Sunday, July 14, 2013

ಗೊಂಚಲು - ಎಪ್ಪತ್ತು ಮತ್ತೇಳು.....

ಕಾಡಿ ಹಾಡುವ ಆಷಾಢ.....
( ಪೋಲಿ ಮನದ ಬಿಸಿ ಬಿಸಿ ಕಲ್ಪನೆಗಳು...)

ನನ್ನೀ ಬದುಕಿನ ಒಲವ ಮೂಲ ಧಾತುವೇ -
{ಇದೆಂಥ ಸಂಬೋಧನೆ ಅಂತ ಬೈಕೋಬೇಡ...ಯಾಕೋ ಹಾಗೆ ಕೂಗಬೇಕನಿಸ್ತು...;)}
ಈ ಊರು ನನ್ನ ಅಮ್ಮನ ಮನೆ. ಮಲೆನಾಡ ಪುಟ್ಟ ಹಳ್ಳಿ. ಇಲ್ಲೀಗ ಬರೀ ಮಳೆಯ ಹಾಡು. 
ಗೋಪಿ ಹಕ್ಕಿಯ ಸುಪ್ರಭಾತ, ಸುರಿವ ಜಿಟಿ ಜಿಟಿ ಮಳೆ, ರಾತ್ರಿಯಾದರೆ ಕಪ್ಪೆ - ಜೀರುಂಡೆಗಳ ಜೋಗುಳ. ಅಪ್ಪನ ಪ್ರೀತಿ, ಅಮ್ಮನ ಆರೈಕೆ, ಹಲಸಿನ ಹಣ್ಣಿನ ಕಡು, ಬಕ್ಕೆ ಹಣ್ಣಿನ ಮುಳಕ, ಸಂಜೆಯಾದರೆ ಸುಟ್ಟ ಗೇರುಬೀಜದ ಘಮ ಒಡಲ ತುಂಬ.
ಅಂಗಳಕ್ಕೆ ಕಾಲಿಟ್ಟರೆ ಮೆತ್ತಿಕೊಳ್ಳೋ ಪಿಚಿ ಪಿಚಿ ರಾಡಿ ಮಣ್ಣು, ಕಚ್ಚುವ ಸೊಳ್ಳೆ - ನೊರ್ಜು - ಉಂಬಳ. 
ಆಸ್ವಾದಿಸಲು ಎಷ್ಟೆಲ್ಲ ಇದೆ ಇಲ್ಲಿ. 
ಮೊದಲೆಲ್ಲ ಮಳೆಯೆಂದರೆ ಬಾಲ್ಯ ನೆನಪಾಗುತಿತ್ತು. 
ಆದರೀಗ ನಂಗಿಲ್ಲಿ ಎಲ್ಲೆಂದರಲ್ಲಿ ನಿನ್ನ ನೆನಪಾಗುತ್ತಿದೆ. 
ಇದು ವಿರಹದುರಿಯ ಅರಿವಾಗಿಸುತಿರುವ ನಮ್ಮೀರ್ವರ ಮೊದಲ ಆಷಾಢ. 
ದೇಹದುನ್ಮಾದ ಇಳಿದ ಮೇಲೂ ತಬ್ಬಿ ಮಲಗೋ ನಿನ್ನ ಒಲವಿನೊನಪಿನ ನೆನಪು ನನ್ನ ರಾತ್ರಿಗಳ ದೀರ್ಘವಾಗಿಸುತ್ತಿದೆ ಇಲ್ಲಿ.
ಮುಂಜಾನೆ ಕಣ್ಣುಜ್ಜುತ್ತ ಏಳುವ ನನ್ನೆಡೆಗೆ ಅಮ್ಮ ಎಲ್ಲ ಅರ್ಥವಾದವಳಂತೆ ತುಂಟ ನಗು ಬೀರುತ್ತಾಳೆ. 
ನಾ ಮಾತ್ರ ಕಾಣಬಹುದಾದ ನಿನ್ನ ಹಲ್ಲಿನ ಪ್ರೇಮದ ಗುರುತು ನೀನಿಲ್ಲದ ಒಬ್ಬಂಟಿ ಸ್ನಾನದ ಮನೆಯಲ್ಲಿ ನನ್ನ ಕೆಣಕುತ್ತೆ. 
