Friday, March 9, 2018

ಗೊಂಚಲು - ಎರಡ್ನೂರೈವತ್ತೆರಡು.....

ಖುಷಿಯ ಜೋಲಿಯಲಿ ನಗೆಯ ಸೌರಭ...

ನನ್ನೆದುರು ನಾನೇ ಕುಂತಂತೆ - ಅಲೆ ತೊಳೆದ ಮಡಿ ಮಡಿ ಹಾದಿಯಲಿ ದುರದುಂಡಗೆ ಬಯಲಾಗಿ ನಿಂತಂತೆ - ದಂಡೆಯ ಹಬ್ಬಿ ಹಸಿಮನದಿ ಅಲೆಯುತ್ತ ಅಲೆಗಳ ಮಾತು ಕೇಳುತಿದ್ದರೆ...
ಮಡಿಲ ಕೂಸಂತೆ ಅಡಿಗಡಿಗೆ ನಡಿಗೆ ತಡೆದು ಕೊರಳಿಗಾತು ಕಾಡುವ ಅವಳ ಕಣ್ಣಲ್ಲಿ ಬೆಳದಿಂಗಳ ಚಿಗುರು ತೇಲುತ್ತದೆ - ಅಲೆಗಳು ಜೋಡಿ ಹೆಜ್ಜೆ ಗುರುತಿನ ಮೇಲೆ ತಮ್ಮ ಹೆಸರು ಬರೆಯುತ್ತವೆ - ಆ ಬೆರಗಿನಲ್ಲಿ ನನ್ನಲ್ಲಿ ನಾನು ಕಳೆದೇ ಹೋಗಿ ಇನ್ನಷ್ಟು ನಾನಾಗುತ್ತೇನೆ...
ಬೆಸ್ತ ಹೈದನ ಬೆವರ ಮೀನ ವಾಸನೆಗೆ ತೀರದೊಡನೆ ಕಾದು ಕುಳಿತ ಅವನ ಗುಡಿಸಲ ಪೊರೆಯುವ ಹೊಸ ಬೆಳಕು ಮೂಗರಳಿಸುತ್ತಾಳೆ - ಬೆಲ್ಲದ ಭರಣಿಗೆ ಉಪ್ಪು ಸವರಿಟ್ಟವನೇ ಅಂತಂದು ಮೀಸೆ ಎಳೆದು ಭುಜ ಚಿವುಟಿ ತುಟಿ ಕಚ್ಚಿಕೊಂಡ ಹೆಣ್ಣಾಸೆಯ ತುಂಟ ಕಿಲ ಕಿಲಕೆ ಬುಟ್ಟಿಯ ಮೀನೊಂದು ಕುಪ್ಪಳಿಸಿ ಕೊನೆಯ ನಗು ಬೀರಿ ಮೌನ ಸಾಕ್ಷಿಯಾಗುತ್ತದೆ...
ದಂಡೆಯಂಚಲಿ ಪ್ರೇಮವು ಕದ್ದು ಮೆದ್ದ ಮುತ್ತುಗಳ ಲೆಕ್ಕ ಕೇಳಿದರೆ ಅಲೆಗಳು ತೊದಲುತ್ತವೆ...
ಹರೆಯದ ತೋಳಲ್ಲಿ ಉಸಿರು ತಳಕಂಬಳಕವಾಗಿ ಅಲೆಗಳೊಂದಿಗೆ ಜಿದ್ದಿಗೆ ಬಿದ್ದಾಗ ಅವಳ ಕುಪ್ಪಸಕೆ ಹೆರಿಗೆ ನೋವು...
ಹೇ ಕಾಲನೇ - ಕಾಡಗಪ್ಪು ಕನಸಿನ ಭಾಂಡದ ಬೀಗ ಮುರಿದ ಈ ಸಂಜೆ ನೀ ಇಲ್ಲೇ ತಂಗಬಾರದೇ...
#ಸಾಗರ_ಸನ್ನಿಧಿ...
⤪⤭⤱⤩⤪⤭

