Thursday, March 28, 2013

ಗೊಂಚಲು - ಅರವತ್ತು ಮತ್ತು ಏಳು.....


ನಾಕು ಪ್ರಶ್ನೆ - ಹಗುರಾಗೋ ಮಾತು...

ನೀನೇನೋ ಎಂಬುದು ಅವಳ ಪ್ರಶ್ನೆ...

ನನ್ನ ಮನದಂತೆ ನಾನು...ಒಂದಷ್ಟು 'ನಾನು'ಗಳ ಪ್ರೀತಿಸುತ್ತಾ - ಪ್ರೀತಿಯೆದುರು ಇಷ್ಟಿಷ್ಟೇ 'ನಾನೆಂಬುದ' ಕಳಚಿಕೊಳ್ಳುತ್ತಾ - ಪೂರ್ಣತ್ವವ ಬಯಸದೇ ಅಪೂರ್ಣತೆಯಲ್ಲೇ ಸೊಬಗಿದೆಯೆಂದು ನಂಬುತ್ತಾ - ಕ್ಷಣ ಕ್ಷಣಕೂ ಅದಲು ಬದಲಾಗುವ ನನ್ನೊಳಗಿನ ನನ್ನದೇ ಭಾವಗಳಿಗೆ ಬೆಚ್ಚಿಬೀಳುತ್ತಾ - ಪರೀಕ್ಷೆ ನಡೆಸಿ ನಂತರ ಪಾಠ ಹೇಳೋ ಅನುಭವದ ನೆಲೆಯ ಬದುಕಿನ ಕಲಿಕಾ ವಿಧಾನದೆಡೆಗೆ ಒಮ್ಮಲೇ ಬೆರಗು ಮತ್ತು ಆತಂಕದಿಂದ ನೋಡುತ್ತಾ - ಬದುಕು ಹೇಳುವ ಪಾಠಗಳ ಅರ್ಥೈಸಿಕೊಳ್ಳಲಾಗದೇ - ಬದುಕಿಗೆ ಬೆನ್ನು ತಿರುಗಿಸಲೂ ಇಷ್ಟವಾಗದೇ - ಈ ಎಲ್ಲ ತೊಳಲಾಟಗಳು - ಬುದ್ಧಿ ಹುಟ್ಟು ಹಾಕೋ ದ್ವಂದ್ವಗಳು - ಅವೆಲ್ಲವುಗಳ ನಡುವೆ ಮನದ ಸನ್ನಿಧಿಯಲ್ಲಿ ಮೂಡುವ ಮಧುರ ಭಾವಗಳು - ಇವುಗಳನೆಲ್ಲ ಒಳಗೊಂಡು ನಗುತಿರುವ ಬದುಕೆಂಬ ಪಾಠ ಶಾಲೆಯ ಅತಿದಡ್ಡ ವಿದ್ಯಾರ್ಥಿ ನಾನು...



ನಿನ್ನ ಬರಹ ಎಂದರೇನೋ ಎಂಬುದು ಇನ್ನೊಂದು ಪ್ರಶ್ನೆ...

ನನ್ನೊಳಗಣ ಭಾವ ಮತ್ತು ನನ್ನ ಬದುಕು ಅದು ನನ್ನ ಬರಹ...
ಮನದ ಭಾವ ಶಬ್ದವಾಗಿ ಆಚೆ ಬಂದಾಗಲೂ ಅದು ನನ್ನದೇ ಭಾವ ಎಂದು ನನಗೆ ಪ್ರಾಮಾಣಿಕವಾಗಿ ಅನ್ನಿಸಿದ ಕ್ಷಣ ನಾನು ಸಂಭ್ರಮಿಸುತ್ತೇನೆ.
ಪ್ರತೀ ಕ್ಷಣವ ಹಾಗೇ ಬದುಕಬೇಕೆಂದು ಪ್ರಯತ್ನಿಸುತ್ತೇನೆ.
ಒಮ್ಮೊಮ್ಮೆ ಸೋಲುತ್ತೇನೆ...:(
ನಾ ಬರೆದ ಯಾವುದೇ ಬರಹ ಬರೆದಾದ ಆ ಕ್ಷಣ ನನ್ನಲ್ಲಿ ಒಂದು ಸಂತೃಪ್ತ ಭಾವ ಅಥವಾ ಏನನ್ನೋ ಇಳುಕಿ ಹಗುರಾದ ಭಾವವನ್ನು ಮೂಡಿಸುತ್ತಲ್ಲ ಆ ಖುಷಿಯೇ ಅಂತಿಮ...ಆ ಬರಹಾನ ಓದಿದವರೂ ಇಷ್ಟಪಟ್ಟರೆ ಅದು ಬೋನಸ್ ಖುಷಿ...ಬೋನಸ್ ಗಾಗಿಯೇ ಬರೆಯುವುದಿನ್ನೂ ರೂಢಿಯಾಗಿಲ್ಲ...(ಬೋನಸ್ ಗಾಗಿ ಬರೆಯ ಯತ್ನಿಸಿದಾಗ ನಂಗೆ ಪೂರ್ತಿ ಖುಷಿ ದಕ್ಕಿಲ್ಲ) ಒಮ್ಮೊಮ್ಮೆ ಇನ್ಯಾರದೋ ಭಾವ ಅದು ನನ್ನದೂ ಭಾವವೇ ಅಂತನ್ನಿಸಿದಾಗ ಅದಕ್ಕೆ ಅಕ್ಷರ ರೂಪ ಕೊಡಲು ಪ್ರಯತ್ನಿಸಿಯೇನು...ನನ್ನ ಬರಹ ಸಹಜವಾಗಿಯೇ ನನ್ನನ್ನು ಇನ್ನಷ್ಟು ವಿಸ್ತಾರವಾಗಿಸುತ್ತಾ, ಬೆಳೆಸುತ್ತಾ, ನನ್ನೊಳಗನ್ನು ಬೆಳಗಿಸುತ್ತಾ ಸಾಗುತ್ತದೆಂಬುದು ನನ್ನ ಪ್ರಾಮಾಣಿಕ ನಂಬಿಕೆ...ಬೆಳವಣಿಗೆ ಹೊರತೋರದೆ ಇದ್ದೀತು ಆದರೆ ನನ್ನೊಳಗದು ಇದ್ದೇ ಇದ್ದೀತು...
ನಿಜ ಒಪ್ಪುತ್ತೇನೆ ತೀರ ನಮ್ಮ ಹತ್ತಿರದವರು, ಪ್ರಜ್ಞಾವಂತರೂ ಆಗಿರುವವರು ಒಂದು ಮಾತು ಹೇಳಿದಾಗ ನಾವು ನಮ್ಮನ್ನು ವಿಮರ್ಶಿಸಿಕೊಳ್ಳಬೇಕಾದ್ದು ಅಗತ್ಯವೇ...ಆದರೂ ಯಾವುದೇ ಬರಹಗಾರನ ಎಲ್ಲಾ ಬರಹಗಳೂ ಅತ್ಯುತ್ತಮವಾಗಿಯೇ ಇರಲು ಮತ್ತು ಎಲ್ಲರಿಗೂ ಖುಷಿಯ ನೀಡಲು ಸಾಧ್ಯವಿಲ್ಲ ಎಂಬುದನ್ನೂ ಮರೆಯಲಾಗದಲ್ಲವಾ...
ನಮ್ಮ ಯಾವುದೋ ಬರಹದ ಯಾವುದೋ ನಾಕು ಸಾಲು ಯಾರೋ ಓದುಗನಿಗೆ ಒಂದು ಹೊಸ ಯೋಚನೆ, ಹೊಸ ಖುಷಿ, ಈ ಭಾವ ತನ್ನದೆನ್ನುವಂಥ ಭಾವವನ್ನು ಮೂಡಿಸಿದರೆ ಅಲ್ಲಿಗೆ ಬರಹಗಾರನ ಬರಹಕ್ಕೆ ಸಾರ್ಥಕ್ಯ ದಕ್ಕಿದಂತೆಯೇ ಎಂಬುದು ನನ್ನ ಅನಿಸಿಕೆ...
ನಮ್ಮ ಬರಹ ಅಂದರೆ ಅದು ನಮ್ಮ ಭಾವ...ಅದು ಓದುಗರ ಭಾವವೂ ಆಗಿ ನಲಿದರೆ ಆಗ ಬರಹಗಾರನ ಖುಷಿಯ ವಿಸ್ತಾರ...ಆ ಖುಷಿಯ ವಿಸ್ತಾರಕ್ಕಾಗಿ ಶ್ರಮವಹಿಸುವುದಾದರೆ ಪ್ರಜ್ಞಾವಂತ ಓದುಗರ ಅಭಿಪ್ರಾಯಗಳನ್ನು ಅನುಸರಿಸುವುದರಲ್ಲಿ ತಪ್ಪಿಲ್ಲ...ಅದು ನಮ್ಮ ಬರಹದ ನಮ್ಮದೇ ಶೈಲಿಗೆ, ನಮ್ಮೊಳಗಿನ ಮೂಲ ಸೆಲೆಗೆ ಧಕ್ಕೆಯಾಗದಿದ್ದಲ್ಲಿ ಮಾತ್ರ...


