Thursday, April 25, 2013

ಗೊಂಚಲು - ಏಳು X ಹತ್ತು + ಒಂದು.....

ಬಂಡೆಯಾಗೋ ಭಂಡ ಬಯಕೆಯಲ್ಲಿ ಒಂದಷ್ಟು.....

ಬಂಡೆಯಾಗಬೇಕು ನನ್ನೊಳಗು ಎಂಬ ಭಾವ ತೀವ್ರವಾಗಿ ಕಾಡುತಿದೆ...

ಬಂಡೆಗಾದರೆ ನೀರ ತಂಪು - ಬಿಸಿಲ ಬೇಗೆ ಎಲ್ಲ ಮೇಲ್ಮೈಯ ತಾಕೀತಷ್ಟೇ...
ಒಂದಷ್ಟು ಪಾಚಿ, ಇನ್ನೊಂದಿಷ್ಟು ಧೂಳಕಣ ಹೊರ ಮೈಯ ಸುತ್ತೀತಷ್ಟೇ...
ಆದರೆ ನೀರ ತಂಪು - ಬಿಸಿಲ ಬೇಗೆ ಇವ್ಯಾವುದೂ ಅದರ ಒಳಗನ್ನು ತಾಕಲಾರವು...
ಈ ಭಾವ ಸಂಬಂಧಗಳು ಬೆಸೆದುಕೊಳ್ಳುವ, ಬೆಸೆದುಕೊಂಡ ಬಂಧಗಳ ಸಲಹಿಕೊಳ್ಳುವಲ್ಲಿ ಸೋತೆ ಅನ್ನಿಸಿದಾಗಲೆಲ್ಲ (ಈ ಸಂಗತಿಯಲ್ಲಿ ನಾನು ಗೆದ್ದ ನೆನಪಿಲ್ಲ ನನ್ನಲ್ಲಿ) ಗೊಂದಲಕ್ಕೆ ಬೀಳುವ ಮನಸು ಬಂಡೆಯಾಗಲು ಬಯಸುತ್ತೆ...
ಆದರೇನ ಮಾಡಲಿ ನಾ ಸಾಗುವ ದಾರೀಲಿ ನಾನೊಬ್ಬನೇ ಇಲ್ಲ...
ದಾರಿ ತುಂಬ ಜನವೇ ಜನ...
ಕೆಲವರು ನನ್ನ ದಾಟಿ ಮುಂದೆ ಸಾಗುತ್ತಾರೆ... 
ಇನ್ಕೆಲವರು ಬೆನ್ನ ಹಿಂದೆ...
ಇನ್ನಷ್ಟು ಮಂದಿ ಜತೆಗೇ ಹೆಜ್ಜೆ ಜೋಡಿಸುತ್ತಾರೆ... 
ಹಿಂದು ಮುಂದಿನವರಿಂದ ಕಳಚಿಕೊಳ್ಳಬಹುದು...
ಆದರೆ
ಹಾಯ್ ಎಂದು ಕೈಕುಲುಕಿ ಜತೆಗೇ ಹೆಜ್ಜೆ ಇಡುತ್ತಾ ಹೆಗಲು ತಬ್ಬಿ ನಗುತ್ತಾರಲ್ಲ ಅವರನ್ನ ಕಳಚಿಕೊಂಡು ಬಂಡೆತನಾನ ಸಾಕಿಕೊಳ್ಳೋದು ಬಲು ಕಷ್ಟ ಕಷ್ಟ...
ನಾನಿವನು ನೀವಿವರಲ್ಲವಾ ಅಂತ ಮಾತಿಗಿಳಿಯುವ ಜೀವ ಇಷ್ಷಿಷ್ಟೇ ಮಾತುಗಳಲ್ಲಿ ನೀನು ನಾನುಗಳಾಗಿ ಚೂರು ಚೂರಾಗಿ ನೋವಿಗೆ ಕಿವಿ, ನಲಿವಿಗೆ ನಗುವಾಗುತ್ತಾ...
ಬಂಡೆಯ ಯಾವುದೋ ಮೂಲೆಯಲಿ ಕಂಡೂ ಕಾಣದಂತಿರೋ ಚಿಕ್ಕ ಬಿರುಕಿನಿಂದಲೇ ಒಳನುಗ್ಗಿ - ಮಾತು ಮೌನಗಳಲೆಲ್ಲ ಜತೆಗಿರುತ್ತಾ - ಹಂಚಿಕೊಳ್ಳುವ ಸುಖಕ್ಕೆ ನನ್ನನು ಪಕ್ಕಾಗುವಂತೆ ಮಾಡಿ ಅರಿವೇ ಆಗದಂತೆ ಒಳಗನೆಲ್ಲ ಆವರಿಸಿಬಿಡುತ್ತಾರೆ...
ಒಮ್ಮೆ ಒಳಬಂದು ನನ್ನವರೆನ್ನುವ ಭಾವ ಮೂಡಿಬಿಟ್ಟರೆ ಅಲ್ಲಿಗೆ ಮುಗಿಯಿತು... 
ಒಬ್ಬರೆಡೆಗೊಬ್ಬರಿಗೆ ನಿರೀಕ್ಷೆಗಳು ಸುತ್ತಿಕೊಂಡು ಮನಸು ಮತ್ತ ಕೋತಿ... 
ನಾನಿದನ್ನ ಹೇಳಿಕೊಂಡೆ, ಆತ ಇದನ್ನ ಹಂಚಿಕೊಂಡ...
ಅರೇ ಇದನ್ನಾತ ನಂಗೆ ಹೇಳಿಯೇ ಇಲ್ಲವಲ್ಲ... 
ಬಿಡು ಎಲ್ಲವನ್ನೂ ನಂಗೆ ಹೇಳೋಕೆ ಸಾಧ್ಯವಾ... 
ಅಲ್ಲ ನಂಗೆ ಹೇಳದಿದ್ದರೂ ಪರವಾಗಿರಲಿಲ್ಲ ಆದರೆ ಅವನಿಗೆ ಹೇಳಿದ...
