Friday, March 8, 2013

ಗೊಂಚಲು - ಅರವತ್ನಾಕು.....


ಗೆಲುವಿನಂಗಳದಿ ಮೂಡುತಿದೆ ಗೆಜ್ಜೆ ಕಾಲ್ಗಳ ಹೆಜ್ಜೆ ಗುರುತು.....


ಕಾರ್ಯೇಶು ದಾಸಿ - ಕರಣೇಶು ಮಂತ್ರಿ - ಪೂಜ್ಯೇಶು ಮಾತಾ – ಕ್ಷಮಯಾ ಧರಿತ್ರಿ – ರೂಪೇಶು ಲಕ್ಷ್ಮಿ - ಶಯನೇಶು ರಂಭಾ ಎಂದು ಹೆಣ್ಣಿಗೆ ಹಲವಾರು ಶ್ರೇಷ್ಠ ಗುಣಗಳನ್ನು ಆರೋಪಿಸಿ, ತ್ಯಾಗ ಮೂರ್ತಿಯಾಗಿ ಚಿತ್ರಿಸಿ, ಹೊಗಳಿ ಅಟ್ಟಕ್ಕೇರಿಸಿ ಆಕೆಯ ಕಾರ್ಯ ವ್ಯಾಪ್ತಿಯನ್ನು ತನ್ನ ಮನೆಯ ಅಡಿಗೆ ಕೋಣೆ ಮತ್ತು ಶಯನಾಗಾರಕ್ಕೆ ಮಾತ್ರ ಸೀಮಿತಗೊಳಿಸಿದ ಪುರುಷ ಸಮಾಜ ಇಂದು ಸಣ್ಣಗೆ ಕಂಪಿಸುವಂತಾಗಿದೆ. ಕಾರಣ ಹೆಣ್ಣು ನಿಧಾನವಾಗಿ ಅಡಿಗೆ ಕೋಣೆಯ ಕಿಟಕಿಯಿಂದ ಆಚೆ ಗಂಡು ಕೇವಲ ತನ್ನದು ಎಂದುಕೊಂಡಿದ್ದ ಪ್ರಪಂಚದ ಕಡೆಗೆ ದೃಷ್ಠಿ ಬೀರಿದ್ದಾಳೆ. ತನ್ನ ಕಾರ್ಯ ವ್ಯಾಪ್ತಿಯನ್ನು ಪುರುಷನಿಗೆ ಸರಿಸಮನಾಗಿ ವಿಸ್ತರಿಸಿಕೊಂಡು ಬೆಳೆಯುತ್ತಿದ್ದಾಳೆ. ತಾನು ಕೂಡ ಪುರುಷನಂತೆಯೇ – ಕೆಲವೊಮ್ಮೆ ಆತನಿಗಿಂತ ಸಮರ್ಥವಾಗಿ – ಎಂಥ ಕ್ಷೇತ್ರದಲ್ಲೇ ಆಗಲೀ ದುಡಿಯಬಲ್ಲೆ – ಎಂಥ ಗೆಲುವನ್ನೇ ಆದರೂ ದಣಿಯದೆ ದಕ್ಕಿಸಿಕೊಳ್ಳಬಲ್ಲೆ – ತಾನು ಅಬಲೆಯಲ್ಲ ಸಬಲೆಯೆಂಬುದನ್ನು ತೋರಿಸಿಕೊಡುತ್ತಿದ್ದಾಳೆ. ಅಡುಗೆಯನ್ನೂ ಒಂದು ವಿಜ್ಞಾನವನ್ನಾಗಿ ರೂಪಿಸಿದ್ದಾಳೆ. ಅಡುಗೆಮನೆಯಿಂದ ಅಂತರೀಕ್ಷದವರೆಗೂ ಎಲ್ಲೆಡೆಯೂ ತಾನು ಸಲ್ಲಬಲ್ಲೆ ಎಂದು ತೋರಿಸಿಕೊಟ್ಟಿದ್ದಾಳೆ. ಸೈನಿಕ ಸೇವೆಯಂಥ ದೈಹಿಕ ಸಾಮರ್ಥ್ಯ ಬೇಡುವಂಥ ಕ್ಷೇತ್ರದಲ್ಲಿ ಕೂಡ ತನ್ನ (ಸಾಮರ್ಥ್ಯದ ಛಾಪು ಮೂಡಿಸಿದ್ದಾಳೆ) ಗೆಲುವಿನ ನಗು ಬೀರಿದ್ದಾಳೆ. ತನ್ನ ಅರಿವಿನ ಬೆಳಕಲ್ಲಿ ತನ್ನ ಸುತ್ತಣ ಸಮಾಜವನ್ನೂ ಬೆಳಗುವ ಜ್ಯೋತಿಯಾಗಿದ್ದಾಳೆ. 

