Thursday, November 1, 2012

ಗೊಂಚಲು - ನಲವತ್ತು ಮತ್ತೆ ಒಂಭತ್ತು.....

ಅರ್ಥವಾಗದ
ಸಂಬಂಧಗಳ ಒಳಸುಳಿ...

ಮನುಷ್ಯ ಮನುಷ್ಯನ ನಡುವಿನ ಸಂಬಂಧದ ಆಳ ವಿಸ್ತಾರಗಳ ಬಗ್ಗೆ, ವಿಚಿತ್ರ ವಾಸ್ತವತೆಯ ಬಗ್ಗೆ, ಆಶ್ಚರ್ಯಕರ ಹೊಂದಾಣಿಕೆಗಳ ಬಗ್ಗೆ, ಹಳಸಿದ ಸಂಬಂಧವೊಂದು ಯಾವುದೋ ಒಂದು ನೋವಿನಲ್ಲಿ ಮತ್ತೆ ಬೆಸೆದುಕೊಂಬ ಅದರ ಒಳ ತುಡಿತದ ಬಗ್ಗೆ, ಹತ್ತಿರವಿದ್ದೂ ದೂರ ನಿಲ್ಲುವ ಮಾನಸಿಕ ಅಪರಿಚಿತತೆಯ ಬಗ್ಗೆ, ಸಪ್ತ ಸಾಗರದಾಚೆಯಿದ್ದೂ ಆತ್ಮಿಕವೆನಿಸುವ ಭಾವನಾತ್ಮಕ ಬೆಸುಗೆಯ ಬಗ್ಗೆ - ಒಟ್ಟಾರೆಯಾಗಿ ಈ ಸಂಬಂಧಗಳೆಂಬ ಹೆಸರಲ್ಲಿ ಬೆಸೆದುಕೊಂಡ ಬಾಂಧವ್ಯಗಳ ವಿಷಯದಲ್ಲಿ ಎಷ್ಟು ಯೋಚಿಸಿದ್ರೂ ನಂಗಿನ್ನೂ ಒಂದು ನಿಲುವಿಗೆ ಬರೋಕಾಗಿಲ್ಲ.
ಈ ಸಂಬಂಧ ಹೀಗೇ ಅಂತ ಯಾವುದೇ ಒಂದು ಬಾಂಧವ್ಯವನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸೋಕೆ ಆಗದಿರೋದು ವ್ಯಕ್ತಿಗಳ ವ್ಯಕ್ತಿತ್ವದ ವಿವಿಧ ಮಜಲುಗಳ ವೈಶಿಷ್ಟ್ಯವೇ ಸರಿ.
ಸಮಯ ಸಂದರ್ಭಕ್ಕನುಸಾರವಾಗಿ ಈ ಸಂಬಂಧಗಳ ಒಳ ಹೊರಗುಗಳಲ್ಲಿ ಅಷ್ಟಿಷ್ಟು ಬದಲಾವಣೆಗಳಾಗುವುದೂ ಇದೆ.
ಯೋಚಿಸ್ತಾ ಹೋದ್ರೆ ಎಲ್ಲವೂ ಗೋಜಲು ಗೋಜಲು...

ಈ ಸಂಬಂಧಗಳು - ಅಂದ್ರೆ ವ್ಯಕ್ತಿ ವ್ಯಕ್ತಿಗಳ ನಡುವಿನ ನಾವು ಗುರುತಿಸೋ ಸಂಬಂಧಗಳು - ಇವೆಲ್ಲ ಕೇವಲ ಮಾನವ ನಿರ್ಮಿತ.
ಮನುಷ್ಯ ತನ್ನ ಅವಶ್ಯಕತೆಗಳಿಗೋಸ್ಕರ - ತಾನು ಈ ಭುವಿಯ ಇತರ ಪ್ರಾಣಿ ಸಂಕುಲಕ್ಕಿಂತ ಮೇಲೆಂದು ನಿರೂಪಿಸಿಕೊಳ್ಳಲೋಸುಗ ರೂಪಿಸಿಕೊಂಡಂತವು.