ಬಯಲಲ್ಲಿ ಪೂರ್ತಿ ಬೆತ್ತಲಾಗಿ ಹೋಗ್ತೀಯಾ ಎಂಬುದು ಆತಂಕಭರಿತ ಪ್ರಶ್ನೆ...

ಅರೆಬರೆಯಾಗಿ ಕಾಡುವುದಕಿಂತ ಪೂರ್ತಿ ಕಳಚಿ ಹಗುರಾಗುವುದು ಸುಲಭ ನಂಗೆ...
ಬರುವಾಗ ತಂದದ್ದು ಅಳುವೊಂದೇ...ಹೋಗುವಾಗ ನಾಕು ಕಂಗಳಲಿ ಎರಡು ಹನಿಗಳನುಳಿದು ಬೇರೇನನೂ ಉಳಿಸಿ ಹೋಗುವ ಹಂಬಲವಿಲ್ಲ...ಈ ನಡುವೆ ಮುಚ್ಚಿಟ್ಟು ಬಚ್ಚಿಟ್ಟು ಸಾಧಿಸುವುದೇನಿದೆ ಎಂಬುದೆನ್ನ ಮನದ ಪ್ರಶ್ನೆ...


ಹಾಗಲ್ಲವೋ ಕೆಲವು ನೋವುಗಳನ್ನಾದ್ರೂ ಮುಚ್ಚಿಡಬೇಕು...ನಮ್ಮ ಮೌನದೊಂದಿಗೆ ಕೊಂಡೊಯ್ಯಬೇಕು...ಹಾಗೆಲ್ಲ ಹೇಳುವುದಲ್ಲ...ಅಷ್ಟಕ್ಕೂ ನಿನ್ನ ನೋವಿಂದ ಯಾರಿಗೇನಾಗಬೇಕಿದೆ...?? ಬಯಲಲ್ಲಿ ಬೆತ್ತಲಾಗಿ ಸಾಧಿಸೋದೇನಿದೆ...???

ಒಂದು ಕ್ಷಣ ಮನಸು ತಡಬಡಾಯಿಸಿದ್ದು ಖರೆ...ಹೌದಲ್ಲವಾ ಅನ್ನಿಸಿದ್ದು ಸತ್ಯ...ಅರೆಘಳಿಗೆ ಮೌನದೊಂದಿಗೆ ಮಾತಾಡಿದೆ...
ಮನಸು ಹೇಳಿದ್ದಿಷ್ಟು...
ನನ್ನ ನೋವೆಂದರೆ ಅದು ಬರೀ ನನ್ನದೊಂದೇ ಅಲ್ಲವಲ್ಲಾ...ನೋವ ಸಾಗರವೇ ಉಸಿರಾಡೋ ಈ ಜಗದಲ್ಲಿ ನನ್ನ ನೋವು ಅದೆಷ್ಟು ಜೀವಗಳ ನೋವ ಹೋಲುತ್ತೋ - ನನ್ನ ಭಾವ ಅದೆಷ್ಟು ಜೀವಿಗಳ ಭಾವಗಳ ಸಂಧಿಸುತ್ತೋ...ನನ್ನ ನೋವಂಥದೇ ನೋವ ಭಾವವ ನುಂಗಿ ಉಸಿರಾಡುತಿರೋ ಒಂದ್ಯಾವುದೋ ಜೀವ ಆಕಸ್ಮಿಕವಾಗಿಯಾದರೂ ನನ್ನ ಭಾವವ ಓದಿದರೆ, ಓದಿ ಅರೆ ನನ್ನ ನೋವಂಥ ನೋವು ಇಲ್ಲೂ ಒಂದಿದೆ - ನನ್ನ ನೋವು ಒಂಟಿಯಲ್ಲ ಅಂದುಕೊಂಡು ಒಂದು ನಿಟ್ಟುಸಿರ ಚೆಲ್ಲಿದರೆ - ಆ ನೋವನುಂಡ ಜೀವ ಬದುಕಿದೆ ಅಂದರೆ ನಾನೂ ಬದುಕಬಹುದಲ್ಲವಾ ಅಂತ ಒಂದು ಕ್ಷಣ ನಗೆ ಚೆಲ್ಲಿದರೆ ಸಾಕಲ್ಲವಾ...ನನ್ನ ಬರಹಕ್ಕೆ ಅದಕಿಂತ ದೊಡ್ಡ ಸಾರ್ಥಕ್ಯ ಇನ್ನೇನು ಬೇಕು...
ಸ್ಫೂರ್ತಿಯಾಗಬೇಕಿಲ್ಲ ನಾನ್ಯಾರಿಗೂ - ಒಂದು ನೋವಿಗೆ ಜತೆಯಾದ ನೋವಿನ ಸಮಾಧಾನದ ನಿಟ್ಟುಸಿರಾದರೂ ಸಾಕು...
ಹಾಗನ್ನುತ್ತಲೇ ಒಂದಷ್ಟು ಎದೆಯ ನೋವ ಹಿಂಡಿ ಅಕ್ಷರವಾಗಿಸಿ ಹಗುರಾದೆ...ಓದಿದ ಒಂದಿಬ್ಬರ್ಯಾರೋ ಶ್ರೀ ನನ್ನ ಬದುಕು - ಭಾವಕ್ಕೆ ನೀ ಅಕ್ಷರಗಳ ಪೋಣಿಸಿದೆ, ಯಾಕೋ ನಾನು ಕಳೆದು ಹೋದೆ ಅಂತಂದರು...ಸಾರ್ಥಕವಾಯಿತು ಬರೆದದ್ದು ಮತ್ತು ಬದುಕಿದ್ದು ಅನ್ನಿಸಿತು...

Monday, March 25, 2013

ಗೊಂಚಲು - ಅರವತ್ತಾರು.....


ಇಳಿ ಸಂಜೆಯ ಮೌನ...
ಮಂಜುಗಣ್ಣಿನ ಮಾತು.....

ಏಳು ದಶಕಗಳ ಹಣ್ ಹಣ್ಣು ಬದುಕು...ಹೆಸರು ಆನಂದರಾವ್...
ಮಣ್ಣ ಮನೆಯಲಿ ಮಲಗುವ ಮುನ್ನಿನ ಮಂಜುಗಣ್ಣಿನ ಹಿನ್ನೋಟದಲ್ಲಿ, ಹೆಸರಲ್ಲಿ ಮಾತ್ರ ಕಂಡ ಆನಂದದ ಅರ್ಥ ಹುಡುಕುತ್ತಾ ಕಂಗಾಲಾಗಿದ್ದೇನೆ...

ಈದೀಗ ಮನದಿ ಸುಳಿದಿರುಗುತ್ತಿರೋ ಭಾವ ಇದೊಂದೇ - ಎಷ್ಟುಕಾಲ ಬದುಕಿದ್ದೊಡೇನು - ಜೀವಿಸಲಾಗದಿದ್ದೊಡೆ ನನ್ನಂತೆ ನಾನು... ಈ ಬದುಕಿಗೆ (ನನ್ನನ್ನೂ ಸೇರಿ ಈ ಜನಕ್ಕೆ) ಅದ್ಯಾಕೆ ಅಷ್ಟೊಂದು ಪ್ರೀತಿಯೋ ಮುಖವಾಡಗಳ ಮೇಲೆ...ಇಂದೀಗ ಬಯಲ ಹಸಿರ ತಂಗಾಳಿ ನಡುವೆಯೂ ಉಸಿರುಗಟ್ಟುವ ಭಾವ ನನ್ನಲ್ಲಿ...

ಏನೆಲ್ಲ ಇತ್ತಲ್ಲವಾ ಬದುಕ ದಾರೀಲಿ...ಸೊಗಸಾದದ್ದು, ಆಹ್ಲಾದವನೀಯುವಂಥದ್ದು...ಪುಟ್ಟ ಪುಟ್ಟದು...ಆಸ್ವಾದಿಸಿದರೆ ಬೆಟ್ಟದಷ್ಟು ಖುಷಿಯ ಕೊಡಬಲ್ಲದ್ದು...ಅವನ್ನೆಲ್ಲ ಎಡಗಾಲಲ್ಲಿ ಒದ್ದು ಓಡಿದ್ದು ಯಾವುದಕ್ಕಾಗಿ...

ಐಶ್ವರ್ಯದ, ಅಧಿಕಾರದ ಬೆನ್ನ ಹಿಂದೆ ಹೋಗಿ ಆನಂದಕ್ಕೆ ಬೆನ್ನು ಹಾಕಿದೆನಾ...

ಹಣ - ಹಣ ತಂದುಕೊಡುವ ಅಧಿಕಾರ - ಅಧಿಕಾರ ತಂದುಕೊಟ್ಟ ಮತ್ತಷ್ಟು ಹಣ - ಮತ್ತಷ್ಟು ಅಧಿಕಾರ...ಅಲ್ಲಲ್ಲೇ ಗಿರಕಿ ಹೊಡೆಯುತ್ತಾ ಪ್ರೀತಿ, ಸಂಸಾರ,ಸಂಬಂಧ, ಜೀವಿಸುವುದು ಎಲ್ಲವನ್ನು ಮರೆತು ಮನಸು ಸತ್ತವನಂತೆ ಬದುಕಿದ್ದೆನಲ್ಲ...ಯಾಕಾಗಿ..?

