Monday, November 26, 2012

ಗೊಂಚಲು - ಐವತ್ತು ಮತ್ತೆರಡು.....

ದ್ವೀಪ.....

ಆಗಿರುವೆ -
ಸುತ್ತ ಮೊರೆವ ಸಾಗರದ ನಡುವೆ ನಾನೊಂದು ಏಕಾಂಗಿ ಕಲ್ಲು ದ್ವೀಪ...
ಯಾಕಿಲ್ಲಿ ಇನ್ನೂ ಇದ್ದೇನೆ..
ಒಡೆದು ಚೂರಾಗಿ ಹೋಗದೇ...

ಆಸೆಯಾಗುತ್ತೆ ನಂಗೂ ಭಾವಬಂಧಗಳ ಒಳಗೊಂಡು ಹಿಗ್ಗಬೇಕೆಂದು...
ಆದರೇನ ಮಾಡಲಿ 
ಒಡಲ ಗೀತೆ ಹಾಡಲರಿಯದ ಮೂಕ ನಾನು...

ಎಲ್ಲೋ ಕಣ್ಣು ಹಾಯದ ದೂರದಲ್ಲಿ ನಾವೆಯೊಂದು ತೇಲಿದರೆ
ಅದು ನನ್ನನೇ ಅರಸಿ ಬಂತೆಂದು ಭ್ರಮಿಸಿ,
ನಾನಿಲ್ಲಿ ಹೊಸ ಕನಸಿಗೆ ಕಣ್ಣರಳಿಸುತ್ತೇನೆ...
ಬಳಿ ಬಂತೆಂದುಕೊಂಡ ನಾವೆ ಮಾರು ದೂರದಿಂದಲೇ ತಿರುಗಿಯೂ ನೋಡದೆ ನನ್ನಿಂದ ಮುಂದೆ ಸರಿದು ಹೋಗುತ್ತೆ...
ಆಗೆಲ್ಲ ಮನ ಬಿಕ್ಕಳಿಸುತ್ತೆ...
ಸಾಗರನ ಮೊರೆತದಬ್ಬರಕೆ ಬಿಕ್ಕಳಿಸಿದ ಸದ್ದು ನನಗೂ ಕೇಳಿಸದಂತಾಗಿ,
ನಾನತ್ತದ್ದು ನನಗೇ ಸುಳ್ಳೆನಿಸಿ ಮತ್ತಷ್ಟು ಕಂಗೆಡುತ್ತೇನೆ...
ಅಪಾರ ಜಲರಾಶಿಯಲ್ಲಿ ಲೀನವಾದ ಕಣ್ಣ ಹನಿಗೇನೂ ವಿಶೇಷ ಅಸ್ತಿತ್ವವಿಲ್ಲ...
ನನ್ನ ಕಣ್ಣ ಹನಿಯಿಂದೇನೂ ಸಾಗರದ ಪಾತ್ರ ವ್ಯತ್ಯಾಸವಾಗಲ್ಲ...
ಮನಸೂ ಬಂಡೆಯಾಗಿರುವ ಮಾತ್ರಕ್ಕೆ  ಇನ್ನೂ ನಿಂತಿದ್ದೇನೆ ಅಚಲವಾಗಿ...
ಹೊಸ ಕನಸಿನ ನೌಕೆ ಬಳಿ ಸುಳಿಯದಿದ್ದರೂ - ಒಂದಲ್ಲ ಒಂದು ದಿನ ನಾನಿರುವಲ್ಲಿ ನನಗಾಗಿಯೇ ಬಂದೇ ಬರುವುದು ಕಾಲನ ನಾವೆ...
ಅಲ್ಲಿಯವರೆಗೆ ಮೊರೆತಕ್ಕೆ ಮೈಯೊಡ್ಡಿ ಅದೇ ಸುಖವೆಂದುಕೊಂಡು ಕಾಯುತ್ತಲೇ ಇರುತ್ತೇನೆ - 
ಒಂಚೂರು ಒಲವಿಗೆ, ಸಣ್ಣ ಗೆಲುವಿಗೆ, ಮಗುವ ನಗುವಿಗೆ, ನಾನೂ ಜೀವಂತ ಅಂತ ನನಗೂ ಅನ್ನಿಸುವಂತೆ ಒಂದು ಕ್ಷಣವಾದರೂ ಜೀವಿಸುವ ಕನಸಿಗೆ...

Tuesday, November 20, 2012

ಗೊಂಚಲು - ಐವತ್ತೊಂದು.....


ಬದುಕ ಖುಷಿಯ ಒಳಸೆಲೆಯ ಚಿಲುಮೆಗಳು.....

ಅಕ್ಷರ ಪ್ರೀತಿ...
                      ಭಾವ ಧಾರೆಯ ಹಾಡು...
                                                         ಸ್ನೇಹ ಗಂಗೆಯ ಹರಿವು.....


ಅಲೌಕಿಕ ಆನಂದ ಅಂತ ಒಂದಿದ್ದರೆ 
ಅದು 
ನಮ್ಮಿಷ್ಟದ ವಿಷಯದ ಹೊತ್ತಿಗೆಯೊಂದನ್ನ ಒಂದೇ ಗುಕ್ಕಿನಲ್ಲಿ ಓದುವುದರಲ್ಲಿ...
ತಾದಾತ್ಮ್ಯದಿಂದ ಚಂದನೆಯದೊಂದು ಹಾಡು ಕೇಳುವುದರಲ್ಲಿ...
ಆತ್ಮೀಯ ಗೆಳೆಯರೊಂದಿಗಿನ ಮೌನದಲ್ಲಿ  ಮಾತ್ರ ಇದೆಯೇನೋ.
ನನ್ನ ಮಟ್ಟಿಗಂತೂ ಅದು ಸತ್ಯ.
ನನ್ನಲ್ಲೂ ಒಬ್ಬ ಭಾವುಕನನ್ನು ನಾನು ಕಾಣೋದು ಈ ಸಂದರ್ಭಗಳಲ್ಲಿ ಮಾತ್ರ.
ಹಗಲ ಏಕಾಂತದಲ್ಲಿ ಒಂದು ಪುಸ್ತಕ...
ರಾತ್ರಿಯ ಕತ್ತಲ ನೀರವತೆಯಲ್ಲಿ ಒಂದಿಷ್ಟು ಭಾವಗೀತೆ...
ಆಗಾಗ ಹೃನ್ಮಿತ್ರರೊಂದಿಗೆ ಧುಮ್ಮಿಕ್ಕುವ ಮಾತು...
ದಿನಗಳೆಲ್ಲ ಕ್ಷಣಗಳಲ್ಲಿ ಕಳೆದು ಹೋದಾವು.

