Wednesday, December 5, 2012

ಗೊಂಚಲು - ಐವತ್ನಾಕು.....

ಕ್ಷಮಿಸು.....
ಹೇಳಬಾರದ ಕೆಲವು ಸತ್ಯಗಳು ಹೀಗಿಲ್ಲಿ ಹೇಳಲ್ಪಟ್ಟಿವೆ..

ನೋವು ಕಾಡಲಿ, ನಗುವು ಹಾಡಲಿ, ನಾನಾದರೆ ಬರೆದು ನಿಸೂರಾಗುತ್ತೇನೆ.
ಯಾವುದ ಬರೆದರೂ ನಂಗೊಂದಿಷ್ಟು ಶಹಬ್ಬಾಶ್ಗಿರಿ ಸಿಗುತ್ತೆ. 
ಮುಖವೇ ಕಾಣದ 'ಮುಖಪುಟ'ದಲ್ಲಿ ನನ್ನ ನೋವಿಗೊಂದಿಷ್ಟು ಸಾಂತ್ವನ. 
ನಗುವಿಗೆ ಅವರೂ ಕಾರಣ...
ನೀನೇನು ಮಾಡ್ತೀಯ ಅಷ್ಟೈಶ್ವರ್ಯಗಳ ನಡುವೆಯೂ ಒಬ್ಬಂಟಿ ಜೀವಿ.
ಮಗನಿದ್ದೂ, ಮನೆಯಿದ್ದೂ ಜೊತೆಯಿಲ್ಲದ ಬದುಕು.
ಸುತ್ತ ಹಸಿರಿದ್ದರೇನು ನಗುವ ಗಾಳಿ ಬೆಳಕು ಮನೆಯ ಪಡಸಾಲೆಯಲಿ ಕುಣಿಯದಿದ್ದರೆ...
ಎಲ್ಲ ಇದ್ದೂ ನಿನಗಲ್ಲಿ ಉಪವಾಸ. 
ನಿನ್ನ ನೆನಪು ತೀವ್ರವಾದಾಗ ಹುಣ್ಣಿಮೆ ಚಂದಿರನೂ ನನ್ನೊಡನೊಮ್ಮೆ ಅಳುತ್ತಾನೆ. 
ಮಾರನೆ ಬೆಳಗು ಆ ನೋವೆಲ್ಲ ಅಕ್ಷರವಾಗುತ್ತೆ. 
ಅಲ್ಲಿಗೆ ನಾನು ಮತ್ತೆ ಎಂದಿನಂತೆ. 
ನನ್ನ ದುಡಿಮೆ, ನನ್ನ ರಿಕಗ್ನಿಷನ್, ನನ್ನ ಪದವಿ, ನನ್ನ ನಿತ್ಯದ ಒಡ್ಡೋಲಗದಲ್ಲಿ ನಾನು ಪರಮ ಬ್ಯೂಸಿ. 
ನಿನ್ನ ನೆನಪ ನೋವೂ ನನ್ನ ಬ್ಲಾಗ್ ನ ಹಲವು ಗೊಂಚಲುಗಳಲ್ಲಿ ಒಂದು. 
ಅಲ್ಲೆಲ್ಲಿಂದಲೋ ನೀನು ಫೋನಾಯಿಸಿ ಚೆನ್ನಾಗಿದೀನಿ ಅನ್ನುವ ನಿನ್ನ ಮಾತಲ್ಲಿ ಮತ್ತು ನೀನು ಚೆನ್ನಾಗೇ ಇದೀಯಾ ಅಂತ ನಾನು ನಂಬುವುದರಲ್ಲಿ; ಎರಡರಲ್ಲೂ ನಂಗೆ ನನ್ನ ಸುಖದ ಸ್ವಾರ್ಥವೇ ಕಾಣುತ್ತೆ.
ನಿನ್ನೆ ನಿನ್ನ ನೆನಪಲ್ಲಿ ಅತ್ತಿದ್ದು ನಾನೇನಾ ಮತ್ತು ಆ ಅಳು ಪ್ರಾಮಾಣಿಕವಾ ಎಂದು ಅನುಮಾನ ಇಂದು ನನಗೆ. 