ಅಂದರಾತ ನಂಗಿಂತ ಹತ್ತಿರದವನಾ...
ಅರೆ ನಾನ್ಯಾಕೆ ಇಷ್ಟು ಸಿನಿಕನಂತಾಡ್ತೀನಿ...
ಅವನ ಬದುಕಲ್ಲಿ ನಾನೂ ಒಂದು ಪಾತ್ರ ಅಷ್ಟೇ...
ಆದರೆ ನಾನೇ ಮುಖ್ಯಪಾತ್ರ ಆಗಬೇಕಿತ್ತಲ್ಲವಾ...
ಈಗೀಗ ಮಾತೇ ಇಲ್ಲ...
ಮನಸಾಗದಿದ್ದರೆ ಮಾತು ಬೇಡ ಬಿಡು - ಯಾವತ್ತೂ ಗೆಳೆತನ ಸಹಿಸಿಕೊಳ್ಳುವುದಾಗಬಾರದಲ್ಲವಾ...
ಆದರೂ ಹೀಗೆ ಸದ್ದೇ ಇಲ್ಲದೆ ಸಬೂಬುಗಳ ನೆರವು ಕೋರಿ ಇಂಚಿಂಚಾಗಿ ದೂರಾಗುವ ಬದಲು ಈಗಿತ್ತಲಾಗೆ ನೀನ್ಯಾಕೋ ಇಷ್ಟವಾಗುತ್ತಿಲ್ಲ ಕಣೋ ಗೂಬೆ ಅಂತ ನೇರಾ ನೇರ ಹೇಳಿ ಕಳಚಿಕೊಂಡರೆ ಎಷ್ಟೋ ಹಿತವೆನಿಸುತ್ತಿತ್ತು...
ಜೊತೆ ನಡೆವ ಖುಷಿ - ಬಿಟ್ಟು ಹೋದೀತೆಂಬ ಭಯ ಹೀಗೆ ಏನೇನೋ ಗೊಂದಲಗಳು...
ನಿರೀಕ್ಷೆಗಳಿಲ್ಲದ ವಿನಾಕಾರಣದ ಪ್ರೀತಿಯ ಮಾತಾಡುತ್ತಲೇ ಮನಸು ಗೆಳೆತನದ ಹುಟ್ಟು - ಸಾವಿಗೆ ಕಾರಣಗಳ ಹುಡುಕುತ್ತೆ... 
ಅಂದರೆ ನಿರೀಕ್ಷೆಗಳು ಉಸಿರಾಡುವುದರೊಂದಿಗೆ ಬಾಂಧವ್ಯದ ಸಾವಿಗೆ ಮುನ್ನುಡಿ ಸಿದ್ಧವಾಗುತ್ತೆ...
ಏನಂದ್ರೆ ನನ್ನ ಮನದಲ್ಲಿ ಬಂಧವೊಂದರ ಸಾವಿಗೆ ಮುನ್ನುಡಿ ಬರೆದ ನಾನೇ ಚೆಂದಗೆ ಬೆನ್ನುಡಿಯನ್ನೂ ಬರೆದು ನಿಸೂರಾಗಲಾರದೇ - ಬಂಧ ಸತ್ತಿದ್ದು ನನ್ನಿಂದಲ್ಲ ಎಂದು - ವಾದಗಳ ಮೂಲಕ, ಅಹಂನ ತೃಪ್ತಿಗಾಗಿ ಸಂಬಂಧವನ್ನು ಪ್ರಜ್ಞಾಪೂರ್ವಕವಾಗಿ ಹಿಡಿದಿಡಲು ಬಯಸುವದು ನನ್ನ ಮೂರ್ಖತನವಲ್ಲವಾ...
ಇಷ್ಟಕ್ಕೂ ಭಾವನಾತ್ಮಕ ಬಂಧಗಳ ಅಳಿವು - ಉಳಿವು ನಿಂತಿರುವುದು ನಡುವೆ ಕಚ್ಚಿಕೊಂಡಿರೋ ಭಾವತೀವ್ರತೆಯಲ್ಲಲ್ಲವಾ...
ಅಂದ್ರೆ ಭಾವಿಸಿಕೊಂಡಷ್ಟೇ ಬಂಧ...
ಭಾವವೆಂದರೆ ಮನೋ ಮೂಲದ್ದು ಮತ್ತು ಮನಸು ಎಂದಿಗಿದ್ದರೂ ಮರ್ಕಟವೇ...
ಈ ಹಾಳು ಮನಸು ತನ್ನ ಭಾವಗಳನ್ನ, ತಾನೇ ಬೆಸೆದುಕೊಂಡ ಬಂಧಗಳನ್ನ ಪ್ರೀತಿಯಿಂದ ನಿಭಾಯಿಸೋಕೆ ಕಲಿಯೋದು ಯಾವಾಗಲೋ...
ಇರುವ ಬಂಧಗಳನೇ ಸರಿಯಾಗಿ ನಿಭಾಯಿಸಲಾರದ ನಾನು ಹೊಸ ಬಂಧಗಳೆಡೆಗೆ ತುಡಿಯುವುದ್ಯಾಕೋ...
ಇಂಥ ಸಂಗತಿಗಳ ಸುಳಿಗೆ ಸಿಕ್ಕಿ ಮನಸು ಗೊಂದಲಗಳ ಗೂಡಾದಾಗಲೆಲ್ಲ ನಾನು ಮತ್ತೆ ಬಂಡೆಯಾಗಬೇಕೆನಿಸುತ್ತೆ - ಬಿರುಕುಗಳೇ ಇಲ್ಲದ ಉರುಟಾದ ಬಂಡೆ....
ಥುತ್ - ಒಳ್ಳೇ ಗರತಿಯ ವೇಷದಲ್ಲಿರೋ ಸೂಳೆಯಂತಾಡೋ ಈ ನನ್ನ ಮನಸಿಗೆ ಏನೆನ್ನಲಿ...

