Friday, February 27, 2015

ಗೊಂಚಲು - ನೂರೈವತ್ತಕ್ಕೆ ಒಂದು ಕಮ್ಮಿ.....

ಮಾತು ಮೌನಗಳಲಿ ನಾನು ನೀನು.....
(ಅಂತಿಮ ಮೌನಕು ಮುಂಚೆ...)

ಸ್ನೇಹವೇ –
ಮೌನ ನನ್ನೊಳಗನ್ನು ನಂಗೆ ತೋರುವುದು – ಅದು ಎದೆಯಾಳದ ನಿಶ್ಚಲ ತಿಳಿನೀರ ಕನ್ನಡಿ...
ಮಾತು ನನ್ನೊಳಗನ್ನು ನಿಂಗೂ ತೋರುವುದು – ಅಂದರೆ ಬಯಲ ಬೆಳಕಲ್ಲಿ ನಗುತ ನಿಲ್ಲುವುದು...
ಏಕಾಂತದಲ್ಲಿ ಮೌನಿಯಾಗುವುದೊಳಿತು – ಸಂಗಾತದಲ್ಲಿ ಮಾತಾಗು ಕಲೆತು...
ಸಂತೆಯ ನಡುವೆಯೂ ಮೌನದ ಕೋಟೆ ಕಟ್ಟಿಕೊಂಡವ ದೇವರಾದಾನು...
ಆದರೆ ಅದೇ ಉರಿ ಬಿಸಿಲ ಸಂತೆಯ ನಡುವೆ ನಗೆಯ ಐಸ್‌ಕ್ಯಾಂಡಿ ಮಾರಬಲ್ಲವ ಅಪ್ಪಟ ‘ಮನುಷ್ಯ...’
ಅಳುವ, ನಲಿವ ಭಾವಗಳೆಲ್ಲವಕ್ಕೂ ಅತೀತನಂತೆ ಬಿಂಬಿಸಿಕೊಳ್ಳೋ ದೇವನಾಗುವುದಕಿಂತ ಅಳುವನ್ನೂ, ನಗುವನ್ನೂ ಅವಿರುವಂತೆಯೇ ಒಂದೇ ತಕ್ಕಡಿಯಲ್ಲಿ ತೂಗಿ ಮಳ್ಳ ನಗೆ ನಗುವ ಮನುಷ್ಯನಾಗುವುದೇ ಹಿತ ನನಗೆ...
ತಲೆ ಬಾಗಿ ವ್ಯಕ್ತವಾಗದೇ ಹೋದ ಪ್ರೀತಿ ಸ್ವಾಭಿಮಾನವೇ ಆದರೂ ಸ್ವಾರ್ಥದಂತೆ ಕಾಣುತ್ತೆ – ಹಸಿವಾದಾಗ ಮಾತ್ರ ಒಡೆಯನಿಗೆ ಮೈಯುಜ್ಜೋ ಬೆಕ್ಕಿನಂತೆ...
ಎಲ್ಲ ವಿರೋಧಗಳಾಚೆಯೂ ವ್ಯಕ್ತವಾದ ಪ್ರೀತಿಯಲಿ ಮುನಿಸೂ ಮಳೆಯ ಮುಂಚಿನ ಗುಡುಗಿನಂತೆ, ಕಾಡಿ ಕಾದಾಡಿ ಕೂಡುವ ಆರಾಧನೆಯಂತೆ ತೋರುತ್ತೆ  - ಸೀಳುವ ಸಾಮರ್ಥ್ಯವಿದ್ದರೂ ಕಾಲು ನೆಕ್ಕುವ ಸಾಕು ನಾಯಿಯಂತೆ...
ನಾನತ್ವ ಕಳೆದು ಹೋಗಿ, ‘ನಾ’ನಿಲ್ಲದ ನಾನು ಮೌನದಲ್ಲಿ ನನ್ನನೂ – ಮಾತಿನಲಿ ನಿನ್ನನೂ ಮುದ್ದಿಸಬೇಕು ಹುಚ್ಚು ಕರಡಿಯಂತೆ...
ಬದುಕ ಪ್ರೀತಿಸುವುದೆಂದರೆ ಅದೇ ಅಂತಂದುಕೊಳ್ಳುತ್ತೇನೆ – ಆತ್ಮದ ಬೆಂಕಿಯಲಿ (ಮೌನ) ನನ್ನ ನಾ ಬೆಳಗಿಸಿಕೊಳ್ಳುತಾ, ಆತ್ಮೀಯತೆಯ ತೋಳಲ್ಲಿ (ಮಾತು) ನಿನ್ನ ತಬ್ಬುವುದು...
ಮಾತು – ಮಾತಿನೊಳಗಣ ಮೌನ – ಮೌನದೊಳಗಣ ಗದ್ದಲ,
ಸಂತೆ – ಸಂತೆಯೊಳಗಿನ ನಗೆಯಂಗಡಿ – ನಗೆಯ ಕೊಂಬವರಿಲ್ಲದ ಬೇಸರ,
ಏಕಾಂತ – ಸಂತೆಯಲಿ ಯಾರೋ ಬೆನ್ನಿಗೆ ಚುಚ್ಚಿದ ನೋವಿಗೆ ಅಳು – ಹೊಸ ಅನುಭವದಿಂದ ನನ್ನೊಳಗು ಬೆಳೆದದ್ದಕ್ಕೆ ಹೆಮ್ಮೆ...
ಸಂತೆಯಲಿ ಹೆಗಲು ತಬ್ಬಿದ್ದ ನೀನು ಏಕಾಂತದಲಿ ದೂರ ನಿಲ್ಲುವುದು, ನಿನ್ನೆದೆಯ ಮೌನವನು ನಿನ್ನದೇ ಕಂಗಳು ಮಾತಾಗಿ ಭಾಷಾಂತರಿಸಿ ಎನ್ನೆದೆಗೆ ರವಾನಿಸಿ ಎನ್ನೊಳಗಿನ ತುಂಟ ಥಟ್ಟನೆ ಕಣ್ಮಿಟುಕಿಸಿ ನಿನ್ನ ಕೆನ್ನೆಯ ರಂಗಾಗುವುದು...
ಅರರೇ ಈ ಬದುಕೆಂಬೋ ಬದುಕನ್ನು ಉನ್ಮಾದಿಯಂತೆ ಪ್ರೀತಿಸಲು ಎಷ್ಟೆಲ್ಲ ಕಾರಣಗಳು ಅಲ್ಲವಾ...

ಹೇಳಲೇ ಬೇಕಾದ ಕೊನೆ ಮಾತು:
ಅನುಭವಗಳ ಕೂಸಾದ ವೈಚಾರಿಕ ಭಿನ್ನತೆಯಲಿ ಮಾತಿಂದ ನಾ ನಿನ್ನ ಖಂಡಿಸಿದ್ದು ನನ್ನ ಅಹಂಕಾರ ಅಥವಾ ಮೇಲರಿಮೆಯಂತೆ ಕಂಡು ನೀ ಸೆಟೆದು ನಿಂತು ಮೌನಿಯಾದರೆ ಸಾಯುವುದು ವಿನಾಕಾರಣ ನಡುವೆ ಹಬ್ಬಿ ನಿಂತಿರುವ “ಸ್ನೇಹ...”
ನಾವೇ ಕೈಯಾರೆ ತೂಗಿದ್ದ ಸ್ನೇಹವೆಂಬ ಶಿಶುವ ನಮ್ಮದೇ ತಪ್ಪು ಗ್ರಹಿಕೆಗಳಿಂದ ನಾವೇ ಕೈಯಾರೆ ಕೊಲ್ಲುವುದು ಯಾವ ನ್ಯಾಯ...
ಮೌನ ಮಾತಿನ ಕೊರಳ ತಬ್ಬಿ – ಮಾತು ಮೌನದ ಹಣೆಯ ಚುಂಬಿಸಿ – ಮಾತು ಮೌನಗಳಾಚೆ ಒಲವು ನಗಲಿ...
ಕರುಳ ಬೆಸೆದ ಒಲವ ನಗೆಯ ಬೆಳಕಲ್ಲಿ ಬದುಕಿನಳುವೆಲ್ಲ ಜೀರ್ಣವಾಗಿ ಹೋಗಲಿ...
ನನ್ನ ಅಂತಿಮ ಮೌನಕು ಮುಂಚೆ ನಿನ್ನ ಸ್ನೇಹದ ಮೌನವೊಮ್ಮೆ ಮಾತಾಗಿ ನಗಲಿ...

