಳೆಲ್ಲ ಕಣ್ಣ ಹನಿಗಳ ಸಾಂಗತ್ಯದಲ್ಲಿ ಜಾರಿ ಹೋಗುತ್ತವೆ...
ಮತ್ತೊಂದು ಸಂಜೆ ಕಣ್ಣ ಹನಿಯ ಕರೆ ಉಳಿಸದ ಜೋರು ಮಳೆಗಾಗಿ ಕಾತರಿಸುತ್ತದೆ...
@@@@@
ಹಸಿವು:
ಎತ್ತಿಡುವ ಪ್ರತಿ ಹೆಜ್ಜೆಯ ತೂಕ, ಆವೇಗವನ್ನ ನಿರ್ಧರಿಸುವುದು ಆ ಹೆಜ್ಜೆ ಕರೆದೊಯ್ಯುವ ತೀರದೆಡೆಗಿನ ನನ್ನ ಹಸಿವು...
ಹಿಟ್ಟಿನ ಹಸಿವು...
ಮೋಹದ, ಕಾಮದ, ಕರ್ಮದ ಹಸಿವು...
ಪ್ರೀತಿ, ಪ್ರೇಮ, ಸ್ನೇಹವೆಂಬೋ ಭಾವಾನುಭಾವಗಳ ಹಸಿವು...
ಗೆಲುವಿನ ಹಸಿವು...
ಸೋಲಿಸುವ ಹಸಿವು...
ತರಹೇವಾರಿ ಮುಖಗಳು - ಹಸಿವಿಲ್ಲದಲ್ಲಿ ಒಲವು, ಒಡನಾಟಗಳೆಲ್ಲ ಒಣ ಮಾತಿನ ಶೃಂಗಾರಗಳಷ್ಟೇ...
ಒಟ್ಟಿನಲ್ಲಿ ನನ್ನ ನಡೆಯ ನಾಡಿಯ ಪ್ರತಿ ನುಡಿಯ ತುಡಿತವೂ ನನ್ನೊಳಗಿನ ಆ ರಾಗದೆಡೆಗಿನ ಹಸಿವಿನ ಹರಹಿನ ಕೂಸು...
ಕೊನೆಗೆ ಈ ಬದುಕು ಕೂಡಾ ಸಾವಿನಲ್ಲಿ ಮತ್ತು ಸಾವಿನಾಚೆಯ ಕರುಣೆಯೆಡೆಗಣ ಹಸಿವೇ ಇರಬೇಕು...!!!

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Saturday, December 5, 2015

ಗೊಂಚಲು - ನೂರಾ ಎಪ್ಪತ್ತೆರಡು.....

ಏನೇನೋ ಅನ್ನಿಸಿ.....