ಗಿರಿಯ ತುದಿ ತಲುಪುವ ಧಾವಂತದಲ್ಲಿ ಗಿರಿಮುಖದ ದಾರಿಯ ಆಚೀಚೆ ನೋಡಲೇ ಇಲ್ಲ...ದಾರಿಯ ಇಕ್ಕೆಲಗಳಲ್ಲಿ ಎಳೆಗರಿಕೆಯ ಮೇಲಿಂದ ಹಿಮಬಿಂದುವೊಂದು ಜಾರಿದ್ದು, ಗೋಪಿ ಹಕ್ಕಿ ಸೀಟಿ ಹಾಕಿದ್ದು, ಬಣ್ಣ ಬಣ್ಣದ ಹೂಗಳು ಅರಳಿದ್ದು, ದುಂಬಿಯೊಂದು ಕನವರಿಸಿದ್ದು, ಮಾವು ಚಿಗುರಿದ್ದು - ಕೋಗಿಲೆ ಉಲಿದದ್ದು, ಹರಿಣಗಳ ಸರಸ, ಹಾವು - ಮುಂಗುಸಿಯ ವಿರಸ, ಚಿರತೆಯೊಂದರ ಮರಿಗಳೆಡೆಗಿನ ಪ್ರೇಮ, ಕರಡಿಗಳ ಮಿಲನ, ಚಿಟ್ಟೆಯೊಂದು ಉಚ್ಚೆ ಹೊಯ್ದಿದ್ದು...ಉಹುಂ ಒಂದನೂ ನೋಡಿಲ್ಲ, ಆಸ್ವಾದಿಸಿಲ್ಲ, ಅಚ್ಚರಿಯಿಂದ ಕಣ್ಣರಳಿಸಿಲ್ಲ...ಬರೀ ಓಡಿದ್ದೇ ಓಡಿದ್ದು... ಕಣ್ಕಾಪು ಕಟ್ಟಿಸಿಕೊಂಡ ಯುದ್ಧ ಕುದುರೆಯಂತೆ...ಹಿಂಗದ ನನ್ನದಾಗಿಸಿಕೊಂಬ, ಹಿಡಿದಿಟ್ಟುಕೊಂಬ ದಾಹ...ಅದಕಿಟ್ಟುಕೊಂಡ ಚಂದದ ಹೆಸರು ಸಾಧನೆಯ ಮೈಲಿಗಲ್ಲು...

ಏರು ಯೌವನ, ಒಂದಷ್ಟು ಡಿಗ್ರಿಗಳು...ಆಗತಾನೆ ಸಿಕ್ಕ ಕೆಲಸ... ಬೆನ್ನಿಗಿದ್ದ ಹಣವಿಲ್ಲದೆ ಅನುಭವಿಸಿದ ಕಷ್ಟಗಳ, ಅವಮಾನಗಳ ನೆನಪು...ಕಣ್ಮುಂದೆ ಕುಣಿಯುವ ರಂಗು ರಂಗಿನ ಲೋಕ...ಹಣದ, ಅಧಿಕಾರದ ಹೆಗಲಿಗೆ ಜೋತುಬೀಳಲು ಅಷ್ಟು ಸಾಕಲ್ಲವಾ...

ಕೆಲಸ, ಧಕ್ಷತೆಯ ನಿರೂಪಣೆ, ಅಧಿಕಾರ, ಹಣ...ಸಂಜೆಗೆ ಸುಸ್ತು ಮರೆಯಲು ಹಣ ತಂದು ಕೊಡುವ ಸುಖಗಳು...ಇವುಗಳೆಲ್ಲ ಸೇರಿ ಇಷ್ಟಿಷ್ಟಾಗಿ ಜೀವಿಸುವುದು ಮರೆತೇ ಹೋಯಿತಲ್ಲವಾ...

ಸಂಸಾರ ಹೂಡಿದ್ದು ಖರೆ...ಹೊರಗೆ ಇನ್ಯಾರಿಂದಲೋ ಆಳಿಸಿಕೊಂಡಿದ್ದನ್ನು ಮರೆಯಲು ಮನೆಯಲ್ಲೊಂದಿಷ್ಟು ಆಳಿಸಿಕೊಳ್ಳುವ ಜೀವಗಳಿರಲಿ ಎಂಬ ಆಳದ ಭಾವದಿಂದಲೇನೋ ಎಂಬುದು ಇಂದಿನ ಅನುಮಾನ..
.
ಬೆಳಿಗ್ಗೆ ೮ ರಿಂದ ರಾತ್ರಿ ೮ ರವರೆಗೆ ಕತ್ತೆ ದುಡಿತ...ಒಂದಷ್ಟು ಮೀಟಿಂಗು, ಈಟಿಂಗು ಮತ್ತು ಒಣ ನಗೆಯ ಪ್ರದರ್ಶನ...ಆಮೇಲೆರಡು ತಾಸು ಐದು ನಕ್ಷತ್ರಗಳ ಹೋಟಲ್ಲಿನ ಕೃತಕ ಗಾಳಿ ಹಾಗೂ ಮಬ್ಬುಗತ್ತಲಲ್ಲಿ ಸುಖದ ಹುಡುಕಾಟ...ಅಮಲುಗಣ್ಣಲ್ಲಿ ಮನೆ ಸೇರುವಾಗ ಭರ್ತಿ ಮಧ್ಯರಾತ್ರಿ...ಮಕ್ಕಳಿಬ್ಬರೂ ನಿದ್ರಾ ದೇವಿಯ ಮಡಿಲಲ್ಲಿ ಮುಗುಳ್ನಗುತ್ತಿರುತ್ತವೆ...ಮಕ್ಕಳ ಆ ಮುಗ್ಧ ನಗುವನ್ನು ನೋಡಿ ಸವಿಯುವ ಸ್ಥಿತೀಲಿ ಖಂಡಿತ ನಾನಿರುತ್ತಿರಲಿಲ್ಲ...ಒಮ್ಮೆಯೂ ಮಕ್ಕಳು ಮೈಮೇಲೆ ಉಚ್ಚೆ ಹೊಯ್ದದ್ದು, ನಾನವರ ಕುಂಡೆ ತೊಳೆದದ್ದು, ಪಾಪಚ್ಚಿ ಮಕ್ಕಳ ಬೊಮ್ಮಟೆ ಕುಂಡೆಯ ಕಚ್ಚಿದ್ದು, ಅವು ಪಪ್ಪಾ ಮೀಸೆ ಚುಚ್ಚಿ ಚುಚ್ಚಿ ಅಂತ ತೊದಲು ತೊದಲಾಗಿ ನುಡಿದದ್ದನ್ನು ಕೇಳಿಸಿಕೊಂಡ ನೆನಪಿಲ್ಲ ನನ್ನಲ್ಲಿ...
ಹಾಸಿಗೆ ಮನೇಲಿ ನಿದ್ದೆಗಣ್ಣಲ್ಲೇ ಮಾತಾಡಿಸೋ ಹೆಂಡತಿಯ ಒಂದಿನವೂ ಎದೆಗೊರಗಿಸಿಕೊಂಡು ಪ್ರೇಮ ಸ್ಪರ್ಶನೀಡಿ ಸವಿನುಡಿಯನಾಡಿದ್ದಿಲ್ಲ...ಬದಲಿಗೆ ಕೊಟ್ಟದ್ದು ಮಧ್ಯರಾತ್ರಿ ನನ್ನ ಸೊಂಟದ ಕೆಳಗಿನ ಹಸಿವಿಗೆ ಒಂದು ಅವಸರದ ಬೆವರಿಳಿಸುವ ಬೆತ್ತಲೆ ಕಾಟ...ಅವಳ ಬೇಸರದ ನಿಟ್ಟುಸಿರು ನನ್ನ ಕಿವಿಯ ತಲುಪುವ ಮೊದಲೇ ಅವಳ ಕಿವಿಯಲ್ಲಿ ನನ್ನ ಗೊರಕೆ ಸದ್ದಿನ ಮಾರ್ದನಿ...

ಮಕ್ಕಳಿಗೆ ದೊಡ್ಡ ಹೆಸರಿನ, ಅಷ್ಟೇ ದೊಡ್ಡ ದುಡ್ಡಿನ ಶಾಲೆ, ಹೆಂಡತಿಗೊಂದಿಷ್ಟು ಒಡವೆ ಸೀರೆ...ಹಣವೊಂದನ್ನುಳಿದು ಬೇರೇನನ್ನೂ ಕೊಟ್ಟ ನೆನಪಿಲ್ಲ ಸಂಸಾರಕ್ಕೆ...
ಒಂದು ಸಿಹಿ ಮುತ್ತಿನ ಒಡವೆ, ಸವಿ ಮಾತಿನೂಟ, ಒಂದು ಬೆಚ್ಚನೆ ತಬ್ಬುಗೆಯ ಇಬ್ಬನಿ ಹಾರ, ಒಂದು ಒಲವಿನ ಕೂಟ...ಉಹುಂ ಕೊಟ್ಟದ್ದಿಲ್ಲ...ಒಲವ ಹಂಚದಿರುವುದರಿಂದ ಎಷ್ಟೆಲ್ಲ ಕಳೆದುಕೊಂಡೆ ಎಂಬ ಮನದ ಭಣ ಭಣ ಭಾವ ಇಂದು...