Thursday, February 26, 2015

ಗೊಂಚಲು - ನೂರಾ ನಲವತ್ತು + ಎಂಟು.....

ಮತ್ತಷ್ಟು ನಲ್ನುಡಿಗಳ ಹಾವಳಿ.....

ಹಕ್ಕಿ ಮರಿಯ ಕಿವಿಯಲ್ಲಿ ಗಾಳಿರಾಯನ ಪಿಸುಮಾತು –
“ಹೇಯ್, ಕಣ್ಬಿಟ್ಟು ನೋಡು ಕಂದಾ ಮನೆಯಂಗಳದಲ್ಲದೋ ಬೆಳಕಿನ ತೇರು ಹೊರಟಿದೆ...
ಕನಸಿನ ಬಳ್ಳಿಯನು ಬೆಳಕು ತುಳಿದರೆ ನಗೆಯ ಹೂ ಅರಳುವುದಂತೆ...”
ಶುಭದಿನ...

ಈ ಇರುಳಿಗ್ಯಾವ ಹೊಸ ಕನಸು ಅಂತ ಕೇಳಿದರೆ ಏನಂತ ಹೇಳಲಿ...
ಹುಟ್ಟು ಸಾವಿನ ನಡುವೆ ಕನಸಿನ ಬೆಟ್ಟವೇ ನಿಂತಿದೆ...
ಬೆಟ್ಟದೊಳಗಿನ ಸಂಪತ್ತೆಲ್ಲಾ ನನ್ನದೇ ಮತ್ತು ಯಾವುದೂ ನನ್ನದಲ್ಲ ಎಂಬಂತೆ ಭಾಸ...
ಇರಲಿ,
ಬೆಟ್ಟಕ್ಕೆ ಮತ್ತೊಂದು ಹಿಡಿ ಮಣ್ಣು ದಕ್ಕಲಿ ಈ ಇರುಳಲಿ...
ಶುಭರಾತ್ರಿ... 

ರವಿರಾಯ ತನ್ನ ಕಿರಣಗಳ ಹೂ ಮುಡಿಸಿ ಕರುಳ ಚುಂಬಿಸಿದ...
ಭುವಿಯಮ್ಮನ ಒಡಲ ಗುಡಿಯಲೀಗ ಕನಸುಗಳ ದೀಪೋತ್ಸವ...
ನಮ್ಮೆದೆಗೂ ಅದರ ಬೆಳಕ ನಗು ಸೋಕಲಿ...
ಶುಭದಿನ... 

ಮಲಗೆನ್ನ ಸ್ನೇಹವೇ –
ಇರುಳ ಗರ್ಭವ ಸೀಳಿ ಮನದ ತೋಳಲ್ಲಿ ಹೊಸ ಕನಸು ನಗುವ ಹೊತ್ತು...
ಶುಭರಾತ್ರಿ... 

ಹೊಸ ಬೆಳಗಿನಲಿ ಹಳೆ ನೆನಪುಗಳ ಕೈ ಹಿಡಿದು ಹೊಸ ಕನಸಿನ ತೀರಕೆ ಪಯಣ...
ಮರೆತಂತೆ ನಟಿಸುವುದು ನಡೆವ ಕಾಲ್ಗಳು ನಡುಗದಿರಲೆಂದಷ್ಟೇ...
ಶುಭದಿನ... 

ಅಮ್ಮನ ಮಮತೆಯ ಜೋಗುಳದಲಿ ತೊಟ್ಟಿಲಲಾಡುವ ಕಂದ ಊರ ಅರಸನಾಗುವ ಹೊತ್ತು...
ಶುಭರಾತ್ರಿ... 

ಅವನ ಮುಗುಳ್ನಗುವ ಕಂಡು ಕಾಗೆ ಮರಿಯೊಂದು ರೆಕ್ಕೆಗಳ ಕೊಡವಿ ಕಾsss ಅಂದಿತು...
ಭುವಿ ಮಡಿಲ ಕಂದನಿಂದ ರವಿರಾಯನಿಗೆ ಸುಪ್ರಭಾತದ ಹಾಡು...
ಶುಭದಿನ... 

ಅಂಗಳದಿ ಆಗಸಕೆ ಮೊಗವಿಟ್ಟು ನಿಂತ ಪೋರನ ಕಣ್ಣಲ್ಲಿ ತಾರೆಗಳು ಬೆರಗು ಬೆರಗಿನ ಕಥೆಗಳ ಹೇಳುವ ಹೊತ್ತು...
ಶುಭರಾತ್ರಿ... 

Monday, February 23, 2015

ಗೊಂಚಲು - ನೂರಾ ನಲವತ್ತೇಳು.....

ಹೀಗೆಲ್ಲ ಅನ್ನಿಸುತ್ತೆ.....
(ಯಾಕಂತ ಕೇಳಬೇಡಿ...)