ಅಕ್ಷರ :


ಪುಸ್ತಕ - ಅದು ನಮ್ಮಿಂದ ಯಾವುದೇ ರೀತಿಯ ನಿರೀಕ್ಷೆಗಳನ್ನೂ ಇಟ್ಟುಕೊಳ್ಳದೇ ಖುಷಿಯನ್ನು ಪಡೆದಷ್ಟೂ ಮೊಗೆಮೊಗೆದು ಕೊಡುವ, ನಮ್ಮಲ್ಲಿ ಜ್ಞಾನದಸೆಲೆ ಉಕ್ಕುವಂತೆ ಮಾಡುವ ಏಕೈಕ ಮಿತ್ರ.

ಓದಿನ ಬಳುವಳಿಯಾದ ಅರಿವಿನಿಂದ ನಮ್ಮ ಜೀವನಾನುಭವವನ್ನು ವಿಮರ್ಶಿಸಿಕೊಳ್ಳುವಂತಾದಾಗ ಸಹಜವಾಗಿ ನಮ್ಮೊಳಗೊಂದು ಪ್ರಭುದ್ಧತೆ ಮೇಳೈಸಿ ಬದುಕು ಇನ್ನಷ್ಟು ಆನಂದದಿಂದ ಕೂಡಿ ಚೆಂದವೆನಿಸುತ್ತದೆ.

ಓದು ತೀರ ನಮ್ಮ ಬದುಕಿನ ದಿಕ್ಕನ್ನೇ ಬದಲಿಸುತ್ತೋ ಇಲ್ಲವೋ ಗೊತ್ತಿಲ್ಲವಾಗಲೀ,
ಆದರೂ
ಮನಸಿನಾಳದಲ್ಲಿ ಎಲ್ಲೋ ಏನೋ ಕದಲಿದಂತಾಗಿ ಸ್ವಲ್ಪೇ ಸ್ವಲ್ಪಾದರೂ ನಮ್ಮನ್ನೇ ನಾವು ವಿಮರ್ಶಿಸಿಕೊಳ್ಳುವಂತೆ ಮಾಡುವುದಂತೂ ಸತ್ಯ.
ನಿಧಾನವಾಗಿಯಾದರೂ ಸರಿ ಆತ್ಮ ವಿಮರ್ಶೆ ನಮ್ಮನ್ನು ಬೌದ್ಧಿಕವಾಗಿ, ಮಾನಸಿಕವಾಗಿ ಚಿಂತನಶೀಲವಾಗಿ ಬೆಳೆಯುವಂತೆ ಮಾಡುತ್ತದೆ.
ನಿಧಾನವೇ ಆದರೂ ಬೆಳವಣಿಗೆ ಬೆಳವಣಿಗೆಯೇ ತಾನೆ...
ಕಲ್ಲು ಬೆಳೆಯುವುದು ನಿಧಾನ ಅಂತ ಅದು ವಿಕಾಸವಾಗುತ್ತಲೇ ಇಲ್ಲ ಎನ್ನಲಾಗದಲ್ಲ.
ನಿಧಾನಗತಿಯ ಪರಿವರ್ತನೆಯನ್ನು ಗುರುತಿಸುವುದು ಕಷ್ಟವಾಗಬಹುದು...
ಹಾಗಂತ ಆಗುತ್ತಿರುವ ವಿಕಾಸವನ್ನು ಅಲ್ಲಗಳೆಯಲಾಗದಲ್ಲ.
ಯಾರೋ ಬರೆದ ಯಾವುದೋ ಒಂದು ಸಾಲು 
ಓದಿನಿಂದ ನಮ್ಮದೇ ಆಗಿ ನಮ್ಮಲ್ಲಿ ವಿಕಸಿತವಾಗುವುದು ಅಕ್ಷರದ ಸಾಮರ್ಥ್ಯ...

ಪುಸ್ತಕದ ಮಾತು ಬಂದಾಗ ವಾಲ್ಮೀಕಿಯ - ಪ್ರಥಮ ಪ್ರಿಯ ಸಮಾಗಮದಲ್ಲಿ ಹೆಣ್ಣು ನಾಚಿಕೆ, ಸಂಕೋಚಗಳಿಂದ, ಪ್ರಿಯಕರನ ಪ್ರೋತ್ಸಾಹದಿಂದ ಇಷ್ಟಿಷ್ಟೇ ಬೆತ್ತಲಾಗುತ್ತ ಹೋಗುತ್ತಾಳೆಂಬರ್ಥದ ಮಾತು ನೆನಪಾಗುತ್ತೆ.
ಕಾರಣ -
ಇಷ್ಟಪಟ್ಟು ತಂದಿಟ್ಟುಕೊಂಡ ಪುಸ್ತಕಗಳನ್ನು ಮತ್ತೆ ಮತ್ತೆ ಓದಿದಾಗ ಆಗುವ ಅನುಭೂತಿ.
ಈ ಪುಸ್ತಕಗಳೂ ವಾಲ್ಮೀಕಿಯ ಹೆಣ್ಣಿನಂತೆಯೇ ಅಂತನ್ನಿಸುತ್ತೆ.
ಪ್ರತೀ ಬಾರಿ ಓದಿದಾಗಲೂ ಬೇರೆ ಬೇರೆ ರೀತಿಯಲ್ಲಿ ಇಷ್ಟಿಷ್ಟಾಗಿ ಅರ್ಥವಾಗ್ತಾ ಹೋಗುತ್ತವೆ.
ಓದಿದ ಒಂದೇ ಸಾಲು ಅದು ಬದುಕಿನ ಬೇರೆ ಬೇರೆ ಮಜಲುಗಳಲ್ಲಿ ಹೊಸ ಹೊಸ ಅರ್ಥ ಮತ್ತು ಭಾವಗಳನ್ನು ಮೂಡಿಸಿ ಬೆರಗುಗೊಳಿಸುತ್ತೆ.
ನಮ್ಮ ಅನುಭವಗಳ ನೆಲೆಯಲ್ಲಿ ಓದಿನ ಹೊಳಹು ಬದಲಾಗುತ್ತ ಸಾಗುತ್ತದೆ.
ಹೊಸದಾದ ಮನೋ ಮಂಥನಕ್ಕೆ ಎಡೆಮಾಡಿ ಬದುಕನ್ನು ಇನ್ನಷ್ಟು ಪಕ್ವವಾಗಿಸುತ್ತದೆ.
ಒಮ್ಮೆ ಗೆಳತಿಯಾಗಿ, ಇನ್ನೊಮ್ಮೆ ಪ್ರಿಯತಮೆಯಾಗಿ, ಮತ್ತೊಮ್ಮೆ ಬರೀ ಹೆಣ್ಣಾಗಿ, ಹಲವೊಮ್ಮೆ ತಾಯಂತೆ ಸಲಹುವ ಅದೇ ಹೆಂಡತಿಯಂತೆ...