ಇಂದು ಈ ಅನಿವಾರ್ಯ ಮತ್ತು ಅಸಹಾಯ ನಿವೃತ್ತ ಇಳಿಸಂಜೆಯಲ್ಲಿ ಅದೆಲ್ಲ ಬೇಕೆನಿಸುತ್ತಿದೆ...ಹಣ ತಾನು ನೀಡಲಾರದ್ದು - ಒಲವು ಮಾತ್ರ ಕೊಡಮಾಡಬಹುದಾದ ಮಧುರ ಆನಂದ...ಆದರೆ ಕಾಲಕ್ಕೆ ಹಿಮ್ಮುಖ ಚಲನೆ ಇಲ್ಲವಲ್ಲ...:(

ಕಳೆದುಕೊಂಡ ಮುಗ್ಧ ಮಗುವ ನಗುವ ನೋಡುವ ಖುಷಿಯ ಮೊಮ್ಮಗುವಲ್ಲಿ ನೋಡೋಣ ಎಂದರೆ ಮಗಳಿಗೆ ಮಕ್ಕಳೇ ಬೇಡವಂತೆ...ಮಗ ದೂರದ ದೇಶದಲ್ಲಿ ಅದಾಗಲೇ ಮತ್ತೊಬ್ಬ ಆನಂದರಾವ್...ಮಗಳಿಗೆ ಮಕ್ಕಳು ಬೇಡವಾದರೆ ಮಗನಿಗೆ ಮದುವೆಯೇ ಬೇಡ...ಸಿಹಿ ಕಹಿಯ ಹಂಚಿಕೊಳ್ಳೋಣವೆಂದರೆ ಹೆಂಡತಿ ವಜ್ರದ ಹಾರ, ತೋಳಿಲ್ಲದ ರವಿಕೆ ತೊಟ್ಟು ಸಮಾಜ ಸೇವೆಯಲ್ಲಿ ಎಂದೋ ಕಳೆದುಹೋಗಿದ್ದಾಳೆ...ತಪ್ಪಿಲ್ಲ ಅವರಲ್ಲಿ - ನಾ ಬಿತ್ತಿದ್ದನ್ನೇ ನಾ ಬೆಳೆದಿದ್ದೇನಷ್ಟೇ...
ಇಂದೀಗ ನಾ ಕಟ್ಟಿಕೊಂಡ ಹಣದ ಮಹಲಿನಲ್ಲಿ ನಾನು ಏಕಾಂಗಿ ಖೈದಿ...
ಮನೆಯ ತುಂಬ ಇರುಳ ಕತ್ತಲಲ್ಲೂ ಝಗಮಗಿಸೋ ಬೆಳಕಿದೆ - ಅಂಗಳದಿ ಕೂತ ನನ್ನ ಮನದಲ್ಲಿ ಬರೀ ಕತ್ತಲು...

ಬದುಕ ಅರಿವಿನ ದಾರಿ ತಪ್ಪಿದ್ದೆಲ್ಲಿ..? ಬಾಲ್ಯದ ಕಷ್ಟ, ಅವಮಾನಗಳಲ್ಲಾ.?? ಯೌವನದ ಗೆಲುವಿನ ಹಂಬಲದಲ್ಲಾ.??? ಮಧ್ಯ ವಯಸಿನ ಕಳಕೊಳ್ಳುವ - ಸೋಲುವ ಭಯದಲ್ಲಾ.???? ಎಲ್ಲಿ ಕಳೆದು ಹೋಯಿತು ಬದುಕ ಜೀವಂತಿಕೆ..????? ಬರೀ ಪ್ರಶ್ನೆಗಳು...

ಮನೆ ಮುಂದಿನ ದಾರೀಲಿ ಓಡಾಡೋ ಅಂದಿನ ನನ್ನದೇ ಪ್ರತಿರೂಪಗಳಂತಹ ಕಿರಿಯರನ್ನು ಕಂಡಾಗ ವಿಷಾದವೊಂದು ಹರಳುಗಟ್ಟುತ್ತೆ...
ಒಮ್ಮೊಮ್ಮೆ ಈ ಒಂಟಿಭಾವ ತೀವ್ರವಾಗಿ ಕಂಗೆಡಿಸಿದಾಗ ಬೀದಿ ಮಧ್ಯೆ ನಿಂತು ಕೂಗಿ ಹೇಳಬೇಕೆನಿಸುತ್ತೆ - "ಹೆಣದ ಜೊತೆಗೆ ಹಣವ ಹೂಳುವುದಿಲ್ಲ" ಎಂದು...ತಕ್ಷಣ ಬಾಲ್ಯದ ಆ ನೆನಪು ಕಾಡುತ್ತೆ...ಹಣವಿಲ್ಲದಿರುವುದರಿಂದಲೇ ಅಮ್ಮನ ಹೆಣ ಹೂಳಲು ಪರದಾಡಿ ಬೋರೆಂದು ಅತ್ತ ಅಪ್ಪನ ಅಸಹಾಯಕ ಮುಖ ನೆನಪಾಗಿ ಗಂಟಲು ಕಟ್ಟಿ ಸುಮ್ಮನಾಗುತ್ತೇನೆ...

ಹಣವಿಲ್ಲದೇ ಕಳಕೊಂಡ ಬಾಲ್ಯದ ಮತ್ತು ಯೌವನದ ಮೊದಲರ್ಧದ ಹಲವಾರು ಸುಖಗಳು ಹಾಗೂ ಉಂಡ ಅವಮಾನಗಳು - ಹಣದಿಂದಾಗಿ ಕಳಕೊಂಡ ಆಮೇಲಿನ ಬದುಕಿನ ಆನಂದಗಳು ಎಲ್ಲ ಸೇರಿ ಮನ ಬರೀ ಗೊಂದಲದ ಗೂಡಾಗಿ ಉತ್ತರಗಾಣದ ಪ್ರಶ್ನೆಗಳಲಿ ನನ್ನೊಳಗಿನ ಮಾತೆಲ್ಲ ಸತ್ತು ವರ್ಷಗಳೇ ಸಂದವು...

ಅಥವಾ ಕೆಲವೆಲ್ಲ ದ್ವಂದ್ವಗಳ ಹುಟ್ಟುಹಾಕುವ ಗಂಭೀರ ಪ್ರಶ್ನೆಗಳಿಗೆ ಮೌನವೇ ಉತ್ತರವೇನೋ.....
ಕಾಯುವುದೊಂದೆ ಕೆಲಸ ಈಗ ಇರವನ್ನೆ ಕಳೆದು ಬಿಡುವ ಬರುವ ಆ ಚಿರಮೌನಕ್ಕಾಗಿ...
ನನ್ನ ಹೆಸರು ಆನಂದರಾವ್...:(

ಚಿತ್ರ ಕೃಪೆ : ಅಂತರ್ಜಾಲ...
ವಿ.ಸೂ : ಈ ಬರಹ ಅಂತರ್ಜಾಲ ಪತ್ರಿಕೆ 'ಪಂಜು'ವಿನ 25ನೇ ಮಾರ್ಚ್ 2013ರ ಸಂಚಿಕೆಯಲ್ಲಿ ಪ್ರಕಟವಾಗಿದೆ...ಅದರ ಕೊಂಡಿ ಇಂತಿದೆ - http://www.panjumagazine.com/?p=1580

Tuesday, March 19, 2013

ಗೊಂಚಲು - ಅರವತ್ತು + ಐದು.....


ಜನ್ಮಕ್ಕಂಟಿದ.......

ನೆನಪಿದ್ದ ಖುಷಿ ಅದೊಂದೆ.
ಆಗೆಲ್ಲ ನೀ ಅಜ್ಜನ ಮನೆಗೆ (ನಾನು, ಅಮ್ಮ, ಅಕ್ಕಂದಿರೆಲ್ಲ ಬದುಕಿದ್ದೇ ಅಲ್ಲಿ ಮತ್ತು ಆ ಮನೆಯ ಪ್ರೀತಿಯಿಂದ ಆಗ) ಬರ್ತಿದ್ದೆ. ಶಾಲೆಯಿಂದ ನಾ ಬರೋ ಹೊತ್ಗೆ ದೇವರ ಮುಂದೆ ನೀನು ಮೂಗು ಮುಚ್ಕೊಂಡು ಪ್ರತಿಷ್ಠಾಪಿತ. ಆಗದು ಯಾವುದೇ ಜಿಜ್ಞಾಸೆಗಳಿಲ್ಲದ ಎಲ್ಲ ಸೊಗಸಾಗಿ ಕಾಣುತಿದ್ದ ವಯಸು ನಂದು. ನೀ ದೇವರೆದುರು ಕೂತಿದ್ರೆ ನಿನ್ನ ಪಕ್ಕದಲ್ಲಿ ಒಂಥರಾ ಸ್ಪ್ರಿಂಗ್ ನಂತಹ ಬೆಲ್ಟ್ ಇರೋ ನಿನ್ನ ವಾಚು ಇರ್ತಿತ್ತು. ಸುಮ್ನೆ ಅದನ್ನೆತ್ತಿಕೊಂಡು ಹೋಗಿ ನನ್ನ ಕೈಗದನ್ನು ಕಟ್ಕೊಂಡು ಖುಷಿ ಪಡ್ತಿದ್ದೆ. ಅದೊಂದೇ ಖುಷಿ ನಿನ್ನಿಂದ ಸಿಕ್ಕಿದ್ದು ನಂಗೆ. ಹಾಗೆ ನಿನ್ನ ವಾಚು ಕಟ್ಟಿಕೊಂಡು ವಾರಗೆಯ ಮಕ್ಕಳೆದುರು ಕೆಲಕ್ಷಣ ಮೆರೆದಿದ್ದಕ್ಕೆ ಬೈದಿಲ್ಲ ಅನ್ನೋ ಒಂದೇ ಕಾರಣಕ್ಕೆ ನಾನು ನಿಂಗೆ ಋಣಿಯಾಗಿರಬೇಕಿದೆ...