ಎಷ್ಟೇ ಎಚ್ಚರದಿಂದಿದ್ದರೂ ತಾಳ ತಪ್ಪುತ್ತೆ ಅಭಿನಯ, ಮರೆತೇ ಹೋಗುತ್ತೆ ಸಂಭಾಷಣೆ...
ತಾಲೀಮಿಲ್ಲದೇ ಆಡಬೇಕಾದ ಬೀದಿ ನಾಟಕ ಇದು ಬದುಕು...
^^^
ಆತ್ಮೀಯತೆ – ಅದರ ಬೆನ್ನಲ್ಲೇ ಬೆಳೆಯೋ ನಿರೀಕ್ಷೆಗಳು – ಅವು ಹೊತ್ತು ತರೋ ನಿರಾಸೆ, ಕರುಳ ಕೊಯ್ಯೋ ವೇದನೆ...
ಅಮ್ಮಾ,
ಬಂಡೆಯಂತೆ ಹುಂಬನಾಗಿ ಬದುಕಿದಷ್ಟು ಸುಲಭವಿಲ್ಲ ಹಸಿರು ಬೆಳೆಯೋ ಹಸಿನೆಲವಾಗಿ ಜೀವಿಸೋದು...
^^^
ಪ್ರೀತಿ, ಪ್ರೇಮ, ಒಲವು, ಪ್ರಣಯ ಏನೇ ಅಂದರೂ ಅವೆಲ್ಲ ಹೊಸ ಕನಸುಗಳೊಂದಿಗಿನ ನಡಿಗೆಯೇ ಅಲ್ಲವಾ...
ಪ್ರೀತಿಯಾಯಿತು, ಪ್ರೇಮ ಸಂಭವಿಸಿತು, ಒಲವು ಒಡನಾಡಿಯಾಯಿತು, ಪ್ರಣಯ ಝೇಂಕರಿಸಿತು – ಏನೇ ಅನ್ನಿ ಅಲ್ಲೆಲ್ಲ ಕನಸುಗಳು ಬದುಕ ನಡೆಗೆ ಶಕ್ತಿ ತುಂಬಬೇಕಲ್ಲವಾ...
ಕನಸುಗಳೆಲ್ಲ ಸ್ಥಬ್ದಚಿತ್ರವಾಗುವುದನ್ನು, ನಿನ್ನ ಕನಸುಗಳು ನನ್ನ ಅಥವಾ ನನ್ನ ಕನಸುಗಳು ನಿನ್ನ ಅಡಿಯಾಳಾಗುವುದನ್ನು ಹೇಗೆ ಪ್ರೇಮವೆಂದು ಹೆಸರಿಸಲಿ...
ಇಷ್ಟಕ್ಕೂ ಭಾವಕ್ಕೊಂದು ಹೆಸರು ಬೇಕೇ ಬೇಕಾ...??
ಸ್ನೇಹಭಾವ, ಕಾಳಜಿ, ಅಕ್ಕರೆ, ಆತ್ಮೀಯತೆಗಳಿಲ್ಲದೇ ಪ್ರೇಮಕ್ಕೆ ಉಸಿರಿಲ್ಲ ನಿಜ; ಹಾಗಂತ ಸ್ನೇಹಭಾವ, ಕಾಳಜಿ, ಅಕ್ಕರೆ, ಆತ್ಮೀಯತೆಗಳೆಲ್ಲ ಪ್ರೇಮವೇ ಎಂದು ಅರ್ಥವಲ್ಲ...
ಚೌಕಟ್ಟುಗಳಾಚೆಯೂ ನಗಲಿ ಭಾವ ಮತ್ತು ಮಿತಿಗಳ ಮೀರಿ ಹರಿಯಲಿ ಬದುಕು...
^^^
ಮೌನವೇ – 
ಅವರೆಲ್ಲ ಅಂತಾರೆ “ಮಾತು ಹೇಳದ ಸಾವಿರ ಭಾವಗಳ ನೀನು ಅರುಹುವಿಯಂತೆ...!!!”
ನಾ ನಂಬಲು ಹೆದರುವ, ನಂಬದೇ ವಿಧಿಯಿಲ್ಲದ ಮಾತು ಅದು...
ಭಾವದರಮನೆಯ ಮಾತಿನ ಮಂಟಪದಿಂದಲೇ ಸಿಂಗರಿಸಿಕೊಂಡು ಕೂತವನು ನಾನು...
ನಿನ್ನ ಮಾತು ನನ್ನ ತಾಕಿ ಅರ್ಥ ಸಹಿತ ನಾ ಅರಳಿ ನಗುವುದಿದ್ದರೆ ಅದು ಸಾವಲ್ಲೇ ಇರಬೇಕು...
ಸಾವೆಂದರೆ ನೀ ಮಾತ್ರ ಆಳೋ ವಿಸ್ತಾರ ಸಾಮ್ರಾಜ್ಯವಂತೆ...
ನಿನ್ನೆಡೆಗೆ ನಂಗೆ ಅಷ್ಟಿಷ್ಟಾದರೂ ಪ್ರೀತಿ ಯಾಕೆ ಗೊತ್ತಾ...?
ಹೆಚ್ಚಿನ ಸಂದರ್ಭ ಮಾತ ಕೇಳಿದವರೊಳಗೆ ಮಾತು ಇಳಿದದ್ದು ಮಾತಾಡಿದಾತ ಶಾಶ್ವತವಾಗಿ ನಿನ್ನ ಸೇರಿದಾಗಲೇ ಅಂತೆ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Saturday, February 21, 2015

ಗೊಂಚಲು - ನೂರು + ನಲವತ್ತು + ಆರು.....

ಎಲ್ಲಾ ಅಯೋಮಯ.....
(ಏನು ಹೇಳಲು ಹೊರೆಟೆನೋ ನಂಗೇ ಅರಿವಿಲ್ಲ.....)

ಎಚ್ಚರಿಕೆಯಿಂದ ನಗಬೇಕು ಇಲ್ಲಿ – ಮುಖವಾಡಗಳು ಬಣ್ಣ ಬಣ್ಣದಲ್ಲಿರುತ್ತವೆ...

ಮುಳ್ಳಿನ ಗಿಡವೂ ಹಸಿರಾಗಿಯೇ ಇರುತ್ತದೆ ಮತ್ತು ಅದರಲ್ಲೂ ಹೂಗಳರಳುತ್ತವೆ...

ಗಡ್ಡ ಬಿಟ್ಟು ಅಥವಾ ಬಿಳಿ ಸೀರೆಯುಟ್ಟು ಧ್ಯಾನಕ್ಕೆ ಕೂತರೆ ಜ್ಞಾನಿಗಳಾದೇವಾ ಇಲ್ಲವಾ ಗೊತ್ತಿಲ್ಲ...
ಆದರೆ, ಖಂಡಿತಾ ಅರಿವೆಂಬುದು ಬದುಕಿನ ಮಳೆ, ಬಿಸಿಲು, ಬಿರುಗಾಳಿಗೆ ಎದೆಯೊಡ್ಡಿದವರ ಮನದ ಕಾಲಾಳು...
ಭಕ್ತನ ಕಾಣಿಕೆಯ ಬಾಳೆ ಹಣ್ಣು ತಿನ್ನೋ ಜ್ಞಾನಿ ಅನ್ನಿಸಿಕೊಂಡ ಸ್ವಾಮಿ ಖಂಡಿತಾ ಬಾಳೆಯ ಗಿಡ ನೆಟ್ಟು ಅದು ಫಲ ಕೊಟ್ಟಾಗ ರೈತ ಅನುಭವಿಸೋ ಖುಷಿಯ ಅನುಭವಿಸಿರಲಾರ...
ಕಾಯಕದ ಬೆಳಕಲ್ಲಿಲ್ಲದ ಕೈವಲ್ಯ ಜ್ಞಾನ ಗುಹೆಯ ಕತ್ತಲಲ್ಲಿದ್ದೀತಾ.?! 
ದುಡಿದು ಬೆವರಾದ ಕೊಳೆ ಬಟ್ಟೆಯವನಿಗಿರೋ ಜೀವನಾನುಭವ ಮಡಿಯ ಶುಭ್ರ ಪೀತಾಂಬರಧಾರಿಗೆ ಇದ್ದೀತೆನಿಸಲ್ಲ...

ಅಮ್ಮನ ಒದ್ದೆ ಕೈಯಲ್ಲೂ ರಂಗೋಲಿ ಹುಡಿ ಸರಾಗವಾಗಿ ಜಾರುತ್ತದೆ...
ನನ್ನ ಒರಟು ಕೈಯನೂ ಸುಡುವ ಬಿಸಿ ಹಂಚು ಅಮ್ಮನ ಮೃದು ಕೈಯಲಿ ಇಕ್ಕಳದ ಹಂಗಿಲ್ಲದೇ ಒಲೆಯಿಂದ ಕೆಳಗಿಳಿಯುತ್ತೆ...!!!
ಅಮ್ಮನ ಹಣೆಯ ಬೆವರ ಹನಿ – ಅಪ್ಪನೆದೆಯ ಒದ್ದೆ ರೋಮ ಹೇಗೆ ಬದುಕಬೇಕೆಂಬ ಸಾವಿರ ಕಥೆ ಹೇಳುತ್ತವೆ...
ಆದರೆ ಅವರೆಂದೂ ಪ್ರವಚನ ಕೊಟ್ಟಿದ್ದನ್ನ ಕೇಳಿಲ್ಲ...

ಜೀವಿಸಿ ಬಿಡಬೇಕು ರಾಕ್ಷಸ ಕರಡಿಯ ರತಿಯ ತೀವ್ರತೆಯಲ್ಲಿ ಭೂತ, ಭವಿಷ್ಯಗಳ ಹಂಗಿಲ್ಲದೆ ಇದ್ದದ್ದು ಇದ್ದಂತೆ ಈ ಘಳಿಗೆಯಲಿ...

ಹುಟ್ಟಿಲ್ಲದೆ ದೋಣಿಯ ನದಿಗಿಳಿಸಿದ ಮೇಲೆ ತೇಲಲೆ ಬೇಕು ನದಿ ತೇಲಿಸಿದ ಹಾಗೆ...