ತಾಯಿ ಮತ್ತು ಮಗುವಿನ ಸಂಬಂಧವೊಂದನ್ನುಳಿದು ಉಳಿದ ಯಾವುದೇ ಸಂಬಂಧಗಳಿರಬಹುದು - ಅದು ಅಣ್ಣ - ತಮ್ಮ, ಅಕ್ಕ - ತಂಗಿ, ಬಂಧು - ಬಳಗ ಯಾವುದೂ ಇರಬಹುದು, ಯಾವ ತರಹದ್ದೇ ಇರಬಹುದು ಅವೆಲ್ಲವೂ ಕೇವಲ ನಾವು ಭಾವಿಸಿಕೊಂಡಂತಹವು.
ನಮ್ಮ ಭಾವದ ತೀವ್ರತೆ ಮತ್ತು ಸ್ವಚ್ಛತೆಯನ್ನವಲಂಬಿಸಿದಂತಹವು.
ಆಳವಾಗಿ ಯೋಚಿಸಿದ್ರೆ ತಾಯಿ - ಮಗುವಿನ ಸಂಬಂಧ ಕೂಡ ಮಾನವ ಸೃಷ್ಟಿಯೇ.
ಆದರೂ ಭಾವನಾತ್ಮಕ ದೃಷ್ಟಿಯಿಂದ ನೋಡಿದ್ರೆ ತಾಯಿ ಮತ್ತು ಮಗುವಿನ ಸಂಬಂಧಕ್ಕೆ ಜಾಸ್ತಿ ಶ್ರೇಷ್ಠತೆಯಿದೆ ಹಾಗೂ ಅದು ಹೆಚ್ಚು ನೇರ ಮತ್ತು ಸ್ಪಷ್ಟ ಸಂಬಂಧ.
ಆದರೆ ಪ್ರಕೃತಿಯ ಸನ್ನಿಧಿಯಲ್ಲಿ ಎರಡೇ ಬೇಧ.
ಎರಡೇ ಸಂಬಂಧ.
ಅದು ಪ್ರಕೃತಿ ಮತ್ತು ಪುರುಷ ಸಂಬಂಧ - ಗಂಡು ಮತ್ತು ಹೆಣ್ಣು ಎಂಬ ಸಂಬಂಧ.
ಉಳಿದೆಲ್ಲ ಸಂಬಂಧಗಳೂ ಮಾನವ ಸಂಶೋಧನೆ.
ಕುಟುಂಬ ಪರಿಕಲ್ಪನೆಗೆ ಪಕ್ಕಾದ ಮಾನವ ಆ ಮೂಲಕ ಸಂಬಂಧಗಳ ಹೆಸರು ಕೊಟ್ಟು ಭಿನ್ನ ಭಿನ್ನ ಬಾಂಧವ್ಯಗಳನ್ನೂ ರೂಪಿಸಿಕೊಂಡ.
ತನ್ನ ಬುದ್ಧಿಶಕ್ತಿಯಿಂದ ತನ್ನ ಮೇಲರಿಮೆಯನ್ನು ಕಾಪಾಡಿಕೊಳ್ಳಲೋಸುಗ ತನ್ನ ಸುತ್ತ ತಾನೇ ಸಂಬಂಧಗಳ ಬೇಲಿ ಕಟ್ಟಿಕೊಂಡ.
ಹಾಗೇ ತಾನೇ ಕಟ್ಟಿಕೊಂಡ ಸಂಬಂಧದ - ಬಾಂಧವ್ಯದ - ನೈತಿಕತೆಯ ಬೇಲಿಯನ್ನು ಹಾರಲೂ ಆಗದೇ, ಒಳಗೇ ಬದುಕಲೂ ಆಗದೇ ಮುಖವಾಡಗಳನ್ನು ಧರಿಸಿ ಬದುಕಹತ್ತಿದ್ದಾನೆ.
ಇದಕ್ಕೆ ಉದಾಹರಣೆಯೆಂದರೆ : ಮಾನವ ಕುಟುಂಬ ವ್ಯವಸ್ಥೆ ರಚಿಸಿಕೊಂಡ ಲಕ್ಷಾಂತರ ವರ್ಷಗಳ ನಂತರ ಕೂಡ, ತುಂಬ ಮುಂದುವರಿದ ನಾಗರೀಕ ಸಮಾಜದಲ್ಲಿ ಬದುಕುತ್ತಿದ್ದೇವೆ ಅಂದ್ಕೋತಿರುವ ಈ ಕಾಲಘಟ್ಟದಲ್ಲೂ ಇನ್ನೂ ಉಳಿದುಕೊಂಡಿರುವ Incestಗಳು.
ಪ್ರತಿ ವ್ಯಕ್ತಿಯೂ ನೈತಿಕತೆಯ ಮುಸುಕಿನ ಒಳಗೇ ತನ್ನ ಆಸೆಗಳನ್ನು ತೀರಿಸಿಕೊಳ್ಳೋಕಾಗುತ್ತಾ ಅಂತ ಯೋಚಿಸ್ತಾನೆ.
ಮಾನಸಿಕವಾಗಿ ಸಾವಿರ ಬಾರಿ ಮೀರಿದ ಎಲ್ಲೆಯನ್ನು ದೈಹಿಕವಾಗಿ ಮೀರದೇ ಇರಲು ಒದ್ದಾಡುತ್ತಾ ತಾನು ಸಂಬಂಧಗಳ ಎಲ್ಲೆ ಮೀರಿಲ್ಲ ಅಂತ ತನ್ನನ್ನು ತಾನೇ ನಂಬಿಸಿಕೊಂಡು ಭ್ರಮೆಯ ಬದುಕು ಬದುಕ್ತಾನೆ. ಹಾಗಂತ ಮನಸಲ್ಲೇ ಮಂಡಿಗೆ ತಿನ್ನುವುದನ್ನೂ ನಿಲ್ಲಿಸಲಾರ.
ಅವನಿಗೆ ಸಂಬಂಧಗಳ ಬೇಲಿಯೂ ಬೇಕು - ಅವಕಾಶವಾದರೆ ಅದರಾಚೆಗಿನ ಸುಖಭೋಗಗಳೂ ಬೇಕು.
ತಾನು ಹತ್ತಿರದ ಸಂಬಂಧಗಳಲ್ಲಿ ತನ್ನ ಆಸೆಗಳನ್ನು ತೀರಿಸ್ಕೊಂಡಿಲ್ಲ ಅನ್ನುವುದು ಅದರಾಚೆ ತನ್ನಾಸೆಗಳನ್ನು ತೀರಿಸ್ಕೊಂಡವನ ಸಮರ್ಥನೆ ಮತ್ತು ಹಿರಿಮೆ.