ಈ ವಿಚಾರದಲ್ಲಿ ನಮ್ಮ ಗ್ರಾಮೀಣ ಪ್ರದೇಶಗಳ ಮಹಿಳೆಯರೂ ಹಿಂದೆಬಿದ್ದಿಲ್ಲ. ತಮ್ಮ ನಡುವೆಯೇ ಸಹಕಾರ ಸಂಸ್ಥೆಗಳು, ಸ್ವ-ಸಹಾಯ ಸಂಘಗಳನ್ನು ರೂಪಿಸಿಕೊಂಡು ತಾನು ಆರ್ಥಿಕವಾಗಿ, ಬೌದ್ಧಿಕವಾಗಿ ಸಾಮಾಜಿಕವಾಗಿ ಸದೃಢಳಾಗುತ್ತಾ ತನ್ನ ಗ್ರಾಮವನ್ನೂ ಅಭಿವೃದ್ಧಿಪಡಿಸುತ್ತಾ ಗಾಂಧೀಜಿಯವರ ಗ್ರಾಮ ಸಬಲೀಕರಣದ ಮೂಲಕ ದೇಶಾಭಿವೃದ್ಧಿಯ ಕನಸನ್ನು ಸಮರ್ಥವಾಗಿ ಸಾಕಾರಗೊಳಿಸುತ್ತಿದ್ದಾಳೆ. ಮಹಿಳೆ ತನ್ನನ್ನು ತಾನು ಸಮಾಜ ಕಟ್ಟುವ, ತನ್ನ ದೇಶವನ್ನು ವಿಶ್ವಮಟ್ಟದಲ್ಲಿ ಬಲಿಷ್ಠ ಶಕ್ತಿಯಾಗಿಸುವ ಮುಖ್ಯಭೂಮಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾಳೆ. ಇದಕ್ಕೆಲ್ಲ ಮಹಿಳೆಯಲ್ಲಿ ಮೂಡಿದ ತನ್ನೊಳಗಿನ ಸಾಮರ್ಥ್ಯದ ಅರಿವು ಮುಖ್ಯ ಕಾರಣ ಎನ್ನಬಹುದು. ಹೀಗಿರುವಾಗ ಮಹಿಳೆಗೆ ಪ್ರಾಥಮಿಕ ಮಟ್ಟದಿಂದಲೇ ಮೌಲ್ಯಾಧಾರಿತ, ಗುಣಮಟ್ಟದ ಶಿಕ್ಷಣವೂ ದೊರೆತರೆ ಖಂಡಿತ ಹೆಣ್ಣು ‘ಆದಿಶಕ್ತಿ’ ಎಂಬ ತನ್ನ ಬಿರುದಿಗೆ ಅನ್ವರ್ಥವಾಗುವುದರಲ್ಲಿ ಸಂಶಯವಿಲ್ಲ.

ಗಮನಾರ್ಹ ಸಂಗತಿ ಎಂದರೆ – ಇತ್ತೀಚಿನ ವರ್ಷಗಳಲ್ಲಿ ಗ್ರಾಮೀಣ ಪ್ರದೇಶಗಳ ಮಹಿಳೆಯರಲ್ಲೂ ಮೂಡಿದ ಅರಿವಿನ ಜಾಗೃತಿ. ತನಗಿರುವ ಅವಕಾಶಗಳನ್ನು ಅರಿತುಕೊಂಡು, ಆ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡು, ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ರಾಜಕೀಯ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ತನ್ನನ್ನು ತಾನು ಕ್ರಿಯಾಶೀಲವಾಗಿ ತೊಡಗಿಸಿಕೊಳ್ಳುತ್ತಿರುವ ಪರಿ ನಿಜಕ್ಕೂ ಶ್ಲಾಘನೀಯವೇ. ಸಹಕಾರ ತತ್ವವನ್ನು ಅರಗಿಸಿಕೊಂಡು - ಅಳವಡಿಸಿಕೊಂಡು - ಸ್ವ ಉದ್ಯೋಗ ಮಾರ್ಗಗಳನ್ನು ರೂಪಿಸಿಕೊಂಡು ಆರ್ಥಿಕ ಸ್ವಾವಲಂಬನೆ ಗಳಿಸಿಕೊಳ್ಳುತ್ತಿದ್ದಾಳೆ. ಇಂದು ಪ್ರತೀ ಹಳ್ಳಿಗಳಲ್ಲೂ ಒಂದಿಲ್ಲ ಒಂದು ಮಹಿಳಾ ಸ್ವಸಹಾಯ ಸಂಘ ಅಥವಾ ಸಹಕಾರ ಸಂಘಗಳು ತುಂಬ ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುತ್ತಿವೆ. ಹೊಲಿಗೆ, ಕೈಮಗ್ಗಗಳಂತಹ ಸಣ್ಣ ಬಟ್ಟೆ ಉದ್ಯಮ - ಹಪ್ಪಳ, ಸಂಡಿಗೆ, ಶ್ಯಾವಿಗೆ, ಸಿಹಿತಿಂಡಿಗಳಂತಹ ಆಹಾರೋತ್ಪನ್ನಗಳು – ಅರಿಶಿನ, ಕುಂಕುಮಗಳಂತಹ ಗೃಹೋಪಯೋಗಿ ಸಾಮಾನುಗಳ ತಯಾರಿಕೆ - ಹಳ್ಳಿಗಳಲ್ಲಿ ಮಾತ್ರ ಸಿಗತಕ್ಕಂತಹ ನಾರು, ಬೇರುಗಳ ಅಲಂಕಾರಿಕ ಸಾಮಗ್ರಿಗಳ ತಯಾರಿಕೆ ಮತ್ತು ಅವುಗಳ ಮಾರಾಟ. ಈ ಮೂಲಕ ಮಹಿಳೆ ಗಳಿಸುತ್ತಿರುವ ಆರ್ಥಿಕ ಸ್ವಾವಲಂಬನೆ ಹಾಗೂ ಆತ್ಮವಿಶ್ವಾಸ ಸಣ್ಣ ಮಟ್ಟದ್ದೇನಲ್ಲ. ಸಾಮಾನ್ಯ ಮಹಿಳೆಯೊಬ್ಬಳು ಉತ್ಪನ್ನಗಳ ಮಾರುಕಟ್ಟೆ ಮೌಲ್ಯವನ್ನರಿತು, ಸಮರ್ಪಕ ಮಾರಾಟ ತಂತ್ರಗಳನ್ನು ರೂಪಿಸಿಕೊಂಡು, ಸರಿಯಾದ ಮಾರುಕಟ್ಟೆಯನ್ನು ಸೃಷ್ಟಿಸಿಕೊಂಡು ಆರ್ಥಿಕವಾಗಿ ಗಟ್ಟಿ ಬೆಳವಣಿಗೆ ಸಾಧಿಸುವುದು ವಿಪರೀತ ಪೈಪೋಟಿಯ ಈ ಕಾಲದಲ್ಲಿ ಕಡೆಗಣಿಸುವಂಥ ವಿಷಯ ಅಲ್ಲವೇ ಅಲ್ಲ. ಬದಲಾಗಿ ಗೌರವಿಸುವಂಥದ್ದಾಗಿದೆ. 