ಬದುಕೇ - ನಿನ್ನೊಲವೆಂದರೆ ಬೆತ್ತಲಿಗೂ ಅಸ್ಪಷ್ಟತೆಯ ಕರಿ ಪತ್ತಲ ಹೊದೆಸುವ ಈ ಕತ್ತಲಿನಂತೆಯೇ; ಒಳಗಿಳಿದಷ್ಟೂ ಗಾಢ, ಬಗೆದಷ್ಟೂ ನಿಗೂಢ...
***
ಎಷ್ಟೆಲ್ಲ ಭಾವಗಳ ಬಸಿರಲಿಟ್ಟುಕೊಂಡೂ ಯಾವ ಭಾವಕೂ ಸಾಕ್ಷಿ ಒದಗಿಸದು ಆ ತೀರದಲ್ಲಿನ ಮೌನ...
ಎಷ್ಟೇ ಸಿಂಗರಿಸಿಕೊಂಡು ಎದುರಾ ಎದುರಲ್ಲಿ ನರ್ತಿಸಿದರೂ ಪ್ರೀತಿ ಹುಟ್ಟಿಸದು ಪ್ರಾಮಾಣಿಕ ಭಾವದ ಸ್ರವಿಕೆಯಿಲ್ಲದ ಮಾತು...
ಮಾತಿರಲಿ, ಮೌನವೇ ಆಗಲಿ ಕರುಳ ಕರೆಯು ತೇಯ್ದ ಆಪ್ತತೆಯ ಗಂಧ ಬೆರೆತು ಅರಳುವಲ್ಲಿ ಮಾತ್ರ ಕಣ್ಣ ಹನಿಗೂ ಗಂಗೆಯ ಘನತೆ ಸಂದೀತು...
ಮಾತಿಗೂ ಮೌನಕೂ ನೇರಾ ನೇರ ಸಾಕ್ಷಿಯಾಗಿ ಸಾವಿರಾರು ಗಾವುದ ಜೊತೆ ನಡೆದರೂ ಆತ್ಮದ ಬೆಸುಗೆ ಕೂಡದ ಬಂಧ ಕಾಡುವ ಬಂಧನವೇ ಆಗುಳಿದೀತು ಉಸಿರ ಕೊನೆವರೆಗೂ...
***
ಹೆಚ್ಚಿನ ನೆನಪುಗಳು ಬಂದಳಕವಾಗಿ ಹಬ್ಬದೇ ಹೋಗಿದ್ದಿದ್ದರೆ ಕನಸ ಮರಕೆ ಗಗನವೇ ಗಮ್ಯವಾಗಿರುತಿತ್ತು...
ನಿನ್ನೆಯ ನೆನಹು ನೆರಳಾಗದಿದ್ದರೆ ಬೇಡ ಬಿಡಿ ಮುಳ್ಳಾಗಿ ಚುಚ್ಚದಿರೆ ಅಷ್ಟೇ ಸಾಕು ಅಂದರೆ ಜಾಲಿಯ ಮರಕೆ ಮುಳ್ಳೇ ಅಲಂಕಾರವಂತೆ...
ಕನಸಿಲ್ಲದ ದಾರಿಯಲಿ ಮುಂಬೆಳಗು, ಮುಸ್ಸಂಜೆ, ಸುಡು ಮಧ್ಯಾಹ್ನ, ನಟ್ಟಿರುಳು ಎಲ್ಲಕೂ ಒಂದೇ ಬಣ್ಣ...
ಇಷ್ಟಾದರೂ ಬದುಕ ಋಣ ಬಲು ಹಿರಿದು; ಕನಸಿಲ್ಲದ ಹಾದಿಯಲೂ ನೇಹಗಳ ಅರವಟ್ಟಿಗಳನಿಟ್ಟು ಸಲಹುತ್ತೆ - ಕನಸಿಲ್ಲದ ಪಯಣಕೆ ಸ್ನೇಹದ ಹಸ್ತವೇ ನೆರಳು - ಪ್ರತಿ ಹುಟ್ಟಿನ ಬೆನ್ನ ಮಚ್ಚೆಯಾಗಿ ಹುಟ್ಟಿದ ಸಾವಿನ ಹುಣ್ಣಿಗೂ ಬೆಚ್ಚದಂತೆ ನೇಹದ ನಗೆಯ ನೆರಳು ಪೊರೆಯಬಲ್ಲುದು...
ಆತ್ಮ ಸಂಗಾತಗಳಿಗೊಂದು ನಮನ..._/\_
