Monday, May 22, 2017

ಗೊಂಚಲು - ಎರಡ್ನೂರಿಪ್ಪತ್ತೆರಡು.....

ನೋವು - ನಲಿವು - ಮಸಣವಾಸಿ - ಬದುಕು.....

ಎತ್ತರವ ಏರಲಾಗದ ಏದುಸಿರು ಎದೆಯ ಹಿಂಡುವಾಗ ಫಕಫಕನೆ ನಕ್ಕುಬಿಡ್ತೇನೆ...
ನೋವನ್ನು ನಗೆಯಾಗಿ ಧರಿಸಿ ನೋವಿನ ಅಸ್ತಿತ್ವವವನೇ ಅಲುಗಾಡಿಸಿದ ಭಾವ...
ನೋವಿಗೀಗ ನಗೆಯ ಬಣ್ಣ...
ಕತ್ತಿಗೆ ಸುತ್ಕೊಂಡ್ರೆ ಹಾವೂ ಹಾರವೇ ಅಂತೆ...
ವಿಷ ಕೊರಳಿನ ವಿಶೇಷ ಬಣ್ಣ ಆಯ್ತಲ್ಲ...
ಬದುಕು ನೀಡಿದ ಕೈತುತ್ತು ಕಹಿ ಅಂತ ಮುಖ ತಿರುವಿದರೆ ಹಸಿದು ಮಲಗಬೇಕಾಗುತ್ತೆ...
ಹಸಿವಿಗಿಂತ ಕಹಿ ಸಹನೀಯ ಅಲ್ವಾ...
ನೋವು ಬದುಕಿನ ನೆರಳಾ...?
ಬದುಕು ಸಾವಿನ ಒಕ್ಕಲಾ...??
ಎಲ್ಲಾ ತಳಕಂಬಳಕ...
ಸಾವು, ನೋವುಗಳೆಲ್ಲ ಬಾಗಿಲು ಬಡಿದು, ಕಾದು, ತೆರೆಯದೇ ಹೋದರೆ ಕಿಟಕಿಯಿಂದಲಾದ್ರೂ ಒಳ ಬಂದು ಆಥಿತ್ಯ ಸ್ವೀಕರಿಸ್ತಾವೆ...
ನಗುವಿನದೇ ಸಮಸ್ಯೆ - ಮಹಾ ಕೊಬ್ಬು; ಬಾಗಿಲು ತೆರೆದಿಟ್ಕೊಂಡು, ನಾವೇ ಕಾದು ರಾಜೋಪಚಾರ ಮಾಡಿ ಬರಮಾಡಿಕೊಳ್ಳದೇ ಹೋದರೆ ಅಂಗಳಕ್ಕೂ ಕಾಲಿಡದ ಸ್ವಾಭಿಮಾನಿ...
ಇಂತಿಪ್ಪಲ್ಲಿ ಮನಸು ಬುದ್ಧಿ ಜತೆಗೂಡಿ ಈ ಬದುಕನ್ನ ಶಿವನಾಗಿ ಗೆಲ್ಬೇಕು...
ಗಂಗೆಯ ಮುಡಿಗಟ್ಟಿ, ಅಗ್ನಿಯ ಹಣೆಗಿಟ್ಟು, ಚಂದಿರನ ಕಂದೀಲ ಬೆಳಕಲ್ಲಿ ಶವದೆದುರು ತಾಂಡವವಾಡಬಲ್ಲವ ಮಾತ್ರ ಮಸಣದಲ್ಲೂ ನಗೆ ಗೌರಿಯ ತಬ್ಬಿ ಸಂಸಾರ ಹೂಡಬಲ್ಲ...
#ಮಸಣವಾಸಿ_ಬದುಕು...
/\/*\/\_/\/*\/\

