Sunday, July 31, 2022

ಗೊಂಚಲು - ಮುನ್ನೂರೆಂಬತ್ತೊಂಭತ್ತು.....

ಅಮ್ಮನಳಿದ ಜೀವಗಳೆಲ್ಲಾ ಅನಾಥವೇ..... 

ಬದುಕು ನೀರಿನಂಥಾ ಭಾವದ ಗುರುವಾದರೆ,
ಸಾವು ನಿರ್ಭಾವದ ಮಹಾಗುರು...
____ ಎರಡರ ಅರಿವನ್ನೂ ಕೊಟ್ಟು ಸಲಹಿದ ಆಯಿ ಎನ್ನ ಜೀವಾಭಾವದ ದೇವಗುರು... 

ಬದುಕು ಕೈಬಿಟ್ಟಾಗಲೂ ಗಟ್ಟಿ ನಿಂತು ನಕ್ಕದ್ದಿದೆ, ಬಡಿದಾಡಿ ಗೆದ್ದದ್ದಿದೆ - ಇವಳು ಬೆನ್ನಿಗಿದ್ದಳಲ್ಲ...
ಅವಳೂ ಹೊರಟು ನಿಂತಾಗ ಬೆನ್ನ ಹುರಿಯಾಳದಲ್ಲಿನ ಅನಾಥ ಭಾವದ ನಿಶ್ಯಕ್ತಿಯ ಮೀರಿ ನಿಲ್ಲುವ ಶಕ್ತಿ‌ಯನೂ ಅವಳೇ ಆಶೀರ್ವದಿಸಬೇಕಲ್ಲ...

ಅವಳ ಬದುಕ ಭಾರ ಅವಳೇ ಹೊತ್ತು ಗೆದ್ದಳು - ನಾ ಅವಳ ಮೃತ ದೇಹ ಹೊತ್ತು ಸಮಾಧಾನಿಸಿಕೊಂಡೆ...

ಪ್ರೀತಿ ಕೊಡೋಕೆ ಸಾವಿರ ಜೀವಗಳು ಸಿಗಬಹುದು...
ಆದ್ರೆ
ಭಯವಿಲ್ಲದೆ ಕಿತ್ತಾಡೋಕೆ ಆಯಿಯಂತೋಳು ಮತ್ತೆ‌ಲ್ಲಿ ಸಿಕ್ಕಾಳು...

ಬದುಕಿನಷ್ಟೇ ಸ್ವಾಭಿಮಾನವ ಸಾವಲ್ಲೂ ಉಳಿಸಿಕೊಂಡು ಗತ್ತಿನಲ್ಲೇ ನಡೆದು ಹೋದಳು...
ಬದುಕಿನ ಯಾವ ಸೂತಕಗಳೂ ಅವಳ ಸೋಕುವುದಿಲ್ಲ ಇನ್ನು - ಸಾವು ಅವಳದ್ದು, ಶ್ರಾದ್ಧ ನನ್ನದು...

ಹಿಂದೆ ನೋಡದೆ ಹೊರಟಳು - ಹಿಂದೆ ಹೋಗುವ ಶಕ್ತಿ ಇಲ್ಲದವನು ಇಲ್ಲೇ ನಿಂತಿದ್ದೇನೆ...
ನಿಲ್ಲದ ಕಾಲ ಅದಾಗಿ ಇಂದಿಗೆ ಇಷ್ಟು ದಿನವೆಂದು ಲೆಕ್ಕ ತೋರುತ್ತದೆ...

ಇಲ್ಲಿ ಎಲ್ಲವೂ ಸುಳ್ಳೂ ಅನ್ನಿಸತ್ತೆ... 
ಈ ಬದುಕು, ಬವಣೆ, ನಗು, ನೋವು ಎಲ್ಲಾ ಅಂದರೆ ಎಲ್ಲಾ ಸುಳ್ಳೇ ಇರಬೇಕು... 
ಅವಳು ಉಸಿರು ಚೆಲ್ಲಿದ್ದು ಕೂಡಾ ಸುಳ್ಳೇ ಆಗಿದ್ದಿದ್ದರೆ...
ಅವಳ ಅಸ್ಥಿಗೆ ಬೆಂಕಿ ಇಟ್ಟ ಕೈಗಳ ನೋಡಿಕೊಳ್ಳುತ್ತೇನೆ... 
ನನ್ನ ಅಸ್ತಿತ್ವವೇ ಇನ್ನು ಸುಳ್ಳೂ ಅನ್ನಿಸತ್ತೆ...