ಹಾಡು :


ಖುಷಿಯ ಘಳಿಗೆಯಲಿ ಖುಷಿಯ ಇಮ್ಮಡಿಸಿ, ಯಾವುದೋ ನೋವಿಗೆ ಏನೋ ಸಾಂತ್ವನವಾಗಿ ಮನವ ಮೃದುವಾಗಿಸುವ ಮನದ ಗೆಳೆಯ ಹಾಡು.
ಯಾರದೋ ಗೀತೆ ಇನ್ನಾರದೋ ಕಂಠದಲಿ ಹಾಡಾಗಿ ನಲಿದು - ಕೇಳುಗನ ಕಿವಿಯ ಸೇರಿ - ಮನವನಾಲಂಗಿಸಿ ಲಾಲೈಸುವ ಆ ಪರಿ ಎಂಥ ಸೊಗಸು.

ತಲೆಯದೂಗಿಸುವ ಹಾಡು, ಸದಾ ಗುಣುಗುಣಿಸುವ ಹಾಡು, ತಕಥೈ ಕುಣಿಸುವ ಹಾಡು, ಕಣ್ಣ ಹನಿಗಳ ಹಾಡು, ನಗೆಯ ಚಿಮ್ಮುವ ಹಾಡು ಎಷ್ಟೆಲ್ಲ ವೈವಿಧ್ಯದ ಹಾಡುಗಳು...

ಯಾವ ಹಾಡಾದರೇನು - 
ಹಾಡೆಂದರೆ ಖುಷಿ, ಹಾಡೆಂದರೆ ಮಮತೆ, ಹಾಡೆಂದರೆ ಪ್ರೀತಿ, ಹಾಡೆಂದರೆ ವಿರಹ, ಹಾಡೆಂದರೆ ಏನೇನೋ ಭಾವ ಸಮ್ಮಿಲನ...

ಪುಸ್ತಕ ಮತ್ತು ಹಾಡು ಇವೆರಡಕ್ಕೆ ಕೊರತೆ ಆಗದಿದ್ರೆ ಒಂದಿಡೀ ಬದುಕನ್ನು ಒಂಟಿಯಾಗಿ ಕಳೆದುಬಿಡಬಹುದೇನೋ...
ಜೊತೆಗೆ ಸಮಾನ ಅಭಿರುಚಿಯ ಸ್ನೇಹಿತರೂ ಸೇರಿಕೊಂಡರೆ ಬದುಕೊಂದು ನಳನಳಿಸುವ ಹೂವಿನ ತೋಟವೇ ಸರಿ...

ಸ್ನೇಹ :


ಎರಡು ಜೀವಗಳ ನಡುವೆ ಹಬ್ಬಿ ನಗುವ ಆತ್ಮೀಯ ಭಾವ ಸಂಬಂಧ ಸ್ನೇಹವೆಂದರೆ.

ಗೆಳೆತನವೊಂದು ಹಬ್ಬಿ ನಿಲ್ಲುತ್ತದೆ -
ಅಂಗಳದ ಕಂಬಕ್ಕೆ ಮಲ್ಲಿಗೆಯ ಬಳ್ಳಿಯೊಂದು ತಬ್ಬಿ ಹಬ್ಬಿ ನಿಂತಂತೆ ಸೊಗಸಾಗಿ...
ಸಮಾನ ಅಭಿರುಚಿಗಳ ನೀರು ಗೊಬ್ಬರ ಸಿಕ್ಕರೆ.

ಒಂದು ಚಂದನೆಯ ಸ್ನೇಹವನ್ನು ಬದುಕಿನ ಯಾವುದೇ ಕ್ಷಣದಲ್ಲಾದರೂ ಮರೆಯೋಕೆ ಸಾಧ್ಯವಾ..??

ಇಂದು ಜೀವದ ಸ್ನೇಹಿತರಾದ ಇಬ್ಬರು ಮುಂದೆಂದೋ ಬದುಕಿನ ಅನಿರೀಕ್ಷಿತ ತಿರುವುಗಳಲ್ಲಿ ಕವಲೊಡೆದ ದಾರಿಯಲ್ಲಿ ನಡೆಯಬೇಕಾದೀತು.
ಅರಿವೇ ಇಲ್ಲದೆ ಮತ್ತೆಂದೂ ಮುಖಾಮುಖಿಯಾಗದೇ ಹೋಗುವಷ್ಟು ದೂರಾಗಬಹುದು. 
ಕೊನೆಗೆ ಪರಿಸ್ಥಿತಿಯ ಒತ್ತಡದಲ್ಲಿ ಶತ್ರುಗಳೂ ಆಗಿಬಿಡಬಹುದೇನೋ.
ಆದರೂ ಆ ಶತ್ರುತ್ವದ ಆಳದಲ್ಲೂ ಮನದ ಮೂಲೆಯಲ್ಲಿ ಗೆಳೆತನದ ನರುಗಂಪು ಸುಳಿದಿರುಗದಿದ್ದೀತಾ...
ಮಿತ್ರರಾಗಿದ್ದಾಗ ಜೊತೆಯಾಗಿ ಕಳೆದ ಘಳಿಗೆಗಳ ಮರೆಯಲಾದೀತಾ..??
ಅದು ಸ್ನೇಹದ ತಾಕತ್ತು ಮತ್ತು ಶ್ರೇಷ್ಠತೆ.