ಹೇ ಕತ್ತಲ ಕುಡಿಯಂಥ ಕಪ್ಪು ಹುಡುಗೀ -
ಛಳಿಯು ಮುಡಿ ಬಿಚ್ಚಿ ಕುಣಿವಾಗ, ಎದೆಗೆ ಎದೆ ಕಲಸಿ ತುಸು ಬೆಳದಿಂಗಳ ಕುಡಿವ ಬಾ...
ಇನ್ನೆಷ್ಟು ಕಾಲ ಛಳಿಗೇ ತುಟಿ ಒಡೆಯಬೇಕು...
ತಂಗಾಳಿ ಚುಚ್ಚಿ ಒಂಟಿ ಕಟಿ ಕಾಯಬೇಕು...
ಬಿಸಿ ಉಸಿರ ಹಬೆಯಲ್ಲಿ ಮೈ ಮಚ್ಚೆಗಳ ಮೀಸುವ ಮಧುರ ಪಾಪದಾಸೆಯ ಕಡು ಮೋಹಿ ಪ್ರಾಯಕ್ಕೆ ಮಾಗಿಯ ಒಂಟಿ ರಾತ್ರಿಗಳು ಬಲು ದೊಡ್ಡ ಶಾಪ ಕಣೇ...
ಆಸ್ಥೆಯಿಂದ ಹೆಕ್ಕಿ ತಂದು ದಿಂಬಿನಂಚಲಿ ಚೆಲ್ಲಿಟ್ಟ ಪಾರಿಜಾತದ ಗಂಧ ಸಾಯುವ ಮುನ್ನ ನಿಶಾಂತದ ಕನಸಿಗಾದರೂ ಬಂದು ಛಳಿಯ ಸುಡಬಾರದೇ - ನೀ ಬೆಳಕ ಮುಡಿಯಬಾರದೇ...
#ನಡುನಡುಕದ_ಹಸಿ_ನಕ್ತಕೆ_ನೀ_ಮಾತ್ರವೇ_ಬಿಸಿ_ಹೊದಿಕೆ...😍😘
⤪⤭⤱⤩⤪⤭

ಬದುಕ ಬೆರಳಿಗೆ ಬಳಪ ಕೊಟ್ಟು ಬೆಳಕ ಚಿತ್ರಿಸು ಎಂದೆ - ಎದೆ ಗೋಡೆಯ ಮೇಲೆ ಅವಳ್ಹೆಸರ ಕೆತ್ತಿ ನಿಸೂರಾಯಿತು ಬದುಕು...
ಮಾಗಿಯ ಪಲ್ಲಂಗದಿ ಬೆತ್ತಲೆಯ ಹೊಳಪ ಮುಚ್ಚಲು ಕತ್ತಲ ವಸ್ತ್ರ ಸೋಲುವಾಗ ಕಣ್ಮುಚ್ಚಿಕೊಂಡು ನಾಚಿಕೆ ಅನ್ನುವ ಅವಳು - ಅವಳೆದೆ ಕಣಿವೆಯ ಎಡ ಬದುವಿನ ಕಿರು ಮಚ್ಚೆಯ ಏರಿಳಿವಿನ ಮೆದು ಲಯಕೂ ಸೋತು ಸಿಡಿದೇಳುವ ನಾನು; ಹಾಗೆ ಜಡೆ ಹೆಣೆದ ತೋಳ್ತೊಟ್ಟಿಲಲಿ ನೆಣೆ ಆಡತಾವೆ ಕನಸ ಮರಿ ತಾರೆಗಳು...
ಗಾಳಿಯೂ ನಾಚಿ ಬಿಸಿಯೇರುವಂತೆ ಅವಳ ಹೊದ್ದವನ ಕರ ಕೌಶಲದ ಸಂಪ್ರೀತ ಸಂಯೋಗಕೆ ಛಳಿಯೂ ಇರ್ಷ್ಯೆಯಿಂದ ಸಹಕರಿಸುವಾಗ; ಅವಳೂ ನಾನೂ ನೈಸರ್ಗಿಕವಾಗಿ ನಾವಾಗಿ ಬೆಮರಿನಭ್ಯಂಜನದಿ ಹೇಮಂತದಾಪೋಶನ...
#ಮಾಗಿ_ಬೇಗೆಗೆ_ಸುಡುವ_ಜೀವಾಗ್ನಿಯ_ಸುಖದ_ಸವಿ_ಹಸಿವಿನ_ಹಸಿ_ಬಿಸಿ_ಕಥೆಯ_ಇನ್ನೂ_ಹೇಳಲು_ಮನಸು_ನಾಚುವುದು...
⤪⤭⤱⤩⤪⤭

