Saturday, November 16, 2013

ಗೊಂಚಲು – ತೊಂಬತ್ತು ಮತ್ತೈದು.....

ಮತ್ತೆ ನನ್ನ ಮನಸು.....

ಮೌನದೊಂದಿಗೆ ಸದಾ ಪ್ರಶ್ನೆಗಳೇ ನನ್ನದು – ಮೌನವ ಸದಾ ವಿರೋಧಿಸಿದೆ – ಹಠಕ್ಕೆ ಬಿದ್ದು ಮೌನವ ದೂರವಿಡಲು ಬಡಿದಾಡಿದೆ – ಅದರೊಂದಿಗೆ ಜಗಳವಂತೂ ವಿಪರೀತ – ಆದರೆ, ಎಲ್ಲಕೂ ಉತ್ತರವಾಗಿ ಮತ್ತೆ ಮೌನವೇ ದಕ್ಕಿತು – ಕಂಗಾಲಾಗಿ ಉಸಿರನಾದರೂ ಉಳಿಸಿಕೊಳ್ಳುವ ಹಂಬಲದಿ ಸೋಲೊಪ್ಪಿಕೊಂಡುಬಿಟ್ಟೆ – ನನ್ನ ಬಹಿರಂಗದ ಮಾತೀಗ ಮೌನದ ಮನೆಯ ಕೈದಿ – ಅದು ನನ್ನ ಮನಸು...

ಸಾವಿರಾರು ಭಾವಗಳು ಒಳಗಿಣುಕುತ್ತವೆ – ಅಷ್ಟೇ ಗಡಿಬಿಡಿಯಿಂದ ಹೊರಗೋಡುತ್ತವೆ – ಒಂದಾದರೂ ಭಾವಕ್ಕೆ ಶಾಶ್ವತ ನೆಲೆ ನೀಡುವಾಸೆ – ಆದರೆ, ಕನವರಿಕೆಯ ಕಣ್ಣ ಹನಿಯ ಕರೆಯಾಗಿ, ಹೆಣಭಾರದ ನೆನಪಾಗಿ ಮಾತ್ರ ಜೊತೆಗಿರುತ್ತವೆ – ಕಾರಣ; ನಿಲ್ದಾಣವಾಗುವ ಅರ್ಹತೆ ಕಳಕೊಂಡ ಮುದಿ ಸೂಳೆಯ ಮನೆ – ಅದು ನನ್ನ ಮನಸು...

ಈಗಿರುವ ಬದುಕಿಗೆ ಅತಿ ಪ್ರಾಮಾಣಿಕನಾಗಿರುವ ತೀವ್ರ ಹಂಬಲ – ಹೊಸದನ್ನು ನೋಡದಿರಲಾಗದ ಮೋಹದ ಗೊಂದಲ – ಈ ಎತ್ತರವ (?) ಬಿಡಲಾಗದ, ಆ ರುದ್ರರಮಣೀಯ ಕಣಿವೆಯಲಿ ಜಾರಿ ಕಳೆದುಹೋಗುವ ಆಸೆಯ ತಡೆಯಲಾಗದ - ನನ್ನೊಳಗೇ ನನ್ನ ಹಿಂಡಿ ಕಂಗೆಡಿಸುವ ನಲವತ್ತರಾಚೆಯ ನಿಷಿದ್ಧ ಕಾಮ – ಅದು ನನ್ನ ಮನಸು...

ಕೆಲ ಕನಸುಗಳಿಗೆ, ಭಾವ ಬಂಧಗಳಿಗೆ ಕೈಯಾರೆ ಹುಲ್ಲು ನೀರನುಣಿಸಿ – ಅವು ಬೆಳೆದು, ಕೊಬ್ಬಿ, ಕಣ್ಣರಳಿಸಿ, ಮೈಯುಜ್ಜಿ ನನ್ನ ಪ್ರೀತಿಸಿ ನಗುವಾಗ – ನಾ ಬದುಕಲೋಸುಗ ಅವುಗಳ ಕತ್ತು ಕಡಿಯುವ – ಬೆಳೆಸುವ ಮತ್ತು ಕಡಿಯುವ ಅನಿವಾರ್ಯತೆಗೆ ಬಿದ್ದ ಅಸಹಾಯಕ ಕಟುಕನ ಒರಟುತನ – ಅದು ನನ್ನ ಮನಸು...

ಎದೆಯನೇ ಒದ್ದರೂ ಮಗು ಬೆಳೆಯುತಿದೆಯೆಂದು ಮುದ್ದಿಸುವ – ಕಂದನ ದೂರುವವರನೆಲ್ಲ ತನ್ನಿಂದಲೂ ದೂರ ಸರಿಸುವ – ಎಲ್ಲರಂತಿಲ್ಲದ ತಪ್ಪಿಗೆ ಊರೆಲ್ಲ ಹಳಿದರೂ ತನ್ನ ಕುಡಿಯ ಎದೆಗವುಚಿ ಪ್ರೀತಿಸುವ – ಭರವಸೆಯ ಹಣತೆ ಉರಿವ ಅಮ್ಮನ ಮಡಿಲು – ಅದು ನನ್ನ ಮನಸು...

