Wednesday, October 14, 2020

ಗೊಂಚಲು - ಮುನ್ನೂರಾ ನಲವತ್ತು ಮತ್ತೊಂಭತ್ತು.....

ಇಷ್ಟು ಸಾಕು.....

ಕನಸೇ -
ಕೊನೇಯದಾಗಿ ಕಣ್ಣ ಕೊಳದ ನೀರಲೆಯಲಿ ಕಲೆಸಿ ಹೋದದ್ದು ನೀನಾ ನಾನಾ... 

ಇಷ್ಟುದ್ದ ಬಾಳಿ ಬದುಕಿದರೂ ಒಲಿಯದ ಮೌನದ ಚಾಳಿ ಮತ್ತು ಕರಗದ ಖಾಲಿತನ...
ನನಗಾಗಿ ಘನತೆಯದೊಂದು ಗೂಡನೂ ಗಳಿಸಿಕೊಡಲಾಗದ ನನ್ನ ಮಾತೆಂಬ ಉದ್ದುದ್ದ ಬಡಬಡಿಕೆಗಳು...
ನಡೆದಂತೆ ನನ್ನದೇ ಹೆಗಲ ಮೇಲೆ ನನ್ನದೇ ಹೆಣದ ಮೆರವಣಿಗೆ...

ಸರದಿಯಲ್ಲಿ ಎನ್ನ ಪಾಳಿ ಎಂದೋ ಏನೋ...
ಎನ್ನೊಡನೆಯ ಎನ್ನದೇ ಯುದ್ಧ ಮುಗಿಯುವ ಆ ದಿನದ ಆ ಘಳಿಗೆಗೆ ಚಾತಕದಂಗೆ ಕಾಯುತ್ತಾ ಕಾಯುತ್ತಾ ನೂಕುವುದು ಹಗಲನೂ ಇರುಳನೂ ಒಂದೇ ಸಮದ ನಿತ್ರಾಣದಿ...
ನಿರೂಪ ಕೊಡುವವನು ನನ್ನ ನಿರ್ಲಕ್ಷಿಸಿದಂತಿದೆ...

ಕಾಯುವುದು ಕಾಯುವುದು..‌. 
ನೀ ಬರದೇ ಹೋದರೂ, ಬರಲಾರೆ ಎಂಬ ಅರಿವಿನ ಸೊಡರು ಹಿಡಿದೂ ಕಾಯುವುದು ಸುಖವಹುದು...
ಕಾಯುತ್ತಾ ಕಾಯುತ್ತಾ ವಿಕ್ಷಿಪ್ತ ನಿರಾಯಾಸದಿ ಸಾವಿನ ಮನೆ ಹೊಸಿಲ ತುಳಿವುದು...
ಕಾದಿದ್ದೇನೆ ಮತ್ತು ಕಾದೇ ಇದ್ದೇನೆ ಎಂಬ ನರಕಸುಖ...

ಹನಿ ಬತ್ತಿದ ಕಣ್ಣಲ್ಲಿ ಬಂಜರೆದೆಯ ಬಿಂಬ...
ಮರಳು ಸೀಮೆಯ ಮೌನ...
ಇದು ಒಂದು ಬದಿಯ ಪಾಡು...

ಪಟ: ಎನ್ನದೇ ಜಂಗಮವಾಣಿಯ ಕಣ್ಣಲ್ಲಿ...

ಇನ್ನೊಂದು ಮಗ್ಗುಲಲಿ ಅದೇ ಹೊತ್ತಿಗೆ -
ಗಾಳಿಗೊಲಿದು ಕರಗಿ ಸೋನೆಯಾದ ಮೋಡದ ತುಂಡಿನ ತೇವಕೆ, ಬೆಳಕಿನೊಲವಿನ ಶಾಖಕೆ ಕಿಟಕಿಯಾಚೆಯ ಮರದ ಮೈಯ್ಯೆಲ್ಲ ಹೂವಾಗಿ ಅರಳಿದೆ...
ಹಕ್ಕಿಗೊರಳ ತುಂಬಾ ಜೇನು ಝೇಂಕಾರ...
ದುಂಬಿ ಒಡಲಿಗೆ ಮಧು ಪೇಯ, ಹೂಗರ್ಭ ಕಾಯಿ ಬಸಿರು - ಪ್ರಕೃತಿ ಶಬ್ದವೆಂದರೆ ಹೊಸತೇ ಜೀವಚಕ್ರ...
ಸೃಷ್ಟಿ ಸೊಬಗಿನ ನವನೀತದ ವಿನೀತಕೆ ಆ ಕ್ಷಣ, ನನ್ನೇ ಕೊಲ್ಲಲಣಿಯಾದ ಎನ್ನಾಂತರ್ಯದ ಕ್ಷುದ್ರ ನಿಶ್ಶಬ್ದದ ಕೈ ನಡುಗಿದಂತಿದೆ...
ಎದೆಯ ಸಲಿಲ ಒಣಗಿದ ಸುದ್ದಿ ಪ್ರಜ್ಞೆಯ ಗದ್ದುಗೆಯ ತಲುಪದಿರುವ ಸಣ್ಣ ಸಹನೀಯತೆ - ವಿಚಿತ್ರ ಭರವಸೆ...
ನೀನು ಇಲ್ಲೇ ನನ್ನ ಕಣ್ಣ ಹರಿವ ತಪ್ಪಿಸಿ ನೆರಳಿಗಂಟಿ, ನನ್ನ ಹೆಜ್ಜೆಗಳನು ನಿನ್ನ ಹೆಜ್ಜೆಗಳಲಿ ಅಳೆಯುತ್ತಾ, ತುಂಟ ಪುಳಕಗಳ ಮಂದಹಾಸವ ಹೆಕ್ಕಿಕೊಂಡು ನಡೆಯುತಿರುವಂತೆ ಭಾವ ಭಾಸ...
ಪ್ರಕೃತಿ(ನಿನ್ನ)ಯ ಹೂ ಮನದ ಹೊಳಲು ನನ್ನೀ ಹೂ ಬಿದ್ದ ಎದೆ ಕಣ್ಣಲೂ ನಗೆ ಬೆಳಕ ಕೆತ್ತುವುದು ಪ್ರೀತಿ ಸಂಯೋಜನೆಯ ಚಂದ ಸಂಭಾಷಣೆ...

ಜೀವದುಸಿರ ನಿಲ್ಲಿಸುವುದು ಸುಲಭ - ಆದರೆ ಭಾವದ್ದೋ, ಬರೀ ಪಾತ್ರ ಬದಲಿಸಬಹುದಷ್ಟೇ...
ಕತ್ತಲ ಸೆರಗಿನ ಅಂಚಲ್ಲೇ ಬೆಳಕಿನ ಕಿಡಿಯ ಹೊಸ ಹಾಡು...