ನನ್ನ ಖಾಲಿ ನಡುವಿನ ಮೇಲೆ ನಿನ್ನ ಕಿರುಬೆರಳು ಗೀಚುತಿದ್ದ ನನ್ನ ಹೆಸರಿನ ಮೊದಲಕ್ಷರದ ಕಚಗುಳಿಯ ನೆನಪು ನನ್ನ ಕಾಲ ಕಿರುಬೆರಳೂ ರೋಮಾಂಚಿತವಾಗಿ ನಿನ್ನೆಡೆಗೆ ತುಡಿವಂತೆ ಮಾಡುತ್ತೆ. 
ಗೆಳತಿಯಂಥ ಅಮ್ಮನನ್ನ ಕೇಳಿದ್ದೆ ಮೊನ್ನೆ, ವಿರಹದಲ್ಲಿ ದೇಹವೇ ಹೆಚ್ಚಾಗಿ ಕಾಡುವುದೇತಕೆ..?
ಅಮ್ಮ ನಗುತ್ತ ಹೇಳಿದ್ದಿಷ್ಟು : ಮೊದಲಾಗಿ ಎಂಥ ಪ್ರೇಮವನ್ನೂ ವ್ಯಕ್ತಪಡಿಸಬೇಕಾದದ್ದು ಇದೇ ದೇಹದಿಂದಲೇ. ಅಲ್ಲದೇ ಹಿರಿಯರು ತೋರಿಸಿದವರೊಡನೆ ಬದುಕ ಹಂಚಿಕೊಳ್ಳೋ ಸಂಪ್ರದಾಯಕ್ಕೆ ಒಗ್ಗಿಕೊಂಡ ಸಮಾಜ ನಮ್ಮದು. ಹಾಗಾಗಿ ಎರಡು ಮನಸುಗಳು ಒಂದಿಷ್ಟು ಬೆಸೆಯುವ ಮೊದಲೇ ದೇಹಗಳಿಗೆ ವಿಶೇಷಾಧಿಕಾರ ದಕ್ಕಿ ಒಗ್ಗಿಬಿಟ್ಟಿರುತ್ತವೆ. ನಿಂಗಿದು ಮೊದಲ ಆಷಾಢ. ದೇಹೋನ್ಮಾದದ ಪರ್ವಕಾಲ. ಇನ್ನೀಗಷ್ಟೇ ಕಾಮ ವಿಜೃಂಭಿಸಿ ಬೆವರಾಗಿ ಇಳಿದು ಇಷ್ಟಿಷ್ಟಾಗಿ ಪ್ರೇಮವಾಗಿ ಹರಳುಗಟ್ಟಿ ಮಗುವಾಗಿ ಆಚೆ ಬರಬೇಕಿದೆ ಕಣಮ್ಮಾ...
ಅಮ್ಮ ಎಷ್ಟೆಲ್ಲ ತಿಳ್ಕೊಂಡಿದಾಳಲ್ವಾ...
ಹುಡುಗಾ,
ಹೊಸ ಒಲವಿನೂಟಕ್ಕೆ ಮುನ್ನುಡಿಯಾಗಬಲ್ಲ ಈ ಆಷಾಢ ಕಳೆಯುವುದನೇ ಕಾಯುತ್ತ ಅರಳಿ ಮಿಡಿಯುತಿದೆ ನನ್ನೀ ಹೆಣ್ಣೆದೆ - ನಿನ್ನ ಪ್ರೇಮೋನ್ಮಾದದ ತೋಳಬಂಧಿಯ ತುಂಟಾಟಕೆ. 
ಆಷಾಢ ಕಳೆದರೆ ಶ್ರಾವಣವಂತೆ. 
ಹಬ್ಬಗಳ ಆರಂಭ. 
ವಿರಹ ಕಳೆದು ಒಲವು ನಲಿವುಗಳ ಹಬ್ಬಗಳಾಗಿ ಬರುವ ನಿನಗಾಗಿ ನಾನಿಲ್ಲಿ ಕಾಯುತ್ತಿದ್ದೇನೆ. 
ಮನಸನರಳಿಸಿಕೊಂಡು. 
ಬೆಚ್ಚಗಿನ ಹೊಸ ಕನಸ ಹೊಸೆದುಕೊಂಡು....