ಮಾಗಿಯ ಬೆಳಗೆಂದರೆ ಅಯಾಚಿತ ತುಂಟತನದಲಿ ಅವಳವನ ಮೀಸೆ ತಿರುವಿ, ತುಟಿಯಿಂದ ಎದೆ ಚಿವುಟಿ, ಕಣ್ ಮಿಟುಕಿಸಿ ನಕ್ಕ ನಗುವಿನ ಕಿಲ ಕಿಲ....😉😍
⤪⤭⤱⤩⤪⤭

ನಗೆ ಸೌರಭ ನಭ ತಾಕಲಿ - ವನ ರಾಜಿಯು ನಾಚಲಿ...
ಈ ಬಾಳ ಯಾನ ಕಾವ್ಯಕೆ ನಗೆಗೂ ಮಿಗಿಲಿನ ಇನ್ಯಾವ ಶೀರ್ಷಿಕೆ...
ಬೊಗಸೆಯಷ್ಟು ನಗೆಯ ಒರತೆ ಸಾಕೇಸಾಕು ಈ ಉಸಿರ ಬುತ್ತಿಗೆ...

ಹಸಿರುಟ್ಟ ಬೀದಿಯಲಿ ಮರಿ ಚಿಟ್ಟೆ ನಲಿದಾಡೆ ಹಾದಿ ಹರಿದಂತೆಲ್ಲ ನಗೆಯ ಬಣ್ಣದ ಬಳಗ...
ನಗೆಯ ಕಾವ್ಯವ ಕಡೆದು ಮಡಿಲಿಗಿಟ್ಟ ಕರಣಿಕನ ಕರುಣ ಕುಂಚಕ್ಕೆನ್ನ ತುಂಬುಗಣ್ಣಿನ ಮುದ್ದು...

ಉಸಿರ ತಲ್ಲಣಗಳೆಲ್ಲ ನಾಲಿಗೆ ಸೀಳಿಕೊಳ್ಳುತ್ತವೆ - ಹಸು ಕಂದನ ಹಸಿಮೈ ಹಾಲ್ಗಂಪು ಎದೆ ಸೇರೆ...
ಮಡಿಲೇರೆ ಹಾಲ್ನಗೆಯ ಸ್ಪರ್ಷಮಣಿ - ಎಲ್ಲ ಸೊಕ್ಕುಗಳು ತೊಳೆದು ಕಣ್ಣಂಗಳದ ತುಂಬಾ ಅರಳುವುದು ಚೊಕ್ಕ ನಗೆ ರಂಗೋಲೆ...
ಗಡಿಯ ಹಂಗಿಲ್ಲದ ಖುಷಿಯ ಹಾಡಿಯ ಗುಂಟ ನಗೆಯ ಕುಡಿಗಳ ಸಫಾರಿ...
ಎದೆ ದಿಬ್ಬ ಹೂಳಿ ನಗೆ ಬೀಜ ಬಿತ್ತಿದ ಬದುಕ ಪ್ರೀತಿ ಮಂತ್ರ ದಂಡದ ಜಾದೂ ಮುಗಿಯದಿರಲಿ...
ಈ ಮಂಗ ಮನಶ್ಯಾರ - ನಗೆಯ ಗಾಯಕೆ ಮದ್ದು ಸಿಗದೇ ಇರಲಿ...
#ನೆತ್ತಿ_ನೆನೆಸುತಲಿರಲಿ_ನಗೆಯ_ಪಾದದ_ಧೂಳು...
⤪⤭⤱⤩⤪⤭


ಅಮ್ಮ ಗುಮ್ಮನ ಕರೆಯದೆಲೆ ಕರುಳಿಂದ ದಾಟಿಸಿದ ನಗೆ ಹುಗ್ಗಿಯ ಅಕ್ಷಯ ಗಿಂಡಿ, ಆಕೆಯ ಕಂದಮ್ಮಗಳ ಬದುಕ ಎದೆ ಭಾಂಡದ ಖಾಲಿಗಳ ತುಂಬುವಾಗ - ಈ ಬಳ್ಳಿಗಳ ಮೊಗ ಬೆಳಗದಿದ್ದೀತೆ ಇಂಥ ಹೊನಲ ಮೊಗ್ಗೆಯಾಗಿ...
ಕಾಲವೂ ಉಳಿದರೆ ಉಳಿಯಲಿ ಈ ಬಿಂಬಗಳ ಗುರುತೂ ಇಂತೆಯೇ ನಗೆ ಸುಗ್ಗಿಯಾಗಿ...
#ಕರುಳ_ಕಾವ್ಯದ_ಹಾದಿ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Thursday, March 1, 2018

ಗೊಂಚಲು - ಎರಡ್ನೂರೈವತ್ತೊಂದು.....