ನಿಜ ಮನುಷ್ಯ ಸಂಘಜೀವಿ. 
ಸಮಾಜ ಜೀವಿ. 
ಒಂದು ಸುಂದರ ಸಮಾಜದ ಸ್ವಾಸ್ಥ್ಯಕ್ಕೆ ಕಟ್ಟುಪಾಡುಗಳ ಬೇಲಿ ಅತ್ಯಗತ್ಯ. ಎಲ್ಲ ವ್ಯಕ್ತಿಗಳನ್ನು ಕಾಮ ಸಂಬಂಧ ಮಾತ್ರ ಆಳಹತ್ತಿದರೆ ಅದು ಹೇಯ.
ಏಕೆಂದರೆ ಮನುಷ್ಯ ಉಳಿದ ಪ್ರಾಣಿಗಳಂತೆ ಸಂತಾನಾಭಿವೃದ್ಧಿಗೆ ಮಾತ್ರವಲ್ಲದೇ ಮನೋರಂಜನೆಗಾಗಿಯೂ ಕಾಮದಾಟ ನಡೆಸುವ ಪ್ರಾಣಿ.
ಹಾಗಾಗಿ ಒಂದಷ್ಟು ಸಹಜ ನಿರ್ಬಂಧಗಳು ಅಗತ್ಯವೇ.
ಆದರೆ ನೈತಿಕ ಕಟ್ಟುಪಾಡುಗಳು ಹೆಚ್ಚಿನ ಸಲ ಪ್ರಭಲರು ನಿರ್ಬಲರ ಮೇಲೆ ಹೇರುವ ಕಟ್ಟುಪಾಡುಗಳಾಗಿಯಷ್ಟೆ ಬಳಕೆಯಾಗುವುದು ಕರುಣಾಜನಕ.
ಉದಾಹರಣೆಗೆ - ತುಂಬ ನಾಗರೀಕ ಎನ್ನಿಸಿಕೊಂಡ ಈ ಕಾಲಘಟ್ಟದಲ್ಲೂ ಪತಿಯಿಂದ ವಿನಾಕಾರಣ ಪರಿತ್ಯಕ್ತರಾದ ಹೆಂಗಳೆಯರನ್ನು, ಎಳೆಯ ವಿಧವೆಯರನ್ನು ನಮ್ಮ ಸಮಾಜ ನಡೆಸಿಕೊಳ್ಳುವ ರೀತಿ, ಅವರುಗಳ ಸಣ್ಣ ಸ್ನೇಹ ಸಂಬಂಧವನ್ನೂ ಅನುಮಾನದಿಂದ ನೋಡುವ ಪರಿ, ಇಂದಿಗೂ ಬಳಕೆಯಲ್ಲಿರುವ "ನಾಯಿ ಹಸಿದಿತ್ತು - ಅನ್ನ ಹಳಸಿತ್ತು" ಎಂಬಂತ ನುಡಿಗಟ್ಟುಗಳು.
ಒಂದು ಸಮಾಜಕ್ಕೆ ಚೌಕಟ್ಟು ಎಷ್ಟು ಅಗತ್ಯವೋ - ಒಬ್ಬ ವ್ಯಕ್ತಿಗೆ ತನ್ನ ಸಹಜ ಸುಖವೂ ಅಷ್ಟೇ ಅಗತ್ಯವಲ್ಲವೇ...??

