Saturday, July 2, 2016

ಗೊಂಚಲು - ನೂರಾ ತೊಂಬತ್ಮೂರು.....

ಕಂತು ಕಂತು ಕನವರಿಕೆಗಳು.....

ಕಂತು ಕಂತಾಗಿ ಎದೆಬಾಗಿಲ ಬಡಿದು ಕೈಸೇರುವ ಸಾವು - ಕುಂತುಂಡರೂ ಕಂತದ ತರಹೇವಾರಿ ಹಸಿವಿನ ಬದುಕು...
ಯಾವುದಕ್ಕಾಗಿ ನಗುವಿನೊತ್ತೆಯಿಡಲಿ...
***
ಪ್ರಶ್ನೆ ಪ್ರಶ್ನೆಗಳ ನಡುವಿನ ಮೌನ, ಉತ್ತರಗಳು ಹುಟ್ಟಿಸೋ ಮಾತಿನ ತತ್ತರ...
ಥತ್,
ಉತ್ತರದ ಹಿಂದಿನ ಪ್ರಶ್ನೆಯೇ ಹೊಸ ರೂಪದಲ್ಲಿ ಕಾಡುತ್ತದೆ ಉತ್ತರದ ಮುಂದೆ - ಎಲ್ಲಾ ಪ್ರಶ್ನೋತ್ತರಗಳ ಎಲ್ಲೆಗಳ ಮೀರಿದ ಬದುಕಿನೋಟ, ಸಾವಿನಾಟದ ಮಹಾನಾಟಕದಲ್ಲಿ...
***
ಹೇ ರುದ್ರ ಅಲೆಗಳೇ -
ಬರಸೆಳೆದು ಒಳತಳ್ಳಿ ಬಿಡಿ ಎನ್ನ ನಿಮ್ಮ ಗರ್ಭದ ಮೌನದಾಳಕೆ...
ಜಗದೆಲ್ಲ ತಂತುಗಳಾಚೆಯ ನಿಶ್ಚಿಂತ ನಿದ್ದೆಯಲಿ ಹಗುರಾಗುವ ಬಯಕೆ ಮನಕೆ...
***
ಸುಖೋನ್ಮಾದದುಸಿರಲ್ಲು ಅಂತಕನ ಜಾಡು - 
ಒಡೆದ ಕನಸಿನ ಗೂಡು - 
ಶುೃತಿ ತಪ್ಪಿದೀ ಬದುಕಿನೋಲಗದ ಹಾದಿಯ ಹಾಡು - 
ಎದೆಯ ಕುಹರದ ತುಂಬ ನಿಶ್ಯಬ್ಧದನುರಣನ...
***
ಜಡಿ ಮಳೆಯೊಂದಿಗೆ ಕಣ್ಣಿಂದ ಜಾರಿದ ಬಿಸಿ ಹನಿಯೂ ಎದೆಯ ತೋಯಿಸುತ್ತೆ - ಸುಡುವ ನೆನಪುಗಳು... 
ಬೊಗಸೆಯಲ್ಲಿನ ಆಲಿಕಲ್ಲು ತಣ್ಣಗೆ ಕೊರೆಯುತ್ತ ಕರಗುತ್ತೆ - ನಿಡುಸುಯ್ಯೋ ಕನಸುಗಳು...
ಯಮನೂರಿನ ಹಾದಿಯಲಿ ಸಂಕೋಚದಿ ಅರಳಿದ ಒಂಟಿ ಹೂವಿದು ಬದುಕು...
***
ಎದೆಯ ಸಂಚಿಯಿಂದೆತ್ತಿ ಮಡಚಿ ಕೈಗಿತ್ತ ಪ್ರೀತಿ ತಾಂಬೂಲ - ಸವಿದ ಕಣ್ಣಲ್ಲಿನ ನಗುವಿಗೀಗ ಬಲು ಗಾಢ ಬಣ್ಣ...
ಕಾಳಜಿ ಎಂಬೋ ಚಿಗುರು ಚಿಗುರು ವೀಳ್ಯದೆಲೆ, ನಂಗ್ನಂಗೇ ಅನ್ನೋ ಭಾವದ ಇಷ್ಟೇ ಇಷ್ಟು ಸುಣ್ಣ, ಎಷ್ಟೇ ಜಗಿದರೂ ಇಷ್ಟಾದರೂ ಶೇಷ ಉಳಿಯುವ ಮತ್ತು ಉಳಿಯಬೇಕಾದ ಗಟ್ಟಿ ನಂಬಿಕೆಯ ಅಡಿಕೆ, ಎರಡು ಕಾಳು ಏಲಕ್ಕಿಯಷ್ಟು ತುಂಟಾಟ, ಚೂರೇಚೂರು ಹುಸಿ ಕೋಪದ ಲವಂಗ, ಚಿಟಿಕೆಯಷ್ಟು ತುರಿದ ಕೊಬ್ಬರಿಯ ಹುಡಿ ಹುಡಿ ಮೌನ, ಹಿತ ತುಂಬುವಷ್ಟು ಮಾತಿನ ಸಕ್ಕರೆ ಎಲ್ಲ ಬೆರೆಸಿ ಎದೆಯ ಸಂಚಿಯಿಂದೆತ್ತಿ ಮಡಚಿ ಕೈಗಿತ್ತ ಪ್ರೀತಿ ತಾಂಬೂಲ - ಸವಿದ ಕಣ್ಣಲ್ಲಿನ ನಗುವಿಗೀಗ ಬಲು ಗಾಢ ಬಣ್ಣ...
ತುಸು ಆಸೆ ಬೆರೆತ ತಂಬಾಕಿನ ಕವಳ ರಸಿಕ ಪಟ್ಟಾಂಗದ ತುಂಟ ಸಂಜೆಗಳಿಗಿರಲಿ... 
ಬಾಳ ಜಗುಲಿಯ ಮಂಚದಲಿ ಬಂಧಗಳ ಸಂತೆಯೇ ಸೇರಲಿ - ಎನ್ನೆದೆಯ ಸಂಚಿ ಬರಡಾಗದಿರಲಿ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)