Wednesday, December 14, 2022

ಗೊಂಚಲು - ಮುನ್ನೂರ್ತೊಂಭತ್ತೇಳು.....

ಕತ್ತಲಿನ ನಕಲು ನಾನು.....

ಬೆಳಗು ಬಾ ಬೆಳಕೇ ಅಡಿಯಿಟ್ಟು ಎದೆಗೆ - ಧಾರೆ ಧಾರೆ ಮಮತೆಯನುಣಿಸೋ ಆಯಿಯಾ ನಗೆ ಗಂಗೆಯಂತೆ...
____ ಗ್ರಹಣ ಕಳೆಯಲಿ...
___ 25.10.2022

ಇಕ್ಕೇರಿ ದೇವಳ-ನನ್ನ ಕ್ಯಾಮರಾ ಕಣ್ಣು...

ಎದೆಯ ಬೆಳಕು ನಗೆಯಾಗಿ ಬಯಲಿಗೆ ಚಿಮ್ಮಿ, 
ಬಯಲ ಹೊನಲು ಎದೆಯ ಪದವಾಗಿ ಹೊಮ್ಮಿ,
ಬೆಳಕು ಬೆಳಕನು ಸಂಧಿಸುವ ಧ್ಯಾನ ದೀಪೋತ್ಸವ...
___ ಬದುಕು ಬೆಳಕಿನ ಹಬ್ಬ..‌.
____ 25.10.2022
💫💫💫

ಮಂದಹಾಸ - 
ಮಗುವೊಂದು ಜಿಗಿಜಿಗಿದು ದೇವಳದ ದೊಡ್ಡ ಘಂಟೆ ಬಾರಿಸುವಾಗ ಗರ್ಭ ಗುಡಿಯ ನಂದಾದೀಪ ರೆಕ್ಕೆ ಬಡಿದಂತೆ, 
ಪ್ರಾರ್ಥನೆ -
ಒಳ ಮನೆಯಲಿ ಅಮ್ಮ ಮಂಗಳ ಪದ ಹಾಡಿದಂತೆ,
ಉಲ್ಲಾಸ -
ಗರಿಕೆ ಅಂಚಿನ ಇಬ್ಬನಿಯ ಹನಿಯೊಂದು ತುಂಟ ಇರುವೆಯ ಕನ್ನಡಿಯಾದಂತೆ,
ಶೃಂಗಾರ -
ನೂರು ಪಲ್ಲವಗಳ ಹೊಮ್ಮಿಸೋ ನನ್ನುಸಿರ ತಿಲ್ಲಾನಗಳಿಗೆಲ್ಲ ಅವಳ ಹೆಸರಿಟ್ಟಂತೆ,
ಧಾವಂತ -
ಅಜ್ಜಿ‌ಯ ಕನಸಲ್ಲಿ ಮೊಮ್ಮಗಳು ಮೈನೆರೆದಂತೆ,
ಪ್ರಸವ -
ನವಿರು ಕವಿತೆಯ ಹುಟ್ಟು; ಎದೆಗಂಟಿದ ಒಲವ ಗಂಧ...
____ ನಿನ್ನೊಳಗೆ/ನಿನ್ನೊಡನೆ ಮುಂದುವರಿಯಲಿ...
💫💫💫

ಬದುಕೇ ಬರೆಸುತ್ತ(ತ್ತಿ)ದೆ...
___ ಓದಿಕೊಳ್ಳಬೇಕು ಮತ್ತು ಓದಿಕೊಂಡರೂ ಸಾಕು ನನ್ನ ನಾನು...
💫💫💫

ಏಯ್ ಮುದ್ಕನಂತವ್ನೇ - 
ಸತ್ರೆ ನಷ್ಟ ಅನ್ನೋಕೂ ಯಾರೊಬ್ರಿಗೂ ಲಾಭ ಆಗೋ ಹಂಗೆ ಬದ್ಕಿದ್ದಿಲ್ಲ, 
ಬಿಟ್ಟೋಗೋಕೆ ಅಂಟಿಕೊಂಡದ್ದು ಅಂತ ಒಬ್ರೂ ಹಿಂದಿಲ್ಲ ಮುಂದಿಲ್ಲ, 
ನೀನ್ಯಾವ್ ಸೀಮೆ ದೊಣ್ಣೆ ನಾಯಕನೋ!! 
ನಿನಗದ್ಯಾವ ದರ್ದು!! 
ಹಂಗಂತ ನಾ ಹಾಯ್ದ ಬದುಕೇ ನನ್ನ ಅಣಕಿಸುವಾಗ ಹುಟ್ಟುತ್ತಲ್ಲ ಒಂದು ಶಾಂತ ಭಂಡತನ,
ಆ ಭಂಡ ನಗುವನ್ನು ನಾನು ಮನಸಾರೆ ಜೀವಿಸಬೇಕೀಗ...
____ ಎನ್ನ ಆನೇ ಆಳಬೇಕು...
💫💫💫

ನನ್ನೊಳಗಿನ ಆ ಕಂಪನವ ನಾನೇ ಧಿಕ್ಕರಿಸಿದೆ, ಅದೆಲ್ಲ ಸುಳ್ಳೆಂದು ನನ್ನೇ ನಾ ನಂಬಿಸಿಕೊಂಡೆ...
ನಿನ್ನೆಡೆಗಿನ ಬಿಸುಪು ತನ್ನಿಂತಾನೇ ಇಳಿಯುತ್ತಾ ಹೋಯ್ತು, ಮತ್ತದು ನಿಂಗೂನು ಗೊತ್ತಾಯ್ತು ನೋಡು...
ಮತ್ತೀಗ ಉಳಿದದ್ದು ನಾವೇ ಕಾವು ಕೊಟ್ಟು ಬೆಳೆಸಿದ ಮುಗುಮ್ಮಾಗಿ ಕಳೆದೋಗುವ ಶೀತಲ ದಿನ ರಾತ್ರಿಗಳು...
ಇನ್ನು ನೀ ನನ್ನ ಮರೆತೆ ಎಂದು ನಾ ನಿನ್ನ ದೂರಬಹುದು ಮತ್ತು ನಿನ್ನ ಎಂದಿನ ತಣ್ಣನೆಯ ನಗು ಅಷ್ಟೇ ತಣ್ಣಗೆ ನನ್ನ ಇರಿಯಬಹುದು...
____ ಮಿಡಿವ ಮೈತ್ರಿಯ ನಡುವೆ ಒಡನಾಡುವ (ಒಡೆದಾಡುವ) ಮೌನ...
💫💫💫

ಹಲವೊಮ್ಮೆ ಕವಿಯ ನೋವೂ ಕೋಗಿಲೆಯ ಅಳುವಿನಂತೆಯೇ...
____ 'ಶಬ್ದ' ತೀರದ ಸೋಲೋ ಗೆಲುವೋ...?!
💫💫💫

ತೇರು ಮುಗಿದ ಮೇಲಿನ ನಡು ರಾತ್ರಿ ಊರು ಅಲೆಯಬೇಕು...
ಸುಸ್ತಾದ ದಾರಿ ದಿರಿಸು ಬದುಕಿನ ದೊಡ್ಡ ವೇದಾಂತ...
____ ಏಕಾಂಗಿಯ ಪಿಸುಮಾತು...
💫💫💫

ಹೇ ಇವಳೇ -
ಹೇಳಿಕೊಳ್ಳಲು ಇತಿಹಾಸವಿಲ್ಲದವನ,
ಹಂಚಿಕೊಳ್ಳಲು ಕನಸುಗಳೇ ಹುಟ್ಟದವನ,
ವರ್ತಮಾನ‌ದ ಬೆರಗುಗಳ ಬೆರಳು ಹಿಡಿದು ಬಿಂಕದಲಿ ನಡೆವ ಅಪರಿಚಿತ ಬೆಳಕಾಗಬಲ್ಲೆಯಾ ನೀನು...!?
____ ಕತ್ತಲಿನ ನಕಲು ನಾನು...
💫💫💫

ಉಫ್...
"ಸತ್ತ ಹೆಣಕ್ಕೆ ಹೆಗಲು ಕೊಟ್ಟಷ್ಟು ಸುಲಭವಲ್ಲ ನೋಡು ಬದುಕಿನ ನೋವಿಗೆ ಹೆಗಲಾಗಿ ನಿಲ್ಲುವುದು..."
___ ಎದೆಯ ಗಾಯದ ಕಮಟು ಉಸಿರಿಂದ ಬಯಲ ಸೇರಿ ಮತ್ತೆ ಉಸಿರಿಂದ‌ ಎದೆಗೇ ಬಂದು ಕೂತು...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

ಗೊಂಚಲು - ಮುನ್ನೂರ್ತೊಂಭತ್ತಾರು.....

ಶ್ರದ್ಧಾಂಜಲಿ ಸಭೆಯ ಕೊನೆಯ ನಿಟ್ಟುಸಿರು.....

ಇಲ್ಲೇ ಎಲ್ಲೋ ಚೆಲ್ಲಿ ಬಿದ್ದ ನಿನ್ನ ಮುಡಿಯ ಹೂವುಗಳು...
ಕರುಳ ಕಡೆದು ಕಣ್ಣಲ್ಲಿ ತುಳುಕೋ ಆ ಅದೇ ನೆನಪುಗಳು...

ಊರೆಲ್ಲಾ ಮಲಗಿದ ಮೇಲೆ ಹಾದಿ ಸೃವಿಸುವ ಮೌನದಲಿ ನಿನ್ನ ಹುಡುತ್ತೇನೆ ಅಥವಾ ಹುಡುಕದೆಯೂ ನಿನ್ನೇ ಕಾಣುತ್ತೇನೆ
ಮತ್ತು
ಎದೆಯಿಂದ ಉಕ್ಕುವ ಬಿಕ್ಕಿನ ಹನಿಗಳ ಗಂಟಲಲ್ಲೇ ಒಣ ಹಾಕುತ್ತೇನೆ...

ಅಡುಗೆ ಬರತ್ತೆ ನಂಗೆ ಆದ್ರೂ ಸಣ್ಣ ಹಸಿವಿಗೂ ನೀನೇ ಯಾಕೆ ನೆನಪಾಗಬೇಕು...!!!

ನಿನ್ನ ದೇವರ ಧಿಕ್ಕರಿಸಬಲ್ಲೆ - ನಿನ್ನ ಕಣ್ಣಂಕೆಯ ಭಯ, ಅಭಯವ ನೀನಿಲ್ಲದೂರಲ್ಲೂ ಮೀರಲಾಗದು ನೋಡು...

ಎಂಥದ್ದೇ ಪಾಡಿನಲ್ಲೂ ಜಗದೆದುರು ನನ್ನ ಬಿಟ್ಟುಕೊಡದವಳು - ಯಮನೆದುರು ಅಷ್ಟು ಸರಾಗ ಉಸಿರು ಚೆಲ್ಲಿದ್ದು ಹೇಗೆ...?!

ನಿನ್ನ ಸೆರಗಿನ ನೆರಳಲಿದ್ದ ತಂಪು ಖುಷಿಯನಷ್ಟೇ ನೆನೆನೆನೆದು ನಗುವೆನೆಂದು ಕಣ್ಮುಚ್ಚುತ್ತೇನೆ - ಆದರೇನು ಮಾಡಲಿ ಎದೆಯ ರೆಪ್ಪೆಯೊಳಗಿನ ನಿನ್ನ ಚಿತೆಯ ಬಿಸಿ ಆರಿಯೇ ಇಲ್ಲ...

