Sunday, November 27, 2011

ಗೊಂಚಲು - ಇಪ್ಪತ್ಮೂರು....

ಪ್ರೇಮ - ಕಾಮಗಳ ನಡುವೆ...


ಪ್ರೇಮ

ಮನದ ಮೂಲೆಯಲಿ ಮೊಳಕೆಯೊಡೆದು      
ಬಳ್ಳಿಯಾಗಿ ಹಬ್ಬಿ ಹರಡಿ                              
ಮನವನೆಲ್ಲ ಆವರಿಸಿ
ಮೊಗ್ಗು ಬಿರಿದು ಹೂವಾಗಿ ಅರಳಿ
ಸುತ್ತೆಲ್ಲ ಅಂದ - ಗಂಧವ ಚೆಲ್ಲಿ
ಬದುಕು ಹಿಗ್ಗಿ ಸಂಭ್ರಮಿಸುವಂತೆ ಮಾಡಬಲ್ಲ
ಮಧುರ ಭಾವಗಳ ಗುಚ್ಛ...

ಕಾಮ
  
ನಾಭಿಯಾಳದಲ್ಲಿ ಹುಟ್ಟಿ 
ಮನಸು ಮೈಯನೆಲ್ಲ ಕೆರಳಿಸಿ

ಉನ್ಮತ್ತಗೊಳಿಸಿ
ಘರ್ಷಣೆಯಿಂದ ಮಾತ್ರ ಶಮನಗೊಳ್ಳುವ
ಬೆವರಿಳಿಸಿ
ಕೆರಳಿದಷ್ಟೇ ವೇಗವಾಗಿ ಕ್ಷಣಗಳಲಿ ಇಳಿದೂ ಹೋಗುವ
ಉನ್ಮಾದಿತ ಭಾವ...


ಒಂದು ಅಲೌಕಿಕ.
ಇನ್ನೊಂದು ಶುದ್ಧ ಭೌತಿಕ.

ಒಂದು ಅಗೋಚರ ಮನದ 'ಅನುಭಾವ'.
ಇನ್ನೊಂದು ಶುದ್ಧ ಗೋಚರ ದೇಹದ 'ಅನುಭವ'.

ಆದರೂ ವಿಪರ್ಯಾಸ ನೋಡಿ
ಪ್ರೇಮ - ಕಾಮಗಳು ಒಂದನ್ನು ಬಿಟ್ಟು ಇನ್ನೊಂದಿಲ್ಲ ಎಂಬಷ್ಟು ಒಂದರೊಡನೊಂದು ಬೆರೆತು ಹೋದ ವಿರುದ್ಧ ಭಾವಗಳು...

ಒಂದಿಲ್ಲದೆ ಇನ್ನೊಂದು ಅಪರಿಪೂರ್ಣ...

ಅಪ್ಪಟ ಮನಸಿನ ಭಾವ  ಪ್ರೇಮವನ್ನು ಸಶಕ್ತವಾಗಿ ವ್ಯಕ್ತಪಡಿಸಲು ಇರುವ ಏಕೈಕ ಮಾಧ್ಯಮ ದೇಹವೊಂದೇ...
ಪ್ರೇಮದ ಭವ್ಯತೆ ಇರುವುದು ಅರ್ಪಣಾ ಭಾವದಲ್ಲಿ...
ತನ್ನದೆನ್ನುವುದೆಲ್ಲವನ್ನೂ ತನ್ನವರಿಗರ್ಪಿಸಿದ ಸಂತೃಪ್ತ ಭಾವ ಉತ್ತುಂಗಕ್ಕೇರುವುದು ಮಿಲನಮಹೋತ್ಸವದುತ್ತುಂಗದಲ್ಲಿ...
ಉತ್ಕಟವಾದ ಪ್ರೇಮಭಾವದ ಉತ್ತುಂಗದಲ್ಲಿ ಮನಸು ದೇಹದ ಮಿಲನವ ಬಯಸುತ್ತೆ...

ಭೌತಿಕ ದೇಹಗಳ ಮಿಲನದುತ್ತುಂಗದಲ್ಲಿ ಅಲೌಕಿಕ ತೃಪ್ತ ಭಾವ - ಕ್ಷಣಿಕವೇ ಆದರೂ ಸತ್ಯ ಮತ್ತು ಸಶಕ್ತ...

ಉನ್ಮಾದದ ಬೆವರಿಳಿದ ಮೇಲೂ ತಬ್ಬಿ ಮಲಗುವ ಬಯಕೆ ಪ್ರೇಮಕ್ಕೆ...
ಎದ್ದು ಹೋಗಲು ಬಚ್ಚಲು ಮನೆಯೊಂದು ನೆಪ ಬರೀ ಕಾಮಕ್ಕೆ...

