Wednesday, August 16, 2017

ಗೊಂಚಲು - ಎರಡ್ನೂರಾ ಇಪ್ಪತ್ತೊಂಭತ್ತು.....

ಮಳೆ ಕೊಯ್ಲು.....

ಒಂದೊಮ್ಮೆ ಕನಸ ಬಿತ್ತಲು ಹನಿ ನೀರಿಲ್ಲ - ಅನಾವೃಷ್ಟಿ...
ಮಗದೊಮ್ಮೆ ಬೀಜವಷ್ಟೇ ಅಲ್ಲ ಹದ ಮಾಡಿದ ನೆಲದ ಗುರುತೂ ಉಳಿಯಲ್ಲ - ಅತಿವೃಷ್ಟಿ...
ಆದರೆ ಮಾತ್ರ - ಎಲ್ಲ ಕಾಲದಲ್ಲೂ ಎದೆ ನೆಲದ ಜೀರ್ಣವಾಗದ ನೆನಕೆಗಳ ಕಳೆ, ಕೊಳೆಯ ಕರುಳ ಹುಣ್ಣು ಕರಗುವುದೇ ಇಲ್ಲ...
#ಬಿಸಿಲು_ಮಳೆ_ಹದವೇ_ತಿಳಿಯದ_ಬದುಕು_ಕಣ್ಣಾಮುಚ್ಚಾಲೆ...
;;;;;^!^;;;;;

ಗುಡಿರ್ಗುಡಿಸಿ ಮಾತಾಗಿ
ಮಿಂಚಿ ಬೆಳಗಿ ಚೆಲುವನೀಂಟಿ
ಮೋಡ ಸಿಡಿದು ಹನಿಯಾಗಿ
ಬಾನ ಪ್ರೇಮ ಮಳೆಯಾಗಿ
ಇಳೆಯೆದೆಯಲಿ ಇಂಗಿತು...
ಇಳಿದಿಳಿದು ಬಾನ ತೇಜ
ಹೊಸ ಹಸಿರಿಗೆ ಮೊದಲ ಬೀಜ
ಭುವಿ ಗರ್ಭದ ಬಿಸಿಯಲಿ...
#ಮೊದಲಾಮಳೆ_ಮೈನೆರೆದಿಳೆ...
;;;;;^!^;;;;;

ಅಂಗೈಯಿಂದ ಅಂಗೈಗೆ ಆಲಿಕಲ್ಲನ್ನು ಬದಲಿಸುತ್ತಾ ಕಣ್ಣರಳಿಸೋ ಮಗಳ ಬೆಳ್ಳಿ ಗೆಜ್ಜೆಗೆ ಮಣ್ಣು ಮೆತ್ತಿ ಹೊನ್ನ ಬಣ್ಣವಾಗಿ, ನಗೆಯು ಮಲ್ಲಿಗೆ ತೋಟ...
ಬಲವಂತಕೆ ಅಂಗಳಕಿಳಿದು ಮಳೆಗೆ ಮುಖವೊಡ್ಡಿದ ನಾನು ಒಳಬಂದು ಜಗುಲಿಯ ಕನ್ನಡಿ ಒಡೆದೆ...
#ಬಣ್ಣ_ಬಳಿದೋದ_ದರ್ವೇಶಿ_ಮುಖ...
;;;;;^!^;;;;;

ಈ ಅಡ್ಡ ಮಳೆಗೆ ಆ ಹಾದಿಯ ಕೊಳೆಯೆಲ್ಲ ಬಳಿದು ಹೋದಂತೆ ಈ ಎದೆಯ ಕಚ್ಚಿಕೊಂಡ ಹಾವಸೆಯೂ ತೊಳೆದು ಹೋಪಂತಿದ್ದರೆ...
#ಕಣ್ಣ_ಹನಿ_ಎದೆಯ_ಮಿದುವಾಗಿಸುವುದೆಂಬುದು_ಎಲ್ಲ_ಕಾಲಕೂ_ಸತ್ಯವೇನಲ್ಲ...
;;;;;^!^;;;;;

ಅಡ್ಡ ಮಳೆಯ ಮುಸ್ಸಂಜೆಗೆ ಮನಸು ಮಗುಚಿ ಬಿದ್ದರೆ ಮಳೆಯ ಹಳಿಯಲಾರೆ...
#ಮಳೆಗೇನು_ಗೊತ್ತು_ಚಿಗುರಿದ_ನೆನಪ_ಹಕೀಕತ್ತು...
;;;;;^!^;;;;;

