Monday, April 24, 2017

ಗೊಂಚಲು - ಎರಡ್ನೂರಾ ಹದ್ನೇಳು.....

ಮನವಿದು ಭಾವಕಾಶಿ.....

ಹಾದಿ ಕವಲಾದಂತೆ ಆದ್ಯತೆಗಳು ಬದಲಾಗುವಾಗ, ಆದ್ಯತೆಗಳು ಹೊಸದಾದಂತೆ ನಡಿಗೆಯ ಕಸುವನೆಲ್ಲ ಹೊಸತೇ ಹೀರುವಾಗ, ಹಳೆ ಬೀದಿಯ ಒಡನಾಟದ ಹರಿವು ತನ್ನ ವೇಗ ಆವೇಗಗಳ ಕಳಕೊಳ್ಳುವ ಅಥವಾ ನಿಂತೇ ಹೋಗುವ ಸಾಧ್ಯತೆಗಳನ್ನು ಸಹಜ ಅಂತಲೇ ಅಂದುಕೊಳ್ಳಬೇಕೇನೊ...

ಇಷ್ಟಾಗಿಯೂ ಪಾದಕ್ಕೆ ಮೆತ್ತಿದ ಆ ಹಾದಿಯ ಧೂಳ ಕಣದ, ಆ ಆಪ್ತತೆಯ ಆಳದ ಮೂಲ ಭಾವ ಸೆಲೆಯ ಸೆಳೆತವೂ ಬತ್ತಿ ಹೋಗದೇ ಇದ್ದರೆ ಅಥವಾ ಬತ್ತಿ ಹೋಗದಂತೆ ನಾ ಕಾಯ್ದುಕೊಂಡರೆ ಅದೇ ಪುಣ್ಯ...

ಉಹುಂ - ಕಳೆದು ಹೋಗುವ ಚೈತನ್ಯ ಇಲ್ಲ ನನ್ನಲ್ಲಿ - ಎಷ್ಟೇ ರೆಂಬೆ ಕೊಂಬೆ ಬೆಳೆದರೂ ಬೇರು ನಿಮ್ಮಗಳ ಮಡಿಲಲೇ - ಎದುರ್ಗೋಳ್ಳುವಲೇ ಎದೆ ಭಾರ ಜಾರುವಂತ, ವಿದಾಯಕೊಂದು ಕಣ್ಣ ಹನಿ ಉಳಿಸುವಂತ ನೇಹದ ಸನ್ನಿಧಿಯ ಒಡನಾಟದಲಿ ಮೌನದಲೂ ಯಾವುದೋ ಹಿತವಿದೆ...💕

ಇಷ್ಟಕ್ಕೂ ಬದುಕೆಂದರೆ ನೆನಪುಗಳ ಸೃಷ್ಟಿಸಿಕೊಳ್ಳುತ್ತಾ ಸಾಗುವ ಕ್ರಿಯೆ ಪ್ರಕ್ರಿಯೆ ಅಷ್ಟೇ ಅನ್ನಿಸುತ್ತೆ - ನಾನು ನನಗಾಗಿ ಸೃಷ್ಟಿಸಿಕೊಂಡ ನೆನಹುಗಳು ನನ್ನಳಿವಿನಾಚೆ ತುಸುವಾದರೂ ನಿಮ್ಮಗಳ ಕರುಳ ಕಳಮಳವಾಗಿ ಕಾಡಿದರೆ ಅದು ನನ್ನ ಪಾಲಿನ ಸಾಧನೆಯೇ ಸರಿ...
#ಜೋಗಿಯ_ಬದುಕ_ಜೋಳಿಗೆಯಲ್ಲಿ_ಭಾವ_ಬಂಧ_ಸಂಬಂಧ_ಆನಂದ...
---_---

ಬದುಕ ಸೋಕಿದ ಸ್ನೇಹ ಗಂಧವ ಎದೆಯ ಸಂಚಿಯ ನಿಧಿಯನಾಗಿಸಿ ಕರಗದಂದದಿ ಕಾಯ್ದು ಜನ್ಮಾಂತರ ಹಾಯುವಾಸೆ... 
ಅನುಕ್ಷಣದ ಭೇಟಿಗೆ ವರ್ಷಗಳ ಲೆಕ್ಕ ತಪ್ಪಲಿ...
---_---

ಮನವಿದು ಭಾವಕಾಶಿ...
ಕಾರ್ಯ ಕಾರಣ ಮೀರಿ ಮುಟಿಗೆಯಷ್ಟು ಹೆಗಲು ತಬ್ಬೋ ಅಕ್ಕರೆ, ಬೊಗಸೆಯಷ್ಟು ನೆತ್ತಿ ನೇವರಿಸೋ ಕಾಳಜಿ, ಇಷ್ಟನ್ನ ಜೊತೆ ನಡೆವ ಜೀವಗಳಿಗೆ ಸದಾ ಆಸ್ಥೆಯಿಂದ ಹಂಚಬಲ್ಲವನಾದರೆ...............
ನನ್ನೊಳಗೂ ಒಲವು ಅವಿನಾಶಿ...💓

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Monday, April 10, 2017

ಗೊಂಚಲು - ಎರಡ್ನೂರಾ ಹದ್ನಾರು.....

ಹುಚ್ಚುಚ್ಚು ಸಂಗತಿಗಳು.....

ಮನಸು:
ಇದ್ದಬದ್ದ ಭಾವಗಳಿಗೆಲ್ಲ ಹದ್ದಿಲ್ಲದ ಬೇಶರತ್ ಒಡನಾಟದ
ಸೂರು ಕೊಟ್ಟು ಸಾಕುವ ಸೂಳೆಗೇರಿ -

ಬದುಕು:
ಎಲ್ಲೆಲ್ಲೋ ಅಂಡಲೆದಲೆದು ಇನ್ನೆಲ್ಲೋ ಬಂದು ನಿಲ್ಲುವ
ಹಾದರದ ಹಾದಿ -

ಸಾವು:
ಅಂತಿಮವಾಗಿ ಎಲ್ಲವನ್ನೂ ಹಸಿ ಹಸಿ ತಿಂದು ತೇಗುವ
ಶುದ್ಧ ಮಾಂಸಾಹಾರಿ...
!!!!!

ಬದುಕು ಕೊಡದ ಅವಕಾಶಾನ ಭಾವ ಕೊಡತ್ತೆ...
ಕಳೆದೋಯ್ತು ಅನ್ಕೊಳೋಕಿಂತ ರೂಪಾಂತರವಾಯ್ತು ಅಥವಾ ಮುಂದೆಲ್ಲೋ ಮತ್ತೆ ಸಿಗತ್ತೆ ಅನ್ಕೊಳ್ಳೋದು ಸಾವಧಾನದ ಶಕ್ತಿ ತುಂಬತ್ತೆ...
ಅಂತೆಯೇ,
ಮಗುತನದ ಮುಗ್ಧತೆ, ಸನ್ಯಾಸಿಯ ಪ್ರಜ್ಞೆಯ ಹೊರತಾಗಿ ಲೌಕಿಕಕ್ಕೆ ಬಂದರೆ, ಇದ್ದದ್ದನ್ನು ಇದ್ದಂತೆ ಕಾಣುವ ತಿಳುವಳಿಕೆ ಒಂಥರಾ ನಾವೇ ನಮ್ಮ ಗಂಟಲಿಗೆ ಹೊಯ್ದುಕೊಂಡ ಬಿಸಿ ತುಪ್ಪದಂತೆನಿಸುತ್ತೆ...
ಮೌಢ್ಯದ ಮೊಮ್ಮಕ್ಕಳಂತ ಅಮಾಯಕತೆ, ಮುಗ್ಧತೆಗಳು ಮನದ ಸುಖದ ರೂವಾರಿಗಳಂತೆ ಕಾಣುತ್ತವೆ...
#ಮತ್ತೇನಿಲ್ಲ_ಪ್ರಜ್ಞೆಯ_ಗೆಲುವಲ್ಲಿ_ಮನಸಿಗೆ_ಒಂಟಿಯಾಗುವ_ಭಯ...
!!!!!

