Thursday, December 13, 2012

ಗೊಂಚಲು - ಐವತ್ತು ಮತ್ತೈದು.....


ಗೊಂದಲದ ಹಾಡು.....

ನನ್ನ ಮನದ ಒಳನೋಟದಂತೆ ನನ್ನ ಕ್ಷಣಗಳು...

"ಕನಸ ಹಕ್ಕಿ ಹಾರುತಿದೆ" 
ಎಂಬ ನನ್ನದೇ ಸಾಲುಗಳು ಮನಸು ನಗುತಿದ್ದಾಗ - ಕನಸುಗಳಿಗೆ ರೆಕ್ಕೆ ಮೂಡಿ ಗಗನಗಾಮಿ ಎಂಬರ್ಥವನ್ನು ಮೂಡಿಸಿದರೆ,
ಮನಸು ಮಗುಚಿ ಬಿದ್ದಾಗ - ಕನಸುಗಳೆಲ್ಲ ನನ್ನ ತೊರೆದು ಹಾರಿ ಹೋಗುತಿವೆ ಎಂಬಂತೆ ಭಾಸವಾಗಿ ಇನ್ನಷ್ಟು ಖಿನ್ನವಾಗಿಸುತ್ತವೆ.

ಎಲ್ಲ ಸರಿಯಿದ್ದಾಗ ಸಣ್ಣ ಸೋಕುವಿಕೆಯೂ ಝೇಂಕಾರವೇ.
ಒಂದು ತಂತಿ ಹರಿದರೂ ಪ್ರತಿ ಸ್ವರವೂ ಅಪಸ್ವರವೇ.
ಬದುಕೂ ಹಾಗೆಯೇ...
ಅದೇ ವೀಣೆ, ಅದೇ ತಂತಿ...
ಮಿಡಿವ ರಾಗಗಳು ನೂರಾರು - ಹೊಮ್ಮಿಸುವ ಭಾವಗಳು ಸಾವಿರಾರು...
ಒಮ್ಮೆ ನಗೆಯ ಝೇಂಕಾರ - ಇನ್ನೊಮ್ಮೆ ನೋವ ಹೂಂಕಾರ...

ಕಾಯುತ್ತ ನಿಂತಾಗಲೆಲ್ಲ ನಾನು ಹೋಗಬೇಕಾದ ಬಸ್ಸೊಂದನ್ನುಳಿದು ಬೇರೆ ಬಸ್ಸುಗಳೆ ಜಾಸ್ತಿ ಬರುತ್ವೆ ಯಾವಾಗಲೂ ಅಥವಾ ನಂಗೇ ಹಂಗನ್ನಿಸುತ್ತಾ...

ಇನ್ನೂ ಏನೋ ಬೇಕಿದೆ ಎಂಬ ತುಡಿತದಲ್ಲೇ  ಬದುಕ ಈ ಕ್ಷಣ ನಗುತಿದೆ 
ಮತ್ತು
ಆ ತುಡಿತದಲ್ಲೇ ನಗಬೇಕಿದ್ದ ಬದುಕ ಹಲ ಕ್ಷಣಗಳು ನಲುಗಿದ್ದೂ ಇದೆ...
ನಿನ್ನೆ ಅದ್ಭುತವಾಗಿ ಕಂಡ ಕನಸು ಇಂದು ನನಸಾಗಿ ಕೈಸೇರಿದಾಗ ಕ್ಷುಲ್ಲಕ.
ನಿನ್ನೆ ಇದೇನು ಹೊಳೆಯಾ ಅಂತಂದು ಅಣಕಿಸಿ ನಾ ದಾಟಿ ಬಂದಿದ್ದ ಪುಟ್ಟ ತೊರೆ - ಇಂದು ಹೊಸ ಝರಿಗಳ ಒಳಗೊಂಡು ದೊಡ್ಡ ಹಳ್ಳವಾಗಿ ಬೆರಗು ಮೂಡಿಸಿ, ದಾಟಿ ಹೋಗದಂತೆ ತನ್ನ ಸುಳಿಗಳಲಿ ಎನ್ನ ಮುಳುಗೇಳಿಸುತ್ತೆ...

ಕಣ್ಣಿಂದ ಜಾರಿದ ಹನಿ -
ಕನಸೊಂದು ಅರ್ಧಕ್ಕೇ ಸತ್ತುಹೋದದ್ದಕ್ಕೆ ಶ್ರದ್ಧಾಂಜಲಿಯಾ ಅಥವಾ ಹೊಸಕನಸಿಗೆ ಬಾಗಿಲು ತೆರೆಯಬಹುದಾದ ಖುಷಿಗಾ ಎಂದರ್ಥವಾಗದೇ ಕಂಗಾಲಾಗ್ತೇನೆ...