***
ಈ ಕಣ್ಣ ಕಣಜದ ತುಂಬಾ ಎದೆಯ ತೋಟದ ಕನಸ ಬೆಳೆಯ ಬೆಳಕು ತುಂಬಿದೆ...
ಉಸಿರ ಧಾರೆ ನಿಂತ ಘಳಿಗೆಗೆ ಎದೆಯ ನೆಲ ಬರಡಾಗುವದಂತೆ...
ಉಹುಂ ದೇಹ ಕೊರಡಾದ ಮಾತ್ರಕ್ಕೆ ಆ ಕ್ಷಣಕೇ ತಾನೇನೂ ಬರಿದಾಗಿಬಿಡದು ಅಕ್ಷಿಯೆಂಬೋ ಬೆಳಕ ಅಕ್ಷಯ ಪಾತ್ರೆ...
ನಾ ನಡೆವ ಇದೇ ಹಾದಿಯ ಬದಿಯಲಿ ಕಣ್ಣ ಕೊಳಗದ ಆಸರೆಯೂ ಇಲ್ಲದ ಎಷ್ಟೆಲ್ಲಾ ಸಮೃದ್ಧ ಕನಸ ತೋಟಗಳೆದುರಾದವೋ...
ರಸ್ತೆ ದಾಟಿಸಿಯೋ, ಭಿಕ್ಷೆ ಎಸೆದೋ ಮುನ್ನಡೆದರಷ್ಟೇ ಸಾಲದು ಅನ್ನಿಸಿತು - ನೇತ್ರ ದಾನ ಮಾಡಿದೆ...
ಇಲ್ಲಿ ಬೇರು ಕಳೆದುಕೊಂಡ ಬೆಳಕು ಇನ್ಯಾರದೋ ಬದುಕ ಕನಸಿಗೆ ಉಸಿರ ತುಂಬಲೆಂಬಾಸೆಗೆ - ನನ್ನ ನೋಟಕೊಂದು ಸಾರ್ಥಕ್ಯ ಉಳಿಯಲೆಂಬ ಕನವರಿಕೆಗೆ...
ಇದ್ದೀತು ನಾನಳಿದ ಮೇಲೂ ನನ್ನ ಹಾಡು ಉಳಿಯಲೆಂಬ ದುರಾಸೆ ಕೂಡ (?)...
***
ನೋವು ಆತ್ಮ ಬಂಧು - ನಗೆಯು ಬದುಕ ಸಿಂಧು....
ಉಂಡ ಎಲ್ಲ ನೋವಿನನ್ನ ಜೀರ್ಣಗೊಂಡು ನಗೆಯ ಸಕ್ಕರೆಯಾಗಿ ಬದುಕ ಧಮನಿಗಳಲಿ ಸೇರಿ ನಾಳೆಗಳ ಬೆಳಕಾಗಿ ಸಂಚಯಿಸಲಿ...
ನೆನಪುಗಳೆಡೆಗಣ ಭಯವೇ ಕನಸ ಹಾದಿಯ ದೊಂದಿಯಾಗಲಿ...
***
ಮರುಭೂಮಿಯ ಗಾಳಿಯಲ್ಲಿ ತೇಲಿಬಿಟ್ಟ ಎನ್ನೆದೆಯ ಬೆವರ ಗಂಧ ಖರ್ಜೂರದ ಎಸಳಿನಲ್ಲಿ ನಿನ್ನ ಸೇರಿ, ಪೂರ್ವ ಜನ್ಮದ ಮಧುರ ಪಾಪದ ನೆನಹು ಕಾಡಿ, ಕಾಡಿಗೆ ಕಣ್ಣು ಮತ್ತೆ  ಮಿನುಗೀತೆಂಬ ಕನಸ ಕಾಯ್ವ ಬಂಡ ಯಾತ್ರಿಕ ನಾನು...
ಹೊಸ ಹಾಡು ಹುಟ್ಟದ ಹಾದಿಯಲ್ಲಿ ಈ ಒಂಟಿ ಪಥಿಕನ ನಿನ್ನ ಸೇರುವ ಹುಚ್ಚು ಮೋಹದ ಅದೇ ಹಳೆಯ ಕುಂಟು ಹೆಜ್ಜೆ ಗುರುತುಗಳೇ ಕವಿತೆಗಳು...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Wednesday, December 2, 2015