ಭಾವದ ಗುಡಿಯ ಅಧಿದೇವತೆ‌ಯೇ -
ನೆನಪುಗಳ ಗುಡುಗುಡಿ‌ಯ ಸೇದಿ ಸೇದಿ ಕರುಳ ತಂತುಗಳ ಬೆಚ್ಚಗಿಟ್ಟುಕೊಂಬವನ ಕಾಡಂಚಿನ ಕನವರಿಕೆ‌ಗಳಲ್ಲಿ ಹುಟ್ಟುವ ಅನಿರ್ವಚನೀಯ ನಿರ್ವಚನ ನೀನು...
😞😞😞

ಹಸಿದ ಹೊಟ್ಟೆಗೆ, ಬಿರುಕು ಎದೆಗೆ ಪ್ರೀತಿಯಿಂದ ತುತ್ತನಿಟ್ಟ ಕೈಗಳಲೆಲ್ಲ ಅಮ್ಮನೇ ಅಮ್ಮ...
_____ ಆಯಿಯಂದಿರ ದಿನವಂತೆ... 💞😘🥰
😞😞😞

ಬಿಸಿ ಉಸಿರನು ನುಂಗಿದ ಸಾವು ಎಷ್ಟು ತಣ್ಣಗಿದೆ...
😞😞😞

ಎದೆಯ ಒದ್ದ ನೋವನೆಲ್ಲ ಸುಖಿಸಿ ಸುಖಿಸಿ ಕೊಂದದ್ದಾಯಿತು...
ಜೊತಗೇ 'ನಾನೂ' ಸತ್ತುದಾಯಿತು...
ಅಷ್ಟಾಗಿಯೂ/ಅಷ್ಟಾದ ಮೇಲೆ ಇನ್ನೂ ಉಳಿಸಿಕೊಂಡಿರಬಹುದಾದ ತುಂಡು ನಗುವಿಗೂ ಸುಂಕ ಕೇಳಬೇಡ ಬದುಕೇ - ನಿನ್ನ ಉರಿ ಉರಿ ಬಣ್ಣದ ಬೆಳಕಿಗೆ ಸೋತು ರೆಕ್ಕೆಯ ಅಡವಿಟ್ಟವ ನಾನು...
___ ಹಾವು ಹೆಡೆ ಬಿಚ್ಚಿ ಕಪ್ಪೆಗೆ ನೆರಳ ನೀಡಿದಂತೆ ಈ ಸಾ(ನೋ)ವು ಬದುಕಿನ ಆಟ...
😞😞😞

ಶ್ರೀ
ಅರ್ಥಾರ್ಥಗಳನಾಚೆ ದೂಡಿ ಅಂತರಂಗದಾ ನಗೆಯೊಂದನೇ ಕಾಣೋ - ಈ ಬದುಕಿದು ಯಮನ ಸ್ವಾರ್ಥದಾ ಬಿಸಿ ಊಟ ಕಣೋ...
ಎಷ್ಟೆಲ್ಲಾ ಮಾತುಗಳು ಮರೆತೇ ಹೋಗಿವೆ...
ಕೊನೇಲಿ ಉಳಿಸಿ ಹೋದ ಈ ಮೌನ ಕೊರೆಯುತ್ತಲೇ ಇದೆ...
____ ಸಾವು..‌.

ಕೊನೆ ಕೊನೆಯ ದಿನಗಳ ಮತ್ತು ಕೊನೆ ಕೊನೆಯ ದಿನಗಳಲ್ಲಿ ನೆನಪುಗಳೇ ಹೆಚ್ಚು...
_____ ಕನಸು ಹುಟ್ಟದ ಖಾಲಿಯಲ್ಲಿ...

ಮಹಾ ವಾಚಾಳಿಯ ಎದೆಯ ದನಿಯನ್ನೂ ಕ್ರುದ್ಧ ಮೌನ ಮುಕ್ಕುತ್ತದೆ ಒಮ್ಮೊಮ್ಮೆ - ಹಾಗೆಂದೇ ಬದುಕಿದು ರುದ್ರ ರಮಣೀಯ...
____ ನನಗೆ ನನ್ನದೇ ಶ್ರದ್ಧಾಂಜಲಿ...

ಇನ್ನೂ ಸಾಯದೇ ಇರುವ ಹಸಿ ಸುಳ್ಳು 'ನಾನು...'
ನನ್ನ ನೆರಳಲ್ಲಿ ನೀನೆಂಬ ಸತ್ಯ ಭಾಗಶಃ ಬದುಕಿರುವುದಷ್ಟೇ...
____ ಶ್ರದ್ಧಾಂಜಲಿ ಸಭೆಯ ಕೊನೆಯ ನಿಟ್ಟುಸಿರು...

ಗೊಂಚಲು - ಮುನ್ನೂರ್ತೊಂಭತ್ತೈದು.....

ಹೃದಯದ ಜಾದೂ ನಿಲ್ಲುವ ತನಕ.....

ಎದೆ ಹೊಕ್ಕು ಕರುಳ ಬೆಚ್ಚಗಿಡುವ ಗಾಢ ನೆನಪಿನ ಕಾಡು ಪರಿಮಳ ನೀನು...
____ ಏಕತಾರಿಯ ತಂತಿ - ಒಲವ ಕಂಪಿನೊಡಲು...
😔😔😔

ಚಿತೆಯ ಮತ್ತೆ ತಿರುಗಿ ನೋಡಬೇಡ ಅಂದರು,
ಕಣ್ಕಟ್ಟಿಕೊಂಡವನಂತೆ ಪಾಲಿಸಿದೆ...
ಉರಿ ಕಣ್ಣಿಂದ ಎದೆಗಿಳಿಯಿತೇನೋ - ಸುಡುತ್ತಲೇ ಇದೆ ಇನ್ನೂನೂ ಕರುಳ ಕೋಶಗಳ...
ಜಗದ ಜಗಮಗಗಳ ನಡುವೆ ನಿನ್ನ ಮರೆಯಹೋದೆ - ಮರೆತ ಅಳುವೂ ಮತ್ತೆ ಮೊರೆವಂತೆ ಎದೆಯಾಳವ ನೀ ಇನ್ನಷ್ಟು ತುಂಬಿಕೊಂಡೆ ಮತ್ತು ಜಗವೇ ಜಡವಾಯಿತು ನೀನಿಲ್ಲದೆ...
ತಿರುಗಿ ನೋಡದೇ ಹೇಗಿರಲಿ! ಕರುಳ ಬಳ್ಳಿ ಬಿಗಿದು ಈ ಬದುಕ ತೂಗಿದ ತೊಟ್ಟಿಲ...
___ ನೆನಪಿಗೆ ನೂರು ನೆಪ...
😔😔😔

ಕ್ಷಣ ಕಣದ ನೆನಪುಗಳಿಂದ ಕದಲದವರನು ದಿನಗಳ ಎಣಿಸಿ ಸೂತಕ ಕಳೆಯಿತೆನ್ನುವುದಾದರೂ ಹೇಗೆ...!?
____ ನೀನಿಲ್ಲವಾ ಇಲ್ಲಿ...!?
😔😔😔

ಕೊಡಲಾಗದ ಪ್ರೀತಿಯಿಂದ, ಕೊಡಬೇಕಿದ್ದ ಪ್ರೀತಿಗಾಗಿ, ಆಡಬೇಕಿದ್ದ ಜಗಳವಿನ್ನೂ ಬಾಕಿ ಇರುವಾಗಲೇ ನೀನು ಹೇಳದೇ ಕೇಳದೇ ಹೊರಟು ಹೋದದ್ಯಾಕೆ...?
ಅಥವಾ ನನ್ನ ಜಾಣ ಕಿವುಡು ನಿನ್ನ ಮೆಲುದನಿಯ ಕೇಳಿಸಿಕೊಂಡಿಲ್ವಾ...?
ವಿದಾಯಕ್ಕಾದರೋ ಮರು ಭೇಟಿಯ ಸಣ್ಣ ಭರವಸೆಯಾದರೂ ಇದೆ; ಆದರೆ ಈ ಶಾಶ್ವತ ವಿಯೋಗಕ್ಕೆ...?
ಒಂದಾದರೂ ಕನಸಿಗೆ ಮೇವು ಕೊಡದ ನೆನಪುಗಳನು ಎಷ್ಟಂತ ತಿಕ್ಕಿ ತಿಕ್ಕಿ ಉಸಿರ ಕಾವನು ಕಾಯ್ದುಕೊಂಬುದು...?
ಈ ಬದುಕಿನ ಕೊಟ್ಟ ಕೊನೆಯ ಉದ್ದೇಶವಾದ ನೀನೂ ಬದುಕಿಂದ ಎದ್ದು ಹೋದಮೇಲೆ ಇನ್ನೀಗ ಉಳಿದದ್ದಾದರೂ ಏನು...?
ಎದೆಯ ಭಾರಕ್ಕೆ ಹೆಗಲು ಕುಸಿದರೆ ತಲೆಯಿಡಲು ನಿನ್ನಷ್ಟು ಬೆಚ್ಚಗಿನ ಮಡಿಲನೆಲ್ಲಿ ಹುಡುಕಲಿ...?
ಹೇಳು, ನಿನ್ನನರಸಿ ನಿನ್ನ ಮಸಣಕೇ ಬರಬೇಕಾ...?
ನನ್ನೆಲ್ಲಾ ಪ್ರಶ್ನೆಗಳಿಗೂ ಅವಳು ಚೌಕಟ್ಟಿನ ಚಿತ್ರದಲ್ಲಿ ಚಿತ್ತಾರವಾಗಿ ಒಂದೇ ನಗುವ ನಗುತ್ತಾಳೆ...
____ ಸ್ವಪ್ನ ಸತ್ತ ನಿದಿರೆ...
😔😔😔

ಒಮ್ಮೆಯಾದರೂ ಊಟಕೂ ಮೊದಲು ಅವಳು ಉರುಹೊಡೆಸಿದ್ದ 'ಅನ್ನಪೂರ್ಣೇ ಸದಾಪೂರ್ಣೇ' ಅಂದು ದೇವಿ ಉಡಿಯ ನೆನೆದವನಲ್ಲ - ಇಂದಾದರೋ ತುತ್ತಿಗೊಮ್ಮೆ, ತೇಗಿಗೊಮ್ಮೆ ನೆನಪಾಗುತಾಳೆ ಗರ್ಭಗುಡಿಯ 'ಸಾವಿತ್ರಿ...'
ನಕ್ಷತ್ರ‌ವಾದವಳು...
____ ಆಯಿ ಅಂಬೋ ಮಮತೆಯಾಮೃತ ಅಕ್ಷಯ ಗಿಂಡಿ...

'ನಿಂಗ್ಳ ಜನ್ಮಕ್ಕಿಷ್ಟು ಬೆಂಕಿ ಹಾಕ' ಅಂತ ಒಂದೇ ಮಾತಲ್ಲಿ ಬೈತಾ ಇದ್ದ ನನ್ನಜ್ಜ, ನಾವು ಮಕ್ಕಳ ಮಂಗಾಟ, ತರ್ಲೆ ಕೂಗಾಟಗಳು ಅವನಿಗೆ ಕಿರಿಕಿರಿ ಮಾಡುವಾಗ...
ಅದವನ ಬೈಗುಳವಲ್ಲದೇ ಪ್ರಾರ್ಥನೆ ಅಥವಾ ಹಾರೈಕೆ ಆಗಿತ್ತಾ ಅಂತ ಯೋಚಿಸ್ತೇನೆ ಈಗ...
ಕಾರಣ,
ಶೀತಲದಲ್ಲಿ ಎಲ್ಲವೂ ಜಡವೇ - ಒಂದು ಉರಿಯಿಲ್ಲದೇ ಉಸಿರೂ ಕೂಡಾ ನಿಸ್ಸತ್ವವೇ ಅಲ್ಲವೇ...
ಆಡಾಡುತ್ತ ಆಟದಿಂದಾಚೆ ಬೆಳೆದರೆ ಬೈದದ್ದು ಪಾಠವಾಗಿ ಬೆನ್ತಟ್ಟುತ್ತದೆ ನೋಡು...
______ ಹಿರಿಯ ಪ್ರೀತಿಗೆ ಎಷ್ಟು ಮುಖಗಳೋ...
😔😔😔

ಹೃದಯದ ಜಾದೂ ನಿಲ್ಲುವ ತನಕ...
😔😔😔

ಒಂದು ಸಣ್ಣ ಕೊಂಡಿ ತುಂಡಾದರೂ ಎಷ್ಟೆಲ್ಲಾ ಕಳೆದು ಹೋಗುತ್ತದೆ...!!!
ಅಂಥದ್ದರಲ್ಲಿ ನನ್ನದೆನ್ನುವ ಎಲ್ಲವನ್ನೂ ಹಿಡಿದಿಟ್ಟಿದ್ದ ನೀನೇ ಅಳಿದ ಮೇಲೆ ಇನ್ನೇನಿದೆ...
ಬೈದು ಸುಸ್ತಾಗಿ, ಅತ್ತು ಹಗುರಾಗಿ, ನಗುತಲೇ ಎದ್ದು ಹೋದೆ ನೀನು - ಅಳಲಾರದ ಹುಂಬತನದಲಿ ಜಡವಾಗುತ್ತ ಸೋಲುತಿರುವ ನಾನು...
ಮೌನದಲ್ಲಿ ಕಳಚಿಕೊಂಡ ನೀನು ಮತ್ತು ಸಂತೆಯಲ್ಲಿ ಕಳೆದು‌ಹೋದ ನಾನು...
___ ಸ್ಮಶಾನ ರುದ್ರ‌ನಿಗೆ ತುಸು ಹೆಚ್ಚೇ ಬಲಿ ಅನ್ನವ ಬಡಿಸಬಹುದಿತ್ತು, ಚಿತೆಯೊಂದಿಗೆ ನೆನಪುಗಳನೂ ಸುಡುವಂತಿದ್ದರೆ.‌‌..
😔😔😔