ಗೊಂದಲಗಳ ತೆರೆಗಳ ಮೇಲೆ ಹೊಯ್ದಾಡುತಿದೆ ಜೀವನ ನೌಕೆ...
ಸದಾ ನನ್ನ ಕಾಡುವ ನನ್ನದೇ ಮನಸಿನ ಮಾಯೆಗಳಿಗೆ ಏನೆನ್ನಲಿ...

Wednesday, December 5, 2012

ಗೊಂಚಲು - ಐವತ್ನಾಕು.....

ಕ್ಷಮಿಸು.....
ಹೇಳಬಾರದ ಕೆಲವು ಸತ್ಯಗಳು ಹೀಗಿಲ್ಲಿ ಹೇಳಲ್ಪಟ್ಟಿವೆ..

ನೋವು ಕಾಡಲಿ, ನಗುವು ಹಾಡಲಿ, ನಾನಾದರೆ ಬರೆದು ನಿಸೂರಾಗುತ್ತೇನೆ.
ಯಾವುದ ಬರೆದರೂ ನಂಗೊಂದಿಷ್ಟು ಶಹಬ್ಬಾಶ್ಗಿರಿ ಸಿಗುತ್ತೆ. 
ಮುಖವೇ ಕಾಣದ 'ಮುಖಪುಟ'ದಲ್ಲಿ ನನ್ನ ನೋವಿಗೊಂದಿಷ್ಟು ಸಾಂತ್ವನ. 
ನಗುವಿಗೆ ಅವರೂ ಕಾರಣ...
ನೀನೇನು ಮಾಡ್ತೀಯ ಅಷ್ಟೈಶ್ವರ್ಯಗಳ ನಡುವೆಯೂ ಒಬ್ಬಂಟಿ ಜೀವಿ.
ಮಗನಿದ್ದೂ, ಮನೆಯಿದ್ದೂ ಜೊತೆಯಿಲ್ಲದ ಬದುಕು.
ಸುತ್ತ ಹಸಿರಿದ್ದರೇನು ನಗುವ ಗಾಳಿ ಬೆಳಕು ಮನೆಯ ಪಡಸಾಲೆಯಲಿ ಕುಣಿಯದಿದ್ದರೆ...
ಎಲ್ಲ ಇದ್ದೂ ನಿನಗಲ್ಲಿ ಉಪವಾಸ. 
ನಿನ್ನ ನೆನಪು ತೀವ್ರವಾದಾಗ ಹುಣ್ಣಿಮೆ ಚಂದಿರನೂ ನನ್ನೊಡನೊಮ್ಮೆ ಅಳುತ್ತಾನೆ. 
ಮಾರನೆ ಬೆಳಗು ಆ ನೋವೆಲ್ಲ ಅಕ್ಷರವಾಗುತ್ತೆ. 
ಅಲ್ಲಿಗೆ ನಾನು ಮತ್ತೆ ಎಂದಿನಂತೆ. 
ನನ್ನ ದುಡಿಮೆ, ನನ್ನ ರಿಕಗ್ನಿಷನ್, ನನ್ನ ಪದವಿ, ನನ್ನ ನಿತ್ಯದ ಒಡ್ಡೋಲಗದಲ್ಲಿ ನಾನು ಪರಮ ಬ್ಯೂಸಿ. 
ನಿನ್ನ ನೆನಪ ನೋವೂ ನನ್ನ ಬ್ಲಾಗ್ ನ ಹಲವು ಗೊಂಚಲುಗಳಲ್ಲಿ ಒಂದು. 
ಅಲ್ಲೆಲ್ಲಿಂದಲೋ ನೀನು ಫೋನಾಯಿಸಿ ಚೆನ್ನಾಗಿದೀನಿ ಅನ್ನುವ ನಿನ್ನ ಮಾತಲ್ಲಿ ಮತ್ತು ನೀನು ಚೆನ್ನಾಗೇ ಇದೀಯಾ ಅಂತ ನಾನು ನಂಬುವುದರಲ್ಲಿ; ಎರಡರಲ್ಲೂ ನಂಗೆ ನನ್ನ ಸುಖದ ಸ್ವಾರ್ಥವೇ ಕಾಣುತ್ತೆ.
ನಿನ್ನೆ ನಿನ್ನ ನೆನಪಲ್ಲಿ ಅತ್ತಿದ್ದು ನಾನೇನಾ ಮತ್ತು ಆ ಅಳು ಪ್ರಾಮಾಣಿಕವಾ ಎಂದು ಅನುಮಾನ ಇಂದು ನನಗೆ. 
