Monday, January 25, 2016

ಗೊಂಚಲು - ನೂರಾ ಎಂಬತ್ತು + ಒಂದು.....

ಆಗೊಂದು ಹುಚ್ಚು ನಗು - ಅಲ್ಲೊಂದು ಕರುಳ ಹನಿ 
ಸವೆಸಿದ ಈ ದಾರಿಯಲ್ಲಿ ಉಳಿದ ಹೆಜ್ಜೆ ಗುರುತು.....
(ಈ ಭಾವದಂಗಳಕೀಗ ಭರ್ತಿ ಐದು ವಸಂತಗಳು...)

ಬದುಕಿದು ಫಕ್ಕನೆ ಪಥ ಬದಲಿಸಿ ಪೂರ್ವದಿಂದ ದಕ್ಷಿಣದೆಡೆಗೆ ಹೊರಳಿದ ಸಂಧಿಕಾಲ... 
ಒಮ್ಮೆಲೆ ಹತ್ತಾರು ಕಂಗಾಲುಗಳು... 
ಬೆಳದಿಂಗಳಲಿ ಮಿಂದು, ಕನಸುಗಳ ಹೊದ್ದು ಬೆಚ್ಚೆಗೆ ಮಲಗಿದ್ದವನು ಬೆಚ್ಚಿಬಿದ್ದಿದ್ದೆ... 
ಒಂದು ಮುಟಿಗೆ ಬೆಳದಿಂಗಳು ದಕ್ಕಬೇಕೆಂದರೂ ಸುತ್ತ ಹತ್ತು ಬೀದಿಗೆ ಕರೆಂಟ್ ಹೋಗಬೇಕಾದ ಈ ಊರನ್ನ ನೆನೆದೇ ದಂಗಾಗಿದ್ದೆ...  

ಮಹಾನಗರಿಯಲ್ಲಿ ಹೊಟ್ಟೆ ತುಂಬೀತು, ಆದರೆ ಭಾವದ ಹಸಿವಿಗೇನ ಮಾಡಲಿ ಕಂಗಾಲಿನಿಂದ ಕೇಳಿದ್ದೆ ಗೆಳೆಯನ...
ಅಕ್ಷರವಾಗಿಸು ಭಾವಗಳ – ಸ್ನೇಹಗಳು ಬಳಸುತ್ತವೆ ಬದುಕನ್ನ ಅಂದಿದ್ದ ಜೀವದ ಗೆಳೆಯ... http://kanasukangalahuduga.blogspot.in/ 
ಇಲ್ಲಿ ಬಂದು ಬದುಕು ಕಟ್ಟಿಕೊಳ್ಳಲು ಹೆಣಗುತ್ತಿರುವ ಹೊತ್ತಲ್ಲೇ ನಿನ್ನ ಆಂತರ್ಯಕ್ಕೊಂದು ವಿಸ್ತಾರ ಸಿಗಲಿ, ನಗು ಸುಲಭವಾದೀತು ಅಂತಂದು ಹೀಗೊಂದು ಅಂಗಳ ಸೃಷ್ಟಿಸಿಕೊಟ್ಟ ಇನ್ನೊಬ್ಬ ಆತ್ಮದ ಗೆಳೆಯ... http://samudrateera.blogspot.in/

ಕಾದಿಟ್ಟುಕೊಂಡ ಹಾಗೂ ಆಗೀಗ ಅಲ್ಲಲ್ಲೇ ಹುಟ್ಟಿ ಅಲ್ಲೇ ಸಾಯುವ ಅಷ್ಟಿಷ್ಟು ಆಪ್ತ ಭಾವಗಳಿಗೆಲ್ಲ ಅಕ್ಷರದ ಅಂಗಿ ತೊಡಿಸುತ್ತ ಹೋದೆ...
ಕನಸಿಲ್ಲದ ದಾರಿಯನ್ನೂ ಆಪ್ತವಾಗಿಸುವ ಕಾಲನೂ ಅಳಿಸದೆ ಉಳಿಸಿದ ಮಧುರ ನೆನಪುಗಳು – ಒಡೆದ ಕನ್ನಡಿಯ ಚೂರುಗಳಲ್ಲೂ ಅರೆಬರೆಯಾಗಿಯಾದರೂ ಮೂಡುವ ಪ್ರತಿಬಿಂಬದಂತೆ ವಾಸ್ತವತೆಯ ವಿರೋಧದ ನಡುವೆಯೂ ಹುಟ್ಟೋ ಪುಟ್ಟ ಪುಟ್ಟ ಕನಸುಗಳು – ಬಯಲ ಮೌನಕ್ಕೂ, ಗವಿಯ ಮಾತಿಗೂ, ನಗೆ ಬೆಳಕಿಗೂ, ನೋವ ಕತ್ತಲ ಮೂಲೆಗೂ ಜೊತೆನಿಲ್ಲುವ ಸ್ನೇಹಭಾವಗಳು – ಒಟ್ಟಾರೆಯಾಗಿ ನನ್ನೊಳಗೆ ಆ ಆ ಕಾಲಕ್ಕೆ ರೂಪು ತಳೆದ ಕಾಮದಿಂದ ಹಿಡಿದು ಕೈವಲ್ಯದವರೆಗಿನ ಎಲ್ಲಾ ಭಾವಗಳನೂ ಯಾವುದೇ ಪೂರ್ವಗ್ರಹ ಮತ್ತು ಮಡಿವಂತಿಕೆಯನು ಮೀರಿ ಅದಿದ್ದಂತೆಯೇ ಅಕ್ಕರೆಯಿಂದ ಇಲ್ಲಿಯ ಗೊಂಚಲುಗಳನಾಗಿಸಿದೆ...
ಅಂಥ ನನ್ನ ಭಾವಲೋಕದ ಅಕ್ಷರ ರೂಪದ ಹೊರಾಂಗಣಕ್ಕೆ ನಾನಿಟ್ಟುಕೊಂಡ ಹೆಸರು:
“ಭಾವಗಳ ಗೊಂಚಲು...”