ಇಲ್ಲಿ ಇನ್ನೂ ಒಂದು ಸೂಕ್ಷ್ಮವಿದೆ -
ನಿಯಮಗಳ ಸಡಿಲಿಸುವುದಾದರೆ ಎಷ್ಟರಮಟ್ಟಿಗೆ ಸಡಿಲಿಸಬಹುದು..?
ಯಾವ ಸಂದರ್ಭದಲ್ಲಿ, ಯಾವ ಹಿನ್ನೆಲೆಯಲ್ಲಿ, ಹೇಗೆ ಮೀರಿದರೆ ಸರಿ..??
ಬೇಲಿ ಹಾರಿಯಾದರೂ ಫಸಲು ಮೇಯುತ್ತಾರೆಂದು ಬೇಲಿಯನ್ನೇ ಹಾಕದಿರುವುದು ಎಷ್ಟು ಸಮಂಜಸ..???
ಒಪ್ಪಿಗೆಯಿಲ್ಲದೆ ಗಂಡನೊಬ್ಬ ಹೆಂಡತಿಯನ್ನು ಸೇರುವುದೂ ಅತ್ಯಾಚಾರವೆನಿಸುತ್ತೆ ಅಂತಾದರೆ ನೈತಿಕತೆ ಅನೈತಿಕ ಎನ್ನಿಸಿಕೊಳ್ಳುವ ಸೂಕ್ಷ್ಮ ಬಿಂದು ಯಾವುದು..????
ಪ್ರತೀ ಸಂಬಂಧಕ್ಕೂ ಶುದ್ಧ ಮತ್ತು ಕ್ಷುದ್ರ ಮುಖಗಳೆರಡೂ ಇಲ್ಲವಾ..??
ಅಷ್ಟಕ್ಕೂ ಕಾಮ ಕ್ಷುದ್ರವಾ..??
ನೈತಿಕತೆಯ ಪರಿಧಿಯಲ್ಲೇ ಬರುವ ಮದುವೆಗಾಗಲೀ - ಪ್ರೇಮಕ್ಕಾಗಲೀ ಮೂಲ ಸೆಲೆ ಕಾಮವೇ ಅಲ್ಲವಾ...???
ಎಲ್ಲವೂ ಅಯೋಮಯ ಎನ್ನಿಸುವ ಪ್ರಶ್ನೆಗಳೇ...