ಇಂತಿಪ್ಪ ನಾನು ಇಲ್ಲಿ ತಿಂದುಂಡು, ತಿರುಗಿ ನನ್ನದೇ ಸುಖಗಳಲ್ಲಿ ಲೀನ. 
ನನ್ನ ಬೇರು ನೀನಲ್ಲಿ ಇಂಚಿಂಚಾಗಿ ಪ್ರಾಣ ಹೀನ. 
ನಾನು ಊರ ತೊರೆದ, ಪರವೂರಲ್ಲಿ ಮೆರೆದ ಸುದ್ದಿಗಳ ನಡುವೆ ನಡುಗುವ ನಿನ್ನ  ಮುಪ್ಪಿನ ಕೈಗಳ ಊರುಗೋಲು ಮುರಿದ ಸದ್ದು ಯಾರಿಗೂ ಕೇಳಲೇ ಇಲ್ಲ. 
ಹೆಜ್ಜೆ ಎತ್ತಿಡುವಾಗಲೆಲ್ಲ ಹೊರಬರುವ ನಿನ್ನ ನಿಟ್ಟುಸಿರು ನನ್ನ ತಾಕಲೇ ಇಲ್ಲ.
ತನ್ನ ನೋವನ್ನು ಹೇಳಿದರೆ ಎಲ್ಲಿ ನಾನು ನೊಂದುಕೊಳ್ತೀನೋ ಅಂತ ನಿನ್ನಲ್ಲೇ ಬಚ್ಚಿಟ್ಟುಕೊಂಡು ನೋವ ಹೀರಿ ಬದುಕುತಲಿರುವ ನೀನು ನಲಿವ ಕೊಲ್ಲುವ ಬದುಕಿಗೊಂದು ಸವಾಲು.
ಅಷ್ಟೆಲ್ಲ ನೋವುಗಳ, ಅವಮಾನಗಳ - ಹಂಚಿಕೊಳ್ಳದೇ, ಹರವಿಕೊಳ್ಳದೇ ನಿನ್ನಲ್ಲೇ ಹೀರಿಕೊಂಡು ಅದ್ಹೇಗೆ ನಗುತ್ತೀಯ.
ಅದ್ಯಾವ ಮೂಲದಲ್ಲಿ ಒಸರುತ್ತೆ ನಿನ್ನಲ್ಲಿ ಅಂತ ಪರಿ ಜೀವನ ಪ್ರೀತಿ. 
ನಿನ್ನದೇ ಮುಂದುವರಿಕೆ ನಾನು; ಆದರೆ ಕಂಗೆಡುತ್ತೇನೆ ಸಣ್ಣ ಅವಘಡಕ್ಕೂ.
ನಗುವಲ್ಲಿ ನೆನೆಯದೇ ನನ್ನ ನೋವಲ್ಲಿ ನಿನ್ನ ಮರೆಯದ ನನ್ನ ಕ್ರೌರ್ಯ ನನ್ನನ್ನೇ ಕಾಡುತ್ತದೆ ಆಗಾಗ; ಕಟುಕನ ಮನದ ಪಾಪಪ್ರಜ್ಞೆಯಂತೆ. 
ಎಲ್ಲ ತಿಳಿದೂ ಏನೂ ಮಾಡಲಾರದ ನನ್ನ ಅಸಹಾಯಕತೆ ಯಾವಾಗಲೂ ಅಣಕಿಸುತ್ತದೆ ನನ್ನ ಗಂಡೆಂಬ ಅಹಂಕಾರವ. 
ಹಸಿರ ಸಿರಿಯ ನಡುವೆ ನೀನಲ್ಲಿ ಒಂಟಿ. 
ಜನಜಾತ್ರೆಯ ನಡುವೆ ನಾನಿಲ್ಲಿ ಏಕಾಂಗಿ.
ಹೇಳಬಲ್ಲೆ ಇಷ್ಟನ್ನೇ - 
ಅಮ್ಮಾ ಕ್ಷಮಿಸಿಬಿಡು ಈ ನಿನ್ನ ಮಗನನ್ನು ಹಡೆದ ನಿನ್ನದೇ ತಪ್ಪಿಗೆ.

