Thursday, December 29, 2016

ಗೊಂಚಲು - ಎರಡ್ನೂರೆರ್ಡು.....

ಉನ್ಮಾದಿಯಲ್ಲದ ಹಾದಿ ಜಾಳೋ ಜಾಳು.....

ಇದುವರೆಗೂ
ಆಗೀಗ ಹಾಗೆ ನಟ್ಟ ನಡು ರಾತ್ರಿ
ಕನಸು ಸ್ಖಲನ - ಸಳ ಸಳ ಬೆವರು
ತುಪುಕ್ಕನೆ ಮುಸುಕೆಳೆದುಕೊಳ್ಳುವಾಗ
ಸುಖದೆ ಸಿಡಿವ ನೆತ್ತಿಯಲಷ್ಟೇ
ಅರೆಚಣ ನಾನು ನನಗೆ ನಾನಾಗಿ ದಕ್ಕಿದ ಜೀವಂತ ಭಾವ...

ಉಳಿದಂತೆ
ಬಟಾ ಬಯಲು
ನಿಗಿ ನಿಗಿ ಬೆಳಕು
ಸಮಾಜ ಕೃಪಾವಲಂಬಿತ ಮುಖವಾಡದ ನಶೆ
ನಾನೇ ನೇಯ್ದುಕೊಂಡ ಮಹಾ ಸಭ್ಯತೆಯ ಸರಪಳಿ
ಆರೋಪಿತ ನಿರಾಳ, ಅಷ್ಟೇ ನೀರಸ ಹಾದಿ
ಶವದ ನಡಿಗೆ...
;;;;;
ಮೊನ್ನೆ ದಿನ ಮೂರು ಸಂಜೆಯ ಗುಂಗಲ್ಲಿ
ಆ ಷರಾಬು ಖಾನೆಯ ಇಷ್ಟೇ ಇಷ್ಟು ಅಮಲು
ಸಣ್ಣ ಕರುಳನು ತಬ್ಬಿತು
ಅದೆಷ್ಟೋ ನೋವುಗಳು ಹಸಿವ ನೀಗಿಕೊಂಡವು...

ಈ ದಿನ ಮಟ ಮಟ ಮಧ್ಯಾಹ್ನದುರಿ
ಕತ್ತಲನು ಬಂಧಿಸಿಟ್ಟ ಕಿರು ಕೋಣೆ
ಎಲ್ಲಾ ಎಲ್ಲೆಗಳ ಹೆಡೆಮುರಿ ಕಟ್ಟುವ ಅವಳೆಂಬೋ ಅವಳ ರಕ್ಕಸ ಪ್ರೇಮೋತ್ಸವ 
ಅವಳ ಪೀಚಲು ಮೊಲೆಗಳ ಬೆಂಕಿಯಲಿ ನನ್ನ ಸಂಯಮದ ಭಾಷೆ - ಭಾಷಣಗಳೆಲ್ಲ ಇಷ್ಟಿಷ್ಟೇ ಕರಗಿ,
ಸುಡು ಸುಡು ತೊಡೆಗಳ ವೃತ್ತಿಪರ ಬಿರುಸಿಗೆ ಮುಷ್ಟಿಯೊಳಗಣ ಹರೆಯ ಉಕ್ಕುಕ್ಕಿ
ಸರಕ್ಕನೆ ಮೈನೆರೆದ ಜೀವನ ಪ್ರೇಮ...

ಇದೀಗ
ಹಿತವಾಗಿ ಚೂರೇ ಚೂರು ಕೆಟ್ಟು ಹೋದೆ (?)
ಮಸಣದ ನಿಂಬೆ ಗಿಡ ಹೂಬಿಟ್ಟಿದೆ
ಸಭ್ಯತೆಯ ಅರ್ಥಾಂತರದಿ ಸ್ವತಂತ್ರ ನಡಿಗೆಗೀಗ ಚಿರತೆ ವೇಗ...