ಒಡೆದ ಪಾದಗಳ ಬಿರುಕುಗಳಲಿ ಅದೆಷ್ಟು ಹಾದಿ ಕವಲಿನ ಕಣ್ಣಹನಿಗಳಿತ್ತೋ - ಏಳೂವರೆ ದಶಕ ನುರಿ ನುರಿ ಬೇಯಿಸಿದ ಬದುಕು...
ಹುಚ್ಚು ಮಳೆಯೂ ಆರಿಸಲಾಗಲಿಲ್ಲ ಧಿಗಿಧಿಗಿ ಉರಿವ ಚಿತೆಯ - ಚೂರೂ ಹಂದಾಡದಂಗೆ ಕೈಯ್ಯಿ, ಕಾಲುಗಳ ಹೆಬ್ಬೆರಳುಗಳನು ಜೋಡಿಸಿ ಬಿಗಿದು ಕಟ್ಟಿ ಕೈಯ್ಯಾರೆ ಚಿತೆಯೇರಿಸಿ ಬಂದಿದ್ದೇನೆ; ಆದರೂ ಎನ್ನೆದೆಯ ಮೌನದಲ್ಲಿನ್ನೂ ಅವಳೇ ಹೊಯ್ದಾಡುತ್ತಾಳೆ...
ನೂರು ನಶೆಗಳಲಿ ತೇಲಿ ಮರೆತೇನೆಂದು ಬೊಬ್ಬಿರಿದು ನಗುತೇನೆ - ನಶೆಯಬ್ಬರವಿಳಿದ ಮರು ಘಳಿಗೆ‌ಯ ನಿರ್ವಾತದಲಿ ಮತ್ತೆ ಅವಳೇ ನಗುತಾಳೆ...
ಉಸಿರು ತೀಡುವ ಎದೆಯ ಪಕ್ಕೆಗಳಿಗೆ ನೇತು ಬಿದ್ದ ಅವಳ ಹುಚ್ಚು ಕನಸಿನ ಹತ್ತು ಮುಖಗಳ ಚಿತ್ರ‌ಗಳನು ಇಳಿಸಿಡುವುದಾದರೂ ಎಲ್ಲಿ...
ಮತ್ತು
ಹೊತ್ತು ಎದೆ ಭಾರ, ಇಳಿಸಿದೆನಾದರೆ ಬದುಕೇ ಖಾಲಿ...
ಕಣ್ಮುಚ್ಚಿ‌ದಷ್ಟೂ ಗಾಢ ಆ ನೆನಪಿನ ಚಿತ್ರ‌ದ ಬಣ್ಣ...
____ ನನಗಾಗಿ ಉರಿದ ದೀಪ ನನ್ನ ಉಳಿಸಿ ತಾ ಆರಿದ ಮೇಲೆ...

Thursday, September 15, 2022

ಗೊಂಚಲು - ಮುನ್ನೂರ್ತೊಂಭತ್ತ್ನಾಕು.....

ನದಿ ದಂಡೆಯ ಮಣ್ಣಿನಂಥವಳು..... 

ಕಷ್ಟ, ನೋವು, ಅವಮಾನ, ಹತಾಶೆಗಳೆಲ್ಲಾ ಸೇರಿದರೆ ಘನ ಗಂಭೀರ ಮುಖಗಳನ್ನು ಸೃಷ್ಟಿಸುತ್ತವಂತೆ...
ಈ ಹುಡುಗಿ ನಗುತ್ತಾಳೆ, ಮತ್ತಿವಳ ಕಡೆಗೆ ನನ್ನಲ್ಲಿ ಸದಾ ಮಧುರವಾದ ಹೊಟ್ಟೆಕಿಚ್ಚು...
ಅವಳೆಂದರೆ ಜೀವ ನದಿಯ ಉತ್ಸವ...
____ ನದಿ ದಂಡೆಯ ಮಣ್ಣಿನಂಥವಳು...

ಹುಟ್ಟು ಅವಳದ್ದು ಅಂದಿಗೆ ಸಂಭ್ರಮ‌ವಾಗಿತ್ತೋ ಇಲ್ಲವೋ, ಬದುಕು ಮೊಗೆಮೊಗೆದು ನೋವನಷ್ಟೇ ಕೊಟ್ಟಾಗಲೂ ತನ್ನ ಹಾದಿಯ ಸಂಭ್ರಮಿಸಲು ಕಲಿತದ್ದು, ನಂಗೆ ನಗೆಯ ಸಮ್ಮೋಹಿಸಲು ಕಲಿಸಿದ್ದಂತೂ ಅವಳೇ...
_____ ನಗೆಯ ಅಗುಳುಗಳ ಆರಿಸಿ ಆರಿಸಿ ಬಡಿಸುವ ಆತ್ಮಸಖಿ...

ಬದುಕು ಸೋತು ಸುಣ್ಣವಾದಾಗಲೆಲ್ಲ ನಾನು ಅವಳೆಡೆಗೊಮ್ಮೆ ನೋಡುತ್ತೇನೆ - ಜಗದ ಸ್ಪೂರ್ತಿಯ ಮೂರ್ತಿ‌ಗಳೆಲ್ಲಾ ಅವಳ ಆತ್ಮ ಗರ್ವದ ನಗುವಲ್ಲಿ ಮೌನದಿ ಮಿಂಚಿದಂಗೆ ಕಂಡು ಆ ಬೆಳಕಿಗೆ ಕಂಪಿಸುತ್ತೇನೆ...  
______ ಕರುಳ ಸನ್ನಿಧಿ...

ಸಣ್ಣ ಸಣ್ಣ ವಿದಾಯಗಳು - ಎದೆಗುದಿಯ ಬಚ್ಚಿಡುವ ಬಿನ್ನಾಣದ ನಗೆಯ ಚಿತ್ರ ಸಾಲು...
_____ ಖಾಲಿಯಲ್ಲೂ ನಗುತಿರಬೇಕು....
....................

ದುಡಿಮೆಯ ಬೆವರ ನಂಬಿ ಆಡಿಕೊಂಬವರ ಕೊಂಬು ಮುರಿಯುವ ಹಾಗೆ ಕೇರಿ ಸಾಲಿನಲಿ ನನಗಾಗಿ ಬೆಳಕ ನೆಟ್ಟವಳು - ಅವಳ ಕನಸಿನಗುಂಟ ಹೆಜ್ಜೆ ಊರದಿರುವ ನಾನೆಂಬೋ ಹುಂಬನಿಗೂ ಮಮತೆ ಉಣಿಸುವಲ್ಲಿ ಕೈಸೋಲದ ಊರ ದೇವಳದ ಹಾದಿ ನೆರಳಂಥವಳು...
____ ಹುಣಸೆ ಬರ್ಲಿನಿಂದ ನಡಿಗೆ ಕಲಿಸಿದವಳು...

ಇಂತಾಗಿಯೂ ನನ್ನದೋ ಅವಳನರಿವ ಮನೋಬಲವಿಲ್ಲದೆಯೂ ಅವಳ ಬಗ್ಗೆ ನಾಕು ಮಾತು ಬರೆದು ಬೀಗಿದ್ದಷ್ಟೇ ಗುರುತುಳಿಸುವ ಒಳದಾರಿ ಸಾಧನೆ...
_____ ಅವಳ ಬೇಗುದಿಗಳಿಗೆಲ್ಲ ಹೆಸರಿಡುತ್ತಾ ಕೂತವನು...



ಗೊಂಚಲು - ಮುನ್ನೂರ್ತೊಂಭತ್ತ್ಮೂರು.....

ರುಚಿಹೀನ ಮೌನ.....

ಅಂದರೆ ಅವಳೆನ್ನ ತೊರೆದು ಹೋದದ್ದನ್ನು ಕುಲಗೆಟ್ಟ ಕನಸೂ ಒಪ್ಪಿಕೊಂಡುಬಿಟ್ಟಿತೇನೋ...
ಇಂದಿನ ಮುಂಬೆಳಗಿನ ಹಸಿ ಕನಸಲ್ಲೂ ವಿಯೋಗದ್ದೇ ನಡುಕ... 😕
____ ಹನಿಯೊಡೆಯದ ಕಣ್ಣಲ್ಲಿ ಸಾ(ನೋ)ವಿಗೆ ಚಿರಯೌವನ...
*&*&*

ಅಮಾವಾಸ್ಯೆ‌ಯ ನಟ್ಟಿರುಳಲಿ ಅರೆ ತೆರೆದ ಕಿಟಕಿಯಾಚೆ ಕಣ್ಣ ನೆಟ್ಟು ತಾರೆಗಳ ಗುಚ್ಛ‌ಕೆ ಆಕಾರ ಕೊಡುತ್ತಾ ಕೂರುತ್ತೇನೆ - ಮಾಣೀ ಮನ್ಕ್ಯಳೋ ಅನ್ನುವ ನಿನ್ನ ರೂಪು ಅಲ್ಲೆಲ್ಲೋ ನಗಬಹುದೆಂದು ಹುಡುಕುತ್ತೇನೆ...
ಗಾಳಿಗಂಟಿದ ಕಿಟಕಿಯ ಕೀಲುಗಳ ತುಕ್ಕಿನ ವಾಸನೆ ಇನ್ನೂ ಉಸಿರಿರುವ ನನ್ನನ್ನು ನಂಗೆ ಪರಿಚಯಿಸುತ್ತದೆ...
____ ನಗಬೇಡ ನೀನು, ನಾ ಅಳುವುದಿಲ್ಲ...

ನನ್ನದೇ ಹಳೆಯ ಸಾಲುಗಳಲ್ಲಿ ನಿನ್ನ ನಗೆಯ ಹುಡುಕುವುದು - ಹೊಸತೇನೆಂದರೆ ಈಗ ಇದೊಂದೇ ಖಯಾಲಿ ನನ್ನದು...

ಹಿಂದಿರುಗಿ ನೋಡಿದಷ್ಟೂ ವಿದಾಯದ ಎದೆಯುರಿ / ಕಣ್ಣುರಿ ಬೆಳೆಯುತ್ತಲೇ ಹೋಗುತ್ತಿದೆ / ಬೆಳೆಯುತ್ತಲೇ ಹೋಗುತ್ತದೆ...

ಈ ಮೃತ ಮನಸಿನ ನೆತ್ತಿ ನೇವರಿಸಿದರೆ
ಎದೆ ಕಣಿವೆಯಲಿ ಗಂಗೆ ಉದ್ಭವಿಸಿಯಾಳು...
____ ರುಚಿಹೀನ ಮೌನ...

ಎದೆಯ ಭಾರಕ್ಕೆ ಮೈಸೋತು ಮಲಗಿದರೆ ಕನಸು ಇನ್ನೂ ಭಾರ ಭಾರ...
____ ನೀನಿರಬೇಕಿತ್ತು...
*&*&*

ಅವಳು ನಂಗ್‌ನಂಗೇ ಅಂತ ಕೊಟ್ಟು ಹೋದ ಪ್ರೀತಿ ಮತ್ತು ಬಿಟ್ಟು ಹೋದ ನಿರ್ವಾತ ಎರಡೂ ಮತ್‌ಮತ್ತೆ ಎದೆ ತುಂಬಿ ಕಾಡುತ್ತವೆ...
___ ಅವಳಿಲ್ಲದೆ ಕಳೆದು ಹೋದ ನನ್ನ‌ನ್ನು ಇಲ್ಲಿನ ಯಾವ ನಶೆ ಹುಡುಕಿ ಕೊಡಬಹುದು?!
*&*&*

ತಿಂಗಳಾಯಿತು, ಹೀಗೆ ಹೋಗಿ ಹಾಗೆ ಬಂದೆ ಅಂತಂದು ತವರಿಗೆ ಹೋದವಳು ಬರಲೇ ಇಲ್ಲ...
ಮೊದಲಾಗಿ ಅತ್ತಲ್ಲೇ ಕೊನೇಯ ಉಸಿರ ಚೆಲ್ಲಿದ್ದು ಎಷ್ಟು ಗಾಢ ಸಾಯುಜ್ಯ...
____ ಆದರೂ ಕರುಳ ಕುಡಿಗಳ ಹೀಗೆ ಸುಳ್ಳಾಡಿ ನಂಬಿಸಿದ್ದು ಸರಿಯಾ...