ನಂಗಿಂತ ಮುಂಚೆ ಹೋಗಬೇಕಿತ್ತವಳಿಗೆ, ಹೊರಟಳು ಅಷ್ಟೇ...
ಬದುಕಲ್ಲಷ್ಟೇ ಅಲ್ಲ ಸಾವಲ್ಲೂ ಅವಳೇ ಗೆದ್ದಳು...
ಇನ್ನು,
ತಾ ಹೊರಟಲ್ಲಿಗೆ ಎನ್ನ ಅವಳೇ ಕರೆದುಕೊಳ್ಳಬೇಕು...
ದೇವರ ನಂಬದ ನಾನು ಅವಳನೇ ಬೇಡಬೇಕು...
____ಪ್ರಾರ್ಥನೆ...

ಬೆಂಕಿಗೆ ಅಷ್ಟೂ, ಗಾಳಿಗಿಷ್ಟು, ಮಣ್ಣಿಗಿನ್ನಷ್ಟು, ನೀರಲ್ಲಷ್ಟು, ಅನಂತಕ್ಕುಳಿದಷ್ಟು - 
ಹೀಗೆ
ಬಯಲಿಗೆ ಹಂಚುತ್ತಾ ಹಂಚುತ್ತಾ ಅವಳ ರೂಪ, ಗಂಧ, ಸಾಕಾರ ಆಕಾರದ ಗುರುತುಗಳ ಅಳಿಸುತ್ತಾ ಬಂದೆ...
ಎದೆಯ ಗೂಡಿನ ನೆನಪ ನಿತ್ಯಾಗ್ನಿಯಾಗಿ ಬೆಳೆಯುತ್ತಲೇ ಇದ್ದಾಳೆ...
ಕರುಳ ಬಳ್ಳಿ ಕತ್ತರಿಸಿ ಜಗಕೆ ಬಿಟ್ಟು ಕರುಳ ಮಮತೆಯಿಂದ ಎನ್ನ ಜಗವ ತೂಗಿದವಳ ದೇಹವ ಕರಗಿಸಿದಂಗೆ ಉಸಿರ ಹಬ್ಬಿ ನಿಂತ ಭಾವವ ಕರಗಿಸಲಾದೀತೇ...
ಅವಳ ಉಂಡು ತೇಗಿದ ಇದೇ ಪಂಚಭೂತಗಳು ಅವಳ ನೆನಪ ನೂಕುತ್ತಾವೆ ಎನ್ನೆಡೆಗೆ...
___ ಅಸ್ಥಿ ವಿಸರ್ಜನೆ...

ತಾನು ಶರಂಪರ ಬಡಿದಾಡಿ ಕಟ್ಟಿಕೊಂಡ ತನ್ನ ಬದುಕಿಗೆ ಅವಳು ಅವನ ಭಿಕ್ಷೆ ಎಂದು ಕೈಮುಗಿಯುತಿದ್ದಳು...
ಅವನು ಅನಾಯಾಸ ಎತ್ತಿ ಕೊಟ್ಟ ಸಾವಿಗೆ ನಾನು ಸುಖ ಮರಣ ಎಂದು ಶರಾ ಬರೆಯುತ್ತೇನೆ...
____ ಅವಳ(ಳೇ) ಭಗವಂತ...

ದಣಪೆಯಾಚೆಯ ಬಯಲಲ್ಲಿ ಉರಿದು ಹೋದ ಅವಳನ್ನು ಅಡುಗೆ ಮನೆಯ ನಸುಗತ್ತಲ ಮೂಲೆಯಲ್ಲಿ ಹುಡುಕುತ್ತೇನೆ...
ಗೋಡೆಗಂಟಿದ ಯಾವುದೋ ಮಶಿ ಕಲೆಯಲ್ಲಿ ಅವಳ ಕಿರುಬೆರಳ ಕನಸೊಂದು ಇನ್ನೂ ಉಸಿರಾಡುತಿರಬಹುದಾ...?!
____ ಕತ್ತಲೂ ಕಟ್ಟಿಕೊಡಲಾಗದ ಸಾಂತ್ವನ...

ಎಂದಿನಂತೆ ಬೆಳಗಾಗುತ್ತದೆ - ಅವಳ ನಗೆಯ ಬೆಳಕಿಲ್ಲ ಅಷ್ಟೇ...

ಈ ಊರು, ಆಷಾಡದ ಧೋss ಮಳೆ, ಅವಳ ವಿದಾಯದುಬ್ಬರದ ಮೌನ...
ಹೇಗಿದ್ದೀಯಾ ಶ್ರೀ...?
ನೋವೂ ನೋಯಿಸದಷ್ಟು ಗಟ್ಟಿಯಾಗಿ, ಅವಳ ನಿಂತ ಉಸಿರಿನಷ್ಟೇ ನಿರ್ಲಿಪ್ತ‌ವಾಗಿ.......ಹಾಯಾಗಿದ್ದೇನೆ......

"ಅಮ್ಮನಳಿದ ಜೀವಗಳೆಲ್ಲಾ ಅನಾಥವೇ..."

ಉಳಿದದ್ದು ಮಣ್ಣ ಮಡಿಲೊಂದೇ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

No comments:

Post a Comment