Saturday, November 30, 2013

ಗೊಂಚಲು - ತೊಂಬತ್ತು ಮತ್ತು ಒಂಬತ್ತು.....

ಚಂದಮನ ಮಾತು...
(ಕೆಲ ಸಂಜೆಗಳ ಕಾಯುವ ಗೆಳೆಯನ ಬಗ್ಗೆ ತುಂಡು ತುಂಡು ಮಾತುಗಳು...)

ಮೇಲೆ ಮೋಡದ ಮರೇಲಿ ನಗೋ ಅರ್ಧ ಚಂದಿರ...ಕೆಳಗಿನ ಬೀದೀಲಿ ರಜೆಯ ಖುಷೀಲಿ ಕುಣಿದು ಕುಪ್ಪಳಿಸಿ ಬೀದಿ ತುಂಬ ಶೃಂಗಾರ ರಸ ಚೆಲ್ಲುತಿರೋ ಹೊಸ ಹರೆಯದ ಚಂದ್ರಮುಖಿಯರು... ಆಹಾ ಈ ಸಂಜೆಗೆಂಥ ಸೊಬಗು...;)
***
ಬಿಳಿ ಮೋಡದ ಹಿಂಡು – ನಡುವೆ ನಲಿವ ಚಂದಮ – ಆ ಮೂಲೆಯಲೊಂದು ಮಿನುಗೊ ಒಂಟಿ ತಾರೆ – ನಿನ್ನೊಡಗೂಡಿದ ಒಂದಿಷ್ಟು ಮಧುರ ನೆನಪುಗಳು – ಮೌನದ ಮುಸುಕಿನೊಳಗಿಂದ ಸಾವಿರ ಮಾತಾಡೊ ಮನಸು – ಸಂಜೆಯೊಂದು ಶೃಂಗಾರದ ಶೃಂಗವನೇರಿ ಸೊಬಗ ಸುರಿದು ನಗುತಲಿದೆ...
***
ಇದೀಗ ಜೊತೆಗೆ ನಿನ್ನ ನಗೆ ಬೆಳದಿಂಗಳೂ ಸೇರಿಕೊಂಡಿತು...
***
ಬಿಡುವಿದ್ರೆ ಆಚೆ ಬಂದು ಒಂದು ಕ್ಷಣ ಚಂದಮನ ನೋಡು... ನನ್ನ ನಗು ಕಾಣಿಸೀತು... ಬದುಕ ಪ್ರೀತಿ ಉಮ್ಮಳಿಸೀತು...
***
ಅಮ್ಮನ ಮಡಿಲಂಥ ತನ್ನ ತಂಪು ಹೊನಲಿನಿಂದ ನನ್ನ ಸಣ್ಣ ಕರುಳಿನಾಳದಲ್ಲಿ ಅವಳ (ನಿನ್ನ) ನಗೆಯ ನೆನಪ ಉರಿಯ ಹೊತ್ತಿಸೋ, ಅವಳ ಅಪರಿಮಿತ ಪ್ರೀತಿಯನೂ ಕೂಡ ಗೆದ್ದಿಟ್ಟುಕೊಂಡ ಈ ಚಂದಿರನೆಂದರೆ ನಂಗೆ ಒಮ್ಮೆಲೆ ಇನ್ನಿಲ್ಲದ ಪ್ರೀತಿ, ಈರ್ಶ್ಯೆ, ಸಿಟ್ಟು, ಉಲ್ಲಾಸ, ಬದುಕ ಪ್ರೀತಿ ಕಟ್ಟಿಕೊಡೋ ಸ್ನೇಹ ಎಲ್ಲವೂ...
***
ಗೆಳತೀ –
ಆಗಾಗ ಚಂದಿರ ನನ್ನ ಹೇಗೆಲ್ಲ ಕಾಡುತ್ತಾನೆ ಅಂದ್ರೆ – ಅಮ್ಮನ ಮಮತೆಯ ತಂಪಿನ ಹಾಗೆ, ಆಯಿಯ ಹಳೆ ಸೀರೆಯ ಘಮದ ಹಾಗೆ... ಬಾಲ್ಯದ ಮೊಣಕೈಯ ತರಚು ಗಾಯದ ಕಲೆಯ ಹಾಗೆ... ಆಗಾಗ ಕಾಡುವ ಛಳಿ ಜ್ವರದ ಹಾಗೆ.... ನಿನ್ನ ಕುಡಿನೋಟದ ಹಾಗೆ, ಹಸಿ ಪ್ರೀತಿಯ ಹಾಗೆ, ಹುಸಿ ಮುನಿಸಿನ ಹಾಗೆ, ಅಕಾರಣ ಮೌನದ ಹಾಗೆ, ನಿದ್ದೆ ಮಂಪರಿನ ನಿನ್ನ ಮುದ್ದು ನಗೆಯ ಹಾಗೆ ಮತ್ತು ಅರಿವೇ ಆಗದೆ ಬದುಕೇ ನೀನಾಗಿಹೋದ ಹಾಗೆ... 
***
ನೆನಪು ಕಾಡುವಾಗ – ಕನಸು ಹಾಡುವಾಗ – ಖುಷಿಯ ಹರಿವಿನಲಿ – ಹಸಿ ನೋವಿನಲಿ – ಸುಖದ ಅಮಲಿನಲಿ – ಎಲ್ಲ ಕಳಕೊಂಡು ಕಬೋಜಿಯಾದ ಭಾವ ಮನವ ಕದಡುತ್ತಿದ್ದಾಗ – ನೀ ಸಿಕ್ಕು ಮೊದ ಮೊದಲು ನಕ್ಕಾಗ – ನೀ ಅಲ್ಲೇಲ್ಲೋ ಕಳೆದು ಹೋದಾಗ – ಬದುಕ ಏರಿಳಿತದ ಎಲ್ಲ ಘಳಿಗೆಯಲೂ ನೆರಳಂತೆ ಜೊತೆಯಿದ್ದು ಮನವ ತುಂಬಿದ ನನ್ನ ಪ್ರೀತಿಯ ಗೆಳೆಯ – ಅವನು ನನ್ನ ಚಂದಮ... 
***
ಕಳೆದು ಹೋದ ಕನಸುಗಳ ನೆನಪಲ್ಲಿ ನಾ ಅಳುವಾಗ ಮೋಡದ ಮರೆ ಸೇರೋ ಆತನ ಕಂಡರೆ ನಂಗನ್ನಿಸುತ್ತೆ ಅವನೂ ಅಳುತಿರುವನೇನೋ... ತನ್ನಳುವ ತೋರಿ ನನ್ನಳುವ ಹೆಚ್ಚಿಸದಿರಲು ಮೋಡದ ಆಸರೆ ಪಡೆದನೇನೋ... ನಾನಳುವಾಗಲೆಲ್ಲ ಅವನೂ ಮಂಕಾದ ಭಾವ ನನ್ನಲ್ಲಿ – ಆತ ನನ್ನ ಚಂದಮ... 
***
ಚಂದಿರನೆಂದರೆ ನಂಗೆ ನನ್ನ ಕಾಡುವ ನನ್ನದೇ ಮನಸಿನ ಹಾಗೆ...  

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Wednesday, November 27, 2013

ಗೊಂಚಲು - ತೊಂಬತ್ತೆಂಟು.....

ಮುಂಜಾನೆಯ ಹಾಡುಗಳು.....

ಇಬ್ಬನಿಯ ತಂಪಲ್ಲಿ ಬೆರೆತು ಸವಿ ನೆನಪುಗಳು ಮಾತಾಡುತಿವೆ...
ಈ ದಿನಕೊಂದು ಮಧುರ ಮುನ್ನುಡಿ...
****
ಈ ದಾರಿ, ಈ ಗಾಳಿ, ಪ್ರಕೃತಿಯ ಮಧುರ ಮೌನ, ಸಂತೆ ನಡುವೆಯೂ ಹಾಡುವ ಒಂಟಿ ಒಂಟಿ ಭಾವ...
ಈ ಬೆಳಗಿಗೆ ಒಂಥರಾ ಮಧುರ ಯಾತನೆ...
****
ಅದೇ ಬೆಳಗು – ಅದೇ ನಗು ಹೊಸ ಭಾವದಲಿ ಹೊರಹೊಮ್ಮಿ ಈ ಬೆಳಗಿಗೊಂದು ಹೊಸತನ...
****
ಬೆಳಕು ಕಾಯಲಿ ಬದುಕ... 
ಕಾವ ಕಾಣ್ಕೆಯ ಕನಸ ಈ ಬೆಳಗು...
****
ತುಂಬಿಕೊಳ್ಳುವ ತುಡಿತದ ಖಾಲಿ ಖಾಲಿ ಬೆಳಗು...
****
ಮತ್ತದೇ ಕಾಡುವ ಹಾಡಿನಂಥ ನಿನ್ನ ನೆನಪು ಈ ಬೆಳಗಿನ ಸೊಬಗು...
****
ನಿದಿರೆ ಮಡಿಲಿಂದೆದ್ದು ಕನಸ ಚಾದರ ಸರಿಸಿ ಮೈಮುರಿದು ಕಣ್ಬಿಟ್ಟ ನಿನ್ನಲ್ಲಿ; ಕಂಡ ಕನಸ ನನಸಾಗಿಸಿಕೊಂಡು ಹೆಮ್ಮೆಯ ನಗು ಬೀರಲು ಮುಂದಡಿಯಿಡುವ ಚೈತನ್ಯವ ತುಂಬಲಿ ಈ ಬೆಳಗು...
****
ಬೆಳಗೆಂದರೆ ನಂಗೆ - ನಿನ್ನ ನಗೆಯ ನೆನಪು - ದಿನವೆಲ್ಲ ಖುಷಿಯ ಒನಪು...
****
ಮುಂಬೆಳಗಲ್ಲಿ ನಿನ್ನ ಮುಗುಳ್ನಗೆಯ ಕನಸು – ನಚ್ಚಗಾದ ಮನಸು - ಮಂದಾರ ಅರಳಿದಂತೆ ಬಿಚ್ಚಿಕೊಂಡ ಈ ಮಧುರ ಮುಂಜಾನೆಗೊಂದು ಶುಭಾಶಯ...
****
ಬೆಳಗೆಂದರೆ ಭರವಸೆ - ಶುಭದಿನದ ಮುನ್ನುಡಿ...
ಚಂದದ ದಿನವೊಂದು ಹಸುಳೆಯ ನಗುವಂತೆ ಬಿಚ್ಚಿಕೊಳ್ಳಲಿ...