ಬದುಕೇ -
ತುಸು ಹೆಚ್ಚೇ ಹುಚ್ಚ ನಾನು,
ಜಿಗುಟು ಜಿಗುಟು ಕನಸು ನೀನು...
ಆದರೂ,
ಅನುಭಾವಿಸಿಕೊಂಡರೆ ನಿನ್ನ ಹರಿವು ತುಂಬುವ ಅನುಭವಗಳಿಗಿಂತ ಮಿಗಿಲಾದ ಗುರುವು ಬೇಕೇ...
ಪ್ರಾರ್ಥನೆ:
ನಾ ಹಾಯುವ ಹಾದಿ ತುಂಬಾ
ಉಳಿಯಲಿನಿತಿನಿತು ಹುಚ್ಚು ನಗೆಯ ಹಾಯಿ ಬಿಂಬ...
#ಅರಿವಿನ_ನದಿಯ_ಹಾದಿ...
/\/*\/\_/\/*\/\

ಕನಸಿಗೆ ಬಳಿಯಲು ಚಿಟಿಕೆಯಷ್ಟೂ ಬಣ್ಣವೇ ಸಿಗುತ್ತಿಲ್ಲ ಕಣೇ...
ಬಿಡು ವತ್ಸಾ, ಎಲ್ರೂ ಬದುಕನ್ನ ಕಾಣೋದು ಕಪ್ಪು ಬಿಳಿಯ ಕಣ್ಣಗುಡ್ಡೆಯಿಂದಲೇ; ಅವೆರಡೇ ಗಟ್ಟಿ ಬಣ್ಣಗಳು - ಅವುಗಳಿಂದಲೇ ಉಳಿದ ಬಣ್ಣಗಳಲ್ವೇನೋ...
ಅರೇ ಹೌದಲ್ವಾ, ನೋವು ನಗುವಾಗಿ ಹೊರಳೋದು ಎಷ್ಟು ಸುಲಭ...!!!
#ಪುಟ್ಟ_ಮನಸು_ಬೆಟ್ಟ_ಭರವಸೆ...
             __ಜೊತೆ ಮಾತು: ಸ್ವಾತಿ ಕಶ್ಯಪ್
/\/*\/\_/\/*\/\

ದೃಶ್ಯದಿಂದ ದೃಶ್ಯಕ್ಕೆ ದಾಟುವ ನಡುವಿನ ನಿಶ್ಶಬ್ಧವನ್ನು ಮಾತಾಡಿಸು - ನಾಟಕದ ರುಚಿಯೇ ಬೇರೆ - ಪರದೆ ಎಳೆದ ಮೇಲೂ ಅಂಕದ ತುಂಬಾ ನೀನೇ ನೀನು...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Monday, May 15, 2017

ಗೊಂಚಲು - ಎರಡ್ನೂರಿಪ್ಪತ್ತೊಂದು.....

ಹೀಗೇನೋ ಅನ್ನಿಸಿ.....