ಮತ್ತೀಗ 
ಸೀಳು ನಾಲಿಗೆಯ ಸಮಾಜದ ಕುಹಕಕ್ಕೆ ಬೆಲೆಯಾಗಿ ಪಡೆದ ಪ್ರೀತಿಯ ಜಾಣತನದಿ ಮರೆಯುವ, ಕೊಡಬೇಕಿದ್ದ ಪ್ರೀತಿಯ ಕರುಳಲ್ಲೇ ಕೊಲ್ಲುವ, ಅಷ್ಟಲ್ಲದೇ ಮತ್ತದೇ ಸಮಾಜದ ಹಲುಬಾಟಕ್ಕಂಜಿ ತರಿಯಬೇಕಿದ್ದ ತಣ್ಣನೆಯ ಕ್ರೌರ್ಯವ ಕರೆದು ತಬ್ಬಿ ಬದುಕುವ ಮಹಾ ಸಭ್ಯರ ಪಡಿಪಾಟಲುಗಳೆಡೆಗೆ ಕರುಣೆಯ ನಗೆ ನನ್ನದು...
ಅಂತಹ ಸ್ವಯಂ ಘೋಷಿತ ಸಭ್ಯತೆ ನನ್ನ ಮತಿಯ ಸೋಕದಷ್ಟು ಸುರಕ್ಷಿತ ಅಂತರ ಕಾಯ್ದುಕೊಂಡ ಖುಷಿಯ ಸೊಕ್ಕಿನ ನಡೆ ನನ್ನದು...

Thursday, December 15, 2016

ಗೊಂಚಲು – ಎರಡು ಸೊನ್ನೆ ಒಂದು...

ನೆನಪು ಹುಣ್ಣಿಮೆ.....
(ಹಂಗೇ ಎಲ್ಲ ನೆನಪಾಯಿತು - ಒಂದಿಷ್ಟನ್ನ ಅಕ್ಷರದಲಿ ಹೆಪ್ಪಾಕಿಟ್ಟೆ...)

