Friday, October 9, 2020

ಗೊಂಚಲು - ಮುನ್ನೂರಾ ನಲವತ್ತು ಮತ್ತಾರು.....

ತನ್ನತನದ ಬಣ್ಣ.....

ನಾಳೆ ನಾಳೆ ಅಂಬರು - ನಾಳೆಗಳ ಭರವಸೆಯ ಉಂಬುವವರು...
ಆದರೆ,
'ಹಿಂಗ್ ಹೋಯ್ ಹಂಗ್ ಬಂದೆ' ಅಂತಂದು ನನ್ನ ನಂಬಿಸಿ ಹೊರಟ ನಿನ್ನ ಹೇಳಿಕೆಯ ಆ ನಾಳೆ ಬರುವುದೇ ಇಲ್ಲ...
ಕಾಯುತ್ತಾ ಕೂತ ಎದೆಗಣ್ಣಿನ ಹಸಿಯಲ್ಲಿ ಕಲೆಸಿ ಹೋದ ಒಣ ಹಾದಿಯ ಧೂಳು ನನ್ನೇ ಶಪಿಸುತ್ತದೆ - "ಬುದ್ಧಿ ಬೇಡ್ವಾ ನಿಂಗೆ..."
ಹೌದು,
ಬುದ್ಧಿ ಹೃದಯದ ಖೈದಿಯಾಗಿದೆ...
ಅದಕೆಂದೇ,
ಅಲೆದು ಅಲೆದು ನಿನ್ನ ಸೇರಿ ಅಸೀಮ ವಿಸ್ತಾರ ಹೊಂದಿಯೇನೆಂಬ ಇರಾದೆಯಿತ್ತು ಹೊರಡುವಾಗ - 'ಬರಿ ಮಾತು, ಸುಳ್ಳು ಮೌನ'ಗಳ ಕಾಯುತ್ತಾ ಕಾಯುತ್ತಾ ನಿತ್ರಾಣನಾಗಿ ಕಳೆದೋಗಿದ್ದೇನೆ ಕಾರ್ಗತ್ತಲ ನಿರ್ವಾತದಲ್ಲೀಗ...
ನನ್ನನೇ ನಂಬದ ನಾನು ನಿನ್ನ ನಂಬಿ ಸಾಗಿದ ಹಾದಿಯ ಸೋಜಿಗವಾದರೂ ಏನು...!!
#ಎದೆಯ_ಹಾಡದು_ಬುದ್ಧಿಗೆ_ಅರಗದ_ತೌಡು...
↢↡↟↜↝↟↡↣

ಬಯಲಿಗೆ ಗೋಡೆ ಕಟ್ಟಿ ಬೆಳಕಿನ ಬಲಿ ಕೇಳುತ್ತಾರೆ - ಹಳೆಯದೊಂದು ನಗೆಯ ಕಂದೀಲಿನ ಮಸಿ ಒರೆಸಿದೆ - ಮತ್ತೆ ಎಂದಿನಂತೆ ದಿನಮಣಿ ಛಾವಣಿ ಏರಿದ...

"ಬದುಕು ಬಾಗಿಸಿದಷ್ಟೂ ಮನಸು ಮಗುವಾಗಬೇಕು...
ನನ್ನ ಕನ್ನಡಿಯಲ್ಲಿ ಕಂಡ ನಾನು ನನಗೇ ಬೆರಗುಣಿಸಬೇಕು..."

ನಾಳೆಗಳಿಗೆ ಬೇಕಾದ ನೆನಹುಗಳ ಬುತ್ತಿಯನ್ನ ಇಂದು ಕೈಯ್ಯಾರೆ ಕಟ್ಟಿಕೊಳ್ಳಬೇಕು ನಾನು...
ನೆನಪಿನೂಟಕೆ ಬೆಲ್ಲ ಇದ್ದಷ್ಟೂ ಕಮ್ಮಿಯೇ - ಇಂದಿನ ಬಾಳೆಲೆಯಲಿ ಸಿಹಿ ತುಂಬಿಕೊಳ್ಳಲಾಗದೇ ಹೋದವನ ನಾಳೆಗಳೂ ಅಷ್ಟು ಕಹಿಯೇ...