ನಿನ್ನ ನೋವು ನಿನ್ನೊಳಗೇ ರದ್ದಿಯಾದ ಮೇಲೆ ನೆನಪಿನ ಚಿತ್ರವಾಗಿ ಒಂದು ವಿಚಿತ್ರ ನಿರ್ಲಕ್ಷ್ಯದಲ್ಲಿ ನಿನ್ನಿಂದ ವಿನಿಮಯವಾಗುವಾಗ ಅಥವಾ ಇನ್ನಾರಿಂದಲೋ ಬರಿ ಸುದ್ದಿಯಂತೆ ನನ್ನ ತಲುಪುವಾಗ ನನ್ನೊಳಗೊಂದು ದೂರಾಭಾರದ ಭಾವ ಕಾಡದೆ ಹೋದರೆ ನನ್ನೊಳಗೆ ನಿನ್ನ ನೋವಿನ ಜೊತೆ ನಡೆಯುವ ಅಥವಾ ನಿನ್ನ ನೋವಲ್ಲಿ ಹೆಗಲೀಯುವ ಆಳದ ನೈಜ ತುಡಿತ ಇಲ್ಲ ಎಂತಲೇ ಅರ್ಥ...
ನಿನ್ನನ್ನು ಯಾವುದೋ ಕಣ್ಣ ಹನಿ ತಬ್ಬಿದಾಗ ಆ ಕ್ಷಣದಲ್ಲೇ ನನ್ನ ಹೆಗಲು ನಿನ್ನ ಆದ್ಯತೆ ಆಗದೇ ಹೋದಲ್ಲಿ ನಿನ್ನೊಳಗೆ ನನ್ನೆಡೆಗೆ ಆ ಮಟ್ಟದ ಭಾವ ಸ್ಪಂದನ ಹಾಗೂ ಆಪ್ತ ನಂಬಿಕೆಯನ್ನು ನಾ ಮೂಡಿಸಿಲ್ಲ ಅಥವಾ ನಿನ್ನೆದೆಯ ಕಣ್ಣಲ್ಲಿ ಆ ಆಳ, ಎತ್ತರ, ವಿಸ್ತಾರಗಳ ನಾ ಕಳಕೊಂಡಿದ್ದೇನೆ ಅನ್ನೋದು ವೇದ್ಯ...
ನಿನಗ್ಯಾವ ಕರ್ಮಕ್ಕೆ ಹೇಳೋದು, ಒಂದು ಮಾತು ಸಾಂತ್ವನಿಸಲೂ ಬಾರದ ನಿರ್ಭಾವ ಜೀವಿ ನೀನೇನು ನನ್ನ ನೋವ ಭರಿಸಬಲ್ಲೆಯಾ ಎಂಬ ನಿನ್ನ ಪ್ರಶ್ನೆಗೆ ಉತ್ತರವಿಲ್ಲ ನನ್ನಲ್ಲಿ...
ಯಾರೂ ನನ್ನ ಕಾಳಜಿ ಮಾಡಲ್ಲ ಮತ್ತು ನಿನ್ನ ಕಾಳಜಿ ನನ್ನ ಉಸಿರುಗಟ್ಟಿಸುತ್ತೆ ಎಂಬ ನಿನ್ನ ದ್ವಂದ್ವದ ಮಾತು ಅರಗಿಸಿಕೊಂಡು ಕಾಳಜಿ, ನಿಷ್ಕಾಳಜಿಯ ನಡುವೆ ಸಮನ್ವಯ ಸಾಧಿಸುವಲ್ಲಿ ನಾನು ಮತ್ತೆ ಮತ್ತೆ ಸೋಲುವಲ್ಲಿ ನಮ್ಮ ಆತ್ಮೀಯತೆ ಎಂಬೋದು ನಾಮಪದವಾಗಿ, ನನ್ನೊಳಗೆ ನಾನು ಖಾಲಿ ಖಾಲಿಯಾಗಿ ಕಾಲ ಸುಮಾರು ಸಂದು ಹೋಯಿತು...
ದಾರಿಹೋಕನಿಗೆಂದೂ (!?) ಅಂಗಳದಲೆ ಊಟ - ಎದೆ ಅಳುವ ಸದ್ದು ಕಿವಿ ಸೋಕಿ ಕಣ್ಣು ತೋಯಬಾರದು; ಅಷ್ಟಕ್ಕಾಗಿ ಹಾಹಾಕರಿಸಿ ನಗುತ್ತೇನೆ...
\/\*/\/_\/\*/\/

ಒಳಮನೆಯ ಒಕ್ಕಲಾದ ನೆನಪುಗಳೇ ಒಲೆ ಉರಿಯ ಆರಿಸೋ ಶತ್ರುಗಳಾದಾಗ ಕನಸುಗಳಿಗೆ ತಾವನೆಲ್ಲಿ ನೀಡಲಿ, ಭಾವ ಬಂಧಗಳಿಗೆಂತು ಪ್ರೀತಿ ತುತ್ತನುಣಿಸಲಿ...
#ಗರ್ಭದಲೇ_ಗರಬಡಿದಸುನೀಗಿದಮಾತುಗಳು...
\/\*/\/_\/\*/\/