Sunday, November 24, 2013

ಗೊಂಚಲು – ತೊಂಬತ್ತು ಮತ್ತು ಏಳು.....

ಹಿಂಗೆಲ್ಲ ಅನ್ನಿಸುತ್ತೆ.....
(ಇವು ಕೇವಲ ನನ್ನ ಸತ್ಯಗಳು...)

ಮನಸಿಗೆ ರೂಢಿಸಬೇಕಾದದ್ದು ಪ್ರಖರ ಶಿಸ್ತನ್ನಲ್ಲವೇನೋ – ಬದಲಿಗೆ ಸಂಸ್ಕಾರವಂತ ಅನುಶಾಸನವನ್ನು ದಕ್ಕಿಸಿಕೊಟ್ಟರೆ ಚಂದವೇನೋ... ಶಿಸ್ತಿನಲ್ಲೊಂದು ಒತ್ತಡವಿದೆ – ಅನುಶಾಸನದಲ್ಲಿ ಒಲುಮೆಯಿದೆ... ಮನಸಿನ ಪ್ರಾಮಾಣಿಕ ಆತ್ಮೀಕತೆ ವಿಜೃಂಭಿಸಿ, ಮನದ ಭಾವ – ಬಂಧಗಳು ಬೆಳಗಲು ಯಾರದೋ ಅಥವಾ ಸಮಾಜದ ಶಿಸ್ತಿನ ಚೌಕಟ್ಟಿಗಿಂತ ಸ್ವಯಂ ಮನಸಿನ ಅನುಶಾಸನವೇ ಹೆಚ್ಚು ಸಹಕಾರಿ ಅನ್ಸುತ್ತೆ ನಂಗೆ... ಯಾಕೆಂದರೆ ಹೂವೊಂದು ಅರಳುವಂತೆ ಮನಸು ಅರಳಬೇಕು; ಮುಳ್ಳುಗಳು ಅಥವಾ ಕೀಳುವ ಕೈಗಳ ಭಯವಿಲ್ಲದೆ – ಆತ್ಮೀಯತೆಯ ಸನ್ನಿಧಿಯಲ್ಲಿ...

ಕನಸುಗಳಿಗೆಂದೂ ಬೇಲಿ ಹಾಕಲಾರೆ – ಬೇಲಿ ಜಿಗಿಯುವ ಕನಸುಗಳೆಡೆಗೆ ನಂಗೆ ವಿಪರೀತ ವ್ಯಾಮೋಹ... ನಿಜದ ಆನಂದಮಯ ಬದುಕು ಅಲ್ಲಿ ಆ ಬೇಲಿಗಳಾಚೆಯೇ ಇದೆ ಎಂಬುದು ನನ್ನ ಖಚಿತ ಅನುಮಾನ...

ಯಾವ ಮಿತಿಗಳಿಗೂ ಒಗ್ಗದ ಕನಸುಗಳು ನನ್ನವು... ಚೌಕಟ್ಟಿಲ್ಲದ ಕನಸಿನಂಥ ಆತ್ಮೀಕ ಗೆಳೆತನ ಸಾಧಿಸುವ ಹಂಬಲ ಈ ಬದುಕಿನೊಂದಿಗೆ ನನಗೆ ಮತ್ತು ನನ್ನೊಂದಿಗೆ ನನಗೆ - ಅಲ್ಲದೇ __________________ ಕೂಡ... 

ಒಂದಷ್ಟು ದೂರ ಒಂದಷ್ಟು ಹೆಜ್ಜೆ ಜೊತೆ ನಡೆವ ಹಂಬಲವಿತ್ತು ಮೊದಲು ಕೈಕುಲುಕಿದಾಗ... ಹಂಚಬೇಕಾದದ್ದನ್ನು ಹೇರಲು ಹೋಗಿ ಜೊತೆಯಾದ ಹೆಜ್ಜೆಗಳಲಿ ಭಾರ ತುಂಬಿದೆ... ಇಂದೀಗ ಒಂಟಿ ಹೆಜ್ಜೆಗಳ ದಾರೀಲಿ ಬೆಸೆದಿದ್ದ ಭರವಸೆಯ ಹಸ್ತಗಳ ಘನತೆ ಅರಿವಾಗಿ, ನಿನ್ನೆಗಳ ನೆನಪಲ್ಲಿ ಉಸಿರೂ ಭಾರವೆನಿಸುತಿದೆ... ಆದರೆ ನನ್ನೊರಟು ಭಾವಗಳ ಸುಳಿಗೆ ಸಿಕ್ಕಿ ಕಂಗಾಲಾಗಿರೋ ಆ ಮನಗಳ ಹಗುರಾಗಿಸೋ ವಿದ್ಯೆ ಗೊತ್ತಿಲ್ಲ ಹಾಗೂ ಬದುಕಿಗೋ ಹಿಮ್ಮುಖ ಚಲನೆಯ ಕಲ್ಪನೆಯೂ ಇಲ್ಲ... 

ಬೆಳಕೆಂದರೆ ಬೆಳಗುವುದೆನ್ನುವರು... ಬೆಳಕೆಂದರೆ ಬೆತ್ತಲು ಕೂಡ... ಒಮ್ಮೊಮ್ಮೆ ಹಗಲೆಂದರೆ ಕನಸುಗಳ ಹೆಣ ಹೂಳುವ ಖಾಲಿ ಖಾಲಿ ಬಯಲು ನಂಗೆ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Thursday, November 21, 2013

ಗೊಂಚಲು - ತೊಂಬತ್ತು ಮತ್ತಾರು.....

ಕಾಡುವ ಅಪೂರ್ಣ ಖುಷಿಯ ಭಾವಗಳು.....
(ಇಲ್ಲಿಯ ಭಾವಗಳು ಕೇವಲ ನನ್ನ ಕಲ್ಪನೆಗಳಷ್ಟೇ...)