ಕನಸೇ, ಕಸುವಳಿಯುವ ಮುನ್ನ ಸಿಕ್ಕಿ ಬಿಡು ಹಿಡಿಯಷ್ಟಾದರೂ  - ನಗೆಯೇ, ಜೊತೆಯಾಗು ಬಾ ಬಾಗಿಲಿಗೆ ಬಂದಾಗ ಜವನಿಗೆ ಪಡಿ ನೀಡುವಷ್ಟಾದರೂ...
#ನನ್ನ_ನಗು_ನನ್ನ_ದೀಪ...
↢↡↟↜↝↟↡↣

ಯಾರೇ ಪ್ರೀತಿ, ಅಕ್ಕರೆ, ಕಾಳಜಿ, ಕಾಮ ಇವನೆಲ್ಲ ಅವವೇ ಹೆಸರಿನಲ್ಲಿ ಅಥವಾ ಸಹಜ ನೇಹದ ಆಪ್ತತೆಯ ಪಾತಳಿಯಲ್ಲಿ ಕೊಡ ಹೋದರೆ ಇಲ್ಲಾ ಕೊಟ್ಟರದು ಸಂತೆಯೊಳಗಣ ಅನಾಥ ಕೂಗಾಗುವುದೇ ಹೆಚ್ಚು...
ಅದೇ ಅವಕ್ಕೆಲ್ಲ 'ಪ್ರೇಮ'ದ ಹೆಸರಿಟ್ಟು ಬಣ್ಣ ಬಳಿದು ಎದುರಿಗಿಟ್ಟರೆ, ಆಹಾ!!! ತಲೆಯ ಮೇಲೆ ಹೊತ್ತು ಉತ್ಸವವೇ ನಡೆಯುತ್ತದೆ ಕೊಟ್ಟವರದ್ದು...
ಪಾವಿತ್ರ್ಯದ ಪ್ರಭಾವಳಿಯ ಹೆಸರಿನ ನಶೆ ಬಲು ದೊಡ್ಡದು ಸಾಖೀ...
ಪಡಖಾನೆಯ ನಸುಗತ್ತಲಲಿ ತೇಲಿದವನಿಗೆ ಭ್ರಮೆಗಳ ಅಮಲು ಸುಖ ಅಂತ ಗೊತ್ತಿತ್ತು; ಆದ್ರೆ, ಚಂದ ಹೆಸರಿನಲ್ಲಿ ಅದು ಇನ್ನೂ ಸುಖ ಅಂತ ಗೊತ್ತೇ ಆಗ್ಲಿಲ್ಲ ನೋಡು...!!!
ಉಹೂಂ, ಬೇಡ ಬೇಡ -
ಭಾವಕ್ಕೆ ಕೊಡೋ ಅಗ್ದೀ ಚಲೋ ಹೆಸರ ರಂಗಿನ ಲಾಭ ನಂಗೆ ಗೊತ್ತೇ ಆಗದಿರಲಿ...
↢↡↟↜↝↟↡↣