8 comments:

  1. ಹಸಿರ ಸಿರಿಯ ನಡುವೆ ನೀನಲ್ಲಿ ಒಂಟಿ.
    ಜನಜಾತ್ರೆಯ ನಡುವೆ ನಾನಿಲ್ಲಿ ಏಕಾಂಗಿ.

    ಅಮಿತವಾದ ಮಾತೃ ಪ್ರೇಮ ವ್ಯಕ್ತವಾದ ಸಾಲುಗಳು. ಬಹು ಬೇಗ ಆಕೆಯೂ ನಿಮ್ಮೊಡನೆ ನೆಲಸುವಂತಾಗಲಿ.

    ReplyDelete
  2. ತಾಯಿಯ ಪ್ರೀತಿಯ ಮುಂದೆ ಎಲ್ಲವೂ ಶೂನ್ಯ..ತಾನು ಹೇಗೇ ಇರಲಿ ಮಕ್ಕಳು ಚೆನ್ನಾಗಿರಲೆಂಬ ನಿಸ್ವಾರ್ಥತೆ..
    ಪ್ರತೀಕ್ಷಣವೂ ಶುಭ ಹಾರೈಸುವ ಕರುಣಾಮಯಿ..
    ಆ ದೇವರ ಅದ್ಭುತ ಸೃಷ್ಟಿ ಅಮ್ಮ

    ReplyDelete
  3. ಇಲ್ಲಿ ತಿಂದುಂಡು, ತಿರುಗಿ ನನ್ನದೇ ಸುಖಗಳಲ್ಲಿ ಲೀನ.
    ನನ್ನ ಬೇರು ನೀನಲ್ಲಿ ಇಂಚಿಂಚಾಗಿ ಪ್ರಾಣ ಹೀನ.

    ಕೆಲವು ಅದ್ಭುತ ಸಾಲುಗಳಿಗೆ ಹೋಲಿಕೆ ಕೊಡಹೋದರೆ
    ಮೂರ್ಖತನವಾಗುತ್ತೆ.......
    ಅನುಭವಿಸಿದಾಗ ಮಾತ್ರ ಹುಟ್ಟುಕೊಳ್ಳೋ ಭಾವನೆಗಳ ಸಾಲುಗಳೇನೋ...
    ಕೆದಕಿದರೆ ಸಾವಿರ ಸಾವಿರ ಭಾವಗಳ ಗೊಂಚಲು ಸಿಕ್ಕೀತು.....

    ಭಾವ ಹೀನರಗೂ ಭಾವನೆ ಹುಟ್ಟಿಸುವಂತಹ ಸಾಲುಗಳು.....

    ಈ ವಿಷಯಕ್ಕೆ ಬಂದರೆ ಕೇವಲ ಶಬ್ಧಗಳ ಅಲಂಕಾರಕ್ಕೆ ಮಾತ್ರ ವ್ಹಾ!!! ಎನ್ನುವ
    ಸ್ಥಿತಿ ನನ್ನದಲ್ಲ....

    ReplyDelete
  4. ಅದ್ಯಾವ ಮೂಲದಲ್ಲಿ ಒಸರುತ್ತೆ ನಿನ್ನಲ್ಲಿ ಅಂತ ಪರಿ ಜೀವನ ಪ್ರೀತಿ.

    ನಂಗೆ ಇಷ್ಟವಾದ ಸಾಲು ಶ್ರೀವತ್ಸ... :)

    ReplyDelete
  5. ಮೊದಲ ಬಾರಿಗೆ ನಿಮ್ಮ ಪುಟಕ್ಕೆ ಬಂದೆ..ತುಂಬಾ ಚೆನ್ನಾಗಿದೆ..ಬರಹವನ್ನು ನಿರೂಪಿಸಿದ ಶೈಲಿ ಇಷ್ಟವಾಯ್ತು.... ಆ ಭಾವಭರಿತ ಸಾಲುಗಳು ಮತ್ತೆ ಮತ್ತೆ ಓದಿಸಿಕೊಳ್ಳುತ್ತಿವೆ...
    ಬರೆಯುತ್ತಿರಿ...
    ನಮಸ್ತೆ

    ReplyDelete
  6. ಪ್ರೀತಿ ಮಮಕಾರಗಳೇ ಹಾಗೆ ಅನಿಸುತ್ತೆ ಅಳಿಸಿ ನಗಿಸುತ್ತಿರುತ್ತವೆ. ಚೆನ್ನಾಗಿದೆ ಬರೆಯುತ್ತಿರಿ...

    ReplyDelete
  7. ಅವರಲ್ಲಿ ಚೆನ್ನಾಗಿದ್ದೇನೆಂದು ಹೇಳಿದರೂ ನೀನದನ್ನು ನಂಬುತ್ತೀಯಾ? ಅವರಲ್ಲಿ ನಂಬುತ್ತಾರಾ..? ಆದರೂ ಯಾಕೆ ಪರಸ್ಪರ ನಗುವಿನ ತೋರಿಕೆಗಳು? ಇಷ್ಟಕ್ಕೂ ತೋರಿಕೆಗಳು ಅಂತರಾತ್ಮನಲ್ಲಿ ನಗುವ ಬಿತ್ತುವಂತಿದ್ದರೆ ಒಪ್ಪಬಹುದಿತ್ತು.

    ReplyDelete
  8. "ನಾನು ಊರ ತೊರೆದ, ಪರವೂರಲ್ಲಿ ಮೆರೆದ ಸುದ್ದಿಗಳ ನಡುವೆ ನಡುಗುವ ನಿನ್ನ ಮುಪ್ಪಿನ ಕೈಗಳ ಊರುಗೋಲು ಮುರಿದ ಸದ್ದು ಯಾರಿಗೂ ಕೇಳಲೇ ಇಲ್ಲ. "ADBHUTA SAALUGALU...!!!

    ReplyDelete