Sunday, November 24, 2013

ಗೊಂಚಲು – ತೊಂಬತ್ತು ಮತ್ತು ಏಳು.....

ಹಿಂಗೆಲ್ಲ ಅನ್ನಿಸುತ್ತೆ.....
(ಇವು ಕೇವಲ ನನ್ನ ಸತ್ಯಗಳು...)

ಮನಸಿಗೆ ರೂಢಿಸಬೇಕಾದದ್ದು ಪ್ರಖರ ಶಿಸ್ತನ್ನಲ್ಲವೇನೋ – ಬದಲಿಗೆ ಸಂಸ್ಕಾರವಂತ ಅನುಶಾಸನವನ್ನು ದಕ್ಕಿಸಿಕೊಟ್ಟರೆ ಚಂದವೇನೋ... ಶಿಸ್ತಿನಲ್ಲೊಂದು ಒತ್ತಡವಿದೆ – ಅನುಶಾಸನದಲ್ಲಿ ಒಲುಮೆಯಿದೆ... ಮನಸಿನ ಪ್ರಾಮಾಣಿಕ ಆತ್ಮೀಕತೆ ವಿಜೃಂಭಿಸಿ, ಮನದ ಭಾವ – ಬಂಧಗಳು ಬೆಳಗಲು ಯಾರದೋ ಅಥವಾ ಸಮಾಜದ ಶಿಸ್ತಿನ ಚೌಕಟ್ಟಿಗಿಂತ ಸ್ವಯಂ ಮನಸಿನ ಅನುಶಾಸನವೇ ಹೆಚ್ಚು ಸಹಕಾರಿ ಅನ್ಸುತ್ತೆ ನಂಗೆ... ಯಾಕೆಂದರೆ ಹೂವೊಂದು ಅರಳುವಂತೆ ಮನಸು ಅರಳಬೇಕು; ಮುಳ್ಳುಗಳು ಅಥವಾ ಕೀಳುವ ಕೈಗಳ ಭಯವಿಲ್ಲದೆ – ಆತ್ಮೀಯತೆಯ ಸನ್ನಿಧಿಯಲ್ಲಿ...

ಕನಸುಗಳಿಗೆಂದೂ ಬೇಲಿ ಹಾಕಲಾರೆ – ಬೇಲಿ ಜಿಗಿಯುವ ಕನಸುಗಳೆಡೆಗೆ ನಂಗೆ ವಿಪರೀತ ವ್ಯಾಮೋಹ... ನಿಜದ ಆನಂದಮಯ ಬದುಕು ಅಲ್ಲಿ ಆ ಬೇಲಿಗಳಾಚೆಯೇ ಇದೆ ಎಂಬುದು ನನ್ನ ಖಚಿತ ಅನುಮಾನ...

ಯಾವ ಮಿತಿಗಳಿಗೂ ಒಗ್ಗದ ಕನಸುಗಳು ನನ್ನವು... ಚೌಕಟ್ಟಿಲ್ಲದ ಕನಸಿನಂಥ ಆತ್ಮೀಕ ಗೆಳೆತನ ಸಾಧಿಸುವ ಹಂಬಲ ಈ ಬದುಕಿನೊಂದಿಗೆ ನನಗೆ ಮತ್ತು ನನ್ನೊಂದಿಗೆ ನನಗೆ - ಅಲ್ಲದೇ __________________ ಕೂಡ... 

ಒಂದಷ್ಟು ದೂರ ಒಂದಷ್ಟು ಹೆಜ್ಜೆ ಜೊತೆ ನಡೆವ ಹಂಬಲವಿತ್ತು ಮೊದಲು ಕೈಕುಲುಕಿದಾಗ... ಹಂಚಬೇಕಾದದ್ದನ್ನು ಹೇರಲು ಹೋಗಿ ಜೊತೆಯಾದ ಹೆಜ್ಜೆಗಳಲಿ ಭಾರ ತುಂಬಿದೆ... ಇಂದೀಗ ಒಂಟಿ ಹೆಜ್ಜೆಗಳ ದಾರೀಲಿ ಬೆಸೆದಿದ್ದ ಭರವಸೆಯ ಹಸ್ತಗಳ ಘನತೆ ಅರಿವಾಗಿ, ನಿನ್ನೆಗಳ ನೆನಪಲ್ಲಿ ಉಸಿರೂ ಭಾರವೆನಿಸುತಿದೆ... ಆದರೆ ನನ್ನೊರಟು ಭಾವಗಳ ಸುಳಿಗೆ ಸಿಕ್ಕಿ ಕಂಗಾಲಾಗಿರೋ ಆ ಮನಗಳ ಹಗುರಾಗಿಸೋ ವಿದ್ಯೆ ಗೊತ್ತಿಲ್ಲ ಹಾಗೂ ಬದುಕಿಗೋ ಹಿಮ್ಮುಖ ಚಲನೆಯ ಕಲ್ಪನೆಯೂ ಇಲ್ಲ... 