ಗೆಳೆಯಾ -
ಸಂದು ಹೋದ ನಲವತ್ತರಾಚೆ ನಿಂತು ಹಿಂತಿರುಗಿ ನೋಡುತ್ತಿದ್ದೇನೆ ಕಳೆದ ಇಪ್ಪತ್ತು ಸಂವತ್ಸರಗಳ... ಅವು ಬದುಕಿಗೆ ನೀ ಸಿಕ್ಕ ಮೇಲಿನ ಸಂವತ್ಸರಗಳು...
ಮೊದಲ ರಾತ್ರೀಲಿ ಹಸಿದ ಮೈಯನ್ನು ಹರಿದು ಹೀರುವಂತೆ ನೀ ತಬ್ಬಿಕೊಂಡ ನೆನಪಿಗಿಂತ ನಂಗೆ ಅದಕೂ ಮುಂಚಿನ ದಿನಗಳಲ್ಲಿ ಆ ತಿರುವಿನಲ್ಲಿ   ಬೀಳ್ಕೊಡುವ ಮುನ್ನ ನೀ ಆತ್ಮೀಯ ಸ್ನೇಹಭಾವದಲ್ಲಿ ಆಲಂಗಿಸಿ ಹಣೆಯ ಮುದ್ದಿಸುತ್ತಿದ್ದೆಯಲ್ಲ ಅದೇ ಹೆಚ್ಚು ಹಿತವಾಗಿ ನೆನಪಾಗುತ್ತೆ ಕಣೋ... ನೀ ಸ್ನೇಹದಲ್ಲಿ ಚುಂಬಿಸಿದ ಹಣೆಯನ್ನು ಇನ್ನಿಲ್ಲದಂತೆ ಪ್ರೀತಿಸಿದವಳು ನಾನು... ಅದರ ಅಂದ ಹೆಚ್ಚಿಸಿಕೊಳ್ಳಲೆಂದೇ ಅದುವರೆಗೆ ಅಲರ್ಜಿಯಿಂದ ನೋಡುತ್ತಿದ್ದ ಬಿಂದಿಯನ್ನೂ ಪ್ರೀತಿಸತೊಡಗಿ ಹಣೆಯ ಅದರಿಂದ ಸಿಂಗರಿಸಿಕೊಂಡವಳು... ಈಗ ಎಷ್ಟು ಕಾಲವಾಗಿ ಹೋಯಿತು ನೀ ಮತ್ತದೇ ಆತ್ಮಬಂಧುತ್ವದ ಭಾವದಲ್ಲಿ ಈ ಹಣೆಯ ಮುದ್ದಿಸಿ... ಆ ತೋಳಲ್ಲಿನ ಆತ್ಮೀಯತೆ, ನನ್ನ ರೂಪ – ಅಂತಸ್ತು – ಅಸಹಾಯಕತೆಗಳ ಬಗೆಗಿನ ನನ್ನ ಕೀಳರಿಮೆಗಳೆಲ್ಲ ಕಳೆದು ಹೋಗಿ ನಂಗಲ್ಲಿ ಸಿಗುತ್ತಿದ್ದ ಭರವಸೆ ಹಾಗೂ ಹಗುರತೆ ಇಂದ್ಯಾಕೆ ಸಿಗುತ್ತಿಲ್ಲ... ಸಾವಿರ ಜನರೆದುರೂ ಆತ್ಮೀಯವಾಗಿ ಆಲಂಗಿಸುತ್ತಿದ್ದವನು ಇಂದು ನಿನ್ನದೇ ಮನೆಯಂಗಳದಲ್ಲೂ ಹಾಗೇ ಸುಮ್ಮನೆ ಎಂಬಂತೆ ಪ್ರೀತಿ ತೋರಲೂ ಸಿಡುಕುವುದೇತಕೆ.? ಅಂದಿನ ಆ ಪ್ರೀತಿ ಎಲ್ಲಿ ಕಳೆದುಹೋಯಿತು.? ಆಲಿಂಗನ ಎಂಬುದು ರಾತ್ರಿಯ ಸುಖದ ಮುಂಚಿನ ಕಸರತ್ತು ಮಾತ್ರವಾಗಿ ಬದಲಾದದ್ದೇಕೆ.? ಅಂದು ಆ ಪಾರ್ಕಿನ ನಡುಮಧ್ಯದ ಬೆಂಚಿನ ಮೇಲೆ ಕೂಡ ನಿನ್ನ ಹೆಗಲು ತಬ್ಬಿ ಅಳಬಹುದಿತ್ತಲ್ಲ ನಾನು – ಖುಷಿಗೂ, ನೋವಿಗೂ... ಇಂದು ಈ ಏಕಾಂತದಲ್ಲಿ ಕೂಡ ಕಣ್ಣೀರಾಗಲಾಗದಿದ್ದುದಕೆ ಕಾರಣ ಏನು.? ಅಂದು ಅಷ್ಟೆಲ್ಲ ರಹದಾರಿ ದೂರವಿದ್ದೂ ಇಬ್ಬರಿಗೂ ಒಬ್ಬರಲ್ಲಿನ ಚಿಕ್ಕ ಕದಲಿಕೆಯೂ ಅರಿವಾಗುತ್ತಿತ್ತಲ್ಲ ಇಂದು ಉಸಿರು ತಾಕುವಷ್ಟು ಹತ್ತಿರವಿದ್ದರೂ ನನ್ನ ನಿಟ್ಟುಸಿರು ಕೂಡ ನಿನ್ನ ತಾಕದಂತಾದದ್ದು ಹೇಗೆ.? ಈಗಲೂ, ಈ ಕ್ಷಣಕ್ಕೂ ಅಂದುಕೊಳ್ತೇನೆ ಇದನೆಲ್ಲ ಹೇಳಿ ಮನಸಾರೆ ಅತ್ತು ನಿನ್ನ ಕಣ್ಣಲ್ಲಿ ಕಣ್ಣಿಡಬೇಕೆಂದು... ಆ ಭಾವದಲ್ಲಿ ನಾ ನಿನ್ನ ತೋಳು ತಬ್ಬಿದರೆ ನೀನದನ್ನ ನನ್ನ ಆಹ್ವಾನ ಅಂದುಕೊಂಡು ಮಾತಾಡಲೆಂದು ಬಿರಿದ ತುಟಿಯ ಮಧುಪಾತ್ರೆಯಾಗಿಸಿಕೊಂಡುಬಿಡ್ತೀಯ... ಮತ್ತೆಲ್ಲಿ ಮಾತು... ಬೇಕೋ ಬೇಡವೋ ಮಾತಾಡಬೇಕಿದ್ದ ಮನಸು ಮೂಕವಾಗಿ ದೇಹ ಮಾತಿಗಿಳಿಯುತ್ತೆ... ಕೂಡಿ ಕಳೆವುದೆಲ್ಲ  ಮುಗಿದ ಮೇಲಾದರೂ ಮಾತಿಗಿಳಿಯೋಣವೆಂದರೆ ನಿಂಗೆ ಸುಖದ ಸುಸ್ತು – ಗಾಢ ನಿದ್ದೆ... ಎಲ್ಲ ಸುಖಗಳ ನಂತರವೂ ನನ್ನಲ್ಲುಳಿವುದು ಬರೀ ನಿಟ್ಟುಸಿರು... ಬದುಕಿನ ಯಾವುದೋ ತಿರುವಲ್ಲಿ ಆಕಸ್ಮಿಕ ಎಂಬಂತೆ ಎದುರಾಗಿ, ಎಷ್ಟೆಲ್ಲ ಭಾವಗಳು ಹೊಂದಿಕೊಂಡು  ಬೆಸೆದುಕೊಂಡಿದ್ದ ಮಧುರ ಸ್ನೇಹವನ್ನ ಬದುಕಿಡೀ ಸಲಹಿಕೊಳ್ಳುವ, ಆ ಸ್ನೇಹದ ನಡುವೆ ಇನ್ಯಾರಿಗೂ ಉಸಿರಾಡಲು ಅವಕಾಶ ಕೊಡದಿರುವ ತೀವ್ರ ಹಂಬಲದಿಂದಲ್ಲವಾ ನಾವು ಸ್ನೇಹವನ್ನು ಪ್ರೇಮವಾಗಿಸಿಕೊಂಡು ಮದುವೆಯ ಬಂಧದಲ್ಲಿ ಬೆಸೆದುಕೊಂಡದ್ದು... ಇಲ್ಲಿ ಬೆಸೆದ ಬಂಧವನ್ನು ಜನ್ಮಾಂತರಕ್ಕೂ ವಿಸ್ತರಿಸಿಕೊಳ್ಳುವ ಆಸೆಯಿಂದಲ್ಲವಾ ಮದುವೆಯಾದದ್ದು... ಹಾಗೆ ಜನ್ಮಾಂತರಗಳವರೆಗೂ ನಮ್ಮನ್ನು ಬೆಸೆಯಬೇಕಿದ್ದ ಮದುವೆಯ ಬಂಧ ಬರೀ ಎರಡು ಸಂವತ್ಸರಗಳಲ್ಲೇ ಹಳಸಿದ ಭಾವ ಕೊಡುತ್ತಿರುವುದೇತಕೆ... ದೇಹಗಳು ಬೆತ್ತಲಾಗುತ್ತ ಆಗುತ್ತ ಮನಸು ಕತ್ತಲೆಗೆ ಜಾರಿ ಹೋಯಿತಾ... ಹಾಗಂತ ನಿಂಗೆ ನನ್ನೆಡೆಗೆ ಪ್ರೀತಿ ಇಲ್ಲ ಅಂತ ಯಾರಾದರೂ ಅಂದರೆ ನಾ ಸುತಾರಾಂ ಒಪ್ಪಲಾರೆ... ಆದರೆ ನಡುವೆ ಕಳಚಿಹೋದ ಆತ್ಮೀಯ ತಂತು ಯಾವುದು ಎಂಬುದು ನನಗೂ ಅರಿವಾಗುತ್ತಿಲ್ಲ... ಕೂತು ಮಾತಾಡಿ ಹಗುರಾಗಲು ನೀ ಸಿಗುತ್ತಿಲ್ಲ... ನೀ ದುಡಿತದಲ್ಲಿ ಸಂಪೂರ್ಣ ಕಳೆದುಹೋಗಿದ್ದು ನನ್ನ ಮತ್ತು ಭವಿಷ್ಯದಲ್ಲಿ ಬರಬಹುದಾದ ನಮ್ಮ ಜೀವಕುಡಿಯ ಸಲುವಾಗಿ ಎನ್ನುವ ನಿನ್ನ ಮಾತನ್ನ ನಾನು ಒಪ್ಪದೇ ವಿಧಿಯಿಲ್ಲ... ಆದರೆ  ಬದುಕ ಕಟ್ಟಿಕೊಳ್ಳಬೇಕಾದ ಅನಿವಾರ್ಯತೆಯಲ್ಲಿ ಭಾವಗಳ ಕೊಂದುಕೊಂಡದ್ದು ಸರಿಯಾ ಎಂಬುದು ಪ್ರಶ್ನೆ.? ನಾಳೆ ಒಂದಿಷ್ಟು ಆರ್ಥಿಕ ಸ್ವಾತಂತ್ರ್ಯ ದಕ್ಕಿದ ಮೇಲೆ ಬರಲಿ ಅಂದುಕೊಂಡ ಮಗು ಇಂದೇ ಬಂದಿದ್ದರಾಗುತ್ತಿತ್ತೇನೋ... ಒಂದಿಷ್ಟು ನನ್ನ ಖಾಲಿತನ ತುಂಬುತ್ತಿತ್ತೇನೋ... ಆದರೂ ನನ್ನ ಆಸೆ ಬರೀ ಮಗುವೊಂದೇ ಅಲ್ಲ – ನೀನೂ ಮಗುವಾಗಬೇಕು ನನ್ನ ಮಡಿಲಲ್ಲಿ ಆ ದಿನಗಳಲ್ಲಿಯಂತೆ... ಆ ದಿನಗಳು ಮತ್ತೆ ಬಂದೀತಾ..? ಬದುಕಿನ ಇಪ್ಪತ್ಮೂರನೇ ಸಂವತ್ಸರದ ಖಾಲಿ ಖಾಲಿ ಬೆಳಗು ಮತ್ತು ನೀರವ ರಾತ್ರಿಗಳಲ್ಲಿ ಕಾಡುತ್ತಿದ್ದ ಈ ಭಾವಗಳಲ್ಲಿ ಇಂದಿಗೂ ಈ ಅರ್ಧ ಶತಮಾನದಂಚಲ್ಲೂ ಹೆಚ್ಚೇನೂ ವ್ಯತ್ಯಾಸವಾಗಿಲ್ಲ... ಇಪ್ಪತ್ನಾಕಕ್ಕೆ ಮಗಳನ್ನು ಮತ್ತೆರಡು ವರ್ಷದಲ್ಲಿ ಮಗನನ್ನೂ ಕೊಟ್ಟದ್ದು ಬಿಟ್ಟರೆ... ನೀನು ಮತ್ತೆಂದೂ ಮಗುವಾಗಲೇ ಇಲ್ಲ ನನ್ನ ಮಡಿಲಲ್ಲಿ...