ಮತ್ತೀಗ -
ನೀನು - ನನ್ನ ನಡೆಯಲಾಗದ ಸುಸ್ತೀವ ವೈಕಲ್ಯ ಮತ್ತು ನಿಲ್ಲಲು ಬಿಡದ ಬಯಕೆಯ ವೈಭೋಗ...
"ಆಕಳಿಸುತ್ತಲೇ ಎಚ್ಚರಕ್ಕೆ ದಾಟುವಂತೆ - ಮುಗಿಯದಿರಲಿ ಹುಚ್ಚು ಪಯಣ ನೀನೇ ಸಿಕ್ಕರೂ..."
#ಇಷ್ಟು_ಸಾಕು_ಮತ್ತು_ಇಷ್ಟಾದರೂ_ಬೇಕು_ಬದುಕಿಗೆ...

Friday, October 9, 2020

ಗೊಂಚಲು - ಮುನ್ನೂರಾ ನಲವತ್ತು ಮತ್ತೆಂಟು.....

ದೇವಬಲಿಯಂತ ಬದುಕು.....

ಬದುಕು ಉದ್ದೇಶಗಳ ಹುಡುಕಿಕೊಂಡು ಅವುಗಳ ಪೊಳ್ಳು ಬಿಳಲಿಗೆ ನೇತುಬಿದ್ದು ಜೀಕ್ತಾ ಇದ್ರೆ, ಸಾವು ಚುರುಕು ಕಣ್ಣಿಂದ ಸಣ್ಣ ನೆಪವ ಹುಡುಕ್ತಾ ಹೊಂಚಿ ಕೂತಿರತ್ತೆ...
#ಭಾವಗತಿ...
⇭⇱⇲⇭

ಸಾವು ಬಿಡುಗಡೆ ನಿಜ...
ಆದ್ರೂ ಬದುಕು ಕೆಟ್ಟ ಕನಸಾಗಬಾರದು...
ಎದೆಯ ನಿಸ್ಸತ್ವ ನಿರ್ವೇದದ ದಾರಿಯಾಗಬಾರದು...
#ವಿರತಿ...
⇭⇱⇲⇭

ಯಮನ ಕಣ್ಣಿಗೆ ವಯಸ್ಸಾಗುವುದಿಲ್ಲ - ಕುಣಿಕೆ ಬೀಸೋ ಕೈ ಸೋತು ಸುಸ್ತೆಂದದ್ದಿಲ್ಲ - ಯಮ ಭಟರು ರಜೆ ತಕೊಂಡ ದಾಖಲೆಯೇ ಇಲ್ಲ...
#ಸಾವು...

ಬದುಕಿನ ಈ ಅನಿಶ್ಚಿತ ಹಾದಿಗಳೆಲ್ಲಾ ಅವಸರಿಸಿ ಹರಿಯುವುದು ನಿಶ್ಚಿತ ಸಾವಿನೆಡೆಗೇ...
..........ಇಂತಿಪ್ಪಲ್ಲಿ.........
"ಬದುಕಿನ ಯಾವ ನಿಯಮವೂ, ಎಂಥ ಬೇಲಿಯೂ ಸಾವಿಗೆ ಲೆಕ್ಕಕ್ಕೇ ಇಲ್ಲ..."
#ಎದೆಯ_ಬಲಿ...

ಯಾರಿಗೂ ಹೇಳದೇ ಕಳೆದೋಗಬೇಕು ಮತ್ತು ಎಲ್ಲರನೂ ಬೇಹದ್ ನೆನೆಯಬೇಕು...
#ಎಲ್ಲಿಗೂ_ಸಲ್ಲದ_ಪಯಣ...

ಭೇಟಿಯ ಮಾತಿನ್ನೂ ಬಾಕಿ ಇದೆ - ಉಳಿಯುವ ಹಟ ಆರದಿರಲಿ...
#ಉಸಿರ_ಉರಿ...

ಕಾಯುವ ತ್ರಾಣ ಕಾಯ್ದಷ್ಟು ದಿನ ಒಳಿತಿನ ಹಂಬಲು ಇಲ್ಲಿ...
ಒಂದೇ ಒಂದು ಮರು ಕೂಗಿನ ಆರ್ತ ತಪನೆ ನನ್ನಲ್ಲಿ...
#ಕೇಳಿಸ್ತಾ...

ಇಲ್ಲಿ ಎಲ್ಲರಲ್ಲೂ ಬರಿ ನೋವೊಂದೇ ಸತ್ಯವಾ...?
ನಗು ಎಂದರದು ನೋವು ತಾನೇ ತಾನಾಗಿ ಬಿಟ್ಟುಕೊಟ್ಟ ಸಣ್ಣ ವಿರಾಮ ಅಥವಾ ನೋವಿನಿಂದ ನಾವೇ ನಾವಾಗಿ ಕಸಿದುಕೊಳ್ಳಬೇಕಾದ ಸಣ್ಪುಟ್ಟ ಆರಾಮವಷ್ಟೇನಾ...??
ಎಲ್ಲೋ ಸಿಕ್ಕ ಅಥವಾ ದಕ್ಕಿಸಿಕೊಂಡ ನಗುವೊಂದು ಬಾಳಿನ ಒದ್ದಾಟದ ಹಾದಿಯ ಒಂದು ಹೆಸರಿಲ್ಲದ ನಿಲ್ದಾಣ ಮಾತ್ರವಾ...???
ಸುತ್ತ ಕಣ್ಬಿಟ್ಟು ನೋಡಿದರೆ ಸುಸ್ತಾಗುತ್ತೆ...
#ಉತ್ತರ_ಅರಗದಿರೋ_ಕಾರಣಕ್ಕೆ_ಕೇಳಬಾರದ_ಪ್ರಶ್ನೆಯೆನಿಸುತ್ತೆ...
⇭⇱⇲⇭

ನಗಲು ಪ್ರಯತ್ನಿಸುತ್ತೇನೆ - ಬಾಕಿ ಉಳಿಸಿಕೊಂಡ ಭಾಷೆ ಬಾಯಿ ಕಟ್ಟುವಾಗ...
ನಗಲು ಹೊರಡುತ್ತೇನೆ - ಸೋತ ಮಾತಿನ ಒನಕೆ ಎದೆಯ ಕುಟ್ಟುವಾಗ...
ನಗಲು ಹವಣಿಸುತ್ತೇನೆ - ಒಳ ಭಾವ ಝರಿ ಒಣಗಿ ನರಳುವಾಗ...
ಗಲಗಲಿಸಿ ನಗುತ್ತಲೇ ಇರುತ್ತೇನೆ - ಕನಸುಗಳಿಗೆ ಹಾದಿ ತೋರೋ ಎದೆಯ ಹಿಲಾಲು ಇನ್ನುರಿಯದಂಗೆ ನಂದಿಹೋದಾಗ...

ನಿನ್ನ ನಗು ಚಂದ ಕಣೋ ಅಂತಾರೆ - "ಸತ್ತ ಪಾತ್ರವನ್ನು ಜೀವಿಸಿದ್ದಕ್ಕೆ ಪರಕಾಯ ಪ್ರವೇಶದ ಬಿರುದು..."