ಹೆಗಲ ಮೇಲೆ ಹೆಣ ಹೊತ್ತಾಗಲೇ ಇಲ್ಲಿನ ಸಕಲ ನಶ್ವರತೆಯೂ ಅರ್ಥವಾಗಿ ಬದುಕಿನೆಡೆಗೆ ಅಪಾರವಾದ ಹುಚ್ಚು ಮೋಹ ಹುಟ್ಟಿಬಿಟ್ಟಿತು...  

ಯಾರದೋ ಘೋರಿಯ ಮೇಲೆ ಅವರವರ‍್ಯಾರೋ ನೆಟ್ಟ ನಿಂಬೆಯ ಗಿಡಕ್ಕೆ ಅದ್ಹೇಗೋ ಮಲ್ಲಿಗೆ ಬಳ್ಳಿಯೊಂದು ಹಬ್ಬಿದೆ – ಇದೀಗ ಮಸಣದ ಮೂಲೆಯಲಿ ಮಲ್ಲಿಗೆ ಅರಳಿದೆ – ಸಾವಿನ ವಾಸನೆಯ ಜೊತೆ ಬೆರೆತ ಮಲ್ಲಿಗೆ ಕಂಪು...

ಕಿಟಕಿಯಾಚೆ ಕಾಂಬ ಲೋಕ ಮಹಾ ಮಾಯಕ ರೂಪ...
ಕುತೂಹಲದ ಎಣ್ಣೆ ಉರಿದು ಹೊಳೆವ ಕಣ್ಣ ದೀಪ...
ಮಿತಿಗಳ ಮೀರುವಾಸೆಯಲಿ ಉರಿವ ಮನದ ತಾಪ...
ನಾವೇ ನೆಟ್ಟುಕೊಂಡ ಕಂಬಿಗಳೊಳಗಿನ ಬದುಕಿದು ಯಾವ ದೇವನ ಶಾಪ...

ದನಿ ಇಂಪಿರುವ ಮಾತ್ರಕ್ಕೆ ಅಳಲೇ ಬಾರದೆ ಕೋಗಿಲೆ...?

ಎಲ್ಲ ಗೊಂದಲಗಳಾಚೆ ನಗುವೆಂಬುದಿದ್ದರೆ ಅದು ಸಾವೇ ಇರಬೇಕು...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Friday, February 13, 2015

ಗೊಂಚಲು - ನೂರಾ ನಲವತ್ತೈದು.....

ಸುಮ್ಮನೇ ಒಂದಷ್ಟು ಮಾತು.....

ಆ ದಾರಿಯ ತಗ್ಗು ದಿಣ್ಣೆಗಳಲ್ಲಿ ನಡೆವಾಗ ಆ ಅಜ್ಜಿ ಮೆಲ್ಲಗೆ ತಾತನ ಕೈ ಹಿಡಿಯುತ್ತಾಳೆ. ಬೆಸೆದ ನಡುಗುವ ಕೈಗಳಿಂದ ಶಕ್ತಿ ಸಂಚಾರದ ಆಸರೆ ಯಾರಿಂದ ಯಾರಿಗೆ ಎಂಬುದು ಅರಿವಾಗದ ಮಾಗಿದ ಅಕ್ಕರೆಯ ಕಾಳಜಿ. ಪ್ರೇಮವೆಂದರೆ ಇದೇ ಮತ್ತು ಇಷ್ಟೇ ಅಲ್ಲವಾ - ಪ್ರೇಮ ದೈವೀಕ ಅನ್ನಿಸೋದು ಇಂಥ ಪುಟ್ಟ ಪುಟ್ಟ ಕ್ಷಣಗಳ ಸಾಂಗತ್ಯದಲ್ಲೇ ಅಲ್ಲವಾ ಅಂತನ್ನಿಸಿ ಯಾವುದೋ ಹಿಗ್ಗಿನಿಂದ ಪಕ್ಕ ತಿರುಗಿದರೆ ನನ್ನ ಕಪ್ಪು ಹುಡುಗಿಯ ಕಡುಗಪ್ಪು ಕಂಗಳಲ್ಲಿ ತಂಪಾದ ತೆಳು ನಾಚಿಕೆ... 

@@@

ಒಂದು ಸ್ನೇಹ ಬಂಧ...
ಭಾವ ಮತ್ತು ಒಡನಾಟ ಅದರ ಎರಡು ಬೆಸುಗೆಗಳು...
ಭಾವ – ಅದು ಒಂಟಿಯಾಗಿಯೇ ಆದರೂ ನೂರು ಕಾಲ ನಡೆಯಬಲ್ಲ ಅಂತರಂಗದ ಒಡನಾಡಿ...
ಒಡನಾಟ – ಒಂಟಿಯಾಗಿ ಹತ್ತು ಹೆಜ್ಜೆಗಳನೂ ನಡೆಯಲಾರದ ಹೆಳವ...
‘ಸ್ನೇಹದ ಪಲ್ಲಕ್ಕಿಯ ಮೇಲೆ ಕೂತ ನಿರ್ವ್ಯಾಜ್ಯ ಪ್ರೀತಿ, ಅಭಿಮಾನಗಳೇ’ ಭಾವದ ಅಧಿದೇವತೆಗಳು...
ಒಡನಾಟ ತಾನು ‘ಕ್ರಿಯೆಗೆ ಪೂರಕವಾದ ಆಪ್ತ ಪ್ರತಿಕ್ರಿಯೆಯ’ ಅಡಿಯಾಳು...
ಭಾವ – ನಮ್ಮೊಳಗೆ ನಾವೇ ನಮಗೆ ಬೇಕಾದಂತೆ ಸಿಂಗರಿಸಿ ಕಾಪಿಟ್ಟುಕೊಳ್ಳಬಹುದಾದ ಎದೆಯ ಹಾಡು...
ಒಡನಾಟ – ನಾನೆಂಬುದು ನಾವಾಗಿ ನಕ್ಕು ಸಲಹಿಕೊಂಡು ಹಾಡಬೇಕಾದ ಜುಗಲ್ ಬಂಧಿ...
ಭಾವ ಒಂಟಿ ಮನದಲೂ ಉಸಿರಾಡಬಲ್ಲ ಮೌನ ಸಂಭಾಷಣೆ...
ಒಡನಾಟವೆಂದರೆ ಎರಡು ಮನಗಳ ಭಾವದ ಅಭಿವ್ಯಕ್ತಿಯಾದ ಮಾತು, ಕಥೆ, ವ್ಯಥೆಗಳ ವಿನಿಮಯ...
ಭಾವ ತನ್ನೊಳಗೇ ತಾನು ಬೆಳೆಯಬಲ್ಲ, ಅಳಿಯಲೂ ಬಲ್ಲ ಪ್ರೀತಿಯೊಂದನೇ ನೆಚ್ಚಿಕೊಂಡ ಆತ್ಮದ ಒಳಸೆಲೆ...
ಒಡನಾಟದ್ದು ದೊಡ್ಡ ಬಳಗ - ಪ್ರೀತಿ, ಅಭಿಪ್ರಾಯ, ಭಿನ್ನಾಭಿಪ್ರಾಯ, ಅಹಂ (ಇಗೋ), ಅಹಂಕಾರ, ಅಲಂಕಾರ ಹೀಗೆ ಎಷ್ಟೆಷ್ಟೋ ಆಕಾರ, ವಿಕಾರಗಳೆಲ್ಲ ಅದರ ಒಳಮನೆಯ ಒಕ್ಕಲೇ...
ಮನೆಯ ಯಾಜಮಾನ್ಯ ಯಾರದಿದೆ ಎಂಬುದರ ಮೇಲೆ ಒಡನಾಟದ ಅಳಿವು ಉಳಿವು ನಿರ್ಧರಿತ...
ಯಜಮಾನಿಕೆ ಪ್ರೀತಿಯ ಕೈತಪ್ಪಿತೋ ಎಂಥ ಆತ್ಮ ಸಾಂಗತ್ಯದ್ದೇ ಆದರೂ ಒಡನಾಟದ ಉಸಿರುಗಟ್ಟಿತೆಂದೇ ಅರ್ಥ...
ಭಾವದರಮನೆಗೆ ಆ ಭಾವದೆಡೆಗಿನ ಸೆಳೆತವೊಂದೇ ಅಧಿನಾಯಕ...
ಪ್ರೀತಿ ಪ್ರಧಾನವಾದ ಭಾವ ಮತ್ತು ಸೂಕ್ತ ಪ್ರತಿಕ್ರಿಯೆಗಳ ಒಡನಾಟ ಎರಡೂ ದಕ್ಕುವುದಾದರೆ (?) ಆ ಬಂಧದ ಸೌಂದರ್ಯವೇ ಬೇರೆ...
ಪ್ರೀತಿ ಅಭಿಮಾನದ ಸಾಂಗತ್ಯದಲ್ಲಿ ಒಡಮೂಡಿದ ಎಷ್ಟೋ ಸ್ನೇಹ ಬಂಧಗಳು ಒಡನಾಟದ ಹಾದಿಯಲ್ಲಿ ಪ್ರೀತಿಯ ಪ್ರತಿಕ್ರಿಯೆಗಳ ಸಾಂಗತ್ಯ ತಪ್ಪಿ ಕೇವಲ ಭಾವದ ಒಂಟೊಂಟಿ ನಡಿಗೆಯಲ್ಲಿ ಕಾಲ ತಳ್ಳುವುದು ಅನುಭವವೇದ್ಯ ಸತ್ಯ...
ಪ್ರತಿಕ್ರಿಯೆಗಳ ಸಾಂಗತ್ಯ ತಪ್ಪಿದ್ದು ಯಾವ ಕಡೆಯಿಂದ ಎಂಬುದು ನಗಣ್ಯ – ತಪ್ಪಿದ್ದು ಯಾವುದೋ ಒಂದು ಕಡೆಯಿಂದಲೇ ಆಗಿದ್ದರೂ ಪರಿಣಾಮ ಒಟ್ಟು ಬಾಂಧ್ಯವ್ಯದ ಮೇಲೇ...
ಆತ್ಮ ಸಾಂಗತ್ಯವಾಗಿ ಕೊನೆಗಾಲದವರೆಗೆ ಸಾಗಬಹುದಾಗಿದ್ದ ಎಷ್ಟೋ ಬಂಧಗಳ ನಡುದಾರಿಯಲ್ಲೇ ಕಳಕೊಂಡಾದ ಮೇಲೆ ಮೂಡಿದ ಅರಿವೆಂದರೆ - ಭಾವ ಇಲ್ಲದ ಒಡನಾಟ, ಒಡನಾಟಕ್ಕೆ ಕಾವು ನೀಡದ ಭಾವ ಎರಡೂ ಅಪೂರ್ಣವೇ...
ಅಲ್ಲಿ ನಗುವೆಂಬುದು ಮತ್ತದೇ ಕೃತಕ ಉಸಿರಾಟ ಸಾಧನ...
ಭಾವಕ್ಕೆ ತಕ್ಕ ಒಡನಾಟದ ಒಲವೂ ದಕ್ಕಿದರೆ ಸುಮ್ಮನೆ ಆ ಬಂಧದೊಂದಿಗೆ ನಡೆದುಬಿಡುವುದೊಳಿತು – ಯಾವ ತಕರಾರೂ ಮಾಡದೆ, ಎಂಥ ತಂಟೆಯನೂ ಹೂಡದೆ...