ಸಾಕ್ಷಿ ಇಲ್ಲದ ಸಾಲುಗಳು..... 


ಅಂಗಳದಂಚಿನ ತೋಟ, 
ಕತ್ತಲ ಕುಡಿದು ಗಾಳಿಗೆ ಮೈಯ್ಯೊಡ್ಡಿ ತೂರಾಡೋ ಮರ ಗಿಡಗಳು, 
ಆ ಹಸಿರ ಬೆತ್ತಲಾಗಿಸೋಕೆ ಹೆಣಗೋ ತುಂಡು ಚಂದಿರ... 
ಅವಳ ಸಂಗಾತಿ ಮಚ್ಚೆಗಳಂತೆ ಹಿತವಾಗಿ ಅರಳುತ್ತಿದ್ದ ಆ ಹಸಿ ಹಸಿ ರಾತ್ರಿಗಳು... 
ಅವೆಲ್ಲ ಅಲ್ಲೇ ಉಳಿದು ಹೋದವು ಹಿಂದೆ ಹಿಂದೆ... 
ಇರಲಿ ಬಿಡಿ, ಹಿಂದುಳಿದರೆ ಉಳಿಯಲಿ, ಆದ್ರೆ ಈ ನೆನಹುಗಳಿಗೇನಾಯ್ತು...!! 
ಇಂದೀಗ ಆ ನೆನಪುಗಳೂ ಬೆರಗು ಹುಟ್ಟಿಸುತ್ತಿಲ್ಲ ಅನ್ನೋದು ಯಾವುದರ ಸಂಕೇತ...? 
ಬದುಕು ಅಷ್ಟೆಲ್ಲಾ ಸುಸ್ತೆದ್ದು ಹೋಗಿದೆಯಾ...? 
ಅಥವಾ ಎದೆಬಡಿತವೂ ಯಂತ್ರವಾಗಿಹೋಯಿತಾ...?
ರಸಿಕತೆಯ ರಕ್ತ ಕುಡಿದ ರಕ್ತ ಬೀಜಾಸುರನ ಗೂಡ ಕೆಡವುವುದೆಂತು...?? 
ಹಾದಿ ಮುಗಿಯುತ್ತಿಲ್ಲ - ಕಾಲಿಗೆ ಬಲವಿಲ್ಲ....
#ನೆನಹು... 
↜↝↢↣↜↝