ಈ ಆಷಾಢ‌ಕ್ಕೆ ವಿರಹವಿಲ್ಲ - ಶ್ರಾವಣಕ್ಕೆ ಹಬ್ಬವಿಲ್ಲ...
ಎದೆ ಗೂಡಿನೊಳಗೆ ರಣ ಹೊಕ್ಕು ಕುಣಿವಾಗ ಒಂದಾದರೂ ರಮ್ಯ ಕವಿತೆ ಹುಟ್ಟುವುದಿಲ್ಲ...
ಭಾವದ ಸುಸ್ತಿಗೂ ತೋಯದ ಕಂಗಳಲಿ ಸರಾಗ ನಿದ್ದೆ ಕೂಡುವುದಿಲ್ಲ...
ಮಳೆ ಇರುಳ ಗುಡುಗುಡಿ - ಕರುಳ ಸುಡುತ್ತದೆ ಅವಳ ನೆನಪು...
____ ವಿಯೋಗ...

ನೋವಾದರೆ ನಾನೊಬ್ಬನೇ ನುಂಗಬಹುದು...
ಸುಖಕ್ಕೆ ಅವಳಿಲ್ಲದೇ ಅಪೂರ್ಣ...

ಇವಳ ತೋಳಲ್ಲಿ ಕರಗಿಹೋಗುವ ಕನಸಲ್ಲಿ ಕಳೆದೋಗಿ ಕಳೆದುಕೊಂಡ ಅವಳ ಮಡಿಲ ಮರೆಯಲಾದೀತಾ...
*&*&*

ಅವಳಿಲ್ಲದ ಲೋಕದಲ್ಲಿಯೂ ನಾನು ಖುಷಿಯಾಗಿಯೇ ಇದ್ದೇನೆ...
ಆದರೆ,
ಆಗೀಗ -
ನನ್ನ ಖುಷಿಯ ಕಾಣಲು ಅವಳಿಲ್ಲ ಅನ್ನುವ ಆಳದ ನೋವೊಂದು ಉಮ್ಮಳಿಸಿ ಬರುತ್ತದೆ...
______ ಚಿತೆಯ ಮೇಲವಳ ಇಳಿಸಿ ಬಂದ ಹೆಗಲ ಮುಟ್ಟಿಕೊಂಡು ಸೋಲುತ್ತೇನೆ...

ನಿದ್ರಿಸಬೇಕು ಮಗುವಂತೆ ಇಲ್ಲಾ ಅವಳಂತೆ...
____ ಮತ್ತೆ ನಗುವಾಗ...

ನನ್ನ ನಗುವಿನ ಹಿಂದೆ "ತನ್ನ ಸುತ್ತಿದ ಕತ್ತಲನೂ ಭರಪೂರ ಪ್ರೀತಿಸಿ ಎನ್ನ ಬೆಳಕಿಗೆ ನೂರು ಬಣ್ಣ ತುಂಬಿ 'ಆಯಿ' ಬದುಕಿ ತೋರಿದ ರೀತಿ ಮತ್ತು ನನ್ನ ಸುತ್ತಲಿನವರ ಪ್ರೀತಿಯ ಪಾಲು ಬಹುದೊಡ್ಡದಿದೆ..."
ಉಂಡ ಪ್ರೀತಿ ನಗೆಯಾಗಿ ತೇಗುವಾಗ ಎದೆಯ ತುಂಬಾ ಬದುಕ ಗೆದ್ದ ಭಾವ...
ನನ್ನೊಳಗೊಂದು ಮುಚ್ಚಟೆಯ ತಂಪನ್ನು ಬಿತ್ತಿದ ಅಂತೆಲ್ಲಾ ಪ್ರೀತಿಯ ಪರ್ಜನ್ಯಗಳಿಗೆ ಸದಾ ಕೃತಜ್ಞ...
ನವಿಲ್ಗರಿಯಮೇಲಿನ ಕಣ್ಣ ಹನಿಯಲ್ಲೂ ಕಾಮನಬಿಲ್ಲು...
ಇನ್ನೂ ಇನ್ನಷ್ಟು ಪ್ರೀತಿ ನಗಲಿ - ವಿಶ್ವಾಸ ವೃದ್ಧಿಸಲಿ....
____ ಎನ್ನಾತ್ಮದ ನುಡಿ ನಮನ...

ಕೈಯ್ಯ ಹಿಡಿದದ್ದು ನಾನು - ನಡೆಸಿದ್ದು ಅವಳು...

ತೋಳು ಹಿಡಿದು ನಾನು ದೊಡ್ಡವನಾದೆ ಅಂದುಕೊಂಡೆ - ಮುನ್ನಡೆಸಿ ಅವಳು ಮಗುವಾದಳು...

ಮಣಮಣನೆ ಛಳಿಯ ಬಯ್ಯುತ್ತಾ, ಮೈಮರೆತು ನಿದ್ರಿಸಿದವನ ಮೈಮೇಲೆ ಕಂಬಳಿ ಹೊದೆಸಿ ಒಳಹೋಗುತಿದ್ದ ಆಯಿ ಎಂಬ ಬೆಚ್ಚಾನೆ ಲಾಲಿ ಈಗ ಮಗನ ನಿದ್ದೆಯ ಒದೆಯುವ ರಣ ಕನಸಲ್ಲಿನ ಗಡಗಡ ನಡುಗುವ ನೆನಪು...

ಮಗನೆಂಬ ಗೊಡ್ಡು ದೊಡ್ಡಸ್ತಿಕೆ - ಆಯೀ ಎಂಬ ಅಸೀಮ ಮಮತೆ...

Monday, August 1, 2022

ಗೊಂಚಲು - ಮುನ್ನೂರ್ತೊಂಭತ್ತೆರಡು.....

ಉಸಿರಿರುವ ಕಾರಣಕ್ಕೆ.....

ಒಣ ಮರದ ಕೊರಡು ಗೆಲ್ಲುಗಳಲೂ ಗೂಡು ಕಟ್ಟುವ ಮನಸನೂ ನೀಲಾಕಾಶವ ತೋರಿ ಸಾವಧಾನದಿ ಲಾಲೈಸಬಹುದು - ನೀಲ ನಭದ ಖಾಲಿಯೇ ಕರಿ ಮೋಡದ ಹಾದಿಯೆಂದು ಮಳೆಗೆ ಕಾಯುವ ಭರವಸೆಯ ಬಲ ತುಂಬಬಹುದು...
___ ಪ್ರಜ್ಞೆ‌ಯ ಬೇರಿಗೆ ಗೆದ್ದಲು ಹಿಡಿಯದಂಗೆ ನನ್ನ ನಾ ಅನುವುಗೊಳಿಸಿಕೊಂಡಿದ್ದರೆ...

ಅಲ್ವೇ -
ಅದ್ಯಾವ ಪರಿ ದಡ್ಡತನವೋ ನನ್ನಲ್ಲಿ...
ಈ ಇಂದಿನ ಈ ವತ್ಸ ಹೀಗೆ ನೆಲೆಗೊಳ್ಳಲು ಈ ಹಿಂದಿನ ನಲವತ್ತು ಗ್ರೀಷ್ಮ, ವಸಂತಗಳ ಹಾಯಬೇಕಾಯ್ತು...
ಎಷ್ಟು ದೂರಾಭಾರದ ಹಾದಿ...
ಇಷ್ಟಾಗಿಯೂ ಇನ್ನೂ ಅರೆಬೆಂದ ಕಾಳೇ ಈ ಬದುಕು...
____ ಪ್ರಜ್ಞೆ‌ಯ ನಾಚಿಸುವ ಕಟು ಸತ್ಯ...

ಗರ್ಭ ಪಾತ್ರೆಯಲಿ ಎನ್ನನಿರಿಸಿಕೊಂಡು ಉಸಿರ ತುಂಬಿ ಕೊಟ್ಟವಳು ತನ್ನ ಉಸಿರನಿಲ್ಲೇ ಉಳಿಸಿ ಎದ್ದು ಹೋಗಿ ತಿಂಗಳು ಕಂತುತಿದೆ...
ನನ್ನ ಹುಟ್ಟನ್ನು ಸಂಭ್ರಮಿಸುವ ಪ್ರೀತಿಗಳೆದುರು ದಡದ ಯಾವುದೋ ಜೊಂಡಿಗೆ ಆತು ನಿಂತ ಹುಟ್ಟಿಲ್ಲದ ನಾವೆಯಂತೆ ನಿಂತಿದ್ದೇನೆ...
ಎದೆಯಲಿನ್ನೂ ಅವಳ ಚಿತೆ ಉರಿಯುತ್ತಲೇ ಇದೆ...
____ ಕಣ್ಣ ಹನಿಯೂ ತೊಳೆಯಲಾರದ ದುಃಸ್ವಪ್ನಗಳು...

ಕರುಳ ಕುಂಚದಲಿ ಎನ್ನ ಬರೆದು ಬೆಳಕ ಹರಸಿ, ನನ್ನ ಹುಚ್ಚಾಟಗಳನೂ ಅಕ್ಕರೆಯಿಂದ ನೋಡುತಿದ್ದ ಮಮತೆಯ ಕಣ್ಗಡಲು ಬತ್ತಿದ ಸತ್ಯ‌ವ ಒಪ್ಪಲಾಗದ ಎನ್ನ ಭಾವ ಬದುಕು ಬರಡು ಬರಡು... 
ಅವಳದೊಂದು ಮರುದನಿಗೆ ಏನೆಲ್ಲ ಹಲುಬಾಟ...

.........ಉಸಿರಿರುವ ಕಾರಣಕ್ಕೆ.......

Sunday, July 31, 2022

ಗೊಂಚಲು - ಮುನ್ನೂರ್ತೊಂಭತ್ತೊಂದು.....

ಮಸಣದೆದುರಿನ ಸಮಾಧಾನ...

ಕೊಟ್ಟು ಮರೆತರೇನೇ ನೆಮ್ಮದಿ, 
ಪಡೆದದ್ದನ್ನು ನೆನೆದರೇನೇ ಘನತೆ 
- ಹಣವಾಗಲೀ, ಪ್ರೀತಿಯಾಗಲೀ... 
ಎಲ್ಲಾ ಎಲ್ಲಾನೂ ಮೊಗೆಮೊಗೆದು ಕೊಟ್ಟು ಕೊಟ್ಟು ಎಷ್ಟು ತಣ್ಣಗೆ ಸದ್ದೇ ಇಲ್ಲದೇ ಎದ್ದು ಹೋದಳು...
ಅವಳ ನೆನೆಯುತ್ತಾ ಏನೆಲ್ಲಾ ಮರೆಯಬೇಕು ನಾನಿನ್ನು...
____ ಕಾರುಣ್ಯ ಎಂದರೇ ಅವಳು...

ಹಸಿದ ಜೀವಗಳೆದುರು ಅವಳ ಬೊಗಸೆ ಎಂದೂ ಅಕ್ಷಯ ಪಾತ್ರೆ - ಅನ್ನದ್ದಾಗಲೀ, ಪ್ರೀತಿಯದ್ದಾಗಲೀ...
ಕರುಳಿಂದ ಹೃದಯವ ಬೆಳೆದವಳು, ಬೆಸೆದವಳು...
ಜಗದ ಚೆಲುವನೆಲ್ಲ ತನ್ನಲ್ಲೇ ತುಂಬಿಕೊಂಡ ಬೆಳದಿಂಗಳ ಕುಡಿಯಂಥ ಹುಡುಗಿ...
___ಆಯಿ ಎಂಬೋ ಅಶ್ವತ್ಥ... 💞😘

ನನ್ನ ಇನ್ನೆಲ್ಲಾ ಅಬ್ಬರದ ನಗೆಯ ಎದೆಗೆ ಆತುಕೊಂಡು ಮಿಡುಕುವ ಬಿಕ್ಕಳಿಕೆ ಅವಳು...
ಬದ್ಕಿದ್ಯನೇ ಇನ್ನೂವಾ ಅಂತ ಕೆಣಕಿ ಕೇಳಲೀಗ ಅವಳಿಲ್ಲ...
ನನ್ನ ಉಳಿಸಿಕೊಡಲು ನನ್ನೊಳಗೆ ಬದುಕಿರದೇ ವಿಧಿಯಿಲ್ಲ ಅವಳಿಗೀಗ...
___ ಯಾರ ಹಳಿಯಲಿ - ಅವಳ ದೇವನ ಹಳಿಯಲೂ ನಾನವನ ನಂಬಿಲ್ಲ...