***

ನನಗೇ ಅರ್ಥವಾಗದ ನಾನು.... 
ಗೊಂದಲಗಳ ಗೂಡು...
ಇನ್ನಾರಿಗಾದರೂ ಅರ್ಥವಾದೇನಾ..?
ಅರ್ಥವಾಗುವ ಜರೂರತ್ತಿದೆಯಾ...??
ಉತ್ತರಗಳಿಲ್ಲದ ಅಡ್ನಾಡಿ (ಗೊಂದಲದ) ಪ್ರಶ್ನೆಗಳೇ ತಲೆತುಂಬ...
ಆದರೆ ಗೆಳೆತನದೆಡೆಗಿನ ನನ್ನ ಮನದ ಗೊಂದಲಗಳ ಬಗ್ಗೆ ಇಷ್ಟೆಲ್ಲ ಬರೆದ ಮೇಲೂ ಒಂದು ಮಾತು ಒಪ್ಪಿಕೊಳ್ಳಲೇ ಬೇಕಿದೆ...
ಪ್ರೀತಿ, ವಿಶ್ವಾಸ, ಗೆಳೆತನದ ಭಾವಗಳು ಮನಸಿಗೆ ಬೇಡವೆಂದರೂ ಖುಷಿಯನ್ನೇ ಕೊಡುತ್ತವೆ...
ಅದಕ್ಕೇ ಒಂದು ಗೆಳೆತನ ಕಳಚಿಕೊಂಡರೆ ಇನ್ನೊಂದರೆಡೆಗೆ ನಿಧಾನವಾಗಿಯಾದರೂ ಕೈಚಾಚಿ ನಗುತ್ತೇನೆ...
ಈ ಕ್ಷಣವನ್ನು ಮಾತ್ರ ಪ್ರೀತಿಸೋ ನಾನು - ಈ ಕ್ಷಣ ದಕ್ಕಿದ ಗೆಳೆತನಾನೂ ಅಷ್ಟೇ ಪ್ರೀತಿಸ್ತೇನೆ...
ಮತ್ತದೇ ಗೊಂದಲಗಳು ಹೊಸ ಮುಖದಲ್ಲಿ ನಗುತ್ತವೆ...


Monday, April 22, 2013

ಗೊಂಚಲು - ಏಳು X ಹತ್ತು.....


ನಿನ್ನ ಸ್ನೇಹದ ನೆನಪ ಗುಂಗಲ್ಲಿ.....