ಇನ್ನು ಭಿನ್ನ ಲಿಂಗದ ವ್ಯಕ್ತಿಗಳ ನಡುವಿನ ಪ್ರೇಮ - ಕಾಮದ ವಿಷಯದಲ್ಲೂ ಅಷ್ಟೇ.
ಪ್ರೇಮ ಮಾನವನ ಭಾವನಾತ್ಮಕ ಪರಿಕಲ್ಪನೆ.
ಕಾಮ ಪ್ರಕೃತಿಯ ಮೂಲ ಗುಣ.
ಅದಕ್ಕೇ ಕಾಮದ ಹಂಗಿಲ್ಲದ ಪ್ರೇಮ ತುಂಬ ಕಾಲ ಜೀವಿಸಲಾರದೇ ನರಳೋದು. (ಕೆಲವು ಅಪವಾದಗಳೂ ಇದ್ದೀತು)
ಪ್ರೇಮ ಇದ್ದಲ್ಲಿ ಪ್ರಣಯ ಇದ್ದೇ ಇರುತ್ತೆ.
ಕೆಲವೊಮ್ಮೆ ಅದು ಮಾನಸಿಕ ಮಟ್ಟದಲ್ಲಿ ಮಾತ್ರ ಇದ್ದೀತು.
ದೈಹಿಕತೆಯ ಅವಕಾಶ ಇಲ್ಲದಾಗ.
ಇಷ್ಟಕ್ಕೂ ನಮ್ಮ ಪ್ರೇಮವನ್ನು ವ್ಯಕ್ತಪಡಿಸಲು ನಮಗಿರೋ ಅತೀ ಶಕ್ತ ಮಾಧ್ಯಮ ಅಂದ್ರೆ ದೇಹ ಒಂದೇ.
ಸ್ಪರ್ಶ, ಚುಂಬನ, ಆಲಿಂಗನಗಳು, ನಮ್ಮ ಪ್ರೇಮವನ್ನು - ಆತ್ಮೀಯ ಭಾವವನ್ನು ವ್ಯಕ್ತಪಡಿಸುವ ಮಧುರ ಮಾಧ್ಯಮವಷ್ಟೇ.
ಪ್ರಕೃತಿಗೆ ತಿಳಿದಿರೋದು ಕಾಮ ಮಾತ್ರ.
ಅದು ತನ್ನ ಅಭಿವೃದ್ಧಿಗೆ, ತನ್ನ ಸೃಷ್ಟಿಗಳ ಉಳಿವಿಗೆ ಪ್ರಕೃತಿ ರೂಪಿಸಿಕೊಂಡ ಚಂದನೆಯ ವ್ಯವಸ್ಥೆ.
ಅದಕ್ಕೆ ಮನುಷ್ಯ ಪ್ರೇಮದ ಬೇಲಿ ಹೆಣೆದ.
ಮದುವೆಯ ಬಂಧ ರಚಿಸಿದ.
ಆ ಬೇಲಿ ತುಂಬ ಶ್ರೇಷ್ಠವಾದದ್ದು ಎಂದು ತಾನೇ ಸಾರಿಕೊಂಡ.
ಕೊನೆಗೆ ಅಂಥ ಶ್ರೇಷ್ಠ ಪ್ರೇಮದ ಪರಾಕಾಷ್ಠೆಯ ಹೆಸರಿನಲ್ಲಿ ಕಾಮದಲ್ಲೇ ತೊಡಗಿಕೊಂಡ.
ತನ್ನ ಕಾಮದ ಇಚ್ಛೆಯನ್ನು ಸಭ್ಯತೆಯ ಸೋಗಿನಲ್ಲಿ ಈಡೇರಿಸಿಕೊಳ್ಳುವುದಕ್ಕೆ ಇಟ್ಟುಕೊಂಡ ಹೆಸರು ಪ್ರೇಮ ಅಂತನ್ನಿಸಲ್ಲವಾ..??
ತಾನೇ ರೂಪಿಸಿಕೊಂಡ ಬೇಲಿಯ ಮುರಿಯುವ ಬಯಕೆಯಿಂದಲೇ ಇರಬೇಕು ಪ್ರಕೃತಿ ಸಹಜವಾದ ಕಾಮವನ್ನು ಕತ್ತಲಲ್ಲಿ ಪಡೆವ ಕ್ಷುದ್ರ ಸುಖವಾಗಿ ಬಿಂಬಿಸಿದ...