ಹೌದು -
ಎಲ್ಲಾ ಎಂದಿನಂತೆಯೇ ಇದೆ...
ನಾಡಿ ಸರಿಯಾಗೇ ಬಡ್ಕೋಳತ್ತೆ ನಿಮಿಷಕ್ಕಿಷ್ಟೂ ಅಂತಾ...
ತುಟಿಯು ಬಿರಿದು ನಗುವ ಅರಳಿಸುತ್ತೆ ಎದುರಿನವರೂ ನಗುವಂತೆ...
ಕೃತಿ ಸ್ಮೃತಿಯಲೆಲ್ಲ ತಿಂದದ್ದು, ಉಗುಳಿದ್ದು ಯಾವ್ದೂ ಹದ ಮೀರಿದಂತಿಲ್ಲ...
ಎಲ್ಲಾ ಎಂದಿನಂತೆಯೇ ಇದೆ - ಹೊರಗಿನ ಲೆಕ್ಕವೆಲ್ಲ ಪಕ್ಕಾss ಇದೆ...
'ಅಂತರಂಗದ ಜೀವಸತ್ವವ' ಮಾತ್ರ ಬಗೆದು ಕಿತ್ತೊಯ್ದ ಬದುಕಿನ ಮಾಯಾ ವಿದ್ಯೆ ಯಾವುದು...!?

ಮೌನಿಯಾಗಬೇಕು...
ಎದೆಯ ಗದ್ದಲ ನಿಲ್ಲುವಂಥಾ ಮೌನ ಒಲಿಯಬೇಕು...
ಪೂರ್ಣವಿರಾಮದಂತ ಮೌನ - ಈ ಒಣಪೀಡೆ ರೋಗದ ನಾಯಿಯಂಥಾ ದಿನ ಸಂಜೆಗಳ ಜರೂರತ್ತು...
#ದೇವಬಲಿಯಂತ_ಬದುಕು...
⇭⇱⇲⇭

ಬದುಕು ಬಾಗಿಲು ಬಡಿದಾಗ ಆಲಸ್ಯದಲ್ಲಿದ್ದೆ - ಸಾವಾದರೋ ಗಾಳಿಯೊಂದಿಗೆ ಒಳ ಬಂದು ಕೂತಿತ್ತು...
#ಉಸಿರು_ಬಿಸಿಯಿದೆ_ಬದ್ಕಿದೀನಂತೆ...

ತುಂಬಾ ತುಂಬಾ ಖುಷಿಯಾದಾಗ ಚೂರು ಭಯವೂ ಜೊತೆಯಾಗುತ್ತದೆ...
#ನನ್ನ_ಮನಸು...

ಸಂಕಟದಲ್ಲಿ ಕಳಚಿಕೊಂಡಷ್ಟು ಸುಲಭ ಅಲ್ಲ ಸಂಭ್ರಮದಲ್ಲಿ ಎದ್ದು ಹೋಗೋದು...
#ಸಾವು...
⇭⇱⇲⇭

ಸತ್ತು ಹೆಣವಾದರೆ ನಾಕು ಹೆಗಲು ಎಲ್ಲಿಂದಾದರೂ ಹೊಂದೀತು - ಬದುಕಲು ಹೊರಟರೆ ಮಾತ್ರ ನನ್ನ ಪಾದವೇ ಸವೆಯಬೇಕು...
#ಎದೆಯ_ನೋವಿನೆದುರು_ಸಾವು_ಎಷ್ಟು_ಹಗೂರ...
⇭⇱⇲⇭

ಎಲ್ಲಿಯೂ ನಿಲ್ಲದವನು ಎಲ್ಲಿಯೂ ಸಲ್ಲದೇ ಹೋಗಬಹುದು...
ಇಲ್ಲೋ ಅಲ್ಲೋ ನಿಂತವನು ನಿಂತಲ್ಲೇ ಕೊಳೆಯಬಹುದು...
ಹಬ್ಬಿ ಅರಳಿ ನಡೆವ ಮಾಯಕದಲ್ಲಿ ಗಟ್ಟಿ ತಬ್ಬಿದ್ರೆ ಉಸಿರ್ಗಟ್ಟತ್ತೆ, ಕೈ ಕೊಡವಿದ್ರೆ ಅನಾಥನಾಗ್ತೀನಿ...
ಆದರೋ, ನಡುವಿನಂತರದ ಕಾಲ್ಪನಿಕ ಗಡಿರೇಖೆಯ ಗುರುತಿಸುವ ಮಾಪಕ ಅರಿಯದ ದಡ್ಡ ನಾನು...
ಹಾಗೆಂದೇ, ಅರ್ಥವಾಗದ ಅತಂತ್ರ ಸುಸ್ತಿಗೆ ಅರ್ಥ ಹುಡುಕುತ್ತಾ ಇರುಳು ಹಗಲಿಗೆ ಹೊರಳಿ ಅರ್ಥ ಇನ್ನಷ್ಟು ಸಿಕ್ಕು ಸಿಕ್ಕು...
ನಿಂತು ನಿಲ್ಲದೇ ನನ್ನ ಕೊಲ್ಲುವ ನನ್ನದೇ ತ್ರಿಶಂಕು ಚಿಂತನೆಗಳು...
#ವಿಕ್ಷಿಪ್ತಾತ್ಮದ_ನಿದ್ದೆ_ಆಡದ_ಕಣ್ಣಲ್ಲಿ_ಬೆಳಕು_ಕೆಂಪು_ಕೆಂಪು...

ಜೀವದಲ್ಲೂ, ಭಾವದಲ್ಲೂ ಬದುಕಿಗೆ ಜೊತೆ ನಡೆಯುವುದೊಂದು ಸಂಭ್ರಮದ ಕನಸು - ಸಾವಿಗೆ ಜೊತೆ ಕೂಡುವುದನು ಕಲ್ಪಿಸಲೂ ಆಗದು ಮನಸು...
#ಸುರಕ್ಷಿತ_ಅಂತರವಿರಲಿ...

"ಎಲ್ಲಾ ಅಂದ್ರೆ ಎಲ್ಲಾ ಮರೆಯಬಹುದಂತೆ - ನಿನ್ನೆಗಳನೆಲ್ಲ ಕಳಕೊಂಡು ಹೊಸ ನಾಳೆಗೆ ಮತ್ತೆ ಮಗುವಾಗಬಹುದಂತೆ...
ಬಂದಾರೆ ಬರಬಾರದೇ ಅಂಥ ಚಂದ ಖಾಯಿಲೆ..."
***ಸಲಹುವವರ ಕಷ್ಟದ ಮಿಡಿತಕ್ಕೆ ಉತ್ತರ ಏನೆಂದು ಕೇಳಬೇಡಿ...
#ಬೇವರ್ಸಿ_ಆಶೆ...
⇭⇱⇲⇭

ಅವರಿಗವರೇ ಆರೋಪಿಸಿಕೊಂಡ ಅಥವಾ ಸಮಾಜ ದಯಪಾಲಿಸಿದ ಒಳ್ಳೇತನದ, ಸಭ್ಯತೆಯ ಪ್ರಭಾವಳಿಯ ಒಣನಶೆಯ ಮೇಲರಿಮೆ ಜೊತೆ ಇರುವವರ ಪ್ರೀತಿಯ ಎದೆ ಬೇರನು ತಣ್ಣಗೆ ಸದ್ದಿಲ್ಲದೆ ಇಂಚಿಂಚು ಕೊಲ್ಲುತ್ತದೆ...
ಮಂಜುಗತ್ತಿಯ ಇರಿತದ ಗಾಯದಿಂದ ರಕ್ತ ಒಸರಲಿಕ್ಕಿಲ್ಲ - ಆದರೆ, ರಕ್ತ ಹೆಪ್ಪಾಗುವುದೂ ಸಾವಿನ ಹಾದಿಯೇ...
#ನಿತ್ಯ_ನಿರಂತರ_ಭಾವಹತ್ಯೆ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

ಗೊಂಚಲು - ಮುನ್ನೂರಾ ನಲವತ್ತು ಮತ್ತೇಳು.....