ಈ ಮರಳು ತೀರದಲಿ, ಸಂಜೆ ಸವೆಯುವ ಹೊತ್ತಲ್ಲಿ, ಅಲೆಗಳು ಪಾದ ತೋಯಿಸುತಿದ್ದರೆ...
ಹೆಜ್ಜೆಗೆ ನಿನ್ನ ಗೆಜ್ಜೆ ದನಿಯ ಜತೆಯಿದ್ದಿದ್ದ - ಪಕ್ಕ ಕೂತು ಸಾಗರ ಮತ್ತು ಬಾನು ಸಂಧಿಸುವ ಬಿಂದುವಿನಲಿ ಕಣ್ಣ ನೆಟ್ಟು ನಗೆಯ ಕನಸ ಹೊಸೆಯುತಿದ್ದ - ಆ ದಿನಗಳ ನೆನಪಾಗುತ್ತೆ ಗೆಳತಿ...

ಬೆಳಕ ಹುಡುಕಿ ಹೊರಟೆ - ಕತ್ತಲ ಸೊಬಗು ದಕ್ಕಿತು...
ನಿನ್ನನರಸಿ ಅಲೆದೆ - ನನ್ನೆ ನಾ ಕಂಡುಕೊಂಡೆ...

ಕತ್ತಲಲ್ಲು ಸೊಬಗಿತ್ತು - ನನ್ನೊಳಗೂ ಒಂದಿಷ್ಟು ಖುಷಿಯಿತ್ತು...
ಆದರೂ ಬದುಕಿಗೆನೋ ಕೊರತೆ...
ನೀನಿಲ್ಲ ಮತ್ತು ಬೆಳಕಿಲ್ಲ...