ಆ ಗುಡ್ಡದ ನೆತ್ತಿಯ ಬೋಳು ಮರಕಿಷ್ಟು ನೀರು ಹೊಯ್ಯಬೇಕಿತ್ತು ಎಂದು ಬಯಸಿದ್ದು...
ಅಪರಿಚಿತ ಹಕ್ಕಿಯ ಕುಕಿಲಿಂದ ಹಾಡೊಂದ ಕಡ ತಂದು ಅನುಕರಿಸಿದ್ದು...
ಕಟ್ಟಿರುವೆಯ ಸಾಲನ್ನು ಎಂಜಲಾಗಿಸಿ ಅವರ ಪಂಕ್ತಿ ಮುರಿದದ್ದು...
ಅದರ ಚಂದದ ಗೂಡಿಂದ ನೆಲಗುಬ್ಬಿಯನ್ನು ಆಚೆ ತಂದು ಅಂಗೈಯ್ಯಲ್ಲಿಟ್ಟುಕೊಂಡು ಆ ಕಚಗುಳಿಗೆ ಕಂಪಿಸಿದ್ದು...
ಬಸವನ ಹುಳವ ಮುಟ್ಟಿ ಉಂಡೆ ಆಗಿಸಿ ತಂಗಿಯ ಮಡಿಲಿಗೆ ಹಾಕಿ ಅಳಿಸಿದ್ದು..
ಕಾಗೆ ಮುಟ್ಟಿ ಅಕ್ಕ ಮುಟ್ಟಾಗುತಿದ್ದ ಪರಿ ಹುಟ್ಟಿಸಿದ್ದ ಬೆರಗು...
ಸಮವಸ್ತ್ರದ ಮೇಲೆಲ್ಲ ಸಳ್ಳೆ ಹಣ್ಣು, ಸಂಪಿಗೆ ಹಣ್ಣು, ಹಲಗೆ ಹಣ್ಣುಗಳ ರಸದ ಬಣ್ಣದ ಚಿತ್ತಾರ...
ಅವಳಾಸೆಯ ಸೀತಾ ದಂಡೆಯ ಹೂವು ನನ್ನ ಕೈಯಿಂದ ಅವಳ ಮೋಟು ಜಡೆಯ ಅಲಂಕರಿಸಿದ್ದು...
ಶ್ರೀಲಂಕಾ ನಕಾಶೆಯಂಥ ಮುರುಗನ ಹುಳದ ಗೂಡಿಗೆ ಕಲ್ಲೆಸೆದು ಓಡುವಾಗ ಎಡವಿ ಬಿದ್ದು ಬೆರಳು ಒಡೆದು, ಹುಳ ಕಚ್ಚಿ ಮುಖ ಊದಿ – ಉಫ್...
ಮರೆತು ಹೋಗುವ ಮಗ್ಗಿಗೆ ಮರೆಯದಿರಲು ಯಾವ್ಯಾವುದೋ ದೇವರಿಗೆ ಕಪ್ಪ ಕಾಣಿಕೆಯ ಆಮಿಷ...
ಕಡ್ಡಿ ಮುರಿದ ಕೊಡೆಯೊಳಗೆ ನೆನೆಯದಿದ್ದುದು ತಲೆಯೊಂದೇ...
ಸುಳ್ಳೇ ಬರುವ ಹೊಟ್ಟೆ ನೋವು – ಶಾಲೆಗೆ ಚಕ್ಕರ್ ಆಟಕೆ ಹಾಜರ್...
ಕುತ್ರಿ ಒಕ್ಕುವಾಗಿನ ನಡು ರಾತ್ರಿಯ ಅವಲಕ್ಕಿ ಗೊಜ್ಜು, ಉದ್ದಿನ ದೋಸೆಯ ಕಂಬಳದ ರುಚಿ...
ಬಿರು ಬೇಸಗೆಯ ಮೂರು ಸಂಜೆಯ ಹೊತ್ತಲ್ಲಿ ಇದ್ದಕ್ಕಿದಂಗೆ ಗೆದ್ದಲ ಹುಳುಗಳೆಲ್ಲ ಗೂಡಿಂದಾಚೆ ಬಂದು ಪಟಪಟನೆ ರೆಕ್ಕೆ ಕಟ್ಟಿಕೊಂಡು ಆಗಸಕೆ ಹಾರಿ ಮಳೆಯ ಕರೆಯುವ ಪರಿಗೆ ಬೆರಗಾಗಿದ್ದು (ಇಂದಿಗೂ ಅದು ಬೆರಗೇ)...
ಉಂಬಳದ ಹಲ್ಲು, ನೊರ್ಜಿನ ರೆಕ್ಕೆಗಳ ಹುಡುಕಲು ಹರಸಾಹಸ...
ಹಿಡಿದು ದಾರ ಕಟ್ಟಿ ಹಾರಿಬಿಟ್ಟ ಬಿಂಬಿರಿಯ ಜೀವಂತ ಗಾಳಿಪಟ...
ಪಕ್ಕದ ಮನೆಯ ತೋಟದಿಂದ ಕದ್ದ ಮಾವು, ಕೋಕೋ, ಗೇರು ಹಣ್ಣು, ಸೌತೆಕಾಯಿಗಳ ರುಚಿಯೇ ಬೇರೆ (ಅವರ ಮನೆಯ ಮಕ್ಕಳೊಂದಿಗೇ ಹಂಚಿ ತಿನ್ನೋದು)...