@@@

ಅಲ್ಲೆಲ್ಲೋ ಕೂತವರ ಮೌನ 'ಧ್ಯಾನ' ಆಗಿರದೇ ಅದವರ 'ಸಾವೂ' ಇರಬಹುದು...
ಸಾವೆಂದರೆ ದೇಹದ್ದು ಮಾತ್ರವೇ ಆಗಿರಬೇಕಿಲ್ಲ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Thursday, February 12, 2015

ಗೊಂಚಲು - ನೂರಾ ನಲವತ್ತು + ನಾಕು.....

ಹಗಲಿಗೊಂದಷ್ಟು - ಇರುಳಿಗಿನ್ನೊಂದಿಷ್ಟು ನಲ್ನುಡಿಗಳು.....

ಬೆಳಗೆಂದರೆ - ಒಲವು ಎದೆಯ ಅಕ್ಷರವಾಗಿ ಕೊನರಿ ಕೊರಳ ಹಾಡಾಗಿ ಬೆಳೆವ ಭರವಸೆಯ ಬೆಚ್ಚನೆ ಬೆಳಕಿನ ಗೂಡು...
ಶುಭೋದಯ...
:::
ಇರುಳ ಹಾಸಿನ ಮೇಲೆ ನಗೆಯ ದಿಬ್ಬಣದ ಕನಸಿನ ಚಿತ್ತಾರವ ನೇಯುತ್ತಾ ಬರುವ ಭವ್ಯತೆಯ ಬೆಳಕ ಉತ್ಸವಕೆ ಕಾತರದ ನಿರೀಕ್ಷೆಯಲಿ ಕಂಗಳಿವು ನಿದಿರೆಯ ಮುದ್ದಿಸಲಿ...
ಶುಭರಾತ್ರಿ...
:::
ಗರ್ಭದಲ್ಲಿ ಹೊಸ ಕನಸ ಹಾಡೊಂದನು ಹೊತ್ತು ಮತ್ತೊಂದು ಬೆಳಗಾಯಿತು...
ಬದುಕ ಋಣ ಬಲು ದೊಡ್ಡದು...
:::
ಇರುಳ ಗರ್ಭವು ಹೊಸ ಹೊಸ ಸವಿಗನಸುಗಳ ಹಡೆಯಲಿ...
ಭರವಸೆಯ ಮತ್ತೊಂದು ಹಗಲನ್ನು ಎದುರ್ಗೊಳ್ಳಲು ಎದೆಗೂಡನು ಸಿಂಗರಿಸೋಣ ಕಣ್ಣ ಹೊಳಪಿಂದ...
ಶುಭರಾತ್ರಿ...
:::
ಬೆಳಗೆಂದರೆ ಬರೀ ಬೆಳಗಷ್ಟೇ... 
ಮತ್ತೇನಿಲ್ಲ...
:::
ನಮ್ಮೆಲ್ಲರ ಎದೆಯ ಗರ್ಭಗುಡಿಯ ನಂದಾದೀಪಕೆ ಎಣ್ಣೆ ಸುರಿದು, ಕಣ್ಣ ಕಲ್ಯಾಣಿಯಲಿ ಕಾಲಾಡಿಸುತ ಕೂತ ಕನಸುಗಳಿಗೆ ಹಗಲಲ್ಲೂ ನಗಬಲ್ಲ ಜೀವಜಲವನ್ನು ಈ ಇರುಳು ತುಂಬಿಕೊಡಲಿ...
ಶುಭರಾತ್ರಿ...
:::
ಹೂಬುಟ್ಟಿ ಹೊತ್ತು ನಸು ನಾಚಿಕೆಯ ನಗು ಚೆಲ್ಲಿ ನಿಂತ ಹುಡುಗಿ 'ವಸುಧೆ...' 
ಅವಳ ಕಣ್ಣಲ್ಲಿ ತನ್ನ ಕನಸ ದುಕಾನು ತೆರೆದು ಕೂತ ಬಳೆಯಂಗಡಿ ಒಡೆಯ 'ರವಿರಾಯ...'
ಬೆಳಗಾಯಿತು - ನನ್ನ ಕಣ್ಣಲೂ ಹೊಸ ಬೆಳಕು...
ಶುಭದಿನ...
:::
ಇರುಳ ದಿಬ್ಬದ ಮೇಲೆ ಕನಸುಗಳ ದಿಬ್ಬಣ ಸಾಲು...
ಎಲ್ಲಿಂದಲೋ ಹೊರಟು ನನ್ನೆದೆಯ ಬೀದಿಗೇ ಬರುತಿರುವಂತಿದೆ...
ಶುಭರಾತ್ರಿ...