ಛೆ -
ನಾನು ಆ ಕವಿತೇನ ಬರೆಯಲೇಬಾರದಿತ್ತು...
ಬರೆದರೂ ಅಲ್ಲಿಯ ಪಾತ್ರಕ್ಕೆ ನಿನ್ನ ಗುಣಗಳ ಆವಾಹಿಸಬಾರದಿತ್ತು...
ಆದರೇನ ಮಾಡಲಿ ನಾನೂ ಮನುಷ್ಯನೇ ತಾನೆ...ಸಾಮಾನ್ಯರಲ್ಲಿ ಸಾಮಾನ್ಯ...
ಸಂಗಾತಿಯನರಸುವಷ್ಟು ಬೆಳೆದ ಮನಸೊಂದು ತನ್ನ ಸಂಗಾತಿಯ ಕನಸಿಗೆ ಜೀವ ತುಂಬುವಾಗ ತನ್ನದೇ ಸುತ್ತಲಿನ ಜೀವಗಳ ಗುಣಗಳನ್ನು ಆ ಸಂಗಾತಿಯ ಕನಸಿಗೂ ತುಂಬುವುದು ಸಹಜ ಮತ್ತು ಸಾಮಾನ್ಯ...
ನಾನು ಗಂಡು ಪ್ರಾಣಿ.. ಹಾಗಾಗಿ ಅಮ್ಮನ ಮಮತೆ, ತಂಗಿಯ ಕೀಟಲೆ, ಅಕ್ಕನ ಅಕ್ಕರೆ, ಅತ್ತೆಯ ಆಪ್ತ ನಗು ಮತ್ತು ನಿನ್ನ ಸರಳ ಪ್ರಶಾಂತ ಹಾಗೂ ಮೌನದಿಂದಲೆ ಬಂಧಗಳ ಸಲಹಿಕೊಂಬ ಗುಣಗಳ ನನ್ನ ಸಂಗಾತಿಯ ಕನಸಿಗೆ ಆವಾಹಿಸಿದ್ದು ತಪ್ಪಾ...
ಎಂಥ ಚಂದದ ಗೆಳೆತನವೊಂದು ಹಬ್ಬಿ ನಿಂತಿತ್ತು ನಮ್ಮಿಬ್ಬರ ನಡುವೆ...
ಎಲ್ಲ ಹೇಳಿಕೊಳ್ಳಬಹುದಾದ, ಹೇಳದೆಯೂ ನೋವುಗಳ ಅರಿಯಬಹುದಾದ, ನೋವಿಗೂ - ನಲಿವಿಗೂ ಹಂಚಿಕೊಳ್ಳಲು ಇನ್ನೊಬ್ಬರಿಲ್ಲವೇನೋ ಎಂಬಂತೆ ಒಬ್ಬರನ್ನೊಬ್ಬರು ಅಂಟಿಕೊಂಡಂತ ಸ್ವಚ್ಛ ನಗೆಯ ಗೆಳೆತನ...
ಈವರೆಗೆ ನಾವು ಆಡದ ಮಾತು, ಹಂಚಿಕೊಳ್ಳದ ಮೌನ ಹೇಳಿಕೊಳ್ಳಲೊಂದಾದರೂ ಇದೆಯಾ...
ಎದುರಿಗಿಲ್ಲವಾದಾಗಲೂ, ಇತರ ಸಾವಿರ ಜನರೊಟ್ಟಿಗಿದ್ದಾಗಲೂ ನಿನ್ನ ಮನಸು ನನ್ನೊಂದಿಗೇ ಮಾತಾಡುತ್ತಿರುತ್ತದೆಂಬುದು ನಂಗೂ ಗೊತ್ತು ಮತ್ತು ನನ್ನ ಮೌನವೂ ನಿನ್ನೊಂದಿಗೆ ಹರಟುತ್ತಲೇ ಇರುತ್ತೆ ಸದಾ ಎಂಬುದು ನಿಂಗೊತ್ತು...
ಯಾವುದೋ ನೋವಲ್ಲಿ, ತುಂಬ ಪ್ರೀತಿಸುವ ಹುಣ್ಣಿಮೆ ಚಂದಿರನ ಬಗೆಗೂ ಯಾಕೋ ಒಮ್ಮೊಮ್ಮೆ ಬೇಸರ ಮೂಡುತ್ತೆ ಕಣೇ ನಗುವ ಕೋಟಿ ತಾರೆಗಳ ಮಿನುಗೋ ಖುಷಿಯ ಒಂದಿಷ್ಟು ಕಿತ್ತುಕೊಂಡನೇನೋ ಈ ಚಂದಿರ ತನ್ನ ಬೆಳದಿಂಗಳ ಚೆಲ್ಲಿ ಅನ್ನೋ ಭಾವ ಕಾಡುತ್ತೆ ಅಂದಾಗ ನಾನು; ಅಮಾವಾಸ್ಯೆ ಪೂರ್ತಿ ಮಿನುಗೋ ತಾರೆಗಳಿಗಾಗಿಯೇ ಕಣೋ ಇರೋದು ಅಂತ ಸಂತೈಸುತಿದ್ದವಳು ನೀನು...
ರಂಪಾ ರಂಪ ಜಗಳ ಮಾಡಿ ಮುಖ ತಿರುಗಿಸಿಕೊಂಡು ಕೂತು ಐದೇ ನಿಮಿಷಕ್ಕೆ ‘ನಂಗಿನ್ನೂ ಸಿಟ್ಟು ಹೋಗಿಲ್ಲ, ನಾನು ಮಾತಾಡಲ್ಲ’ ಅಂತ ಮೆಸೇಜ್ ಮಾಡ್ತಾ ಇದ್ದೋಳು ನೀನು - ಮತ್ತದು ನಂಗೆ ನೀ ಮಾತಾಡಬಹುದು ಎಂಬುದರ ಸೂಚನೆ ಆಗಿರುತ್ತಿತ್ತು - ಪಕ್ಕದಲ್ಲೇ ಕೂತು ಮೆಸ್ಸೇಜಲ್ಲಿ ಸಿಟ್ಟಿನ ಮಾತಾಡೋ ನಿನ್ನ ಕಂಡು ನಕ್ಕು ನಕ್ಕು ಕಣ್ಣೀರಾದ ಸಂಜೆಗಳೆಷ್ಷೋ...