ಹಾವು, ಏಣಿ ಮತ್ತು ಒಂದು(ದೇ) ಪಟ.....

ಸಿಗಲೀ ಎಂಬ ಹಂಬಲವಿದ್ದರೆ ಅಲ್ಲಿ ಸಿಕ್ಕೀತೆಂಬ ಚೂರು ಭರವಸೆ ಹುಟ್ಟೀತು...
ಹೊಂದಲೇಬೇಕೆಂಬ ಆಸೆಯಲ್ಲಲ್ಲವಾ ತಲುಪಲು ಬೇಕಾದ ಶಕ್ತಿಯ ಉತ್ಪತ್ತಿ...
ಇದೊಂದೂ ನನ್ನೊಳಿಲ್ಲದೇ ಆ ಎತ್ತರ ಸಿಗಲಿಲ್ಲ ಅಂದು ಯಾರ್ಯಾರ ಹೇಗೆಲ್ಲ ದೂರಲೀ...
ಗಿರಿ ನೆತ್ತಿಯ ಏರಿ ಪಾದ ಊರದೇ ಮೋಡದಲೆಯ ಮೇಲೆ ಜೋಡಿ ಹೆಸರ ಗೀಚಲಾದೀತು ಹೇಗೆ...
ಪಡೆವ ದಾಹ, ಹಂಗೇನೆ ಸಲಹೋ ಪಾತ್ರವಿಲ್ಲದ ನಾನು ಕೊಡುವ ಭಾವವಿಲ್ಲ ಎಂದು ಬದುಕ ಯಾವ ಮುಖದಲ್ಲಿ ಆರೋಪಿಸಲಿ...
#ಬೆಳಕು_ಬೇರು_ಬಿಡಲಿ...
↶↺↜↝↻↷

ಎಂಥಾ ಬೆಳುದಿಂಗಳ ಚೆಲ್ಲಿದರೂ ಚಂದಿರನಲ್ಲಿನ ಕಲೆಯನ್ನು ಮಾತ್ರ ಆಡಿಕೊಳ್ಳುವ ಒಂದು ವರ್ಗ - ಬಾಜಿ ಗೆದ್ದ ಕೋಣದ ಕೊಂಬು ಕಡಿಯುವಂಥದ್ದು...
ಬೆಳದಿಂಗಳ ಚಂದದ ತಂಪು ಹೊಳೆ ಮಡುವಲ್ಲಿ ಈ‌ಸುತ್ತಾ ಚಂದಮನ ಕಲೆಯನ್ನೂ, ಸ್ವಂತ ಹೊಳೆಯಲಾಗದ ಅವನ ಸೋಲನ್ನೂ ಮರೆತು ಪರಾಕು ಹಾಡುವ ಇನ್ನೊಂದು ದಂಡು - ಗೆದ್ದೆತ್ತಿನ ಬಾಲ ಜೋಲುವವರದ್ದು...
ಎರಡೂ ಜನಪ್ರಿಯ - ಆದ್ರೆ ಅಂಥ ಹಿತವೇನಿಲ್ಲ ಇಂಥವರ ಜತೆ ನಡೆವ ಹಾದಿಗೆ...
ಇನ್ನೂ ಒಂದು ಶಾಖೆಯಿದೆ:
ಹುಣ್ಮೆಯ ಬೆಳ್ದಿಂಗಳು, ಅಮಾಸೆಯ ಕಾರ್ಗತ್ತಲು ಎರಡರ ಒಳ ಹೊರಗನೂ ಹೊಕ್ಕುಬಳಸಿ ಎರಡನೂ ಅದಿದ್ದಂಗೆಯೇ ಅರಗಿಸಿಕೊಂಡು, ಹೆಜ್ಜೆ ಎಡಗದಷ್ಟು ಬೆಳಕು ಹರವಿ ಹಾಗೂ ಕಣ್ಕುಕ್ಕದಂತೆ ಕತ್ತಲ ಕೊಡೆ ಬಿಚ್ಚಿ ಘನವಾಗಿ ಜೊತೆ ನಿಂತು ಅಡಿ ಮುಡಿಯ ಕಾಯುವ ಮುಸ್ಸಂಜೆಯಂಥವರದು - ಅಂಥ ಒಡನಾಟ ಸಿಕ್ಕಾಗ ನಸನಸೆಗಳಿಲ್ಲದೆ ಅವರೊಟ್ಟಿಗೆ ಕೈಬೀಸ್ಕೊಂಡು ನಿಸೂರು ನಡೆದುಬಿಡಬಹುದು - ಅಲ್ಲಿ ನನ್ನ ಉಪದ್ವ್ಯಾಪಿ ನಖರಾಗಳಿಗೂ ಪ್ರೀತಿಯ ಹೊಸ ಮುಖದ ಸ್ಪರ್ಶ ಸೋಜಿಗವಿರುತ್ತೆ...
ಇದ್ದಾರೆ ಇರ್ಲಿ ಬಿಡಿ ಅವರಲ್ಲೂ ಚಿಕ್ಪುಟ್ಟ ದೌರ್ಬಲ್ಯಗಳು ನಮ್ಮ ನಿಮ್ಮಂತೆಯೇ - ಒಪ್ಕೊಂಡು, ಅಪ್ಕೊಂಡು ಹಾದಿ ಹಾಯೋಣ - ಇಷ್ಟಕ್ಕೂ, ರಾಜಾ ರಾಮನಿಗಿಂತ ಬೀದಿ ಗೆಳೆಯ ಕರಿಯನ ಜೊತೆ ಒಡನಾಟ ನಿರಾಳ, ಸುಲಭ ಹಂಗೇ ಸರಳ...
#ಸನ್ನಿಧಿ...
↶↺↜↝↻↷