Saturday, February 7, 2015

ಗೊಂಚಲು - ನೂರಾ ನಲವತ್ಮೂರು.....

ಆಯಿ ಅಂದರೆ ಆಯಿ ಅಷ್ಟೇ.....
(ಹುಡುಗಿಯ ಹೊಗಳಿ ಪದಗಳ ಪೋಣಿಸಿದಂತಲ್ಲ ಅಮ್ಮನೊಲವ ಬಣ್ಣಿಸುವುದು...)

ಅವಳ ಮಡಿಲ ನಗು ನಾನು...:)
ಬದುಕು ಅವಳಿಗೆಂದು ಕೈಯೆತ್ತಿ ಒಂದಾದರೂ ನಗುವ ಕೊಟ್ಟಿದ್ದ ಕಂಡಿಲ್ಲ...
ಹಾಗಂತ ಅವಳೆಂದೂ ಕಣ್ತುಂಬಿಕೊಂಡು ಕೂತಿದ್ದನ್ನೂ ಕಂಡಿಲ್ಲ...
ಕೇವಲ ತನಗೆ ಅಂತ ಏನನ್ನೂ ಮಾಡಿಕೊಂಡದ್ದಿಲ್ಲ...
ಇಲ್ಲಿ ನಾ ನಗುವುದಕ್ಕಾಗಿ ಅಲ್ಲಿ ಅವಳು ಹಲ್ಲು ಕಚ್ಚಿ ಬದುಕ ಸೈರಿಸಿಕೊಳ್ಳುತ್ತಾಳೆ - ಆಗೀಗ ಸೆರಗಿನಂಚು ಒದ್ದೆಯಾದದ್ದೂ ನನ್ನ ಕಣ್ಣಳತೆಯಿಂದಾಚೆಯೇ ಉಳಿವಂತೆ ನೋಡಿಕೊಳ್ಳುತ್ತಾಳೆ...
ಅಕ್ಷರ ಗೊತ್ತಿಲ್ಲ – ಮಾತಿಗೆ ಬಣ್ಣ ಬಳಿಯುವ ಚಾತುರ್ಯದ ಅರಿವಿಲ್ಲ...
ಬದುಕನ್ನು ಹಳಿಯದೇ, ಎಂಥ ಸಮಸ್ಯೆಯ ಎದುರೂ ತಲೆ ಬಾಗದೇ, ಅವುಡುಗಚ್ಚಿ ನಡೆದುಬಿಡುವ ಅವಳ ಬದುಕ ರೀತಿ ತುಂಬಾನೇ ಕಲಿಸಿದೆ ನನಗೆ...
ಬದುಕು ಬಂಧಗಳೆಲ್ಲ ಸೇರಿ ದಯಪಾಲಿಸಿದ ನೋವುಗಳನೆಲ್ಲ ತನ್ನ ಗೆಲುವಿನ ನಗೆಯ ಬೆಳೆಯ ಗೊಬ್ಬರವಾಗಿಸಿಕೊಂಡ ಅವಳ ಆತ್ಮ ಶಕ್ತಿಯ ಪರಿಯನ್ನು ದಂಗಾಗಿ ನೋಡುತ್ತೇನೆ...
ಇಂದಿಗೂ – ಎಂದಿಗೂ ಅವಳ ಜೀವನ ಪ್ರೀತಿಯೇ ನನ್ನ ಬದುಕ ಸ್ಫೂರ್ತಿ...
ನಂಗೆ ಉಸಿರು ನೀಡಿದ ನನ್ನ ಮೊದಲ ಆಪ್ತ ಗೆಳತಿ ಆಕೆ...
ನಾನೇ ದೂರವಿಟ್ಟ ನನ್ನ ನಾಳೆಗಳ ಕನಸುಗಳನ್ನು ಅವಳು ಕಾಣುತ್ತಾಳೆ ನನಗಾಗಿ... 
ಅವಳೆದೆಯ ಬೆಂಕಿಯಲಿ ಚಳಿ ಕಾಯಿಸಿಕೊಂಡು ಬೆಚ್ಚಗಿರುವ ಮಹಾ ಪುರುಷ ಮಗರಾಯ ನಾನು... 
ಬದುಕಿನೊಂದಿಗೆ ಜಿದ್ದಿಗೆ ಬಿದ್ದ ಮಹಾ ಜಿಗುಟಿನ ಹೆಣ್ಣು ಜೀವ ಅವಳು - ಅವಳಿಗಿಂದು ಅರವತ್ತೇಳು ವಸಂತಗಳು ತುಂಬಿದವು – ಇಂದಿಗೂ ಅವಳಲ್ಲಿರುವ ಕುಂದದ ಜೀವನೋತ್ಸಾಹ ನನ್ನ ಅಚ್ಚರಿ...
ಉಹುಂ – ಅವಳಿಗದರ ಅರಿವಿಲ್ಲ...
ಹೇಳೋಣವೆಂದರೆ ಅವಳೂರಲ್ಲಿ ಜಂಗಮವಾಣಿ ಕೂಡ ಸದ್ದು ಮಾಡೋಲ್ಲ...
ಇಲ್ಲೇ ಹೇಳುತ್ತೇನೆ – ಪ್ರತ್ಯಕ್ಷವಾಗಿ ಅದು ಅವಳ ತಲುಪಲಾರದೆಂದು ಗೊತ್ತಿದ್ದೂ....
ಹೇಯ್ – ಹುಟ್ಟು ಹಬ್ಬದ ಪ್ರೀತಿಯ ಶುಭಾಶಯಗಳು ಕಣೇ “ಸಾವಿತ್ರೀ...”
ನನ್ನೆಲ್ಲ ಶಬ್ಧ ಬಂಢಾರದ ನಿಲುಕಿನಾಚೆಯ ಅಮೂರ್ತ ಭಾವಸೆಲೆ ನಿನ್ನ ಮಮತೆ...
ನೀನೆಂದರೆ ಎಂಥ- ಗ್ರೀಷ್ಮದ ದಾಳಿಗೂ ಒಂದೇ ಒಂದು ಹನಿ ಕೂಡಾ ಬತ್ತದ ಒಲವ ಸರಿತೆ...
ಎನ್ನ ಕಾಯುವ ಮಮತೆಯೊಡಲೇ ಲವ್ ಯೂ ಕಣೇ... ❤ ❤ ❤ 

Thursday, February 5, 2015

ಗೊಂಚಲು - ನೂರಾ ನಲವತ್ತೆರಡು.....

ಮತ್ತಿಷ್ಟು ಖಾಲಿ ಖಾಲಿ ಭಾವಗಳು.....

ಪ್ರತೀ ಖುಷಿಗೂ ಖಂಡಿತಾ ಒಂದು ಅಂತ್ಯ 'ಇದ್ದೇ' ಇದೆ...
ಅಂತೆಯೇ ಪ್ರತೀ ವೇದನೆಗೂ ಕೂಡಾ ಅಂತ್ಯ ಇರುವುದಂತೆ - 'ಅಂತೆ' (?)...
ನಂಬದೇ ವಿಧಿಯಿಲ್ಲ ಬಿಡಿ...