ಮುಂಜಾನೆ ಮಂಜಲ್ಲದ್ದಿದ ಸೂರ್ಯಕಿರಣವನ್ನು ನೋಡುವಾಗ ಫಕ್ಕನೆ ನೆನಪಾಗಿಬಿಡುವ ಪ್ರೀತಿಯ ಗೆಳೆಯನ ಯಾವುದೋ ಖುಷಿಯ ಮಾತು ಆ ದಿನವೆಲ್ಲ ನಮ್ಮನ್ನ ಶಾಂತಿಯಿಂದ, ಸಂತೃಪ್ತಿಯಿಂದ ಕಳೆಯುವಂತೆ ಮಾಡಲಾರದೇ...
ನಮ್ಮನ್ನು ಇನ್ನಷ್ಟು ಉತ್ಸಾಹಿತರನ್ನಾಗಿಸದೇ...
ಸೋತ ಜೀವಕ್ಕೆ ಚೈತನ್ಯಧಾರೆಯೆರೆಯಲಾರದೇ...
ನಮ್ಮನ್ನು ಹೊಸ ಗೆಲುವಿನೆಡೆಗೆ ತುಡಿವಂತೆ, ಹೊಸ ಎತ್ತರಕ್ಕೆ ಏರುವಂತೆ ಪ್ರೇರೇಪಿಸಲಾರದೇ...
ಅಂಥದೊಂದು ಸ್ನೇಹಭಾವವನ್ನು, ಆ ಭಾವವನ್ನು ಕೊಡಮಾಡಿದ ಆತ್ಮಬಂಧುವಿನಂತ ಸ್ನೇಹಿತನನ್ನು ಎಂದಿಗಾದರೂ ಮರೆಯುವುದು ಸಾಧ್ಯವಾ..??
ಮರೆತವನು ಮನುಜನೆನಿಸಿಕೊಂಡಾನಾ..??

"ಶುಭ ಹಾರೈಕೆಗಳೊಂದಿಗೆ ವಿದಾಯವನ್ನು ಕೋರುತಿರುವ ಸ್ನೇಹಿತನ ಕಣ್ಣುಗಳೊಳಕ್ಕೆ ಇಣುಕು. ಅಲ್ಲಿ ಮನದಾಳದಲ್ಲಿ ಮೂಡಿದ ವಿದಾಯದ ವೇದನೆ ಹೆಪ್ಪುಗಟ್ಟಿರುತ್ತದೆ. ಭಾವಾವೇಷ ಕಣ್ಣ ಹನಿಯಾಗಿ ಹೊರಜಾರಲು ಸಿದ್ಧವಾಗಿ ಕಂಗಳನ್ನು ಮಂಜಾಗಿಸಿರುತ್ತದೆ."

"ತುಂಬು ಜೀವನ್ಮುಖೀ ವ್ಯಕ್ತಿಯಲ್ಲಿ ಕೂಡ ಸ್ನೇಹಿತನ ಅಗಲುವಿಕೆ ಮನದ ತುಂಬ ಒಂದು ಶೂನ್ಯಭಾವವನ್ನು ಸೃಷ್ಟಸಿರುತ್ತದೆ. ಆ ಅಗಲುವಿಕೆ ತಾತ್ಕಾಲಿಕದ್ದಾದರೂ ಕೂಡ. ಅದು ಪಕ್ವಗೊಂಡ ಸ್ನೇಹದ, ಮನಸು ಮಾತ್ರ ಅರ್ಥೈಸಿಕೊಳ್ಳಬಲ್ಲ, ವಿವರಿಸಲಾಗದ ಅನುಭಾವದ ಭಾವ ಶೂನ್ಯತೆ."
ಅಂಥ ಒಲವಧಾರೆಯ ಗೆಳೆತನದ ಕಲ್ಪನೆಯೇ ಎಷ್ಟು ಚಂದ.

ಅಹಂನ್ನು ಮರೆತು ಬೆರೆಯಬಲ್ಲೆವಾದರೆ, ಪ್ರಜ್ಞಾವಂತಿಕೆಯನ್ನು ಹೀರಿ ಬೆಳೆಯಬಲ್ಲೆವಾದರೆ, ಚಂದವಾಗಿ ಗೆಳೆತನವೊಂದನ್ನು ನಿಭಾಯಿಸಬಲ್ಲ ತಿಳುವಳಿಕೆ ನಮಗಿದ್ದರೆ ಖಂಡಿತಾ ಗೆಳೆತನವೊಂದು ನಮ್ಮ ಬದುಕ ಬೆಳಗಿಸಬಲ್ಲದು.

ಓದು ನಮ್ಮನ್ನು ಇನ್ನಷ್ಟು ಬೆಳೆಸಲಿ...
ಅಕ್ಷರ ಪ್ರೀತಿ ಹೊಸ ಬಾಂಧವ್ಯಗಳ ಬೆಸೆಯಲಿ...
ಮನದ ಮಡಿಲಲ್ಲಿ ಹೊಸ ಹಾಡು ಹುಟ್ಟಲಿ...
ಬದುಕ ತೋಟ ಹೂವಂತ ಗೆಳೆಯರಿಂದ ನಳನಳಿಸಲಿ...

ಈ ಬರಹ "ಕಹಳೆ ಆವೃತ್ತಿ - 2"ರಲ್ಲಿ 20-11-2012ರಂದು ಪ್ರಕಟವಾಗಿದೆ.
http://www.kahale.gen.in/2012/11/blog-post_20.html#comment-form

ಚಿತ್ರ ಕೃಪೆ : ಅಂತರ್ಜಾಲ.

Wednesday, November 7, 2012

ಚಿನ್ನದ ಗೊಂಚಲಿದು.....

ಕಾಲನ ಕುಣಿಕೆ.....

ಹೋಗುವವರೆಲ್ಲ
ಹೋಗುತ್ತಲೇ ಇರುತ್ತಾರೆ
ಕಳೆದುಕೊಂಬ ಇಚ್ಛೆ ಇರದಿದ್ದರೂ
ಉಳಿಸಿಕೊಂಬ ಸಾಮರ್ಥ್ಯ ನಮಗಿಲ್ಲ...



ಕಾಲನ ಕೈಯ ಕುಣಿಕೆಗೆ
ದಯೆಯ ಹಂಗಿಲ್ಲ
ಧರ್ಮದ ದರ್ದಿಲ್ಲ
ಯಾವ ಜಪ 
ಯಾವ ಜನಿವಾರವೂ
ಅವನ ಗೆದ್ದದ್ದಿಲ್ಲ...