ಖಾಲಿ ಹಾದಿಗಳಿಗಿಂತ ಭರ್ತಿ ತುಂಬಿದ ರಸ್ತೆಗಳೇ ಹೆಚ್ಚಿನ ವೇಗವನ್ನು ಪ್ರಚೋದಿಸುತ್ತವೆ ಇಲ್ಲಿ...
ಹಸಿರು, ಹಳದಿ, ಕೆಂಪುಗಳ ಓಡು, ನಿಧಾನ, ನಿಲ್ಲು ಎಂಬ ತಟವಟಗೊಳಿಸೋ ಸಂಕೇತಗಳು...
ಚದರಡಿಗಳ ಅಳತೆಯಲ್ಲಿ ನಿರ್ಜೀವ ಕಟ್ಟಡಗಳ ಗುಪ್ಪೆ ಗುಪ್ಪೆ...
ಕಣ್ಣ ಗೋಲದ ತುಂಬಾ ಆ ಸಿಮೆಂಟಿನ ಗೂಡುಗಳ ಮೈಗೆ ಮೆತ್ತಿದ ತರಹೇವಾರಿ ಬಣ್ಣಗಳು...
ಅರ‍್ರೇ,
ಬಣ್ಣಗಳೆಂದರೆ ಭಾವದ ಜೀವತಂತುಗಳಲ್ಲವಾ...!!
ಕಾಲನ ಚಲನೆಯಲ್ಲಿ ಜಡದ ಆಯುಷ್ಯಕ್ಕೂ ಚಲನೆ ಇದೆಯಲ್ಲ - ಅಲ್ಲಿಗೆ ಈ ಇಮಾರತುಗಳೂ ನನ್ನೊಂದಿಗೆ ಓಡುತ್ತಿವೆ...
ಅದೇ ಓ ಆ ಕಟ್ಟಡದ ಆಚೆ ಬದಿಯ ಖಾಲಿಯಲ್ಲೇ ನಿತ್ಯ ಮುಳುಗೇಳುವ ಸೂರ್ಯ ಚಂದ್ರರ ಬಿಡಾರವಿದೆ...
ಸೂರ್ಯ ಹಾಗೂ ಮೋಡಗಳ ಮಿಂದು ಮಾಸಿದ ಹೊರ ಮೈ, ಒಳ ಕೋಣೆಯಲ್ಲಿ ಪ್ರೇಮ ಬೆವರುವ ರೋಮಾಂಚಕ್ಕೆ ಮೂಕ ಕಣ್ಣಾಗುವ ಮೋದ, ಅಡುಗೆ ಮನೆಯ ಸಿಡಿಮಿಡಿ, ಜಗುಲಿಯ ಹಾಳು ಹರಟೆ ಕೇಕೆಗಳಿಗೆಲ್ಲ ಸಾಕ್ಷಿಯಾಗುವ ಜಾಣ ಕಿವುಡುತನ, ಎಳೆ ಕಂದನ ಮೊದಲ ಗೀರು ಅಕ್ಷರಾಭ್ಯಾಸಕ್ಕೆ ತನ್ನೆದೆ ಬಯಲ ತೆರೆದಿಟ್ಟ ಒಳ ಮೈಯ್ಯ ಮಮತೆಯ ಪುಳಕ, ಬೆಳದಿಂಗಳ ಗಾಳಿ ನೆರಳ ತೆರೆಯಾಟಕೆ ಮಿರುಗುವ ಕಿಟಕಿ ಗಾಜಿನ ಕಂಪನ...
ಓಹ್!!!
ಎಷ್ಟೆಲ್ಲಾ ಮಾತುಗಳಿವೆ ಈ ಬಣ್ಣದ ಪೌಳಿಗಳ ಒಳ ಹೊರಗಿನ ಒಡನಾಟದಲಿ...
ಬಣ್ಣಗಳು ಕಣ್ಣಿಗೆ ಹೇಳುವ ಕಥೆ, ನಿಶ್ಚಲತೆ ಎದೆಯ ಕಡೆಯುವ ಕಥೆ, ಪುಟ್ಟ ಮಾಡಿನ ನೀಲಿಗಂಟಿದ ಹಕ್ಕಿ ಹಿಕ್ಕೆಯ ದೃಷ್ಟಿ ಬೊಟ್ಟಿನ ಕಥೆ, ಮಾತು ಬಾರದ ಕಿಲ್ಲೆಗಳು ಭಾಷೆ ಅರಿತವರ ಹಾಡ ಕಾಯುವ ಚಂದ ಕಥೆ - ಇಂಥವೇ ಏಸೊಂದು ಕಥೆಗಳ ಕೂಟ ಈ ಗೋಡೆ ಸಾಲುಗಳಲಿ...
ಕೇಳೋ ಕಿವಿಯಿಲ್ಲದ ನಾನು ಈ ಥಾರು ರಸ್ತೆ, ಆ ಗೋಡೆಗಳ ಸಮೂಹಗಳನೆಲ್ಲ ನಿರ್ಜೀವ ಅನ್ನುವುದು ಎಷ್ಟು ಸರಿ...!?
ಉಹೂಂ,
ಚೂರು ಕಣ್ಣಾಗಬೇಕು ನಾನು, ಇಷ್ಟೇ ಇಷ್ಟು ಕಿವಿ ತೆರೆಯಬೇಕು - ಅನ್ನವಷ್ಟೇ ಅಲ್ಲ ಬದುಕಿಗೆ ಬಣ್ಣವೂ ಇದೆ ಇಲ್ಲಿ...
ಮೈಗೆ ರಾಚುವ ಧೂಳ ಜೊತೆಗೇ ಮನಸ ಮಿಂಟುವ ಪ್ರೀತಿ ನಗೆಯೂ ತೇಲುತ್ತದೆ ಅದೇ ಗಾಳಿಯಲ್ಲಿ...
ಅನುಭಾವದ ಪಲುಕುಗಳ ಹೇಳಲು ಬಾರದವನೂ ಇಷ್ಟೆಲ್ಲಾ ಹೇಳಬಹುದು...
#ನಗರದ_ಬೀದಿಗಳು...
↢↡↟↜↝↟↡↣