ನಮ್ಮ ಊಟಕ್ಕಾಗಿ ಹಸಿವನೆ ನುಂಗುತಿದ್ದ ಅತ್ತೆ, ಅಮ್ಮ – ಅವರುಗಳ ಕನಸಲೂ ಕಾಡುತಿದ್ದ ನಮ್ಮ ಹಸಿವಿನ ಗುಮ್ಮ...
ಹಲಸಿನ ಹಸಿ ಹಪ್ಪಳ ಜೊತೆಗೊಂದು ಕೊಬ್ಬರಿ ತುಂಡು, ಹುಳಿಸಪ್ಪು ಸಣ್ಣ ಮೆಣಸು ಸಕ್ಕರೆ ಸೇರಿದ ಗುಡ್ನ (ಚಟ್ನಿ) - ಈಗಲೂ ಬಾಯಲ್ಲಿ ನೀರೂರುತ್ತೆ...
ಅಗಾಧ ಕೌತುಕ ಮೂಡಿಸ್ತಿದ್ದ ಅಂಗಳದ ಮೂಲೆಯ ನಾಯಿಗಳ ಮೈಥುನ ಮತ್ತು ದಣಪೆಯಾಚೆಯ ದನಗಳ ಮಿಲನ...
ಅರ್ಥವಾಗದೇ ಹೋದರೂ ಮೊಗದಿ ನಾಚಿಕೆ ಮೂಡಿಸುತಿದ್ದ ಹಿರಿಯರ ಪೋಲಿ ಪೋಲಿ ಮಾತು...
ಬದುಕ ಎದುರಿಸದೇ ಮಧ್ಯದಲ್ಲೇ ಎದ್ದು ಹೋದವರು ನಮ್ಮಲುಳಿಸಿ ಹೋದ ಕಂಗಾಲು ಮತ್ತು ಎಂದೂ ತುಂಬದ ಎದೆಯ ಖಾಲಿತನ...
ತಮ್ಮ ಲೋಲುಪತೆಗೆ ನಮ್ಮ ಖುಷಿಗಳ ಉಂಡು ತೇಗಿದವರು ಹಣೆಯ ಮೇಲೆ ಕೆತ್ತಿಟ್ಟು ಹೋದ ಶಾಶ್ವತ ಅವಮಾನಗಳ ಮಚ್ಛೆ...
ತುಪ್ಪ ಮತ್ತು ಕಡಬು ಕದಿಯೋಕೆ ಹೆಣಗಾಡಿ, ಸಾಹಸದ ಕಥೆ ಹಂಚಿಕೊಳ್ಳೋಕೆ ವೇದಿಕೆ ಆಗ್ತಾ ಇದ್ದ ಬೂದಗಳು ಹಬ್ಬ...
ಹೆಕ್ಕಿ ತಂದ ಮುಳ್ಳು ಹಂದಿಯ ಅಂಬು ಪಾಟೀಚೀಲವ ತೂತು ಮಾಡಿದ್ದೀಗ ನಗೆಯ ನೆನಪು...
ಭಯ ಹುಟ್ಟಿಸುತಿದ್ದ ಕಣಕು ನೀರಿನ ಹಳ್ಳ, ಕೊಳ್ಳಿ ದೆವ್ವದ ಕಥೆ, ಓಡು ನಡಿಗೆಯ ಕತ್ತಲ ಹಾದಿ...
ರಾತ್ರಿ ಪಯಣದಲಿ ಕೈಯಲ್ಲಿನ ಸೂಡಿಯ ಬುರು ಬುರು ಶಬ್ಧವೇ ಭಯದ ಮೂಲವಾಗಿದ್ದು, ಬೆಳದಿಂಗಳಲಿ ಬೆಳ್ಳಗೆ ಹೊಳೆವ ಸತ್ತ ಮರದ ತೊಗಟೆ ಭೂತವೆನಿಸಿದ್ದು...
ಆಟದ ಮನೆಯ ಸಂಸಾರದಲ್ಲಿ ಸೂರು ಹಾರುವ ನಗು...
ಒಡೆದ ಬೆರಳು, ತರಚಿದ ಮಂಡಿಗೆಲ್ಲಾ ಕಾಂಗ್ರೆಸ್ ಗಿಡದ ಎಲೆಯ ರಸವೇ ಮದ್ದು...
ಅಣ್ಣ ಬಳಸಿ ಬಿಟ್ಟ ಅಂಗಿ – ಚಡ್ಡಿಗಳೇ ನನಗೆ ಹೊಸ ಬಟ್ಟೆ, ಅವನ ಚಿಗುರು ಮೀಸೆ ನನಗೂ ಕನ್ನಡಿಯನ್ನ ನೆಂಟನನ್ನಾಗಿಸಿದ್ದು...
ಅಜ್ಜನ  ಕಣ್ಣಂಕೆಯ ನೆರಳು, ಅಮ್ಮನ ಹಳೆ ಸೀರೆಯ ಘಮಲು, ಒಡಹುಟ್ಟಿನ ನಗೆಯ ಅಮಲು ಒಟ್ಟು ಸೇರಿದ ಮಮತೆ...
ಬಿಟ್ಟೂ ಬಿಡದ ಸೋನೆ, ಅಂಗಳದ ಕಿಚಡಿ ಮಣ್ಣು, ಯಾರೆಲ್ಲರ ವಾತ್ಸಲ್ಯದ ತೊಟ್ಟಿಲಲ್ಲಿ ಅರಳಿದ್ದಿದು ಬದುಕು...