ಎಂಥ ಕುಲ
ಯಾವ ಗೋತ್ರ
ಗಂಜಿಯೂ ಸಿಗದ ಬಡವ
ಸುಪ್ಪತ್ತಿಗೆ ಬಿಟ್ಟಿಳಿಯದ ಬಲ್ಲಿದ
ಅವನ ರಾಜ್ಯದಲ್ಲಿ 
ಎಲ್ಲರೂ ಸಮಾನ...
ಎಲ್ಲರಿಗೂ ಒಂದೇ
ನ್ಯಾಯದಾನ...


ಕಣ್ತೆರೆಯುತಿರುವ ಶಿಶು
ಕಣ್ಣು ಮಂಜಾದ ವೃದ್ಧ
ಯಾವುದು ಅಕಾಲ
ಯಾರದು ಸಕಾಲ
ಕಾಲನಿಗೆ ವಯಸೊಂದು
ಲೆಕ್ಕವೇ ಅಲ್ಲ...
ಅವನ ತೂಗುಗತ್ತಿ 
ನಮ್ಮ ತಲೆಮೇಲೆ
ಸದಾಕಾಲ... 

ನಮ್ಮ ಮುಂಚಿನವರು ಹೋದರು
ಹಿಂಚಿನವರೂ ಹೋದಾರು
ನಮ್ಮ ಸರದಿಗೆ ಕಾಯುತ್ತಾ
ನಾವು ಸಾಲಾಗಿ ನಿಂತಿದ್ದೇವಷ್ಟೇ...
ಅವನ ಬತ್ತಳಿಕೆ ಖಾಲಿಯಾದದ್ದಿಲ್ಲ
ಅಂಬಿಗೆ ಗುರಿ ಯಾರೆಂಬುದೂ
ತಗಲುವವರೆಗೆ 
ಅನಿಶ್ಚಿತ...


ಎಲ್ಲ ಹೋಗುವುದು ನಿಶ್ಚಿತ
ಹೋದವರ ನೆನಪೊಂದೇ ಶಾಶ್ವತ...
ನೆನಪು ಸಿಹಿಯಾ.? 
ಇಲ್ಲ ಕಹಿಯಾ.??
ಅದು
ಬದುಕಿದ್ದರ ಮೇಲೆ ಅವಲಂಬಿತ...

ಹೋಗುವ ಮುನ್ನ
ಸುತ್ತಲಿನ ನಾಕು ಮನಗಳಲಿ
ಸಿಹಿ ಭಾವಗಳ ಬಿತ್ತಿ ಹೋಗೋಣ...
ಅಳಿದ ಮೇಲೂ
ಉದುರೀತು ಎರಡು ಹನಿ
ಉಳಿದವರ ಕಣ್ಣಂಚಲ್ಲಿ...
ಸಾರ್ಥಕ್ಯ ಅಷ್ಟೇ
ಇಲ್ಲಿ ಬಂದಿದ್ದಕ್ಕೆ...
ಇಷ್ಟು ಕಾಲ ಬದುಕಿದ್ದಕ್ಕೆ...

ಚಿತ್ರ ಕೃಪೆ : ಅಂತರ್ಜಾಲ...

Thursday, November 1, 2012

ಗೊಂಚಲು - ನಲವತ್ತು ಮತ್ತೆ ಒಂಭತ್ತು.....

ಅರ್ಥವಾಗದ
ಸಂಬಂಧಗಳ ಒಳಸುಳಿ...

ಮನುಷ್ಯ ಮನುಷ್ಯನ ನಡುವಿನ ಸಂಬಂಧದ ಆಳ ವಿಸ್ತಾರಗಳ ಬಗ್ಗೆ, ವಿಚಿತ್ರ ವಾಸ್ತವತೆಯ ಬಗ್ಗೆ, ಆಶ್ಚರ್ಯಕರ ಹೊಂದಾಣಿಕೆಗಳ ಬಗ್ಗೆ, ಹಳಸಿದ ಸಂಬಂಧವೊಂದು ಯಾವುದೋ ಒಂದು ನೋವಿನಲ್ಲಿ ಮತ್ತೆ ಬೆಸೆದುಕೊಂಬ ಅದರ ಒಳ ತುಡಿತದ ಬಗ್ಗೆ, ಹತ್ತಿರವಿದ್ದೂ ದೂರ ನಿಲ್ಲುವ ಮಾನಸಿಕ ಅಪರಿಚಿತತೆಯ ಬಗ್ಗೆ, ಸಪ್ತ ಸಾಗರದಾಚೆಯಿದ್ದೂ ಆತ್ಮಿಕವೆನಿಸುವ ಭಾವನಾತ್ಮಕ ಬೆಸುಗೆಯ ಬಗ್ಗೆ - ಒಟ್ಟಾರೆಯಾಗಿ ಈ ಸಂಬಂಧಗಳೆಂಬ ಹೆಸರಲ್ಲಿ ಬೆಸೆದುಕೊಂಡ ಬಾಂಧವ್ಯಗಳ ವಿಷಯದಲ್ಲಿ ಎಷ್ಟು ಯೋಚಿಸಿದ್ರೂ ನಂಗಿನ್ನೂ ಒಂದು ನಿಲುವಿಗೆ ಬರೋಕಾಗಿಲ್ಲ.
ಈ ಸಂಬಂಧ ಹೀಗೇ ಅಂತ ಯಾವುದೇ ಒಂದು ಬಾಂಧವ್ಯವನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸೋಕೆ ಆಗದಿರೋದು ವ್ಯಕ್ತಿಗಳ ವ್ಯಕ್ತಿತ್ವದ ವಿವಿಧ ಮಜಲುಗಳ ವೈಶಿಷ್ಟ್ಯವೇ ಸರಿ.
ಸಮಯ ಸಂದರ್ಭಕ್ಕನುಸಾರವಾಗಿ ಈ ಸಂಬಂಧಗಳ ಒಳ ಹೊರಗುಗಳಲ್ಲಿ ಅಷ್ಟಿಷ್ಟು ಬದಲಾವಣೆಗಳಾಗುವುದೂ ಇದೆ.
ಯೋಚಿಸ್ತಾ ಹೋದ್ರೆ ಎಲ್ಲವೂ ಗೋಜಲು ಗೋಜಲು...