ಅಂಗಳದಲ್ಲಿ ನನ್ನದೇ ಕರುಳ ಬಳ್ಳಿಗಳು ನಲಿಯುತ್ತಿದ್ದ ಕಳೆದ ದಶಕವೇನೋ ಚೆಂದಗೇ ಕಳೆದು ಹೋಯಿತೆನ್ನಬಹುದು... ಆದರೆ ಮತ್ತೆ ಇಂದು ಅಂದಿನ ಆ ಭಾವಗಳು ಕೆರಳಿ ಕಾಡಹತ್ತಿವೆ... ಇಂದು ಮಕ್ಕಳೂ ಬೆಳೆದುಬಿಟ್ಟಿದ್ದಾರೆ ಅನ್ನಿಸ್ತಿದೆ... ಅವರ ಬದುಕುಗಳೂ ಕವಲೊಡೆಯುತ್ತಿವೆ... ಮಗಳು ಕನ್ನಡಿಯನ್ನೇ ಹೆಚ್ಚು ಪ್ರೀತಿಸುತ್ತಿದ್ದಾಳೆ – ಮಗ ಬಾತ್‌ರೂಮಲ್ಲೇ ಘಂಟೆಗಟ್ಟಲೆ ಕಳೀತಾನೆ... ಅವರಿಗೀಗ ನಾ ಸುಮ್ ಸುಮ್ಮನೆ ಬೇಡದ ಮಾತಾಡಿ ಕಾಡೋ ಹಳೆಯ ಜಮಾನಾದ ಅಮ್ಮ... ನನ್ನಲ್ಲಿ ಏನೇನೋ ದುಗುಡಗಳು... ನಾನು ನಿಜಕ್ಕೂ ಹಳೆಯ ಜಮಾನಾದ ಹೆಂಗಸಾ... ನಿನ್ನ ಮತ್ತು ಮಕ್ಕಳ ನೆರಳಾಗಿ ಉಳಿದು ಬದುಕಿನ ನಿಜದ ಸವಿಯ ಕಳೆದುಕೊಂಡಿದ್ದೇನಾ... ಪ್ರೇಮಪೂರ್ಣ ಸಂಸಾರದ ಕನಸಲ್ಲಿ ನಾಲ್ಕು ಗೋಡೆಗಳ ಮಧ್ಯದ ಬಂಧಿಯಾಗಿಬಿಟ್ಟೆನಾ – ನಿಂತ ನೀರಾಗಿಹೋದೆನಾ... ಏನೇನೋ ಗೊಂದಲಗಳು... ಅವುಗಳ ಮಧ್ಯವೇ ಇಣುಕೋ ಹೊಸ ಆಸೆಗಳು (ಹೊಸತೋ ಅಥವಾ ಹಾಗೇ ಉಳಿದ ಹಳೆಯದರ ವಿಸ್ತರಣೆಯೋ ಅಂತ ಅನುಮಾನವಿದೆ)... ಅವನೆಲ್ಲ ನಿನ್ನೆದುರು ಹರವೋಣವೆಂದರೆ ನನ್ನ ದುಗುಡಗಳೆಲ್ಲ ನಿಂಗಿಂದು ತಮಾಷೆಯಾಗಿ ಕಾಣುತ್ವೆ... ನಮ್ಮಿಬ್ಬರ ನಡುವೆಯಂತೂ ದೇಹಗಳು ಕೂಡ ಮಾತಾಡುವುದು ವಿರಳವಾಗಿದೆ ಸಹಜವಾಗಿಯೇ... ಏನೆಲ್ಲ ಇದ್ದೂ ಕಾಡುವ ಈ ಒಂಟಿ ಒಂಟಿ ಅದೇ ಬೆಳಗು ಮತ್ತು ಅದದೇ ಸಂಜೆಗಳಲ್ಲಿ ಮತ್ತೆ ಮದುವೆಗೂ ಮುಂಚಿನ ಆ ದಿನಗಳು ನೆನಪಾಗುತ್ತಿವೆ... ನೀ ಸಿಕ್ಕು, ಬದುಕಿಗೆ ಹೊಸ ಸಂತೋಷ ಧುಮ್ಮಿಕ್ಕಿದ್ದ ಮದುವೆಗೂ ಮುಂಚಿನ ಆ ದಿನಗಳು... ಸಾಮಾನ್ಯವೆಂಬಂತೆ ಆದ ಪರಿಚಯ ಬಿಟ್ಟಿರಲಾರದ ಸ್ನೇಹವಾಗಿ ಒಬ್ಬರೇ ಸಾಗಬೇಕಾದ ಆ ಕಾಲು ದಾರೀಲಿ ಇಬ್ಬರೂ ಹಸ್ತಗಳ ಬೆಸೆದು ನಡೆದದ್ದು – ಕಲ್ಲೊಂದು ನನ್ನ ಕಾಲು ನೋಯಿಸಿದಾಗ ನಿನ್ನ ಕಣ್ಣಂಚು ಒದ್ದೆಯಾದದ್ದು – ಆ ಬೆಟ್ವವನೇರುವಾಗ ಸುಸ್ತಾಗಿ ನಾ ಸೊಂಟದ ಮೇಲೆ ಕೈಯಿಟ್ಟರೆ ನೀ ಮುಚ್ಚಟೆಯಿಂದ ನೆತ್ತಿ ನೇವರಿಸಿದ್ದು – ಯಾವುದೋ ತಿರುವಲ್ಲಿ ನಿಂಗೆ ಅಮ್ಮ ನೆನಪಾಗಿ ನೀ ನನ್ನ ಮಡಿಲಲ್ಲಿ ಮಗುವಾದದ್ದು – ಆ ಸಂಜೆ ಸಾಯೋ ಹೊತ್ತಲ್ಲಿ ಯಾವುದೋ ಹಳೆಯ ನೋವೊಂದ ನೆನೆದು ನಾ ನಿನ್ನ ಹೆಗಲ ತೋಯಿಸಿದ್ದು - ಹಗುರಾಗಿ ತಬ್ಬಿದ ನಿನ್ನ ಬಾಹುಗಳಲ್ಲಿ ನಂಗೆ ಭರವಸೆಯ ನಾಳೆಗಳು ಗೋಚರಿಸಿದ್ದು - ಆ ರಾತ್ರಿ ಕಾವಳದಲ್ಲಿ ನಿದ್ದೆ ಕಣ್ಣನೆಳೆಯುತಿದ್ದರೂ ನಿದ್ದೆ ಬರುತ್ತಿಲ್ಲ ಅಂತ ನಾ ಹಟಹೂಡಿದಾಗ ನೀ ತಟ್ಟಿ ತಟ್ಟಿ ಮಾಡಿ ನನ್ನ ಮಲಗಿಸಿದ್ದು – ಆ ಪುಟ್ಟ ವಿದಾಯದಲ್ಲೂ ಇಬ್ಬರ ಗಂಟಲೂ ತುಂಬಿ ಬರುತ್ತಿದ್ದುದು – ಸುಮ್ಮನೇ ಎಂಬಂತೆ ಹಣೆಗೆ ತುಟಿಯೊತ್ತುತಿದ್ದುದು – ಅಲ್ಯಾರೋ ನನ್ನ ಮುಖದ ಬದಲು ಎದೆಯೆಡೆಗೆ ಬಿಡುಗಣ್ಣನೆಟ್ಟದ್ದ ಕಂಡು ನಾ ಕೋಪಗೊಂಡರೆ ನೀನದನ್ನ ಅದೆಷ್ಟು ಗಂಡಸಿನ ಪ್ರಾಕೃತಿಕ ಅಭಿಲಾಷೆ ಅಂತ ವಿವರಿಸಿ ನನ್ನ ಕೋಪವ ಹೆಚ್ಚಿಸಿದ್ದು – ಅದ್ಯಾರೋ ಹುಡುಗೀನ ನೀ ನನ್ನೆದುರೇ ಹೊಗಳಿ ಬೆನ್ನಿಗೆ ಗುದ್ದು ತಿನ್ನುತಿದ್ದುದು... ಬದುಕನ್ನ ಅಷ್ಟೆಲ್ಲ ಚಂದಗೆ ವಿವರಿಸುತ್ತಿದ್ದೆಯಲ್ಲೋ... ಎಂಥ ಸ್ನೇಹವಿತ್ತು ಅಲ್ಲಿ... ನಂಗೆ ಆ ಗೆಳೆಯ ಮತ್ತೆ ಸಿಕ್ಕಾನಾ... ಅಥವಾ ಆ ಸ್ನೇಹವನ್ನ ಶಾಶ್ವತವಾಗಿಸುವ ತರಾತುರಿಯಲ್ಲಿ ಪ್ರೇಮವಾಗಿಸಿದ್ದೇ ತಪ್ಪಾಗಿ ಹೋಗಿ ಗೆಳೆಯನನ್ನು ಕಳೆದುಕೊಂಡುಬಿಟ್ಟೆನಾ... ಶಾಶ್ವತತೆಯ ಹುಯಿಲಿಗೆ ಬೀಳಬಾರದಿತ್ತಾ... ತೀವ್ರವಾಗಿ ಬೇಕೇಬೇಕಿನಿಸುತ್ತಿದೆ ಈ ಗಂಡನಲ್ಲಿ ಆ ಗೆಳೆಯ... ಮತ್ತೆ ಒಂದೇ ಒಂದು ಬಾರಿಯಾದರೂ ಆ ಕ್ಷಣಗಳು ಮರುಕಳಿಸಬಾರದಾ...