ಅಲ್ಲಿಂದಾಚೆ ನನ್ನ ಬುದ್ಧಿ ಬಲಿತಂತೆಲ್ಲ ನಿನ್ನ ಮನದ ಕ್ರೌರ್ಯದ ಮುಳ್ಳು ಹೆಜ್ಜೆ ಹೆಜ್ಜೆಗೂ ಚುಚ್ಚಿ ಘಾಸಿಗೊಳಿಸಿದ್ದೊಂದೇ ಸತ್ಯ...

ನನ್ನ ಮತ್ತು ಅಮ್ಮ, ಅಕ್ಕಂದಿರೆಲ್ಲರ ಎಲ್ಲ ಸಾಮಾಜಿಕ ಅವಮಾನಗಳಿಗೆ ನೀನೇ ಪ್ರಮುಖ ಕಾರಣನಾಗಿ ಬಿಸಿತುಪ್ಪವಾದದ್ದು ನಮ್ಮ ದೌರ್ಭಾಗ್ಯ...
ನಿನ್ನ ನೆವದಿಂದ ನನ್ನ ಕೆಣಕಿ ಕಾಡೋ ಸಮಾಜ ಅದೇ ನಿನ್ನ ಮೆರೆಸುವುದ ಕಂಡು ಕನಲಿಹೋಗಿದ್ದೇನೆ ಎಷ್ಟೋ ಬಾರಿ...

ಏಳು ಹೆಜ್ಜೆ ನಿನ್ನೊಂದಿಗೆ ನಡೆದದ್ದು ಮತ್ತು ಒಂದು ಕರಿ ದಾರಕ್ಕೆ ನಿನ್ನೆದುರು ತಲೆಬಾಗಿದ್ದಕ್ಕೆ ಅಮ್ಮ ಕಟ್ಟಿದ ಕಂದಾಯ ಒಂದಿಡೀ ಜನ್ಮದ ಜೀವಂತ ನಗು...
ಬಂಧ ಬೆಸೆಯಬೇಕಿದ್ದ ಹೋಮದ ಸುತ್ತ ಸುತ್ತುತ್ತಲೇ ಅಮ್ಮನ ಬದುಕ ಆಹುತಿಗೆ ಮುನ್ನುಡಿ ಬರೆದದ್ದು ನೀನು...
ರಾತ್ರಿಗಳ ನಿನ್ನ ತೆವಲಿನ ಕ್ರೌರ್ಯಕ್ಕೆ ಅಮ್ಮನ ಮಡಿಲು ತುಂಬಿತ್ತು...(ಬಹುಶಃ ಮಡಿಲು ತುಂಬಿದೆ ಅನ್ನೋ ಒಂದೇ ಕಾರಣಕ್ಕೆ ಅಮ್ಮ ನಿಂಗೆ ಋಣಿಯೇನೋ)

ಕೊಟ್ಟ ದೇಹಕ್ಕೆ ಅನ್ನವಿಕ್ಕದಿದ್ದರೂ ನಾನಿಂದು ನಿನ್ನ ದೂರುತ್ತಿರಲಿಲ್ಲ..
ದೇಹದೊಳಗಣ ಮನದ ಹಸಿವಿಗೆ ಒಂದೇ ಒಂದು ತುತ್ತು ಪ್ರೀತಿ ಉಣಿಸಿದ್ದಿದ್ದರೆ...

ನಾವು ಕ್ರೂರ ಪ್ರಾಣಿ ಅಂತನ್ನೋ ಚಿರತೆ ಕೂಡ ತನ್ನ ಮರಿಗಳು ತಮ್ಮ ಅನ್ನವನ್ನು ತಾವೇ ಸಂಪಾದಿಸಿಕೊಳ್ಳುವವರೆಗೆ ಸಲುಹಿ ಆನಂತರವಷ್ಟೇ ಕೈಬಿಡುತ್ತಂತೆ...
ನಿನ್ನ ಮನಸು ಚಿರತೆಗಿಂತ ಕ್ರೌರ್ಯವಂತ ಹೇಗೆ..???

ದಿನದ ಹದಿನೈದು ಘಂಟೆ ನೀ ನಡೆಸುವ ಡಂಭಾಚಾರದ ದೈವ ಭಕ್ತಿಯ ಕಂಡಿದ್ದೇ ಇದ್ದೀತು ದೇವರೆಡೆಗಿನ, ಆಚರಣೆಗಳೆಡೆಗಿನ ನನ್ನ ಜಿಗುಪ್ಸೆಗೆ ಮೂಲ ಕಾರಣ...

ನೀ ಪೂಜಿಸೋ ದೇವರು, ನೀ ನಂಬೋ ಧರ್ಮ ಹೇಳಿದ ನೀ ನನಗೆ ನೀಡಲೇಬೇಕಿದ್ದ ‘ಸಂಸ್ಕಾರ’ಗಳೆಡೆಗೆ ಕಣ್ಣೆತ್ತಿಯೂ ನೋಡದ ನಿನ್ನ ’ಕೊನೆಯ ಸಂಸ್ಕಾರ’ ಮಾಡಲೂ ನನ್ನ ಕೈ ಹೇಸುತ್ತೆ...
ಇನ್ನು ನಿನ್ನ ಇಳಿವಯಸಲಿ ಸೇವೆ ಎಲ್ಲಿಂದ ಮಾಡಲಿ...
ತನ್ನ ‘ಕೊನೆಯ ಸಂಸ್ಕಾರ’ದವರೆಗೆ ಮಗ ಬದುಕಿದ್ದರೆ ಸಾಕು ಅಂದೆಯಂತಲ್ಲ - ಸಂಸ್ಕೃತಿಯನ್ನು ಕಲಿಸದ ನಿನಗೆ ‘ಸಂಸ್ಕಾರ’ ಮಾಡ್ತೀನಿ ನಾನು ಅಂತ ಹೇಗೆ ನಂಬ್ತೀಯ...

ಒಂದು ಹನಿ ವೀರ್ಯ ಚೆಲ್ಲಿ ಈ ದೇಹದ ಜನ್ಮಕ್ಕೆ ನಿಮಿತ್ತನಾದೆ ಎಂಬ ಕಾರಣಕ್ಕೆ ನಿನ್ನೆಲ್ಲ ನೀಚತನಾನ ನಿನ್ನ ವೀರ್ಯಸಂಜಾತರು ಸಹಿಸಿಕೊಳ್ಳಬೇಕೆಂಬುದಾಗಿದ್ದರೆ, ಸೇವೆಗೈಯಬೇಕೆಂಬುದಾಗಿದ್ದರೆ ನಿನ್ನಂಥ ಗಂಡು ಜಂತುಗಳ್ಯಾರೂ ಮದುವೆ - ಸಂಸಾರಗಳಿಗೆಲ್ಲ ಜೋತು ಬೀಳ್ತಲೇ ಇರಲಿಲ್ಲವೇನೋ...
ಕನಿಷ್ಠ ಜವಾಬ್ದಾರಿಯನ್ನೂ ನೀಯಿಸದವನಿಗೆ ನಿರೀಕ್ಷೆಗಳೂ ಇರಬಾರದಲ್ಲವಾ...

ಎಂಥ ಅಪ್ಪನಾಗಬಾರದೆಂಬುದನ್ನು ಅಗತ್ಯಕ್ಕಿಂತ ಸ್ಪಷ್ಟವಾಗಿ ಅರುಹಿದ, ತುಂಬ ಸಭ್ಯರಾದ ಇತರರ ಅಪ್ಪಂದಿರನ್ನೂ ಅನುಮಾನದ - ಪೂರ್ವಗ್ರಹದ ಕಣ್ಣಿಂದ ನೋಡುವಂತೆ ನನ್ನ ಮನಸ ಕೆಡಿಸಿದ, ನಿನ್ನ ಕಾಮಕ್ಕೆ ಬೇಕಾದ ಅಧಿಕೃತತೆಗಾಗಿ ಮದುವೆಯ ಪಾವಿತ್ರ್ಯವನ್ನು ಬಳಸಿಕೊಂಡ (ಸಮಾಜದ ಕಣ್ಣಿಗೆ ಮಣ್ಣೆರಚಲು ಒಂದು ಮದುವೆ..ಆದರೆ ನಿನ್ನ ಕಾಮ ಅದರಾಚೆಯೇ ಹೆಚ್ಚು ವಿಜೃಂಭಿಸಿದ್ದೆಂಬುದು ಸತ್ಯ) ನಿನ್ನೆಡೆಗೆ ನನ್ನಲ್ಲಿ ಇರೋದು ಕೋಪವಲ್ಲ... ಅಪ್ಪಟ ಅಸಹ್ಯ...