ಯಾರೋ ಹಾರಿಬಿಟ್ಟ ಬಾಲಂಗೋಚಿ ಗಾಳಿಪಟ ಗಾಳಿಗೊಲಿದೇ ಕುಣಿಯುತಿದೆ ಅಂದುಕೊಳ್ತೇನೆ...
ಜೀವವಿಲ್ಲದ ರೆಕ್ಕೆಯನೂ ಗಾಳಿ ತೇಲಿಸುತ್ತದೆ - ಪ್ರೇಮಪೂರ್ಣ ದೊಡ್ಡಸ್ತಿಕೆ...
ಹಪ್ಪು ಹಳೇಯ ನಗುವ ನೆನಪಾದರೂ ಅಷ್ಟೇ ಆ ಕ್ಷಣಕ್ಕೆ ಮೊಗವರಳುತ್ತದೆ - ಅವಳು ಸುಖಾಸುಮ್ಮನೆ ಭುಜ ಸವರಿದಂತೆ...
ಉಸಿರ ಉರಿಗೆ ವಿಷಾದದ ಜಿಡ್ಡು ಅಂಟಿಬಿಟ್ಟರೆ ಅಲ್ಲಿಗೆಲ್ಲ ಮುಗಿಯಿತು...
ಈ ಸಂಜೆಗಳಿಗೆ ಅದೇನು ಶಾಪವೋ, ಬೆಳಕಿಗೆ ಬೆನ್ನಾಗಿ ಇರುಳಿಗೆ ದಾಟುವ ಅನಾಥ ಸಂಕದಂಥೆ ತೋರುತ್ತವೆ - ಬೆನ್ನಮೇಲೆಲ್ಲ ಹಗಲು ಊರಿದ ಪಾದಕಂಟಿದ ಧೂಳು, ಬೆವರು, ಬಣ್ಣಗಳ ಕಲಬೆರಕೆ ಗುರುತಿನ ನಿತ್ಯ ನವೆ...
ಹೌದೂ, ಆ ಗಾಳಿಪಟ ಗಾಳಿಗೆ ಒಲಿದೇ ಆಡುತ್ತಿದೆಯಾ...?
ಹಾದಿಯ ನಡೆದ ಕಸುವು ಮತ್ತು ನಗೆಯ ಚಿವುಟಿದ ನೋವು ಎರಡೂ ನೆನಪನ್ನು ಒಟ್ಟೊಟ್ಟಿಗೆ ಕೆದಕುತ್ತದೆ ಈ ಎದೆಗೆ ಹೆಟ್ಟಿದ ಮುಳ್ಳು...
#ಸಂಜೆಗೆಂಪು...
↢↡↟↜↝↟↡↣

ಯಾರದೇ ಪಟ ನೋಡಿ ಸುಂದರ ಅಂದಷ್ಟು ಸುಲಭವಲ್ಲ ಎದುರು ನಿಂತು ಕಣ್ಣೊಳಿಳಿದು ನೀ ಚಂದ ಅನ್ನೋದು...
#ತನ್ನತನದ_ಬಣ್ಣ...
%%%