ಮಳೆಯಾಗಿ ಸುರಿದು ಕಣ್ಣ ಹನಿಯ ಒರೆಸೋ ಮೋಡ - ಎದೆಗೆ ಬಿದ್ದು ಒಡೆದ ಹನಿಯಲ್ಲೇ ಹೊಸ ಚಿಗುರ ಸೃಜಿಸಿ ಭರವಸೆಯನುಣಿಸೋ ಭುವಿಯೊಡಲು; ಉಸಿರ ಹಿಂಡಿ ಸಾವ ತೋರುವ ಎದೆಯ ಗಾಯಕೂ ಸಿಹಿ ಮದ್ದು...
#ಭಾಷ್ಯಗಳ_ಮೀರಿದ_ಒಲವ_ಭಾಷೆ...
;;;;;^!^;;;;;

ಅವನ ತುಂಟತನಗಳನ್ನೆಲ್ಲ ತೋರಣ ಕಟ್ಟಿ ಸ್ವಾಗತಿಸುತ್ತವೆ ನಾಚಿ ಮುಚ್ಚಿದ ಅವಳ ಕಂಗಳು...
ಒಳನಾಡಿಗಳ ಮೀಂಟುವ ಅವನ ನಗೆಯ ಭಾಷೆ ಅವಳ ಕೆನ್ನೆಯ ರಂಗಾಗಿ, ತುಟಿ ಕಟಿಗಳ ಕಂಪನವಾಗಿ, ಉಸಿರ ಬಿರುಸಲಿ ಎದೆಯ ಮಿದುವಿನ ಹಿಗ್ಗಾಗಿ, ಹಿತವಾಗಿ ಬೆವೆತ ಕಂಕುಳ ಘಮವಾಗಿ, ಕಾದ ಇಳೆಯ ಮಳೆಯ ಕನಸಾಗುವುದು...
#ಸಂಜೆಮಳೆ_ಅರಳುಮಲ್ಲಿಗೆ...
;;;;;^!^;;;;;

ಬೆಚ್ಚಿ ಬೀಳುತ್ತೇನೆ - ಮೂರು ಸಂಜೆಯ ಮೂಡುಗಾಳಿಯ ಹೊತ್ತಲ್ಲಿ ನೆತ್ತಿ ತೋಯಿಸೋ ಮಳೆಯ ರಾಗಕೆ...
ಹೂತ ಕನಸಿನ ಹೆಣಗಳೆಲ್ಲ ಘೋರಿಯೊಡೆದು ನೆನಪುಗಳಾಗಿ ತೇಲಿ ಬಂದು ಎದೆಯ ದಂಡೆಗೆ ಬೀಳುವ ರುದ್ರ ವೇಗಕೆ...
#ಸಂಜೆಮಳೆ_ಅರುಳುವ_ಮುನ್ನವೇ_ತೊಟ್ಟು_ಕಳಚಿದ_ಮಲ್ಲಿಗೆ...
;;;;;^!^;;;;;

ಮುಂಬೆಳಗಲೇ ಎದ್ದು ಮುಡಿ ಮಜ್ಜನ ಮಾಡಿದಂತ ಒದ್ದೊದ್ದೆ ಹಾದಿ...
ಸುರಿದು ಸುಸ್ತಾಗಿ ಮತ್ತೆ ಸುರಿಯಲಣಿಯಾಗಿ ನಿಂತ ಕಪ್ಪು ಕಣ್ಣಿನ ಬಾನು...
ಭಾವಕೋಶದಲ್ಲಿ ಜಡ ವಸ್ತುಗಳೂ 'ಯಾರಿಗೂ ಹೇಳ್ಬೇಡ' ಎನ್ನುತ್ತಲೇ ಏನೇನೋ ಪಿಸುನುಡಿಯುತ್ತವೆ ಎನ್ನಲ್ಲಿ...
ಕಣ್ಣಿಗೆ, ಕಾಲಿಗೆ ಶುದ್ಧ ಹೊಸದೆನಿಸೋ ಬೀದಿಯಲೂ ಭಾವಕ್ಕೆ ನೂರಾರು ಸಂಬಂಧಿಗಳು...
#ಮಳೆಮಾಸ_ಹಾದಿ_ಬೀದಿಗೆಲ್ಲ_ಮತ್ತೆ_ಹೊಸ_ಹರೆಯ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Monday, August 14, 2017

ಗೊಂಚಲು - ಎರಡ್ನೂರಾ ಇಪ್ಪತ್ತೆಂಟು.....