ಅವಳ ಬದುಕಿನ ನೋವು ನನ್ನ ಹೆಗಲಿನ ಸೋಲಾಗಿ ಕಾಡುತ್ತಿತ್ತು ಈವರೆಗೆ...
ಇನ್ನೀಗ ಅವಳ ಸಾವು ಕಣ್ಣ ಹನಿಯೂ ತುಂಬಿಕೊಡಲಾಗದ ಎದೆಯ ಖಾಲಿತನವಾಗಿ, ಕಣ್ಣ ಮುಂದಿನ ರುದ್ರ ನಿರ್ವಾತವಾಗಿ ಕಾಡುತ್ತಿದೆ...
ಮೂಟೆ ಮೂಟೆ ಪ್ರೀತಿಯ ಹಂಚುವ ಅರವಟಿಗೆಗಳ ನಡುವೆಯೂ ಹಾಗೇ ಉಳಿವ ಒಂದು ಅನಾಥ ಭಾವ...
____ ನಾನಿಟ್ಟ ಪಿಂಡದ ಅನ್ನ ಅವಳ ಹಸಿವಿಗಾಯಿತಾ...?!

ಎದೆಯ ತಲ್ಲಣಗಳು ಕಣ್ಣ ಬಿಸಿ ಹನಿಯಾಗಿ ಹರಿದು ಇರುಳ ಹಗುರಾಗಿಡಲು ಸೋಲುವಾಗ ಅವಳಿಲ್ಲ ಎಂಬ ಖಾಲಿ ಭಾವದ ಈ ಮೌನ ರಾತ್ರಿ‌ಗಳು ಸಾವಿನಷ್ಟೇ ತಣ್ಣಗಿವೆ...
ಅವಳ ಹೆಸರ ಹೇಳಿ ಇಟ್ಟ ಬಲಿ ಬಾಳೆಯಲ್ಲಿ ಅವಳ ನೆನಪುಗಳ ಬಲಿಗಿಡಲಾಗದಲ್ಲ...
____ ಏನೆಂತು ಬರೆದರೆ ಅವಳ ಕನಸು ಕಾಣಬಹುದು...?!

'ಶ್ರೀ ಅವಳು ನಿನ್ನೊಳಗೇ ಇದ್ದಾಳೆ' ಅಂದರು ಕಂಗಾಲು ಎದೆಯ ಸಂತೈಸಿ...
ಹೌದು
ಆರ್ಭಟದಿ ಅವಳ ಉಸಿರ ಕದ್ದೊಯ್ದ ಜವನಿಗೆ ಅವಳು ಹೆಜ್ಜೆ ಊರಿದಲ್ಲೆಲ್ಲ ಭಂಡ ಬದುಕನು ಬಾಗಿಸಿ ಉಳಿಸಿ ಹೋದ ನಗೆಯ ನವಿರು ಪ್ರೀತಿ ಗುರುತನ್ನು ಅಳಿಸೋ ತಾಕತ್ತಿಲ್ಲ...
ನೆನಪು ಕನಸಿಗಿಂತ ಶುದ್ಧ ಸತ್ಯ - ನಾನದನೇ ಉಸಿರಾಡುತೇನೆ...
____ ಮಸಣದೆದುರಿನ ಸಮಾಧಾನ...

ಅವಳ ಮರೆಯಲೋಸುಗ ನೂರು ಜೊಳ್ಳು ದಾರಿಗಳ ಹುಡುಕುತ್ತಲೇ ಅವಳ ನೆನಕೆಯ ನಾಕು ಗಟ್ಟಿ ಗುರುತುಗಳ ಭದ್ರ ಹೆಕ್ಕಿಟ್ಟುಕೊಳ್ಳುತ್ತೇನೆ - ಮರುಳನ ಹರಕು ಹಸಿಬೆ ಚೀಲದಲ್ಲೇ ಬಿಮ್ಮನೆ ಕೂತ ಅವಳ ಮಸಣದಲಿ ನೆಟ್ಟ ತುಳಸೀ ಕುಡಿ ಮತ್ತು ಚಿಟಿಕೆ ಮಣ್ಣು...
____ ಮಳ್ಳು ಮಾತಲ್ಲಿ ಜಗ ಮರೆತವನ ಅಂತರಂಗದ ರಣ ಮೌನ...

ಅಂದು ನಿನಗೆ ಕೊಡಬೇಕಿದ್ದದ್ದನ್ನು ಕೊಡುವಲ್ಲಿನ ನನ್ನ ಜಾಣ ಮರೆವು ಇಂದೀಗ ಎಲ್ಲವನ್ನೂ ಕೊಟ್ಟು ನೀ ಎದ್ದು ಹೋದಮೇಲೆ ಉಸಿರಿಗೊಮ್ಮೆ ನೆನಪಾಗಿ ಭೋರೆಂಬ ಮಳೆಯನೂ ಸೀಳಿ ದಿಗಿದಿಗಿ ಉರಿವ ಚಿತೆಯೆದುರಿನ ರುದ್ರ ಮೌನವಾಗಿ ಕಾಡುತ್ತಿದೆ...
ನಿನ್ನೆಡೆಗಿನ ನನ್ನ ಹುಚ್ಚು ತಕರಾರುಗಳನು ನಾ ಕಿರುಚಾಡಿ ಹೇಳುತ್ತಿದ್ದಾಗ ಕಣ್ಣ ಹನಿಗಳ ಮರೆಯಲಿಟ್ಟು ನಗುತ್ತಾ 'ಆssನ್ ಬೈದ್ರೂ ಎಂದೇ ಮಗಂಗೆ, ನೀ ಬೈದ್ರೆ ಮಗ ಬೈದದ್ದು ಅಷ್ಟೇ' ಅಂತಂದುಬಿಡುತ್ತಿದ್ದೆಯಲ್ಲ - ಆಹಾ! ಎಂಥಾ ಸರಳ ಸೂತ್ರ ನಿನ್ನದು ನಿನ್ನ ಕರುಳಿನೆದುರಿನ ಸಮಾಧಾನಕ್ಕೆ... 
ಹಂಗೇ ಎದ್ದು ಬಂದು ಅಂದಿನಂಗೆಯೇ ಮಮತೆ ಕಟ್ಟಿದ ಕಿರಿಕಿರಿ‌ಯ ದನಿಯಲಿ ನನ್ನ ಮರೆವನ್ನೊಮ್ಮೆ ಬೈದು ಹೋಗಬಾರದೇ ಅಂದುಕೊಳ್ಳುತ್ತೇನೆ ಇಂದು ನಿನ್ನ ಮಸಣ ಕಲ್ಲಿನೆದುರು ಕಬೋಜಿಯಾಗಿ ನಿಂತು...
ನಿನ್ನ ಗೋತ್ರ ಪ್ರವರಗಳ ಮಣಮಣಿಸಿ ಇಟ್ಟ ಪಿಂಡದಗುಳನು ಹುಡುಕಿ ಕಾಕಗಳು ಬಂದವಾ?! ಕಾದು ನಿಲ್ಲಲೂ, ತಿರುಗಿ ನೋಡಲೂ ಧೈರ್ಯ‌ವಾಗಲಿಲ್ಲ ಅಥವಾ ಧೈರ್ಯ‌ವುಳಿದಿಲ್ಲ...
ಮರೆತವನಂತೆ ಬದುಕಬೇಕಿನ್ನು ಕಾಲವೂ ಮರೆಯಲಾಗದ ಸೊಲ್ಲನು...
____ ಕಣ್ಣಲ್ಲಿ ಹನಿ ಇಲ್ಲದವನ ಎದೆಯ ರಕ್ತವೀಗ ಸದಾ ಉದ್ವಿಗ್ನ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

ಗೊಂಚಲು - ಮುನ್ನೂರ್ತೊಂಭತ್ತು.....

ಖರೇ ಅವಳಿನ್ನು ನನ್ನ ಕರೆ ಸ್ವೀಕರಿಸುವುದಿಲ್ಲ.....

ತಮಾ ಎದ್ಕಳೋ ಸೂರ್ಯ ನೆತ್ತಿಗ್ ಬಂದ ಅಂತ ಗೊಣಗುತ್ತಾ ಸರಬರನೆ ಒಳಹೊರಗಾಡುತ್ತಿದ್ದ ಅವಳ ಸುಪ್ರಭಾತ‌ದ ಬೆಳಗುಗಳ ಜಾಗದಲ್ಲೀಗ ನೆನಪಿನ ಕೋಶದಲ್ಲಿನ ಅವಳ ಕಥೆಗಳ ಹುಡುಕುತ್ತಾ ಕಣ್ಣುಜ್ಜಿಕೊಳ್ಳೋ ನನ್ನ ಮಬ್ಬು ಬೆಳಗುಗಳಿವೆ...
____ ಮುಗಿದು ಹೋದ ಈ ಬದುಕಿನ ಮೊದಲ ಮತ್ತು ಕೊನೇಯ ಉದ್ದೇಶ...

ಬದುಕನು ಮೆರೆಸಲಾಗದೇ ಸೋತವನು ಸಾವಿನ ಊಟಕೆ ಯಥೇಚ್ಛ ತುಪ್ಪ ಬಡಿಸಿದೆ...
____ ಅವಳಿಷ್ಟದ ಅಡುಗೆ...

ಅವಳಿನ್ನು ನನ್ನ ಕರೆ ಸ್ವೀಕರಿಸುವುದಿಲ್ಲ...
ನನ್ನೆಡೆಗಿನ ಅವಳ ಹುಸಿ ಮುನಿಸಿನ ಆರೋಪಗಳನೂ ಕೂಡಾ ಊಫಿ ಮಾಫಿ ಎಂದು ಬರಕಾಸ್ತುಗೊಳಿಸಿ ಎದ್ದು ಹೋದಳು...
___ ಖರೇ ಅವಳಿನ್ನು ನನ್ನ ಕರೆ ಸ್ವೀಕರಿಸುವುದಿಲ್ಲ...

ಅವಳ ನೆನಪುಗಳ ಗೀರು ಗೀರು ಚಿತ್ತು ಚಿತ್ತಾದ ಹಾಳೆಗಳು - ಯಾವ ಲೆಕ್ಕಾಚಾರಕ್ಕೂ ತಾಳೆಯಾಗದ ಅವಳಿಲ್ಲದೇ ಎದುರ್ಗೊಳ್ಳಬೇಕಾದ ಉಮ್ಮಳಿಕೆಯ ನಾಳೆಗಳು...
ಭೋರಿಡುವ ಮಳೆ ಮತ್ತು ಒಂದು ಹನಿ ಕಣ್ಣೀರ ನಿಷಾದ...
ಅವಳಿಲ್ಲದ ಈ ಹೊತ್ತನೂ ನಗುತ್ತಾ ದಾಟುವ ನನ್ನ ಧಾಡಸಿತನವೇ ಆಂತರ್ಯದ‌ಲ್ಲಿ ನನ್ನಲ್ಲಿ ಹುಟ್ಟು‌ಹಾಕುವ ವಿಚಿತ್ರ ವಿಶಾದ...
____ ವಿಯೋಗ...

ಜಗ ಮತ್ತು ಜಗದೆದುರು ಅವಳ ಹಾಡಿದ್ದನ್ನು ನಾ ಅವಳಿಗೆಂದೂ ಹೇಳಿಲ್ಲ...
ನಾ ಬರೆದ ಸಾಲುಗಳಲ್ಲಿರುವಷ್ಟು ನಿಜಕ್ಕೂ ನಾನವಳ ಪ್ರೀತಿಸಿದೆನಾ? ಕೇಳೋಣ ಎಂದರೆ ಇಂದು ಅವಳೇ ಇಲ್ಲ...
___ ಕಾಕಗಳ ಕೂಗಿ ಕೂಗಿ ಕೂಗಿ ಕರೆದು ಅವಳ ಕಥೆ ಕೇಳುವ ಹುಚ್ಚು ಕುಣಿತ ಈಗ...

ಅಳಬೇಕಿತ್ತು, ಅತ್ತರೆ ಹಗುರಾಗಬಹುದಂತೆ - ನಾನೋ ಅವಳ ಚಿತ್ರದ ಕಣ್ಣಲ್ಲಿ ಕಣ್ಣಿಟ್ಟು ಗಲಗಲಿಸಿ ನಗುತ್ತೇನೆ...
ಕಾಡ ನಡುವಿನ ಆರಡಿ ಅಂಗಳದಿ ಹೆಗಲಿಂದ ಇಳಿಸಿ ಋಣ ಭಾರಕ್ಕೆ ಇಟ್ಟುಬಂದ ಬೆಂಕಿ ಭಾವಕೋಶವ ಸುಡುತ್ತಲೇ ಇದೆ/ಇರುತ್ತದೆ...
____ ಪ್ರೀತಿ, ಮಮತೆಗಳ ಭಾರವ ವಿಯೋಗದಲ್ಲಿ ಕಾಣಬೇಕು, ತಾಳಬೇಕು...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

ಗೊಂಚಲು - ಮುನ್ನೂರೆಂಬತ್ತೊಂಭತ್ತು.....

