Friday, January 25, 2013

ಗೊಂಚಲು - ಐವತ್ತು ಮತ್ತು ಒಂಭತ್ತು.....

ಬೆಳದಿಂಗಳ ನಗು.....
...ಇದು ನನ್ನೆಡೆಗಿನ ನಿಮ್ಮಗಳ ನಿಷ್ಕಾರಣ ಪ್ರೀತಿಯ ಅಭಿಮಾನಕ್ಕೆ ಮತ್ತು ನನ್ನ ಭಾವ ಬರಹಗಳ ಗೊಂಚಲಿಗೆ ಎರಡು ವಸಂತಗಳು ಸಂದ ಸಂಭ್ರಮದ ನಗು...ನಿಮ್ಮ ಪ್ರೀತಿಗೆ ನನ್ನ ನಮನಗಳು...ಈ ಪ್ರೀತಿ ಅನವರತ ಜಾರಿಯಲಿರಲಿ ಇದೇ ರೀತಿ...ಅಕ್ಷರ ಪ್ರೀತಿ ಬೆಸೆಯಲಿ ಬಂಧಗಳ...ವಿಶ್ವಾಸ ವೃದ್ಧಿಸಲಿ - ಶ್ರೀ...

ಹೊರಗೆ ಬೆಳದಿಂಗಳಿದೆ. 
ಬೆಳದಿಂಗಳು ನನಗ್ಯಾವತ್ತೂ ಆಕರ್ಷಣೀಯವೇ.
ಹಾಗೇ ನೋಡ್ತಿದ್ದೆ.
ಏನೋ ಗಡಿಬಿಡಿ ಇರುವಂತೆ, ಯಾರನ್ನೋ ತುರ್ತಾಗಿ ನೋಡಲೇಬೇಕೆಂಬಂತೆ ಒಂದು ಉಲ್ಕೆ ಬಾನಲ್ಲಿ ವೇಗವಾಗಿ ಓಡ್ತಾ ಇತ್ತು.
ಕಣ್ಣಿಗೆ ಕಾಣೋವರೆಗೂ ಅದನ್ನ ನೋಡಿದೆ.
ಎಂಥ ಖುಷಿ ಗೊತ್ತಾ...

ಮೊದಲ್ಯಾವತ್ತಾದ್ರೂ ಬರೆದಿದ್ದೀನಾ.?
ನೆನಪಿಲ್ಲ.
ಏನಂದ್ರೆ -
ಬೆಳದಿಂಗಳ ರಾತ್ರಿಗಳಲ್ಲೂ ವೈವಿಧ್ಯವಿದೆ ಕಣ್ರೀ.
ಹುಣ್ಣಿಮೆಯಂದು ಹೊಳೆವ ಪ್ರಕೃತಿಗೂ, ಬಿದಿಗೆಯಂದು ಕಾಣೋ ಸೃಷ್ಟಿ ಸೌಂದರ್ಯಕ್ಕೂ ವ್ಯತ್ಯಾಸವಿದೆ.
ಬೆಳದಿಂಗಳ ಚೆಲ್ಲೋ ಚಂದಿರನೊಬ್ಬನೇ.
ಕೆಳಗೆ ಅರಳಿ ನಳನಳಿಸೋ ವಸುಧೆಯೂ ಒಬ್ಬಳೇ.
ಆದರೂ ವೈವಿಧ್ಯ.
ಬೆಳದಿಂಗಳು ಪ್ರಖರವಾಗಿರುವ ಪೌರ್ಣಿಮೆಯಂದು ವಸುಧೆ -
ಹಾಲಲ್ಲಿ ಮಿಂದು ಮೈಯೊರೆಸಿಕೊಳ್ಳುವುದನ್ನು ಮರೆತವಳಂತೆ,
ಕಪ್ಪಂಚಿನ ಬಿಳಿಸೀರೆಯನುಟ್ಟು ಪ್ರಚ್ಛನ್ನವಾಗಿ ನಗುತ್ತ ನಿಂತ ಪ್ರಬುದ್ಧ ಚೆಲುವೆಯಂತೆ ಗೋಚರಿಸುತ್ತಾಳೆ.
ಅದೇ ಬಿದಿಗೆ ಮತ್ತು ಆಚೀಚಿನ ದಿನಗಳಲ್ಲಿ -
ಬಾಗಿಲ ಮರೆಯಿಂದ ಅಸ್ಪಷ್ಟವಾಗಿ ಇಣುಕುವ,
ತೆಳ್ಳನೆಯ ನಾಚಿಕೆಯ ತೆರೆ ಹೊದ್ದ,
ಕಡೆಗಣ್ಣಲ್ಲೇ ನೋಡಿ,
ತುಟಿಯಂಚಲ್ಲೇ ನಕ್ಕೂ ನಗದಂತಿರುವ
ಹೊಸ ಹರೆಯದ ಚೆಲುವರಳುವ ಸಮಯದ ಮುಗುದೆಯಂತೆ ಕಂಡು ಪುಳಕವೆಬ್ಬಿಸುತ್ತಾಳೆ.
ಎಂಥ ಸವಿರಸ ರೋಮಾಂಚನ...