ಪಾಚಿಗಟ್ಟಿದೆದೆಗೋಡೆ.....

ಎನ್ನ ಒಳಗೇ ಒಲವಿರಲು ನಿನ್ನ ಹಂಗೆನಗಿಲ್ಲ - ಹಂಗಿನಲಿ ಒಲವು ಬೊಗಸೆಯೊಳಗಿನ ಬೆಳಕು...
ಅಂತೆಯೇ ನಿನ್ನ ಮಡಿಲಿಲ್ಲದೇ ಒಲವಿಗೆ ನೋಟದ ಹರಹಿಲ್ಲ, ಜನ್ಮ ವಿಸ್ತಾರವಿಲ್ಲ...
ಸೂರ್ಯನುಸಿರಿಗೆ ಹೂವು ಅರಳಿ ಬೆಳಕೂ ಸ್ವತಂತ್ರ ಗಂಧವೂ ಸ್ವತಂತ್ರ...
ಭಾವದಲ್ಲಿ ಬೆಳಕಂತೆ ಬೆಳೆದು, ಭವದಲ್ಲಿ ಹಿಮದಂತೆ ಕರಗಿ, ಕರಗಿಯೂ ಬೆಳೆಯುವ ಆಟದಲ್ಲಿ ಸ್ವತಂತ್ರ ಅಸ್ತಿತ್ವಗಳೆರಡು ಪರಸ್ಪರಾಲಂಘಿಸಿ ಹೊಸ ಸ್ವತಂತ್ರ ಗತಿ ಹುಟ್ಟುವಲ್ಲಿ ಒಲವು ಸ್ವಾತಂತ್ರ್ಯದ ಅವಲಂಬಿತ...
#ಏನ_ಹೇಳಿದೆನೋ_ನಂಗೇ_ಅರಿವಿಲ್ಲ...
{!}+{!}+{!} 

ಅದೇನು ದೌರ್ಬಲ್ಯವೋ ಕಾಣೆ ನನ್ನಲ್ಲಿ - ಸಾವಿನ ಮನೆಯೊಂದನುಳಿದು ಇನ್ನೆಲ್ಲಿಯೂ ನಾನು ನನ್ನ ಮನಸು ಹಬ್ಬಿ ತಬ್ಬಿಕೊಂಡ ಬಂಧಗಳ ಮೌನದ ಸಮರ್ಥನೆಯನ್ನು, ಮೇಲರಿಮೆಯನ್ನು ಒಪ್ಪಲಾರದೇ ಹೋಗುತ್ತೇನೆ...
ಅಲ್ಲೆಲ್ಲ ಅವರ ಆ ಬಚ್ಚಿಟ್ಟ ಭಾವಗಳೆದುರು ಮಾತನ್ನೇ ಧೇನಿಸುತ್ತ ಪಿಳಿ ಪಿಳಿ ಕಣ್ಬಿಡುತ್ತ ನಿಟ್ಟುಸಿರಾಗೋ ಅಸಹಾಯ ಮೂಗ ನಾನು...
#ನಗಬೇಕಾದಾಗಲೇ_ಅಕಾರಣ_ಮಗುಚಿಬೀಳುವ_ಅಪದ್ಧ_ಮನಸು...
{!}+{!}+{!}