ಅಂಥದ್ದು ಇಂದಿಗೆ ಅದೆಷ್ಟು ಸಂಜೆಗಳು ಸರಿದು ಹೋದವು ಈ ನದಿಯ ತೀರದಲಿ ನಿನ್ನ ಪಾದದ ಗುರುತು ಕಾಣದೆ...
ಎಲ್ಲ ಕಳೆದು ಹೋದ ಭಾವ - ಮಾತುಗಳೆಲ್ಲಾ ಮೌನದ ಮೊರೆಹೋಗಿ ಮನಸು ಮೂಕ ಮೂಕ - ಜಾರಲಾರದು ಕಣ್ಣ ಹನಿ, ಅದಕೂ ಗಂಡಸೆಂಬ ಅಹಂಕಾರ - ಹಿಂಡುವ ತುಂಡು ಭಾವಗಳೆಲ್ಲಾ ಭಂಡ ಮನಸಲ್ಲೆ ಬಂಧಿ...
ಅಲ್ವೇ - ನನ್ನೊಳಗನೆಲ್ಲ ನನ್ನಷ್ಟೇ ಚೊಕ್ಕವಾಗಿ ತಿಳಿದವಳು ನೀನು...
ಯಾರನೂ ಪ್ರೇಮಿಸಲಾರದ ನಾನು ವಿನಾಕಾರಣ ನನ್ನೊಳಗೆ ಮೂಡಿ ನಿಲ್ಲೋ ಪ್ರೇಮದ ಕನಸಿನ ಆಲಾಪಗಳನ್ನು ವಿಶ್ವಾಸದ ಗೆಳತಿಯಾದ ನಿನ್ನೊಂದಿಗಲ್ಲದೆ ಇನ್ಯಾರೊಂದಿಗೆ ಹಂಚಿಕೊಳ್ಳಲೇ...
ಒಂದಿಷ್ಟು ಕೀಟಲೆಗೆ ನೀನೆ ನನ್ನ ಪ್ರೇಮಿಕೆ ಎಂಬಂತೆ ಮಾತಾಡಿದ್ದು ತಪ್ಪಾ..?
ಇಷ್ಟಕ್ಕೂ ಎದುರಾ ಎದುರು ನಾವಿಬ್ಬರೂ ಅದೆಷ್ಟು ಬಾರಿ ಹಾಗೆ ಮಾತಾಡಿಲ್ಲ....
ಅಂದರೆ ಮಾತಾಡಿದ್ದು ತಪ್ಪಲ್ಲ ಹಾಗೆ ಬರೆದು ಪ್ರಕಟಿಸಿದ್ದು ತಪ್ಪು ಅಥವಾ ನಿನ್ನ ಗುಣಗಳ ಇನ್ಯಾರಿಗೋ ಆವಾಹಿಸಿದ್ದು ತಪ್ಪಾ...?
ಅಷ್ಟು ಸಣ್ಣ ಸಲಿಗೆ ಇಷ್ಟು ಕಾಲದ ನಮ್ಮ ಗೆಳೆತನವ ಕೊಂದೀತಾ...?
ಕವಿ ಮನದಲ್ಲಿ ಕಲ್ಪನೆಯ ಕೂಸು ಅರಳಿ ಕವನವಾಗಿದ್ದೇ ತಪ್ಪಾಗಿಹೋಯಿತಾ..?
ಕಾರಣವೇನು ಈ ಪರಿಯ ಕೋಪಕ್ಕೆ...?
ನಿಜದ ಕಾರಣವಾದರೂ ಹೇಳಿ ಒಂದು ಜಗಳವನ್ನಾದರೂ ಮಾಡು ಬಾ ಒಮ್ಮೆ...
ಕಣ್ಣ ಹನಿಯೊಂದಿಗೆ ಭಾವಗಳು ಕರಗಿ ಮನಸು ಹಗುರಾಗುವುದಾದರೆ ಅತ್ತು ಬಿಡು ತಪ್ಪಿಲ್ಲ - ಕಾಡುವ ನೆನಪುಗಳೊಂದಿಗೆ ಅಳು ನಿರಂತರವಾಗದಿರಲಿ ಮತ್ತು ಖುಷಿಗಳಿಗೊಂದಷ್ಟು ಕಣ್ಣ ಹನಿಗಳು ಬಾಕಿ ಇರಲಿ ಅಂತ ನಿನಗಂದು ಹೇಳಿದ್ದ ನಾನೇ ಇಂದು ಇಲ್ಲಿ ಖುಷಿಯಿಲ್ಲದೇ ಅಳುವ ನಿತ್ತರಿಸಿಕೊಳ್ಳಲಾರದೇ ತತ್ತರಿಸುತಿದ್ದೇನೆ...
ಬಿಡು ಅಂದರೆ ಬರಹವನ್ನೇ ಬಿಟ್ಟೇನು - ಈ ದೂರ ಸಹಿಸಲಾರೆ - ಇನ್ನೆಂದೂ ನಿನ್ನಿಷ್ಟಕ್ಕೆ ವಿರುದ್ಧವಾಗಲಾರೆ - ನಿನ್ನಿಷ್ಟವೆ ನನ್ನಿಷ್ಟ ಕೂಡಾ - ಆ ಇಷ್ಟವೆ ಇಷ್ಟೆಲ್ಲಾ ಸಲಿಗೆ, ಸ್ವಾತಂತ್ರ್ಯ್ವ ಕೊಟ್ಟದ್ದು - ನಿನ್ನ ಕೆಣಕಿ ಕಾಡುವ ಖುಷಿಯ ಮೂಲ ಕಣೆ - ಪುಟಾಣಿ ಗೆಳತೀ ಈ ಜೀವದಲ್ಲಿ ಉಸಿರಿರುವವರೆಗೂ ನೀ ನನ್ನ ಪಾಲಿಗೆ ಜೀವದ ಗೆಳತಿ ಅಷ್ಟೇ - ಭಯ ಬೇಡ ಉಳಿದೆಲ್ಲ ಗೌಣ... 
ಗೆಳೆತನ ಮತ್ತೆ ನಗುವ ಕ್ಷಣಕಾಗಿ ಕಾಯುತ್ತ ಕಾಯುತ್ತ - ನೀ ಎದ್ದು ಹೋದ ಜಾಗದಲ್ಲೇ ಕೂತಿದ್ದೇನೆ...
ವಿಶ್ವಾಸ ನಗಲಿ ಮತ್ತೆ...