                                  @@@@@


ಮೊನ್ನೆ ದಿನ ಬಿದಿಗೆಯ ಚಂದಿರ ಆಗಸದಿ ನಗುತಲಿದ್ದ.
ಆತ ಚೆಲ್ಲಿದ ಬೆಳದಿಂಗಳು ನೊರೆ ಹಾಲಿನಂತೆ ತೆಂಗು, ಅಡಿಕೆ, ಮಾವಿನ ಮರಗಳ ಮೇಲೆಲ್ಲಾ ಓಕುಳಿಯಾಡುತಿತ್ತು.
ಅಂಗಳದಲಿ ನಿಂತು ನೋಡಿದರೆ ಹಾಯೆನಿಸುವಂತಿತ್ತು.
ಒಂದು ಕ್ಷಣ ಇಂದು ಹುಣ್ಣಿಮೆ ಇರಬಹುದಾ ಅಂತ ಅನುಮಾನ ಪಡುವಷ್ಟು ಬೆಳದಿಂಗಳು.
ಬಿದಿಗೆಯ ಚಂದ್ರ ಹೇಗೆ ಇಷ್ಟೆಲ್ಲ ಬೆಳಗಲು ಸಾಧ್ಯ ಅನ್ನಿಸ್ತು.
ಸೂರ್ಯನಿಂದ ಸ್ವಲ್ಪ ಜಾಸ್ತಿಯಾಗಿ ಬೆಳಕ ಇಸಿದುಕೊಂಡಿರಬಹುದಾ ಅಂತ ಯೋಚಿಸ್ತಿದ್ದೆ.
ಆದ್ರೆ ಅದು ಸರಿಯಾದ ಕಾರಣವಲ್ಲಾ ಅಂತ ನಂಗೇ ಗೊತ್ತಾಗ್ತಿತ್ತು.
ತಲೆಯೆತ್ತಿ ಸರಿಯಾಗಿ ಚಂದ್ರನ್ನ ನೋಡಿದ್ರೆ ಏನೋ ಕಚಗುಳಿಯಿಂದ ಸ್ಫೂರ್ತಗೊಂಡ ಉಲ್ಲಾಸದಂಥದ್ದು ಅವನ ಮೊಗದಲ್ಲಿತ್ತು.
ಏನಿದ್ದೀತು ಕಾರಣ ಅಂತ ಅವನು ಮತ್ತೆ ಮತ್ತೆ ನೋಡುತ್ತಿದ್ದ ಕಡೆಗೆ ತಿರುಗಿ ನೋಡಿದೆ.
ಫಕ್ಕನೆ ಉತ್ತರ ಸ್ಪಷ್ಟವಾಯ್ತು.
ದುಂಡು ಮಲ್ಲಿಗೆಯೊಂದು ಬಿರಿದಂತೆ,
ಯಾವುದೋ ಸವಿ ನೆನಪು ಕೈಜಗ್ಗಿ ಕಾಡಿದಂತೆ,
ಹಾಗೇ ಸುಮ್ಮನೆ
ನೀನಲ್ಲಿ ನಿಂತು ನಗುತಲಿದ್ದೆ...
ಚಂದಿರ ನಿನ್ನ ಕೆನ್ನೆ ಗುಳಿಯನು ತನ್ನ ಬೆಳಕಿಂದ ತಾಕಿ ಉಲ್ಲಸಿತನಾಗುತಿದ್ದ...

ಸಣ್ಣ ಆಸೆ ನನ್ನಲ್ಲಿ...
ನಿನ್ನ ನಗುವ ಹಿಂದಿನ ಮಧುರ ನೆನಪಲ್ಲಿ ನಾನಿರಬಹುದಾ..!!!

ಹುಣ್ಣಿಮೆಯ ದಿನ ಬಿಳಿ ಮೋಡದ ಹದವಾದ ತೆರೆಯೊಂದು ಚಂದ್ರನ ಸುತ್ತುವರಿದರೆ ಅವನ ಸುತ್ತ ತಿಳಿಕೇಸರಿಯ ಬಳೆಯಂಥ ಪ್ರಭಾವಲಯವೊಂದು ಮೂಡಿನಿಲ್ಲುತ್ತದೆ.
ಆ ಸೊಬಗ ನೋಡಿದ್ದೀಯಾ ಒಮ್ಮೆಯಾದರೂ..?
ಆ ಚೆಲುವ ಹೀರಿಕೊಳ್ಳುವುದು ಕಣ್ಣಿಗೊಂದು ಹಬ್ಬ.


ಅವತ್ತೂ ಹಾಗೇ ಆಗಿತ್ತು...
ಅದ್ಯಾರದೋ ಮದುವೆ ಮನೇಲಿ ಗೆಳತಿಯರ ಹಿಂಡಿನ ನಡುವೆ ತಿಳಿಕೇಸರಿ ಸೀರೆಯಲಿ ನಗುತ ಕಂಗೊಳಿಸುತ್ತಿದ್ದ ನಿನ್ನ ಮೊದಲಬಾರಿ ನಾ ಕಂಡಿದ್ದೆ.
ಸಮ್ಮೋಹಿತನಾದ ನನ್ನಲ್ಲಿ ಹಗಲಲ್ಲೇ ಆ ಹುಣ್ಣಿಮೆ ಚಂದಿರನ ಕಂಡಂಥ ಭಾವ ಸಮ್ಮಿಲನ...