ಇಂತಿಪ್ಪ ನಾನು ಇಲ್ಲಿ ತಿಂದುಂಡು, ತಿರುಗಿ ನನ್ನದೇ ಸುಖಗಳಲ್ಲಿ ಲೀನ. 
ನನ್ನ ಬೇರು ನೀನಲ್ಲಿ ಇಂಚಿಂಚಾಗಿ ಪ್ರಾಣ ಹೀನ. 
ನಾನು ಊರ ತೊರೆದ, ಪರವೂರಲ್ಲಿ ಮೆರೆದ ಸುದ್ದಿಗಳ ನಡುವೆ ನಡುಗುವ ನಿನ್ನ  ಮುಪ್ಪಿನ ಕೈಗಳ ಊರುಗೋಲು ಮುರಿದ ಸದ್ದು ಯಾರಿಗೂ ಕೇಳಲೇ ಇಲ್ಲ. 
ಹೆಜ್ಜೆ ಎತ್ತಿಡುವಾಗಲೆಲ್ಲ ಹೊರಬರುವ ನಿನ್ನ ನಿಟ್ಟುಸಿರು ನನ್ನ ತಾಕಲೇ ಇಲ್ಲ.
ತನ್ನ ನೋವನ್ನು ಹೇಳಿದರೆ ಎಲ್ಲಿ ನಾನು ನೊಂದುಕೊಳ್ತೀನೋ ಅಂತ ನಿನ್ನಲ್ಲೇ ಬಚ್ಚಿಟ್ಟುಕೊಂಡು ನೋವ ಹೀರಿ ಬದುಕುತಲಿರುವ ನೀನು ನಲಿವ ಕೊಲ್ಲುವ ಬದುಕಿಗೊಂದು ಸವಾಲು.
ಅಷ್ಟೆಲ್ಲ ನೋವುಗಳ, ಅವಮಾನಗಳ - ಹಂಚಿಕೊಳ್ಳದೇ, ಹರವಿಕೊಳ್ಳದೇ ನಿನ್ನಲ್ಲೇ ಹೀರಿಕೊಂಡು ಅದ್ಹೇಗೆ ನಗುತ್ತೀಯ.
ಅದ್ಯಾವ ಮೂಲದಲ್ಲಿ ಒಸರುತ್ತೆ ನಿನ್ನಲ್ಲಿ ಅಂತ ಪರಿ ಜೀವನ ಪ್ರೀತಿ. 
ನಿನ್ನದೇ ಮುಂದುವರಿಕೆ ನಾನು; ಆದರೆ ಕಂಗೆಡುತ್ತೇನೆ ಸಣ್ಣ ಅವಘಡಕ್ಕೂ.
ನಗುವಲ್ಲಿ ನೆನೆಯದೇ ನನ್ನ ನೋವಲ್ಲಿ ನಿನ್ನ ಮರೆಯದ ನನ್ನ ಕ್ರೌರ್ಯ ನನ್ನನ್ನೇ ಕಾಡುತ್ತದೆ ಆಗಾಗ; ಕಟುಕನ ಮನದ ಪಾಪಪ್ರಜ್ಞೆಯಂತೆ. 
ಎಲ್ಲ ತಿಳಿದೂ ಏನೂ ಮಾಡಲಾರದ ನನ್ನ ಅಸಹಾಯಕತೆ ಯಾವಾಗಲೂ ಅಣಕಿಸುತ್ತದೆ ನನ್ನ ಗಂಡೆಂಬ ಅಹಂಕಾರವ. 
ಹಸಿರ ಸಿರಿಯ ನಡುವೆ ನೀನಲ್ಲಿ ಒಂಟಿ. 
ಜನಜಾತ್ರೆಯ ನಡುವೆ ನಾನಿಲ್ಲಿ ಏಕಾಂಗಿ.
ಹೇಳಬಲ್ಲೆ ಇಷ್ಟನ್ನೇ - 
ಅಮ್ಮಾ ಕ್ಷಮಿಸಿಬಿಡು ಈ ನಿನ್ನ ಮಗನನ್ನು ಹಡೆದ ನಿನ್ನದೇ ತಪ್ಪಿಗೆ.

Saturday, December 1, 2012

ಗೊಂಚಲು - ಐವತ್ಮೂರು.....


'ಮಾಯಾ' ಜಾಲ.....

ಮೆಜೆಸ್ಟಿಕ್ಕಿನ ಜನ ಜಾತ್ರೆಯ ಜಂಗುಳಿ ನಡುವೆ 
ಸುಮ್ಮನೆ ಸಣ್ಣಗೆ ನಕ್ಕು ಮರೆಯಾಗುವ 
ಆ 
ಅರಳು ಕಂಗಳು...