ನಗೆಯ ಮೂಲವ ಬಗೆಯ ಬೇಡ - ಕರುಳ ಹುಣ್ಣು ಬಿಚ್ಚಿಕೊಂಡೀತು...
#ಬೆಳ್ದಿಂಗಳು_ಮತ್ತು_ಚಂದಿರನ_ಕಲೆ...
!!!!!

ನದಿಯ ಹಾದಿ - ಕಡಲ ದಂಡೆ - ಬೊಗಸೆ ತುಂಬಿದ ಚಂದಿರ - ಮಳೆಯ ಮೌನ - ಕಾಡ ಧ್ಯಾನ - ಕಣ್ಣ ತುಂಬಾ ಅಂಬರ - ಕನಸ ಜಾಡು - ನಗೆಯ ಹಸಿವು - ಹೆಜ್ಜೆ ಗುರುತಿನ ಇಂಚರ - ಮಾತು ಮಾತಲಿ ಮಾತು ಮಥಿಸಿ ಆತುಕೊಂಡ ಮೌನಕೆ - ನೆರಳ ಮರೆತು ಬೆಸೆದ ಬೆರಳ ಕೊಡವಿ ನಡೆವ ಬಂಧಕೆ...
ತುಂಬಿಕೊಂಡಷ್ಟು ಭಾವ - ಬಳಸಿಕೊಂಡಷ್ಟು ಬಂಧ...
#ಬದುಕ_ಬೆರಣಿ
!!!!!

ಮಡಿವಂತರ ದೇಹಶುದ್ಧಿಯೂ
ಸೂಳೆಯ ಭಾವಶುದ್ಧಿಯೂ
ಪ್ರೇಮಮಯೀ ಭಗವಂತನೂ
#ಧಾರ್ಮಿಕತೆ_ಧರ್ಮ_ಆಧ್ಯಾತ್ಮ

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Thursday, April 6, 2017

ಗೊಂಚಲು - ಎರಡ್ನೂರಾ ಹದ್ನೈದು.....

ಪ್ರೇಮ - ಪ್ರೇಮಿ.....
(ಪ್ರೇಮಿಯಾಚೆಯೂ ಪ್ರೇಮ ನಗುತಿರಲಿ...)

ಪ್ರೇಮ ಮತ್ತು ಪ್ರೇಮಿ ಎರಡೂ ಬೇರೆ ಬೇರೆ ಸತ್ಯಗಳು...

ಪ್ರೇಮ - ಬೆಳಕಿನ ಸ್ವತಂತ್ರ ವಿಹಾರ;
ಪ್ರೇಮಿ - ಸಮಾಜದ ಬೇಲಿಯೊಳಗಿನ ಸಂಸಾರ...

ಪ್ರೇಮ - ವಿಸ್ತಾರ;
ಪ್ರೇಮಿ - ಕೈವಾರ...

ಪ್ರೇಮ - ಧ್ಯಾನದ ತಾಯಿ, ಮೌನದ ಬೇರು;
ಪ್ರೇಮಿ - ವಿರಹದ ತಂದೆ, ಮಾತಿನ ತೇರು...

ಪ್ರೇಮ ಮಹಾ ಸಾಗರವಾದರೆ;
ಪ್ರೇಮಿಯೋ ಅದರ ಸೇರಲು ತವಕಿಸುವ ಸಣ್ಣದೊಂದು ಹನಿಯಷ್ಟೇ...

ಪ್ರೇಮಿ ಆಕಾರ ವಿಕಾರಗಳ ಸುಳಿಯಲ್ಲಿ ಪಥ ಬದಲಿಸಬಲ್ಲ ಪಥಿಕ;
ಪ್ರೇಮವೋ ಅಳಿವಿಲ್ಲದ, ಕವಲಿಲ್ಲದ, ಹೃದ್ಯಸ್ಥ ನಿರಾಕಾರ ಸ್ಥಾಯೀಭಾವ...

ಇಷ್ಟಾಗಿಯೂ ಆ ಎತ್ತರದ ಪ್ರೇಮಕ್ಕೆ ಈ ಕುಬ್ಜ ಪ್ರೇಮಿಯೇ ವಾಹಕವೆನಿಸುವುದು ಪ್ರೇಮದ ಸೋಲಿರಬಹುದಾ...?

ಅಂತೆಯೇ ಎನ್ನಂತವರಿಗೆ ಪ್ರೇಮದ ಭಾವ ಸಾನ್ನಿಧ್ಯಕಿಂತ ಪ್ರೇಮಿಯ ಭವದ ಸಾಂಗತ್ಯವೇ ಹಿತ ಹಿತವೆನಿಸುವುದು ಬದುಕಿನ ದುರಂತವೇ ಇದ್ದೀತಾ...??

Tuesday, April 4, 2017

ಗೊಂಚಲು - ಎರಡ್ನೂರಾ ಹದಿನಾಕು.....

ಕವಿತೆ.....
(ಹೇಳದೆ ಉಳಿದದ್ದೇ ಹೆಚ್ಚು...)

ಕಾಲ್ಗಡಗ, ಕೈಯ ಕರಿಮಣಿ ಕಟ್ಟುಗಳ ಕುಣಿಸುತ್ತ ಅಮ್ಮನಮ್ಮಿಯನುಂಡು ದೇವ ನಗೆಯ ಚೆಲ್ಲುವ ಹಸುಳೆಯ ತುಟಿಯಂಚಲಿ ಹಾಗೇ ಉಳಿದ ಹಸಿ ಹಾಲ ಘಮ; ಅದು ಬದುಕಿನ ಮೊದಲ ಒಲವ ನೀಳ್ಗವಿತೆ...
-----

ಅಪ್ಪನ ಬಂಡೆ ಎದೆಯಮೇಲೊರಗಿ
ಅಪ್ಪ ನಂದೂ ಎಂದು
ಅಮ್ಮನ ಅಣಕಿಸುವ ಮುಗ್ಧ ಕೂಸು;
ಅಮ್ಮನ ಕರುಳ ಹಸಿ ಕವಿತೆ...
-----

ಹೊಲ ಉತ್ತಿ ಬಳಲಿ ಬಂದಪ್ಪನ ತೋಳಲ್ಲಿ
ತನ್ನೊಡಲ ತೆನೆ ಕುಡಿಯ
ತೊಟ್ಟಿಲ ಹಗ್ಗವ ಜೀಕಲು
ಇನ್ನೂ ಉಳಿದಿರುವ ಕಸುವು;
ಕನಸ ಕಣಜ ಕವಿತೆ...
-----