ಕೂದಲು ನೆರೆಯುತ್ತಿರುವ ಈ ವಯಸಲ್ಲಿ ಇದೇನು ಮತ್ತೆ ಹರೆಯಕ್ಕೆ ಹೋಗೋ ಹುಚ್ಚು ಹಂಬಲ ಅಂತೀಯೇನೋ... ಹೌದು ನಂಗೆ ಒಂಥರಾ ಹುಚ್ಚೇ... ನಡೆಯುತ್ತ ನಡೆಯುತ್ತ ದಾರಿ ಮಧ್ಯೆ ಎಲ್ಲೋ ಅರಿವೇ ಆಗದೆ ಕಳೆದುಕೊಂಡ ಮಧುರ ಭಾವಗಳ, ಖುಷಿಗಳ ಮತ್ತೆ ಹುಡುಕುವ ಹುಚ್ಚು... ಆದರೂ ಆ ಹುಚ್ಚಲ್ಲಿ ನಂಗೆ ಒಂಥರಾ ಅಪರಿಮಿತ ಸುಖವಿದೆ... ವಯಸ್ಸು ದೇಹಕ್ಕೆ ಮನಸಿಗಲ್ಲವಲ್ಲ... ಅಲ್ಲಿನ್ನೂ ಕನಸು ಚಿಗುರೋ ಚೈತನ್ಯವಿದೆಯಲ್ಲ... ಆ ಹುಚ್ಚು ಕನಸನ್ನು ಕೂಡ ನಾ ನಿನ್ನೆಡೆಗೇ ಕಾಣುತ್ತಿದ್ದೇನೆ... ಕೂದಲಿಗೆ ಬಣ್ಣ ಹಚ್ಚಿದಂತೆ ಮನಸಿನ ಭಾವಗಳಿಗೂ ಒಂಚೂರು ಬಣ್ಣ ಹಚ್ಚೋಣವಂತೆ ಮತ್ತೆ ಆ ದಿನಗಳಲ್ಲಿಯಂತೆ... ಬದುಕು ಗರಿಗೆದರಿ ನಲಿದೀತು ಮತ್ತೊಮ್ಮೆ... ಮಾತಾಗು ಒಮ್ಮೆ, ಮಗುವಾಗು ಇನ್ನೊಮ್ಮೆ, ಒಂದೇ ಒಂದು ಬಾರಿಯಾದರೂ ಕಣ್ಣಲ್ಲಿ ಕಣ್ಣಿಟ್ಟು ಹಣೆಯ ಮುದ್ದಿಟ್ಟು ಮನಸ ಸಿಂಗರಿಸು ನಾ ನನ್ನ ಒಂಟಿತನದಲ್ಲಿ ಪೂರ್ತಿ ಹುಗಿದು ಹೋಗುವ ಮುನ್ನ... 

ಮನಸಿನಿಂದಲೂ ನಗುವ ಆಸೆಯಿಂದ ನಿನ್ನೊಳಗಣ ಸ್ನೇಹಿತನ ಮತ್ತೆ ಕಾಣುವ ಕನಸಿನೆಡೆಗೆ ಕಣ್ಣು ನೆಟ್ಟಿರೋ – 
ನಿನ್ನಾಕೆ...

Saturday, November 16, 2013

ಗೊಂಚಲು – ತೊಂಬತ್ತು ಮತ್ತೈದು.....

ಮತ್ತೆ ನನ್ನ ಮನಸು.....

ಮೌನದೊಂದಿಗೆ ಸದಾ ಪ್ರಶ್ನೆಗಳೇ ನನ್ನದು – ಮೌನವ ಸದಾ ವಿರೋಧಿಸಿದೆ – ಹಠಕ್ಕೆ ಬಿದ್ದು ಮೌನವ ದೂರವಿಡಲು ಬಡಿದಾಡಿದೆ – ಅದರೊಂದಿಗೆ ಜಗಳವಂತೂ ವಿಪರೀತ – ಆದರೆ, ಎಲ್ಲಕೂ ಉತ್ತರವಾಗಿ ಮತ್ತೆ ಮೌನವೇ ದಕ್ಕಿತು – ಕಂಗಾಲಾಗಿ ಉಸಿರನಾದರೂ ಉಳಿಸಿಕೊಳ್ಳುವ ಹಂಬಲದಿ ಸೋಲೊಪ್ಪಿಕೊಂಡುಬಿಟ್ಟೆ – ನನ್ನ ಬಹಿರಂಗದ ಮಾತೀಗ ಮೌನದ ಮನೆಯ ಕೈದಿ – ಅದು ನನ್ನ ಮನಸು...

ಸಾವಿರಾರು ಭಾವಗಳು ಒಳಗಿಣುಕುತ್ತವೆ – ಅಷ್ಟೇ ಗಡಿಬಿಡಿಯಿಂದ ಹೊರಗೋಡುತ್ತವೆ – ಒಂದಾದರೂ ಭಾವಕ್ಕೆ ಶಾಶ್ವತ ನೆಲೆ ನೀಡುವಾಸೆ – ಆದರೆ, ಕನವರಿಕೆಯ ಕಣ್ಣ ಹನಿಯ ಕರೆಯಾಗಿ, ಹೆಣಭಾರದ ನೆನಪಾಗಿ ಮಾತ್ರ ಜೊತೆಗಿರುತ್ತವೆ – ಕಾರಣ; ನಿಲ್ದಾಣವಾಗುವ ಅರ್ಹತೆ ಕಳಕೊಂಡ ಮುದಿ ಸೂಳೆಯ ಮನೆ – ಅದು ನನ್ನ ಮನಸು...

ಈಗಿರುವ ಬದುಕಿಗೆ ಅತಿ ಪ್ರಾಮಾಣಿಕನಾಗಿರುವ ತೀವ್ರ ಹಂಬಲ – ಹೊಸದನ್ನು ನೋಡದಿರಲಾಗದ ಮೋಹದ ಗೊಂದಲ – ಈ ಎತ್ತರವ (?) ಬಿಡಲಾಗದ, ಆ ರುದ್ರರಮಣೀಯ ಕಣಿವೆಯಲಿ ಜಾರಿ ಕಳೆದುಹೋಗುವ ಆಸೆಯ ತಡೆಯಲಾಗದ - ನನ್ನೊಳಗೇ ನನ್ನ ಹಿಂಡಿ ಕಂಗೆಡಿಸುವ ನಲವತ್ತರಾಚೆಯ ನಿಷಿದ್ಧ ಕಾಮ – ಅದು ನನ್ನ ಮನಸು...