;;;

ದೃಷ್ಟಿ ಇಂಗಿದರೂ ನನ್ನ ಕಣ್ಣ ಗುಡ್ಡೆಗಳ ಮೇಲೆ ಮನಸ ಆಸರೆಯಿಂದ ಕಲ್ಪನೆಯ ಕುಂಚ ಬಳಸಿ ಕನಸ ಬಣ್ಣ ಬಳಿದು ನಿನ್ನ ಚಿತ್ರವೊಂದ ಬಿಡಿಸ ಬಯಸುತ್ತೇನೆ...
ಇನ್ನೇನು ಕೊನೆಯಲ್ಲಿ ಆ ಚಿತ್ರಕ್ಕೆ ಕಂಗಳ ಬರೆದು ಜೀವ ತುಂಬಬೇಕು; ಅಷ್ಟರಲ್ಲಿ ನೆನಪುಗಳೆಲ್ಲ ಹನಿಗಳಾಗಿ ನನ್ನ ಕುರುಡು ಕಣ್ಣಲ್ಲಿ ತುಳುಕಿ ಬರೆದ ಚಿತ್ರವೆಲ್ಲ ಕಲೆಸಿ ಹೋಗುತ್ತೆ...
ದೃಷ್ಟಿಹೀನವಾದರೂ ಮನದ ಭಾವ ರೂವಾರಿಗಳಾದ ಈ ಕಂಗಳು ಭಾವಹೀನ ಅಲ್ಲವಲ್ಲ...
ನೀನೆಂದರೆ ನನ್ನೊಳಗೆ ನಾ ಸದಾ ಹುಡುಕೋ ಖುಷಿಯ ಆಕಾಶ ಬುಟ್ಟಿ...

;;;

ಆತ್ಮ ಸಂಗಾತಗಳೇ -
ನೂರಾರು ವಿಧಗಳ ಬಣ್ಣಗಳ ಸೃಜಿಸೋ ಬೆಳಕಿನಂಥ ಬದುಕು – ಎಲ್ಲಾ ಬಣ್ಣಗಳನೂ ನುಂಗಿ ತೇಗುವ ಕತ್ತಲಿನಂಥ ಸಾವು ಎರಡೂ ಒಂದೇ ಎದೆಯ ಕೋಣೆಯಲಿ ತಬ್ಬಿ ಮಲಗಿವೆ...
ಅವುಗಳ ಅನೈತಿಕ (?) ಸರಸೋನ್ಮಾದ ಸೃಷ್ಟಿಸುವ ಸಂಬಾಳಿಸ ಹೋದಷ್ಟೂ ಕೆರಳಿ ನಿಲ್ಲುವ ವಿಕಾರ ಭಾವಗಳೆಲ್ಲದರ ಮೊದಲ ಬಲಿ ನಾನೇ...
ನೀವೂ ಬಲಿಯಾಗುವ ಮುನ್ನ ದೂರವಾಗಿಬಿಡಿ...

;;;

ಸ್ನೇಹಗಳೇ - 
ವ್ಯಕ್ತಿತ್ವದ ವೈರುಧ್ಯಗಳು, ವಿಚಾರ ಭಿನ್ನತೆಗಳೆಲ್ಲ ಕೇವಲ ಭಿನ್ನಾಭಿಪ್ರಾಯಗಳಷ್ಟೇ ಆಗಿರುವವರೆಗೂ ಪ್ರತಿದಿನವೂ ‘ಮಾತು’ ಒಡನಾಟದ ಉತ್ತುಂಗದ ಉತ್ಸವ – ಅಲ್ಲಿ ಜಗಳವೂ ಒಂದು ಮನರಂಜನೆಯ ಗಿಲಕಿಯಾಟ... 
ಒಂದ್ಯಾವುದೋ ಭಿನ್ನಾಭಿಪ್ರಾಯ ಒಟ್ಟು ವ್ಯಕ್ತಿತ್ವದೆಡೆಗೇ ಬೇಸರ, ಕ್ರೋಧಗಳಾಗಿ ಬದಲಾದ ಘಳಿಗೆಯ ಬಿಂದುವಿನಾಚೆ ‘ಮಾತು’ ಮೌನದರಮನೆಯ ಜೀತದಾಳಿನ ಶವ ಶೃಂಗಾರ – ಅಲ್ಲಿ ಸರಸವೂ ಬಂಧದ ಕೃತಕ ಉಸಿರಾಟ ಅಷ್ಟೇ...
ಅತಿ ಪ್ರಾಮಾಣಿಕತೆ ಕೆಲವೊಮ್ಮೆ ತುಂಬಾನೆ ತುಟ್ಟಿಯಾಗುತ್ತೆ ಅನ್ಸುತ್ತೆ – ಒಳಗೇ ಸುಡುವ ಅಪ್ರಾಮಾಣಿಕ ಮೌನವೇ ಹಿತವಿತ್ತು ಅನ್ನಿಸುವ ಹಾಗೆ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Monday, February 2, 2015

ಗೊಂಚಲು - ನೂರು + ನಲವತ್ತು + ಒಂದು.....

ಖಾಲಿ ಖಾಲಿ ಭಾವಗಳು.....

ಅದೇ ಬೀದಿ, ಅದೇ ಹಾದಿ, ಅದದೇ ತಿರುವುಗಳಲಿ ಎಂದಿನಂತೆ ಒಂಟೊಂಟಿ ನಡಿಗೆ...
ನೆರಳು ಕೂಡ ದೂರ ಸರಿಯೋ ಕಾರಿರುಳಲ್ಲೂ ಜೊತೆ ಬಿಡದೆ ನಡೆವ ತುಸು ಜಾಸ್ತಿಯೇ ಉಪ್ಪುಪ್ಪು ನೆನಪುಗಳು...
ಒಪ್ಪವಾಗಿ ತಾವು ನೀಡಿ ಸಲಹುತಿರುವುದೂ - ಹೂಳಬೇಕಿತ್ತು ಈ ಹಾಳು ನೆನಪುಗಳ ಹೊಯ್ದಾಡಿ ಕಾಡದಂತೆ ಎಂದಳುವುದೂ ಎರಡೂ ಎನ್ನೆದೆಯೇ ಆಗಿರುವುದು ಬದುಕಿನ ದುರಂತವಾ...?
ಅಥವಾ ಬದುಕಿರುವುದೇ ಹಾಗಾ...??
ಎರಡು ತಲೆಯ ಹಾವಿನ ಹಾಗೆ... 

!!!

ಸ್ನೇಹವೇ -
ಎಲ್ಲಾ ಶಬ್ದಗಳೂ ಅದಿರುವಂತೆಯೇ ಅರಿವಿಗೆ ಬಾರದೇ ಹೋದರೂ ಭಾವ ಉಕ್ಕಿ ಹರಿವ ಮೌನದೊಳಗಣ ಮಾತು ಬಲು ಚಂದ...
ಎಲ್ಲಾ ಅರ್ಥವಾಗುವ ಭಾವನೆಗಳ ಶವದ ವರ್ಣನೆಯಂಥ ಮಾತಿನೊಳಗಣ ಮೌನ ಮಹಾ ಹಿಂಸೆ...
ಕಿಂಚಿತ್ತಾದರೂ ಒಲುಮೆ ಬಾಕಿ ಇದ್ದುದಾದರೆ ಎದೆಯಲ್ಲಿ, ಮೌನದ ನಡುವೆ ಒಂದು ಜಗಳವಾದರೂ ಹುಟ್ಟಲಿ...
ಒಲುಮೆಯನುಳಿಸುವ, ಉಳಿಸಿ ಬೆಳೆಸುವ ಹಠಕ್ಕೆ ಬಿದ್ದ ಜಗಳವೂ ಚಂದವೇ ಅಲ್ಲವಾ...

!!!