ನಾ ಬದುಕುತಿರುವ, ನನ್ನನ್ನು ಪ್ರೀತಿಸೋ ಸಮಾಜದ ಒತ್ತಡಕ್ಕೆ ಮಣಿದು ಎಲ್ಲಿ ನಿನ್ನ ಕೊನೆಗಾಲದಲ್ಲಾದರೂ ನಿನ್ನೆಡೆಗೆ ನಡೆಯಬೇಕಾದೀತೋ ಎಂಬ ಭಯ ನನ್ನಲ್ಲಿ ನಿನಗಿಂತ ನಾನೇ ಮೊದಲು ಅಳಿದು ಹೋಗಿದ್ದರೆ ಚೆನ್ನವಿತ್ತು ಅಂತ ಯೋಚಿಸುವಂತೆ ಮಾಡುತ್ತೆ - ಪ್ರತಿ ಬಾರಿ ನಿನ್ನ ನೆನಪಾದಾಗ...

ದೇಹ ನೀಡಿದ ಕಾರಣಕ್ಕೆ ಹೆಸರಿಗೂ ಅಂಟಿಕೊಂಡು, ಜನ್ಮಕ್ಕಂಟಿದ ಶಾಪದಂತೆ ಕಾಡೋ ನಿನ್ನಂಥ ಅಪ್ಪಂದಿರೆಡೆಗೆ ನನ್ನ ಧಿಕ್ಕಾರವಿದೆ....

Friday, March 8, 2013

ಗೊಂಚಲು - ಅರವತ್ನಾಕು.....


ಗೆಲುವಿನಂಗಳದಿ ಮೂಡುತಿದೆ ಗೆಜ್ಜೆ ಕಾಲ್ಗಳ ಹೆಜ್ಜೆ ಗುರುತು.....


ಕಾರ್ಯೇಶು ದಾಸಿ - ಕರಣೇಶು ಮಂತ್ರಿ - ಪೂಜ್ಯೇಶು ಮಾತಾ – ಕ್ಷಮಯಾ ಧರಿತ್ರಿ – ರೂಪೇಶು ಲಕ್ಷ್ಮಿ - ಶಯನೇಶು ರಂಭಾ ಎಂದು ಹೆಣ್ಣಿಗೆ ಹಲವಾರು ಶ್ರೇಷ್ಠ ಗುಣಗಳನ್ನು ಆರೋಪಿಸಿ, ತ್ಯಾಗ ಮೂರ್ತಿಯಾಗಿ ಚಿತ್ರಿಸಿ, ಹೊಗಳಿ ಅಟ್ಟಕ್ಕೇರಿಸಿ ಆಕೆಯ ಕಾರ್ಯ ವ್ಯಾಪ್ತಿಯನ್ನು ತನ್ನ ಮನೆಯ ಅಡಿಗೆ ಕೋಣೆ ಮತ್ತು ಶಯನಾಗಾರಕ್ಕೆ ಮಾತ್ರ ಸೀಮಿತಗೊಳಿಸಿದ ಪುರುಷ ಸಮಾಜ ಇಂದು ಸಣ್ಣಗೆ ಕಂಪಿಸುವಂತಾಗಿದೆ. ಕಾರಣ ಹೆಣ್ಣು ನಿಧಾನವಾಗಿ ಅಡಿಗೆ ಕೋಣೆಯ ಕಿಟಕಿಯಿಂದ ಆಚೆ ಗಂಡು ಕೇವಲ ತನ್ನದು ಎಂದುಕೊಂಡಿದ್ದ ಪ್ರಪಂಚದ ಕಡೆಗೆ ದೃಷ್ಠಿ ಬೀರಿದ್ದಾಳೆ. ತನ್ನ ಕಾರ್ಯ ವ್ಯಾಪ್ತಿಯನ್ನು ಪುರುಷನಿಗೆ ಸರಿಸಮನಾಗಿ ವಿಸ್ತರಿಸಿಕೊಂಡು ಬೆಳೆಯುತ್ತಿದ್ದಾಳೆ. ತಾನು ಕೂಡ ಪುರುಷನಂತೆಯೇ – ಕೆಲವೊಮ್ಮೆ ಆತನಿಗಿಂತ ಸಮರ್ಥವಾಗಿ – ಎಂಥ ಕ್ಷೇತ್ರದಲ್ಲೇ ಆಗಲೀ ದುಡಿಯಬಲ್ಲೆ – ಎಂಥ ಗೆಲುವನ್ನೇ ಆದರೂ ದಣಿಯದೆ ದಕ್ಕಿಸಿಕೊಳ್ಳಬಲ್ಲೆ – ತಾನು ಅಬಲೆಯಲ್ಲ ಸಬಲೆಯೆಂಬುದನ್ನು ತೋರಿಸಿಕೊಡುತ್ತಿದ್ದಾಳೆ. ಅಡುಗೆಯನ್ನೂ ಒಂದು ವಿಜ್ಞಾನವನ್ನಾಗಿ ರೂಪಿಸಿದ್ದಾಳೆ. ಅಡುಗೆಮನೆಯಿಂದ ಅಂತರೀಕ್ಷದವರೆಗೂ ಎಲ್ಲೆಡೆಯೂ ತಾನು ಸಲ್ಲಬಲ್ಲೆ ಎಂದು ತೋರಿಸಿಕೊಟ್ಟಿದ್ದಾಳೆ. ಸೈನಿಕ ಸೇವೆಯಂಥ ದೈಹಿಕ ಸಾಮರ್ಥ್ಯ ಬೇಡುವಂಥ ಕ್ಷೇತ್ರದಲ್ಲಿ ಕೂಡ ತನ್ನ (ಸಾಮರ್ಥ್ಯದ ಛಾಪು ಮೂಡಿಸಿದ್ದಾಳೆ) ಗೆಲುವಿನ ನಗು ಬೀರಿದ್ದಾಳೆ. ತನ್ನ ಅರಿವಿನ ಬೆಳಕಲ್ಲಿ ತನ್ನ ಸುತ್ತಣ ಸಮಾಜವನ್ನೂ ಬೆಳಗುವ ಜ್ಯೋತಿಯಾಗಿದ್ದಾಳೆ. 

ಈ ವಿಚಾರದಲ್ಲಿ ನಮ್ಮ ಗ್ರಾಮೀಣ ಪ್ರದೇಶಗಳ ಮಹಿಳೆಯರೂ ಹಿಂದೆಬಿದ್ದಿಲ್ಲ. ತಮ್ಮ ನಡುವೆಯೇ ಸಹಕಾರ ಸಂಸ್ಥೆಗಳು, ಸ್ವ-ಸಹಾಯ ಸಂಘಗಳನ್ನು ರೂಪಿಸಿಕೊಂಡು ತಾನು ಆರ್ಥಿಕವಾಗಿ, ಬೌದ್ಧಿಕವಾಗಿ ಸಾಮಾಜಿಕವಾಗಿ ಸದೃಢಳಾಗುತ್ತಾ ತನ್ನ ಗ್ರಾಮವನ್ನೂ ಅಭಿವೃದ್ಧಿಪಡಿಸುತ್ತಾ ಗಾಂಧೀಜಿಯವರ ಗ್ರಾಮ ಸಬಲೀಕರಣದ ಮೂಲಕ ದೇಶಾಭಿವೃದ್ಧಿಯ ಕನಸನ್ನು ಸಮರ್ಥವಾಗಿ ಸಾಕಾರಗೊಳಿಸುತ್ತಿದ್ದಾಳೆ. ಮಹಿಳೆ ತನ್ನನ್ನು ತಾನು ಸಮಾಜ ಕಟ್ಟುವ, ತನ್ನ ದೇಶವನ್ನು ವಿಶ್ವಮಟ್ಟದಲ್ಲಿ ಬಲಿಷ್ಠ ಶಕ್ತಿಯಾಗಿಸುವ ಮುಖ್ಯಭೂಮಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾಳೆ. ಇದಕ್ಕೆಲ್ಲ ಮಹಿಳೆಯಲ್ಲಿ ಮೂಡಿದ ತನ್ನೊಳಗಿನ ಸಾಮರ್ಥ್ಯದ ಅರಿವು ಮುಖ್ಯ ಕಾರಣ ಎನ್ನಬಹುದು. ಹೀಗಿರುವಾಗ ಮಹಿಳೆಗೆ ಪ್ರಾಥಮಿಕ ಮಟ್ಟದಿಂದಲೇ ಮೌಲ್ಯಾಧಾರಿತ, ಗುಣಮಟ್ಟದ ಶಿಕ್ಷಣವೂ ದೊರೆತರೆ ಖಂಡಿತ ಹೆಣ್ಣು ‘ಆದಿಶಕ್ತಿ’ ಎಂಬ ತನ್ನ ಬಿರುದಿಗೆ ಅನ್ವರ್ಥವಾಗುವುದರಲ್ಲಿ ಸಂಶಯವಿಲ್ಲ.