ಈ ಸಂಬಂಧಗಳು - ಅಂದ್ರೆ ವ್ಯಕ್ತಿ ವ್ಯಕ್ತಿಗಳ ನಡುವಿನ ನಾವು ಗುರುತಿಸೋ ಸಂಬಂಧಗಳು - ಇವೆಲ್ಲ ಕೇವಲ ಮಾನವ ನಿರ್ಮಿತ.
ಮನುಷ್ಯ ತನ್ನ ಅವಶ್ಯಕತೆಗಳಿಗೋಸ್ಕರ - ತಾನು ಈ ಭುವಿಯ ಇತರ ಪ್ರಾಣಿ ಸಂಕುಲಕ್ಕಿಂತ ಮೇಲೆಂದು ನಿರೂಪಿಸಿಕೊಳ್ಳಲೋಸುಗ ರೂಪಿಸಿಕೊಂಡಂತವು.

ತಾಯಿ ಮತ್ತು ಮಗುವಿನ ಸಂಬಂಧವೊಂದನ್ನುಳಿದು ಉಳಿದ ಯಾವುದೇ ಸಂಬಂಧಗಳಿರಬಹುದು - ಅದು ಅಣ್ಣ - ತಮ್ಮ, ಅಕ್ಕ - ತಂಗಿ, ಬಂಧು - ಬಳಗ ಯಾವುದೂ ಇರಬಹುದು, ಯಾವ ತರಹದ್ದೇ ಇರಬಹುದು ಅವೆಲ್ಲವೂ ಕೇವಲ ನಾವು ಭಾವಿಸಿಕೊಂಡಂತಹವು.
ನಮ್ಮ ಭಾವದ ತೀವ್ರತೆ ಮತ್ತು ಸ್ವಚ್ಛತೆಯನ್ನವಲಂಬಿಸಿದಂತಹವು.
ಆಳವಾಗಿ ಯೋಚಿಸಿದ್ರೆ ತಾಯಿ - ಮಗುವಿನ ಸಂಬಂಧ ಕೂಡ ಮಾನವ ಸೃಷ್ಟಿಯೇ.
ಆದರೂ ಭಾವನಾತ್ಮಕ ದೃಷ್ಟಿಯಿಂದ ನೋಡಿದ್ರೆ ತಾಯಿ ಮತ್ತು ಮಗುವಿನ ಸಂಬಂಧಕ್ಕೆ ಜಾಸ್ತಿ ಶ್ರೇಷ್ಠತೆಯಿದೆ ಹಾಗೂ ಅದು ಹೆಚ್ಚು ನೇರ ಮತ್ತು ಸ್ಪಷ್ಟ ಸಂಬಂಧ.
ಆದರೆ ಪ್ರಕೃತಿಯ ಸನ್ನಿಧಿಯಲ್ಲಿ ಎರಡೇ ಬೇಧ.
ಎರಡೇ ಸಂಬಂಧ.
ಅದು ಪ್ರಕೃತಿ ಮತ್ತು ಪುರುಷ ಸಂಬಂಧ - ಗಂಡು ಮತ್ತು ಹೆಣ್ಣು ಎಂಬ ಸಂಬಂಧ.
ಉಳಿದೆಲ್ಲ ಸಂಬಂಧಗಳೂ ಮಾನವ ಸಂಶೋಧನೆ.
ಕುಟುಂಬ ಪರಿಕಲ್ಪನೆಗೆ ಪಕ್ಕಾದ ಮಾನವ ಆ ಮೂಲಕ ಸಂಬಂಧಗಳ ಹೆಸರು ಕೊಟ್ಟು ಭಿನ್ನ ಭಿನ್ನ ಬಾಂಧವ್ಯಗಳನ್ನೂ ರೂಪಿಸಿಕೊಂಡ.
ತನ್ನ ಬುದ್ಧಿಶಕ್ತಿಯಿಂದ ತನ್ನ ಮೇಲರಿಮೆಯನ್ನು ಕಾಪಾಡಿಕೊಳ್ಳಲೋಸುಗ ತನ್ನ ಸುತ್ತ ತಾನೇ ಸಂಬಂಧಗಳ ಬೇಲಿ ಕಟ್ಟಿಕೊಂಡ.
ಹಾಗೇ ತಾನೇ ಕಟ್ಟಿಕೊಂಡ ಸಂಬಂಧದ - ಬಾಂಧವ್ಯದ - ನೈತಿಕತೆಯ ಬೇಲಿಯನ್ನು ಹಾರಲೂ ಆಗದೇ, ಒಳಗೇ ಬದುಕಲೂ ಆಗದೇ ಮುಖವಾಡಗಳನ್ನು ಧರಿಸಿ ಬದುಕಹತ್ತಿದ್ದಾನೆ.
ಇದಕ್ಕೆ ಉದಾಹರಣೆಯೆಂದರೆ : ಮಾನವ ಕುಟುಂಬ ವ್ಯವಸ್ಥೆ ರಚಿಸಿಕೊಂಡ ಲಕ್ಷಾಂತರ ವರ್ಷಗಳ ನಂತರ ಕೂಡ, ತುಂಬ ಮುಂದುವರಿದ ನಾಗರೀಕ ಸಮಾಜದಲ್ಲಿ ಬದುಕುತ್ತಿದ್ದೇವೆ ಅಂದ್ಕೋತಿರುವ ಈ ಕಾಲಘಟ್ಟದಲ್ಲೂ ಇನ್ನೂ ಉಳಿದುಕೊಂಡಿರುವ Incestಗಳು.
ಪ್ರತಿ ವ್ಯಕ್ತಿಯೂ ನೈತಿಕತೆಯ ಮುಸುಕಿನ ಒಳಗೇ ತನ್ನ ಆಸೆಗಳನ್ನು ತೀರಿಸಿಕೊಳ್ಳೋಕಾಗುತ್ತಾ ಅಂತ ಯೋಚಿಸ್ತಾನೆ.
ಮಾನಸಿಕವಾಗಿ ಸಾವಿರ ಬಾರಿ ಮೀರಿದ ಎಲ್ಲೆಯನ್ನು ದೈಹಿಕವಾಗಿ ಮೀರದೇ ಇರಲು ಒದ್ದಾಡುತ್ತಾ ತಾನು ಸಂಬಂಧಗಳ ಎಲ್ಲೆ ಮೀರಿಲ್ಲ ಅಂತ ತನ್ನನ್ನು ತಾನೇ ನಂಬಿಸಿಕೊಂಡು ಭ್ರಮೆಯ ಬದುಕು ಬದುಕ್ತಾನೆ. ಹಾಗಂತ ಮನಸಲ್ಲೇ ಮಂಡಿಗೆ ತಿನ್ನುವುದನ್ನೂ ನಿಲ್ಲಿಸಲಾರ.
ಅವನಿಗೆ ಸಂಬಂಧಗಳ ಬೇಲಿಯೂ ಬೇಕು - ಅವಕಾಶವಾದರೆ ಅದರಾಚೆಗಿನ ಸುಖಭೋಗಗಳೂ ಬೇಕು.
ತಾನು ಹತ್ತಿರದ ಸಂಬಂಧಗಳಲ್ಲಿ ತನ್ನ ಆಸೆಗಳನ್ನು ತೀರಿಸ್ಕೊಂಡಿಲ್ಲ ಅನ್ನುವುದು ಅದರಾಚೆ ತನ್ನಾಸೆಗಳನ್ನು ತೀರಿಸ್ಕೊಂಡವನ ಸಮರ್ಥನೆ ಮತ್ತು ಹಿರಿಮೆ.