ಮಹಾನಗರಕ್ಕೆ ಬಂದು ಏನು ಕಡಿದು ಕಟ್ಟೆ ಹಾಕಿದೆ ಅಂತ ಕೇಳಿದ್ರೆ ಹೇಳೋಕಿರೋ ದೊಡ್ಡ ಸಾಧನೆ ಇದೊಂದೇ... 
ನನ್ನೊಳಗಣ ನನ್ನನೂ ಖುಷಿಯಾಗಿಟ್ಟ, ಶಾಂತವಾಗಿಟ್ಟ ಏಕೈಕ ಸಾಧನೆ...
ಇನ್ನಷ್ಟು ಆತ್ಮ ಸಾಂಗತ್ಯದ ಸ್ನೇಹಗಳು ಮತ್ತು ನಿಮ್ಮೆಲ್ಲರ ಪ್ರೀತಿ ಜೊತೆಯಾದದ್ದು ಈ ಅಂಗಳದಿಂದಲೇ...

ಏನನ್ನ ಬರೆದು ತುಂಬಿದೆ ಅಂತಂದರೆ ಹೊಸದೇನೂ ಇಲ್ಲ...
ಮತ್ತೆ ಮತ್ತೆ ಕಾಡುವ ಅದದೇ ಭಾವಗಳ ಬೇರೆ ಬೇರೆ ಶಬ್ಧಾಲಂಕಾರದಿಂದ ಒಂದೊಂದೇ ಎಳೆಯಾಗಿ ಪೋಣಿಸಿದ್ದಷ್ಟೇ...
ಬೇರೆ ಬೇರೆ ಬಣ್ಣದ ಶಬ್ದಗಳ ಅಂಗಿ ತೊಟ್ಟ ಅದೇ ಹಳೆಯ ಭಾವಗಳು - ಅದೇ ಅಡಿಗೆ ಆದರೆ ಉಪ್ಪು ಖಾರದ ಮಿಶ್ರಣದಲ್ಲಷ್ಟೇ ವ್ಯತ್ಯಾಸ...
ಅಷ್ಟಾದರೂ ಓದಿ ಮೆಚ್ಚಿ ಅಭಿಮಾನವ ಸುರಿಸಿದ ನಿಮ್ಮ ಪ್ರೀತಿ ಬಲು ದೊಡ್ಡದು – ಆಗೀಗ ಇದು ನನ್ನದೂ ಭಾವ ಕಣೋ ಅಂತ ನೀವಂದದ್ದು ಈ ಜೀವ ಭಾವಕ್ಕೆ ಸಿಕ್ಕ ಬಹು ದೊಡ್ಡ ಪುರಸ್ಕಾರ...
ನಿಮ್ಮಗಳ ಆ ಪ್ರೀತಿಗೊಂದು ನಮನ...

ಹೌದು ಇಷ್ಟೆಲ್ಲ ಹೇಳಲು ಕಾರಣ ಏನೆಂದರೆ; ಮತ್ತೇನಿಲ್ಲ “ಭಾವಗಳ ಗೊಂಚಲು...” ಎಂಬ ನನ್ನೀ ಅಕ್ಷರಯಾನಕ್ಕೆ ಇಂದು ಭರ್ತಿ ಐದು ವಸಂತ ತುಂಬಿತು...!!!
ಮುಂದೆಯೂ ಬರೆದೇನು ಭಾವ ಕಾಡಿದರೆ – ಜೀವ ಹಾಡಿದರೆ...
ಬರೆದುದಾದರೆ ಇರಲಿರಲಿ ಹೀಗೆಯೇ ನಿಮ್ಮ ಓದಿನ ಆರೈಕೆ...



                                               




ವಿಶ್ವಾಸ ವೃದ್ಧಿಸಲಿ – ಶ್ರೀವತ್ಸ ಕಂಚೀಮನೆ.

Thursday, January 14, 2016

ಗೊಂಚಲು - ನೂರಾ ಎಂಬತ್ತು.....

ಮತ್ತೂ ಅಷ್ಟು ಬಿಡಿ ಭಾವಗಳು.....