ಕೇಳಿಲ್ಲಿ,
ಬಿಗಿದ ಮುಷ್ಟಿಯಂತಿರೋ ಈ ಎದೆ ಯಾವ ಕ್ಷಣದಲ್ಲೂ ಒಡೆದೋಗ್ಬಹುದು...
ಆ ಹಾದೀಲಿ ನೀ ಕಂಡು ಕಣ್ಣಲ್ಲೇ ಕಣ್ಣ ಮೀಟಿ ನಕ್ಕ ಖುಷಿಯ ಉಚ್ಛ್ವಾಸದಲ್ಲೂ - ಅಂತೇನೇ, ನೀ ನಿನ್ನ ಹಂಗೆ ನೋಡ್ಬೇಡಾ ಅಂತಂದು ಕಣ್ಣ ತಿರುವಿ ಆ ತಿರುವಲ್ಲಿ ಕರಗಿ ಹೋದಾಗಿನ ನಿಶ್ವಾಸದಲ್ಲೂ...
ಈ ಇವನ ಬಡ ಎದೆ ಹೇಗೂ ಒಡೆದೋಗ್ಬಹುದು...
#ಕಾಣಬೇಡ_ಕಳೆದೋಗಲೂಬೇಡ...
↢↡↟↜↝↟↡↣

"ನಿಂತಲ್ಲೇ ನಿಂತವನು ದಾಟಿ ಹೋದವರ ಬಗ್ಗೆ ನಿನ್ನೆಗಳ ಹೊರತು ಇನ್ನೇನ ಹೇಳಲಾದೀತು..."

"ಕಳ್ಕೊಂಡಲ್ಲೇ ಹುಡುಕ್ಬೇಕೋ ಮಳ್ಳಾ ಅಂತಿದ್ಲು ಯಾವಾಗ್ಲೂ - ಅವಳಂಗಳಕೆ ಹೋಗಿ ಹೆಸರು ಕೂಗಿದೆ, ಕನಿಷ್ಠಪಕ್ಷ ಕಿಟಕಿ ಬಾಗಿಲನೂ ತೆಗೆಯದೇ ಕತ್ತಲಾದ್ಲು..."

ಹುಡುಕುವ ಹುಚ್ಚಾಟ ಮುಗಿದ ಹೊತ್ತಿಗೆ ಇಲ್ಲೀಗ,
ನೀರವ ಸಂಜೆ - ಖಾಲಿ ಖಾಲಿ ಮನದ ಪಾತ್ರೆ - ಅಕಾರಣ ಅಲವರಿಕೆ...
ನನ್ನೊಳು ನಾನಿಲ್ಲದಿರುವ ನಿಸ್ಸತ್ವದ ಒಣ ಎಲೆಯ ಹಗುರತೆ...
ನನ್ನ ಸುಖದ ನಿದ್ದೆ ಅಂದರೆ ಅವಳ ತೋಳ್ಸೆರೆಯದ್ದು - ಇಲ್ಲಾಂದ್ರೆ ನಾನೇ ಹುಡುಕಿದರೂ ಸಿಗಲಾರದ ಆ ನಿರ್ವಾತದ್ದು...

ಎಲ್ಲ ಅವಳ ಹಾಡುವಾಗ ತಲೆದೂಗಲಷ್ಟೇ ಶಕ್ತ - "ನಾನು ಮೂಕ ಹಕ್ಕಿ..."
ಮತ್ತೇನಿಲ್ಲ,
ಎದೆಯ ನೆಲ ಬೀಳು ಬಿದ್ದಿದ್ದಕ್ಕೆ ಕಣ್ಣ ಕೊಳ ಬತ್ತಿದ್ದೇ ಸಾಕ್ಷಿ...
#ಕನಸ_ಕಾಯಲಾಗದ_ಜೀತ...
↢↡↟↜↝↟↡↣

ಎದೆಯ ಪ್ರಾಮಾಣಿಕ 'ಪ್ರೀತಿ'ಗಿಂತ ದೊಡ್ಡ 'ಗೌರವ' ಬೇರಿಲ್ಲ - ಎಂಥಾ ಹಿರಿತನಕ್ಕೂ, ಯಾವುದೇ ಬಂಧ ಬಾಂಧವ್ಯಕ್ಕೂ...
#ಕೊಡುಕೊಳ್ಳುವಿಕೆಯ_ಜಾದೂ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

No comments:

Post a Comment