ಎಲ್ಲೂ ನಿಲ್ಲದೇ ಓಡುವ ಕಾಲ ಮತ್ತು ಹೆಜ್ಜೆಗೊಮ್ಮೆ ವಿರಾಮ ಬಯಸುವ ನಾನು - ಹೇಗೋ ಹೊಂದಿಕೊಂಡು ಹಾದಿ ಹಾಯುವ ಮೋದ...
ಬೊಮ್ಮಗೌಡ ಲಾಲಿ ಹಾಡುವಾಗ ಜವರಾಯ ತೊಟ್ಟಿಲು ತೂಗ್ತಾನೆ - ಇವನು ಪೂರ್ವ, ಅವನು ದಕ್ಷಿಣ; ಇಬ್ಬರೂ ಸೇರಿ ಸೃಷ್ಟಿಯನಾಳುವ ವಿನೋದ...
#ಮೋಜಿನಾಟ: ಹಾವು, ಏಣಿ ಮತ್ತು ಒಂದು(ದೇ) ಪಟ...
↶↺↜↝↻↷

ತುಂಬಾ ಸುಸ್ತು - ಸಣ್ಣ ಹರಿವೂ ಇಲ್ಲದ ನೀರಸ ಒಣ ಒಣ ದಿನ, ರಾತ್ರಿಗಳ ದಾಟುವುದೆಂದರೆ...
ಗಡಿಯಾರದಲ್ಲಿ ಕಾಲ ಓಡುತ್ತಲೇ ಇದೆ - ನಿಂತು ನೋಡುತ್ತಿದ್ದವನು ನಿಂತಲ್ಲೇ ನಿಂತಿದ್ದೇನೆ...
ಕಣ್ಣ ತೀರ್ಥ ಕಲಕದಂಗೆ ನಿನ್ನ ನೀನು ಕಾಯ್ದುಕೊಂಡು, ಹೊರಡೋ ನೋವಿನ ಅಥವಾ ಮತ್ತೆ ಬರುವ ಮಾತಿನ ಸಣ್ಣ ರೂಹೂ ಉಳಿಸಿಕೊಡದೇ ನನ್ನನಿಲ್ಲೇ ಬಿಟ್ಟು ಬಿಟ್ಟು ನೀನು ಹೊರಟು ಹೋದ ಮೃತ ಸಂಜೆಯು ಹಾಗೇ ಉದ್ದಕೂ ಬಿದ್ದಿದೆ...
ಯುದ್ಧದ ರಾತ್ರಿಗಳಿಗಿಂತ ಸುಸ್ತು - ಕನಸು ಹೊಳೆಗುತ್ತಿತ್ತು, ಸುಳ್ಳು ಸಮಾಧಾನದ ನಗೆ ಸಾಯ್ಲಿ, ಹೊಸ ನೋವೂ ಕೂಡಾ ಇಲ್ಲದ ಈ ನೀರಸ ಜಡ ಜಡ ದಿನ, ರಾತ್ರಿಗಳ ಹಾಯುವುದೆಂದರೆ...
#ಎದೆಯ_ಭಾರಕೆ_ತಲೆ_ಸಿಡಿಯುತ್ತದೆ...
↶↺↜↝↻↷

ಕಣ್ಣ ಹನಿಯಲ್ಲಿ ಎದೆಯಂಗಳವ ಸಾರಿಸಿಟ್ಟು ಕಾಯುತ್ತಾ ಕೂತಿದ್ದೇನೆ...
ನಿನ್ನ ತಲುಪೀತೇನು ನಿನ್ನ ಪಡೆಯಲು ನಿನ್ನೊಂದಿಗೂ ಯುದ್ಧಕ್ಕೆ ಬೀಳಬೇಕಾದ ನನ್ನ ಪ್ರೇಮದ ಹಾದಿ...
#ಈ_ಹೊತ್ತು...
↶↺↜↝↻↷

ಹಸಿ ಹಾಲಿಗೆ ಚೂರು ಹುಳಿ ಹಿಂಡಿದರೂ ಹಾಲು ಹಾಳಾಗುತ್ತೆ...
ಆದ್ರೆ ಹಾಲನ್ನು ಹದವರಿತು ಕಾಯಿಸಿ, ಹದವಾಗಿ ಹುಳಿ ಬೆರೆಸಿದರೆ ಮೊಸರು, ಬೆಣ್ಣೆ, ತುಪ್ಪ...
ಇಷ್ಟೇ -
'ಹೃದಯ' ಹಾಲಂತೆ ಹಾಗೂ 'ಪ್ರೀತಿ' ಹುಳಿ ಅಥವಾ ಅದ್ಲೂಬದ್ಲು...
ಬೆರೆಸುವ ಇಲ್ಲಾ ಬೆರೆಯುವ ಹದ ಹಾಗೂ ಆಯ್ಕೆ ನಮ್ಮದು...
#ಹೃದಯದ_ದಿನವಂತೆ_ಶುಭಾಶಯ_ನಿಂಗೆ...
       ___29.09.2020
↶↺↜↝↻↷

ಹೃದಯಗಳ ಕ(ಒ)ಡೆಯುವುದೂ ಒಂದು ಕಲೆ...
ಬೆಸೆಯಲು ಪ್ರೀತಿಯ ಹನಿ ಅಂಟು ಸಾಕು...
ಒಡೆಯಲೂ ಪ್ರೀತಿಯೇ ಚಿನ್ನದಾ ಚಾಕು...
#ಭಾವ_ಬದುಕು...
#ವಿಶ್ವ_ಹೃದಯ_ದಿನವಂತೆ...
    ___29.09.2020
↶↺↜↝↻↷

ಮೊದಲು ಒಲಿಸಿಕೊಳ್ಳೋಕೆ ಅಂತ ಒಂದಷ್ಟು ಸುಳ್ಳು - ಯಾರ್ನಾರ ಒಲಿಸ್ಕೊಳ್ಳೋದು ಕೆಟ್ಟ ಕೆಲಸವೇನಲ್ಲವಲ್ಲ, ಹಂಗಾಗಿ ಸುಳ್ಳು ತಪ್ಪಲ್ಲ ಅಂದ್ಕೊಳ್ಳೋಣ...
ಆಮೇಲೆ ಒಲಿಸಿಕೊಂಡು ಹಾಕಿಕೊಂಡ ಗಂಟು ಬಿಚ್ಚಿಕೊಳ್ಳದಿರಲೀ ಅಂತ ಆಗೀಗ ಅಷ್ಟಿಷ್ಟು ಸುಳ್ಳು - ಒಳ್ಳೇ ಕೆಲ್ಸ, ಒಂದೊಳ್ಳೆ ಉದ್ದೇಶಕ್ಕಾಗಿ ಸುಳ್ಳು ಪಳ್ಳು ಅಪರಾಧವಲ್ಲ ಬಿಡಿ...
ಒಟ್ನಲ್ಲಿ ಅಪ್ರಿಯ ಸತ್ಯವನ್ನು ಬಾಗಿಲಾಚೆ ನಿಲ್ಲಿಸಿ, ಕೇಳುವವನೊಟ್ಟಿಗೆ ಹೇಳುವವನೂ ಅದನೇ ನಂಬಿ ಒಳ್ಳೆತನದ (?) ಸುಳ್ಳನ್ನು ಜಾಣ್ಮೆಯಿಂದ ಬೆರೆಸಿ, ದಣಪೆಯಿರಬೇಕಾದಲ್ಲೆಲ್ಲ ಬೇಲಿಯಿರೋ ಪವಿತ್ರ ಸಂಬಂಧಗಳೆಲ್ಲ ನಗ್ತಾ ನಗ್ತಾ ಬಾಳಿ ಬದುಕ್ತವಾ ಅಂತ...
ಅಲ್ಲಿ ಸತ್ಯವೂ ಸುಳ್ಳಿನ ಒಂದು ಬಣ್ಣವಿರಬಹುದಾ...?!
#ಸುಳ್ಳು_ಸುಳ್ಳಲ್ಲದ_ಪಯಣ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

ಗೊಂಚಲು - ಮುನ್ನೂರಾ ನಲವತ್ತು ಮತ್ತಾರು.....