ಆ ದಿನಗಳಲಿ -
ಅಡಿಕೆ ಸಿಂಗಾರದ ನವಿರು ಘಮದಂತ ಹಗಲ ಹುಚ್ಚು ಕನಸುಗಳೆಲ್ಲ ಇರುಳ ಚಂದಿರನ ಸನ್ನಿಧಿಯಲ್ಲಿ ತುಂಟ ನಗುವಾಗಿ ಅರಳುತ್ತಿದ್ದವು... 
ಅದೇ ಹೊತ್ತಿಗೆ ಚಂದಮ ಅವಳಿಗೂ ಇಷ್ಟವಾಗಿ ಹೊಟ್ಟೆ ಉರಿಸುತಿದ್ದ...
ಅವಳ ಕುಪ್ಪಸದಾಚೀಚಿನ ಖಾಲಿ ಬೆನ್ನ ಬಯಲಲ್ಲಿ ಅಳಿಗುಳಿಯಾಡುವ ನನ್ನ ಕಣ್ಣ ಚಮೆಯ ತುಂಟಾಟಕೆ ಅರಳೋ ಅವಳುಸಿರ ಉಬ್ಬರಕೆ ಹುಟ್ಟಿದ ಕೊರಳ ಶಂಖದ ಮೇಲಣ ಸ್ವೇದ ಬಿಂದುವಿನಲ್ಲಿ ತಾರೆಗಳು ಮೀಯುವ ಕನಸೊಂದು ಮತ್ತೆ ಮತ್ತೆ ಇರುಳಲಾಡುತಿತ್ತು... 
ನೀಲಿ ನೀಲಿ ಭಾನು - ಪಹರೆಗೆ ನಿಂತ ತುಂಡು ಚಂದಿರ - ಅವಳ ನೆನಪಲ್ಲಿ ನೀಲಿ ಕಣ್ಣ ತುಂಬಾ ಕೋಟಿ ನಕ್ಷತ್ರ - ಫಸಲು ಕಾಯಲು ಮಾಳದಲ್ಲಿ ಮಲಗಿದ ಪೋರನ ತೋಳಲ್ಲಿ ಅವಳು ಕನಸಾಗಿ ಬೆವರುತ್ತಿದ್ದರೆ ಫಲವಂತ ಪ್ರಕೃತಿ ತುಟಿಯಂಚಲಿ ಇಬ್ಬನಿಯ ಮಂದಹಾಸ...
ಇಂದಲ್ಲಿ -
ನೆಲಕೆಸೆದ ಬೀಜ ಮರವಾಗಿ ಗೊನೆತುಂಬಿ ತೊನೆಯುತಿದೆ - ಅದೇ ಚಂದಮ, ಅದೇ ತಾರೆ - ಪ್ರಕೃತಿ ಚಲನೆಯಲ್ಲಿ ಮೋಸವಿಲ್ಲ - ವ್ಯತ್ಯಾಸ ಇಷ್ಟೇ ಅಂಗಳದ ಮೂಲೆಯ ಪಾರಿಜಾತದ ಬುಡದಲ್ಲಿ ಕನಸು ಕಟ್ಟೋ ನಾನೆಂಬೋ ಹುಡುಗನಿಲ್ಲ...
#ನೆನಪು...
↜↝↢↣↜↝

ಪ್ರೇಮಕ್ಕೆ ಇನ್ನಿಲ್ಲದ ಪಾವಿತ್ರ್ಯವನ್ನು ಆರೋಪಿಸಿ, ಪರಮ  ಶ್ರೇಷ್ಠತೆಯ ವ್ಯಸನದ ಬಣ್ಣ ಬಳಿದವರು ಹುಟ್ಟಿದ್ದೂ ಕಾಮಕ್ಕೇನೇ...
#ವಿನೋದ...
↜↝↢↣↜↝

ಭಾವದ ತೊಗಲು ಸುಲಿದರೆ ರಕ್ತ ಒಸರುವುದಿಲ್ಲ ಮತ್ತು ಗಾಯ ಮಾಯುವುದೂ ಇಲ್ಲ...
#ನನ್ನ_ಹೆಣ_ನನ್ನ_ಹೆಗಲು...
↜↝↢↣↜↝

ಒಂದೂರಲ್ಲಿ ಒಬ್ಬ ಬಡ ರಾಜಕುಮಾರ ಇದ್ನಂತೆ - ಥೇಟು, ಹೂಬೇ ಹೂಬು ನನ್ನಂತೆ... 
ಅವ ಹುಟ್ಟುವ ಮುಂಚೆಯೇ ಸತ್ತೋದದ್ದು ಈಗ ಊರ ನಾಲಿಗೆಯಲ್ಲಿ ಬಲು ರಂಜನೀಯ ಅಂತೆ ಕಂತೆ...
#ಕಥೆ...
↜↝↢↣↜↝

ಕಣ್ಣು ತುಳುಕಿದರೆ ಎದೆ ಹಗುರಾಗುವುದಂತೆ - ಬಿಕ್ಕಿ ಬಿಕ್ಕಿ ನಗುತ್ತಿದ್ದೇನೆ...
#ಕನ್ನಡಿಗೆ_ಹೇಳಿದ_ಸುಳ್ಳು...
↜↝↢↣↜↝

ಕಣ್ಣ ಗುಡ್ಡೆಯೊಳಗಿನ ಕತ್ತಲಂತವಳೇ -
ಕನಸಿಗೂ, ಮನಸಿಗೂ ದಕ್ಕದ ಬಣ್ಣ ಮೈಗಾದರೂ ದಕ್ಕಲಿ - ನೆತ್ತಿ ಮೇಲಿಂದ ಸುರಿದುಬಿಡು ಕೈಯ್ಯಾರೆ ತುಸು ಓಕುಳಿ...
#ಹೋಳಿ...


*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)