ಇರಬೇಕಿತ್ತಿನ್ನೂ ನೀನು.....
ಪ್ರೀತಿಯ ನೆನಪಾದರೂ,
ನೆನಹುಗಳನೇ ಪ್ರೀತಿಸಬೇಕಾಗಿ ಬಂದರೂ,
ಅವಳ ಮಡಿಲ ಧ್ಯಾನವೆಂಬುದು ರುದಯ ಮಿಡಿತದ ನಿತ್ಯಾಗ್ನಿ...
ಒಳಿತನೇ ನುಡಿವ, ಮಿಡಿವ, ಪ್ರೀತಿ ಹರಸಿ, ಹಂಚುವ ಒಡಲ ನಗೆಯ ಶಕ್ತಿಸುಧೆಯ ನೆನಪಿನಾಲಾಪವೇ/ನೆನಹಿನಾರಾಧನೆಯೇ ಅಲ್ಲವೆ ಶುಭವೆಂದರೆ...
ನೆನಪು ಅಮ್ಮನಂತೆ - ಅಮ್ಮ ನೆನಪುಗಳ ಸಂತೆ...
ಅಮ್ಮ ಅಮ್ಮ ಬೆಳಗು - ಶುಭದಿನ... 🤱🫂
&&&
ನೂರು ನೂರಾರು ನಗು, ಮಾತು ಕಥೆಗಳ ಈಗಿದ್ದು ಈಗಿಲ್ಲ ಎಂಬಂತೆ ಕೊಂದು, ಎದೆಯ ಕಾವಿಗೆ ಶವದ ಶೀತಲವ ಶಾಶ್ವತವಾಗಿ ಸುರಿದು, ಒಂದು ಕ್ರುದ್ಧ ಮೌನವ ಸ್ಥಾಪಿಸಿ ಅಟ್ಟಹಾಸವ ಮೆರೆವ ಸಾವು...
ಆ ಮರಣ ವಾರ್ತೆಯ ಅನುಗಾಲವೂ ಮಣಮಣಿಸುವ ನೆನಪಿನ ಕೋಶ...
ಕಣ್ಣೆಷ್ಟು ಮಂಜಾದರೂ ಮಸುಕಾಗದ ಮನೆಯ ಮೂಲೆಯಲಿ ತಣ್ಣಗೆ ಮಲಗಿದ್ದವಳ ಸ್ಥಬ್ದ ಚಿತ್ರ...
ಬಯಲಲ್ಲೇ ನಿಂತರೂ ಬೆಳಕೂ ತೊಳೆಯಲಾರದ ಉಸಿರಿಗಂಟಿದ ಮುಟ್ಟುಚಟ್ಟಿನ ಕತ್ತಲು...
ನನ್ನೆದೆಯಲೂ ಉಳಿದದ್ದೀಗ ಚಿತ್ರದ ನಗುವೇ...
ಲೆಕ್ಕ ಮರೆಯಲು ಹೆಣಗುತ್ತಾ, ದಿನಗಳನೆಣಿಸುತ್ತಾ, ದಿನದೂಡುವ ಕರ್ಮ...
___ ದಿನವಿದು ಸೂತಕದ ತೇದಿ (೦೭-೦೭)...
ಹಲುಬಿ ಹಲುಬಿ ಬರೆದು ತೋರಿಕೊಂಡಷ್ಟು ನೋವು ಒಳಗಿದೆಯಾ ಎಂಬುದಲ್ಲ ಪ್ರಶ್ನೆ, ತೋಡಿಕೊಂಡಷ್ಟೂ ಆಯಾ ಕ್ಷಣಕ್ಕಾದರೂ ಬಾಧೆ ತಿಳಿಯಾಗಬಹುದಾ ಎಂಬ ಹಂಬಲ ಅಷ್ಟೇ...
ಹೆಣ ಹೊತ್ತ ಹೆಗಲು ಹಗುರಾದೀತು ಅಂತಲ್ಲ ಖಾಲಿತನದ ಭಾರಕ್ಕೆ ಬಾಳ ಬೆನ್ನು ಮುರಿಯದಿರಲೆಂಬ ಹಳವಂಡವಷ್ಟೇ...
___ ಎಲ್ಲ ಹೋಗುವವರೇ ಒಂದು ದಿನ ಎಂಬ ಅಪ್ರಿಯ ಸತ್ಯದೊಟ್ಟಿಗೇ ನೀನಿರಬೇಕಿತ್ತು ಇನ್ನಷ್ಟು ದಿನವಾದರೂ ಎಂಬ ಪ್ರೀತಿಯ ಆಶೆಯೂ ಸತ್ಯವೇ...
&&&
ತುಂಬಾ ಸುಖದಲಿರುವಾಗ ಧುತ್ತನೆ ಬಂದೆರಗುವ ಅನಾಥ ಭಾವದಲೆಯ ಹೊಡೆತಕ್ಕೆ ಕಗ್ಗಲ್ಲಿನೆದೆಯೂ ತಣ್ಣಗೆ ಕೊರೆಯುತ್ತದೆ...
ನೂರು ಪ್ರೀತಿಯ ನಗೆಯ ಸಂತೆಯ ನಡುವೆಯೂ ಅವಳ ಮಡಿಲ ಬಿಸುಪಿನ ಕೊರತೆ ಕರುಳ ಹಿಂಡುತ್ತದೆ...
ಮುಕ್ತ ಜಗಳವೊಂದಕ್ಕೆ ನಾಲಿಗೆ ಕಡಿಯುವಾಗ ಅವಳು ಇಲ್ಲಿಯದೆಲ್ಲದರಿಂದ ಮುಕ್ತವಾದದ್ದು ಕಡು ಸ್ವಾರ್ಥದಂತೆ ಕಂಡು ಕಾಡುತ್ತದೆ...
ಕಾರ್ಯ ಕಾರಣಗಳ ಉಗೋಡಾದ ವಿವರವಿಲ್ಲದ ಕರುಳ ಕಲಮಲದ ವಿಕ್ಷಿಪ್ತ ಸಂಜೆಗಳಲಿ ಜೋರು ಅವಳ ನೆನಪಾಗುತ್ತದೆ - ಒಳಗೇ ಕುದಿಯುವ ಕಣ್ಣ ಹನಿಗೆ ಕೊರಳು ಕಟ್ಟಿ ಕಡೆಯುತ್ತದೆ...
____ ಇದ್ದು ಕಾಯಬೇಕಾದವಳು, ಹೊರಟೂ ಪೊರೆಯುತಿರುವವಳು ನೆನಪಾಗಿ ಕಾಡುವಳು...
*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :)
No comments:
Post a Comment