5 comments:

 1. ಮಾತು ಮಾತಾಗಿ ಬಿಡಲಿ.......
  ಮಾತಿಗೆ ಮೌನದ ಮುಖವಾಡ ಬೇಡ....
  ಮೌನ ಮೌನವಾಗೇ ಇರಲಿ... ಇಷ್ಟವಿಲ್ಲದಿದ್ದರೂ ಅದಕ್ಕೆ ಮಾತಿನ ದಬ್ಬಾಳಿಕೆ ಮಾಡಬೇಡ....

  ಭಾವಗಳನ್ನು ಒಂದೇ ನಿಲ್ದಾಣದಲ್ಲಿ ಅಥವಾ ನಿಲ್ದಾಣದಲ್ಲಿ ಶಾಶ್ವತ ೊಂದೇ ಭಾವಕ್ಕೆ ನೆಲೆ ನೀಡಿಬಿಟ್ಟರೆ
  ಮನಸ್ಸು ನಿಂತ ನೀರಂತಲ್ಲವೇ ದೊರೆ... ಕಾಲಕ್ರಮೇಣ ನೀರು ಹಸಿರಾಗಿ ಪಾಚಿ ಕಟ್ಟಿಬಿಡುತ್ತವೆ...
  ಹೊಸ ಹೊಸ ಭಾವಗಳು ಬರುತ್ತಾ ಇರಬೇಕು ಒಮ್ಮೆ ವಿಶ್ರಮಿಸಿ ಮುಂದೆ ಹೋಗುತ್ತಾ ಇರಬೇಕು....

  ಕೈಯಾರೆ ನೀರುಣಿಸಿ ಬೆಳೆಸಿ.. ಅವು ಕೊಬ್ಬಿ ನಗುವುದು ನೀರುಣಿಸಿದವನಿಗೆ ನಾನಾಗಬಲ್ಲೆನೆಂಬ
  ಸಂತೃಪ್ತಿಯಲಿ.... ಕಡಿದದ್ದು ಅನಿವಾರ್ಯತೆಯೆಂದಾದರೆ.. ಕಡಿಯುತ್ತಿರುವುದಕ್ಕೆ ದುಃಖವಿದೆ ಅಂತಾದರೆ....
  ನೀರುಣಿಸಿದ ಆ ಕಟುಕ ಕಟುಕ ಹೇಗಾಗಬಲ್ಲ....

  ಮತ್ತೆ ಮನಸ್ಸು ಬೆಳಗಲಿ..... ಮನಸಾಗಿ.....

  ReplyDelete
  Replies
  1. ಮನದ ಮೂಕ ಭಾವಕ್ಕೊಂದು ಮಸ್ತ್ ಪ್ರತಿಕ್ರಿಯೆ ..
   ನಂಗಿಲ್ಲಿ ಪ್ರತಿ ಬಾರಿ ಅನಿಸೋದು..ಒಬ್ಬರಿಗೊಬ್ಬರು ವಿರುದ್ಧ ಸಾಥ್ ಕೊಟ್ಟು ಬರೆಯೋದು ,ಕಾಮೆಂಟಿಸೋದನ್ನ ಮಾಡ್ತೀರ ಅಂತ :ಫ್
   ವತ್ಸನ ಭಾವಗಳಷ್ಟೇ ಚಂದವಲ್ಲೋ ನಿನ್ನ ಪ್ರತಿಕ್ರಿಯೆ .
   ಇಷ್ಟವಾಯ್ತು ಎರಡೂ ಕಡೆಯ ಭಾವಲಹರಿ ...specially ಮತ್ತೆ ಮನಸ್ಸು ಬೆಳಗಲಿ..... ಮನಸಾಗಿ..... Raghavanna ..loved it :)

   Delete
 2. ಶ್ರೀವತ್ಸ ಮನಸ್ಸಿನ ಬಗ್ಗೆ ಬಹಳ ಅರ್ಥಪೂರ್ಣವಾಗಿ ಬರೆದಿರುವೆ.. ಅದಕ್ಕೆ ಇರಬೇಕು ಮನಸ್ಸನ್ನು ಮರ್ಕಟಕ್ಕೆ ಹೋಲಿಸುವುದು. ಮನಸ್ಸು ನಮ್ಮನ್ನ ಆಳುವವರೆಗೂ ಈ ಗೊ೦ದಲಗಳು ಸಹಜ. ಆದರೆ ಒಮ್ಮೆ ನಾವು ಮನಸ್ಸನ್ನು ಆಳಲಾರ೦ಭಿಸಿದರೆ ಈ ಗೊ೦ದಲಗಳಿಗೆ ಜಾಗವಿಲ್ಲ. ಆದರೆ ನಾವು ಮನಸ್ಸನ್ನು ನಮ್ಮ ಗುಲಾಮನನ್ನಾಗಿ ಮಾಡಿಟ್ಟುಕೊಳ್ಳುವುದು ಅಷ್ಟು ಸುಲಭ ಅಲ್ಲವಲ್ಲ...

  ReplyDelete
 3. ಮನಸ್ಸಿಗೆ ಇಷ್ಟೆಲ್ಲಾ ವ್ಯಾಖ್ಯಾನಗಳು..?!
  ಚೆನ್ನಾಗಿದೆ..

  ReplyDelete