ಒಂದಷ್ಟು  ಬಣ್ಣ  ಬಣ್ಣದ ಖುಷಿಯ ನೆನಪುಗಳ ಬುಗ್ಗೆಗಳ ಹೆಗಲಿಗೇರಿಸಿಕೊಂಡು, ಇನ್ನಷ್ಟು ಸುಖದ ಕನಸುಗಳ ಅಂತರಂಗದ ಪೆಟ್ಟಿಗೆಯಲಿ ಬಚ್ಚಿಟ್ಟುಕೊಂಡು, ಬೆಳಕಿನುತ್ಸವದ ಕಡೆಗೆ ಒಂಟಿ ಹೆಜ್ಜೆಗಳನಿಡುತಿರುವ ಹುಚ್ಚು ಫಕೀರ ನಾನು...
ಈ ಘಳಿಗೆ ನನ್ನದೇ ಹೆಜ್ಜೆಯಡಿಯ ಧೂಳ ಹುಡಿಯನೂ ಕಣ್ಣಿಗೊಂತ್ತಿಕೊಂಬ, ಮರುಘಳಿಗೆ ದೇವಮುಡಿಯ ಪ್ರಸಾದವನೂ ತುಳಿದು ಗಹಗಹಿಸುವ ವಿಕ್ಷಿಪ್ತ ಮನದೊಡೆಯ...
ಈ ಘಳಿಗೆಯ ಖುಷಿಯೊಂದೇ ನನ್ನ ನೆಚ್ಚಿಗೆ...
ಕ್ಷಣ ಕ್ಷಣಗಳ ಖುಷಿಗಳಿಗಾಗಿ ಎಂಥ ಬೇಲಿಗಳನೂ ಮುರಿದು ಮುನ್ನುಗ್ಗುವ ಹರ ಹುಂಬ ದಾರಿ ನನ್ನದು...
ಸುಖದ ಸುಸ್ತಿನಮಲಿಗೆ ಒಗ್ಗಿಹೋದ ಈ ಮರುಳನ ಹಿಂದೆ ಬಿದ್ದವರೆಲ್ಲ ತಮ್ಮ ಸುಖಗಳ ಕಳೆದುಕೊಂಡು ಹಿಂದೆಯೇ ಉಳಿದು ಹೋದದ್ದು ನಂಬಲೇಬೇಕಾದ ಸತ್ಯ...

!!!

ಗುಲಾಬಿ ಗಿಡದಲ್ಲಿ ಮುಳ್ಳಿರುತ್ತೆ, ಮತ್ತಾಮುಳ್ಳು ನನ್ನ ಚುಚ್ಚುತ್ತೆ, ಅದಕೇ ನಾನೆಂದೂ ಗುಲಾಬಿ ಗಿಡವ ನೆಡಲಾರೆ - ನೆಟ್ಟು ನೀರು ಗೊಬ್ಬರ ಉಣಿಸಲಾರೆ ಎಂಬುವವನಿಗೆ ಗುಲಾಬಿ ಹೂವಿನ ಅಂದ ಗಂಧಗಳ ಸವಿಯುವ ಹಿತಾನುಭೂತಿಯೂ ದಕ್ಕದಲ್ಲವಾ...
ಅಂತೆಯೇ ಭಾವ ಬಂಧಗಳು ಕೂಡಾ - ನೋವ ನೀಡುತ್ತವೆಂದು ಬೆಸೆದುಕೊಳ್ಳದೇ ದೂರ ನಿಂತರೆ ಹತ್ತಿರ ಇರಬಹುದಾಗಿದ್ದಷ್ಟು ಕಾಲದ ಖುಷಿಗಳಿಂದಲೂ ವಂಚಿತರಾಗುತ್ತೇವೆ...
ಇಷ್ಟಕ್ಕೂ ಹೂವು ಬಾಡಿ ಹೋದರೂ, ಬಂಧ ಒಡನಾಟದಿಂದಾಚೆ ನಿಂತರೂ ಅವು ಅರಳಿಕೊಂಡಿರುವಾಗ ಇತ್ತ ಖುಷಿಗಿಂತ ಹೆಚ್ಚೇನಲ್ಲ ಅನ್ನಿಸುತ್ತೆ ಆ ಮೇಲಿನ ನೋವು...
ಬದುಕೆಂದರೆ ಕ್ಷಣ ಕ್ಷಣಗಳ ಖುಷಿ...
ಎಷ್ಟು ಹೆಚ್ಚು ಕ್ಷಣಗಳ ಖುಷಿಯಿಂದ ಕಳೆದೆವು ಎಂಬುದರ ಮೇಲೆ ಬದುಕಿನ ಶ್ರೀಮಂತಿಕೆಯ ಅಳೆಯೋಣ ಅಲ್ಲವಾ...
ಬೆಸೆದುಕೊಳ್ಳೋಣ ಇನ್ನಷ್ಟು ಮತ್ತಷ್ಟು ಪ್ರೀತಿಯ...
ಪ್ರೀತಿಯೆಂದರೆ ಮುಳ್ಳಿನ ನಡುವೆಯೂ ಅರಳುವ ನಗೆಗುಲಾಬಿ...

!!!

ಪಾರಿಜಾತ -
ಎಂಥ ಮೃದುವಾದ ಪಕಳೆಗಳು...
ಗಾಳಿಗೂ ಸಂಭ್ರಮವನೀವಂಥ ನವಿರು ಗಂಧ...
ಸಂಜೆ ಸಾಯುವ ಹೊತ್ತಲ್ಲಿ ಅಂಗಳದ ಏರಿಯಲಿ ಅರಳಿ ಒಂದಿಡೀ ಇರುಳನು ಉಲ್ಲಾಸದ ವಿಲಾಸದಲಿ ಲಾಲೈಸುವ ಉನ್ಮತ್ತ ಜವನಿಕೆ...
ನನ್ನ ಕನಸುಗಳೆಂದರೆ ಪಾರಿಜಾತ -
ಇರುಳ ತುಂಬ ಕನಸ ಕಾವ್ಯದ್ದೇ ಆಲಾಪ ಕಲಾಪ...
ಎದೆಯಿಂದ ಕಣ್ಣಿಗೇರಿದವೋ ಕಣ್ಣಿಂದ ಎದೆಗಿಳಿದವೋ ಒಟ್ನಲ್ಲಿ ಮೈಮನದ ಮೈದಾನವೆಲ್ಲ ಖುಷಿಯ ಕನಸುಗಳದೇ ಚಕ್ರಾಧಿಪತ್ಯ...
ಕತ್ತಲ ಕಾವಳದಲ್ಲಿ ವೈಭವದ ಒಡ್ಡೋಲಗ ನಡೆಸಿ ಬೆಳಗ ಮೊದಲ ಕಿರಣ ನೆಲ ಸೋಕುವ ಹೊತ್ತಿಗಾಗಲೇ ಅಂಗಳದಲ್ಲಿ ಪಾರಿಜಾತದ ಶವಯಾತ್ರೆ...
ನನ್ನ ಕನಸುಗಳೆಂದರೆ ಪಾರಿಜಾತ...

!!!

ಮುಖವಾಡ ತೊಡುವುದೆಂದರೆ ಆತ್ಮದ ಸಾವು ಎಂಬ ಭಾವ...
ತೊಡಲಾರೆನೆಂದರೆ ಯಾರೂ ಸುಳಿಯದ ದ್ವೀಪವಾಗುವ ಭಯ...
ಪ್ರೀತಿ ಕೊಡುವುದೆಂದರೇನೆಂಬ ಅರಿವಿನ ಗಂಧ ಗಾಳಿಯಿಲ್ಲ...
ಪ್ರೀತಿಯುಂಬುವುದರಲ್ಲಿ ಬಕಾಸುರನ ಹಸಿವು...
ಬಡಿಸುವವರಾದರೂ ಎಷ್ಟು ಕಾಲ ಬಡಿಸಿಯಾರು ಲಜ್ಜೆ ಇಲ್ಲದ ಲಂಪಟ ಮನಸಿಗೆ...
ಎತ್ತಿಡುವ ಪ್ರತೀ ಹೆಜ್ಜೆಯಡಿಯಲೂ ಬೊಗಸೆ ಒಡ್ಡುವುದೊಂದೇ ಬದುಕಾಗಿ ಹೋದಂತ ಪಾಪ ಪ್ರಜ್ಞೆಯ ಕಲೆ ಉಳಿದು ಕಾಡುತಿದೆ ಈಗೀಗ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)