ಕೆಲ ಕನಸುಗಳಿಗೆ, ಭಾವ ಬಂಧಗಳಿಗೆ ಕೈಯಾರೆ ಹುಲ್ಲು ನೀರನುಣಿಸಿ – ಅವು ಬೆಳೆದು, ಕೊಬ್ಬಿ, ಕಣ್ಣರಳಿಸಿ, ಮೈಯುಜ್ಜಿ ನನ್ನ ಪ್ರೀತಿಸಿ ನಗುವಾಗ – ನಾ ಬದುಕಲೋಸುಗ ಅವುಗಳ ಕತ್ತು ಕಡಿಯುವ – ಬೆಳೆಸುವ ಮತ್ತು ಕಡಿಯುವ ಅನಿವಾರ್ಯತೆಗೆ ಬಿದ್ದ ಅಸಹಾಯಕ ಕಟುಕನ ಒರಟುತನ – ಅದು ನನ್ನ ಮನಸು...

ಎದೆಯನೇ ಒದ್ದರೂ ಮಗು ಬೆಳೆಯುತಿದೆಯೆಂದು ಮುದ್ದಿಸುವ – ಕಂದನ ದೂರುವವರನೆಲ್ಲ ತನ್ನಿಂದಲೂ ದೂರ ಸರಿಸುವ – ಎಲ್ಲರಂತಿಲ್ಲದ ತಪ್ಪಿಗೆ ಊರೆಲ್ಲ ಹಳಿದರೂ ತನ್ನ ಕುಡಿಯ ಎದೆಗವುಚಿ ಪ್ರೀತಿಸುವ – ಭರವಸೆಯ ಹಣತೆ ಉರಿವ ಅಮ್ಮನ ಮಡಿಲು – ಅದು ನನ್ನ ಮನಸು...

Thursday, November 14, 2013

ಗೊಂಚಲು - ತೊಂಬತ್ನಾಕು.....

ನನ್ನ ಮನಸು.....

ಬೇಲಿಯ ಹಂಗಿಲ್ಲ - ಕಾವಲುಗಾರ ಬೇಕಿಲ್ಲ – ಕಾರಣ: ಕಾಯಬೇಕಾದದ್ದೇನೂ ಉಳಿದಿಲ್ಲ – ಫಸಲೆಲ್ಲ ಒಣಗಿಹೋದ ಖಾಲಿ ಖಾಲಿ  ಬಯಲು – ಅದು ನನ್ನ ಮನಸು...

ಹೊಸ ಕನಸೊಂದು ಕರೆ ಮಾಡಿ ಹಾಯ್ ಅನ್ನ ಬಂದರೆ – ಕರೆ ಸ್ವೀಕರಿಸಲು ಕಳಕೊಂಡ ಕನಸುಗಳ ನೆನಪು - ಮತ್ತೊಂದು ಕನಸನು ಆ ಸಾಲಿಗೆ ಸೇರಿಸಿ ಯಾದಿ ಬೆಳೆಸಿದಂತಾದೀತೆಂಬ ಭಯದ ಮಂಪರು – ಅದು ನನ್ನ ಮನಸು...

ನಿನ್ನೆ ಎಲ್ಲ ಇತ್ತು – ಇಂದೀಗ ಎಲ್ಲ ಶೂನ್ಯ – ನಾಳೆಗಳಲೂ ಶೂನ್ಯವೇ ಶಾಶ್ವತವಾದೀತೆಂಬ ಭಯದ; ಯಜಮಾನ ಅಳಿದ ಸಾವಿನ ಮನೆಯ ಹಗಲು – ಅದು ನನ್ನ ಮನಸು...

ನಾನೆಂಬ ನನ್ನಹಂಮ್ಮಿನ ಗುಂಗಲ್ಲಿ – ನಿನ್ನೆ ನಾಳೆಗಳ ಹಂಗಲ್ಲಿ – ಹಳಸಿದವುಗಳ, ಅಳಿದವುಗಳ - ನನ್ನೆಲ್ಲ ಒರಟುತನದಲ್ಲಿ ದಹಿಸಿಯೂ ಉಳಿಯಲು ಒದ್ದಾಡುವವುಗಳ ಲೆಕ್ಕಾಚಾರಗಳಲ್ಲಿ ನಿದ್ದೆ ಸತ್ತ ಇರುಳು – ಅದು ನನ್ನ ಮನಸು...

ಪ್ರೀತಿಯ ಉಣಿಸಲಾರದ – ಯಾರೋ ನನಗುಣಿಸಬಂದರೆ ಉಣ್ಣಲೂ ಬಾರದ ಉರುಟು ಬಂಡೆ – ಯಾರಿಗೂ ನೆರಳು ಕೂಡ ಆಗದ ಜಾಲಿ ಮರ – ಅದು ನನ್ನ ಮನಸು...

ಜೀವಂತಿಕೆ ಇಲ್ಲದ – ಒಣ ಮಾತುಗಳಲ್ಲಿ ನಗುವಿನ ಕಾರಣ ಹುಡುಕುತ್ತಾ; ಮೂಲ ಖುಷಿಯ ಭಾವವನೇ ಕೊಲ್ಲುವ – ಶವ ಪರೀಕ್ಷಕ ಅಥವಾ ಹೆಣದ ಮನೆಯ ಒಡೆಯನ ನಿರ್ಭಾವುಕತೆ – ಅದು ನನ್ನ ಮನಸು...

Friday, November 8, 2013

ಗೊಂಚಲು - ತೊಂಬತ್ತು ಮತ್ತು ಮೂರು.....

ಹೀಗೊಂದು ಪತ್ರ.....

ಸಾವೇ –
ಬದುಕು ಶುರುವಾಗೋ ಮುಂಚೆ ಕೂಡ ಬರಬಲ್ಲ ಅಥವಾ ಬದುಕಿನ ಯಾವುದೇ ತಿರುವಲ್ಲೂ ಪಕ್ಕನೆ ಎದುರಾಗಬಲ್ಲ ನಿನ್ನನು, ಕಣ್ಣಿಲ್ಲದವನೆಂದರು – ಕರುಣೆ ಸ್ವಲ್ಪವೂ ಇಲ್ಲವೇ ಇಲ್ಲವೆಂದರು – ಕರೆಯದೇ ಬರುವ ಏಕೈಕ ಅಥಿತಿ ಎಂದರು – ಕರೆದರೂ ಬಾರದೇ ಕಾಡುವ ಕಟುಕ ಎಂಬರು... ಎಲ್ಲವೂ ಸತ್ಯವೇ... ಅವರವರ ಪರಿಸ್ಥಿತಿಯ ಕಣ್ಣಲ್ಲಿ ನೀ ಅವರವರ ಭಾವದಂತೆ...

ಹೀಗಂತ ಗೊತ್ತಾಗಿರುತ್ತಿದ್ದಿದ್ದರೆ ಗರ್ಭದಿಂದಾಚೆಯೇ ದೂಡುತ್ತಿರಲಿಲ್ಲ ಅನ್ನುತ್ತಿದ್ದಳು ಆ ತಾಯಿ ನಿನ್ನ ಕ್ರೌರ್ಯಕ್ಕೆ ಶಪಿಸುತ್ತಾ...
ನಿನ್ನೆ ತಾನೆ ಹುಟ್ಟಿದ್ದಂತೆ ಕೂಸು – ಈಗಷ್ಟೇ ಮಣ್ಣು ಮಾಡಿ ಮನೆಗೆ ಬಂದಿದ್ದಾರೆ...

ಎಲ್ಲ ಇದ್ದೂ ಯಾರೂ ಇಲ್ಲದಂತಾಗಿ ಆ ಮೂಲೆಯಲ್ಲಿ ಕೂತು ದೀನತೆಯಿಂದ ನಿನ್ನ ಬರವಿಗಾಗಿ ಕಾತರಿಸುತ್ತಿದ್ದಾನೆ ಆ ತಾತ ಬಾಗಿಲೆಡೆಗೆ ಕಣ್ಣು ನೆಟ್ಟು – ನೀ ತಿರುಗಿಯೂ ನೋಡುತ್ತಿಲ್ಲ – ಜಾಣ ಕುರುಡನಂತೆ...