ಅಮ್ಮನಳಿದ ಜೀವಗಳೆಲ್ಲಾ ಅನಾಥವೇ..... 

ಬದುಕು ನೀರಿನಂಥಾ ಭಾವದ ಗುರುವಾದರೆ,
ಸಾವು ನಿರ್ಭಾವದ ಮಹಾಗುರು...
____ ಎರಡರ ಅರಿವನ್ನೂ ಕೊಟ್ಟು ಸಲಹಿದ ಆಯಿ ಎನ್ನ ಜೀವಾಭಾವದ ದೇವಗುರು... 

ಬದುಕು ಕೈಬಿಟ್ಟಾಗಲೂ ಗಟ್ಟಿ ನಿಂತು ನಕ್ಕದ್ದಿದೆ, ಬಡಿದಾಡಿ ಗೆದ್ದದ್ದಿದೆ - ಇವಳು ಬೆನ್ನಿಗಿದ್ದಳಲ್ಲ...
ಅವಳೂ ಹೊರಟು ನಿಂತಾಗ ಬೆನ್ನ ಹುರಿಯಾಳದಲ್ಲಿನ ಅನಾಥ ಭಾವದ ನಿಶ್ಯಕ್ತಿಯ ಮೀರಿ ನಿಲ್ಲುವ ಶಕ್ತಿ‌ಯನೂ ಅವಳೇ ಆಶೀರ್ವದಿಸಬೇಕಲ್ಲ...

ಅವಳ ಬದುಕ ಭಾರ ಅವಳೇ ಹೊತ್ತು ಗೆದ್ದಳು - ನಾ ಅವಳ ಮೃತ ದೇಹ ಹೊತ್ತು ಸಮಾಧಾನಿಸಿಕೊಂಡೆ...

ಪ್ರೀತಿ ಕೊಡೋಕೆ ಸಾವಿರ ಜೀವಗಳು ಸಿಗಬಹುದು...
ಆದ್ರೆ
ಭಯವಿಲ್ಲದೆ ಕಿತ್ತಾಡೋಕೆ ಆಯಿಯಂತೋಳು ಮತ್ತೆ‌ಲ್ಲಿ ಸಿಕ್ಕಾಳು...

ಬದುಕಿನಷ್ಟೇ ಸ್ವಾಭಿಮಾನವ ಸಾವಲ್ಲೂ ಉಳಿಸಿಕೊಂಡು ಗತ್ತಿನಲ್ಲೇ ನಡೆದು ಹೋದಳು...
ಬದುಕಿನ ಯಾವ ಸೂತಕಗಳೂ ಅವಳ ಸೋಕುವುದಿಲ್ಲ ಇನ್ನು - ಸಾವು ಅವಳದ್ದು, ಶ್ರಾದ್ಧ ನನ್ನದು...

ಹಿಂದೆ ನೋಡದೆ ಹೊರಟಳು - ಹಿಂದೆ ಹೋಗುವ ಶಕ್ತಿ ಇಲ್ಲದವನು ಇಲ್ಲೇ ನಿಂತಿದ್ದೇನೆ...
ನಿಲ್ಲದ ಕಾಲ ಅದಾಗಿ ಇಂದಿಗೆ ಇಷ್ಟು ದಿನವೆಂದು ಲೆಕ್ಕ ತೋರುತ್ತದೆ...

ಇಲ್ಲಿ ಎಲ್ಲವೂ ಸುಳ್ಳೂ ಅನ್ನಿಸತ್ತೆ... 
ಈ ಬದುಕು, ಬವಣೆ, ನಗು, ನೋವು ಎಲ್ಲಾ ಅಂದರೆ ಎಲ್ಲಾ ಸುಳ್ಳೇ ಇರಬೇಕು... 
ಅವಳು ಉಸಿರು ಚೆಲ್ಲಿದ್ದು ಕೂಡಾ ಸುಳ್ಳೇ ಆಗಿದ್ದಿದ್ದರೆ...
ಅವಳ ಅಸ್ಥಿಗೆ ಬೆಂಕಿ ಇಟ್ಟ ಕೈಗಳ ನೋಡಿಕೊಳ್ಳುತ್ತೇನೆ... 
ನನ್ನ ಅಸ್ತಿತ್ವವೇ ಇನ್ನು ಸುಳ್ಳೂ ಅನ್ನಿಸತ್ತೆ...

ನಂಗಿಂತ ಮುಂಚೆ ಹೋಗಬೇಕಿತ್ತವಳಿಗೆ, ಹೊರಟಳು ಅಷ್ಟೇ...
ಬದುಕಲ್ಲಷ್ಟೇ ಅಲ್ಲ ಸಾವಲ್ಲೂ ಅವಳೇ ಗೆದ್ದಳು...
ಇನ್ನು,
ತಾ ಹೊರಟಲ್ಲಿಗೆ ಎನ್ನ ಅವಳೇ ಕರೆದುಕೊಳ್ಳಬೇಕು...
ದೇವರ ನಂಬದ ನಾನು ಅವಳನೇ ಬೇಡಬೇಕು...
____ಪ್ರಾರ್ಥನೆ...

ಬೆಂಕಿಗೆ ಅಷ್ಟೂ, ಗಾಳಿಗಿಷ್ಟು, ಮಣ್ಣಿಗಿನ್ನಷ್ಟು, ನೀರಲ್ಲಷ್ಟು, ಅನಂತಕ್ಕುಳಿದಷ್ಟು - 
ಹೀಗೆ
ಬಯಲಿಗೆ ಹಂಚುತ್ತಾ ಹಂಚುತ್ತಾ ಅವಳ ರೂಪ, ಗಂಧ, ಸಾಕಾರ ಆಕಾರದ ಗುರುತುಗಳ ಅಳಿಸುತ್ತಾ ಬಂದೆ...
ಎದೆಯ ಗೂಡಿನ ನೆನಪ ನಿತ್ಯಾಗ್ನಿಯಾಗಿ ಬೆಳೆಯುತ್ತಲೇ ಇದ್ದಾಳೆ...
ಕರುಳ ಬಳ್ಳಿ ಕತ್ತರಿಸಿ ಜಗಕೆ ಬಿಟ್ಟು ಕರುಳ ಮಮತೆಯಿಂದ ಎನ್ನ ಜಗವ ತೂಗಿದವಳ ದೇಹವ ಕರಗಿಸಿದಂಗೆ ಉಸಿರ ಹಬ್ಬಿ ನಿಂತ ಭಾವವ ಕರಗಿಸಲಾದೀತೇ...
ಅವಳ ಉಂಡು ತೇಗಿದ ಇದೇ ಪಂಚಭೂತಗಳು ಅವಳ ನೆನಪ ನೂಕುತ್ತಾವೆ ಎನ್ನೆಡೆಗೆ...
___ ಅಸ್ಥಿ ವಿಸರ್ಜನೆ...

ತಾನು ಶರಂಪರ ಬಡಿದಾಡಿ ಕಟ್ಟಿಕೊಂಡ ತನ್ನ ಬದುಕಿಗೆ ಅವಳು ಅವನ ಭಿಕ್ಷೆ ಎಂದು ಕೈಮುಗಿಯುತಿದ್ದಳು...
ಅವನು ಅನಾಯಾಸ ಎತ್ತಿ ಕೊಟ್ಟ ಸಾವಿಗೆ ನಾನು ಸುಖ ಮರಣ ಎಂದು ಶರಾ ಬರೆಯುತ್ತೇನೆ...
____ ಅವಳ(ಳೇ) ಭಗವಂತ...

ದಣಪೆಯಾಚೆಯ ಬಯಲಲ್ಲಿ ಉರಿದು ಹೋದ ಅವಳನ್ನು ಅಡುಗೆ ಮನೆಯ ನಸುಗತ್ತಲ ಮೂಲೆಯಲ್ಲಿ ಹುಡುಕುತ್ತೇನೆ...
ಗೋಡೆಗಂಟಿದ ಯಾವುದೋ ಮಶಿ ಕಲೆಯಲ್ಲಿ ಅವಳ ಕಿರುಬೆರಳ ಕನಸೊಂದು ಇನ್ನೂ ಉಸಿರಾಡುತಿರಬಹುದಾ...?!
____ ಕತ್ತಲೂ ಕಟ್ಟಿಕೊಡಲಾಗದ ಸಾಂತ್ವನ...

ಎಂದಿನಂತೆ ಬೆಳಗಾಗುತ್ತದೆ - ಅವಳ ನಗೆಯ ಬೆಳಕಿಲ್ಲ ಅಷ್ಟೇ...

ಈ ಊರು, ಆಷಾಡದ ಧೋss ಮಳೆ, ಅವಳ ವಿದಾಯದುಬ್ಬರದ ಮೌನ...
ಹೇಗಿದ್ದೀಯಾ ಶ್ರೀ...?
ನೋವೂ ನೋಯಿಸದಷ್ಟು ಗಟ್ಟಿಯಾಗಿ, ಅವಳ ನಿಂತ ಉಸಿರಿನಷ್ಟೇ ನಿರ್ಲಿಪ್ತ‌ವಾಗಿ.......ಹಾಯಾಗಿದ್ದೇನೆ......

"ಅಮ್ಮನಳಿದ ಜೀವಗಳೆಲ್ಲಾ ಅನಾಥವೇ..."

ಉಳಿದದ್ದು ಮಣ್ಣ ಮಡಿಲೊಂದೇ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Saturday, April 2, 2022

ಗೊಂಚಲು - ಮುನ್ನೂರೆಂಬತ್ತೆಂಟು.....

ಕಪ್ಪು ಹುಡುಗಿ.....

ನೀ ನಿನ್ನ ನೆನಪಾಯಿತು ಅಂದಾಗ ಸಣ್ಣಗೆ ಭಯವಾಯಿತು - ಕಳೆದದ್ದೇ ಅಲ್ಲವಾ ನೆನಪಾಗುವುದು...
_______ ಹಿಂದೆಯೇ ಉಳಿದವನು...
💭💬💭💬💭

ಖಾಲಿ ಕಿಸೆಯ ಬೆಳಗಿಗೊಂದು ನಚ್ಚನೆಯ ನಗೆಯ ತುಂಬುವ ನೆನಹು, ಇರುಳ ತುಂಬಾ ಮತ್ತೆ ಮತ್ತೆ ಓದಿದ ಹುಚ್ಚು ಕವಿತೆ - ನೀನು...
___ ಒಂದು ಕುಡ್ತೆ ನೀರು ಹಸಿರರಳಿಸೋ ಬೇರಿಗೆ...