ಹುಡುಗೀ -
ನಿನ್ನ ಮುಂಗುರುಳ ಸುರುಳಿಯಲಿ ಬಂಧಿಯಾದ ನನ್ನ ಮನಸಲೀಗ ಒಲವಿನಲೆಗಳ ಅಬ್ಬರ...
ಮೊದಲೆಲ್ಲ ಬೆಳದಿಂಗಳ ಬೆಳಕಲ್ಲಿ ಭುವಿಯ ನೋಡಲು ಎಷ್ಟು ಸೊಗಸಿತ್ತು.
ಈಗೀಗ ಚಂದ್ರನ ನೋಡಿದರೆ ನಿನ್ನೇ ನೋಡಿದಂತಾಗಿ ಇಹವ ಮರೆವ ನನ್ನ ಮನದ ಪರಿಯ ಹೇಗೆ ಹೇಳಲಿ ನಿನಗೆ...

ನನ್ನ ಒಲವಿನ ಕನಸ ತುಂಬ ನೀನೇ - ಬರೀ ನೀನೇ
'ಪೌರ್ಣಿಮೆ....'

ಚಿತ್ರ ಕೃಪೆ : ಅಂತರ್ಜಾಲದಿಂದ...

Friday, January 11, 2013

ಗೊಂಚಲು - ಐವತ್ತೆಂಟು.....

ಕನಸೇ.....

ಬದುಕು ಕಸಿದುಕೊಂಡ ಸಾವಿರಾರು ಖುಷಿಗಳಲ್ಲಿ 
ನೀನೂ ಒಂದು ಖುಷಿ ಎಂದುಕೊಂಡು 
ನಿನ್ನ ಮರೆಯಲೆತ್ನಿಸಿದೆ....
ಆದರೆ -
ಜೀವ ಭಾವಗಳಲ್ಲಿ ಬೆರೆತುಹೋಗಿ 
ಚಿತ್ತ ಭಿತ್ತಿಯಲಿ ಕನಸುಗಳಿಗೆ 
ಉಸಿರನಿತ್ತವಳು ನೀನು...
ಖುಷಿಯಿಲ್ಲದೇ ಬದುಕಿಯೇನು...
ಕನಸೇ ಇಲ್ಲದೆ ಹೇಗೆ ಬದುಕಿಯೇನು..???

ನಿಚ್ಛಳ ಬೆಳದಿಂಗಳು...
ಮಂದ ಮಾರುತ...
ರಾತ್ರಿ ರಾಣಿಯ ಗಂಧ...
ಮುಂಜಾನೆ ಅಂಗಳದಲಿ ಇಬ್ಬನಿ ತಬ್ಬಿದ 
ಪಾರಿಜಾತದ ರಂಗೋಲಿ...
ಇವೆಲ್ಲ ನಿನ್ನ ಕೆನ್ನೆ ಗುಳಿಯ ಒನಪು 
ಮತ್ತು 
ನಿನ್ನ ಹರಡಿದ ಹೆರಳ ಕಂಪ 
ನೆನಪ ಹೊತ್ತು ತಂದು ಈಗಲೂ ಕಾಡುತ್ತವೆ.
ರಾತ್ರಿಯ ನೀರವ ಮೌನದಲ್ಲಿ ಅರಚುವ 
ಜೇಡರ ಹುಳದ ಗಿಜಿಗಿಜಿ ಸದ್ದು 
ನಿನ್ನ ಗೆಜ್ಜೆ ನಾದದಂತೆ ಕೇಳಿ 
ಈಗಲೂ ನನ್ನೆದೆ ಡಮರುಗವಾಗುತ್ತೆ.

ನಿನ್ನ ಜೊತೆ ನಡೆವಾಗ
ಮೌನ ಗುನುಗುವ ಪಿಸುಮಾತು...
ಅಮಾವಾಸ್ಯೆಯ ಕತ್ತಲಲೂ
ಹೊಳೆವ ನಿನ್ನ ಮುಗುಳ್ನಗು...
ನನ್ನ ಕಾಡಲೆಂದೇ
ಹೊಯ್ದಾಡುವ ನಿನ್ನ ಮುಂಗುರುಳು...
ಕಟ್ಟಿ ಕೊಡುತಿದ್ದ 
ಸಾವಿರ ಹೊಂಗನಸುಗಳು...
ಎಲ್ಲ ನಲುಗಿ ಹೋದವು...
ಸಮಾಜದ
ಅರಿವಿಗೆ ಕುರುಡಾದ - ಪರಂಪರೆಯ 
ಕೆಂಗಣ್ಣಿಗೆ ಸಿಲುಕಿ...