ನಾನೂ ಕರೆದಿರಲಿಲ್ಲ ನಿನ್ನ – ಆದರೂ ಬರುತ್ತಿರುವ ಸಂದೇಶ ನನ್ನ ತಲುಪಿತು... ಮೊದ ಮೊದಲು ಸುಳ್ಳೇ ಭ್ರಮೆ ಅಂದುಕೊಂಡೆ... ಇಲ್ಲ ಸತ್ಯವೇ ಅದು ಅಂತಂದರು ಸದಾ ನಿನ್ನಿಂದ ನಮ್ಮಗಳ ದೂರವಿಡಲು ದುಡಿವ ನರನಾರಾಯಣರು... ಸ್ವಲ್ಪ ಕಹಿ ಕಹಿ ಅನ್ನಿಸಿತು... ಆದರೂ ಎಂದಾದರೂ ನಿನ್ನ ಸೇರಲೇಬೇಕಲ್ಲ ಎಂಬ ಅರಿವಿತ್ತಲ್ಲ ಅದಕ್ಕೇ ಸರಿ ಬಂದುಬಿಡು ಅಂತಂದು ಬಾಗಿಲು ತರೆದಿಟ್ಟೆ... ನೀನೋ ಬಲೇ ಕಿಲಾಡಿ, ಬಾಗಿಲಿಗೆ ಬಂದು ನಿಂತು ಒಳಗಡಿಯಿಡದೇ ಮಜ ನೋಡುತ್ತ ನಿಂತುಬಿಟ್ಟೆ... ಆಗಲೇ ಶುರುವಾದದ್ದು ನಿಜವಾದ ಒದ್ದಾಟ – ಯಾವ ಅರಿವೂ ತಣಿಸಲಾರದ, ಮಣಿಸಲಾಗದ ಮನದ ಗುದ್ದಾಟ... 
ನನಗೆ ನೀನಿಲ್ಲ ಅಥವಾ ಎಲ್ಲೋ ದೂರದಲ್ಲಿದ್ದೀಯಾ ಅನ್ನೋ ಭಾವದಲ್ಲಲ್ಲವಾ ಎಳೆಯರ ನಾಳೆಗಳಿಗೆ ಬಲ - ಉಲ್ಲಾಸ, ಉನ್ಮಾದಗಳಿಗೆ ಜೀವ ಬಂದು ಮನದೊಳಗೆ ರಂಗುರಂಗಿನ ಕನಸುಗಳ ಜಾಲ... ಎಲ್ಲೋ ಇದ್ದು ಧೈರ್ಯ ತುಂಬಬೇಕಾದೋನು ಕಣ್ಣೆದುರೇ ದುಃಸ್ವಪ್ನದಂತೆ ನಿಂತುಬಿಟ್ಟರೆ ಕ್ಷಣ ಕ್ಷಣವೂ ___________ ... 

ಪ್ರಜ್ಞಾಪೂರ್ವಕವಾಗಿ ನಾಳೆಗಳಿಗೋಸ್ಕರ ಕನಸುಗಳ ಒಳಗೆಳೆದುಕೊಂಡರೆ, ಬಾಗಿಲಲ್ಲಿರುವ ನಿನ್ನ ಹಾದೇ ಒಳ ಬಂದ ಕನಸುಗಳಲೂ ನಿನ್ನದೇ ಕರಕಲು ವಾಸನೆ... 

ನಿನ್ನ ಅಸ್ಪಷ್ಟವಾಗಿ ಕಂಡ ಭಯದಲ್ಲಿ ಕೈಯಾರೆ ದೂಡಿ ದೂರವಿಟ್ಟ ಮಧುರ ಖುಷಿಯ ಭಾವಗಳು – ಕೈ ಕೊಡವಿ ಎದ್ದು ಬಂದ ಕೈ ಹಿಡಿದು ಆ ತೀರದವರೆಗೂ ನಡೆಯಬಹುದಾಗಿದ್ದ ಬಂಧಗಳೆಲ್ಲ ರಾತ್ರಿ ಕನಸಲ್ಲಿ ಪ್ರೇತಗಳಂತೆ ಕುಣಿಯುವಾಗ, ನೋವು ಎನ್ನಲಾಗದ – ಆದರೆ ಖುಷಿಯೂ ಇಲ್ಲದ ಒಂಥರಾ ಸ್ತಬ್ದತೆ ಸದಾ ಕಾಡುವಾಗ, ಜಂಗುಳಿಯ ನಡುವೆ ಸೂರು ಹಾರುವಂತೆ ನಗುತಿರುವಾಗಲೂ ಯಾವುದೋ ಮೂಲೆಯಲಿ ಒಂಟಿ ಒಂಟಿ ಅನ್ನಿಸೋ ಶಾಶ್ವತ ಖಾಲಿತನ ಹಿಂಡುವಾಗ, ಬಿಟ್ಟು ಬದುಕಲಾರೆನೆನ್ನಿಸೋ ಯಾರೂ ಸಹಿಸಲಾಗದ ಒರಟುತನ – ತೊಟ್ಟು ಉಳಿಯಲಾಗದ ಬಂಧ ಬೆಸೆಯಲು ಬೇಕೇ ಬೇಕಿದ್ದ ಮೃದುತನಗಳ ನಡುವೆ ಮನಸು ಹಾಗೂ ಮನಸ ಸಂತೈಸಬೇಕಿದ್ದ ಬುದ್ಧಿಯೂ ಕಂಗಾಲಾದಾಗ, ಕೈ ಮೀರಿ ನಿಶ್ಯಕ್ತನೆನಿಸೋ ಮುಂಚೆಯೇ ಮುಗಿದುಹೋಗಲಿ ಅಂದುಕೊಂಡ ಬದುಕ ದಾರಿ ಅಂದುಕೊಂಡದ್ದಕ್ಕಿಂತ ದೀರ್ಘವಾಯಿತು ಅಂತನ್ನಿಸಿದಾಗಲೆಲ್ಲ... ಆಗೆಲ್ಲ ಒಮ್ಮೊಮ್ಮೆ ಅನ್ನಿಸಿಬಿಡುತ್ತೆ – ಒಳಗೂ ಅಡಿಯಿಡದೇ, ಕಣ್ಣ ಹರಹಿನಿಂದಾಚೆಯೂ ಹೋಗದೇ, ನನ್ನ ಕನಸ ರಂಗೋಲಿಯನೆಲ್ಲ ತುಳಿಯುತ್ತ ನೀ ನಿಂತ ಮುಂಬಾಗಿಲಿಂದಾಚೆ ನಿನ್ನೆಡೆಗೆ ನಾನೇ ಅಡಿಯಿಟ್ಟುಬಿಡಲಾ...!!!

ಮರುಕ್ಷಣ ಅನ್ನಿಸುತ್ತೆ - ಸೋಲು ಸಹನೀಯ ಆದರೆ ಶರಣಾಗತಿ ಕಲ್ಪನೆಗೂ ನಿಲುಕದ್ದು... ಉಹುಂ – ಆಗದ ಮಾತು ಅದು; ನಾನಾಗಿ ನಾನು ನಿನ್ನೆಡೆಗೆ ಬರಲಾರೆ... ಗೊತ್ತು ನಿನ್ನ ಗೆಲ್ಲಲಾಗದು ಅಂತ – ಆದರೆ ಬದುಕ ಅಪ್ಪದೆಯೂ ಇರಲಾಗದು... ಅಲ್ಲಿ ಅವಳಿದ್ದಾಳೆ – ಮೊನ್ನೆ ಮೊನ್ನೆಯಷ್ಟೇ ಒಡೆದ ಕಿಟಕಿ ಮರೆಯಿಂದ ಅವಳು ಇಣುಕಿ ನೋಡಿಬಿಟ್ಟಿದ್ದಾಳೆ; ಸಣ್ಣಗೆ ನಗುತ್ತಾ... ಅವಳು ಕಪ್ಪಗಿದ್ದರೂ ಅವಳ ನಗು ತುಂಬ ಬೆಳ್ಳಗಿದೆ... ಆ ಒಂದು ನಗೆಯ ನೆನಪು ಸಾಕು ಈ ಕತ್ತಲ ಕೋಣೆಯ ಒಳಗೂ ನಗುತ್ತ ನಿನ್ನ ಎದುರಿಸಲು...

ಆದರೂ ನಿನ್ನ ಕೋರಿಕೊಳ್ಳದಿರಲಾರೆ – ಕರುಣೆ ತೋರಿ ನೀನೇ ಬೇಗ ಒಳಬಂದು ಎಳೆದೊಯ್ದುಬಿಡು – ಇಷ್ಟಾದರೂ ನಗು ನನ್ನಲ್ಲಿ ಬದುಕಿರುವಾಗಲೇ... ನಿನ್ನೆದುರು ಅಳಲು ಮನಸಿಲ್ಲ ನಂಗೆ...

ಇಂತಿ –
ಕನಸುಗಳ ಹೆಣಗಳ ನಡುವೆ ತೇಕುತ್ತಿರುವ ಉಸಿರು. 

Tuesday, November 5, 2013

ಗೊಂಚಲು - ತೊಂಬತ್ತೆರಡು.....

ಏನೇನೋ.....