ನಿಜ ಮನುಷ್ಯ ಸಂಘಜೀವಿ. 
ಸಮಾಜ ಜೀವಿ. 
ಒಂದು ಸುಂದರ ಸಮಾಜದ ಸ್ವಾಸ್ಥ್ಯಕ್ಕೆ ಕಟ್ಟುಪಾಡುಗಳ ಬೇಲಿ ಅತ್ಯಗತ್ಯ. ಎಲ್ಲ ವ್ಯಕ್ತಿಗಳನ್ನು ಕಾಮ ಸಂಬಂಧ ಮಾತ್ರ ಆಳಹತ್ತಿದರೆ ಅದು ಹೇಯ.
ಏಕೆಂದರೆ ಮನುಷ್ಯ ಉಳಿದ ಪ್ರಾಣಿಗಳಂತೆ ಸಂತಾನಾಭಿವೃದ್ಧಿಗೆ ಮಾತ್ರವಲ್ಲದೇ ಮನೋರಂಜನೆಗಾಗಿಯೂ ಕಾಮದಾಟ ನಡೆಸುವ ಪ್ರಾಣಿ.
ಹಾಗಾಗಿ ಒಂದಷ್ಟು ಸಹಜ ನಿರ್ಬಂಧಗಳು ಅಗತ್ಯವೇ.
ಆದರೆ ನೈತಿಕ ಕಟ್ಟುಪಾಡುಗಳು ಹೆಚ್ಚಿನ ಸಲ ಪ್ರಭಲರು ನಿರ್ಬಲರ ಮೇಲೆ ಹೇರುವ ಕಟ್ಟುಪಾಡುಗಳಾಗಿಯಷ್ಟೆ ಬಳಕೆಯಾಗುವುದು ಕರುಣಾಜನಕ.
ಉದಾಹರಣೆಗೆ - ತುಂಬ ನಾಗರೀಕ ಎನ್ನಿಸಿಕೊಂಡ ಈ ಕಾಲಘಟ್ಟದಲ್ಲೂ ಪತಿಯಿಂದ ವಿನಾಕಾರಣ ಪರಿತ್ಯಕ್ತರಾದ ಹೆಂಗಳೆಯರನ್ನು, ಎಳೆಯ ವಿಧವೆಯರನ್ನು ನಮ್ಮ ಸಮಾಜ ನಡೆಸಿಕೊಳ್ಳುವ ರೀತಿ, ಅವರುಗಳ ಸಣ್ಣ ಸ್ನೇಹ ಸಂಬಂಧವನ್ನೂ ಅನುಮಾನದಿಂದ ನೋಡುವ ಪರಿ, ಇಂದಿಗೂ ಬಳಕೆಯಲ್ಲಿರುವ "ನಾಯಿ ಹಸಿದಿತ್ತು - ಅನ್ನ ಹಳಸಿತ್ತು" ಎಂಬಂತ ನುಡಿಗಟ್ಟುಗಳು.
ಒಂದು ಸಮಾಜಕ್ಕೆ ಚೌಕಟ್ಟು ಎಷ್ಟು ಅಗತ್ಯವೋ - ಒಬ್ಬ ವ್ಯಕ್ತಿಗೆ ತನ್ನ ಸಹಜ ಸುಖವೂ ಅಷ್ಟೇ ಅಗತ್ಯವಲ್ಲವೇ...??

ಇಲ್ಲಿ ಇನ್ನೂ ಒಂದು ಸೂಕ್ಷ್ಮವಿದೆ -
ನಿಯಮಗಳ ಸಡಿಲಿಸುವುದಾದರೆ ಎಷ್ಟರಮಟ್ಟಿಗೆ ಸಡಿಲಿಸಬಹುದು..?
ಯಾವ ಸಂದರ್ಭದಲ್ಲಿ, ಯಾವ ಹಿನ್ನೆಲೆಯಲ್ಲಿ, ಹೇಗೆ ಮೀರಿದರೆ ಸರಿ..??
ಬೇಲಿ ಹಾರಿಯಾದರೂ ಫಸಲು ಮೇಯುತ್ತಾರೆಂದು ಬೇಲಿಯನ್ನೇ ಹಾಕದಿರುವುದು ಎಷ್ಟು ಸಮಂಜಸ..???
ಒಪ್ಪಿಗೆಯಿಲ್ಲದೆ ಗಂಡನೊಬ್ಬ ಹೆಂಡತಿಯನ್ನು ಸೇರುವುದೂ ಅತ್ಯಾಚಾರವೆನಿಸುತ್ತೆ ಅಂತಾದರೆ ನೈತಿಕತೆ ಅನೈತಿಕ ಎನ್ನಿಸಿಕೊಳ್ಳುವ ಸೂಕ್ಷ್ಮ ಬಿಂದು ಯಾವುದು..????
ಪ್ರತೀ ಸಂಬಂಧಕ್ಕೂ ಶುದ್ಧ ಮತ್ತು ಕ್ಷುದ್ರ ಮುಖಗಳೆರಡೂ ಇಲ್ಲವಾ..??
ಅಷ್ಟಕ್ಕೂ ಕಾಮ ಕ್ಷುದ್ರವಾ..??
ನೈತಿಕತೆಯ ಪರಿಧಿಯಲ್ಲೇ ಬರುವ ಮದುವೆಗಾಗಲೀ - ಪ್ರೇಮಕ್ಕಾಗಲೀ ಮೂಲ ಸೆಲೆ ಕಾಮವೇ ಅಲ್ಲವಾ...???
ಎಲ್ಲವೂ ಅಯೋಮಯ ಎನ್ನಿಸುವ ಪ್ರಶ್ನೆಗಳೇ...