ಇರುಳ ದಾಂಟಲು ನಾ ಬರೆ(ರಿ)ದೇ ಬರೆದ ಉಸಿರಿಲ್ಲದ ಕವಿತೆಯ ಕೊನೆಯ ಸಾಲಿನಾಚೆ ಬೆಳೆದು ನಿಂತ ಒಣ ನಗೆಯ ನಿರಂಕುಶ ಮೌನ ನೀನು...
____ ಒಂದು ಹಿಡಿ ಮಣ್ಣು ಕರುಳಿಲ್ಲದ ಕನಸಿಗೆ...
💭💬💭💬💭

ಅವಳು ಕಣ್ಣ ತುಂಬಾ ನಗು ತುಳುಕಿಸಿಕೊಂಡು ಎದೆಯ ತಬ್ಬಿದಾಗಲೆಲ್ಲ ಸಾವಿರ ಬಣ್ಣ ಕಲಸಿದ ಹೋಳಿ ನೀರ ಮಿಂದಂಗೆ ಅಲೆ ಅಲೆ ಅಲೆ ಜೀವ ಝೇಂಕಾರ...
ಅವಳದು ತೋಳಲ್ಲೇ ಬದುಕನೇ ಸುಗ್ಗಿ ಹಬ್ಬವಾಗಿಸೋ ಚಂದ ಆಳಿಕೆ...
ನಗು ಮತ್ತು ಕಪ್ಪು ಪ್ರಕೃತಿ ತುಂಬಿ ಕೊಟ್ಟ ಗಟ್ಟಿ ಬಣ್ಣಗಳು ನನ್ನ ಪಾಲಿಗೆ...
____ ಕಪ್ಪು ಹುಡುಗಿ...
💭💬💭💬💭

ಪ್ರೀತಿಯ ಸಣ್ಣ ಆರಂಭ ಮತ್ತು ಉತ್ತುಂಗ ಅಭಿವ್ಯಕ್ತಿ ಎರಡೂ ನಮ್ಮ ನಾಭಿ ಮೂಲದ ಬೆಂಕಿಯಿಂದಲೇ...
____ ನಾನು, ನೀನು ಮತ್ತು ಪ್ರಕೃತಿಯ ವಶೀಕರಣ...
💭💬💭💬💭

ಸೋಲುವ ಚಂದವ ಕಾಣಿಸಿದವಳೇ -
ನಿನ್ನ ತೋಳು ಗೆಲುವಿನ ಬೆವರಂಟದೇ ಬರಿದಾದ ದಿನ ನನ್ನ ಸಾವಾಗಲಿ...
___ ಮೃಗವಾಂಛೆ...
💭💬💭💬💭

ಸಿಗುವೇನೆಂದು ಸಿಗದೇ ನುಣುಚಿಕೊಂಡವರ ಈಷ್ಟುದ್ದಾ ಯಾದೀನ ಎದೇಲಿಟ್ಕೊಂಡು ಸ್ವಯಂ ಕರುಣೆ‌ಯ ಕಂಬಳಿ ಹೊದ್ದು ಬೆಚ್ಚಗಿದ್ದೆ ನೋಡು...
ದಾಟುಬಳ್ಳಿ ದಾಟಿ ಹಾದಿ ತಪ್ಪಿ ಹಾಯ್ದ ಊರ ಬಾಗಿಲಲಿ ನೀ ಸಿಕ್ಕುಬಿಟ್ಟೆ (?) - ಮಾಡು ಹಾರಿ ಹೋದ ಸೂರು ಈಗ ನನ್ನೆದೆ ಪಾಡು...
____ ನಡುಬೀದಿಯಲ್ಲಿ ನಡು ತಬ್ಬಿ ನಡೆದು ಸಿಗದೇ ಹೋದವರ ಹೊಟ್ಟೆ ಉರಿಸುವ ಬಾ...
💭💬💭💬💭

ಕಾಮವನ್ನು ಕಾಮ ಅಂತಲ್ಲದೇ ಬೇರೆ ಯಾವುದೇ ಚಂದ ಹೆಸರಿನಲ್ಲಿ ಸವಿದರೂ ಕೊನೆಯಲ್ಲಿ ಸುಖದ ನಿದ್ದೆಯೂ ಸುಳ್ಳು ಅನ್ನಿಸುವಂಥ ನಿಟ್ಟುಸಿರೊಂದು(ದೇ) ಉಳಿದು(ದೇ) ಹೋಗುತ್ತದೆ...
____  ಅನುಭವಿಸುವುದಲ್ಲ ಪ್ರೇಮ ಅನುಭಾವಿಸುವುದು...
💭💬💭💬💭

ನನಗೇ ಸಿಗದಂತಾದ ನಾನು ಸಿಕ್ಕರೆ ನಿನ್ನಲ್ಲೇ ಸಿಗಬೇಕು...
ಕುರುಡು ಭಕ್ತಿ‌ಯ ಕಣ್ಣಿಗೆ ದೋಷ ಕಾಣಲ್ಲ - ಪೊರೆಯ ಕಣ್ಣಲ್ಲಿ ದೋಷಗಳೇ ಎಲ್ಲಾ...
ತಿರುಳಿಳಿಯದ, ಕರುಳರಿಯದ ಭಾವ ಕುಬ್ಜತೆಯಲಿ ಪಾಂಚಜನ್ಯ‌ದ ನೀತಿ, ತಾಂಡವ ರುದ್ರ‌ನ ಪ್ರೀತಿ; ವ್ಯರ್ಥ‌ವೇ ಇಲ್ಲೆಲ್ಲಾ...
____ ಪೂರ್ವಾಗ್ರಹ‌ಗಳಾಚೆಯ, ಪೂರ್ವಾಪರ ಚಿಂತನೆಯ ಸಮ ಚಿತ್ತ, ಸಮ ಪಿತ್ತ ಎನಗೊಗ್ಗುವುದೇ ಇಲ್ಲ...
💭💬💭💬💭

ಬೆಳುದಿಂಗಳ ನೆರಳೊಂದು ಈಗಷ್ಟೇ ಮೈದೆರೆದು ಕೊರಳ ತಬ್ಬಿ ಹೆಗಲಿಗೆ ಮೂಗುಜ್ಜಿತು - ಹೆರಳ ನೇವರಿಸಿ ಅನಾಮತ್ತು ಎದೆಯ ಮೇಲೆಳೆದುಕೊಂಡೆ...
ಇನ್ನೀಗ -
ಇರುಳಿಡೀ ಭರಪೂರ ಬೆಳದಿಂಗಳೂಟ...
___ ನನ್ನ ಕಪ್ಪು ಹುಡುಗಿ... 

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

ಗೊಂಚಲು - ಮುನ್ನೂರೆಂಬತ್ತೇಳು.....

ಉಗಾದಿ..... 

ಬೇವಿಗೂ ಹೊಸ ಚಿಗುರು
ಮಾವಿಗೂ ಹೊಸ ಚಿಗುರು
ನೋವು ನಲಿವನು ಸಮಪಾಕದಲಿ
ಕಾಂಬ ಬದುಕಿನ ರುಚಿ ಒಗರು ಒಗರು...
ಇಂತಾಗಿ,
ಬೆಲ್ಲ ಬೆರೆಸಿದ ನಗೆಯನೇ ತುಸು ಹೆಚ್ಚಾಗಿ ಹಡೆಯಲಿ
ವರುಷ ಹರುಷದ ಹಬ್ಬವೇ ಆಗಲೆಂಬ
ಮಧುರ ಸ್ವಾರ್ಥ‌ದ ಶುಭಾಶಯ..‌.
_____ ಯುಗಾದಿ...
                           ___02.04.2022
💟💟💟

ಚೂರು ತಿಳುವಳಿಕೆ ಮತ್ತು ಆರ್ದ್ರತೆ ಇದ್ದರೂ ಸಾಕು ನಿನ್ನನ್ನು ನೀನಾಗಿ ಒಪ್ಪಿ ಅಪ್ಪಿ ಪ್ರೀತಿಸಿಬಿಡಬಹುದು..‌.
ಆದರೋ,
ನೀ ಬಯಸುವಂತೆ ನಿನ್ನ ಹಪಹಪಿಗಳಿಗೆ ಕೊರಳೊಡ್ಡಿ ಪ್ರೀತಿಸುವುದಿದೆಯಲ್ಲ ಅದು ಕಷ್ಟ ಕಷ್ಟ...
____ ಪ್ರೀತಿ ಮತ್ತು ಪ್ರೀತಿಸಲ್ಪಡಬೇಕೆನುವ ಆಸೆ...
💟💟💟

ಸಿಕ್ಕಾಪಟ್ಟೆ ಒಳ್ಳೆಯವರ (?) ಜೊತೆ ಬದುಕು ಎಷ್ಟು ರಸಹೀನ ಮತ್ತು ಮಿತಿ ಮೀರಿದ ಏಕ ಸ್ವಾಮ್ಯ ಭಾವದವರ ಜೊತೆಯಲ್ಲಿ ಬದುಕು ಅಷ್ಟೇ ಹಿಂಸಾತ್ಮಕ 'ಅಂತೆ...‌'
____ ಬಂಧ, ಸಂಬಂಧ...
💟💟💟

ಬಂಧವೇ -
ತೀರಾ ಹತ್ತಿರ ಹತ್ತಿರ ಬಂದರೆ ಉಸಿರುಗಟ್ಟತ್ತೆ
ಅಷ್ಟು ದೂರ ಹೋಗಿ ನಿಂತರೆ ಕರುಳು ಕಿವುಚತ್ತೆ
ಇಲ್ಲಿ ಅಲ್ಲಿ ಎಲ್ಲೆಲ್ಲೂ ಕೂಗಳತೆಯ ದೂರದಲ್ಲಿದ್ದು ಪಹರೆ ಕಾಯಬೇಕು ನೀನು ನನ್ನ ಕಾವುಗಳ, ನಾನು ನಿನ್ನ ಭಾವಗಳ...
____ ಸುರಕ್ಷಿತ ಅಂತರವಷ್ಟೇ ಇರಲಿ...
💟💟💟

ಎದೆ ಬಿರಿ(ಗಿ)ಯೆ ನಕ್ಕ ನಗುವಿಗಿಂತ ಚಂದ ಬಣ್ಣ ಬೇರೆ ಕಂಡಿಲ್ಲ ನನಗಿನ್ನೂ...
ನೀ ಸಿಕ್ಕಾಗಲೆಲ್ಲಾ ಒಂದು ಹಿಡಿ ನಗೆಯ ಹಂಚಿಕೊಳ್ಳುವಷ್ಟು ಭಾವ ಸಿರಿತನ ಸದಾ ಕಾಯಲಿ ನನ್ನನ್ನು...
____ ಬಣ್ಣದ ಹಬ್ಬವಂತೆ... 💞
              ___18-03-2022
💟💟💟

ವತ್ಸಾ -
ನೆಲ ಅಗೆದು ಸತ್ತ ನಿನ್ನ ಹೆಣ ಹೂಳಲು ಊರೆಲ್ಲಾ ಸೇರೀತು...
ಆದರೋ,
ಎದೆ ಬಗೆದು ಕಸುವಿಲ್ಲದ ನಿನ್ನ ಭಾವ(ಕನಸು)ಗಳ ನೀನೇ ಹೂಳಿಕೊಳ್ಳಬೇಕು...
____ ಅಲ್ಲಿ ನೋವಿಲ್ಲ, ಆದರಿಲ್ಲಿ ನಗು ಆಯ್ಕೆ ಅಷ್ಟೇ ಅಲ್ಲ ಒಮ್ಮೊಮ್ಮೆ ಅವಶ್ಯಕತೆ ಕೂಡಾ...
💟💟💟

ಕತ್ತಲೇ -
ಎದೆಯಲ್ಲಿ ಇಲ್ಲದೇ ಹೋದುದನ್ನು ಹಾದಿಯಲ್ಲಿ ಹುಡುಕುತ್ತಾ ಹುಡುಕುತ್ತಾ ಕಳೆದು ಹೋಗಿದ್ದೇನೆ...
ಬೆಳಕ ಬೆನ್ನು ಹಿಡಿದು ಕಳೆದು ಹೋದವನನ್ನು ಹುಡುಕಿಕೊಡು ಒಮ್ಮೆ...
____ ಒಂದು ಹಿಡಿ ಮೌನ...
💟💟💟

ಕತ್ತಲೇ -
ಸತ್ಯವೆಂಬುದು ಅಷ್ಟಿಷ್ಟಾದರೂ ಸ್ವಚ್ಛಂದವಾಗಿ ಉಸಿರಾಡಿದರೆ ಅದು ನಿನ್ನುಡಿಯಲೇ ಇದ್ದೀತು...
ಬೆಳಕ ರಣ ಮಡಿಯಲೇನಿದ್ದರೂ ಅದರದು ಬಲು ಸಭ್ಯತೆ, ಪ್ರಜ್ಞಾಪೂರ್ವಕ ಮೌನವೇ ಜನಜನಿತ...
____ ಬಲು ರಸಿಕ ಸತ್ಯ...
💟💟💟

ಯಥಾವತ್ತು ಬಿಂಬ ತೋರುವ ಕನ್ನಡಿಗೂ ಮನಸಿನ ಹುಂಬ ನಡಿಗೆ ಕಾಣದಂಗೆ ನಗಬಲ್ಲವರು ನಾವು...
___ 'ನಾನು' ಕನ್ನಡಿಯೊಳಗಿನ ಗಂಟು...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Tuesday, January 25, 2022

ಗೊಂಚಲು - ಮುನ್ನೂರೆಂಬತ್ತಾರು.....