ಮಾತಲ್ಲಿ ಸುಳಿದಿರುಗೋ ಭಾವ ತೀವ್ರತೆ ಮನಸಿಗೆ ದಕ್ಕದೇ ಹೋಗುವ ಕೆಲವು, 'ಮತ್ತೆ ......... ಮತ್ತೆ' ಎಂಬೋ ಶುಷ್ಕ ಶಬ್ದದ ನಡುವಿನ ಉಶ್ವಾಸ ನಿಶ್ವಾಸದಲ್ಲಿ ಮಾತನೆಲ್ಲ ಬಚ್ಚಿಡುವ ಇನ್ಕೆಲವು - ರದ್ದಿಯಾದದ್ದು ಸಾಕಾಗಿ, ಸೋತು ಸೋತು ಸುಸ್ತಾಗಿ ಮುಖ ತಿರುವಿದೆ...
ನಾಕು ಹೆಜ್ಜೆ ಒಂಟಿ ನಡೆದು ಸೋತದ್ದು ನಂಗಾಗಿಯೇ ಮತ್ತು ಆ ಸೋಲಲ್ಲೇ ನನ್ನ ನಗುವೂ ಅಡಗಿದೆ ಅಂತ ಅರಿವಾಗಿ ಮರಳಿ ಹೆಜ್ಜೆ ಹಾಕ ಬಂದರೆ ಹಾದಿಯೆಲ್ಲ ಬರಿದೋ ಬರಿದು...
ಯಾವ ಕವಲಲ್ಲಿ ಯಾರು ಸರಿದು ಹೋದರೆಂದು ತಿಳಿಯದ  ಹಿಂದಿಲ್ಲದ ಮುಂದಿಲ್ಲದ ತ್ರಿಶಂಕು ಪಿಶಾಚಿ ಈಗಿಲ್ಲಿ ನಾನು...
ನೆಪಕೊಂದು ಕುಂಟು ಕನಸನಾದರೂ ಭಿಕ್ಷೆ ನೀಡು ಬದುಕೇ ಬದುಕಿಕೊಳ್ಳುತ್ತೇನೆ...
#ನೆನಪುಗಳ_ಕಾವಲು_ಕಾಯುತ್ತ_ಕಾಯುತ್ತ_ಎದೆಗೋಡೆ_ಪಾಚಿಗಟ್ಟಿದೆ...
{!}+{!}+{!}

ಮುಸ್ಸಂಜೆಯಲಿ ಅಯಾಚಿತವಾಗಿ ಹುಟ್ಟಿಕೊಳ್ಳೋ ನಿರಂಕುಶ ಖಾಲಿತನ - ಹಿಂತಿರುಗಿ ನೋಡಿದರೆ ನೋವು ನಲಿವು ಎರಡೂ ನಿಟ್ಟುಸಿರ ಬಿಸಿಯ ಚೆಲ್ಲಿ ಎದೆ ಕೊಳವ ಕದಡುತ್ತವೆ - ಸಿಡಿವ ಕಂಗಳಾಳದಲಿ ಸೋತ ರಟ್ಟೆಯ ಬಿಂಬ - ಕೊನೆ ಕೊನೆಯ ಹೆಜ್ಜೆಗಳು ಇನ್ನಷ್ಟು ಭಾರ ಭಾರ...
ಆದರೂ,
ಕನಸೇ ನಿನ್ನ ಕನಸುವುದ ಬಿಡಲಾರೆ - ಹೃದಯಕ್ಕೆ ನೋವಾಯ್ತೆಂದು ಕರುಳ ಸುಟ್ಟುಕೊಂಡರೆ ಬಂಜರಾಗುವುದು ನನ್ನ ಹಾದಿಯೇ ಅಲ್ಲವೇ...
ಅಲ್ಲಿಗೆ, ಬದ್ಕಿರೋ ಕಾರಣಕ್ಕಾದ್ರೂ ನಗುವನ್ನ ಸಲಹಿಕೊಳ್ಳಬೇಕು...
#ಹೆಜ್ಜೆ_ನಡುಗಿದಷ್ಟೂ_ಗೆಜ್ಜೆಗೆ_ದನಿ_ಹೆಚ್ಚು...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Tuesday, August 1, 2017

ಗೊಂಚಲು - ಎರಡ್ನೂರಾ ಇಪ್ಪತ್ತೇಳು.....

ಅಂದಾದುಂದಿ ಕಳೆದೋದ ಅಷ್ಟೊಂದು ವರುಷಗಳು..... 

ಕಪ್ಪಾದರೂ ಇರುಳು; ಕಪ್ಪಲ್ಲ ಕಣ್ಣ ಬೆಳಕು -
ಬೆಳ್ಳಗಿದ್ದರೂ ಹಗಲು ಹಾಲಲ್ಲ; ತೋರುವಲ್ಲಿ ಎದೆಯ ಒಡಕು...

ನಂಗೆ ಪ್ರೀತಿಯ ಉತ್ತಿ ಬಿತ್ತಿ ಗೊತ್ತಿಲ್ಲ...
ಪ್ರೀತಿಯ ಮಟ್ಟು ಪೆಟ್ಟುಗಳ ಅರಿವಿಲ್ಲ...
ನನ್ನದೇನಿದ್ದರೂ ಆ ಆ ಕ್ಷಣಗಳಿಗಿಷ್ಟಿಷ್ಟು ತೋಚಿದಷ್ಟು ತೋಚಿದಂತೆ ಸ್ಪಂಧಿಸುವುದು, ಕ್ರಿಯೆಗಳಿಗೆ ಅಗತ್ಯ ಪ್ರತಿಕ್ರಿಯೆ ನೀಡುತ್ತಾ ಸಾಗುವುದು...