ನಿನ್ನ ನೋವಿನ ನಿಟ್ಟುಸಿರು...
ಸಮಾಜವ ಜಯಿಸಲಾರದ ನನ್ನ ಹೇಡಿತನ...
ಸಂತೆ ನೆರೆದ ಸಂಸಾರದಲೂ
ಇಬ್ಬರದೂ
ಏಕಾಂಗಿ ಬಾಳು...
ನಮ್ಮನ್ನು ನಾವೂ ಪ್ರೀತಿಸಿಕೊಳ್ಳಲಾಗದ
ನಮ್ಮೊಳಗಿನ ಗೋಳು...

ಕೊಟ್ಟ ಕೊನೆಯಲಿ ನೀ ಆಡಿದ ಮಾತು :
ಪ್ರತಿದಿನ ನೀನು ಆಸ್ತೆಯಿಂದ ಮುದ್ದಿಸುತಿದ್ದ 
ನನ್ನ ಕಿರುಬೆರಳ ಮಚ್ಚೆಯಲಿ 
ನಿನ್ನ ಉಸಿರಿನ ನೆನಪು ಸದಾ ಹಸಿರಾಗಿರುತ್ತೆ ಕಣೋ...
ಆ ಮಾತೇ ಈಗಿನ್ನೂ ನಾನು ಉಸಿರಾಡುತಿರಲು ಪ್ರೇರಣೆ ಕಣೇ...

Saturday, January 5, 2013

ಗೊಂಚಲು - ಐವತ್ತು + ಏಳು.....

ನೋವು ನಗುವಿನ ತೊಟ್ಟಿಲು.....
[ಒಂದಷ್ಟು ಅರ್ಧಸತ್ಯಗಳ ರವಾನಿಸಿದ್ದೇನೆ ಇಲ್ಲಿ]


ಸ್ನೇಹಿತೆಯೊಬ್ಬಳು ಮಾತನಾಡುತ್ತಾ 'ನಗುವ ಜತೆ ಜತೆಗೆ ನಮ್ಮೊಳಗಣ ನೋವನ್ನೂ ವಿನಿಮಯ ಮಾಡಿಕೊಂಡಾಗಲೇ ಗೆಳೆತನವೊಂದು ಗಟ್ಟಿಯಾಗಿ ಬೆಸೆಯಲು ಸಾಧ್ಯ ಕಣೋ' ಅಂತಿದ್ದಳು.
'ನೋವು ಒಳಗಿರುವಾಗ ಮೊಗದಲ್ಲಿ ನಗುತಿರುವುದು ಕೃತಕವೆನ್ನಿಸೊಲ್ಲವಾ.?' ಅಂತ ಪ್ರಶ್ನಿಸಿದ್ದ ಗೆಳೆಯನೊಬ್ಬ.
ಅವೆಲ್ಲ ಸೇರಿ ನನ್ನಲ್ಲಿ ನೋವಿನ ಬಗ್ಗೆ ಒಂದಿಷ್ಟು ಗಿರಗಿಟ್ಲೆ ಶುರುವಾಗಿತ್ತು.