ಗಮನಾರ್ಹ ಸಂಗತಿ ಎಂದರೆ – ಇತ್ತೀಚಿನ ವರ್ಷಗಳಲ್ಲಿ ಗ್ರಾಮೀಣ ಪ್ರದೇಶಗಳ ಮಹಿಳೆಯರಲ್ಲೂ ಮೂಡಿದ ಅರಿವಿನ ಜಾಗೃತಿ. ತನಗಿರುವ ಅವಕಾಶಗಳನ್ನು ಅರಿತುಕೊಂಡು, ಆ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡು, ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ರಾಜಕೀಯ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ತನ್ನನ್ನು ತಾನು ಕ್ರಿಯಾಶೀಲವಾಗಿ ತೊಡಗಿಸಿಕೊಳ್ಳುತ್ತಿರುವ ಪರಿ ನಿಜಕ್ಕೂ ಶ್ಲಾಘನೀಯವೇ. ಸಹಕಾರ ತತ್ವವನ್ನು ಅರಗಿಸಿಕೊಂಡು - ಅಳವಡಿಸಿಕೊಂಡು - ಸ್ವ ಉದ್ಯೋಗ ಮಾರ್ಗಗಳನ್ನು ರೂಪಿಸಿಕೊಂಡು ಆರ್ಥಿಕ ಸ್ವಾವಲಂಬನೆ ಗಳಿಸಿಕೊಳ್ಳುತ್ತಿದ್ದಾಳೆ. ಇಂದು ಪ್ರತೀ ಹಳ್ಳಿಗಳಲ್ಲೂ ಒಂದಿಲ್ಲ ಒಂದು ಮಹಿಳಾ ಸ್ವಸಹಾಯ ಸಂಘ ಅಥವಾ ಸಹಕಾರ ಸಂಘಗಳು ತುಂಬ ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುತ್ತಿವೆ. ಹೊಲಿಗೆ, ಕೈಮಗ್ಗಗಳಂತಹ ಸಣ್ಣ ಬಟ್ಟೆ ಉದ್ಯಮ - ಹಪ್ಪಳ, ಸಂಡಿಗೆ, ಶ್ಯಾವಿಗೆ, ಸಿಹಿತಿಂಡಿಗಳಂತಹ ಆಹಾರೋತ್ಪನ್ನಗಳು – ಅರಿಶಿನ, ಕುಂಕುಮಗಳಂತಹ ಗೃಹೋಪಯೋಗಿ ಸಾಮಾನುಗಳ ತಯಾರಿಕೆ - ಹಳ್ಳಿಗಳಲ್ಲಿ ಮಾತ್ರ ಸಿಗತಕ್ಕಂತಹ ನಾರು, ಬೇರುಗಳ ಅಲಂಕಾರಿಕ ಸಾಮಗ್ರಿಗಳ ತಯಾರಿಕೆ ಮತ್ತು ಅವುಗಳ ಮಾರಾಟ. ಈ ಮೂಲಕ ಮಹಿಳೆ ಗಳಿಸುತ್ತಿರುವ ಆರ್ಥಿಕ ಸ್ವಾವಲಂಬನೆ ಹಾಗೂ ಆತ್ಮವಿಶ್ವಾಸ ಸಣ್ಣ ಮಟ್ಟದ್ದೇನಲ್ಲ. ಸಾಮಾನ್ಯ ಮಹಿಳೆಯೊಬ್ಬಳು ಉತ್ಪನ್ನಗಳ ಮಾರುಕಟ್ಟೆ ಮೌಲ್ಯವನ್ನರಿತು, ಸಮರ್ಪಕ ಮಾರಾಟ ತಂತ್ರಗಳನ್ನು ರೂಪಿಸಿಕೊಂಡು, ಸರಿಯಾದ ಮಾರುಕಟ್ಟೆಯನ್ನು ಸೃಷ್ಟಿಸಿಕೊಂಡು ಆರ್ಥಿಕವಾಗಿ ಗಟ್ಟಿ ಬೆಳವಣಿಗೆ ಸಾಧಿಸುವುದು ವಿಪರೀತ ಪೈಪೋಟಿಯ ಈ ಕಾಲದಲ್ಲಿ ಕಡೆಗಣಿಸುವಂಥ ವಿಷಯ ಅಲ್ಲವೇ ಅಲ್ಲ. ಬದಲಾಗಿ ಗೌರವಿಸುವಂಥದ್ದಾಗಿದೆ. 

ಹಾಗಂತ ಮೈಮರೆಯುವಂತಿಲ್ಲ. ಬೆಳವಣಿಗೆ ಮತ್ತು ಬದಲಾವಣೆ ನಿಂತ ನೀರಲ್ಲ. ಹೊರಗಿನ ತೀವ್ರ ಪೈಪೋಟಿಯೆದುರು ಗಟ್ಟಿಯಾಗಿ ನಿಂತು, ದೌರ್ಜನ್ಯಗಳ ಮೆಟ್ಟಿ, ತನ್ನ ದೌರ್ಬಲ್ಯಗಳ ಮೀರಿ ನಿಂತು ಇನ್ನಷ್ಟು ಬೆಳೆಯಬೇಕಿದೆ. ಉಳಿಯಬೇಕಿದೆ. ಏಕೆಂದರೆ ಹೆಣ್ಣು ಸ್ವಭಾವತಹ ಮೃದು ಮನಸಿನ ಜೀವಿ. ಅದಾಗಲೇ ಪ್ರಕೃತಿ ಅವಳಿಗೆ ನೀಡಿದ ಮೀರಲಾಗದ ಜವಾಬ್ದಾರಿಗಳೇ ಗಂಡಿನ ಜವಾಬ್ದಾರಿಗಳಿಗಿಂತ ಸಾಕಷ್ಟು ಪಟ್ಟು ಜಾಸ್ತಿ ಇದೆ. ತನ್ನ ಸ್ತ್ರೀ ಸಹಜವಾದ ಭಾವಗಳನ್ನೂ, ಕರ್ತವ್ಯಗಳನ್ನೂ ಬಿಟ್ಟುಕೊಡದೇ ತನ್ನದಲ್ಲದ ಗಂಡಸಿನ ಭಾವ - ಭಾದ್ಯತೆಗಳನ್ನೂ ಮೈಗೂಡಿಸಿಕೊಂಡು, ಎರಡರ ನಡುವೆ ಸಮತೋಲನ ಕಾಯ್ದುಕೊಂಡು ಬೆಳಗಬೇಕಿದೆ. ಪ್ರಕೃತಿ ನೀಡಿದ ಕರ್ತವ್ಯ ಸಂತಾನೋತ್ಪತ್ತಿ ಮತ್ತು ಸಂಸ್ಕೃತಿ ನೀಡಿದ ಸಂಸಾರ ನಿಭಾವಣೆಯ ಜವಾಬ್ದಾರಿಗಳನ್ನು ಮರೆಯದೇ ತನ್ನ (ಸ್ತ್ರೀ) ಭಾವಗಳನ್ನು ಉಳಿಸಿಕೊಂಡು, ಪರರ (ಪುರುಷ) ಭಾವಗಳನ್ನು ಆವಾಹಿಸಿಕೊಂಡು ಪುರುಷ ನಿರ್ಮಿತ ಸಮಾಜದಲ್ಲಿ ಅವನ ಸರಿಸಮನಾದ ಸ್ಥಾನ ಸ್ಥಾಪಿಸಿಕೊಳ್ಳಬೇಕಿದೆ. ಅದಷ್ಟು ಸುಲಭದ ಮಾತಲ್ಲ. ಬಹುಮಟ್ಟಿಗೆ ಆಕೆ ಆ ಸ್ಥಾನ ಸಂಪಾದಿಸಿಕೊಳ್ಳುವಲ್ಲಿ ಯಶಸ್ವಿಯಾದಂತೆ ಕಂಡುಬಂದರೂ ಅದು ಮೇಲ್ನೋಟದ ಅಂಕಿ ಸಂಕಿಗಳಷ್ಟೇ ಅನ್ನಿಸುತ್ತೆ. ಅವಳ ಇಚ್ಛೆಗೆ ಅನುಸಾರವಾಗಿ ಆಯ್ಕೆ ಮಾಡುವ ಅವಕಾಶವನ್ನು ಅವಳಿನ್ನೂ ಸಂಪೂರ್ಣವಾಗಿ ಹೊಂದಿಲ್ಲ. ಈ ಇಪ್ಪತ್ತೊಂದನೇ ಶತಮಾನದಲ್ಲೂ ಸ್ವಯಂ ಅಥವಾ ಗುಂಪು ನಿರ್ಣಯ ತೆಗೆದುಕೊಳ್ಳುವದರಲ್ಲಿ ವಿಶ್ವಾಸದಿಂದ ದೃಢಪಡಿಸುವ ಸಾಮಥ್ರ್ಯ ಹೊಂದುವಲ್ಲಿ ಮತ್ತು ಸ್ವಯಂ ಪ್ರೇರಿತವಾಗಿ ನಿರಂತರ ಬದಲಾವಣೆಯ ಬೆಳವಣಿಗೆ ಪ್ರಕ್ರಿಯೆಯಲ್ಲಿ ಭಾಗವಹಿಸುವಲ್ಲಿ ಅವಳಿನ್ನೂ ಸಂಪೂರ್ಣ ಸ್ವಾವಲಂಬಿಯಾಗಿಲ್ಲ. ಅಲ್ಲೆಲ್ಲ  ಹೆಚ್ಚಿನ ಸಂದರ್ಭದಲ್ಲಿ ಅವಳ ಕುಟುಂಬದ ನಿರ್ಣಯಗಳೇ ಪ್ರಾಧಾನ್ಯತೆ ಪಡೆಯುವುದು ಸಹಜವಾಗಿದೆ. ಇದಕ್ಕೆ ಆಕೆಯ ಸಹಜವಾದ ಮಾನಸಿಕ ಮೃದುತ್ವವೂ ಕಾರಣವಿರಬಹುದೇನೋ. 