ಆ ಸೂರ್ಯನೂ ಪಥ ಬದಲಿಸುವನಂತೆ; ಆದರೆ ಜಗ ಬೆಳಗುವುದ ಬಿಡಲಾರ – ನಿತ್ಯ ನೈಮಿತ್ಯಕ್ಕೆ ತಡೆಯಿಲ್ಲ...
ಹಿಗ್ಗಿದರೂ ಕುಗ್ಗಿದರೂ ಬೆಳದಿಂಗಳು ಅಳಿಯುವುದಿಲ್ಲ – ಚಂದಿರನ ಇರುಳಿನ ಹಾಡಿಗೆ ಕೊನೆಯಿಲ್ಲ...
ಋತು ಋತುವಿಗೂ ವಸುಧೆಯ ವಸನ ಬದಲಾಗುವುದು – ಒಮ್ಮೆ ಮದುಮಗಳ ಸಿಂಗಾರ ಮಗದೊಮ್ಮೆ ಕಿಲುಬು ಹಿಡಿದ ಬಂಗಾರ...
ಸೂರ್ಯ - ಚಂದಮರ ಕರುಣೆ, ವಸುಧೆಯೊಡಲ ಮಮತೆಯ ಕೂಸು ನಾನು...
ನನ್ನೀ ಬದುಕೂ ಜಾಡು ಬದಲಿಸುತ್ತದೆ - ಹಾಗಂತ ಅದೇ ಕಾರಣಕ್ಕೆ ನಡಿಗೆ ನಿಲ್ಲಬಾರದಲ್ಲವಾ; ಬದುಕಿನ ನಡಿಗೆ ಅಂದರೆ ನನ್ನ ನಡಿಗೆ...
ನೆನಪು ಮುಚ್ಚಟೆಯ ಮುಗುಳ್ನಗುವಾದೀತು ಅಥವಾ ಕರುಳಿನಾಳದ ಕರಗದ ಬಿಕ್ಕಳಿಕೆಯೂ ಆದೀತು...
ಕನಸು ಎದೆಯುಬ್ಬಿಸುವ ಗೆಲುವಿನಾಲಯವಾದೀತು ಇಲ್ಲವೇ ಬಯಲ ಗಾಳಿಯ ಗುಲಾಮ ತರಗೆಲೆಯಂತೆ ಕಸುವಿಲ್ಲದೆ ನರಳೀತು...
ಆ ಎಲ್ಲ ಸಂದರ್ಭಗಳಲೂ ನಗೆಯೊಂದೇ ಎದೆಯ ಹಾಡು ಮತ್ತು ಕರುಳ ಹಸಿವಾದಲ್ಲಿ ಬದುಕು ಸಾವಿರ ಕವಲುಗಳ ಎದುರಲ್ಲೂ ಶೃತಿ ಮೀರದ ನನ್ನ ಆಣತಿಗನುವಾಗಿ ಮಿಡಿವ ನನ್ನ ಕೈಯ ಕೂಸೇ... 
ಬದುಕ ಕಣಜದ ತುಂಬ ನಗೆಯೇ ತುಂಬಲಿ - ಪ್ರತಿ ಹೆಜ್ಜೆಯಲೂ ನಲಿವು ಸಂಕ್ರಮಣದ ಸುಗ್ಗಿಯ ಪೈರಾಗಲಿ...
ಶುಭಾಶಯಗಳು...
=\=/=\=/=
ಸ್ನೇಹವೇ -
ಬೀಜದೆದೆಯ ಒಗಟ ಬಿಡಿಸ ಹೋಗಿ
ನಕ್ಕ ಹಸಿರಿಗೆ ಮರುಳಾಗಿ
ಬಿಕ್ಕಳಿಸುತ್ತ ನಿಂತ ಹಸಿ ಮಣ್ಣಂತೆ ಈಗ ನಾನು...
ಒಗಟು ಮರೆತೇ ಹೋಗಿದೆ...
ಒಲವು ಎದೆಯ ಬೆಳಕಾಗಿದೆ...
ನಗೆಯೀಗ ಕಣ್ಣ ಸಿಂಗರಿಸಿದ ಕಾಡಿಗೆ...
ಋತುಗಳ ನಡಿಗೆಯಲ್ಲಿ ಉದುರೀತಾದರೂ ಎಲೆ
ಬಿಡದೆ ಕಾಯ್ದುಕೊಳ್ಳುವೆ  ಹಿಡಿಯದಂತೆ ಗೆದ್ದಲು ಹಸಿರ ತಾಯಿ ಬೇರಿಗೆ...
ಸದಾ ಹಸಿ ಮಣ್ಣು ನಿನ್ನೆದುರು ನಾನು...
=\=/=\=/=
ಸಾಗರನ ಅವಿರತ ಒಳಗುದಿಯ ಮೊರೆತ - ದಂಡೆಯ ಕದಡದ ಕಡು ಮೌನ - ಕಾಡಿನ ಗರ್ಭಸ್ಥ ಧ್ಯಾನ - ಮಳೆಯ ಸ್ವರ ಸಲ್ಲಾಪ - ಹಣೆ ನೇವರಿಸೋ ಆಯಿಯ ಬೆಚ್ಚನೆ ಮಡಿಲು - ಎದೆ ಬಾಗಿಲಲ್ಲಿ ನೀ ಉಳಿಸಿ ಹೋದ ಹೆಜ್ಜೆ ಗುರುತು...
ಎಂಥ ದಿವ್ಯ ಸಾನಿಧ್ಯಗಳೋ - ನಾನು ನಾನಾಗಿ ನನ್ನೊಳಗೆ ಕಳೆದು ಹೋಗಲು ಇಲ್ಲಲ್ಲದೆ ಬೇರೆಲ್ಲಿ ಸಾಧ್ಯ...
ಹೇ ಕನಸೇ,
ಅಮ್ಮನ ಹಾರೈಕೆಯ ಹಣೆ ತಿಲಕವನಿಟ್ಟು, ನಿನ್ನ ಕಾಲ್ಗೆಜ್ಜೆಯಿಂದ ಎತ್ತಿಕೊಂಡ ಒಂದು ಪುಟ್ಟ ಗಿಲಕಿಯ ಎದೆಬೀದಿಯಲಿ ಆಡಲು ಬಿಟ್ಟು, ಅಲೆಗಳ ನಾಟ್ಯಕೆ ಕಣ್ಣಾಗಿ, ಮರಳ ಮೌನಕೆ ಕಿವಿಯಾಗಿ, ಮಳೆಗೆ ನೆತ್ತಿಯ ತೆರೆದಿಟ್ಟು, ಕಾಡಿನಾಳವ ಅಳೆಯುತ್ತ ಆವಾಹಿಸಿಕೊಂಡು ಆರಾಧಿಸಬೇಕು ನಿನ್ನ - ಅಳಿಯಲೇಬಾರದು ನನ್ನೊಳಗಣ ನಿನ್ನೆಡೆಗಿನ ಹುಚ್ಚು ಹಾಗೇ ಜೀವಿತದೆಡೆಗಿನ ಕರುಳ ಮೋಹ...
=\=/=\=/=
ಹೇ ನೇಹವೇ -
ನನ್ನೊಳಿದೆಯಾ ಎಂಬ ಅರ್ಹತೆಯ ಲೆಕ್ಕಾಚಾರವ ಮೀರಿ ನೀ ಕೈಯೆತ್ತಿ ಸುರಿದ ಪ್ರೀತಿ ನಿನ್ನೆದೆ ಗುಡಿಯ ಬತ್ತದ ಔದಾರ್ಯದ ದೊರೆತನ...
ನಾನೆಂಬೋ ನನ್ನಹಂಮ್ಮಿನ ಕೋಟೆಯ ದಾಟಿ ನೀನೀವ ಪ್ರೀತಿ ಪ್ರಸಾದಕ್ಕೆ ತಲೆ ಬಾಗಿ ಬೊಗಸೆಯೊಡ್ಡಿದೆ ಎಂಬುದಷ್ಟೇ ನನ್ನ ಹಿರಿತನ...
ಕೊಟ್ಟು ಗರ್ವವಿಲ್ಲ - ಪಡೆದು ಸಂಕೋಚವಿಲ್ಲ...
ಹೇಳು -
ಕೊಟ್ಟವನಲ್ಲೂ, ಪಡೆದಾತನಲ್ಲೂ ಹಿಗ್ಗಿನ ಸುಗ್ಗಿಯ ಸಗ್ಗದ ಸಿರಿ ಭಾವವೊಂದನೆ ಉಳಿಸಿ ನಗುವುದು ಸವಿ ಸ್ನೇಹದ ಅಕ್ಕರೆಯೊಂದೇ ಅಲ್ಲವೇ...
=\=/=\=/=
ಕೂಸಿನ ಬದುಕಿಗೆ ಬಣ್ಣ ತುಂಬುವುದೆಂದರೆ ಇಷ್ಟೇ ಅಲ್ಲವಾ - ಮಗುವಾಗಿ ಮಗುವ ಮುಂಗೈಗಿಷ್ಟು ನಗೆಯ ಮದರಂಗಿಯ ಬಳಿಯುವುದು...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Sunday, January 10, 2016