ಪ್ರೀತಿ ಮೌನದ ಕಡಲು ಅಂದವರ ನಡುವೆ ನಾನು ಅಲೆಗಳಿಗೆ ಕಿವಿಯೊಡ್ಡುತ್ತೇನೆ...
ನಿಜದಲ್ಲಿ ಪ್ರೀತಿ ಮಾತೂ ಅಲ್ಲ, ಮೌನವೂ ಅಲ್ಲ - ಅದು ಹಸಿದೆದೆಯ ಜೊತೆ ಕೂತು ಘನತೆ ತುಂಬಿ ಕೊಡುವ ಮಾತು ಮೌನದ ಹದ ಬೆರೆತ ಭರವಸೆಯ ತುತ್ತಿನ ಸ್ಪರ್ಶ...

ನಂದೇನಿಲ್ಲ ಬಿದ್ದ ಬೀಜದ ಆಯ್ಕೆಯದು ಮೊಳೆಯುವುದಾ ಇಲ್ಲಾ ಕೊಳೆಯುವುದಾ ಎಂಬುದು - ಎನ್ನೆದೆಯ ಬಿಸಿ ಬರೀ ಪೋಷಕ ಪುರವಣಿ ಅಷ್ಟೇ...

ನಿಜ ಗೊತ್ತಾ,
ನಂಗೆ ಅನ್ನ ಹೆಚ್ಚಾದರೆ ಮರುದಿನ ಆ ನಾಯಿಗೆ ಅಜೀರ್ಣ - ಜಗದ ಕಣ್ಣಲ್ಲಿ ನಂಗೆ ನಾಯಿ ಅಂದ್ರೆ ತುಂಬಾ ಪ್ರೀತಿ...
#ಯಾರದು_ಜಾಲಿಯ_ಮರದಡಿ_ನೆರಳ_ಹುಡುಕುವವರು...

ಮರಳಿ ಬಾರದ ಮನ್ವಂತರಕೆ ಮರಮರಳಿ ಹೊರಳ್ಹೊರಳಿ ಕನವರಿಸುವ ಕರು ಮನಸು...
ನಗೆಯ ನಿನ್ನೆಯ ಹೊಗೆಯೂ ಇಲ್ಲ ಇಂದಿನಲಿ - ಹಾಗಿದ್ದೂ ನಾಳೆಯ ಕನಸುವುದು ನಿಲ್ಲದು; ನೆರಳಿಲ್ಲದಿದ್ದರೇನಂತೆ ಬೇರಿಹುದಲ್ಲ ಜಾಲಿ ಮರಕೆ...
ಸಂತೆಯೊಳಗಣ ನಗುವಿಗೆ ಏಕಾಂತದಿ ಸುರಿದೋದ ಎದೆಹನಿಯೇ ಪ್ರಧಾನ ಅರ್ಘ್ಯ ಅಂತಂದರೆ ಸಾಕ್ಷಿ ಕೇಳಬೇಡಿ...

ಪಕ್ಕನೆ ಅತ್ತುಬಿಡೋ ಸ್ವಾತಂತ್ರ್ಯ ಕಿತ್ತುಕೊಂಡು, ರಟ್ಟೆಗೆ ಬಲ ತುಂಬದೇ ಹುಚ್ಚು ಇಚ್ಛೆಗಳ ಕಿಚ್ಚನು ಮೈಮನದೆ ತುಂಬಿ, ಬಿಕ್ಕಿ ನಗಬೇಕಾದ ಹರೆಯವ ಕೈಗಿತ್ತು ಮಜ ನೋಡುವ ಬದುಕಿನ ತಣ್ಣನೆಯ ಕ್ರೌರ್ಯವ ಏನೆಂತು ಬಣ್ಣಿಸಲಿ...
ಆದರೂ, ಎಂಥದ್ದೇ ಆದರೂ ನಗುತಿರುವಂತೆಯೇ ಪಾತ್ರ - ಆಗಬಾರದೆ ಗೋಡೆಯ ಚಿತ್ರ...
ಯಾವುದೂ ಅನಗತ್ಯವಾಗಿ ಉದ್ದುದ್ದ ಬೆಳೆಯಬಾರದಲ್ಲವಾ...