ಇಂತಿಪ್ಪ ಹೊತ್ತಿನಲ್ಲಿ ಮಹಿಳೆ ದೃಢ ಮನಸ್ಸಿನಿಂದ ಸ್ವಯಂ ಪ್ರೇರಣೆಯಿಂದ ಸರ್ಕಾರ ಮತ್ತು ಸಮಾಜ ಕೊಡತಕ್ಕ ಅಲ್ಪ ಸವಲತ್ತು, ಸೌಲಭ್ಯಗಳನ್ನೇ ಇನ್ನಷ್ಟು ಪರಿಣಾಮಕಾರಿಯಾಗಿ ಬಳಸಿಕೊಂಡು ಇನ್ನೂ ಗಣನೀಯವಾಗಿ ಬೆಳೆಯಬೇಕಿದೆ. ಪಡೆಯಬೇಕಾದ ಮೌಲ್ಯಾಧಾರಿತ, ಗುಣಮಟ್ಟದ ಶಿಕ್ಷಣಕ್ಕೆ ಸಂಪೂರ್ಣ ಒತ್ತು ಕೊಡಬೇಕಿದೆ. ತಾನು ಶಿಕ್ಷಿತಳಾಗಿ ಮತ್ತು ತನ್ನ ಮುಂದಣ ಪೀಳಿಗೆ ಇನ್ನಷ್ಟು ಶಿಕ್ಷಣವಂತವಾಗುವಂತೆ ನೋಡಿಕೊಳ್ಳಬೇಕಾದ್ದು ಇಂದಿನ ಮಹಿಳೆಯ ಆದ್ಯ ಕರ್ತವ್ಯ. ಮಹಿಳಾ ಸಮಾಜವನ್ನು ಸಂಪೂರ್ಣ ಶಿಕ್ಷಣವಂತರನ್ನಾಗಿ ರೂಪಿಸಲು ಪೂರ್ಣ ಪ್ರಮಾಣದಲ್ಲಿ ಮಹಿಳೆಯೇ ತೊಡಗಿಕೊಳ್ಳಬೇಕಿದೆ. ಆ ಮೂಲಕ ಇನ್ನಷ್ಟು ಅವಕಾಶಗಳ ದಾರಿ ಮಾಡಿಕೊಂಡು ತನ್ನ ದುಡಿಯುವ ಸಾಮರ್ಥ್ಯವನ್ನು ಹಿಗ್ಗಿಸಿಕೊಳ್ಳಬೇಕಿದೆ. ಹಾಗಾದಲ್ಲಿ ಮತ್ತೊಮ್ಮೆ ಮಾತೃ ಪ್ರಧಾನ ಆಡಳಿತ ವ್ಯವಸ್ಥೆ ಬಂದರೂ ಆಶ್ಚರ್ಯಪಡಬೇಕಿಲ್ಲ.


ಜಗದ ಎಲ್ಲ ಹೆಣ್ಣು ಜೀವಗಳಿಗೂ 'ಮಹಿಳಾ ದಿನಾಚರಣೆ'ಯ ಹಾರ್ದಿಕ ಶುಭಾಶಯಗಳು...
ಮುಂಬರುವ ಪ್ರತಿ ದಿನವೂ ನಿಮ್ಮ ದಿನವಾಗಲಿ...


ಚಿತ್ರ ಕೃಪೆ : ಅಂತರ್ಜಾಲದಿಂದ...

ವಿ.ಸೂ. : ಈ ಬರಹ ಇ-ವಾರಪತ್ರಿಕೆ "ಪಂಜು"ವಿನ ಮಾರ್ಚ್ 8ನೇ 2013ರ  ವಿಶೇಷ ಸಂಚಿಕೆಯಲ್ಲಿ ಪ್ರಕಟವಾಗಿದೆ...
ಕೊಂಡಿ : http://www.panjumagazine.com/?p=1303

Monday, March 4, 2013

ಗೊಂಚಲು - ಅರವತ್ಮೂರು.....

ಆ ಕಪ್ಪು ಹುಡುಗಿಯ ಬಗ್ಗೆ.....



ಕಪ್ಪೆಂದು ಹಳಿಯದಿರಿ
ಅವಳ ಮನದ ಒಪ್ಪವನರಿಯದೆ...
ನನ್ನೆಡೆಗೆ ತುಡಿಯುತಿಹ ಅವಳ ಕಡುಗಪ್ಪು ಕಣ್ಣಲ್ಲಿ
ಒಲವ ಬೆಳದಿಂಗಳಿದೆ...

ಅಂದಿದ್ದೆ ನಾನಂದು -
ನನ್ನೆಲ್ಲ ತಪ್ಪುಗಳ ಮರೆತೊಮ್ಮೆ ನನ್ನೆಡೆಗೆ ನಗುವ ಚೆಲ್ಲು
ನನ್ನ ಸಾವಿಗೂ ಬಣ್ಣ ಬಂದೀತು ನಿನ್ನ ಒಲವಿಂದ...
ನಿನ್ನ ಬದುಕ ಬಣ್ಣವಾಗುವ ಬಯಕೆ ನನ್ನದು 
ಕನಸಲೂ ಸಾವು ಸನಿಹ ಸುಳಿಯದಂತೆ...
ಅಂದದ್ದು ಆ ಕಪ್ಪು ಹುಡುಗಿ...

ನನ್ನ ಮನದ ಕತ್ತಲೆಯನೆಲ್ಲ 
ತನ್ನ ನಗುವ ಕಣ್ಣ ಬೆಳಕಲ್ಲೆ 
ದೂರ ಸರಿಸಿದ್ದು ಆ ಕಪ್ಪು ಹುಡುಗಿ...

ಮುಸ್ಸಂಜೆ ತಂಪಲ್ಲಿ
ಮೌನದ ತೇರಲ್ಲಿ
ಹೊಸ ಬದುಕ ಕನಸಿಗೆ ತೋರಣವ ಕಟ್ಟಿ
ಕಣ್ಣಲ್ಲೆ ಒಲವ ಭಾವಗೀತೆಯ ಹಾಡಿದ್ದು
ಆ ಕಪ್ಪು ಹುಡಿಗಿ...

ಬಡವ ನಾನು ಕೊಡುವುದಿಷ್ಟೇ
ಮುತ್ತಿನುಂಡೆಯ ಭೂರಿ ಭೋಜನ
ನಿತ್ಯ ಅವಳ ಮೃದು ಅಧರಕೆ...
ನಿನ್ನ ತೋಳ್ಬಲೆಯೆ ಇಂದ್ರನೋಲಗವೆಂದು
ತೃಪ್ತ ನಗೆಯಿಂದುಲಿವಳೆನ್ನಯ 
ಆ ಕಪ್ಪು ಹುಡುಗಿ...

ಕಪ್ಪಾದರೂ ಅವಳು
ಕಪ್ಪಲ್ಲ ಅವಳ ಒಲವು...
ನನ್ನ ನಲಿವಲ್ಲಿ ಅವಳ ನಗುವಿದೆ...
ಅವಳ ನಗುವಲ್ಲೆ ನನ್ನ ಉಸಿರಿದೆ...
ಬದುಕ ಹಸಿರಿನ ಹೆಸರು
ಆ ಕಪ್ಪು ಹುಡುಗಿ...

ಚಿತ್ರ ಕೃಪೆ : ಚಿತ್ರಸಂತೆಯಲ್ಲಿ ಸೆರೆಹಿಡಿದ ಚಿತ್ರ...ಕಲೆಗಾರನ ಹೆಸರು ಗೊತ್ತಿಲ್ಲ...ಕಲೆಗಾರನ ಕ್ಷಮೆಕೋರುತ್ತಿದ್ದೇನೆ...

ವಿ.ಸೂ. : ಈ ಬರಹ ಇ-ವಾರಪತ್ರಿಕೆ "ಪಂಜು"ವಿನ ಮಾರ್ಚ್ 4ನೇ 2013ರ ಸಂಚಿಕೆಯಲ್ಲಿ ಪ್ರಕಟವಾಗಿದೆ...
ಕೊಂಡಿ : http://www.panjumagazine.com/?p=1178