ಅವನ ಕನಸಿನ ಬೀಜ 
ಅವಳ ಕರುಳ ಬಳ್ಳಿಯ ಕಾಯಾಗಿ 
ಒಡಲಲೊಳಗೆ ಒದೆವಾಗ,
ಹೊಕ್ಕುಳಿಗೆ ಕೆನ್ನೆಯಾನಿಸಿ ಕಣ್ಮುಚ್ಚಿ 
ಒಳಗಿನ ಉಸಿರಿಗೆ ಕಿವಿಯಾಗಿ 
ಮೀಸೆ ಮುರಿಯುವ ಅವನಲ್ಲಿ ಗಂಡಸೆಂಬ ಹೆಮ್ಮೆ;
ತನ್ನ ಪ್ರೇಮದ ತೋಳಲ್ಲಿ ಅವನ ಬಂಧಿಸುತ್ತ
ಇನ್ನೂ ಕಣ್ಬಿಡದ ಕಂದಗೆ ಛಳಿಗಿರಲೆಂದು ಇಂದೇ ಚುಂಚಿಗೆ ಹೊಲಿಯುವವಳಲಿ
ಇಷ್ಟಿಷ್ಟೇ ತುಂಬಿಕೊಳುವ ತಾಯ್ಹಾಲ ಬಿಂದಿಗೆ
ಹೇಳಲಾಗದ ಧನ್ಯತೆ - ಪ್ರಕೃತಿ ಕವಿತೆ...
-----

ಹುಟ್ಟು ಸಾವಿನ ಮೊದಲ ಕವಿತೆ...
ಸಾವು ಬದುಕಿನ ಕೊನೆಯ ಕವಿತೆ...
ಹುಟ್ಟು ಸಾವಿನ ನಡುವೆ ಬದುಕಿದು ಅರೆಬರೆದ ಸಂಕಲನ...
#ಅಳು_ಅಳು_ಅಳುಮತ್ತುನಗು...
-----

ನಗುವಿಗಿಂತ ಚಂದ ಕವಿತೆ ಓದಲು ಸಿಕ್ಕಿಲ್ಲ
ಅದನೆ ಆಯ್ದುಕೊಂಡು ಕಾಯ್ದುಕೊಂಡೆ
ಬದುಕು ಮಗುವಾಯಿತು...
#ಕರೆದ_ಕವಿತೆಗಳಿಗೂ_ಬರೆದ_ಮನಗಳಿಗೂ_ಶುಭಾಶಯಗಳು...💞

Thursday, March 23, 2017

ಗೊಂಚಲು - ಎರಡ್ನೂರಾ ಹದಿಮೂರು.....

ಚಿತ್ರ ಚಿತ್ತಾರ - ಭಾವ ಬಿತ್ತಿ..... 

   
ರೇಖೆ: ದೀಪು = ಸುಮತಿ ದೀಪ ಹೆಗ್ಡೆ...
  ಏನೇನೆಲ್ಲ ಆಗಬಹುದಾಗಿತ್ತೋ
  ಅದೆಲ್ಲವೂ ಆಗಿಯೂ
  ಏನೂ ಆಗದಂತಿರುವ
  ಅವಳು
  ಅಪ್ಪಟ ಕವಿತೆ...
  #ಕಪ್ಪುಹುಡುಗಿ_ಹಸಿದಿಂಗಳಕವಿತೆ...
      ///***\\\

ಕಳೆದೋದ ಹಳೆಯ ಕನಸೇ -
ನೀನಿಲ್ಲದೂರಲ್ಲಿ ಎನ್ನೆದೆಯ ಗದ್ದಲಕೆ ಎನ್ನದೇ ಕಿವಿಯೂ ಕೆಪ್ಪು...
ಇಂಚಿಂಚಾಗಿ ಸಂಚಿನಂತೆ ಮೌನದ (?) ಮಗ್ಗುಲಿಗೆ ಜಾರುವ ಮುಸ್ಸಂಜೆ ಹಾದಿ...
ಗಾಳಿ ಸುಳಿಯಲ್ಲಿ ಕರುಳ ಕೆಣಕೋ ಮಲ್ಲಿಗೆ ನಕ್ಕ ಹೆರಳ ಸ್ಪರ್ಶದ ಘಮ...
ಎದೆಯ ಕುಹರದ ನೆನಹುಗಳ ಬಿಸಿಗೆ ಕಣ್ಣ ಗುಡ್ಡೆ ಕರಗಿ ಇಳಿದಿಳಿದು ಹನಿಗಳ ಹೋಮ...
ಮಧುಶಾಲೆಯ ಮುಂದೆಯೇ ಉದ್ಯಾನವನ - ಉಯ್ಯಾಲೆ ಜೀಕುವ ಚಿಣ್ಣರ ಕೇಕೆಯಲೆಲ್ಲ ನೀನೇ ನಕ್ಕಂತೆ - ಆಗೆಲ್ಲ ಜಠರ ಸುಡುವ ಮಧುವೂ ಲಿಂಬು ಪಾನಕದಂತೆ...
ಹಾದಿ ತುಂಬಾ ಯಾರದೋ ಅಣತಿಗೆ ಬೆಳಕ ಸುರಿವಂತಿರುವ ಮಂಕು ಮಂಕು ಬೀದಿ ದೀಪ - ಬೆಳದಿಂಗಳ ಶವ ಯಾತ್ರೆ...  
ಕಡಲ ಗರ್ಭದ ಮೌನ ಅಲೆಯಾಗಿ ಬಂದು ದಡದ ಬಂಡೆಯ ಮಾತಾಡಿಸಿದಂತೆ ಮಧು ಬಟ್ಟಲ ತುಂಬಿದ ಕಣ್ಣ ಹನಿ ನಿನ್ನಿಷ್ಟದ ಹಾಡು ಗುನುಗುತ್ತೆ...
ನಡುಗೋ ಹೆಜ್ಜೆಗೆ ಎಡವಿದ್ದು ಹಾದಿ ಬದಿ ಗುರುತಿಲ್ಲದೆ ಬಿದ್ದಿದ್ದ ಯಾರೋ ಕಂದನ ಒಂಟಿ ಬೂಟು - ಅದು ನನ್ನ ಬದುಕಿನಂತೆ, ನನ್ನ ಹಗಲಿನ ದೊಡ್ಡ ನಗುವಿನಂತೆ...
ರೇಖೆ: ದೀಪು = ಸುಮತಿ ದೀಪ ಹೆಗ್ಡೆ...


#ನನ್ನ ಮೌನವೆಂದರೆ ನಿನ್ನ ಸಾವನೊಪ್ಪದ ಮನದ ನಶೆ...


Saturday, March 18, 2017

ಗೊಂಚಲು - ಎರಡ್ನೂರರ ಮೇಲೆ ಹನ್ನೆರಡು...

ಪ್ರಜ್ಞೆ - ಮೌನ - ಬದುಕು - ಮತ್ತಿಷ್ಟು....  