ಗೊಂಚಲು - ನೂರೆಪ್ಪತ್ತೊಂಬತ್ತು.....

ಕಾಡಿದರೆ ಕಾಡಬೇಕು ಪ್ರೀತಿ ಹಸಿವು.....
** "ಪ್ರೀತಿ" ಶಕ್ತಿ - ಬಲಹೀನತೆಯಲ್ಲ...

ಬದುಕಿನ ಎಂಥಾ ಯುದ್ಧವನ್ನೂ ಸಲೀಸಾಗಿ ಗೆದ್ದು ಮುನ್ನಡೆಯಬಹುದೇನೋ "ಪ್ರೀತಿ" ಕೈಯಲ್ಲಿನ ಆಯುಧವಾದರೆ...

ಎಂಥಾ ದಾಳಿಯೂ ಎದೆ ಸೀಳಲಾರದೇನೋ "ಪ್ರೀತಿ" ರಕ್ಷಣೆಯ ಗುರಾಣಿಯಾದರೆ...

ಎಂಥಾ ಬರಡು ಎದೆನೆಲದಲೂ ನಗೆಯ ಹಸಿರು ಚಿಗುರೀತೇನೋ "ಪ್ರೀತಿ" ಉಳುವ ನೇಗಿಲಾದರೆ; "ಪ್ರೀತಿ" ಮಳೆಯಾದರೆ...

ಬದುಕಿಗೊಂದು ದಿವ್ಯ ಉನ್ಮಾದದ ಚಂದ ದಕ್ಕೀತು ನನ್ನೆಲ್ಲಾ ಹಸಿವಿನ ಆಳದಲ್ಲಿ "ಪ್ರೀತಿ" ಹಾಸುಹೊಕ್ಕಾಗಿದ್ದರೆ...

ಕೊನೆಯಲೊಮ್ಮೆ ನನ್ನೊಳಗನು ನಾ ನೋಡಿಕೊಂಡರೆ ನೆಮ್ಮದಿಯ ಉಸಿರು ಹೆಮ್ಮೆಯನುಸುರೀತು ಸಾಧನೆಯ ದಾರಿಗೆ "ಪ್ರೀತಿ" ಬೆಳಕಾದರೆ...

ಓ ಅಂತರಾತ್ಮವೇ,
ಪ್ರೀತಿಗಿಂತ ಹಿರಿಯ ಉಡುಗೊರೆಯಿಲ್ಲ ಅಂದೆಯಲ್ಲ...
ಕಲಿಸಬಾರದೇ ಬದುಕ ಪ್ರೀತಿಸುವುದ...
ಬೆಳೆಸಬಾರದೇ ಪ್ರೀತಿ ಹಂಚುವ ಭಾವ ಶಕ್ತಿಯ...
ಪ್ರೀತಿ ಉಡುಗೆ ತೊಡಿಸಿ ಈ ಬದುಕನೇ ಪ್ರೀತಿಯಾಗಿಸಬಾರದೇ - ಬಣ್ಣ ತುಂಬಬಾರದೇ...

Thursday, January 7, 2016

ಗೊಂಚಲು - ನೂರಾ ಎಪ್ಪತ್ತು ಮೇಲೆಂಟು.....

ಎಲ್ಲಾ ಬಿಡಿ ಭಾವಗಳೇ.....