ಖುಷಿ, ರುಚಿ, ಕುತೂಹಲ, ಎಲ್ಲವನೂ ಒಳಗೊಳ್ಳುವ ಲವಲವಿಕೆಗಳೇ ಆದ್ಯತೆಯಾಗಿದ್ದ ಆ ದಾರಿಯಲ್ಲಿ ಮತ್ತೊಮ್ಮೆ ನಡೆಯಬೇಕಿತ್ತು ಅದೇ ಹಚ್ಚ ಹಳೆಯ ಭಾವದಲ್ಲಿ...

ಹೌದು - ಬಾಲ್ಯವೆಂದರೆ ಬರೀ ನಗೆಯ ನೆನಪಷ್ಟೇ ಅಲ್ಲ...
ಆದರೆ ಸ್ವಚ್ಛಂದ ಹಾಗೂ ಪ್ರಾಮಾಣಿಕ ನಗೆಯ ನೆನಪಷ್ಟೂ ಅಲ್ಲಿಯೇ ಗುಡಿಯ ಕಟ್ಟಿಕೊಂಡಿದೆ...
ನಗುವಿನೆಡೆಗೊಂದು ಮಂಗ ಹಿಡಿತದ ಒಲವ ಸಲಹಿಕೊಂಡರೆ ಎಂಥ ಗಾಯದ ನೋವನೂ ಸಲೀಸಾಗಿ ದಾಟಬಹುದು ಎಂಬ ಸರಳ ಸತ್ಯವ ಹೇಳಿಕೊಟ್ಟದ್ದೂ ಅದೇ ಬಾಲ್ಯವೇ...
ಬೆಳೆದೆನೆಂದು ಬೀಗುತ್ತಾ ತೋಳೇರಿಸೋ ಹೊತ್ತಲ್ಲಿ ಅಲ್ಲಿಯೇ ಬಿಟ್ಟು ಬಂದ ಮುಗ್ಧತೆಯ ಮತ್ತೆ ನೆನೆದು ಒಂಚೂರು ಮನುಜರಾಗೋ ಸೌಜನ್ಯ ಮತ್ತು ಮಗು ಭಾವದ ನಗುವೊಂದು ಎಲ್ಲರ ಎದೆಯಲೂ ಅರಳಲಿ...

*** ಈ ಬರಹ "ಪ್ರತಿಲಿಪಿ ಕನ್ನಡ" ಇ-ಪತ್ರಿಕೆಯಲ್ಲಿ ಪ್ರಕಟವಾಗಿದೆ...
ವಿಳಾಸ: http://kannada.pratilipi.com/shrivatsa-kanchimane/nenapu-hunnime

Friday, December 2, 2016

ಗೊಂಚಲು - ಎರಡು ಸೊನ್ನೆ ಸೊನ್ನೆ.....

ಏನೋ ನಾಕು ಸಾಲು..... 
(ಇನ್ನೂರನೇ ಗೊಂಚಲಿನ ಸಂಭ್ರಮದ ಸರಿಗಮ...) 

"ಬದುಕು..."

ಅಲ್ಲೊಂದು ಕಡಲು - 
ಇಲ್ಲೊಂದು ಬಯಲು - 
ಮಂಜು ಮುಸುಕಿನ ಹಾದಿ ಕನಸ ಸುಡುವಂತೆ - 
ಹಗಲಲ್ಲಿ ಇರುಳ ಮಣಿ ಇದ್ದರೂ ಇಲ್ಲದಂತೆ - 
ಕನ್ನಡಿಯು ತೋರಿದಷ್ಟೇ ನನಗೆ ನಾ ಕಾಂಬುವುದು...