ಎಷ್ಟು ಕಾಲವಾಗಿತ್ತು ಇಷ್ಟು ಮನಬಿಚ್ಚಿ ನಕ್ಕು - ನಿನ್ನ ಜೊತೆಯೆಂದರೆ ನಗೆಯ ಸಿಹಿ ಔತಣ... (ಅವರು)
ನನ್ನಿಂದ ಯಾರದೋ ಮೊಗದಲ್ಲಿ ನಗೆಯ ಲಾಸ್ಯ - ಆಹಾ ಎಂಥಾ ಮಹತ್ತು... (ಬುದ್ಧಿಯ ಗರ್ವ)
ಬಿಕ್ಕಿ ಬರಿದಾಗಲು ಒಂದಾದರೂ ಮಡಿಲ ಗೆಲ್ಲದ ನಿನ್ನ ನಗೆಯದು ಅದೆಂತ ಸಾಧನೆ...!? (ಎದೆ ಕಡಲ ಬೇಗುದಿ)
;;;;
ಮೌನವು ಹಡೆದ ಕವಿತೆಗೆ ಮೌನವೇ ಉರುಳು...
-----
ಆ ಕಡಲು
ನಿನ್ನ ಮಡಿಲು
ಪ್ರಶ್ನೆ ಉತ್ತರಗಳ ನಡುವೆ ಎದೆಗೊರಗಿದ ಕಿವಿಯ ಮೌನ...
ನೋವೊಂದು ನೋವ ನೆತ್ತಿ ಮೂಸಿ ಸಂತೈಸುವಾಗ ಕಣ್ಣಿಂದ ಇಳಿವ ನಗೆ ಹನಿಗೆ ಏನೆಂದು ಹೆಸರಿಡಲಿ...!?
#ಕಡಲು_ಧ್ಯಾನ_ಹೆಸರಿರದವರು...
-----
ಉಸಿರಿಗೆ ಗಾಳ ಹಾಕಿ ಮೀಟುತ್ತಿರುವುದು ಯಾರು..!?
ಅದೇ ಹಾದಿ, ಅದೇ ಮುರ್ಕಿ, ಅದದೇ ಎಳೆದೆಳೆದು ಎತ್ತಿಡುವ ಹೆಜ್ಜೆ...
ನೀ ನಡೆದಾಡಿದ ವೈಭವೀ ಕಾಲದ ನೆನಪುಗಳ ನೇವರಿಸುತ್ತ, ಗುರುತುಗಳ ಹುಡುಕುತ್ತ - ನೀನಿಲ್ಲದೆಯೂ ಸೋಲೊಪ್ಪದ ಹುಂಬ ಕೊಂಬಿನ ನಡಿಗೆ...
ಕನಸೇ -
ಮತ್ತೆ ಸಿಗೋಣ - ಅದೋ ಅಲ್ಲಿ ಎಲ್ಲರ ಹಾದಿಯೂ ಸೇರುವ ಹಾಡಿಯೊಂದಿದೆಯಂತಲ್ಲ...
#ಸಾವಿನಹಾದಿ_ಉಸಿರಧ್ಯಾನ...
-----
ನಗುವಿಗೆ ಬೀದಿಯೆಲ್ಲ ಬಳಗ, ನೋವಿಂದೋ ಅನಾಥ ನಡಿಗೆ - ಯಾರ ನೋವಿಗೂ ಯಾರೂ ಇಲ್ಲಿ ವಾರಸುದಾರರಲ್ಲ ಮತ್ತು ಕರುಳ ಹುಣ್ಣಿಗೇ ಹನಿಯದ ಈ ಕಣ್ಣು ಪರ ನೋವ ವರದಿಗೆ ಜಿನುಗೀತೆ - ನೇಹದ ಅಳುವಿಗೇ ತೋಯಲರ್ಹವಲ್ಲದ ಈ ಹೆಗಲು ಹಾದಿಯ ಹಸಿವಿಗೆ ಮರುಗೀತೆ...!?
-----
ಹುಟ್ಟಿನಿಂದ ಯಾರೂ ಜಾಣರಲ್ಲ - ಹುಟ್ಟಿನಲ್ಲಿ ಎಲ್ಲ 'ಮಕ್ಕಳು' ಅಷ್ಟೇ - ಬಿಳಿ ಹಾಳೆ...
ಆ ಮುಂದಿನ ಪ್ರತಿ ಹೆಜ್ಜೆಯೂ ಹೊಸ ಪಾಠವೇ...
ಹೆಜ್ಜೆ ಹೆಜ್ಜೆಗೂ ಚಿತ್ರ ವಿಚಿತ್ರ ಹಚ್ಚೆ ಹಾಕಿ ಹೊಸ ಹೊಸತೇ ಗುರುತುಳಿಸುವ ಬದುಕಿದು ಅನುಭವಗಳಲಿ ಬಿಚ್ಚಿಕೊಳುವ ಸಂತೆ...
ನಡಿಗೆ ನಗುವಿನದಾದರೆ ಹಾದಿ ತಂಪು - ನಡೆದಷ್ಟೂ ಸೊಂಪು...
ನೋವಿಗೆ ಹೊರಳಿಕೊಂಡರೆ..!!??
ಮುಳ್ಳ ಮೇಲಿಟ್ಟ ಪಾದದ ಮೇಲೆಯೇ ವಿವೇಕ ತಪ್ಪಿ ಮತ್ತೊಂದು ಪಾದವನೂ ಊರಿದರೆ ಆ ನಂಜಿಗೆ ಬದುಕ ನಡಿಗೆಯೇ ಊನವಾದೀತು... 
ಎಡವಿದ ಅದೇ ಹಾದಿಯಲಿ ಮತ್ತೆ ನಡೆವುದಾದರೆ ಎಡವಿದ ಕಲ್ಲನು ಬದಿಗೆಸೆದುಕೊಳ್ಳಬೇಕಲ್ಲವಾ ಅಥವಾ ಮತ್ತಿಡುವ ಹೆಜ್ಜೆಯನು ಸಂಪೂರ್ಣ ಸ್ಪಷ್ಟತೆಯ ರಕ್ಷಣೆಯಲಿ ಎತ್ತಿಡಬೇಕಲ್ಲವಾ...
ಅಷ್ಟಾದರೂ ತಾರ್ಕಿಕ ಯೋಚನೆ, ಯೋಜನೆ ಇಲ್ಲದೆ ಕಣ್ಮುಚ್ಚಿ ಹಾಯುವುದು ಒಲೆಯ ಕೆಂಡವ ಮಡಿಲಿಗೆ ನಾವೇ ಸುರಿದುಕೊಂಡಂತಲ್ಲವಾ...
ಪ್ರಜ್ಞೆ ಮರೆತ ನಡಿಗೆಗೆ ದೇವರೆಂತು ಹೊಣೆ...? 
ಹದ ಮೀರಿದ ಪಯಣಕೆ ಹಣೆಯ ಬರಹವ ಹಳಿದರೆ ಕಳೆದ ಘಳಿಗೆ ಮರಳುವುದೇ...??
#ಅರಿವಿನ_ನಿದ್ದೆಯ_ನಡಿಗೆಯದು_ನೋವೊಂದೇ_ಕೊಡುಗೆ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Thursday, March 2, 2017

ಗೊಂಚಲು - ಎರಡ್ನೂರರ ಮೇಲೆ ಹನ್ನೊಂದು.....