ನನಗೆಂದೇ ಹೊಯ್ದಾಡುವ ಕಪ್ಪು ಹುಡುಗಿಯ ಕಪ್ಪು ಮುಂಗುರುಳು... 
ಸದಾ ನನ್ನಡೆಗೇ ತುಡಿಯುವ ಅವಳ ಆ ಕಡುಗಪ್ಪು ಕಂಗಳು... 
ತುಟಿಯ ತಿರುವಲ್ಲಿ ನಗೋ ಸಂಗಾತಿ ಮಚ್ಚೆ... 
ಬೆರಳುಗಳ ಬೆಸೆದು ಸಂಜೆಗೊಂದು ಸುತ್ತಾಟ – ನಡುವೆ ಜಿನುಗಿದ ತಿಳಿ ಬೆವರೊಂದಿಗೆ ಹಸ್ತರೇಖೆಗಳೂ ಬೆರೆತ ಭರವಸೆಯ ಭಾವ... 
ತುಂಬ ಒಲವುಕ್ಕಿದಾಗ ಒಂದು ಬಿಗಿಯಾದ ತಬ್ಬುಗೆ – ಜಾತ್ರೇಲಿ ಕೊಂಡ ಗಾಜಿನ ಬಳೆಗಳಿಗೆ ಮೋಕ್ಷ... 
ಯಾವುದೋ ನಸುಗತ್ತಲ ತಿರುವಲ್ಲಿ ಕದ್ದು ಸವಿದ ಮುತ್ತಿನೂಟ – ಆರದ ತುಟಿಯ ತೇವದಲ್ಲಿ ಸದಾ ಹಸಿಯಾಗಿರುವ ಆಸೆಯ ಝೇಂಕಾರ... 
ಹುಸಿ ಮುನಿಸಿನಲಿ ಖುಷಿಯ ಆರೋಪದ ಪ್ರೀತಿಯ ಗುದ್ದು - ಮುಚ್ಚಿದ ಕಣ್ಣ ಕೊನೆಯಲ್ಲಿ ಒಲವ ತೀರ ಸೇರೋ ಪ್ರಣವ ನಾದ... 
ರಾತ್ರಿಯ ಒಂಟಿ ಹೊರಳಾಟದಲ್ಲಿ ನೆನಪಾಗಿ ಕಾಡಿ ನಶೆಯೇರಿಸೋ ಅವಳ ಬೆವರ ಘಮ... 
ಎಂದೋ ಕದ್ದೊಯ್ದ ನನ್ನ ಹಳೆಯ ಅಂಗಿಯಲ್ಲಿ ನಿತ್ಯ ರಾತ್ರಿಯಲ್ಲಿ ಅವಳಿಗೆ ನಾ ದಕ್ಕುವುದು - ಎದೆಗವಚ ಬಿಗಿಯಾದ ಸುದ್ದಿ ಅವಳ ಪೋಲಿ ಸಂದೇಶವಾಗಿ ಮಧ್ಯರಾತ್ರಿಯಲಿ ನನ್ನ ತಲುಪಿ ಕೆಣಕಿದ್ದು...  
ಆ ವಿರಹದುರಿಯಲಿ ನನ್ನ ಸಂತೈಸೋ ಅವಳ ಹಳೆಯ ಒಂಟಿ ಕಿವಿಯೋಲೆ... 
ಇನ್ನೂ ಸಂಸಾರವನೇ ಹೂಡಿಲ್ಲ ಆಗಲೇ ಮಗಳಿಗೆ ಹೆಸರ ಹುಡುಕಿ ಡೈರೀಲಿ ಬರೆದಿಟ್ಟದ್ದು... 
ಸುರಿವ ಸೋನೆಯಲಿ ನೆನೆಯುತ್ತ ಒಂದೇ ಐಸ್‌ಕ್ರೀಮನ್ನು ಇಬ್ಬರೂ ತಿಂದದ್ದು...
ಕನ್ನಡಿಯೂ ಕಂಡಿರದ ಅವಳ ಕತ್ತಲ ತಿರುವುಗಳು ನನ್ನ ಕಂಗಳಲ್ಲಿ ಇಂಗದ ಹಸಿವಾಗಿ ಭದ್ರವಾಗಿದ್ದು... 
ಆಹಾ..!!! 
ಎಷ್ಟೆಲ್ಲ ಹುಚ್ಚುಚ್ಚು ಭಾವದ ಖುಷಿಗಳ ನನ್ನಲ್ಲಿ ತುಂಬಿದ್ದು ಆ ಕಪ್ಪು ಹುಡುಗಿಯ ಕನಸು...
ಅದು ಬರೀ ಕನಸೇ ಆದರೂ ಎಂಥ ಸೊಬಗು ಆ ಕನಸಿಗೆ... 
ಹೌದು ತುಸು ಹೆಚ್ಚೇ ಅನ್ನುವಷ್ಟು ಪೋಲಿಕನಸುಗಳು ನನ್ನಲ್ಲಿ ಅವಳೆಡೆಗೆ... ಆದರದು ಹರೆಯದ ಉನ್ಮಾದ ಅನ್ನಿಸೊಲ್ಲ ಯಾಕೋ... ಸಂಯಮ ಮೀರಿದ ಕ್ಷಣ ಮತ್ತು ಕ್ರಿಯೆಯಾಗಿ ದಕ್ಕುತಿರುವ ಕ್ಷಣಗಳನು ಹೊರತುಪಡಿಸಿ, ಪ್ರೇಮದಿಂದೊಡಗೂಡಿದ ಬರೀ ಮನೋಭೂಮಿಕೆಯ ಕಲ್ಪನೆಯಲಿ ಅರಳುತಿರುವಲ್ಲಿ ಕಾಮ ಕೂಡ ಮಧುರ ಭಾವವೇ ಅಂತನ್ನಿಸುತ್ತೆ ನಂಗೆ...
ಅಂಥವಳೊಬ್ಬ ಕಪ್ಪು ಹುಡುಗಿಯ ನನ್ನ ಕನಸಿಗೆ ಕೊಟ್ಟ ಮತ್ತು ಆ ಕನಸ ಇಂದಿಗೂ ಜೀವಂತವಾಗಿಟ್ಟ ಬದುಕೇ ನಿನ್ನ ಮೇಲೆ ಮತ್ತೆ ಹುಚ್ಚು ಪ್ರೀತಿಯಾಗ್ತಿದೆ...

*****

ಸಾಗರವೇ -
ನಿನ್ನ ಅಗಾಧತೆಯೆಡೆಗೆ ಬೆರಗಿನ ಕಣ್ಣ ನೆಟ್ಟು – ನಿನ್ನ ನಿಗೂಢತೆಯ ಕಂಡು ನಿಟ್ಟುಸಿರ ಬಿಟ್ಟು – ಗರಬಡಿದು ಸುಸ್ತಾಗಿ ಕುಳಿತಿದ್ದೇನೆ...
ಅಲೆಯೊಂದು ಬಂದು ಪಾದ ಸೋಕಿತು... 
ತಾಕಿದ ತೇವ ಮನಸಿಗೂ ಆವರಿಸಿ - ಕಳೆದುಹೋಗಿದ್ದ ಹಳೆ ಕನಸುಗಳೆಲ್ಲ ಮತ್ತೆ ಒಳನುಗ್ಗಿ – ಹೊಸ ರಾಗದಲಿ ಹೊರಹೊಮ್ಮಿ – ನವ ರೋಮಾಂಚನ ಮೈಮನದಲಿ ಝೇಂಕರಿಸಿ ಜೀವ ಭಾವಕ್ಕೆ ರೆಕ್ಕೆ ಮೂಡಿದೆ...
ಬದುಕೇ ನೀನೂ ಸಾಗರದಂತೆಯೇ...
ನಿನ್ನ ಅಗಾಧತೆ, ನಿಗೂಢತೆಗಳಲಿ ಹಲ ಕನಸುಗಳ ಕೊಂದು ಹೂತು ಮತ್ತದೇ ಮಸಣದ ನಡುವಿಂದ ಹೊಸ ಕನಸುಗಳ ಹೊತ್ತು ತಂದು ನನ್ನದೇ ಶಾಶ್ವತ ಒಂಟಿತನದಲೂ ನಗುತಿರಬಲ್ಲ ಜಿಗುಟಾದ ಒರಟುತನವ ಕರುಣಿಸಿದ ಬದುಕೇ ನಿನ್ನ ಮೇಲೆ ಮತ್ತೆ ಪ್ರೀತಿಯಾಗುತಿದೆ...

*****

ಗೆಳತೀ -
ಇರುವಿಕೆಯಿಂದ ಈ ಕ್ಷಣಕೊಂದು ಉನ್ಮಾದ ತುಂಬುವ...
ಅದೇ ಇರುವಿಕೆಯಿಂದ ಅರಗಿಸಿಕೊಳ್ಳಲಾರದ ಭಯ ತುಂಬೋ...
ಅರಿವಿನ ಹರಿವಿಗೆ ದಕ್ಕದೇ – ಮರೆತು ಹಗುರಾಗಲಾಗದೇ ಅಡಿಗಡಿಗೆ ಕಾಡುವ ವಾಸ್ತವದ ಭಾವ - ಸಾವು...
ಅಗೋಚರವಾಗಿದ್ದಷ್ಟು ಕಾಲವೂ ಸ್ಪೂರ್ತಿಯನ್ನು ಮತ್ತು ಪ್ರಕಟವಾಗಿ ನೋವನ್ನೂ ತುಂಬುವ, ಏಕಕಾಲಕ್ಕೆ ಶಕ್ತಿಯೂ – ದೌರ್ಬಲ್ಯವೂ ಆಗಬಲ್ಲ ಭಾವ ಅದು...
ಬದುಕಿನೊಂದಿಗೆ ನನ್ನದು ಮತ್ತು ನನ್ನೊಂದಿಗೆ ನಿನ್ನದೂ ಸಾವಿನಂಥ ಗೆಳೆತನ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)