ಗೊಂಚಲು - ನೂರೆಪ್ಪತ್ತೊಂದು.....

ಎಂಥ ಚಂದ ಅವರ ಆ ಗೆಳೆತನ..... 
(ಮಧುರ ಹೊಟ್ಟೆಕಿಚ್ಚಿನೊಂದಿಗೆ... )

ಅವನೋ ಉರಿ ಮೋರೆಯ ಸುಡು ಬೆಳಕಿನ ಹುಡುಗ...
ದಿನವಿಡೀ ತನ್ನೊಳಗೆ ತಾ ಸುಟ್ಟು ಬೆಳಗುತ್ತಾನೆ ಇವಳಿಗೆಂದೇ...

ಇವಳಾದರೋ ಸುಟ್ಟಲ್ಲದೆ ಹುಟ್ಟುವುದಿಲ್ಲ ಎಂದು ನಂಬಿರುವ ಒಲವನುಟ್ಟು ಉಂಡು ನಗುವ ಹಸಿ ಮೈಯ ಹುಡುಗಿ...
ನಿತ್ಯ ಬಾಣಂತಿ ಹೆಣ್ಣಿವಳು ಆ ಬೆಂಕಿಯನೇ ಮೈಯ್ಯಾರ ಹೀರಿ ಹಸಿರಿಗೆ ಹಾಲುಣಿಸುತಾಳೆ, ಜೀವ ಜಾಲಕೆಲ್ಲ ಮಡಿಲೀಯುತಾಳೆ...

ಇವನೊಬ್ಬನಿದ್ದಾನೆ ಅವನಿಂದ ಉರಿಯನಿಷ್ಟು ಸಾಲ ತಂದು ಹಸಿ ಹಾಲಂತೆ ತಂಪಾಗಿಸಿ ಇವಳ ಹೆರಳ ತೊಳೆದು ಇವಳ ಭಾವದ ಕಡಲು ಉಕ್ಕುಕ್ಕಿ ಮೊರೆವಂತೆ ಮಾಡಿ ನಲಿವ ಬೆಳುದಿಂಗಳ ಮಾಯಕಾರ...
ಅವನ ಮತ್ತಿವಳ ನಡುವಿನ ಭಾವ ತಂತುವಂತೆ ಕಾಣುತಾನೆ...
ಅವನೇ ಇವಳ ಸುಟ್ಟ ಗಾಯಕೆ, ಹಡೆದ ನೋವಿಗೆ ತಂಪನೀಯಲು ಇವನ ನೇಮಿಸಿರಲೂಬಹುದೇನೊ...

ಅಥವಾ ಕಡು ಮೋಹಿ ಹೆಣ್ಣಿವಳು ಜೀವದ ನಡೆಗೆ ಅವನ ಸುಡು ಹೆಜ್ಜೆಯ ಜೊತೆಯಿರಲಿ, ಭಾವದ ನುಡಿಗೆ ಇವನ ತಂಪಿನ ಮಡಿಲಿರಲಿ ಎಂದು ಇವಳೇ ಈರ್ವರನೂ ಬೆಸೆದುಕೊಂಡಿರಲೂ ಸಾಕು...

ಅದೇನೇ ಇರಲಿ ಅವನು, ಇವಳು, ಇವನದು ಹುಟ್ಟಿನಿಂದಲೇ ಬೆಸೆದುಕೊಂಡ ಅಂತೆಲ್ಲಾ ಏರಿಳಿತಗಳಾಚೆಯೂ ಇಂತೆಯೇ ಉಳಕೊಂಡ ಕತ್ತಲಷ್ಟು ಆಳದ ಬೆಳಕಿನಷ್ಟು ವಿಸ್ತಾರದ ಸ್ನೇಹ...

ಆದರೂ ಯಾವುದೀ ಗಾಢ ಮೋಹವು ಒಬ್ಬರಿಗೊಬ್ಬರು ಮಾರಿಕೊಂಡವರಂತೆ ಒಬ್ಬರನೊಬ್ಬರು ಪ್ರೀತಿಸಿಕೊಳ್ಳುವಲ್ಲಿ ಕೂಡಿಕೊಂಡಿರೋ ಕೊಂಡಿ...!?
ಅವರವರೊಳಗಣ ಹುಸಿ ಮುನಿಸು ಕೂಡಾ ಪ್ರಳಯವನೇ ಸೃಷ್ಟಿಸುವ ಮೋಡಿ...!!!

ಪ್ರಕೃತಿಯೇ ನಿನಗಿದೋ ನಮನ...