ತಿರುತಿರುಗಿ ಕಾಡುವ ತಿರುಬೋಕಿ ಭಾವಗಳು..... 

ನೇಹದಲ್ಲಿ ಆಪ್ತತೆ ಎರಡೂ ಮುಖದಲ್ಲೂ ಹರಿದರೆ ಎಂಥ ಚಂದ; ಆದರೆ ಒಂದೇ ತೀವ್ರತೆಯಲ್ಲಿ ಎರಡೆರಡು ಹರಿವು ಅಷ್ಟು ಸುಲಭವಂತೂ ಅಲ್ಲ ಮತ್ತು ತೀರಾ ಅಪರೂಪ...
ಸುಳ್ಳಲ್ಲ ಅಹಂ ಅನ್ನು ತುಳಿದು ಪ್ರೀತಿಯ ಕಾದಿಟ್ಟುಕೊಂಡರೆ ಒಮ್ಮುಖ ಹರಿವಲ್ಲೂ ಅಕ್ಕರದ ಅಕ್ಷಯ ಸವಿಯಿರೋದು...
ಆದರೂ -
ಏನೆಲ್ಲ, ಎಷ್ಟೆಲ್ಲ ತುಮುಲಗಳ ಒಡಲಾಳದಿ ತುಂಬಿಟ್ಟುಕೊಂಡೂ ತುಸುವೂ ಹೊರತೋರದೇ ಮುಗುಮ್ಮಾದ ಮೌನದ ಪರದೆಯೊಂದ ಹೊದ್ದು ನಗುವ ನನ್ನ ಮಲೆನಾಡಿನ ಕಾಡಿನಂಥಾ ಮನಸಿನ ಸ್ನೇಹಿಗಳ ಮೇಲೆನಗೆ ಮುಗಿಯದ ಕಲಮಲದ ಮುನಿಸು, ಆರದ ಪ್ರೀತಿ, ಕವಿಯ ಕೌತುಕ, ತುಸು ಹೆಚ್ಚೇ ಮಧುರ ಹೊಟ್ಟೆಕಿಚ್ಚು, ಅಗಾಧ ಸೆಳೆತ - ನಿರಂತರ...
ಒಂದೆರಡು ಹೆಜ್ಜೆಯಾದರೂ ಆ ಕಾಡಿನಂತೆ ಬದುಕಲಾಗಿದ್ದಿದ್ದರೆ...!!!
#ನೆನಪುಗಳ ದುಂಡು ಮೇಜಿನ ಸಭೆ...
*-+-+-*
ನನ್ನ ಸ್ವಾರ್ಥವ ನಾನೇ ಒಪ್ಪಿದ ಕ್ಷಣ ನಿಜದ ಸಂತನಾದೇನು - ಆದರೆ, ಬೆಳಕನೇ ಉಟ್ಟುಂಬ ಬಯಲಂಥ ಬೆತ್ತಲೆಗೆ ಒಗ್ಗುವ ಆ ಪರಿ ಧೈರ್ಯವ ಎಲ್ಲಿಂದ ಹೆಕ್ಕಿ ತರಲಿ...!!!
*-+-+-*
ಇರುಳಿಗೆ ಬೆವರುಣಿಸಿ ಬೆತ್ತಲಿಂದ ಬೆಳಕ ಹಡೆದೆವು...
ಒಳಮನೆಯ ತೊಟ್ಟಿಲ ನಗೆಯ ಪಲುಕಿಗೆ ಅಂಗಳದಲೀಗಿವಳು ಕಮ್ಮಗೆ ನಾಚುತ್ತಾಳೆ...
ಲಾಲಿಗಂಧ ಕರುಳ ಸೋಕಿ ಎನ್ನ ತೋಳಲೀಗ ಹೊಸತೇ ಕಂಪನ...
#ಅಮ್ಮ_ಅಪ್ಪ
*-+-+-*
ಮುಸ್ಸಂಜೆ ಮಬ್ಬಲ್ಲಿ ಕಣ್ಣು ಕಣ್ಣು ಕಲೆತು ಹಡೆದ ಕನಸು ಹಗಲಲ್ಲಿ ಹಡಾಲೆದ್ದು ಹೋಪಲ್ಲಿ; ಸ್ನೇಹ, ಪ್ರೀತಿ, ಪ್ರೇಮ, ಅಕ್ಕರೆಯಂಥ ಆಪ್ತ ಸವಿಭಾವಗಳೂ ಮುಕ್ತವಾಗಿ ವ್ಯಕ್ತವಾಗಲು ಕತ್ತಲನ್ನೇ ಆಶ್ರಯಿಸಬೇಕಾದಲ್ಲಿ ಬೆಳಕಿನ ಅಸ್ತಿತ್ವವೇನು...?
ನಾವು ನಾವೇ ಕಟ್ಟಿಕೊಂಡ ನಮ್ಮದೇ ಎಂಬುವ ಈ ಸಮಾಜದ ಕಣ್ಣೇಕೆ ಬೆಳಕನ್ನು ಆ ಪರಿ ದ್ವೇಷಿಸುತ್ತದೆ...??
ನನ್ನ ಮನಸಿಗೆ ನನ್ನ ಪ್ರಜ್ಞೆಯ ಕೈಹಿಡಿದು ಬೆಳಕಿನೊಂದಿಗೆ ನಡೆವ ನಿರ್ಭಯತೆ ದಕ್ಕುವುದೆಂತು...???
ಕಾಯುತ್ತಿದ್ದೇನೆ - ಬದುಕು ಉತ್ತರವಾದೀತಾ...!!!
*-+-+-*
ಬದುಕಿದು ಬಣ್ಣಗಳ ಸಂತೆ - ಶರತ್ತುಗಳ ಅರಗಿಸಿಕೊಳ್ಳೋದೇ ಕಷ್ಟ ಕಷ್ಟ...
ಯಾವ ತಿರುವಲ್ಲಿ ಅದ್ಯಾವ ಗೆದ್ದಲು ಹುತ್ತಗಟ್ಟಿದೆಯೋ - ಪ್ರತ್ಯಕ್ಷ ಎದುರಾಗದೇ ಊಹಿಸಿದ್ದೆಲ್ಲ ಸುಳ್ಳೇ...
ಇಂತಿಪ್ಪಲ್ಲಿ -
ಎದೆ ಬೊಗಸೆಗೆ ಬಿದ್ದ ಪ್ರತಿ ಭಾವ ಬೀಜವ ಹಸಿ ಮಣ್ಣಿನಂದದಿ ಆವಾಹಿಸಿ, ಆದರಿಸಿ ಹಿಂಜಿ ಪ್ರೀತಿ ನೀರನು ಉಣಿಸಿ; ಶಾಶ್ವತ ಪಾಚಿಕೊಳ್ಳುವ ಮುನ್ನ ಒಂದಿಷ್ಟು ನಗೆಯ ಬಾಚಿಕೊಳ್ಳಿ...
*-+-+-*
ಹೆಜ್ಜೆಗೊಂದು ಮಾತು - ಮೌನ ಬಲು ವಿರಳ... 
ಅಂತೆಯೇ ಸಾವಿರ ನಾಲಿಗೆ ಎದುರಾದರೂ ನಮಗಾಗಿ ಒಂದೇ ಒಂದು ಕಿವಿ ಸಂಪಾದಿಸುವುದು ಸುಲಭವಿಲ್ಲ...
ನನ್ನದೇ ನಾಲಗೆಯ ಹಸಿವು, ಹರಿತ, ತುಡಿತಗಳು ನನ್ನ ಕಿವಿಗಿಲ್ಲ...
ಮಾತು ಮಾತಿನ ನಡುವೆಯ ಮೌನವದು ಪ್ರೀತಿಯ ಒಸಗೆಯಾದರೆ ನನಗೂ ಮೌನವನೊಂಚೂರು ಭಿಕ್ಷೆ ಕೊಡು - ಈ ಕಿವಿಗಳಿಗೂ ತುಸು ಹಸಿವ ಕಲಿಸು... 