ಇನ್ನು ಭಿನ್ನ ಲಿಂಗದ ವ್ಯಕ್ತಿಗಳ ನಡುವಿನ ಪ್ರೇಮ - ಕಾಮದ ವಿಷಯದಲ್ಲೂ ಅಷ್ಟೇ.
ಪ್ರೇಮ ಮಾನವನ ಭಾವನಾತ್ಮಕ ಪರಿಕಲ್ಪನೆ.
ಕಾಮ ಪ್ರಕೃತಿಯ ಮೂಲ ಗುಣ.
ಅದಕ್ಕೇ ಕಾಮದ ಹಂಗಿಲ್ಲದ ಪ್ರೇಮ ತುಂಬ ಕಾಲ ಜೀವಿಸಲಾರದೇ ನರಳೋದು. (ಕೆಲವು ಅಪವಾದಗಳೂ ಇದ್ದೀತು)
ಪ್ರೇಮ ಇದ್ದಲ್ಲಿ ಪ್ರಣಯ ಇದ್ದೇ ಇರುತ್ತೆ.
ಕೆಲವೊಮ್ಮೆ ಅದು ಮಾನಸಿಕ ಮಟ್ಟದಲ್ಲಿ ಮಾತ್ರ ಇದ್ದೀತು.
ದೈಹಿಕತೆಯ ಅವಕಾಶ ಇಲ್ಲದಾಗ.
ಇಷ್ಟಕ್ಕೂ ನಮ್ಮ ಪ್ರೇಮವನ್ನು ವ್ಯಕ್ತಪಡಿಸಲು ನಮಗಿರೋ ಅತೀ ಶಕ್ತ ಮಾಧ್ಯಮ ಅಂದ್ರೆ ದೇಹ ಒಂದೇ.
ಸ್ಪರ್ಶ, ಚುಂಬನ, ಆಲಿಂಗನಗಳು, ನಮ್ಮ ಪ್ರೇಮವನ್ನು - ಆತ್ಮೀಯ ಭಾವವನ್ನು ವ್ಯಕ್ತಪಡಿಸುವ ಮಧುರ ಮಾಧ್ಯಮವಷ್ಟೇ.
ಪ್ರಕೃತಿಗೆ ತಿಳಿದಿರೋದು ಕಾಮ ಮಾತ್ರ.
ಅದು ತನ್ನ ಅಭಿವೃದ್ಧಿಗೆ, ತನ್ನ ಸೃಷ್ಟಿಗಳ ಉಳಿವಿಗೆ ಪ್ರಕೃತಿ ರೂಪಿಸಿಕೊಂಡ ಚಂದನೆಯ ವ್ಯವಸ್ಥೆ.
ಅದಕ್ಕೆ ಮನುಷ್ಯ ಪ್ರೇಮದ ಬೇಲಿ ಹೆಣೆದ.
ಮದುವೆಯ ಬಂಧ ರಚಿಸಿದ.
ಆ ಬೇಲಿ ತುಂಬ ಶ್ರೇಷ್ಠವಾದದ್ದು ಎಂದು ತಾನೇ ಸಾರಿಕೊಂಡ.
ಕೊನೆಗೆ ಅಂಥ ಶ್ರೇಷ್ಠ ಪ್ರೇಮದ ಪರಾಕಾಷ್ಠೆಯ ಹೆಸರಿನಲ್ಲಿ ಕಾಮದಲ್ಲೇ ತೊಡಗಿಕೊಂಡ.
ತನ್ನ ಕಾಮದ ಇಚ್ಛೆಯನ್ನು ಸಭ್ಯತೆಯ ಸೋಗಿನಲ್ಲಿ ಈಡೇರಿಸಿಕೊಳ್ಳುವುದಕ್ಕೆ ಇಟ್ಟುಕೊಂಡ ಹೆಸರು ಪ್ರೇಮ ಅಂತನ್ನಿಸಲ್ಲವಾ..??
ತಾನೇ ರೂಪಿಸಿಕೊಂಡ ಬೇಲಿಯ ಮುರಿಯುವ ಬಯಕೆಯಿಂದಲೇ ಇರಬೇಕು ಪ್ರಕೃತಿ ಸಹಜವಾದ ಕಾಮವನ್ನು ಕತ್ತಲಲ್ಲಿ ಪಡೆವ ಕ್ಷುದ್ರ ಸುಖವಾಗಿ ಬಿಂಬಿಸಿದ...

ಏಕೇನೋ ಗೊತ್ತಿಲ್ಲ.
ಪ್ರೇಮ - ಕಾಮ - ಸಂಬಂಧಗಳ ವಿಚಾರದಲ್ಲಿ ಎಂದಿನಿಂದಲೂ ನನ್ನಲ್ಲಿ ದ್ವಂದ್ವವೇ ತುಂಬಿ ಕಾಡುತ್ತದೆ.
ಒಟ್ನಲ್ಲಿ ಸಂಬಂಧಗಳ ಬಗ್ಗೆ ಸಂಬಂಧವಿಲ್ಲದ ವಿಚಾರಗಳು ಸದಾ ತಲೆಯಲ್ಲಿ ಸುಳಿದಿರುಗುತ್ತಿರುತ್ತವೆ.
ನಂಗನಿಸಿದಂತೆ ನಾವು ಭಾವಿಸಿಕೊಂಡಂತೆ ನಮ್ಮ ಸಂಬಂಧ...
ಸ್ವಚ್ಛ ಮನದಲ್ಲಿ ಎಂಥ ಮಿಲನವೂ ಪವಿತ್ರವೇ...
ವಿಕಾರವಿದ್ದಲ್ಲಿ ಪ್ರೇಮವೂ 'ಕ್ಷುದ್ರ ಕಾಮದ' ಮತ್ತೊಂದು ಹೆಸರಷ್ಟೇ...
ಪ್ರೇಮದ ಹೆಸರಲ್ಲಿನ ಅತ್ಯಾಚಾರಕ್ಕಿಂತ ಶುದ್ಧ ಕಾಮದ ಅನೈತಿಕತೆಯೇ ಲೇಸೇನೋ...
ಮನಸುಗಳ ವ್ಯಭಿಚಾರಕ್ಕಿಂತ ದೇಹಗಳ ಪ್ರೇಮ ಉತ್ತಮವೇನೋ...???