ಅಲ್ಯಾರೋ ಸತ್ತು - 
ಇಲ್ಯಾರೋ ಹಡೆದು - 
ಅಲ್ಲಿಗಿಲ್ಲಿಗೆ ಕಾಲನ ಲೆಕ್ಕ ಚುಕ್ತಾ - 
ಬೆನ್ನ ಕಾಣದ ಕಣ್ಣು ಹಿಡಿವ ಜಾಡು - 
ಅಲೆ ತೊಳೆವ ತೀರದಲಿ ಮರಳ ಗೂಡು...

ನನ್ನ ಬೊಗಸೆ - 
ನನ್ನ ನಡಿಗೆ - 
ಕನಸೊಂದು ದಡೆ - 
ನೆನಪಿನದೊಂದು ದಡೆ - 
ಯಾರೋ ಇಟ್ಟ ಎಡೆ - 
ಕಾಗೆಗೊಂದಗುಳು ಪಿತೃ ಋಣವಂತೆ...
_*_*_

ತಾರೆಗಳೊಕ್ಕಲು,
ಚಂದಿರ ಕಂದೀಲು,
ಖಾಲೀ ಖಾಲಿ ಸಾಗರ ಕಿನಾರೆ,
ಚೂರೇ ಚೂರು ಮದಿರೆ
ಮತ್ತು ಪೂರಾ ಪೂರಾ ನೀನು...
ಎದೆಗೇರುವ ನಶೆಯಲಿ
ಸಾವಿನಂಥ ಸಾವೂ ಹೊಟ್ಟೆ ಉರ್ಕೊಂಡು ಸಾಯುವಂತೆ
ಬದುಕನೇ ಆ ಇರುಳಿಗೆ ಬರೆದಿಟ್ಟೇನು...
_*_*_

ನಗು: ಹಿರಿ ಕಿರಿಯ ನೋವನೆಲ್ಲ ಹೆಪ್ಪಿಟ್ಟು ಬಚ್ಚಿಡುವ ಚಂದನೆ ಕುಸುರಿಯ ಭದ್ರ ತಿಜೋರಿ...
ನಗು: ಸಾವನೇ ಸಾಕ್ಷಿಯಾಗಿಸಿಕೊಂಡೂ ಬದುಕ ಉತ್ತಲು ಮತ್ತೆ ಮತ್ತೆ ಹೊಸ ಕನಸ ಹಡೆಯುವ ಅಕ್ಷಯ ಗರ್ಭ...
ನಕ್ಕುಬಿಡು ಉಕ್ಕುಕ್ಕಿ ನದಿಯಾಗಲಿ ಕಣ್ಣು - ಬರಿದಾಗಿ ಮತ್ತೆ ಹಸಿವಾಗಿ, ಗೆಲುವಾಗಲಿ ಎದೆಯ ಮಣ್ಣು...
_*_*_

ಮಲೆನಾಡು - ಬೆಳಗು - ಒಂಟಿ ನಡಿಗೆ ಮತ್ತು ಪೋಲಿ ಮನಸು...
(ನಿನ್ನೆ ಇಳಿಸಂಜೆಯಲೊಂದು ಸಣ್ಣ ಮಳೆಯಾಗಿದೆ...)

