Monday, May 15, 2017

ಗೊಂಚಲು - ಎರಡ್ನೂರಿಪ್ಪತ್ತೊಂದು.....

ಹೀಗೇನೋ ಅನ್ನಿಸಿ.....

ನಿನ್ನ ನೋವು ನಿನ್ನೊಳಗೇ ರದ್ದಿಯಾದ ಮೇಲೆ ನೆನಪಿನ ಚಿತ್ರವಾಗಿ ಒಂದು ವಿಚಿತ್ರ ನಿರ್ಲಕ್ಷ್ಯದಲ್ಲಿ ನಿನ್ನಿಂದ ವಿನಿಮಯವಾಗುವಾಗ ಅಥವಾ ಇನ್ನಾರಿಂದಲೋ ಬರಿ ಸುದ್ದಿಯಂತೆ ನನ್ನ ತಲುಪುವಾಗ ನನ್ನೊಳಗೊಂದು ದೂರಾಭಾರದ ಭಾವ ಕಾಡದೆ ಹೋದರೆ ನನ್ನೊಳಗೆ ನಿನ್ನ ನೋವಿನ ಜೊತೆ ನಡೆಯುವ ಅಥವಾ ನಿನ್ನ ನೋವಲ್ಲಿ ಹೆಗಲೀಯುವ ಆಳದ ನೈಜ ತುಡಿತ ಇಲ್ಲ ಎಂತಲೇ ಅರ್ಥ...
ನಿನ್ನನ್ನು ಯಾವುದೋ ಕಣ್ಣ ಹನಿ ತಬ್ಬಿದಾಗ ಆ ಕ್ಷಣದಲ್ಲೇ ನನ್ನ ಹೆಗಲು ನಿನ್ನ ಆದ್ಯತೆ ಆಗದೇ ಹೋದಲ್ಲಿ ನಿನ್ನೊಳಗೆ ನನ್ನೆಡೆಗೆ ಆ ಮಟ್ಟದ ಭಾವ ಸ್ಪಂದನ ಹಾಗೂ ಆಪ್ತ ನಂಬಿಕೆಯನ್ನು ನಾ ಮೂಡಿಸಿಲ್ಲ ಅಥವಾ ನಿನ್ನೆದೆಯ ಕಣ್ಣಲ್ಲಿ ಆ ಆಳ, ಎತ್ತರ, ವಿಸ್ತಾರಗಳ ನಾ ಕಳಕೊಂಡಿದ್ದೇನೆ ಅನ್ನೋದು ವೇದ್ಯ...
ನಿನಗ್ಯಾವ ಕರ್ಮಕ್ಕೆ ಹೇಳೋದು, ಒಂದು ಮಾತು ಸಾಂತ್ವನಿಸಲೂ ಬಾರದ ನಿರ್ಭಾವ ಜೀವಿ ನೀನೇನು ನನ್ನ ನೋವ ಭರಿಸಬಲ್ಲೆಯಾ ಎಂಬ ನಿನ್ನ ಪ್ರಶ್ನೆಗೆ ಉತ್ತರವಿಲ್ಲ ನನ್ನಲ್ಲಿ...
ಯಾರೂ ನನ್ನ ಕಾಳಜಿ ಮಾಡಲ್ಲ ಮತ್ತು ನಿನ್ನ ಕಾಳಜಿ ನನ್ನ ಉಸಿರುಗಟ್ಟಿಸುತ್ತೆ ಎಂಬ ನಿನ್ನ ದ್ವಂದ್ವದ ಮಾತು ಅರಗಿಸಿಕೊಂಡು ಕಾಳಜಿ, ನಿಷ್ಕಾಳಜಿಯ ನಡುವೆ ಸಮನ್ವಯ ಸಾಧಿಸುವಲ್ಲಿ ನಾನು ಮತ್ತೆ ಮತ್ತೆ ಸೋಲುವಲ್ಲಿ ನಮ್ಮ ಆತ್ಮೀಯತೆ ಎಂಬೋದು ನಾಮಪದವಾಗಿ, ನನ್ನೊಳಗೆ ನಾನು ಖಾಲಿ ಖಾಲಿಯಾಗಿ ಕಾಲ ಸುಮಾರು ಸಂದು ಹೋಯಿತು...
ದಾರಿಹೋಕನಿಗೆಂದೂ (!?) ಅಂಗಳದಲೆ ಊಟ - ಎದೆ ಅಳುವ ಸದ್ದು ಕಿವಿ ಸೋಕಿ ಕಣ್ಣು ತೋಯಬಾರದು; ಅಷ್ಟಕ್ಕಾಗಿ ಹಾಹಾಕರಿಸಿ ನಗುತ್ತೇನೆ...
\/\*/\/_\/\*/\/