ಪ್ರಾಯ ಹನ್ನೊಂದು.....
(ಮಡಿಲ ಬುಟ್ಟಿಯ ತುಂಬಾ ಭಾವಾನುಭಾವದ ಜೀವಂತ ಹೂಗಳು... 😍 )

ಮೃದುಲ ಮೋಹವೇ -
"ತುಟಿಗೆ ತುಟಿ, ಕಟಿಗೆ ಕಟಿ..."
ಛಳಿ ಋತುವಿನ ರಸಿಕ ಶಾಸನವಾಗಬೇಕು... 
____ ವಿರಹದುರಿ/ಲಿ...
💬💭💬

ಕತ್ತಲ ದಾಂಟಲು ದೀಪವಾಗಬೇಕು - ಕತ್ತಲನೇ ಜೀವಿಸುವುದಾದರೆ ದೆವ್ವವೇ ಆಗಬೇಕು...
ಕತ್ತಲನು ಸುಡುವ ದೀಪ ಸಾಮರ್ಥ್ಯ, ಕತ್ತಲನೇ ಜೀರ್ಣಿಸಿಕೊಂಬ ನಿಶಾಚರ ವೀರ್ಯ ಎರಡೂ ಎನ್ನೆದೆಯ ಕೋಶದ ಪ್ರೀತಿಯ ಆವೇಶವಾಗಲಿ...
____ ವಿಕ್ಷಿಪ್ತ...
💬💭💬

ಹೆಣೆವ ಬೇಲಿಗೂ ಒಂದು ಬೇಲಿಯಿರಲಿ...
ಹಸಿರು ಹಾವೊಂದು ಬಯಲ ಕಥೆ ಹೇಳಲು ಒಳಗಿಣುಕುವಷ್ಟಾದರೂ ಕಿಂಡಿ ಇರಲಿ...
____ ಭಾವ ಬಂಧ ಸಂಬಂಧ ಮತ್ತು ನಡುವೆ ಒಡನಾಡೋ ಕನಸು...
💬💭💬

ನಿನ್ನ ಸೇರುವುದೆಂದರದು ನಿನ್ನ ಸೂರು ಸೇರುವುದಲ್ಲ,
ನಿನ್ನ ಸೇರುವುದೆಂದರೇ ಅದು ನೀನೇ ಆಗುವುದು...
ಇಲ್ಲಿನ ತೊರೆಯೊಂದು ಅಲ್ಲಿಗೋಡಿ ಶರಧಿ ಸೇರಿ ಕಡಲೇ ಆದ ಹಾಗೆ...
____ ಲೆಕ್ಕ ಕೂಡುವುದಲ್ಲ; ಚೊಕ್ಕ ಸೇರುವುದು...
💬💭💬

ಕೇಳು -
'ಎನ್ನಂಥಾ ಪರಮ ಸುಖಿ ಯಾರಿಲ್ಲ' ಅಂದುಕೊಂಡು ಸುಖದ ವ್ಯಾಖ್ಯಾನ‌ಗಳ ಮೂಲವನ್ನೇ ಆಡಿಕೊಂಡು ನಕ್ಕು ದಿನ ದೂಡುವುದೊಂದು ದಿವ್ಯ ಸುಖ ಇಲ್ಲಿ...
ಹೇಳು -
ಬದುಕಿಗೇ ಉದ್ದೇಶವೆಂಬುದಿಲ್ಲದವನ ಬದುಕಲ್ಲಿ ನೋವಿಗಾದರೂ ಅಸ್ತಿತ್ವ ಎಲ್ಲಿ...
ನೋಡು -
ನೋವಿಗೂ ನಲಿವಿಗೂ ನಗೆಯದೇ ಪರಿಪಾಕ ಅಲ್ಲಿ...
_____ ವಿಕ್ಷಿಪ್ತ...
💬💭💬

ನಗೆಯ ದೀಪವ ಆರಿಸಲೆಂಬಂತೆ ಆ ಉರಿಗೆ ಮೈಯ್ಯೊಡ್ಡಿ ರೆಕ್ಕೆ ಸುಟ್ಟುಕೊಂಡ ನೋವ ಪತಂಗಗಳೆಲ್ಲ ಚಿಮಣಿಯ ಬುಡದ ಕತ್ತಲಲಿ ಕಣ್ಣ ತೋಯಿಸಿಕೊಳ್ಳುತ್ತವೆ...
_____ ಕರುಣಾಳು ಕತ್ತಲು...
💬💭💬

ಮುಖವಾಡ ಕಳಚಿಟ್ಟೆ ನೋಡೂ - ಸಭ್ಯ ಜಗದ ನಾಟಕದಲ್ಲೀಗ ನಾನು ಅಸ್ಪೃಶ್ಯ...
💬💭💬

ಹಳೆಯದನ್ನು ಯಾರೂ ಕದಿಯಬಹುದು...
ನನಗಾಗಿ ಹೊಸದನ್ನು ಮಾತ್ರ ನಾನೇ ಕೊಳ್ಳಬೇಕು... 

ಹಾಗೆಂದೇ
ಹಾದಿ ಕವಲಾದಷ್ಟೂ ಪಯಣಕ್ಕೆ ಹೊಸತೇ ಹದ ಇಲ್ಲಿ...
ಆದರೂ, 
ಓಡುವ ಕಾಲನ ಅಂಡಿಗೆ ಬರೆಯಿಡಲು ನಗೆಯ (ಆಟ)ಆಡುವುದ, ನಲಿವನು ಹಾಡುವುದ ಮರೆತು ಕಾಲನ ಹಿಂದೆ ಓಡುವ ಮರುಳ ಜಗವೇ, ಹೆಸರನುಳಿಸಿ ಹೋಗುವ ಹಂಬಲವಿಲ್ಲದ ಎನ್ನಂಥ ತೀರಾ ಸಾಮಾನ್ಯ‌ನ ಎದೆಯ ಅಂಗಳದಲಿ ನಿಂತು ಶಾಂತ ನಿದ್ದೆಯ ಕದಡಿ ಕಾಡುವಂಥ ರುದ್ರ ರಮಣೀಯ ಕನಸುಗಳ ಮಾರಲು ಸುಖಾಸುಮ್ಮನೆ ಹೆಣಗಬೇಡವೇ…
ಅವನ ಪಾಡಿಗವನ ಬಿಟ್ಟು ಬಿಡು ಹಸುಳೆ ನಗುವ ಗೆದ್ದುಕೊಂಡು ತಣ್ಣಗೆ ಬಾಳ್ವೆ ಗೈಯ್ಯುವುದೂ ಜೀವ ಜಗದ ಚಂದಾನೆ ಹಾದಿಯೇ ಅಂದುಕೊಂಡವನ...

ಇಲ್ಲಿನ ಎಲ್ಲಾ ಎತ್ತರ‌ಗಳೂ ನಿಂತದ್ದು, ನಿಲ್ಲಬೇಕಾದ್ದು ಗಟ್ಟಿ ನೆಲಕಂಟಿಯೇ - ನೆಲ ಹೆಗಲು ಕೊಡದೇ ಎತ್ತರ‌ವನಾಳಲಾಗುವುದಿಲ್ಲ...

ಗದ್ದಲ ಮಾಡದೆ ಬದುಕಿ ಸದ್ದಿಲ್ಲದೆ ಸತ್ತು ಹೋದ ನಿರುಪದ್ರವಿಯ ಮಸಣ ಯಾತ್ರೆಯುದ್ದಕ್ಕೂ  ಬೀದಿ ನಾಯೊಂದು ಕರುಳ ಸಂಕಟದಿ ಊಳಿಟ್ಟರೆ ಆಶ್ಚರ್ಯ‌ಬೇಡ - ಅಂತಃಕರಣದ ಅರಿವು (ಪ್ರೀತಿ)ಅನ್ನ ಉಂಡವರಿಗಷ್ಟೇ ಅರಿವಾಗುವುದು...

ಇವೇ ಇಂಥವೇ
ಈ ತಿಕ್ಕಲು ಭಾವಗಳ ಬರವಣಿಗೆಯ ಮೆರವಣಿಗೆ ಉರವಣಿಗೆ ಹಿಡಿದುಕೊಟ್ಟ ಅಭಿಮಾನದ ನೋಟಗಳೇ ಎನ್ನೆದೆಯ ಬಾಗಿಲ ನಗೆಯ ದೀಪಗಳಾಗಿ ಮಿನುಗುತ್ತಾ ಬೆಚ್ಚಗಿಟ್ಟಿವೆ ಇಂದು ಈ ಬದುಕನು...
ನನ್ನ ಬರವಣಿಗೆ ಕೂಡಾ ಇಂದೀಗ ನನ್ನ ಒಂದು ಹುಚ್ಚು ಗೀಳು...
ಭಾವಗಳ ಸಹಜ ಝರಿ ಬತ್ತಿ ಎಷ್ಟೋ ಕಾಲ ಸಂದಮೇಲೂ ಬರೆಯುತ್ತಲೇ ಇದ್ದೇನಲ್ಲ, ಅಭ್ಯಾಸವಾಗಿ ಹೋದ ಬರವಣಿಗೆ ಬರೆಯದೇ ಇರಲಾಗದೆಂಬ ಭ್ರಮೆಯ ಹುಟ್ಟು ಹಾಕಿದೆಯಾ ಅನ್ನಿಸುತ್ತೆ ಒಮ್ಮೊಮ್ಮೆ...
ಇಷ್ಟಾಗಿಯೂ ಈ ಬರವಣಿಗೆ ತುಂಬಿ ತಂದ ಹಗುರತೆ, ನೇಹ ನಂಟುಗಳಿಂದ ದೂರ ನಿಲ್ಲಲಂತೂ ಆಗಲಿಕ್ಕಿಲ್ಲ...
ಹಾಗೆಂದೇ ಹನ್ನೊಂದು ಸುಧೀರ್ಘ ವರ್ಷಗಳ ಹಾಯ್ದು ಹನ್ನೆರಡನೆಯ ಪ್ರಾಯಕ್ಕೆ ಎದೆ ತೆರೆಯುತ್ತಿದೆ ಈ ನನ್ನ ಬ್ಲಾಗ್ ಎಂಬ ಭಾವ ಪೆಟ್ಟಿಗೆ...
ನಿಮ್ಮಗಳ ಅಕಾರಣ ಪ್ರೀತಿ ಮುಂದೆಯೂ ಬರೆಸೀತು...
ಇಲ್ಲಿ ನಾ ಚೆಲ್ಲಿದ ಭಾವಗಳ ಮೊಗೆದು ನಿಮ್ಮೆದೆಯ ಹಸಿ ನೆಲಕೆರೆದುಕೊಂಡಿರಿ...
ಗಟ್ಟಿ ಕಾಳಾಗಿ ನಿಮ್ಮೊಳಗೆ ಹೊಸ ಹಸಿರ ಸೂಸಿದವೆಷ್ಟೋ, ಜೊಳ್ಳಾಗಿ ತುಸು ಗೊಬ್ಬರವಾದವದೆಷ್ಟೋ...
ಲೆಕ್ಕ ಹಾಕುವ ಹುಂಬತನ ತೋರದೇ ನಿಮ್ಮ ನೇಹದ ಆದರವನಷ್ಟೇ ಬಾಚಿಟ್ಟುಕೊಂಡು ಬೆಚ್ಚಗಿದ್ದೇನೆ...
ಇಂತೆಯೇ -
ಪ್ರೀತಿಯಿಂದ ಪ್ರೀತಿಯ ಕಾಯ್ದುಕೊಳ್ಳುವಾ...
ಇದೇ ಅಭಿಮಾನದ ಪ್ರೀತಿ ಕಾಲನ ದಿನದರ್ಶಿಕೆಯ ಯಾವುದೋ ತೇದಿಯಲಿ ನಮ್ಮನು ಮುಖಾಮುಖಿ‌ಯಾಗಿಸೀತು - ಹಾಂಗೆ ಸಿಕ್ಕಾಗ ಅಕ್ಕರೆಯ ನಗುವೊಂದು ನಡುವೆ ಒಡನಾಡಿದರೆ ಈ ಭಾವಗೊಂಚಲು ಸಾರ್ಥಕ್ಯದ ತೀರ್ಥವ ಮಿಂದಂತೆ ಲೆಕ್ಕ...

ಹನ್ನೊಂದಕ್ಕೊಂದು ಶುಭಾಶಯ - ಎನ್ನ ಬೆನ್ನಿಗೆ ಎನ್ನದೇ ಮೊದಲ ಚಪ್ಪರಿಕೆ...

ನಿಮ್ಮ ಅಕಾರಣ ಪ್ರೀತಿಗೆ ಇಲ್ಲಿಂದಲೇ ಶಿರಸಾ ನಮಾಮಿ...
ಪ್ರೀತಿ ಕಾಯುತ್ತದೆ, ಕಾಯಲಿ ಸದಾ...
ಧನ್ಯವಾದ... ಲವ್ಯೂ ಆಲ್... 💞💞


*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)