ಹುಟ್ಟಿದ ತಕ್ಷಣ ಮಗುವೊಂದು ಅಳುವುದರ ಮೂಲಕ ತನ್ನ ಉಸಿರಾಟವನ್ನು ಸುಗಮಗೊಳಿಸಿಕೊಳ್ಳುತ್ತಂತೆ. ನಾವೆಲ್ಲ ಹಾಗೆ ಮಾಡಿಯೇ ಉಸಿರಾಡಿದ್ದು. 
ಬಹುಶಃ ಅಲ್ಲಿಂದಲೇ ಮನುಷ್ಯನ ಬದುಕಿಗಾಗಿ ಅಳುವ ಮತ್ತು ಅಳುವ ಪ್ರೀತಿಸುವ ಮೂಲ ಗುಣಕ್ಕೆ ಬೀಜಾಂಕುರ. ಅಳುವನ್ನು ಪ್ರೀತಿಸುವುದು ಮನಸ್ಸಿನ ಸ್ಥಾಯೀ ಭಾವವೇನೋ ಅನ್ನಿಸುತ್ತೆ. ಅದಕ್ಕೇ ಇರಬೇಕು ನೋವ ನುಂಗಿ ಬದುಕಿದ 'ಪಾರು'ವಿಗಿಂತ ಅಳುವ ಉಸಿರಾಡಿದ 'ದೇವದಾಸ್' ಹೆಚ್ಚು ಪ್ರಿಯನೆನ್ನಿಸಿದ್ದು. ನಗುವ ಪ್ರೇಮಕಾವ್ಯಕ್ಕಿಂತ ಭಗ್ನ ಪ್ರೇಮಕಾವ್ಯ ಹೆಚ್ಚು ಪ್ರಚಲಿತವಾದದ್ದು. (ನಮ್ಮ ಮಹಾಕಾವ್ಯಗಳೆಲ್ಲ ನೋವ ಕಾವ್ಯಗಳೇ) ನಮ್ಮ ಒಳಗನ್ನು ಬೇಕಾದರೂ ನೋಡಿ - ಕಣ್ಣೀರು ಹೆಪ್ಪುಗಟ್ಟಿದಾಗಲೇ ಮನಸು ಗಟ್ಟಿಯಾಗುವುದು. ನೋವ ನುಂಗಿ ನಗಬಲ್ಲವರೇ ಬದುಕಿಗೆ ಹೆಚ್ಚು ಪ್ರಾಮಾಣಿಕರೆನ್ನಿಸುವುದು. ಕೆಸರಲ್ಲಿ ಅರಳಿದ್ದಕ್ಕೆ ಕಮಲ, ಮುಳ್ಳ ನಡುವೆ ನಗುವ ಗುಲಾಬಿ ಅಷ್ಟೊಂದು ಪ್ರಿಯವೆನ್ನಿಸುವುದು. ಒಳಗೊಂದಿಷ್ಟು ನೋವಿಲ್ಲದಿದ್ದಲ್ಲಿ ಪುಟ್ಟ ಪುಟ್ಟ ಸಂತೋಷಗಳನ್ನು ನಾವು ಹೆಚ್ಚು ಹೆಚ್ಚು ಪ್ರಾಮಾಣಿಕವಾಗಿ ಆಸ್ವಾದಿಸಲಾರದೇ ಹೋಗುತ್ತೇವೇನೋ. ನಗುವಿಗೆ ಅರ್ಥ ಬರೋದೇ ನೋವನ್ನು ಮೆಟ್ಟಿ ನಗು ಮೆರೆದಾಗ. ನೋವ ಹೀರಿ ನಗುವವರ ನಗು ಸ್ವಲ್ಪ ಕೃತಕ ಅನ್ನಿಸೀತು ಒಮ್ಮೊಮ್ಮೆ. ಆದರೂ ಆ ನಗು ಹೆಚ್ಚು ಪ್ರಾಮಾಣಿಕ ಅನ್ನಿಸುತ್ತೆ ನಂಗೆ. ಉಳಿದ ಮುಖವಾಡಗಳಿಗಿಂತ ಈ ಮುಖವಾಡ ಹೆಚ್ಚು ಪ್ರಿಯವೆನ್ನಿಸುತ್ತೆ ನಂಗೆ. 

ರಕ್ತ ಸಂಬಂಧವಲ್ಲದ, ಭಾವನಾತ್ಮಕ ವಿನಿಮಯವನ್ನು ನೆಚ್ಚಿಕೊಂಡ ಎಲ್ಲ ಸಂಬಂಧಗಳೂ ಗಾಢವೆನ್ನಿಸುವುದು, ಇನ್ನಷ್ಟು ಬೇಕು ಅನ್ನಿಸುವುದು ಯಾವುದೋ ನೋವಿಂದ ಮನಸು ಮಗುಚಿ ಬಿದ್ದಾಗಲೇ. ನಾನಿಲ್ಲಿ ನಮ್ಮ ನೋವನ್ನು ಹೇಳಿಕೊಂಡು ಅನುಕಂಪಗಳಿಸಿಕೊಳ್ಳೋ ಮಾತು ಹೇಳ್ತಿಲ್ಲ. ನೋವನ್ನು ಹರವಿಕೊಂಡು ಹಗುರಾಗುವ ಮಾತಾಡುತ್ತಿದ್ದೇನೆ. ಎರಡಕ್ಕೂ ವ್ಯತ್ಯಾಸವಿದೆ. ಅನುಕಂಪ ಬಯಸಿ ಕೂತವನು ಕೂತಲ್ಲೇ ಕೊಳೆಯುತ್ತಾನೆ. ನೋವ ಹೊರಚೆಲ್ಲಿ ಹಗುರಾಗಿ ಎದ್ದು ಹೋದವನು ಬದುಕನ್ನು ಚೆಂದಗೆ ಆಳುತ್ತಾನೆ. 
ನೋವ ಮಾತಾಡಿದವರೆಲ್ಲ ನೋವನ್ನೇ ಬದುಕುತ್ತಾರೆಂದಲ್ಲ. 
ನೋವು ಬದುಕಿನ ಅಂಗವಷ್ಟೇ - ನೋವೇ ಬದುಕಲ್ಲ ಎಂಬುದು ಗೊತ್ತಿಲ್ಲದವರೆಂತಲೂ ಅಲ್ಲ. 
ಎರಡು ಹನಿ ಕಣ್ಣೀರು ಚೆಲ್ಲಿ, ಆ ಹನಿಗಳೊಂದಿಗೆ ಎದೆಯ ನೋವ ಇಳುಕಿ  ಹೊಸ ಭರವಸೆ - ಹೊಸ ಕನಸುಗಳ ಎತ್ತಿಕೊಳ್ಳಬಲ್ಲವರೂ, ಜತೆಗೇ ಎಲ್ಲ ಭರವಸೆ - ಕನಸುಗಳ ಮೇಲಿನ ನಂಬಿಕೆಯ ನಡುವೆಯೂ ವಾಸ್ತವಿಕತೆಯನ್ನು ಮರೆಯಲಾಗದವರೂ ಆಗಿರಬಹುದು. 
ಮನಸಿನ ನಗು ಅಂದ್ರೆ ಏನು - ನೋವ ನಡುವೆಯೂ ಹೊಸ ಕನಸಿಗೆ ಗೂಡು ಕಟ್ಟೋದೇ ಅಲ್ವಾ...
ಇದು ನಾ ಕಂಡ ಬದುಕು ನಂಗೆ ಕರುಣಿಸಿದ ಪಾಠ.

