Wednesday, April 11, 2012

ಗೊಂಚಲು - ಇಪ್ಪತ್ತು + ಒಂಭತ್ತು...


ಭಯವಾಗುತ್ತಿದೆ - ಅಮ್ಮ
ಬದುಕೆಂಬ ಗುಮ್ಮನ ವಿವಿಧ ರೂಪಗಳ ಕಂಡು...


ಸದ್ದೇ ಇಲ್ಲದೆ ಒಂದಷ್ಟು ದೂರ ಜೊತೆ ನಡೆದು -
ಅಷ್ಟೇ ನಿಶ್ಯಬ್ದವಾಗಿ ಸರಿದು ಹೋಗುವ 
ಎಷ್ಟೊಂದು ಸಂಗತಿಗಳು ಈ ಪುಟ್ಟ ಬದುಕಲ್ಲಿ...
ಕೆಲವು ಬಣ್ಣ ತುಂಬಿ ಹೋಗುತ್ತವೆ...
ಇನ್ಕೆಲವು ಬಣ್ಣ ಅಳಿಸಿ...


ಹುಡುಕುತ್ತೇನೆ ನನ್ನ ನಾನು 
ಇಡಿಯಾಗಿ 
ಒಡೆದ ಗಾಜಿನ ಚೂರುಗಳಲ್ಲಿ...
ಕಂಡದ್ದು - ಸಾವಿರ ಮುಖಗಳು...
ಯಾವುದೂ ನನ್ನದಲ್ಲ - ಎಲ್ಲವೂ ನನ್ನದೇ...


ಘೋರಿ ಸೇರಿದ ಆಸೆ...
ಗರ್ಭ ತಳೆದ ಹೊಸ ಕನಸು...
ನಿನ್ನೆಯ ಹಳವಂಡ - ನಾಳೆಯ ಕನವರಿಕೆಗಳಲ್ಲಿ...
ಈ ಕ್ಷಣ -
ಅರ್ಧ ಜಗಿದುಗಿದ ತಾಂಬೂಲ...


ನನಗೇ ಅರ್ಥವಾಗದ ನನ್ನ ಬೇಕುಗಳು...
ಕೂಡುವ - ಕಳೆಯುವ
ಗುಣಿಸಿ - ಎಣಿಸುವ...
ಗೊತ್ತಿಲ್ಲದ - ಗುರಿಯಿಲ್ಲದ...
ಕೊನೆ ಕಾಣದ ಅಲೆದಾಟದಲ್ಲಿ...
ಕಳೆದು ಹೋಗುತಿದೆ ಬದುಕು
ಹಾಗೇ ಸುಮ್ಮನೆ...


*****


ಭಯವಾಗುತ್ತಿದೆ - ಅಮ್ಮ
ಬದುಕೆಂಬ ಗುಮ್ಮನ ವಿವಿಧ ರೂಪಗಳ ಕಂಡು...


ಅಂದು - ನೀ ಹೇಳುತ್ತಿದ್ದ ಕತ್ತಲ ಗುಮ್ಮನ ಬಗೆಗೆ ಭಯವಾದರೆ ಅಡಗಿಕೊಳ್ಳಲೆನಗೆ ನಿನ್ನ ಸೆರಗ ಮರೆಯಿತ್ತು.
ನಿನ್ನ ಮಡಿಲ ಕಂಪಿಗೆ ಎಂಥ ಗುಮ್ಮನ ಭಯವನ್ನೂ ಓಡಿಸಬಲ್ಲ ಬೆಚ್ಚನೆಯ ಬಿಸುಪಿತ್ತು.
ನೋವಾದರೆ ಸಂತೆಯ ನಡುವೆಯೂ ದನಿ ತೆರೆದು ಅತ್ತು ಬಿಡಬಹುದಿತ್ತು.
ಏನೋ ಬೇಕೆನಿಸಿದರೆ ನಿನ್ನೆಡೆಗೆ ಕೈಚಾಚಿ ರಚ್ಚೆ ಹಿಡಿಯಬಹುದಿತ್ತು.
ನಿನ್ನ ಮುದ್ದಿಗೆ - ನನ್ನ ನಗುವಿಗೆ ಊರನೆಲ್ಲ ಸೆಳೆವಂಥ ಸ್ವಚ್ಛ ಸೊಬಗಿತ್ತು.
ಹರಿದ ಮಂಡಿಗೆ, ತರಚು ಗಾಯಕ್ಕೆ -  ನಿನ್ನ ಮಮತೆಯ ಮುಲಾಮಿತ್ತು.