ಒಳಮನೆಯ ಒಕ್ಕಲಾದ ನೆನಪುಗಳೇ ಒಲೆ ಉರಿಯ ಆರಿಸೋ ಶತ್ರುಗಳಾದಾಗ ಕನಸುಗಳಿಗೆ ತಾವನೆಲ್ಲಿ ನೀಡಲಿ, ಭಾವ ಬಂಧಗಳಿಗೆಂತು ಪ್ರೀತಿ ತುತ್ತನುಣಿಸಲಿ...
#ಗರ್ಭದಲೇ_ಗರಬಡಿದಸುನೀಗಿದಮಾತುಗಳು...
\/\*/\/_\/\*/\/

ಸತ್ಯದ ಅಂಬಿಗೆ ಎದೆಗೊಡಲಾರದವನ ಅಂತಃಕರಣದ ಭ್ರಮೆಯ ಗುರಾಣಿ ಒಡೆಯದಿರಲಿ...
ನನ್ನನೆ ನಾನು ನಂಬಿಸಿಕೊಂಡ, ನನ್ನದೆಂದುಕೊಂಡ ಸುಖದ ಕೊಡೆಯ ನೆರಳು ನನ್ನ ಹಾದಿಯ ಕಾಯಲಿ...
ನನ್ನನುಮಾನಗಳೆಲ್ಲ ಸುಳ್ಳಾಗಲಿ...
ಹಾರೈಕೆಗಳೆಲ್ಲ ನೂರ್ಗುಣಿಸಿ ನಿಜವಾಗಲಿ...
#ಮುಳುಗದಿರಲಿ_ಬಾವಿಯೊಳಗಿನ_ಚಂದಿರ...
\/\*/\/_\/\*/\/

ಬದುಕಿನ ಹುಟ್ಟನ್ನು ಕೈಲಿಡುವಾಗಲೇ ಯಾವ ಕ್ಷಣದಲೂ ಎಲ್ಲಾ ಒಪ್ಪಂದಗಳನೂ ಹಿಂಪಡೆಯುವ ಪರಮಾಧಿಕಾರವನ್ನು ತನ್ನಲಿಟ್ಟುಕೊಂಡದ್ದು ಸಾವು - ಇಂತಿಪ್ಪಲ್ಲಿ ಜೀತದವನಲ್ಲಿಯೇ ಜೀತಕ್ಕೆ ಬಿಟ್ಟಂತ ಹುಚ್ಚುತನ ಅನ್ನಿಸುತ್ತೆ ಪ್ರೀತಿಯ, ನೋವಿನ, ಅವಮಾನದಂತ ವಿಧ ವಿಧ ಹೆಸರುಗಳನಿತ್ತು ಪರರ ಸಣ್ಣತನಗಳಿಗೆ ತನ್ನತನವನ್ನು ಬಲಿಕೊಡುವ ಮನಸಿನ ಹೇಡಿತನವ ಕಂಡಾಗ...
ಸೋಲನ್ನು ಮೀರಬೇಕೆಂದರೆ ಕಳಕೊಂಡದ್ದಕ್ಕೆ ಪರ್ಯಾಯಗಳ ಹುಡುಕುತ್ತ ಸಾಗಬೇಕು - ಹರಿವಿರಬೇಕು ಬದುಕಿಗೆ; ಒಳಗಾದರೂ, ಹೊರಗಾದರೂ...
\/\*/\/_\/\*/\/

ಕಲ್ಪನೆಯ ಕಣ್ಣಲ್ಲಿರುವ ರಸಾಲಾಪ, ಆಮೋದ ಪ್ರಮೋದಗಳು ಅನುಭವದ ಕಾವಡಿಯಲಿಲ್ಲ...
ಪರದೆಯ ಮೇಲೆ ಕಾಣುವ ಯುದ್ಧದ ಖುಷಿ ನೇರ ಭಾಗಿಯಾಗುವುದರಲಿಲ್ಲ...
#ಮುಗಿದಮೇಲೆ_ಎಲ್ಲವೂ_ಇಷ್ಟೇನಾ...!!??

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

No comments:

Post a Comment