ದಿನಕ್ಕೆ ಹಲವರೊಂದಿಗೆ ಹೊರಳಾಡಿದ ಮೇಲೂ ಅತೃಪ್ತ - ಪ್ರೇಮದ ಬೆಂಬಲವಿಲ್ಲದ ಸೂಳೆಯ ಕಾಮ...
ಹತ್ತಾರು ವರ್ಷ ಒಂದೇ ಗಂಡಿನ ತೆಕ್ಕೆಯಲ್ಲಿದ್ದೂ - ಅದದೇ ಚುಂಬನ,ಆಲಿಂಗನ,ಮಿಲನಗಳಲ್ಲಿ ತೃಪ್ತ - ಗರತಿಯ ಪ್ರೇಮ...

ಒಂದಿನಿತೂ ಪ್ರೇಮವಿಲ್ಲದ ಮಿಲನ ಬರೀ ಶುಷ್ಕ ಸಂಭೋಗ...
ಕಾಮದ ಸವಿಯಿಲ್ಲದ ಪ್ರೇಮ ಬರೀ ನೀರಸ ಸಂಯೋಗ...

ಅದಕೇ ಅಂದಿದ್ದು ಪ್ರೇಮ ಕಾಮಗಳು ಒಂದನ್ನುಳಿದು ಇನ್ನೊಂದು ಪೂರ್ಣವಲ್ಲ ಎಂದು...

ಆದರೂ ಪ್ರೇಮ ಪವಿತ್ರ - ಕಾಮ ಅಪವಿತ್ರ ಎನ್ನುತ್ತೇವೆ...
ಏಕೇನೋ...???
ಕಾರಣ ಗೊತ್ತಿಲ್ಲ...
ಪ್ರಾಕೃತಿಕವಾಗಿ ಸಮಾನವಾದ
ಒಂದನ್ನುಳಿದು ಇನ್ನೊಂದು ತುಂಬ ಕಾಲ ಬದುಕಲಾರದ
ಎರಡು ವಿಚಾರಗಳಲ್ಲಿ ಒಂದು ಪವಿತ್ರ ಇನ್ನೊಂದು ಅಪವಿತ್ರ ಹೇಗಾದೀತು...???
ಅರ್ಥವೇ ಆಗುತ್ತಿಲ್ಲ...
ಗಂಭೀರ ವಿಚಾರಗಳಲ್ಲಿ ಎಂದಿಗೂ ದ್ವಂದ್ವವೇ ಅಂತಿಮವೇನೋ...!!!

5 comments:

  1. ಶ್ರೀವತ್ಸರವರೆ..

    ಆಹಾರ..
    ನಿದ್ರಾ ಮೈಥುನ ಸಹಜ ಅನ್ನುತ್ತದೆ ನಮ್ಮ ಪುರಾಣಗಳು..

    ಆದರೆ ಇವುಗಳಲ್ಲಿ "ಕಾಮ" ಮಾತ್ರ ಸರಿಯಲ್ಲ ಆಂತ ಅದಕ್ಕೊಂದಷ್ಟು ನಿರ್ಬಂಧ ಹಾಕಿದ್ದಾರೆ..

    ಚರ್ಚಿಸಿದಷ್ಟೂ ಹೊಸ ಹೊಸ ಮಾಹಿತಿ ದೊರೆಯುವ ವಿಷಯ ಇದು..

    ನಿಮ್ಮ ಕವನ ತುಂಬಾ ಚೆನ್ನಾಗಿದೆ...

    ಅಭಿನಂದನೆಗಳು..

    ReplyDelete
  2. ನಿಮ್ಮ ವಿಚಾರಗಳು ಪಕ್ಕನೇ ಹೊಳೆಯುವಂತವು.
    ನಿಮ್ಮ ಮಾತಿನಂತ ಪ್ರೇಮವೂ ಪವಿತ್ರ. ಕಾಮವೂ ಪವಿತ್ರ.ಅದು ಹಿತ-ಮಿತ ಮತ್ತು ಗೌರವಯುತವಾಗಿದ್ದರೆ ಮಾತ್ರ. ಚೆನ್ನಾಗಿದೆ ನಿಮ್ಮ ಮಾತುಗಳು.

    ReplyDelete
  3. ಗೆಳೆಯಾ.....
    ಪ್ರೀತಿ ಮತ್ತು ಕಾಮ..... ತುಂಬಾ ದೊಡ್ಡ subject ಇದು....

    ಓಶೋ ಕೂಡಾ ಇದರ ಕೆಲವೊಂದು ತಿರುವುಗಳಲ್ಲಿ ನಿಂತು ಮೂಕನಾಗಿ ಹೋಗಿದ್ದುಂಟು... (ಅಂತೆ)

    ಪ್ರೇಮ ಮತ್ತು ಕಾಮಗಳು ಒಂದನ್ನೊಂದು ತಬ್ಬಿಕೊಂಡು ಬಳೆದ ಜೀವಗಳವು....

