Saturday, December 5, 2015

ಗೊಂಚಲು - ನೂರಾ ಎಪ್ಪತ್ತೆರಡು.....

ಏನೇನೋ ಅನ್ನಿಸಿ.....

ಬದುಕೇ - ನಿನ್ನೊಲವೆಂದರೆ ಬೆತ್ತಲಿಗೂ ಅಸ್ಪಷ್ಟತೆಯ ಕರಿ ಪತ್ತಲ ಹೊದೆಸುವ ಈ ಕತ್ತಲಿನಂತೆಯೇ; ಒಳಗಿಳಿದಷ್ಟೂ ಗಾಢ, ಬಗೆದಷ್ಟೂ ನಿಗೂಢ...
***
ಎಷ್ಟೆಲ್ಲ ಭಾವಗಳ ಬಸಿರಲಿಟ್ಟುಕೊಂಡೂ ಯಾವ ಭಾವಕೂ ಸಾಕ್ಷಿ ಒದಗಿಸದು ಆ ತೀರದಲ್ಲಿನ ಮೌನ...
ಎಷ್ಟೇ ಸಿಂಗರಿಸಿಕೊಂಡು ಎದುರಾ ಎದುರಲ್ಲಿ ನರ್ತಿಸಿದರೂ ಪ್ರೀತಿ ಹುಟ್ಟಿಸದು ಪ್ರಾಮಾಣಿಕ ಭಾವದ ಸ್ರವಿಕೆಯಿಲ್ಲದ ಮಾತು...
ಮಾತಿರಲಿ, ಮೌನವೇ ಆಗಲಿ ಕರುಳ ಕರೆಯು ತೇಯ್ದ ಆಪ್ತತೆಯ ಗಂಧ ಬೆರೆತು ಅರಳುವಲ್ಲಿ ಮಾತ್ರ ಕಣ್ಣ ಹನಿಗೂ ಗಂಗೆಯ ಘನತೆ ಸಂದೀತು...
ಮಾತಿಗೂ ಮೌನಕೂ ನೇರಾ ನೇರ ಸಾಕ್ಷಿಯಾಗಿ ಸಾವಿರಾರು ಗಾವುದ ಜೊತೆ ನಡೆದರೂ ಆತ್ಮದ ಬೆಸುಗೆ ಕೂಡದ ಬಂಧ ಕಾಡುವ ಬಂಧನವೇ ಆಗುಳಿದೀತು ಉಸಿರ ಕೊನೆವರೆಗೂ...
***
ಹೆಚ್ಚಿನ ನೆನಪುಗಳು ಬಂದಳಕವಾಗಿ ಹಬ್ಬದೇ ಹೋಗಿದ್ದಿದ್ದರೆ ಕನಸ ಮರಕೆ ಗಗನವೇ ಗಮ್ಯವಾಗಿರುತಿತ್ತು...
ನಿನ್ನೆಯ ನೆನಹು ನೆರಳಾಗದಿದ್ದರೆ ಬೇಡ ಬಿಡಿ ಮುಳ್ಳಾಗಿ ಚುಚ್ಚದಿರೆ ಅಷ್ಟೇ ಸಾಕು ಅಂದರೆ ಜಾಲಿಯ ಮರಕೆ ಮುಳ್ಳೇ ಅಲಂಕಾರವಂತೆ...
ಕನಸಿಲ್ಲದ ದಾರಿಯಲಿ ಮುಂಬೆಳಗು, ಮುಸ್ಸಂಜೆ, ಸುಡು ಮಧ್ಯಾಹ್ನ, ನಟ್ಟಿರುಳು ಎಲ್ಲಕೂ ಒಂದೇ ಬಣ್ಣ...
ಇಷ್ಟಾದರೂ ಬದುಕ ಋಣ ಬಲು ಹಿರಿದು; ಕನಸಿಲ್ಲದ ಹಾದಿಯಲೂ ನೇಹಗಳ ಅರವಟ್ಟಿಗಳನಿಟ್ಟು ಸಲಹುತ್ತೆ - ಕನಸಿಲ್ಲದ ಪಯಣಕೆ ಸ್ನೇಹದ ಹಸ್ತವೇ ನೆರಳು - ಪ್ರತಿ ಹುಟ್ಟಿನ ಬೆನ್ನ ಮಚ್ಚೆಯಾಗಿ ಹುಟ್ಟಿದ ಸಾವಿನ ಹುಣ್ಣಿಗೂ ಬೆಚ್ಚದಂತೆ ನೇಹದ ನಗೆಯ ನೆರಳು ಪೊರೆಯಬಲ್ಲುದು...