ಸತ್ಯದ ಅಂಬಿಗೆ ಎದೆಗೊಡಲಾರದವನ ಅಂತಃಕರಣದ ಭ್ರಮೆಯ ಗುರಾಣಿ ಒಡೆಯದಿರಲಿ...
ನನ್ನನೆ ನಾನು ನಂಬಿಸಿಕೊಂಡ, ನನ್ನದೆಂದುಕೊಂಡ ಸುಖದ ಕೊಡೆಯ ನೆರಳು ನನ್ನ ಹಾದಿಯ ಕಾಯಲಿ...
ನನ್ನನುಮಾನಗಳೆಲ್ಲ ಸುಳ್ಳಾಗಲಿ...
ಹಾರೈಕೆಗಳೆಲ್ಲ ನೂರ್ಗುಣಿಸಿ ನಿಜವಾಗಲಿ...
#ಮುಳುಗದಿರಲಿ_ಬಾವಿಯೊಳಗಿನ_ಚಂದಿರ...
\/\*/\/_\/\*/\/

ಬದುಕಿನ ಹುಟ್ಟನ್ನು ಕೈಲಿಡುವಾಗಲೇ ಯಾವ ಕ್ಷಣದಲೂ ಎಲ್ಲಾ ಒಪ್ಪಂದಗಳನೂ ಹಿಂಪಡೆಯುವ ಪರಮಾಧಿಕಾರವನ್ನು ತನ್ನಲಿಟ್ಟುಕೊಂಡದ್ದು ಸಾವು - ಇಂತಿಪ್ಪಲ್ಲಿ ಜೀತದವನಲ್ಲಿಯೇ ಜೀತಕ್ಕೆ ಬಿಟ್ಟಂತ ಹುಚ್ಚುತನ ಅನ್ನಿಸುತ್ತೆ ಪ್ರೀತಿಯ, ನೋವಿನ, ಅವಮಾನದಂತ ವಿಧ ವಿಧ ಹೆಸರುಗಳನಿತ್ತು ಪರರ ಸಣ್ಣತನಗಳಿಗೆ ತನ್ನತನವನ್ನು ಬಲಿಕೊಡುವ ಮನಸಿನ ಹೇಡಿತನವ ಕಂಡಾಗ...
ಸೋಲನ್ನು ಮೀರಬೇಕೆಂದರೆ ಕಳಕೊಂಡದ್ದಕ್ಕೆ ಪರ್ಯಾಯಗಳ ಹುಡುಕುತ್ತ ಸಾಗಬೇಕು - ಹರಿವಿರಬೇಕು ಬದುಕಿಗೆ; ಒಳಗಾದರೂ, ಹೊರಗಾದರೂ...
\/\*/\/_\/\*/\/

ಕಲ್ಪನೆಯ ಕಣ್ಣಲ್ಲಿರುವ ರಸಾಲಾಪ, ಆಮೋದ ಪ್ರಮೋದಗಳು ಅನುಭವದ ಕಾವಡಿಯಲಿಲ್ಲ...
ಪರದೆಯ ಮೇಲೆ ಕಾಣುವ ಯುದ್ಧದ ಖುಷಿ ನೇರ ಭಾಗಿಯಾಗುವುದರಲಿಲ್ಲ...
#ಮುಗಿದಮೇಲೆ_ಎಲ್ಲವೂ_ಇಷ್ಟೇನಾ...!!??

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Monday, May 8, 2017

ಗೊಂಚಲು - ಎರಡ್ನೂರಿಪ್ಪತ್ತು.....

ದಿನ ದಿನಾಂತ ಭಾವ ಸಂಗಾತ.....