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Monday, February 27, 2017

ಗೊಂಚಲು - ಎರಡ್ನೂರಾ ಹತ್ತು.....

ಚಿತ್ರ ಚೌಕಟ್ಟು - ಭಾವದ ನಂಟು.....

(ಅರ್ಥ - ಅವರವರ ನಿಲುಕಿನಷ್ಟು...)

ಚಿತ್ರ ಚೌಕಟ್ಟು: ಗೆಳತಿ ಅರ್ಚನಾ ಖ್ಯಾಡಿ.
ಒಲೆಯುರಿಯ ನಿಟ್ಟಿಸೋ ದಿಟ್ಟಿಯಲ್ಲಿ ಸಾವಿರ ಬಣ್ಣದ ಹಸಿ ಹಸಿ ಹಸಿವು...
#ಹಸಿವಿಗೆ_ನಿತ್ಯಯೌವನ  

ಹಸಿವಿನ ಕಡೆಗೋಲಿನ ಮಥನಕ್ಕೆ ಸಿಕ್ಕ ಎದೆಯ ಭಾವಗಳು ಕಣ್ಣ ಪಾತ್ರೆಯಲಿ ಬೆಣ್ಣೆಯಂತೆ ತೇಲುತಾವೆ...
#ಅದುರುವ_ನೋಟಗಳು... 

ಕತ್ತಲು ಹೇಳುವ ಹಸಿವಿನ ಕಥೆಗಳಲಿ ವಿಧ ವಿಧ ಬೆವರಿನ ಘಮಲು...
#ಒಲೆ_ಉರಿದರೆ_ಹಸಿವಿನ_ನಿರ್ವಾಣ... 

ಕಲೆ ಉಳಿಸಿದ ಹೆಣ ಹೊತ್ತ ಹೆಗಲ ಗಾಯ, ಕಿವಿ ತುಂಬಿದ ಚಿತೆಯುರಿಯಲಿ ಸಿಡಿದ ತಲೆಬುರುಡೆಯ ಶಬ್ಧ, ಉಸಿರ ನಡುಗಿಸುವ ಮಣ್ಣಲ್ಲಿ ಹುಳುವಿಗಾಹಾರವಾದ ಮಾಂಸ - ಮಜ್ಜೆ; ಸಾವು ಕಲಿಸಿದ ಬದುಕ ಹಸಿವಿನ ಪಾಠಗಳು - ಮುಗುಳ್ನಗುವಿನ ಮೂಲ...
#ಗಾಳಿಗಾರೋಚಿಮಣಿ_ಉರಿಯಬಚ್ಚಿಟ್ಟಗಂಧಕದಕಡ್ಢಿ_ಗಡಿಗೆಯಲಿಬೇಯೋಬದುಕು...

ಒಳಮನೆಯಲಿ ಒಲೆ ಉರಿದು ಬಿರಿವ ಅಗುಳು - ಎದೆ ಗುಡಿಯೊಳಗೆ ಉರಿವ ನಗೆ ಹಣತೆ - ಬದುಕ ಸಿರಿವಂತ ಸಿಂಗಾರ...
#ಅನ್ನ_ನಗು_ಹಸಿವಮೀರುವಬೆಳಕು...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Tuesday, February 21, 2017

ಗೊಂಚಲು - ಎರಡ್ನೂರೊಂಭತ್ತು.....

ಹುಳಿ ಹುಳಿ ಮಾತು.....

ಪ್ರಜ್ಞೆಗೆ ಸ್ಪಷ್ಟತೆ ಇಲ್ಲದ ನನ್ನ ಯಾವುದೇ ಕ್ರಿಯೆ ಅಥವಾ ನಿರ್ಧಾರ ನನ್ನೊಳಗನ್ನು ಮುರಿದು ಹಾಕುತ್ತದೆ; ಆಗ ಎತ್ತಿಡುವ ಪ್ರತಿ ಹೆಜ್ಜೆಯೂ ಹೆಣಭಾರ...
ನನ್ನೆಲ್ಲಾ ಕ್ರಿಯೆಗಳಿಗೂ ಸಾವಿರ ಸಮರ್ಥನೆಗಳಿದ್ದಾವು; ಆದ್ರೆ ಆ ಸಮರ್ಥನೆಗಳು ನನ್ನ ಮನಸಿಗೆ ಪ್ರಶಾಂತಿಯನ್ನು ಕೊಟ್ಟಾವಾ..? ನನ್ನೊಳಗೇ ಹುಟ್ಟುವ ಇದೊಂದೇ ಪ್ರಶ್ನೆ ಸಾಕು ನನ್ನ ಎಷ್ಟೋ ಗೊಂದಲಗಳಿಗೆ ಉತ್ತರ ಸಿಕ್ಕಲು... 
ಯಾವ ಸಮರ್ಥನೆಯೂ ಎದೆಯ ಪಾಪಪ್ರಜ್ಞೆಯ ನೀಸಲಾರದು - ಪ್ರಜ್ಞೆ ಹಾಗೂ ಭಾವಕ್ಕೆ ಸ್ಪಷ್ಟತೆ ಇರುವ ಕ್ರಿಯೆ ಪ್ರಕ್ರಿಯೆಗಳಲ್ಲಿ ಪಾಪಪ್ರಜ್ಞೆಗೆ ತಾವಿಲ್ಲ, ಹಾಗಾಗಿ ಸಮರ್ಥನೆಗಳ ಹಂಗೂ ಇಲ್ಲ... 
ಇಂತಾಗಿ ನಾಳೆಗಳಲ್ಲಿ ಪಾಪಪ್ರಜ್ಞೆಯನುಳಿಸದ ನನ್ನ ಯಾವ ಕ್ರಿಯೆಯೂ ನಂಗೆ ತಪ್ಪು ಅನ್ನಿಸಲ್ಲ...
(((*)))