Sunday, April 7, 2013

ಗೊಂಚಲು - ಅರವತ್ತೊಂಬತ್ತು.....

ಕಪ್ಪು ಮೋಡ - ನನ್ನ ಹುಡುಗಿ.....

ಅಮಾವಾಸ್ಯೆಯ ಕಪ್ಪು ಕತ್ತಲು
ಮೈಯ ಬಣ್ಣದಲ್ಲಿ...
ಕೋಟಿ ತಾರೆಗಳ ಸುಳಿ ಮಿಂಚಿದೆ
ಕಣ್ಣ ಬಯಲಲ್ಲಿ...

ನಿನ್ನ ಸ್ವಚ್ಛ ಒಲವ ಸೆಳವು

ಎನ್ನ ಬೆನ್ನ ಹುರಿಯ ಬಲವು...
ನೀ ಒಲಿದ ಘಳಿಗೆಯೆನ್ನ
ಬದುಕು ಪಡೆದ ಮೊದಲ ಗೆಲುವು...

ಕಪ್ಪೆಂದು ಹಳಿವುದದು

ಡೊಂಕು ಮನದ ಲೋಕದ ರೀತಿ...
ನಿನ್ನೆಡೆಗೆ ಸೆಳೆವುದೆನ್ನ
ಹುಳುಕಿಲ್ಲದ ನಿನ್ನ ಪ್ರೀತಿ...

ಕಪ್ಪಾದರೇನಂತೆ

ಸುಕ್ಕಾಗೋ ಮೈಯ ಬಣ್ಣ...
ನಮ್ಮೊಳಗೆ ಪಕ್ಕಾದ
ಒಲವಲಿದೆಯಲ್ಲ ನೂರು ಕನಸಿಗೀಗ ಮಳೆಬಿಲ್ಲ ಬಣ್ಣ...

ಬರಡಾದ ಎದೆ ನೆಲಕೆ

ಒಲವೊಂದೆ ಜೀವಜಲ ನೋಡ...
ಎನ್ನೆದೆಗೆ ಒಲವ ಸುರಿಸೋ
ನೀನೆನ್ನ ಕಪ್ಪು ಮೋಡ...

ಬೆಸೆಯದು ಬಂಧಗಳ

ಜಾತಿ, ಧರ್ಮ, ಬಣ್ಣಗಳ ಮಿತಿಯ ಭ್ರಾಂತಿ...
ಬದುಕ ಬೆಳಗುವುದೊಂದೆ ಅದು
ಒಲವ ಹೊಂಬೆಳಕ ಎದೆಯ ಕಾಂತಿ...

Monday, April 1, 2013

ಗೊಂಚಲು - ಅರವತ್ತೆಂಟು.....