ನೋವ ಹರವಿಕೊಳ್ಳಲು ಮತ್ತೊಂದು ಮನಸಿನ ಅಗತ್ಯ ಇಲ್ಲದಂತ ಮನೋ ಸಾಮರ್ಥ್ಯ ಹೊಂದಿದವರೆಡೆಗೆ ನಂಗೆ ಮಧುರ ಹೊಟ್ಟೆಕಿಚ್ಚಿದೆ. 

ದೊಡ್ಡ ದೊಡ್ಡ ಕನಸುಗಳ ಸಾಕಾರಗೊಳಿಸಿಕೊಳ್ಳಲಾಗದ ನೋವು - ಪುಟ್ಟ ಪುಟ್ಟ ಕನಸುಗಳನು ಪ್ರೀತಿಸುವ ಮತ್ತು ಜಯಿಸಿ ಆಸ್ವಾದಿಸುವ ಭವ್ಯ ಸುಖದ ಘಳಿಗೆಗಳನ್ನು ಒದಗಿಸಿಕೊಟ್ಟಿದ್ದಕ್ಕೆ ಯಾವುದೋ ದೊಡ್ಡ ನೋವಿಗೆ [ನನ್ನ ಮಟ್ಟಿಗೆ ದೊಡ್ಡದು..:)] ನಾನು ಬದುಕು ಪೂರ್ತಿ ಋಣಿಯಾಗಿರುವಂತೆ ಮಾಡಿದೆ. ಮನಸು ದ್ವಂದ್ವಗಳಲಿ - ನೋವಿನಲಿ - ಗೊಂದಲಗಳ ಸಂತೆಯಲಿದ್ದಾಗಲೂ ಬದುಕು ಬರೀ ನಗುವಿನಿಂದ ಕೂಡಿರುವಂತೆ ನೋಡಿಕೊಂಬ ಶಕ್ತಿ ಒಂದಿಷ್ಟಾದರೂ ಮೈಗೂಡಿದೆ. ಮನಸಿನ ನೋವು ಭಾವ ಕೋಶಕ್ಕೆ ಮಾತ್ರ ಸೀಮಿತವಾಗಿದ್ದು ಬದುಕು ಬುದ್ಧಿಯ ಕೈಲಿದ್ರೆ ಚೆನ್ನ ಅಂದ್ಕೋತೀನಿ. ನಾನು ಈವರೆಗೆ ಬರೆದಿದ್ದೆಲ್ಲ ಹೆಚ್ಚಿನದು ನೋವ ಕಥಾನಕವೇ. ಬದುಕಿದ್ದು ಈವರೆಗೂ ನಗುವ ತೊಟ್ಟಿಲಲ್ಲೇ.
ಮನಸಿಗೆ ಖುಷಿ ಎಲ್ಲಿಂದಲೋ ಬರಲ್ಲ. ನಾವೇ ಕೊಡಬೇಕು. 
ನಮ್ಮೊಳಗಿನ ನೋವು, ಸಂಕಟಗಳ ನಡುವಿನಿಂದಲೇ ಹೆಕ್ಕಿ ಹೆಕ್ಕಿ. ನಮ್ಮ ಬದುಕನ್ನು ಶೃಂಗರಿಸಿಕೊಳ್ಳಬೇಕಾದ್ದು ನಾವೇ ಅಂದ್ಕೋತೀನಿ. 
ಯಾವ ಭಾಗ್ಯವೂ ಯಾರನ್ನೂ ಮುನ್ನಡೆಸಿದ ಉದಾಹರಣೆ ಇಲ್ಲ - ನಮಗೆ ನಡೆವ ಮನಸಿಲ್ಲದಿದ್ದರೆ. 
ಯಾವ ನೋವೂ ಸಂಪೂರ್ಣ ಶಾಶ್ವತ ಅಲ್ಲ - ನಾವಾಗಿ ಗೊಬ್ಬರ ಹಾಕಿ ಬೆಳೆಸಿ ಕಾಯ್ದಿಟ್ಟುಕೊಳ್ಳದಿದ್ದರೆ.
ಯಾರೋ ತಂದುಕೊಟ್ಟಾರೆಂಬ ಖುಷಿಗಿಂತ - ನನ್ನದೇ ಬದುಕು ಕರುಣಿಸಿದ ನೋವುಗಳನು ಕಣ್ಣ ಹನಿಗಳೊಂದಿಗೆ ಕಳೆದುಕೊಂಡಾಗ ಒಂಥರಾ ಹಾಯೆನಿಸುತ್ತಲ್ಲ ಮತ್ತು ಮುಂದಿನ ಬದುಕನ್ನು ಎದುರುಗೊಳ್ಳೋಕೆ ಒಂದು ಹೊಸ ಚೈತನ್ಯ ಮೂಡಿ ನಿಂತಾಗ ಉಕ್ಕುತ್ತಲ್ಲ ಖುಷಿ - ಆ ಖುಷಿಯನ್ನ, ಕೇವಲ ನನ್ನದು ಮಾತ್ರ ಎನ್ನಿಸುವ ಆ ಆನಂದವನ್ನು ನಾನು ತುಂಬಾನೇ ಪ್ರೀತಿಸುತ್ತೇನೆ.