ಬೆಳಕೆಂದರೆ ಬೆಳಗುವುದೆನ್ನುವರು... ಬೆಳಕೆಂದರೆ ಬೆತ್ತಲು ಕೂಡ... ಒಮ್ಮೊಮ್ಮೆ ಹಗಲೆಂದರೆ ಕನಸುಗಳ ಹೆಣ ಹೂಳುವ ಖಾಲಿ ಖಾಲಿ ಬಯಲು ನಂಗೆ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

5 comments:

 1. ಸೂಪರ್ ವತ್ಸಣ್ಣ :-) ಮೊದಲ ಬಾರಿಗೆ ಮೊದಲ ಕಮೆಂಟ್ ಹಾಕೋ ಭಾಗ್ಯ ಸಿಕ್ಕಿದ್ದು ನಂಗೆ :-)

  ReplyDelete
 2. ಇನ್ನು ಪೋಸ್ಟಿನ ಬಗ್ಗೆ ಬರೋದಾದ್ರೆ.. ಹೌದು ವತ್ಸಣ್ಣ..ಮನಸ್ಸು ಅನ್ನೋದು ಒಂತರಾ ವಿಚಿತ್ರ. ಕೆಲವೊಮ್ಮೆ ಎಷ್ಟು ಶಿಸ್ತನ್ನು ರೂಢಿಸಬೇಕೆಂದರೂ ಕೈಗೆ ಸಿಕ್ಕದ ಮನಸ್ಸು ಕೆಲ ಸಲ ಸಂಸ್ಕಾರದ ಕಟ್ಟಿಗೆ ಒಳಬಿದ್ದು ಕತ್ತು ಬಗ್ಗಿಸಿ ನಿಂತು ಬಿಡುತ್ತದೆ. ನೆಟ್ಟಿಗೆ ಹೋದಾಕ್ಷಣ ಏನೆಂದರೂ ನಿಲ್ಲದೇ ಎಲ್ಲವನ್ನೂ ತಡಕೋ ಮನಸ್ಸು , ಬೆಳಗ್ಗೆ ಐದಕ್ಕೆ ಪೂಜೆಗೆ ಏಳಬೇಕೆಂದರೂ ಅಲಾರಮಿಲ್ಲದೇ ಎಬ್ಬಿಸಿ ಬಿಡುತ್ತೆ. ಅಲಾರಾಂಮಿಟ್ಟರೋ ಕಣ್ಣೇ ಬಿಡದ, ಕುಂಭಕರ್ಣನ ನಿದ್ದೆಯ ಭಾವ ಯಾರನ್ನೋ ಕಾಣುವ,ಏನೋ ಒಳ್ಳೆ ಕೆಲಸ ಮಾಡೋ ಭಾವವಿರುವಾಗ ರಾತ್ರಿಯೆಲ್ಲಾ ನಿದ್ದೆಗೆ ಸುಖವಿಲ್ಲದಂತೆ ಎಬ್ಬಿಸುತ್ತಿರುತ್ತೆ. ಚಂದ ಇದ್ದು :-)

  ReplyDelete
 3. "ಹಗಲೆಂದರೆ ಕನಸುಗಳ ಹೆಣ ಹೂಳುವ ಖಾಲಿ ಖಾಲಿ ಬಯಲು ನಂಗೆ...''
  ಬೆಳಗೆಂದರೆ ಹೊಸತೊಂದು ಉತ್ಸಾಹ... ಹೊಸತನದ ಪ್ರಾರಂಭ... ಅಂತಹ
  ಬೆಳಗಿನಲ್ಲಿ ನಮ್ಮ ಇರಾದೆ ಹೇಗಿದೆಯೋ ದಿನವೂ ಹಾಗೆಯೇ ಇರುತ್ತೆ.....
  ಕನಸುಗಳ ಹೆಣ ಹೂಳುವ ಇರಾದೆಯಾದರೆ ಹಾಗೆ..... ಹೊಸ ತುಡಿತಕ್ಕೆ ಬುನಾದಿ ಹಾಕಿದರೆ ಹಾಗೆ....

  ಕನಸುಗಳ ಬೇಲಿ ಜಿಗಿಯುವ ಉತ್ಸಾಹ ಬತ್ತದಿರಲಿ..

  ReplyDelete
 4. ರಾಘವಣ್ಣಾ ...
  ಈ ಕಾಮೆಂಟ್ ಯಾಕೋ ತುಂಬಾ ಇಷ್ಟವಾಯ್ತು.ಪ್ರತಿ ಬಾರಿ ಪಾಸಿಟಿವ್ ಫೀಲ್ ಕೊಡೋ ,ಚಂದದ ಭಾವಗಳಲ್ಲಿ ಪದಗಳ ತೇಲಿಬಿಡೋ ನಿಮ್ಮ ಕಾಮೆಂಟ್ ಗಳು ಎಂತಹವರನ್ನೂ ಪ್ರೋತ್ಸಾಹಿಸುತ್ತೆ . ಬದುಕ ಪ್ರೀತಿ ತುಂಬುತ್ತೆ .
  ಚಂದಾ ...

  ಶಿಸ್ತಿನ ಒತ್ತಡ ಒಮ್ಮೊಮ್ಮೆ ಅನಿವಾರ್ಯವೂ ಆಗಿಬಿಡುತ್ತೇನೋ ಅಲ್ವಾ ?
  ತುಂಬಾ ಭಾವಗಳಿವೆ ಅನಿಸ್ತು ...ಹತ್ತಿರವಾಯ್ತು ಈ ಭಾವ ಬರಹ ವತ್ಸಾ.

  ReplyDelete
 5. Sooper Shreee....

  ಬೆಳಕೆಂದರೆ ಬೆಳಗುವುದೆನ್ನುವರು... ಬೆಳಕೆಂದರೆ ಬೆತ್ತಲು ಕೂಡ... ಒಮ್ಮೊಮ್ಮೆ ಹಗಲೆಂದರೆ ಕನಸುಗಳ ಹೆಣ ಹೂಳುವ ಖಾಲಿ ಖಾಲಿ ಬಯಲು ನಂಗೆ...
  Ishtavaaytu....:)

  ReplyDelete