ಉದ್ದೇಶಗಳಿಲ್ಲದ ನಡಿಗೆಗೂ ಉತ್ಸಾಹ ತುಂಬಿಕೊಳ್ಳಬೇಕು - ಕಣ್ಣ ಹನಿಗಳ ಕಷಾಯ ಕುಡಿದಾದರೂ; ಸಾವಿನ ಕಕ್ಷೆಯಲ್ಲಿ ಗಿರಕಿ ಹೊಡೆಯುವ ಬದುಕನೇ ಉತ್ಸವವಾಗಿಸಬೇಕು - ಉಸಿರ ವ್ಯಾಪ್ತಿಯ ಆಚೆಯ ನಗೆಯ ಕನಸಿನ ಬಸಿರ ಹೊತ್ತಾದರೂ...
'ಮನೆ ಸೋರುತ್ತಿದೆ’ - ಅವಳು ಗೊಣಗುತ್ತಾಳೆ; 'ನಡುಮನೆಯಲೇ ಕಾಮನಬಿಲ್ಲು ಹೆಳವನಿಗಾಗಿ’ - ನಾನು ನಗುತ್ತೇನೆ...
ಅವಳು ಕಣ್ತಪ್ಪಿಸುತ್ತಾಳೆ...
(((*)))

ನೆನಪುಗಳು ಎದೆಯ ಹಿಂಡದ ಹಾದಿಯೊಂದಿದ್ದರೆ ಸಾವೇ ಇರಬೇಕು..........!!!
(((*)))

ಬಯಲಿಗೆ ಬಾಗಿಲ ಹಂಗಿಲ್ಲ - ಬಯಲೆಂದರೇ ಪೂರಾ ಪೂರಾ ತೆರೆದ ಬಾಗಿಲು...
ಬಯಲಿಗೆ ಕತ್ತಲ ಭಯವಿಲ್ಲ - ಬಯಲೆಂದರೆ ಮಿತಿ ಇಲ್ಲದ ಬೆಳಕೇ ಬೆಳಕು...
ಬಯಲ ಭೈರಾಗಿಯ ನಡಿಗೆಗೆ ದಿಕ್ಕುಗಳ ಭ್ರಮೆಯಿಲ್ಲ - ಬೆಳಕೊಂದೆ ಆಯ್ಕೆ, ಬೆಳಕಷ್ಟೇ ಆದ್ಯತೆ...
(((*)))

ಹುಟ್ಟು ಬೆತ್ತಲೆಯ ಕೊಡುಗೆ - ಸಾವು ಬೆತ್ತಲೆಯ ನಡಿಗೆ - ಬದುಕಿಗೊಂದೆ ವಿಧವಿಧ ಬಟ್ಟೆಗಳ ಹುಚ್ಚಾಟದ ಗುಲಾಮೀ ಬಡಿವಾರ...
ಬದುಕಿಷ್ಟು ಗೋಜಲು ಗೋಜಲಾಗಲು ಸ್ಥಾವರದ ಗುಂಗೇ ಮೂಲವೇನೋ ಅಲ್ಲವಾ...?
(((*)))

ಒಂದರೆ ಘಳಿಗೆಯ ಮಟ್ಟಿಗೆ ಸತ್ತು ಮಲಗಬೇಕು - ನನ್ನೆಲ್ಲ ನಿಜ ಗಳಿಕೆಯ ಅರಿವಾಗಬೇಕು...
(((*)))

ಮದ ಮರೆತು ಮಡಿಲಲ್ಲಿ ಮಗುವಾಗಬಲ್ಲವಗೆ ಸೂಳೆ ತುಟಿಯಲ್ಲೂ ಪ್ರೇಮ ಸುಧೆ ಉಕ್ಕೀತು...
ಎದೆಯಿಂದ ಎದೆಗೆ ಕನಸು ಹಾಯದೆ ಹೋದರೆ ಮಡದಿ ಮಿದುವೆದೆಯಲ್ಲೂ ಬೆವರಷ್ಟೇ ಹರಿದೀತು...
#ಅರ್ಧ ಬರೆದ ಸತ್ಯ!!!
(((*)))

ಸುವ್ವಾಲಿಯಾಗದ ಕನಸುಗಳೆಲ್ಲ ಹುಳಿ ಹುಳಿ...
(((*)))

ವಿಕ್ಷಿಪ್ತ -
ನನ್ನಲ್ಲಿ ನನ್ನನೇ ಹುಡುಕು...
ನನ್ನಂತೆ ನಾನು, ಮತ್ತಂತೆಯೇ ನನ್ನ ಬದುಕು...
ಅವರಿವರಂತಾಗಲು ನಾನಾರು, ಇನ್ಯಾವ ಜರೂರು...
ಬೆಳಕ ನಶೆಯಲ್ಲಿ ಮನವಾಗಲಿ ನಗ್ನ ನಗ್ನ - ಸಿದ್ಧಿಸಲಿ ಶರಧಿದಡದ ಮೌನ ಧ್ಯಾನ...
ಯಾರಿಗೆ ಯಾರೂ ಸ್ವಂತವಲ್ಲದ ಸಾವಿನೊಕ್ಕಲ ಹಾದಿಯಲ್ಲಿ ಗುರುತುಳಿಯುವುದಾದರೆ, ನಕಲಿಯಲ್ಲದ ನಗುವ ಚಂದಕೆ - ಅದ್ಯಾವ ಹೋಲಿಕೆ...
ಮುಕ್ತ ನಗುವದುವೇ ಹುಳುಕಿಲ್ಲದ ಬೆಳಕು ಅಂತರಾತ್ಮಕೆ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Tuesday, February 7, 2017

ಗೊಂಚಲು - ಎರಡ್ನೂರೆಂಟು.....

ಬೆಳಕ ಬಿತ್ತಿದ ಈ ಬದುಕ ಮೊದಲ ಗೆಳತಿಯೇ.....  
(ಅಮ್ಮ ಅಂದರೆ ಅಮ್ಮ ಅಷ್ಟೇ... ಬೇರೆಲ್ಲ ಮಾತೂ ಬರಿ ಕ್ಲೀಷೆ ಅಷ್ಟೇ...)     