ಈ ಸುಳಿವ ಚಳಿ ಗಾಳಿಗೆ ರವಿ ರಾಯನೂ ಹೊತ್ತೇರಿದ ಮೇಲೂ ಮೋಡವ ಹೊದ್ದು ಮಲಗಿದಂತಿದೆ...
ನನಗೋ ಎದೆಯ ಹೊದಿಕೆಯಾದವಳ ಬಿಚ್ಚು ಹೆರಳ ಮರೆಯಲಿ ತುಟಿ ಮಧುವ ಇಷ್ಟಿಷ್ಟೇ ಹೀರಿ ಮತ್ತೇರುತ್ತಾ, ಬೆಸೆದ ಬೆತ್ತಲೆ ಹೊತ್ತಿಸಿದ ಬೆಂಕಿಯಲಿ ತೇಕುವ ಬಿಸಿಯುಸಿರ ಹಿತದಲ್ಲಿ, ವಕ್ಷ ಸಂಪತ್ತಿನ ಸೊಂಪಲ್ಲಿ, ನಾಭಿ ಸುಳಿಯ ಹಸಿವಲ್ಲಿ, ಮತ್ತೇರಿದ ಅವಳ ಕಟಿಯ ಬಿರುಸಿನ ಬಿಸಿಯಲ್ಲಿ ಮಂಡಿಯೂರಿ ಕಳೆದು ಹೋದ ಕಳೆದಿರುಳ ಕನಸಿನದೇ ಗುಂಗು...
=_=_=
ಪವಿತ್ರ ಪ್ರೇಮ, ಆದರ್ಶ ಪ್ರೇಮದ ಮಾತು ಕೇಳುತ್ತೆ ಅಲ್ಲಲ್ಲಿ...
ಪ್ರೇಮದಲ್ಲಿ ಸುಖವಾಗಿರುವುದು, ಖುಷಿ ಖುಷಿಯಾಗಿ ಇರುವುದು ಖಂಡಿತ ಬೇರೆ ಬೇರೆ...
ಆದರ್ಶ ಪುರುಷ ರಾಮನ ರಾಜ್ಯದಲ್ಲಿ ಸುಖಕ್ಕೆ ಕೊರತೆಯೇ..?
ಆದರೂ ಏಕೈಕ ಪತ್ನಿ ಕೂಡಾ ಅಳುತ್ತಲೇ ಭೂಮಿಯೊಡಲ ಸೇರಿದಳಂತೆ...
ರಾಮನಿಗೋ ಪ್ರೇಮವೂ ಆದರ್ಶವೇ ಆಗಿತ್ತೇನೊ...
ಇವನೊಬ್ಬನಿದ್ದಾನೆ ಕೃಷ್ಣ - ಮಹಾ ಲಂಪಟನಂತೆ (?)...
ರಾಜ್ಯದ ತುಂಬಾ ಅವನ ಹೆಣ್ಣುಗಳೇ...
ಆದರೂ 'ಕೃಷ್ಣನಿಗಾಗಿ' ಅತ್ತವರೇ ಎಲ್ಲರೂ - 'ಕೃಷ್ಣನಿಂದಾಗಿ' ಅತ್ತವರ ಸುದ್ದಿ ಇಲ್ಲ ಎಲ್ಲೂ...
ಕೃಷ್ಣಂಗೆ ಪ್ರೇಮ ಬದುಕಿನ ಸ್ಫೂರ್ತಿ ಸೆಲೆಯಂತೆ ಕಾಣುತ್ತೆ...
ಪ್ರೇಮಕ್ಕೆ ಆದರ್ಶದ ಅಥವಾ ಆರೋಪಿತ ಪಾವಿತ್ರ್ಯದ ಬಣ್ಣ ಬಂದಾಗ ಅದು ಕೇವಲ ನಾಲ್ಕು ಗೋಡೆಗಳ ನಡುವಿನ ಸುಖವಾಗಿ ಅಷ್ಟೇ ಉಳಿಯುತ್ತೆ ಅನ್ನಿಸುತ್ತೆ ನಂಗೆ...
ಪ್ರೇಮ ಜೀವನ ದೃಷ್ಟಿಯಾದಾಗ ಅಲ್ಲವೇ ಬದುಕ ಪ್ರೀತಿಯ ಸ್ಫೂರ್ತಿ ಚಿಲುಮೆಯಾದಾಗ ಬೃಂದಾವನದ ಬಯಲು ಸರಸವೂ ಪ್ರೇಮದುತ್ತುಂಗದ ಅಭಿವ್ಯಕ್ತಿಯಷ್ಟೇ; ಬೆಸೆದುಕೊಂಡು, ಬಸಿದುಕೊಂಡು ಯಮುನೆಯಂತೆ ಹರಿದ, ಬೆಳದಿಂಗಳಂತೆ ಮೆರೆದ ಖುಷಿಯಷ್ಟೇ ಅಂತಿಮ ಅಲ್ಲಿ...
ಪ್ರೇಮ ಆದರ್ಶವಾ..?
ಬದುಕಿನ ಸ್ಫೂರ್ತಿ ಸೆಲೆಯಾ..??
ಯಾವುದಾದರೆ ಚಂದ...???
ಪ್ರೇಮದ ಪಾವಿತ್ರ್ಯವನ್ನ ಕೊಲ್ಲುವುದು ಕಾಮವಲ್ಲ - ಭಾವದೊರತೆಯ ಅಭಿವ್ಯಕ್ತಿಯ ಅಭಾವ ಎನ್ನಿಸುತ್ತೆ ನಂಗೆ - ಹಾಗಾಗಿ ನನ್ನ ಆಯ್ಕೆ ಕೃಷ್ಣ...
ಇಷ್ಟಾಗಿಯೂ ಕೊನೇಲಿ ನನ್ನಲುಳಿದ ಪ್ರಶ್ನೆ: ರಾಮ, ಸೀತೆಯರಂತೆಯೇ ರಾಧೆ ಮತ್ತು ಕೃಷ್ಣರನ್ನೂ ದೇವರಾಗಿಸಿ ಕೂರಿಸಿದ್ದು ಮತ್ಯಾರೂ ಅವರಂತಾಗಬಾರದು ಎಂಬುದಕ್ಕಿರಬಹುದಾ...?