ನಾಳೆ ಬಂದೀತೆಂಬ ಬೆಳಕಿನ ನಿರೀಕ್ಷೆಗಿಂತ ನಂಗೆ ಈ ಕ್ಷಣ ನನ್ನದೇ ನೋವಿನ ಎಣ್ಣೆ ಸುರಿದು ನಾನೇ ಹಚ್ಚಿಟ್ಟುಕೊಂಡ ಸಣ್ಣ ನಗುವಿನ ದೀಪದ ಮೇಲೆ ಹೆಚ್ಚು ನಂಬಿಕೆ...

ಭಾವಗಳಿಗೆ ಮನಸ್ಸು - ಬದುಕಿಗೆ ಬುದ್ಧಿ.
ಬರಹ ಎದೆಯ ಭಾವ - ಅಲ್ಲೊಂದಿಷ್ಟು ನೋವು ಮತ್ತು ಪುಟ್ಟ ಪುಟ್ಟ ಸಂತಸಗಳಿವೆ.
ಬದುಕು ಬುದ್ಧಿಯ ಬರಹ - ಅಲ್ಲಿ ಬರೀ ನಗುವಿದೆ. 

ಮನಸಲ್ಲಿ ಇಂಗಿ ಹೆಪ್ಪಾದ ನೋವು ಬದುಕ ಕಟ್ಟಲು ಬುದ್ಧಿಗೆ ಗೊಬ್ಬರವಾಗಿ ನಗುವ ಬೆಳೆಯ ಬೆಳೆಸಲಿ ಬದುಕಲ್ಲಿ ಅಂತ ಬಯಸುತ್ತೇನೆ.

ಎಲ್ಲ ಜಂಜಡಗಳ ನಡುವೆಯೂ ಒಂದಿಷ್ಟು ಖುಷಿಯಾಗಿರೋಣ. 
ಬರಹ - ಭಾವ - ಬಂಧಗಳಲಿ...
ಏನಂತೀರಾ...

Thursday, January 3, 2013

ಗೊಂಚಲು - ಐವತ್ತಾರು.....

ಮನೆಯಂಗಳದ ಜಲಧಾರೆ.....