ನಿನ್ನ ರಕ್ತವೇ ಅನ್ನವಾಗಿ ಈ ಜೀವ ಜಗಕೆ ಬಂತು...
ನಿನ್ನ ಕರುಳ ಮಮತೆಯೇ ಹಾಡಾಗಿ ತೊಟ್ಟಿಲ ತೂಗಿ ಉಸಿರ ತುಂಬಿತು...
ಸೆರಗ ತುದಿಯ ಮರೆಯಿಂದ ಭಯ ತೊರೆದು ಬೆಳಕಿಗೆ ಕಣ್ತೆರೆದೆ...
ಮೊದಲ ತೊದಲು ಹೆಜ್ಜೆಗೆ ನಿನ್ನ ಕಣ್ಣಂಕೆಯೇ ಶ್ರೀರಕ್ಷೆ...
ನಡಿಗೆಗೆ ಶಕ್ತಿ, ನುಡಿಗೆ ಯುಕ್ತಿ, ಜೀವನ ಯಾನಕ್ಕಿಷ್ಟು ಸ್ಪೂರ್ತಿ ಅದು ನಿನ್ನಿಂದ...
ಇಂದೀಗ ಅವಳ ಕಣ್ಣಲ್ಲೂ ನಾ ನಿನ್ನನೇ ಹುಡುಕುವಲ್ಲಿ ನನ್ನ ನಗುವಲ್ಲಿನ ಮಿಂಚು ನಿನ್ನಂದ...
ಅತ್ತದ್ದು ಮರೆಯೋಕೆ, ನಗೆಯ ಕನ್ನಡಕ ಧರಿಸಿ ಎದೆಯ ನೋವ ಭರಿಸೋಕೆ ನಿನ್ನಿರುವಿಕೆಯೇ ಕಾರಣ...
ನೀ ನಡೆದ ಹಾದಿ ನಾ ನಡೆಯಲಾರೆ - ನಿನ್ನ ಮುಡಿಯ ನೋವ ನಾ ಮುಡಿಯಲಾರೆ - ನೀ ತುಳಿದ ಧೂಳಲ್ಲಿ, ನಿನ್ನ ಕರುಣೆಯ ತೋಳಲ್ಲಿ ಅರಳಿದ್ದು ಈ ಬಾಳು - ಈ ಸತ್ಯವ ಮರೆಯಲಾರೆ...
ಹಿಮ್ಮಡಿಯ ಒಡಕಿನಲಿ ಹೆಪ್ಪುಗಟ್ಟಿರುವ ನಿನ್ನ ಹಾದಿಯ ಕಥೆಗಳು ದಾಖಲಾಗಲೇ ಇಲ್ಲ...
ಗೊಡ್ಡು ದನಕೂ ಅಕ್ಕರೆಯ ಕೈತುತ್ತನಿಡುವ ನಿನ್ನ ಪ್ರೀತಿಯ ಹರಿವಿನ ಹರಹು ನನ್ನೊಳಗೆ ಅರಗಲೇ ಇಲ್ಲ...
ನನ್ನದೊಂದು ಒಪ್ಪನೂ ಜಗದ ಬೀದಿಯಲಿ ಮೆರೆಸುವ, ಸಾವಿರ ತಪ್ಪುಗಳನು ಕದದ ಹಿಂದೆ ಮರೆಸುವ ನಿನ್ನ ಮಮತೆಯ ಸ್ವಾರ್ಥ ನಂಗೆ ಅರ್ಥವೇ ಆಗಲೊಲ್ಲದು... 
ಅತ್ತದ್ದು, ನಕ್ಕದ್ದು, ಸೋತದ್ದು, ಗೆದ್ದದ್ದು, ಎಷ್ಟೆಲ್ಲಾ ಮೊದಲುಗಳಿಗೆ ನೀನೇ ಸಾಕ್ಷಿ... 
ಇಂದಿಗೂ ಅಹಂ ಕಾಡದೆ ಅಳಬಹುದಾದದ್ದು, ಎಡವಿದ್ದನ್ನೂ ಗೆಲುವನ್ನು ಹೇಳಿಕೊಂಡಷ್ಟೇ ಧೈರ್ಯವಾಗಿ ಹೇಳಿಕೊಳ್ಳಬಹುದಾದದ್ದು, ಕಳಕೊಳ್ಳೋ ಭಯ ಕಿಂಚಿತ್ತೂ ಇಲ್ಲದೇ ರಚ್ಚೆ ಹಿಡಿದು ಜಗಳ ಕಾಯಬಹುದಾದದ್ದು ಅದು ನಿನ್ನ ಮಡಿಲಲ್ಲಿ ಮಾತ್ರವೇ... 
ನಿಂಗೆ ಹಸಿವಾದರೆ ಮಾಣೀ ಊಟ ಮಾಡು ಅನ್ನುವ, ನಿಂಗೆ ಚಳಿಯಾದರೆ ಮಾಣಿಗೆ ಕಂಬಳಿ ಹೊದೆಸೋ ನಿನ್ನ ಮುಗ್ಧತೆಯ ಮುದ್ದು ಎಂದಿಗೂ ಅಚ್ಚರಿಯೇ ನನಗೆ... 
ನನ್ನ ಮೊಬೈಲ್ ಕರೆಗಂಟೆಯಲಿ ನಿನ್ನ ಹೆಸರು ಕಂಡರೆ ಹೊಸ ಜಗಳಕ್ಕೆ ನಾಲಿಗೆ ತುರಿಸೋ ಸಂಭ್ರಮ ನನ್ನಲ್ಲಿ... 
ನಿನ್ನ ಕನಸು ಕನವರಿಕೆಗಳೆಲ್ಲಾ ನನ್ನ ಸುತ್ತಲೇ ಸುತ್ತುವಾಗ ಸೊಕ್ಕು ಸುರಿವ ನನ್ನ ನಗುವಲ್ಲಿ ನೀನೇ ನೀನು... 
ನಿನ್ನ ಮಾತೆಲ್ಲ ಮನದ ಮನೆಯದು, ನನ್ನ ನಡೆಯೆಲ್ಲ ಬುದ್ಧಿಯ ಕೈಯ್ಯಾಳು - ಆದರೂ, ಸಾವಿರ ಭಿನ್ನತೆಗಳ ಆಚೆ ನೀನು ಆಯಿ ನಾನು ಮಗರಾಯ... 
ಹುಚ್ಚು ಹುಡುಗೀ ನಿನ್ನ ಹುಟ್ಟು ಹಬ್ಬವಂತೆ ಇಂದು - ಶುಭಾಶಯ ಹೇಳಲು ನಾ ಫೋನು ಮಾಡಿದ್ರೆ, ನಿದ್ದೆಗಣ್ಣಲ್ಲಿ ಎದ್ದು ಬಂದು ಮಾತಾಡುತಿದ್ದ ನಿನ್ನ ಮೇಲೆ ಇನ್ನಿಲ್ಲದ ಮುದ್ದು ನಂಗಿಲ್ಲಿ... 
ಫೋನಲ್ಲೇ ಕೊಟ್ಟುಕೊಂಡ ಪಪ್ಪಿ ಬದುಕಿನ ದೊಡ್ಡ ಉಡುಗೊರೆ ಇಬ್ಬರಿಗೂ... 

ಎನ್ನಾತ್ಮದ ಸಾಕ್ಷೀ ಪ್ರಜ್ಞೆಯೇ,
ಮತ್ತೇನಿಲ್ಲ - 
ಈ ಬದುಕ ಮುನ್ನಡೆಯ ಎಕೈಕ ಉದ್ದೇಶ ನೀನು; ಬದುಕಿಗೆ ಮುನ್ನುಡಿ ಬರೆದವಳು - ನಿನ್ನೊಡನೆಯ ಮಾತು ಮಾತಿನ ಜಗಳ, ಮರಳಿ ಮರಳಿ ತೋರುವ ಮರುಳ ಮನಸಿನ ಮುನಿಸು ಎಲ್ಲವೂ ನಿನ್ನೆಡೆಗಿನ ಪ್ರೀತಿಯ ಮತ್ತೊಂದು ಮಗ್ಗುಲಷ್ಟೇ...
ಲವ್ ಯೂ ಕಣೇ ಹುಡುಗೀ... 
ಹ್ಯಾಪಿ ಹುಟ್ದಬ್ಬ ಆಯೀ...❤❤
ಅಮ್ಮ ಅಂದರೆ ಅಮ್ಮ ಅಷ್ಟೇ... 
ಬೇರೆಲ್ಲ ಮಾತೂ ಬರಿ ಕ್ಲೀಷೆ ಅಷ್ಟೇ....