ಈ ಸಂಜೆ - ಈ ಸಂತೆ - ನಡುವೆ ಮಿಡಿವ ಏಕಾಂತ...
ನನ್ನನೇ ನಾನು ಹುಡುಕುವ ಆಟ, ಓಡಾಟ...
ಮುಚ್ಚಂಜೆಯ ಮುಂಗುರುಳಿಗೆ ನಗೆಯ ಗಿಲಕಿಯ ಕಟ್ಟಿ ಊರೆಲ್ಲ ಮೆರೆಸಿದ ಹಿತಭಾವ ಲಹರಿ...
ಥ್ಯಾಂಕ್ಯೂ ಬೆಂಗಳೂರು...💓😘
     ___11.03.2017

‘~;~;~’

ಉರಿಯುತಿರಲಿ ಎದೆಯ ಮಾಳದಿ ಒಲವ ದೀವಳಿಗೆ...
ಚೂರೇ ಚೂರು ನಗೆಯ ಬಣ್ಣ ಉಸಿರ ಕಾವಡಿಗೆ...
ರಕ್ಕಸ ಪ್ರೀತಿ - ದೈವ ಕಾಮ - ಬದುಕ ಉರವಣಿಗೆ...
#ಬಣ್ಣಗಳ_ಹಬ್ಬದ_ಶುಭಾಶಯಗಳು...
     ___12.03.2017

‘~;~;~’

ಇದ್ದೂ ಇರದಂತಿರುವ ಹಲವು, ಇರದೆಯೂ ಇದ್ದಂತೆ ಪೊರೆವ ಕೆಲವು - ಎಲ್ಲ ಇದ್ದಲ್ಲೇ ಕಳೆದ್ಹೋಗುವ ಮುನ್ನ, ಹೆಸರಿಲ್ಲದಂತೆ ಎಲ್ಲೆಲ್ಲೋ ತೊಳೆದ್ಹೋಗುವ ಮುನ್ನ - ಕೂಡಿಕೊಳಲಿ ಮತ್ತೆ ಮತ್ತೆ ಭಾವ ಬೆಳಕು ಕಣ್ಣು ಕಣ್ಣ -  ನಾಳೆಗಳಿಗೂ ದಾಟಿಕೊಳಲಿ ಮುಟಿಗೆಯಷ್ಟು ನಗೆಯ ಬಣ್ಣ...
#ಮತ್ತೆಮತ್ತೆ_ಬಣ್ಣಗಳ_ಹಬ್ಬದ_ಶುಭಾಶಯಗಳು...
     ___12.03.2017

‘~;~;~’

ನೋವಿನಂಬನು ತೊಡೆದು ಅಕ್ಷಿ ಬಟ್ಟಲ ತುಂಬಿ ತುಳುಕಿದ ನಗೆಯ ಮಿಂಚಿನ ಮತ್ತ ಘಳಿಗೆಗಿಂತ ದೊಡ್ಡ ಹಬ್ಬ ಇನ್ನೊಂದು ಕಂಡಿಲ್ಲ...
ಹಸಿದ ಕರುಳಿಗೆ ತುತ್ತನಿತ್ತು ನಿಸ್ವಾರ್ಥ ತೃಪ್ತಿಯಲಿ ತೇಗಿದ ಮನುಜ ಕಂಗಳಲಿ ಮಿನುಗಿದ ನಗೆ ಬೆಳಕಲ್ಲಿ ಕಂಡ ದೇವರು ಯಾವ ಗುಡಿಯಲೂ ಸಿಕ್ಕಿಲ್ಲ...
#ಇಂತಿಪ್ಪ_ನಗೆಯನ್ನು_ಆಚರಿಸುವೆದೆಯಲ್ಲಿ_ದೇವರು_ಒಳಮನೆಯ_ಪರಿಚಾರಕ...
ಯುಗಾದಿಯ ಶುಭಾಶಯಗಳು...💐
     ___29.03.2017