(*** ಇಲ್ಲಿ ರಾಮ, ಕೃಷ್ಣರು ಕೇವಲ ಉದಾಹರಣೆಗಷ್ಟೇ... ಇಬ್ಬರ ಮೇಲೂ ಯಾವುದೇ ಪೂರ್ವಗ್ರಹಗಳಿಲ್ಲ...)
=_=_=
ಎಷ್ಟು ಗಾಢ ಈ ನಗೆಯ ಬಣ್ಣ - ಏದುಸಿರಿನ ಭಾರವೂ ಕಾಣದಷ್ಟು...
ಎಷ್ಟೊಂದು ಹಗುರ ಈ ಬದುಕ ಬಟ್ಟೆಯ ನೇಯ್ಗೆ - ನಗೆಯ ಕಿರು ಅಲೆಗೂ ತೇಲುವಷ್ಟು, ಅದೇ ಹೊತ್ತಿಗೆ ಉಸಿರ ಭಾರಕೂ ನಲುಗುವಷ್ಟು...
ಅಬ್ಬಾ ಅದೆಷ್ಟು ಪ್ರಖರ ಆ ಸಾವಿನ ಬೆಳಕು - ಉಸಿರಿದು ಕುಸಿದು, ನಗೆಯ ಕಣ್ಣು ಇಂಗಿ, ಬದುಕು ಮತ್ತೇಳದಂತೆ ಬೆತ್ತಲಾಗುವಷ್ಟು...
=_=_=
ತುಳಸಿ ಕಟ್ಟೆಯೆದುರು ಬೆತ್ತಲೆ ಬಿದ್ದವನ ಸುತ್ತ ಅಳುವ (?) ನೂರಾರು ಮಂದಿ - ಬದುಕ ಬಟ್ಟೆಯ ನೂಲನು ಮಾತ್ರ ನಾನೊಬ್ಬನೇ ನೇಯಬೇಕು...
(*** ಇದು ಎಲ್ಲರ ಸತ್ಯ...)
=_=_=
ಎದುರು ಕೂತ ಸಾವು ಹೊಟ್ಟೆ ಉರಕೊಂಡು ಸಾsssಯಬೇಕು ಹಂಗೆ ಎಲ್ಲಾ ಬಿಗುಮಾನಗಳ ಬಿಟ್ಟು ಈ ಬದುಕಿನೊಡನೆ ಸರಸಕ್ಕೆ ಬೀಳಬೇಕು...
ಕೊಡಬೇಕೆನಿಸಿದ ಪ್ರೀತಿಯ ಅದಿದ್ದಂತೆಯೆ ಆಗಿಂದಾಗ್ಗೆ ಅದು ಸಲ್ಲಬೇಕಾದವರೆದು ಇಟ್ಟುಬಿಡಬೇಕು - ಇಲ್ಲದಿರೆ, ಬದುಕಿನ ಹಾಡಿಂಗೆ ಜೊತೆಯಾಗದೇ ಇದ್ದು ಸಮಾಧಿಯೆದುರು ಅಳಬೇಡ ಅಂತಿದ್ದ ನನ್ನದೇ ಮಾತು ನನ್ನ ಚುಚ್ಚುವಂತಾಗುತ್ತದೆ...
ಸಾವಿಗಿಲ್ಲದ ಬಿಗುಮಾನ, ಸಮಯದ ಅಭಾವವ ಬದುಕ ಪ್ರೀತಿಗೆ ಆರೋಪಿಸಿಕೊಂಡು ಕೊನೆಗೆ ನನ್ನದೇ ಆತ್ಮದೆದುರು ಆರೋಪಿಯಾಗಿ ಕೊರಗುವ ಚಂದವೇನು..??
(*** ಆ ಬೊಗಸೆಯಲ್ಲಿಡಬೇಕಿದ್ದ ಪ್ರೀತಿಯ ತುಂಡೊಂದು ಸಾವಿನ ನಿಷ್ಕರುಣೆಗೆ ಸಿಕ್ಕಿ ನನ್ನ ಕಿಸೆಯಲ್ಲೇ ಉಳಿದೇ ಹೋದ ಹೊತ್ತಲ್ಲಿ...)
=_=_=
ಓ ಇರುಳೇ ಆರೋಪಿಸಲಾರೆ ನಿನ್ನ, ಕಣ್ಣೀರಿನಲ್ಲಿ ಬೊಗಸೆ ತುಂಬಿಸಿಯಾದರೂ ಸರಿ ಕನಸಿನ ದಾರೀಲಿ ಕರುಳ ಇರಿಯುವ ವಿಷ ಲೇಪಿತ ನೆನಪುಗಳ ತೊಳೆದುಬಿಡು ನಿರ್ಭಯ ನಾಳೆಗಾಗಿ...
ಹೇ ಬೆಳಕೇ ಋಣಿಯಾಗುವೆ ನಿನಗೆ, ಮೀರಲಾಗದ ದೌರ್ಬಲ್ಯಗಳಿಂದಾದ ಭಾವಗಳ ಮಾಲಿನ್ಯವ ಮತ್ತೆ ಮತ್ತೆ ಪ್ರಜ್ಞೆಯ ಕುಲುಮೆಯ ಕಾವಿನ ಸ್ಪರ್ಷಕೊಡ್ಡಿ ತೊಡೆದುಬಿಡು ಸ್ವಚ್ಛಂದ ಇಂದಿಗಾಗಿ...
...ಕಾರಣವಿಷ್ಟೇ,
ನನ್ನ ಕಾಮದಷ್ಟೇ ಹುಚ್ಚು ತೀವ್ರತೆಯಲ್ಲೇ ಈ ಬದುಕ ಪ್ರತಿ ಕ್ಷಣಗಳನೂ ಜೀವಿಸಬೇಕಿದೆ ನಾನು - ಸಾವು, ನೋವುಗಳ ಅಸ್ತಿತ್ವವನೇ ಕಡೆಗಣಿಸಿ ಅಣಕಿಸಬಲ್ಲ ಶ್ರೀಮಂತ ನಗೆಯ ಪಕ್ಷಪಾತಿಯಾಗಿ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Saturday, January 2, 2016