ಕನಸೇ -
ನನ್ನೀ ಮನಸೆಂಬುದು ಒಂದು ಬಂಡೆ...
ನಾನು ನೀನಿಲ್ಲದೆಯೂ ಬದುಕಬಲ್ಲೆ ಎಂದು ಹಮ್ಮಿನಿಂದ ಮಾತಾಡಿದ್ದೆ ಅಂದು ನಿನ್ನೊಂದಿಗೆ...
ಬದುಕಿ ಬಿಟ್ಟೀಯ ನಾನಿಲ್ಲದೆಯೂ - ಆದರೆ ಹೊತ್ತು ಮುಳುಗೋ ಹೊತ್ತಲ್ಲಿನ ನಿಗಿ ನಿಗಿ ಏಕಾಂತದಲ್ಲೂ ವಿನಾಕಾರಣ ಸ್ವಚ್ಛಂದ ನಗುವ ನಗುತಿದ್ದೆಯಲ್ಲ ನಿನ್ನೊಳಗೇ ನೀನು - ಆ ನಗುವ ಜೀವಿಸಬಲ್ಲೆಯಾ ನಾನಿಲ್ಲದೆಯೂ ಅಂತ ಕೇಳಿದ್ದೆ ನೀನು...
ಹಾಗಂದು ನನ್ನ ಹಮ್ಮನ್ನು ಕೊಲ್ಲಲೆಂದೇ ಬಿಟ್ಟು ಹೊರಟೆಯಾ ನೀ ಕರುಣೆ ಕಳಚಿ...
ಹಮ್ಮು ಕೊಲ್ಲಲು ಇಷ್ಟು ದೊಡ್ಡ ಶಿಕ್ಷೆಯಾ...:(
ಒಪ್ಪುತ್ತೇನೆ ನನ್ನೊಳಗಣ ಆ ಸ್ವಚ್ಛ ನಗು ಅಧಿಕೃತವಾಗಿ ಸತ್ತು ಹೋಗಿ ಅದಾಗಲೇ ನಲವತ್ತೊಂದು ಮಾಸಗಳು ಸರಿದು ಹೋದವು ಸದ್ದಿಲ್ಲದೆ....
ಹುಂಬ ನಾನು ಈಗಲೂ ನಗುತ್ತೇನೆ ಬಾಯ್ತುಂಬ...
ಆದರೆ ನಗುವ ಮೊಗದ ಹಿಂದಣ ಮನದ ದನಿಗೆ ಕಿವಿಯಾದರೆ ಅಲ್ಲಿ ನಿನ್ನ ಸಾವಿನ ಚರಮಗೀತೆಯ ರಿಂಗಣ ಮಾತ್ರ ಕೇಳುವುದು ಘೋರವಾದರೂ ಸತ್ಯ...
ತುಂಬ ಪ್ರೀತಿಸುವ ಹುಣ್ಣಿಮೆ ಚಂದಿರನಲ್ಲೂ ಯಾಕೋ ಈಗೀಗ ಕಲೆಯೇ ದೊಡ್ಡದಾಗಿ ಕಾಣಿಸ್ತಿದೆ...
ನಗುವ ಕೋಟಿ ತಾರೆಗಳೆಲ್ಲ ನಿನ್ನ ನೆನಪೊಂದಿಗೆ ಬೆಸೆದು ನಗುವ ಮರೆತಂತೆ ಭಾಸವಾಗಿ ಮನದಾಳವ ಹಿಂಡುತಿವೆ...
ನನ್ನಲೇ ಅರಳಬಹುದಾದ ಪ್ರೇಮದಿಂದ ಎಷ್ಟೇ ದೂರ ಓಡಿದರೂ - ಅಲ್ಲೆಲ್ಲೋ ಯಾರ್ಯಾರ ನಡುವೆಯೋ ನಗುವ ಪ್ರೇಮವ ಕಂಡಾಗ ಯಾಕೋ ಎದೆಗೆ ನಾಚಿಕೆ ಮುಳ್ಳು ಚುಚ್ಚಿದ ಸಣ್ಣ ನೋವಿನ ಭಾವ ಕಾಡುತ್ತೆ ಒಮ್ಮೊಮ್ಮೆ...
ನನ್ನದಲ್ಲದ ಊರಲ್ಲಿ, ನನ್ನದಲ್ಲವೇ ಅಲ್ಲದ ಕಾರ್ಯಕ್ಷೇತ್ರದಲ್ಲಿ, ನನ್ನ ಮಿತಿಗೂ ಮೀರಿ ಮಿರಿ ಮಿರಿ ಮಿಂಚುತ್ತ ಹಲ್ಲುಗಿಂಜುವಾಗ - ಎಲ್ಲೋ ಮನದಾಳದಲ್ಲಿ 'ಆರುವ ದೀಪ ಅತಿಯಾಗಿ ಉರಿಯುವ' ಭಾವ ಮತ್ತೆ ಮತ್ತೆ ಚುಚ್ಚುವುದೇಕೆ...
ನಗುವ ಹಂಬಲವ ಕಳಚಿಕೊಳ್ಳಲಾಗದೇ - ಮನದುಂಬಿ ನಗಲೂ ಆಗದೇ ಒಳಗೊಳಗೇ ನರಳಿ ಸೋತು ಶರಣಾಗಿ ನಿನ್ನೆದುರು ಮಂಡಿಯೂರಿದ್ದೇನೆ...
ಒಂದೇ ಒಂದು ಕ್ಷಣ ಎದೆ ಬಾಗಿಲಲಿ ನಕ್ಕು, ಕೈಯಾಸರೆ ನೀಡಿ ಬದುಕಿಗೆ ಜೀವ ತುಂಬುವೆಯಾ...
ಬರುವೆಯಾದರೆ ಮತ್ತೆ ಒಂದು ಹೆಜ್ಜೆ ಜೊತೆಯಾಗಿ - ನಾ ನಂಬದಿದ್ದ ಜನ್ಮಾಂತರಗಳನ್ನೂ ಕಣ್ಮುಚ್ಚಿ ನಂಬಿಯೇನು...
ನೀ ಬರುವ ಆ ಘಳಿಗೆಗಾಗಿ...
ಆ ಒಂದು ಕ್ಷಣದ ನಗುವಿಗಾಗಿ ಈ ದೇಹದುಸಿರ ಸಾವನ್ನೂ ಪ್ರೀತಿಯಿಂದಲೇ ಎದುರುಗೊಂಡೇನು...
ಜೀವ ಅಳಿವ ಮುನ್ನ ಬಂದು ಹೋಗೊಂದು ಘಳಿಗೆ ಕರುಣೆ ತೋರಿ ನನ್ನೆಡೆಗೆ - ಮನದುಂಬಿ ಜೀವಿಸುವ ಓ ನನ್ನ ಕನಸೇ...