‘~;~;~’

ಮಸ್ತಕದ ಮರುಳಿಗೆ ಮದ್ದನೀಯುವ ಪುಸ್ತಕವೆಂಬೋ ಹೂವಾಡಗಿತ್ತಿಯ ಸೆರಗಲ್ಲಿ ಸಾವಿರ ಹೂಗಳ ಭಾವದ ಘಮ...
ಈ ಬದುಕಿಂಗೆ ಬಿಕ್ಕದೇ ಬಿಳಲಾಗುವುದ ಕಲಿಸಿದ ಹೊತ್ತಿಗೆ ಎಂಬ ಗುರುವೇ ನಿನ್ನ ನಂಟೊಂದು ಹರಿಯದೇ ಹರಿಯುತಿರಲಿ...
#ವಿಶ್ವ_ಪುಸ್ತಕ_ದಿನವಂತೆ...
     ___23.04.2017

Thursday, May 4, 2017

ಗೊಂಚಲು - ಎರಡ್ನೂರಾ ಹತ್ತೊಂಭತ್ತು.....

ಲುಚ್ಛಾ ಮನದ ಕಚ್ಚಾ ಮಾತು.....

ಹೆಚ್ಚಿನ ಸಲ ಯಾವುದೇ ಬೇಶರತ್ ಪ್ರೀತಿ (ಭಾವ ಬಂಧ) ಮೋಸ ಹೋಗುವುದು ಬೇಶರತ್ ನಂಬಿಕೆಯ ಕಾರಣಕ್ಕೆ ಅನ್ನಿಸುತ್ತೆ...
#ವಿಪರೀತದ_ಸತ್ಯ...
xxxxx

ಬದ್ಕಿರೋ ಕಾರಣಕ್ಕೆ ಮತ್ತು ಕಾಲಕೂ ಬದ್ಕೋಕೆ ಅಂತ ನಮ್ಮನೇ ನಾವು ಪುಸಲಾಯಿಸ್ಕೊಂಡು ಮುಗಿಯದ ಭಂಡ ಕನವರಿಕೆಗಳಿಗೆ ಇರೋ ಬರೋ ತಾಕತ್ತನ್ನೆಲ್ಲ ಹಾಕ್ತಾ ಹಾಕ್ತಾ ಅಂಗುಷ್ಟ ಕಿತ್ತ ಚಪ್ಲಿಯಂತಾಗಿ ಸಾವಿನ್ ತೆಕ್ಕೇಗ್ ಬಂದು ಬಿದ್ದಿರ್ತೀವಿ... ಕೊಟ್ಟ ಕೊನೇಲಿ ತಲೆ ಕೆರ್ಕೋಳೋಕೆ ಉಳ್ಯೋದಂದ್ರೆ ಇಷ್ಟೆಲ್ಲ ಮಾಡಿದ್ದು ಬದ್ಕೋಕಾ ಇಲ್ಲಾ ಸಾಯೋಕಾ ಅನ್ನೋ ಶುದ್ಧ ಗೊಂದ್ಲ ಅಷ್ಟೇಯಾ..........
#ಹಸಿಹರೆಯದ_ಹಸ್ತಮೈಥುನದ_ಬೆವರಿನಂತ_ಬದುಕು...
xxxxx