ಹಲವಾರು ಜಲಪಾತಗಳ ಜಿಲ್ಲೆ ಉತ್ತರ ಕನ್ನಡ. ಹಲವು ಪ್ರಸಿದ್ಧ ಸರ್ವಋತು ಜಲಪಾತಗಳೊಟ್ಟಿಗೆ ಮಳೆಗಾಲದಲ್ಲಿ ಮಾತ್ರ ಧುಮ್ಮಿಕ್ಕಿ ಬೇಸಿಗೆ ಇಣುಕುವ ಹೊತ್ತಿಗೆ ಬತ್ತಿ ಹೋಗುವ ನೂರಾರು ಜಲಪಾತಗಳು ಈ ಜಿಲ್ಲೆಯ ವೈಶಿಷ್ಟ್ಯ. ಆ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನವನು ನಾನು. ಯಲ್ಲಾಪುರದಿಂದ 28 ಮೈಲಿ ದೂರದ 'ಕಂಚೀಮನೆ' ನನ್ನೂರು. ದಟ್ಟ ಕಾಡಿನ ನಡುವೆಯ ಪುಟ್ಟ ಹಳ್ಳಿ. ನನ್ನ ಮನೆಯಂಗಳದಿಂದ ನಾಲ್ಕು ಮೈಲಿಯಷ್ಟು ಹೆಜ್ಜೆ ಸಾಗಿದರೆ ದಟ್ಟ ಕಾನನದ ಗೌವ್ವೆನ್ನುವ ನೀರವ ಮೌನದ ಮಧ್ಯೆ ಕೇಳುತ್ತೆ ಹರಿವ ಸಣ್ಣ ಹಳ್ಳದ ನೀರು ಧಾರೆಯಾಗಿ ಧುಮ್ಮಿಕ್ಕುವ ಧೋ ಎಂಬ ಸದ್ದು. ಮೈಲಿಯಾಚೆಯಿಂದಲೆ ಕೇಳುವ ನೀರಧಾರೆಯ ಸದ್ದಿಗೆ ಕಿವಿದೆರೆದು ಸಾಗಿದರೆ ಕಣ್ಣಿಗೊಂದು ಹಬ್ಬ ದಕ್ಕುತ್ತದೆ. ಸುಮಾರು 200 ಅಡಿಗಳಷ್ಟು ಎತ್ತರದಿಂದ ಕೆಳ ಧುಮುಕುವ ಜಲಪಾತಕ್ಕೆ ಸ್ಥಳೀಯರಿಟ್ಟ ಹೆಸರು "ಎಮ್ಮೆಶೀರಲ ವಜ್ರ". ವಜ್ರ ಅಂದರೆ ಜಲಪಾತ ಎಂದರ್ಥವಂತೆ. ಎಮ್ಮೆಶೀರಲ ಅನ್ನೋ ಹೆಸರಿನೊಂದಿಗೆ ಒಂದಷ್ಟು ಎಮ್ಮೆಗಳು ಮಳೆಗಾಲದ ನೀರ ಸೆಳವಿಗೆ ಸಿಕ್ಕಿ ಈ ಜಲಪಾತದಲ್ಲಿ ಬಿದ್ದು ಪ್ರಾಣ ಬಿಟ್ಟವು ಹಾಗಾಗಿ ಈ ಹೆಸರು ಎಂಬ ಪ್ರತೀತಿಯಿದೆ. ಇದೆಷ್ಟು ಸತ್ಯವೋ ಗೊತ್ತಿಲ್ಲ. ಅದೇನೇ ಇರಲಿ ಹಸಿರು ಮತ್ತು ನೀರ ಧಾರೆಯ ಚೆಲುವಿನಿಂದ ಈ ಜಲಪಾತ ಕಣ್ಮನ ತಣಿಸುವುದಂತೂ ಸತ್ಯ. ಚಾರಣ ಪ್ರಿಯರಿಗೊಂದು ಚಂದದ ತಾಣ. ಆದರೆ ಈ ಜಲಪಾತ ಮಳೆಯ ದಿನಗಳಲ್ಲಿ ಮಾತ್ರ ತುಂಬಿ ಹರಿಯುತ್ತೆ ಅನ್ನೋದು ಬೇಸರದ ಸಂಗತಿ. ಇಲ್ಲಿಗೆ ಹೋಗೋಕೆ ಅಕ್ಟೋಬರ್ ನಿಂದ ಡಿಸೆಂಬರ್ ತಿಂಗಳವರೆಗಿನ ದಿನಗಳು ಮಾತ್ರ ಸೂಕ್ತ. ಅದರಲ್ಲೂ ಅಕ್ಟೋಬರ್ ಕೊನೆಯಲ್ಲಿ ತುಂಬಾ ಚಂದವಿರುತ್ತೆ. ಆದರೆ ಅಷ್ಟೇ ಅಪಾಯ ಕೂಡ.
ಈ ಬಾರಿ ಮನೆಗೆ ಹೋದಾಗ ನನ್ನವರೊಂದಿಗೆ ಮತ್ತೊಮ್ಮೆ ಈ ಜಲಪಾತಕ್ಕೆ ಹೋಗಿದ್ದೆ. ನೀರು ಖಾಲಿಯಾಗ್ತಿರೋ ದಿನಗಳಿವು. ಆದರೂ ಖುಷಿಗೆ ಕೊರತೆ ಆಗಲಿಲ್ಲ. ನನ್ನ ತಂಡದ ಜತೆಗೆ ನನ್ನ ಅಮ್ಮನೂ ಇದ್ದಳೆಂಬುದು ನನ್ನ ಖುಷಿಗೆ ಮೆರಗು ತಂದಿತ್ತು.
ನನ್ನ ಕ್ಯಾಮರಾ ಕಣ್ಣಲ್ಲಿ ಬಂಧಿಯಾದ ಚಾರಣದ ಕೆಲ ನೆನಪಿನ ಝಲಕುಗಳು ನಿಮಗಾಗಿ ಇಲ್ಲಿವೆ. ನಿಮಗೂ ಇಷ್ಟವಾದೀತೆಂದುಕೊಂಡಿದ್ದೇನೆ.
ಹೀಗೆ ಸಾಗಿತ್ತು ಕಾಡುದಾರಿಯ ಪಯಣ...




ಆಯಿ...

ಕಾಲು ಜಾರಿದರೆ ಕೈಲಾಸವೇ ಗತಿ...



ಮುಖ್ಯ ಜಲಧಾರೆ...


ಕಲ್ಲ ಮೇಲೆ ಹಸಿರ ಹಾಸು...





ಸಾಹಸ ಪ್ರಿಯರು...:)



ಪ್ರಕೃತಿ ನಿರ್ಮಿತ ಈಜುಕೊಳ...

ಇಲ್ಲಿಂದ ಧುಮುಕುತ್ತೆ ನೀರು...

ಮೇಲಿಂದ ಕೆಳ ನೋಡಿದಾಗ...

ಜಲಪಾತದ ಮೇಲಿಂದ ಕಾಡಿನೆಡೆಗೆ ಕಣ್ಣು ಹಾಯಿಸಿದಾಗ...



ಬಂಡೆ ಗಾತ್ರದ ಕಲ್ಲುಗಳು...:)