ತನ್ನತನದ ಬಣ್ಣ.....

ನಾಳೆ ನಾಳೆ ಅಂಬರು - ನಾಳೆಗಳ ಭರವಸೆಯ ಉಂಬುವವರು...
ಆದರೆ,
'ಹಿಂಗ್ ಹೋಯ್ ಹಂಗ್ ಬಂದೆ' ಅಂತಂದು ನನ್ನ ನಂಬಿಸಿ ಹೊರಟ ನಿನ್ನ ಹೇಳಿಕೆಯ ಆ ನಾಳೆ ಬರುವುದೇ ಇಲ್ಲ...
ಕಾಯುತ್ತಾ ಕೂತ ಎದೆಗಣ್ಣಿನ ಹಸಿಯಲ್ಲಿ ಕಲೆಸಿ ಹೋದ ಒಣ ಹಾದಿಯ ಧೂಳು ನನ್ನೇ ಶಪಿಸುತ್ತದೆ - "ಬುದ್ಧಿ ಬೇಡ್ವಾ ನಿಂಗೆ..."
ಹೌದು,
ಬುದ್ಧಿ ಹೃದಯದ ಖೈದಿಯಾಗಿದೆ...
ಅದಕೆಂದೇ,
ಅಲೆದು ಅಲೆದು ನಿನ್ನ ಸೇರಿ ಅಸೀಮ ವಿಸ್ತಾರ ಹೊಂದಿಯೇನೆಂಬ ಇರಾದೆಯಿತ್ತು ಹೊರಡುವಾಗ - 'ಬರಿ ಮಾತು, ಸುಳ್ಳು ಮೌನ'ಗಳ ಕಾಯುತ್ತಾ ಕಾಯುತ್ತಾ ನಿತ್ರಾಣನಾಗಿ ಕಳೆದೋಗಿದ್ದೇನೆ ಕಾರ್ಗತ್ತಲ ನಿರ್ವಾತದಲ್ಲೀಗ...
ನನ್ನನೇ ನಂಬದ ನಾನು ನಿನ್ನ ನಂಬಿ ಸಾಗಿದ ಹಾದಿಯ ಸೋಜಿಗವಾದರೂ ಏನು...!!
#ಎದೆಯ_ಹಾಡದು_ಬುದ್ಧಿಗೆ_ಅರಗದ_ತೌಡು...
↢↡↟↜↝↟↡↣

ಬಯಲಿಗೆ ಗೋಡೆ ಕಟ್ಟಿ ಬೆಳಕಿನ ಬಲಿ ಕೇಳುತ್ತಾರೆ - ಹಳೆಯದೊಂದು ನಗೆಯ ಕಂದೀಲಿನ ಮಸಿ ಒರೆಸಿದೆ - ಮತ್ತೆ ಎಂದಿನಂತೆ ದಿನಮಣಿ ಛಾವಣಿ ಏರಿದ...

"ಬದುಕು ಬಾಗಿಸಿದಷ್ಟೂ ಮನಸು ಮಗುವಾಗಬೇಕು...
ನನ್ನ ಕನ್ನಡಿಯಲ್ಲಿ ಕಂಡ ನಾನು ನನಗೇ ಬೆರಗುಣಿಸಬೇಕು..."

ನಾಳೆಗಳಿಗೆ ಬೇಕಾದ ನೆನಹುಗಳ ಬುತ್ತಿಯನ್ನ ಇಂದು ಕೈಯ್ಯಾರೆ ಕಟ್ಟಿಕೊಳ್ಳಬೇಕು ನಾನು...
ನೆನಪಿನೂಟಕೆ ಬೆಲ್ಲ ಇದ್ದಷ್ಟೂ ಕಮ್ಮಿಯೇ - ಇಂದಿನ ಬಾಳೆಲೆಯಲಿ ಸಿಹಿ ತುಂಬಿಕೊಳ್ಳಲಾಗದೇ ಹೋದವನ ನಾಳೆಗಳೂ ಅಷ್ಟು ಕಹಿಯೇ...

ಕನಸೇ, ಕಸುವಳಿಯುವ ಮುನ್ನ ಸಿಕ್ಕಿ ಬಿಡು ಹಿಡಿಯಷ್ಟಾದರೂ  - ನಗೆಯೇ, ಜೊತೆಯಾಗು ಬಾ ಬಾಗಿಲಿಗೆ ಬಂದಾಗ ಜವನಿಗೆ ಪಡಿ ನೀಡುವಷ್ಟಾದರೂ...
#ನನ್ನ_ನಗು_ನನ್ನ_ದೀಪ...
↢↡↟↜↝↟↡↣

ಯಾರೇ ಪ್ರೀತಿ, ಅಕ್ಕರೆ, ಕಾಳಜಿ, ಕಾಮ ಇವನೆಲ್ಲ ಅವವೇ ಹೆಸರಿನಲ್ಲಿ ಅಥವಾ ಸಹಜ ನೇಹದ ಆಪ್ತತೆಯ ಪಾತಳಿಯಲ್ಲಿ ಕೊಡ ಹೋದರೆ ಇಲ್ಲಾ ಕೊಟ್ಟರದು ಸಂತೆಯೊಳಗಣ ಅನಾಥ ಕೂಗಾಗುವುದೇ ಹೆಚ್ಚು...
ಅದೇ ಅವಕ್ಕೆಲ್ಲ 'ಪ್ರೇಮ'ದ ಹೆಸರಿಟ್ಟು ಬಣ್ಣ ಬಳಿದು ಎದುರಿಗಿಟ್ಟರೆ, ಆಹಾ!!! ತಲೆಯ ಮೇಲೆ ಹೊತ್ತು ಉತ್ಸವವೇ ನಡೆಯುತ್ತದೆ ಕೊಟ್ಟವರದ್ದು...
ಪಾವಿತ್ರ್ಯದ ಪ್ರಭಾವಳಿಯ ಹೆಸರಿನ ನಶೆ ಬಲು ದೊಡ್ಡದು ಸಾಖೀ...
ಪಡಖಾನೆಯ ನಸುಗತ್ತಲಲಿ ತೇಲಿದವನಿಗೆ ಭ್ರಮೆಗಳ ಅಮಲು ಸುಖ ಅಂತ ಗೊತ್ತಿತ್ತು; ಆದ್ರೆ, ಚಂದ ಹೆಸರಿನಲ್ಲಿ ಅದು ಇನ್ನೂ ಸುಖ ಅಂತ ಗೊತ್ತೇ ಆಗ್ಲಿಲ್ಲ ನೋಡು...!!!
ಉಹೂಂ, ಬೇಡ ಬೇಡ -
ಭಾವಕ್ಕೆ ಕೊಡೋ ಅಗ್ದೀ ಚಲೋ ಹೆಸರ ರಂಗಿನ ಲಾಭ ನಂಗೆ ಗೊತ್ತೇ ಆಗದಿರಲಿ...
↢↡↟↜↝↟↡↣

ಖಾಲಿ ಹಾದಿಗಳಿಗಿಂತ ಭರ್ತಿ ತುಂಬಿದ ರಸ್ತೆಗಳೇ ಹೆಚ್ಚಿನ ವೇಗವನ್ನು ಪ್ರಚೋದಿಸುತ್ತವೆ ಇಲ್ಲಿ...
ಹಸಿರು, ಹಳದಿ, ಕೆಂಪುಗಳ ಓಡು, ನಿಧಾನ, ನಿಲ್ಲು ಎಂಬ ತಟವಟಗೊಳಿಸೋ ಸಂಕೇತಗಳು...
ಚದರಡಿಗಳ ಅಳತೆಯಲ್ಲಿ ನಿರ್ಜೀವ ಕಟ್ಟಡಗಳ ಗುಪ್ಪೆ ಗುಪ್ಪೆ...
ಕಣ್ಣ ಗೋಲದ ತುಂಬಾ ಆ ಸಿಮೆಂಟಿನ ಗೂಡುಗಳ ಮೈಗೆ ಮೆತ್ತಿದ ತರಹೇವಾರಿ ಬಣ್ಣಗಳು...
ಅರ‍್ರೇ,
ಬಣ್ಣಗಳೆಂದರೆ ಭಾವದ ಜೀವತಂತುಗಳಲ್ಲವಾ...!!
ಕಾಲನ ಚಲನೆಯಲ್ಲಿ ಜಡದ ಆಯುಷ್ಯಕ್ಕೂ ಚಲನೆ ಇದೆಯಲ್ಲ - ಅಲ್ಲಿಗೆ ಈ ಇಮಾರತುಗಳೂ ನನ್ನೊಂದಿಗೆ ಓಡುತ್ತಿವೆ...
ಅದೇ ಓ ಆ ಕಟ್ಟಡದ ಆಚೆ ಬದಿಯ ಖಾಲಿಯಲ್ಲೇ ನಿತ್ಯ ಮುಳುಗೇಳುವ ಸೂರ್ಯ ಚಂದ್ರರ ಬಿಡಾರವಿದೆ...
ಸೂರ್ಯ ಹಾಗೂ ಮೋಡಗಳ ಮಿಂದು ಮಾಸಿದ ಹೊರ ಮೈ, ಒಳ ಕೋಣೆಯಲ್ಲಿ ಪ್ರೇಮ ಬೆವರುವ ರೋಮಾಂಚಕ್ಕೆ ಮೂಕ ಕಣ್ಣಾಗುವ ಮೋದ, ಅಡುಗೆ ಮನೆಯ ಸಿಡಿಮಿಡಿ, ಜಗುಲಿಯ ಹಾಳು ಹರಟೆ ಕೇಕೆಗಳಿಗೆಲ್ಲ ಸಾಕ್ಷಿಯಾಗುವ ಜಾಣ ಕಿವುಡುತನ, ಎಳೆ ಕಂದನ ಮೊದಲ ಗೀರು ಅಕ್ಷರಾಭ್ಯಾಸಕ್ಕೆ ತನ್ನೆದೆ ಬಯಲ ತೆರೆದಿಟ್ಟ ಒಳ ಮೈಯ್ಯ ಮಮತೆಯ ಪುಳಕ, ಬೆಳದಿಂಗಳ ಗಾಳಿ ನೆರಳ ತೆರೆಯಾಟಕೆ ಮಿರುಗುವ ಕಿಟಕಿ ಗಾಜಿನ ಕಂಪನ...
ಓಹ್!!!
ಎಷ್ಟೆಲ್ಲಾ ಮಾತುಗಳಿವೆ ಈ ಬಣ್ಣದ ಪೌಳಿಗಳ ಒಳ ಹೊರಗಿನ ಒಡನಾಟದಲಿ...
ಬಣ್ಣಗಳು ಕಣ್ಣಿಗೆ ಹೇಳುವ ಕಥೆ, ನಿಶ್ಚಲತೆ ಎದೆಯ ಕಡೆಯುವ ಕಥೆ, ಪುಟ್ಟ ಮಾಡಿನ ನೀಲಿಗಂಟಿದ ಹಕ್ಕಿ ಹಿಕ್ಕೆಯ ದೃಷ್ಟಿ ಬೊಟ್ಟಿನ ಕಥೆ, ಮಾತು ಬಾರದ ಕಿಲ್ಲೆಗಳು ಭಾಷೆ ಅರಿತವರ ಹಾಡ ಕಾಯುವ ಚಂದ ಕಥೆ - ಇಂಥವೇ ಏಸೊಂದು ಕಥೆಗಳ ಕೂಟ ಈ ಗೋಡೆ ಸಾಲುಗಳಲಿ...
ಕೇಳೋ ಕಿವಿಯಿಲ್ಲದ ನಾನು ಈ ಥಾರು ರಸ್ತೆ, ಆ ಗೋಡೆಗಳ ಸಮೂಹಗಳನೆಲ್ಲ ನಿರ್ಜೀವ ಅನ್ನುವುದು ಎಷ್ಟು ಸರಿ...!?
ಉಹೂಂ,
ಚೂರು ಕಣ್ಣಾಗಬೇಕು ನಾನು, ಇಷ್ಟೇ ಇಷ್ಟು ಕಿವಿ ತೆರೆಯಬೇಕು - ಅನ್ನವಷ್ಟೇ ಅಲ್ಲ ಬದುಕಿಗೆ ಬಣ್ಣವೂ ಇದೆ ಇಲ್ಲಿ...
ಮೈಗೆ ರಾಚುವ ಧೂಳ ಜೊತೆಗೇ ಮನಸ ಮಿಂಟುವ ಪ್ರೀತಿ ನಗೆಯೂ ತೇಲುತ್ತದೆ ಅದೇ ಗಾಳಿಯಲ್ಲಿ...
ಅನುಭಾವದ ಪಲುಕುಗಳ ಹೇಳಲು ಬಾರದವನೂ ಇಷ್ಟೆಲ್ಲಾ ಹೇಳಬಹುದು...
#ನಗರದ_ಬೀದಿಗಳು...
↢↡↟↜↝↟↡↣