ನಿನ್ನೆಗಳ ಬದುಕಿದ್ದೆನಾ...?
ಗೊತ್ತಿಲ್ಲ - ಆದರೆ ಸತ್ತಿರಲಿಲ್ಲ...
ನಾಳೆಯಲ್ಲಿ ಉಳಿದೇನಾ...??
ಖಾತ್ರಿಯಿಲ್ಲ - ನಾಳೆ ಎಂಬುದಿದ್ದಿದ್ದೇ ಅನುಮಾನ...
ಹೋಗ್ಲಿ ಇಂದಿನ ಕಥೆಯೇನು...???
ಸುರತ ಸಂಭ್ರಮದಿ ನಾಗ ನಾಗಿಣಿ ನೆಣೆದುಕೊಂಡಂತೆ ಸಾವ ಹೆಣೆದುಕೊಂಡ ಬದುಕ ತೋಳಿನಲಿ ಚಣ ಚಣಕೂ ಅರಳರಳಿ ಕರಗುತ್ತಿದ್ದೇನೆ...
ಬೆಳಕೆಷ್ಟು ಸತ್ಯವೋ ಇರುಳೂ ಅಷ್ಟೇ ಸತ್ಯ...
ಈ ಕ್ಷಣ ಇದು ನನ್ನದಾಗಿಸಿಕೊಂಡರಷ್ಟೇ ನನ್ನದು - ಹಾಗಾಗಿ ಈ ಕ್ಷಣ ಇದು ಪೂರಾ ಪೂರಾ ನನ್ನದು..
ಮತ್ತು ಈ ಕ್ಷಣ ಇದಿಷ್ಟೇ ಸತ್ಯ...
#ನನ್ನ_ಬದುಕೆಂದರೆ_ನನ್ನ_ತೆಕ್ಕೆಗೊಲಿದ_ನನ್ನ_ಕಪ್ಪುಹುಡುಗಿ...
xxxxx

ಯಾವುದು ನಮ್ಮಲ್ಲಿಲ್ಲವೋ ಅವಕ್ಕೆಲ್ಲ ನಮ್ಮಂತವರ ನಿಲುಕಿನದಲ್ಲ ಎಂಬಷ್ಟು 'ಶ್ರೇಷ್ಠತೆಯ' ಆರೋಪಿಸಿ ಸಿಕ್ಕಾಪಟ್ಟೆ ಪ್ರಚಾರ ಕೊಟ್ಟು ಮೆರೆಸ್ತೀವೇನೋ ಅನ್ಸುತ್ತೆ ಒಮ್ಮೊಮ್ಮೆ...
ಉದಾಹರಣೆಗೆ: ಪ್ರೇಮ, ದೇವರು, ಧರ್ಮ, ಇತ್ಯಾದಿ ಇತ್ಯಾದಿ...
ಸಹಜ ಆಚರಣೆಯಾಗಬೇಕಾದದ್ದಕ್ಕೆ ಶ್ರೇಷ್ಠತೆಯ ವ್ಯಸನ ಅಂಟಿಸುವುದೆಷ್ಟು ಚೆಂದ...???
xxxxx

ಬದುಕ ತಬ್ಬಲಾರದ ಹುಸಿ ಕನಸೇ ನಿದ್ದೆಯ ಕೊಲ್ಲದಿರು... 
ಕನಸಿಲ್ಲದ ಮಹಾ ನಿದ್ದೆಗೆ ಕಾಯುತಿದೆ ಮನಸು..
ಒಳಗಿನ ಬಿಸಿಯೆಲ್ಲ ತಂಪಾಗಲಿ - ಸದ್ದಿಲ್ಲದೆ, ಕೊಸರಿಲ್ಲದೆ ನಿದ್ದೆ ನೆಲೆಗೊಳ್ಳಲಿ; ಎದೆ ಗೂಡಲಿ...
xxxxx

ಹದಿನಾರರಾಚೆ ಬೆಳೆದೇ ಇಲ್ಲ - ಹದಿನೆಂಟಾಣೆ ಮತಿಹೀನ ಆನು...
ಅದೇ ಕೆರಳು ಹುಚ್ಚು ಖೋಡಿ - ಹದಿನಾರಾಣೆ ಲುಚ್ಛಾ ಮನಸು ಇನ್ನೂ...
xxxxx

ನಗುವ ಆಚರಿಸಲೆಳಸೆ ಮಗುವಾಗಲೆನ್ನ ಮನಸೆ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)