ಬಿಸಿಲ ಬೆಳಕನೂ ಸೋಸಿ ತುಸುವೇ ನೆಲಕುಣಿಸೋ ದಟ್ಟ ಕಾಡು - ಕಾಡುತ್ತದೆ ಥೇಟು ಅವಳ ಕಂಗಳಂತೆ...
ನಟ್ಟ ನಡುವಲೊಂದು ಸೊಟ್ಟ ಕಾಲು ಹಾದಿ - ಇರುಳೆಲ್ಲ ಕಾಡಿದವನ ಕೊರಳ ಘಮದಿಂದ ಕೊಸರಿ ಎದ್ದು ಸುಖೀ ಆಲಸ್ಯದಲಿ ಹೆಣೆದ ಅದೇ ಅವಳ ಹೆರಳ ಬೈತಲೆಯಂತೆ...
ನಾಚುತಲೇ ಚುಚ್ಚುತ್ತದೆ ನಾಚಿಕೆ ಮುಳ್ಳು - ನಿತ್ಯವೂ ಅವಳು ಕಣ್ಮುಚ್ಚಿ ನಗುತ ಆಸೆ ಬೆಂಕಿಯ ಬೆಚ್ಚನೆ ತುಟಿಗಳಲಿ ಅವನ ಎದೆ ರೋಮವ ಕಚ್ಚುವಂತೆ...
ಕಾಡು ಹೂವೊಂದು ತೊಟ್ಟು ಕಳಚಿ ಮೈಮೇಲಿಂದ ನೆಲಕ್ಕುರುಳುತ್ತೆ - ನಾಲ್ಕನೆ ದಿನದ ಮುಂಜಾನೆಯ ಸ್ನಾನ ಮುಗಿಸಿ ಕಮ್ಮಗಿನ ಒದ್ದೆ ಹೆರಳನು ಇನ್ನೂ ಮಲಗೇ ಇದ್ದವನ ಮುಖದ ಮೇಲಾಡಿಸೋ ಅವಳ ತುಂಟ ಹಸಿವಿನಂತೆ...
ಅಪರಿಚಿತ ಹಕ್ಕಿಯೊಂದರ ಕುಕಿಲು ಕಾಡಿನಾಳದಿಂದ - ಸುಖದ ಸುಷುಪ್ತಿಯಲಿನ ನಗುವಲ್ಲದ ಅಳುವಲ್ಲದ ಅವಳ ತೃಪ್ತ ಝೇಂಕಾರದಂತೆ...
ಕಾಗೆಯೊಂದು ಕೊಕ್ಕಿನಿಂದ ಬಿಂಕದ ಸಂಗಾತಿಯ ರೆಕ್ಕೆಗಳ ಸವರುತ್ತೆ - ಕಳೆದಿರುಳ ಬೆತ್ತಲೆ ಉತ್ಸವದಲಿ ಅವಳ ಮೈಯ ಏರು ತಿರುವುಗಳಲೆಲ್ಲ ಹುಚ್ಚನಂತೆ ಅಲೆದಲೆದು ನಾನೇ ಬಿಡಿಸಿದ ಮತ್ತ ಮುತ್ತಿನ ರಂಗೋಲಿಗಳ ಈಗ ಸ್ನಾನದ ಮನೆಯಲ್ಲಿ ನಾನೇ ಹುಡುಕುತ್ತೇನೆ ಹೊಸ ಆಸೆಯೊಂದಿಗೆ; ಅವಳೋ ಸುಳ್ಳೇ ನಾಚುತ್ತಾಳೆ...
ಇನ್ನೂ ಏನೇನೋ - ಹೇಳೋಕೆ ನಂಗೂ ಒಂಥರಾsss... ;)
_*_*_

ಸೋತು ಉಸಿರ ತುಂಬಲು - ಎಂದೋ ಮುರಿದಾಗಿದೆ ಕೊಳಲು; ಧಮನಿಯಲಿ ಬಲವಿಲ್ಲ ಪಾಂಚಜನ್ಯವ ಊದಲು...

ಕೊಳಲು: ಬದುಕಿನ ಸೌಂದರ್ಯ - ಬೆಚ್ಚನೆ ಕನಸು - ಮನಸಿನ ಬೆಳಕು...
ಪಾಂಚಜನ್ಯ: ಬದುಕಿನ ವಾಸ್ತವ - ಕಣ್ಣೆದುರಿನ ಸತ್ಯ - ಬುದ್ಧಿಯ ಘರ್ಜನೆ...
ಕೃಷ್ಣನೂ ಸೋತದ್ದೇ ಅಲ್ಲವಾ ಎರಡನೂ ಒಟ್ಟಿಗೇ ಸಲಹಲು...???

ಇಷ್ಟಾಗಿಯೂ - ಸದಾ ವಿರಹಿ ರಾಧೆ, ವಿಧಾತ ಕೃಷ್ಣ ಈರ್ವರೂ ಕನಲುತ್ತಾರೆ ನನ್ನೊಳು...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)