ಗೊಂಚಲು - ನೂರಾ ಎಪ್ಪತ್ತೇಳು.....

ಮತ್ತದೇ ಬಿಡಿ ಭಾವಗಳು.....

ಬಿದಿರಿನೆದೆಯ ಖಾಲಿಯಲ್ಲಿ ಗೊಲ್ಲನೊಬ್ಬ ತನ್ನೆದೆಯ ಭಾವಗಳ ಉಸಿರಾಗಿ ತುಂಬಿದ;
ಒಲವ ನಾದ ಹೊಮ್ಮಿತು - ಬಿದಿರು ಕೊಳಲಾಯಿತು...
ಕಾರು ಮೋಡದಂಥವಳೇ -
ಎನ್ನ ಒಣ ಎದೆಯ ಬಾಗಿಲಲ್ಲಿ ನಿನ್ನ ಒದ್ದೆ ಹೆಜ್ಜೆಯ ರಂಗೋಲಿ...
ನಿನ್ನಾ ಮುಂಗುರುಳ ತೀಡುವ ಚಿಗುರು ಕಿರುಬೆರಳು, ಕಣ್ಣಂಚ ಕುಡಿಯಲ್ಲಿನ ನಾಚಿಕೆಯ ಉಂಗುರ, ನೆಲ ಕೊರೆವ ಕಾಲ್ಬೆರಳ ಹಸಿ ಬಿಸಿಯ ಹಂಬಲ ಎಲ್ಲ ಒಟ್ಟಾಗಿ ಪಿಸುಗುಟ್ಟಿದ್ದು:
" ಮಳ್ಳಾ,
ಬಿದಿರಾಗು ಉಸಿರಾಗುತೇನೆ - ನಮ್ಮೀರ್ವರ ಒಳ ಮನೆಯ ಖಾಲಿಯನೂ ಒಲವು ತುಂಬಲಿ - ಬದುಕಿದು ಕೊಳಲಾಗಲಿ..."
ಬೀಜ ಬಿರಿಯದೆ ಇದ್ದೀತೆ ಹಸಿ ಮಣ್ಣ ಬಿಸಿಗೆ - ಮನಸೀಗ ಕನಸುಗಳ ಫಲ ಹೊತ್ತ ಮಾಮರ...
!!!
ಹಸಿವು ಹಸಿ ಹಸಿಯಾಗಿ ಕಾಡದೇ ಬದುಕು ದಕ್ಕುವುದಿಲ್ಲ - ಎದೆಯ ಧ್ಯಾನಸ್ಥ ನೆಮ್ಮದಿ ಬದುಕಿನ ಮಹಾ ಹಸಿವು...
ಕನಸ ಹಸಿವು ಸಾಯದೇ ನೆಮ್ಮದಿ ಹುಟ್ಟುವುದಿಲ್ಲ - ಉಸಿರ ಹಸಿವಿಗಿಲ್ಲಿ ಜನ್ಮಾಂತರದ ಕನಸ ನಂಟು...
ಸನ್ಯಾಸವೂ ಹಸಿವಿನ ಮುಖವೇ ಅನ್ನಿಸುವಲ್ಲಿ ಶಾಂತಿ ಅಲ್ಲಿಷ್ಟು ಇಲ್ಲಿಷ್ಟು ಸಿಕ್ಕಂತೆ ಭಾಸವಾಗೋ ಆದರೆ ಒಟ್ಟಾರೆ ಸ್ಥಾಯಿಯಾಗದೆ ಸತಾಯಿಸೋ ಒಂದು ಸಂಚಾರೀ ಭಾವವಷ್ಟೇ ಅನ್ನಿಸಿ ನಿಟ್ಟುಸಿರ ನಗು ಮೂಡುತ್ತೆ...
!!!
ಬದುಕೇ - 
ನಿನ್ನೊಲವೆಂದರೆ ಬೆತ್ತಲಿಗೂ ಅಸ್ಪಷ್ಟತೆಯ ಕರಿ ಪತ್ತಲ ಹೊದೆಸುವ ಈ ಕತ್ತಲಿನಂತೆಯೇ; ಒಳಗಿಳಿದಷ್ಟೂ ಗಾಢ, ಬಗೆದಷ್ಟೂ ನಿಗೂಢ...
!!!
ಬಂಧವೆನ್ನಿ ಸಂಬಂಧವೆನ್ನಿ ಏನೆಂದು ಕೂಗಿದರೂ ಅದು ಹತ್ತಾರು ಭಾವಗಳು ಅಷ್ಟಿಷ್ಟು ಬೆರೆತು ಇಷ್ಟಾದ ಒಟ್ಟು ಮೊತ್ತವೇ ತಾನೆ...
ಒಂದು ಬಾಂಧವ್ಯದ ಸೌಂದರ್ಯ ಮತ್ತು ಆಯಸ್ಸು ನಾವು ಹೇಗೆ ಆ ಭಾವಗಳನೆಲ್ಲ ನಿಭಾಯಿಸುತ್ತೇವೆ ಎಂಬುದನ್ನ ಅವಲಂಭಿಸಿದೆ ಅಲ್ಲವಾ...