ಆತ್ಮ ಸಂಗಾತಗಳಿಗೊಂದು ನಮನ..._/\_
***
ಈ ಕಣ್ಣ ಕಣಜದ ತುಂಬಾ ಎದೆಯ ತೋಟದ ಕನಸ ಬೆಳೆಯ ಬೆಳಕು ತುಂಬಿದೆ...
ಉಸಿರ ಧಾರೆ ನಿಂತ ಘಳಿಗೆಗೆ ಎದೆಯ ನೆಲ ಬರಡಾಗುವದಂತೆ...
ಉಹುಂ ದೇಹ ಕೊರಡಾದ ಮಾತ್ರಕ್ಕೆ ಆ ಕ್ಷಣಕೇ ತಾನೇನೂ ಬರಿದಾಗಿಬಿಡದು ಅಕ್ಷಿಯೆಂಬೋ ಬೆಳಕ ಅಕ್ಷಯ ಪಾತ್ರೆ...
ನಾ ನಡೆವ ಇದೇ ಹಾದಿಯ ಬದಿಯಲಿ ಕಣ್ಣ ಕೊಳಗದ ಆಸರೆಯೂ ಇಲ್ಲದ ಎಷ್ಟೆಲ್ಲಾ ಸಮೃದ್ಧ ಕನಸ ತೋಟಗಳೆದುರಾದವೋ...
ರಸ್ತೆ ದಾಟಿಸಿಯೋ, ಭಿಕ್ಷೆ ಎಸೆದೋ ಮುನ್ನಡೆದರಷ್ಟೇ ಸಾಲದು ಅನ್ನಿಸಿತು - ನೇತ್ರ ದಾನ ಮಾಡಿದೆ...
ಇಲ್ಲಿ ಬೇರು ಕಳೆದುಕೊಂಡ ಬೆಳಕು ಇನ್ಯಾರದೋ ಬದುಕ ಕನಸಿಗೆ ಉಸಿರ ತುಂಬಲೆಂಬಾಸೆಗೆ - ನನ್ನ ನೋಟಕೊಂದು ಸಾರ್ಥಕ್ಯ ಉಳಿಯಲೆಂಬ ಕನವರಿಕೆಗೆ...
ಇದ್ದೀತು ನಾನಳಿದ ಮೇಲೂ ನನ್ನ ಹಾಡು ಉಳಿಯಲೆಂಬ ದುರಾಸೆ ಕೂಡ (?)...
***
ನೋವು ಆತ್ಮ ಬಂಧು - ನಗೆಯು ಬದುಕ ಸಿಂಧು....
ಉಂಡ ಎಲ್ಲ ನೋವಿನನ್ನ ಜೀರ್ಣಗೊಂಡು ನಗೆಯ ಸಕ್ಕರೆಯಾಗಿ ಬದುಕ ಧಮನಿಗಳಲಿ ಸೇರಿ ನಾಳೆಗಳ ಬೆಳಕಾಗಿ ಸಂಚಯಿಸಲಿ...
ನೆನಪುಗಳೆಡೆಗಣ ಭಯವೇ ಕನಸ ಹಾದಿಯ ದೊಂದಿಯಾಗಲಿ...
***
ಮರುಭೂಮಿಯ ಗಾಳಿಯಲ್ಲಿ ತೇಲಿಬಿಟ್ಟ ಎನ್ನೆದೆಯ ಬೆವರ ಗಂಧ ಖರ್ಜೂರದ ಎಸಳಿನಲ್ಲಿ ನಿನ್ನ ಸೇರಿ, ಪೂರ್ವ ಜನ್ಮದ ಮಧುರ ಪಾಪದ ನೆನಹು ಕಾಡಿ, ಕಾಡಿಗೆ ಕಣ್ಣು ಮತ್ತೆ  ಮಿನುಗೀತೆಂಬ ಕನಸ ಕಾಯ್ವ ಬಂಡ ಯಾತ್ರಿಕ ನಾನು...
ಹೊಸ ಹಾಡು ಹುಟ್ಟದ ಹಾದಿಯಲ್ಲಿ ಈ ಒಂಟಿ ಪಥಿಕನ ನಿನ್ನ ಸೇರುವ ಹುಚ್ಚು ಮೋಹದ ಅದೇ ಹಳೆಯ ಕುಂಟು ಹೆಜ್ಜೆ ಗುರುತುಗಳೇ ಕವಿತೆಗಳು...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

1 comment: