Wednesday, October 14, 2020

ಗೊಂಚಲು - ಮುನ್ನೂರಾ ನಲವತ್ತು ಮತ್ತೊಂಭತ್ತು.....

ಇಷ್ಟು ಸಾಕು.....

ಕನಸೇ -
ಕೊನೇಯದಾಗಿ ಕಣ್ಣ ಕೊಳದ ನೀರಲೆಯಲಿ ಕಲೆಸಿ ಹೋದದ್ದು ನೀನಾ ನಾನಾ... 

ಇಷ್ಟುದ್ದ ಬಾಳಿ ಬದುಕಿದರೂ ಒಲಿಯದ ಮೌನದ ಚಾಳಿ ಮತ್ತು ಕರಗದ ಖಾಲಿತನ...
ನನಗಾಗಿ ಘನತೆಯದೊಂದು ಗೂಡನೂ ಗಳಿಸಿಕೊಡಲಾಗದ ನನ್ನ ಮಾತೆಂಬ ಉದ್ದುದ್ದ ಬಡಬಡಿಕೆಗಳು...
ನಡೆದಂತೆ ನನ್ನದೇ ಹೆಗಲ ಮೇಲೆ ನನ್ನದೇ ಹೆಣದ ಮೆರವಣಿಗೆ...

ಸರದಿಯಲ್ಲಿ ಎನ್ನ ಪಾಳಿ ಎಂದೋ ಏನೋ...
ಎನ್ನೊಡನೆಯ ಎನ್ನದೇ ಯುದ್ಧ ಮುಗಿಯುವ ಆ ದಿನದ ಆ ಘಳಿಗೆಗೆ ಚಾತಕದಂಗೆ ಕಾಯುತ್ತಾ ಕಾಯುತ್ತಾ ನೂಕುವುದು ಹಗಲನೂ ಇರುಳನೂ ಒಂದೇ ಸಮದ ನಿತ್ರಾಣದಿ...
ನಿರೂಪ ಕೊಡುವವನು ನನ್ನ ನಿರ್ಲಕ್ಷಿಸಿದಂತಿದೆ...

ಕಾಯುವುದು ಕಾಯುವುದು..‌. 
ನೀ ಬರದೇ ಹೋದರೂ, ಬರಲಾರೆ ಎಂಬ ಅರಿವಿನ ಸೊಡರು ಹಿಡಿದೂ ಕಾಯುವುದು ಸುಖವಹುದು...
ಕಾಯುತ್ತಾ ಕಾಯುತ್ತಾ ವಿಕ್ಷಿಪ್ತ ನಿರಾಯಾಸದಿ ಸಾವಿನ ಮನೆ ಹೊಸಿಲ ತುಳಿವುದು...
ಕಾದಿದ್ದೇನೆ ಮತ್ತು ಕಾದೇ ಇದ್ದೇನೆ ಎಂಬ ನರಕಸುಖ...

ಹನಿ ಬತ್ತಿದ ಕಣ್ಣಲ್ಲಿ ಬಂಜರೆದೆಯ ಬಿಂಬ...
ಮರಳು ಸೀಮೆಯ ಮೌನ...
ಇದು ಒಂದು ಬದಿಯ ಪಾಡು...

ಪಟ: ಎನ್ನದೇ ಜಂಗಮವಾಣಿಯ ಕಣ್ಣಲ್ಲಿ...

ಇನ್ನೊಂದು ಮಗ್ಗುಲಲಿ ಅದೇ ಹೊತ್ತಿಗೆ -
ಗಾಳಿಗೊಲಿದು ಕರಗಿ ಸೋನೆಯಾದ ಮೋಡದ ತುಂಡಿನ ತೇವಕೆ, ಬೆಳಕಿನೊಲವಿನ ಶಾಖಕೆ ಕಿಟಕಿಯಾಚೆಯ ಮರದ ಮೈಯ್ಯೆಲ್ಲ ಹೂವಾಗಿ ಅರಳಿದೆ...
ಹಕ್ಕಿಗೊರಳ ತುಂಬಾ ಜೇನು ಝೇಂಕಾರ...
ದುಂಬಿ ಒಡಲಿಗೆ ಮಧು ಪೇಯ, ಹೂಗರ್ಭ ಕಾಯಿ ಬಸಿರು - ಪ್ರಕೃತಿ ಶಬ್ದವೆಂದರೆ ಹೊಸತೇ ಜೀವಚಕ್ರ...
ಸೃಷ್ಟಿ ಸೊಬಗಿನ ನವನೀತದ ವಿನೀತಕೆ ಆ ಕ್ಷಣ, ನನ್ನೇ ಕೊಲ್ಲಲಣಿಯಾದ ಎನ್ನಾಂತರ್ಯದ ಕ್ಷುದ್ರ ನಿಶ್ಶಬ್ದದ ಕೈ ನಡುಗಿದಂತಿದೆ...
ಎದೆಯ ಸಲಿಲ ಒಣಗಿದ ಸುದ್ದಿ ಪ್ರಜ್ಞೆಯ ಗದ್ದುಗೆಯ ತಲುಪದಿರುವ ಸಣ್ಣ ಸಹನೀಯತೆ - ವಿಚಿತ್ರ ಭರವಸೆ...
ನೀನು ಇಲ್ಲೇ ನನ್ನ ಕಣ್ಣ ಹರಿವ ತಪ್ಪಿಸಿ ನೆರಳಿಗಂಟಿ, ನನ್ನ ಹೆಜ್ಜೆಗಳನು ನಿನ್ನ ಹೆಜ್ಜೆಗಳಲಿ ಅಳೆಯುತ್ತಾ, ತುಂಟ ಪುಳಕಗಳ ಮಂದಹಾಸವ ಹೆಕ್ಕಿಕೊಂಡು ನಡೆಯುತಿರುವಂತೆ ಭಾವ ಭಾಸ...
ಪ್ರಕೃತಿ(ನಿನ್ನ)ಯ ಹೂ ಮನದ ಹೊಳಲು ನನ್ನೀ ಹೂ ಬಿದ್ದ ಎದೆ ಕಣ್ಣಲೂ ನಗೆ ಬೆಳಕ ಕೆತ್ತುವುದು ಪ್ರೀತಿ ಸಂಯೋಜನೆಯ ಚಂದ ಸಂಭಾಷಣೆ...

ಜೀವದುಸಿರ ನಿಲ್ಲಿಸುವುದು ಸುಲಭ - ಆದರೆ ಭಾವದ್ದೋ, ಬರೀ ಪಾತ್ರ ಬದಲಿಸಬಹುದಷ್ಟೇ...
ಕತ್ತಲ ಸೆರಗಿನ ಅಂಚಲ್ಲೇ ಬೆಳಕಿನ ಕಿಡಿಯ ಹೊಸ ಹಾಡು...

ಮತ್ತೀಗ -
ನೀನು - ನನ್ನ ನಡೆಯಲಾಗದ ಸುಸ್ತೀವ ವೈಕಲ್ಯ ಮತ್ತು ನಿಲ್ಲಲು ಬಿಡದ ಬಯಕೆಯ ವೈಭೋಗ...
"ಆಕಳಿಸುತ್ತಲೇ ಎಚ್ಚರಕ್ಕೆ ದಾಟುವಂತೆ - ಮುಗಿಯದಿರಲಿ ಹುಚ್ಚು ಪಯಣ ನೀನೇ ಸಿಕ್ಕರೂ..."
#ಇಷ್ಟು_ಸಾಕು_ಮತ್ತು_ಇಷ್ಟಾದರೂ_ಬೇಕು_ಬದುಕಿಗೆ...

No comments:

Post a Comment