"ಹುಟ್ಟು ಹಬ್ಬವಾಗುವುದು ಅಮ್ಮನ ಕರುಳ ಬಲದಿಂದ...
ಬದುಕು ಹಬ್ಬವಾಗುವುದು ಅವರವರ ಆತ್ಮ ಬಲದಿಂದ..." ಹೀಗಂತ ನಾನೇ ಹೇಳಿದೆ...
ಆದರೆ ಮೂವತ್ತು ಮತ್ತೈದು ವರ್ಷಗಳ ಕಳೆದು ಮತ್ತೊಂದು ಹೊಸ ವರ್ಷದ ಬಾಗಿಲಲಿ ನಿಂತು ಹಿಂತಿರುಗಿ ನೋಡಿದರೆ  ಆ ಆತ್ಮಬಲ ನನ್ನಲಿದೆಯಾ ಎಂಬ ಪ್ರಶ್ನೆಗೆ ಉತ್ತರ ಇಲ್ಲ ಎಂಬುದೇ ಆಗಿರುತ್ತೆ...

ಅದೇ ಹೆಸರು, ಏರಿಳಿವ ಉಸಿರು, ಅದೇ ನಾಡಿ ಮಿಡಿತ, ನಿಲ್ಲದ ಹೃದಯದ ಲಬ್ ಡಬ್ ಬಡಿತ ಮತ್ತು ಗೋನಾಳಿ ಒಡೆವಂತ ಅಟ್ಟಹಾಸ...
ಜಗದ ಹಾದಿಯಲ್ಲಿ ನಾನಿನ್ನೂ ಬದುಕಿಯೇ ಇದ್ದೇನೆ...

ಆದ್ರೆ ಏನ್ಗೊತ್ತಾ -
ತಳ ಒಡೆದ ಮಡಕೆಯಂತ ನನ್ನೊಳಗೆ ನಾ ಸತ್ತು ದಿನವೆಷ್ಟಾಯಿತೋ...
ಹೆಣವೊಂದು ಬದುಕಿನೊಂದಿಗೆ ಮಾತಾಡಿದಂತೆ ಈ ಖಾಲಿ ಖಾಲಿ ತುಕಾಲಿ ದಿನಗಳು...

ಅರೆ, ಅಷ್ಟರಲ್ಲಿ ಮಸಣದ ಮುತ್ತುಗದ ಹೂವಿನೊಂದಿಗೆ ದುಂಬಿಯೊಂದು ಸುರತಕ್ಕೆ ಬಿದ್ದುದ ಕಂಡೆ - ಮತ್ತೆ ಎದೆಯ ಗೋನಾಳದ ತಳದಲ್ಲೊಂದು ಭರವಸೆಯ ಬಿಂದು...
ಈ ವರ್ಷ ಮಳೆ ಸಮೃದ್ಧವಿದ್ದೀತು...

ಹುಟ್ಟು ನನ್ನ ಆಯ್ಕೆ ಆಗಿರಲಿಲ್ಲ, ಸಾವು ಯಾರದೇ ಅಂಕೆಯಲಿಲ್ಲ; ಈ ಬದುಕು ಇದು ನನ್ನದು...
ಹೌದು, ಹಾಗಾಗಿ ಅದು ಇದ್ದಂತೆಯೇ ಇರ್ಲಿ ಬಿಡು ಅನ್ನೋದು ಸಿಗದ ಹಣ್ಣು ಹುಳಿ ಹುಳಿ ಎಂಬ ನರಿ ಬುದ್ಧಿಯ ಸ್ವಾರ್ಥ...

ಶುಭಾಶಯಗಳು ಬದುಕೇ - 
ಎಲ್ಲ ತೊರೆದೋದ ಮನೆಯ ಮೂಲೆಯ ಮಾಡುಗುಳಿಯಲ್ಲಿ ಮರೆತು ಉಳಿದೋದ ಅನಾಥ ಎಣ್ಣೆಯ ಗಿಂಡಿಯಂತೆ ಸಾವಿನ ಕಣ್ಣಂಕೆಯಿಂದ ನುಣುಚಿಕೊಂಡು ಇಷ್ಟು ಕಾಲ ಬದುಕಿದ್ದಿದ್ದಕ್ಕೆ - ಎಂದೋ ಅನಾದಿಯಲ್ಲಿ ಇದೇ ತೇದಿಯ ದಿನ ಹುಟ್ಟಿದ್ದೆ ಎಂಬ ನೆಪದಲ್ಲಿ...      

                                        ___ ಶ್ರೀವತ್ಸ ಕಂಚೀಮನೆ