ಹಳೆಯ ಯಾವುದೋ ಮಧುರ ನೆನಪೊಂದು
ಕೈಜಗ್ಗಿ
ಹೆಗಲು ತಬ್ಬಿ
ನೆತ್ತಿ ನೇವರಿಸಿ
ಹಣೆಯ ಮುದ್ದಿಸಿ 
ಇನ್ಯಾವುದೋ ಬೆಚ್ಚನೆ ಕನಸಿನ ಲೋಕಕ್ಕೆ ಒಯ್ದಂತೆ
ಯಾವುದೋ ಭಾವ ಲೋಕಕ್ಕೆ ನನ್ನ ಮನವ 
ಹೊತ್ತೊಯ್ಯುತ್ತವೆ...
ಕಂಡ ಪ್ರತಿ ಬಾರಿಯೂ...

ಮನವಾಗ 
ಸುರಿಯಲು
ಇಳೆಯ ಇಶಾರೆಗೆ ಕಾಯುತಿರುವ
ಮೋಡಗಟ್ಟಿದ ಬಾನು...

ಅವಳ ಕಣ್ಗಳ ಭಾವಗಳ ಓದಲು ಒದ್ದಾಡುತ್ತಾ
ಕಣ್ಗಳ ಒಡತಿಯ ಅಪರಿಚಿತತೆಯನ್ನು ಮರೆತು
ಹೊಸ ಕವನಕ್ಕೆ ಕಾವು ಕೊಟ್ಟ ಕವಿಯಂತೆ ನಲಿಯುತ್ತೇನೆ...

ಅವಳದೊಂದು ಕಿರುನಗೆಗೆ ಕಾಯುತ್ತ ಕಾಯುತ್ತ
ಹಸುಳೆಯ ಎಳೆ ದವಡೆಯಿಂದ ಕೆನ್ನೆ ಕಚ್ಚಿಸಿಕೊಂಡ
ಹಿತವಾದ ಯಾತನೆಯ ಖುಷಿಯ ಸವಿಯುತ್ತೇನೆ...

ಬಳುಕಿ ನಡೆವಾಗಿನ ಅವಳ ನೀಳವೇಣಿಯ ವೈಯಾರವ ಕಂಡು
ಒಂದು ಕ್ಷಣದ ಎನ್ನೆದೆಯ ಏರಿಳಿತ
ಪಕ್ಕ ಕುಳಿತ ಯಾರೋ ತಾತನ ಬೊಚ್ಚು ಬಾಯಲ್ಲಿ 
ಮುಗುಳ್ನಗೆಯಾಗಿ ತೋರುತ್ತದೆ...

ಅವಳೆದೆಯ ಗೊಂಚಲ ನಡುವೆ ಬೆಚ್ಚಗೆ
ಮೈಮರೆಯುವ ಆಸೆಗೆ
ಕನಸಲ್ಲೂ ಉಸಿರುಗಟ್ಟುತ್ತೇನೆ...

ನಕ್ಕೂ ನಗದಂತಿರುವ ಅವಳು
ಕುಡಿನೋಟಕ್ಕೂ ಚಡಪಡಿಸುವ ನಾನು
ಎನ್ನ ಮನದಿ ಕುಣಿದಾಡುವ ಭಾವ
ಅದು
ಬರೀ ಮೋಹವೋ
ಪ್ರೇಮವೋ - ಕಾಮವೋ
ಇವೆಲ್ಲ ಸೇರಿದ ಇನ್ಯಾವುದೋ
ಏನೆಂದು ಅರ್ಥೈಸಿಕೊಳ್ಳಲಾಗದೇ
ಹೊರಚೆಲ್ಲುವ ಭಾವಗಳ ಹಿಡಿದಿಟ್ಟುಕೊಳ್ಳಲು ಒದ್ದಾಡುತ್ತಾ
ಒಂದಿಷ್ಟು ಪುಳಕಗಳೊಂದಿಗೆ
ಕಾಲ ತಳ್ಳುತ್ತಿದ್ದೇನೆ...
ಹಾಗೇ ಸುಮ್ಮನೆ...

ಒಂದಂತೂ ಸತ್ಯ...
ಮನಸನ್ನು ಅವಳ ಉಡಿಯಲ್ಲಿ ಅಡವಿಟ್ಟು ಬಹುಕಾಲ ಸಂದು ಹೋಯಿತು...
ಬಿಡಿಸಿಕೊಳ್ಳುವ ಪರಿಯ ತಿಳಿಯದೇ ಬುದ್ಧಿ ಕಂಗಾಲು ಕಂಗಾಲು...
ಬಿಟ್ಟೇನೆಂದರೂ ಬಿಡದೀ ಮನಕೆ ಕವಿದ ಮರುಳ 
'ಮಾಯೆ...'