ಏಕೇನೋ ಗೊತ್ತಿಲ್ಲ.
ಪ್ರೇಮ - ಕಾಮ - ಸಂಬಂಧಗಳ ವಿಚಾರದಲ್ಲಿ ಎಂದಿನಿಂದಲೂ ನನ್ನಲ್ಲಿ ದ್ವಂದ್ವವೇ ತುಂಬಿ ಕಾಡುತ್ತದೆ.
ಒಟ್ನಲ್ಲಿ ಸಂಬಂಧಗಳ ಬಗ್ಗೆ ಸಂಬಂಧವಿಲ್ಲದ ವಿಚಾರಗಳು ಸದಾ ತಲೆಯಲ್ಲಿ ಸುಳಿದಿರುಗುತ್ತಿರುತ್ತವೆ.
ನಂಗನಿಸಿದಂತೆ ನಾವು ಭಾವಿಸಿಕೊಂಡಂತೆ ನಮ್ಮ ಸಂಬಂಧ...
ಸ್ವಚ್ಛ ಮನದಲ್ಲಿ ಎಂಥ ಮಿಲನವೂ ಪವಿತ್ರವೇ...
ವಿಕಾರವಿದ್ದಲ್ಲಿ ಪ್ರೇಮವೂ 'ಕ್ಷುದ್ರ ಕಾಮದ' ಮತ್ತೊಂದು ಹೆಸರಷ್ಟೇ...
ಪ್ರೇಮದ ಹೆಸರಲ್ಲಿನ ಅತ್ಯಾಚಾರಕ್ಕಿಂತ ಶುದ್ಧ ಕಾಮದ ಅನೈತಿಕತೆಯೇ ಲೇಸೇನೋ...
ಮನಸುಗಳ ವ್ಯಭಿಚಾರಕ್ಕಿಂತ ದೇಹಗಳ ಪ್ರೇಮ ಉತ್ತಮವೇನೋ...???

4 comments:

 1. ಮನುಷ್ಯನ ಅರಿಷಡ್ವರ್ಗಗಳ ಸುತ್ತ ಹೆಣೆದ ಈ ಬರಹವು ಸಂಗ್ರಹ ಯೋಗ್ಯ.

  ReplyDelete
 2. ಈಗಿನ ಕಾಲಮಾನ ಅಂತಲ್ಲ....
  ಸಂಬಂಧಗಳೇ ಹಾಗೇನೋ....
  ಒಬ್ಬರೊಂದೊಬ್ಬರಿಗೆ ಭಿನ್ನ....
  ಅನುಕೂಲಕ್ಕೆ ತಕ್ಕಂತೆಯೂ ಬದಲಾಗುತ್ತದೆ....
  ಈವತ್ತು ಅಣ್ಣ ಅಂದು ರಾಖಿ ಕಟ್ಟಿದ ಅವಳು ನಾಳೆ ತಾಳಿಗೆ
  ಕತ್ತೊಡ್ಡಲು ರೆಡಿ... ಆತ ಕಟ್ಟಲು....
  ಹೋಟೇಲಿನಲ್ಲಿ ಜೋಡಿಯಾಗಿ ಸಿಕ್ಕಿಬಿದ್ದ ಪ್ರೇಮಿಗಳು
  ಅಣ್ಣ-ತಂಗಿ ಎಂದು ಹೇಳಿಕೋಳ್ಳೋದು......

  ಈ ಮನುಷ್ಯ ಅನ್ನೋ ಪ್ರಾಣಿ ದೊಡ್ಡ ಅವಕಾಶವಾದಿ....

  ಒಳ್ಳೆಯ ಬರಹ.........

  ReplyDelete
 3. ಸಂಬಂಧಗಳು ಗೋಜಲು ಗೋಜಲು ಎನಿಸಿದರೂ ಎಂದಿಗೂ ಅಸಹ್ಯ ಎನಿಸುವಂತಾಗಬಾರದು ,

  ಪ್ರತಿ ಸಂಬಂಧಗಳನ್ನೂ ಪ್ರಕೃತಿ ಬೆಸೆಯುತ್ತದೆ , ಪ್ರತಿಯೊಂದಕ್ಕೂ ಅದರದೇ ಆದ ತೂಕ , ಗೌರವ ಮೌಲ್ಯಗಳಿರುತ್ತವೆ.

  ReplyDelete
 4. ಸ್ವಚ್ಛ ಮನದಲ್ಲಿ ಎಂಥ ಮಿಲನವೂ ಪವಿತ್ರವೇ... ಇಷ್ಟ ಆಯಿತು.....

  ಸುಂದರ ಬರಹ.....

  ReplyDelete