    ಪ್ರೀತಿ ಅಂದರೆ ನೂರು ವ್ಯಾಖ್ಯೆಗಳು.....
    ಪ್ರೀತಿಯ ಉತ್ತುಂಗ ಕಾಮವಂತೆ......
    ಪರಿಪೂಣಱತೆ ಅನ್ನೋ ಮಾತಿದೆ ಇದಕ್ಕೆ.....

    ಪ್ರೀತಿ ಶಿಖರದ ಉತ್ತುಂಗ ಕಾಮ.....

    ಹತ್ತುವಷ್ಟು ಹತ್ತಿಯಾಗಿದೆ.....
    ಯಾವ ಕಡೆಗೆ ನೋಡಿದರೂ ನಾವೇ ಎತ್ತರ.....
    ಉತ್ತುಂಗದಲ್ಲಿದ್ದೇವೆ......
    ಮತ್ತೂ ಮೇಲೇರಲಿಕ್ಕೆ ಸಾಧ್ಯವೇ ಇಲ್ಲಾ....
    ಮುಂದೇನು....????
    ಕೊನೆ ತಾನೇ ಅದು?
    ಹೂಂ ಎಷ್ಟೋ ಕಡೆ ಇದೇ ಜರುಗೋದು....
    ಕಾಮವೇ ಕೊನೆ....!!!!!!

    ಕೊನೆಯಲ್ಲಿ ನಿಂತು ತಿರುಗಿ ನೋಡೋದೇ ಇಲ್ಲಾ....
    ಪ್ರೀತಿ ಅರ್ಥ ಕಳೆದುಕೊಳ್ಳೋದೇ ಇಲ್ಲಿ....
    ಪ್ರೇಮದ ಅರ್ಥ ದೊಡ್ಡದಿದೆ....
    ಅಣ್ಣೋರಿಗೆ ತಿಳಿಯದ್ದೇನಿದೆ....

    (ಅಸಂಬದ್ಧ ಎಂದೆನಿಸ್ತಿದೆಯಾ ಗೆಳೆಯಾ.....)

    ReplyDelete
  4. ಪ್ರೀತಿ ಗೊತ್ತು..... ವಿಮರ್ಶೆ ಕೊಂಚ........ (ಗೊತ್ತಿಲ್ಲಾ.....)

    ನಮ್ಮ ನಡುವೆ ಹರಿದಾಡಿದೆ.......

    ಆದರೆ ಬರಹ ಮತ್ತೂ ಚನ್ನಾಗಿದೆ. xlent..........

    ReplyDelete
  5. ಅನಿಸಿಕೆಗಳಿಂದ ಹುಟ್ಟಿದ ವ್ಯಾಖ್ಯೆಗಳು, ಅದಕ್ಕೆ ಪುಷ್ಟಿ ಕೊಡುವ ಸಾಲುಗಳು ... ಭಾವ, ಬರಹ ಎರಡೂ ಚೆನ್ನಿವೆ, ಆದರೆ,...( ಈ ಅಕ್ಕಂದೊಂದು ಇದ್ದಿದ್ದೇ ಅಂತ ಬಯ್ಕೊಂಡ್ರೋ ಪರವಾಗಿಲ್ಲ) ಕಾಮ ಅಪವಿತ್ರ ಅನ್ನೋದನ್ನ ನಾನು ಒಪ್ಪಲ್ಲ. ಅದು ನಮ್ಮ ಬೇರೆಲ್ಲ ಮೂಲಭೂತ ಅವಶ್ಯಕತೆಗಳಷ್ಟೇ ಮುಖ್ಯ ಮತ್ತು ಪವಿತ್ರ. ಬೇರೆಲ್ಲಾ ಕ್ರಿಯೆಗಳ ಹಾಗೆಯೇ ಅದಕ್ಕೂ ಜಾಗ, ಕೆಲ ನಿಯಮಗಳು, ಸಮಯ- ಸಂದರ್ಭಗಳಿವೆ ಅಷ್ಟೇ. ನಿಯಮ ಮೀರಿದ ಯಾವುದೇ ಕ್ರಿಯೆಯೂ ಅಪವಿತ್ರವೇ, (ಊಟವನ್ನ ಬಚ್ಚಲುಮನೆಯಲ್ಲಿ, ಅಥವಾ ಊಟ ಅಂತ ಮಣ್ಣನ್ನ ತಿಂದ್ರೆ, ದೈಹಿಕ ಬಾಧೆಗಳನ್ನ ಮನೆಯ ಹಜಾರದಲ್ಲಿ ತೀರಿಸಿಕೊಂಡ್ರೆ ಅದು ಸರಿಯಲ್ಲ್ವಲ್ಲಾ ಹಾಗೆ) - ಇದು ನನ್ನ ತೀರಾ ವೈಯುಕ್ತಿಕ ಅನಿಸಿಕೆ ಶ್ರೀವತ್ಸ..

    ReplyDelete