ಯಾರೋ ಹಾರಿಬಿಟ್ಟ ಬಾಲಂಗೋಚಿ ಗಾಳಿಪಟ ಗಾಳಿಗೊಲಿದೇ ಕುಣಿಯುತಿದೆ ಅಂದುಕೊಳ್ತೇನೆ...
ಜೀವವಿಲ್ಲದ ರೆಕ್ಕೆಯನೂ ಗಾಳಿ ತೇಲಿಸುತ್ತದೆ - ಪ್ರೇಮಪೂರ್ಣ ದೊಡ್ಡಸ್ತಿಕೆ...
ಹಪ್ಪು ಹಳೇಯ ನಗುವ ನೆನಪಾದರೂ ಅಷ್ಟೇ ಆ ಕ್ಷಣಕ್ಕೆ ಮೊಗವರಳುತ್ತದೆ - ಅವಳು ಸುಖಾಸುಮ್ಮನೆ ಭುಜ ಸವರಿದಂತೆ...
ಉಸಿರ ಉರಿಗೆ ವಿಷಾದದ ಜಿಡ್ಡು ಅಂಟಿಬಿಟ್ಟರೆ ಅಲ್ಲಿಗೆಲ್ಲ ಮುಗಿಯಿತು...
ಈ ಸಂಜೆಗಳಿಗೆ ಅದೇನು ಶಾಪವೋ, ಬೆಳಕಿಗೆ ಬೆನ್ನಾಗಿ ಇರುಳಿಗೆ ದಾಟುವ ಅನಾಥ ಸಂಕದಂಥೆ ತೋರುತ್ತವೆ - ಬೆನ್ನಮೇಲೆಲ್ಲ ಹಗಲು ಊರಿದ ಪಾದಕಂಟಿದ ಧೂಳು, ಬೆವರು, ಬಣ್ಣಗಳ ಕಲಬೆರಕೆ ಗುರುತಿನ ನಿತ್ಯ ನವೆ...
ಹೌದೂ, ಆ ಗಾಳಿಪಟ ಗಾಳಿಗೆ ಒಲಿದೇ ಆಡುತ್ತಿದೆಯಾ...?
ಹಾದಿಯ ನಡೆದ ಕಸುವು ಮತ್ತು ನಗೆಯ ಚಿವುಟಿದ ನೋವು ಎರಡೂ ನೆನಪನ್ನು ಒಟ್ಟೊಟ್ಟಿಗೆ ಕೆದಕುತ್ತದೆ ಈ ಎದೆಗೆ ಹೆಟ್ಟಿದ ಮುಳ್ಳು...
#ಸಂಜೆಗೆಂಪು...
↢↡↟↜↝↟↡↣

ಯಾರದೇ ಪಟ ನೋಡಿ ಸುಂದರ ಅಂದಷ್ಟು ಸುಲಭವಲ್ಲ ಎದುರು ನಿಂತು ಕಣ್ಣೊಳಿಳಿದು ನೀ ಚಂದ ಅನ್ನೋದು...
#ತನ್ನತನದ_ಬಣ್ಣ...
%%%

ಕೇಳಿಲ್ಲಿ,
ಬಿಗಿದ ಮುಷ್ಟಿಯಂತಿರೋ ಈ ಎದೆ ಯಾವ ಕ್ಷಣದಲ್ಲೂ ಒಡೆದೋಗ್ಬಹುದು...
ಆ ಹಾದೀಲಿ ನೀ ಕಂಡು ಕಣ್ಣಲ್ಲೇ ಕಣ್ಣ ಮೀಟಿ ನಕ್ಕ ಖುಷಿಯ ಉಚ್ಛ್ವಾಸದಲ್ಲೂ - ಅಂತೇನೇ, ನೀ ನಿನ್ನ ಹಂಗೆ ನೋಡ್ಬೇಡಾ ಅಂತಂದು ಕಣ್ಣ ತಿರುವಿ ಆ ತಿರುವಲ್ಲಿ ಕರಗಿ ಹೋದಾಗಿನ ನಿಶ್ವಾಸದಲ್ಲೂ...
ಈ ಇವನ ಬಡ ಎದೆ ಹೇಗೂ ಒಡೆದೋಗ್ಬಹುದು...
#ಕಾಣಬೇಡ_ಕಳೆದೋಗಲೂಬೇಡ...
↢↡↟↜↝↟↡↣

"ನಿಂತಲ್ಲೇ ನಿಂತವನು ದಾಟಿ ಹೋದವರ ಬಗ್ಗೆ ನಿನ್ನೆಗಳ ಹೊರತು ಇನ್ನೇನ ಹೇಳಲಾದೀತು..."

"ಕಳ್ಕೊಂಡಲ್ಲೇ ಹುಡುಕ್ಬೇಕೋ ಮಳ್ಳಾ ಅಂತಿದ್ಲು ಯಾವಾಗ್ಲೂ - ಅವಳಂಗಳಕೆ ಹೋಗಿ ಹೆಸರು ಕೂಗಿದೆ, ಕನಿಷ್ಠಪಕ್ಷ ಕಿಟಕಿ ಬಾಗಿಲನೂ ತೆಗೆಯದೇ ಕತ್ತಲಾದ್ಲು..."

ಹುಡುಕುವ ಹುಚ್ಚಾಟ ಮುಗಿದ ಹೊತ್ತಿಗೆ ಇಲ್ಲೀಗ,
ನೀರವ ಸಂಜೆ - ಖಾಲಿ ಖಾಲಿ ಮನದ ಪಾತ್ರೆ - ಅಕಾರಣ ಅಲವರಿಕೆ...
ನನ್ನೊಳು ನಾನಿಲ್ಲದಿರುವ ನಿಸ್ಸತ್ವದ ಒಣ ಎಲೆಯ ಹಗುರತೆ...
ನನ್ನ ಸುಖದ ನಿದ್ದೆ ಅಂದರೆ ಅವಳ ತೋಳ್ಸೆರೆಯದ್ದು - ಇಲ್ಲಾಂದ್ರೆ ನಾನೇ ಹುಡುಕಿದರೂ ಸಿಗಲಾರದ ಆ ನಿರ್ವಾತದ್ದು...

ಎಲ್ಲ ಅವಳ ಹಾಡುವಾಗ ತಲೆದೂಗಲಷ್ಟೇ ಶಕ್ತ - "ನಾನು ಮೂಕ ಹಕ್ಕಿ..."
ಮತ್ತೇನಿಲ್ಲ,
ಎದೆಯ ನೆಲ ಬೀಳು ಬಿದ್ದಿದ್ದಕ್ಕೆ ಕಣ್ಣ ಕೊಳ ಬತ್ತಿದ್ದೇ ಸಾಕ್ಷಿ...
#ಕನಸ_ಕಾಯಲಾಗದ_ಜೀತ...
↢↡↟↜↝↟↡↣

ಎದೆಯ ಪ್ರಾಮಾಣಿಕ 'ಪ್ರೀತಿ'ಗಿಂತ ದೊಡ್ಡ 'ಗೌರವ' ಬೇರಿಲ್ಲ - ಎಂಥಾ ಹಿರಿತನಕ್ಕೂ, ಯಾವುದೇ ಬಂಧ ಬಾಂಧವ್ಯಕ್ಕೂ...
#ಕೊಡುಕೊಳ್ಳುವಿಕೆಯ_ಜಾದೂ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)