ಅಪ್ಪ ಕೈಲಿಡುವ ಪುಡಿಗಾಸಲ್ಲೇ ಪೂರ್ತಾ ಸಂಸಾರದ ಬೇಕು ಬೇಡಗಳ ನಿಭಾಯಿಸೋ ಆಯಿಯ ಬದುಕಿನೆಡೆಗಿನ ಬದ್ಧತೆಯಂಥ ಬದ್ಧತೆಯನ್ನ ನಾವು ಸಲಹಿಕೊಂಡ ಎಲ್ಲ ಬಾಂಧವ್ಯಗಳೆಡೆಗೂ ಪ್ರದರ್ಶಿಸಬಲ್ಲೆವಾದರೆ ಬಂಧ ಎಷ್ಟು ಚಂದ ಗೊತ್ತಾ - ಬದುಕು ಕೂಡಾ...
!!!
ನಡುರಾತ್ರಿ ಮಸಣದ ಮೂಲೆಯಲಿ ನರಿಯೊಂದು ಊಳಿಟ್ಟು ಹೂತ ಹೆಣಗಳಿಗೆ ಲಾಲಿ ಹಾಡಿದೆನೆಂದುಕೊಂಡರೆ ನಗಬೇಡಿ; ನಿದ್ದೆ ಬಾರದ ಕಾವಲು ಮುದುಕಂಗೆ ಇರುಳ ಸಂಗಾತಗಳೆಂದರೆ ನರಿಯ ಹಾಡು ಮತ್ತು ಅರೆಪಾವು ಹುಳಿ ಹೆಂಡ ಅಷ್ಟೇ...
(***ದಯವಿಟ್ಟು ಅರ್ಥ ಕೇಳಬೇಡಿ...)
!!!
ಪೂರ್ವಗ್ರಹಗಳಲ್ಲೇ ಜೀವಿಸುವವರಲ್ಲಿ ಘಟನೆಗಳು ಮಾತ್ರ ಜೀವಂತ - ಘಟನೆಯ ಹಿಂದು ಮುಂದಿನ ಭಾವಗಳಿಗಲ್ಲಿ ಅಸ್ತಿತ್ವವಿಲ್ಲ - ಅಲ್ಲಿ ಪ್ರೀತಿಯೂ ಒಂದು ಘಟನೆ ಅಷ್ಟೇ - ಪೂರ್ವಗ್ರಹ ಅನುಮಾನದ ಅಮ್ಮನಿರಬೇಕೆನಿಸಲ್ಲವಾ...
ಗೆಲುವನಷ್ಟೇ ಎದೆಯಲಿಟ್ಟುಕೊಂಡವಗೆ ಆ ದಾರಿಯ ತಿರುವು, ಕವಲು, ಹಸಿರಿನ ಸೊಬಗೆಲ್ಲಾ ಕಣ್ಣ ಪಟಲದಿಂದಾಚೆಯ ಮಿಥ್ಯೆಗಳೇ - ಅಲ್ಲಿ ಪ್ರೀತಿ ಒಂದು ಮೆಟ್ಟಿಲು ಮಾತ್ರ...
ಅಂತರಂಗದ ಕನ್ನಡಿಗೆ ಕಳ್ಳ ನಗೆಯ ಬೀಗ ಜಡಿದು ಮುಖವಾಡಗಳಲೇ ಬದುಕ ರೂಢಿಸಿಕೊಂಡವರ ನಡುವೆ ಸತ್ಯಕ್ಕೇನೂ ಕೆಲಸವಿಲ್ಲ - ಹೂಸು ಬಿಟ್ಟವ ಮೊದಲು ಮೂಗು ಮುಚ್ಚಿಕೊಳ್ಳುವಂತೆ ಸುಳ್ಳಿಗಲ್ಲಿ ಅಗ್ರ ಪಂಕ್ತಿಯ ಮಣೆ - ಪ್ರೀತಿ ಅಲ್ಲಿ ಬರೀ ಉನ್ಮಾದ...
ಉಳಿದಂತೆ ಎಲ್ಲ ಕುಶಲ...
!!!
ಮನಸೆಂಬೋ ಪಾಳು ಭವಂತಿಯಲ್ಲಿ ಪ್ರೀತಿ, ಸ್ನೇಹ, ಬಂಧಗಳನೂ ಸೇರಿದಂತೆ ಇನ್ನೂ ಸಾಕಷ್ಟು ಕನಸುಗಳ ಕೊಲೆಯಾಗಿದೆ...
ಆರೋಪಿಗಳಾದ ನಾನೇ ಸಾಕಿಕೊಂಡ ದೌರ್ಬಲ್ಯಗಳು ಹಾಗೂ ನೆನಪುಗಳ ದೌರ್ಜನ್ಯವ ಮೀರಲಾಗುತ್ತಿಲ್ಲ...
ಹಾಗಾಗಿ ನನ್ನ ಭಾವಗಳ್ಯಾವುದರ ಮೇಲೂ ಯಾರ್ಯಾರದೋ ಹೊಣೆಯಿಲ್ಲ...
ಮೌನ ಕಣಿವೆಯಲ್ಲಿ ನಗೆಯ ಅಸ್ಥಿ ವಿಸರ್ಜನೆ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)