ಸೋತ ಆಟ, ಪಾಠಗಳ ನೋವಿಗೆ - ನಿನ್ನ ಭರವಸೆಯ ತಬ್ಬುಗೆಯಿತ್ತು.

ಆಡುತ್ತಾಡುತ್ತಲೇ ಓಡುವ ದಿನಗಳೊಂದಿಗೆ ಅರಿವೇ ಆಗದೆ ಬೆಳೆದುಬಿಟ್ಟೆ.
ನಿನ್ನ ಮಡಿಲಿಂದ ಕೊಸರಿ ಜಗದ ಬಯಲಿಗೆ ಬಿದ್ದುಬಿಟ್ಟೆ.

ಈಗ - 
ನಡೆಯಲೇ ಬೇಕಾದ ಬದುಕಿನ ಕೊನೆ ಕಾಣದ ದಾರಿಯ ನಡುವಿನ ವಿಚಿತ್ರ ತಿರುವು, ಕವಲುಗಳ ಎದುರು ಉಸಿರು ಸಿಕ್ಕಂತಾಗಿ ತಡವರಿಸುತ್ತ ನಿಂತಿದ್ದೇನೆ.
ಇಂದು -
ಬೆಳೆದ ಹಮ್ಮು - ತೋರಲೇ ಬೇಕಾದ ಬಿಮ್ಮುಗಳಲಿ
ಎಂಥ ನೋವಿಗೂ ಅಳುವಂತೆಯೂ ಇಲ್ಲ.
ಎಷ್ಟೇ ಖುಷಿಯಾದರೂ ನಗುವು ಸಲ್ಲ.
ಕಾರಣ -
ನಾನತ್ತರೆ ಜಗವೆಲ್ಲ ಒಳಗೇ ನಗುತ್ತೆ.
ನಾ ನಗುತಿದ್ದರೆ ಸುತ್ತಣ ಕಣ್ಣುಗಳಲಿ ಈರ್ಷ್ಯೆ.

ಯಾರ್ಯಾರೋ ಅಂತಾರೆ ಇದೆಯಂತೆ ಬದುಕ ಅಂತ್ಯದಲ್ಲಿಯೂ ಶಾಂತಿ.
ಆದರೆ ನನಗನಿಸುತ್ತೆ ಅಲ್ಲಿರುವುದು ಬರೀ ಸ್ಥಬ್ದತೆ.
ಒಂದಾನುವೇಳೆ ಇದ್ದರೂ ಇರಲಾರದು ಬಿಡು
ನಿನ್ನೆದೆಗೇ ಒದೆಯುತ್ತ ನಿನ್ನೆದೆಯ ಅಮೃತವ ಹೀರುವಾಗ ಇದ್ದಿರುತ್ತಿದ್ದ ಪ್ರಶಾಂತಿ.

ಅಮ್ಮಾ -
ಒಮ್ಮೆ ಈ ಜಗದುಡಿಯಿಂದ ಸೆಳೆದುಕೋ ನನ್ನ ನಿನ್ನ ಮಡಿಲಿಗೆ.
ನಿನ್ನ ಅಂತಃಕರಣದ ಹಾರೈಕೆಯೊಂದೇ ಭರವಸೆಯು ಭವಿತವ್ಯಕೆ...










ಚಂದದ ಪ್ರತಿಕ್ರಿಯೆಗಳಿವೆ... ಒಮ್ಮೆ ಕಣ್ಣಾಡಿಸಿ...