ಹಾಗಂತ ಮೈಮರೆಯುವಂತಿಲ್ಲ. ಬೆಳವಣಿಗೆ ಮತ್ತು ಬದಲಾವಣೆ ನಿಂತ ನೀರಲ್ಲ. ಹೊರಗಿನ ತೀವ್ರ ಪೈಪೋಟಿಯೆದುರು ಗಟ್ಟಿಯಾಗಿ ನಿಂತು, ದೌರ್ಜನ್ಯಗಳ ಮೆಟ್ಟಿ, ತನ್ನ ದೌರ್ಬಲ್ಯಗಳ ಮೀರಿ ನಿಂತು ಇನ್ನಷ್ಟು ಬೆಳೆಯಬೇಕಿದೆ. ಉಳಿಯಬೇಕಿದೆ. ಏಕೆಂದರೆ ಹೆಣ್ಣು ಸ್ವಭಾವತಹ ಮೃದು ಮನಸಿನ ಜೀವಿ. ಅದಾಗಲೇ ಪ್ರಕೃತಿ ಅವಳಿಗೆ ನೀಡಿದ ಮೀರಲಾಗದ ಜವಾಬ್ದಾರಿಗಳೇ ಗಂಡಿನ ಜವಾಬ್ದಾರಿಗಳಿಗಿಂತ ಸಾಕಷ್ಟು ಪಟ್ಟು ಜಾಸ್ತಿ ಇದೆ. ತನ್ನ ಸ್ತ್ರೀ ಸಹಜವಾದ ಭಾವಗಳನ್ನೂ, ಕರ್ತವ್ಯಗಳನ್ನೂ ಬಿಟ್ಟುಕೊಡದೇ ತನ್ನದಲ್ಲದ ಗಂಡಸಿನ ಭಾವ - ಭಾದ್ಯತೆಗಳನ್ನೂ ಮೈಗೂಡಿಸಿಕೊಂಡು, ಎರಡರ ನಡುವೆ ಸಮತೋಲನ ಕಾಯ್ದುಕೊಂಡು ಬೆಳಗಬೇಕಿದೆ. ಪ್ರಕೃತಿ ನೀಡಿದ ಕರ್ತವ್ಯ ಸಂತಾನೋತ್ಪತ್ತಿ ಮತ್ತು ಸಂಸ್ಕೃತಿ ನೀಡಿದ ಸಂಸಾರ ನಿಭಾವಣೆಯ ಜವಾಬ್ದಾರಿಗಳನ್ನು ಮರೆಯದೇ ತನ್ನ (ಸ್ತ್ರೀ) ಭಾವಗಳನ್ನು ಉಳಿಸಿಕೊಂಡು, ಪರರ (ಪುರುಷ) ಭಾವಗಳನ್ನು ಆವಾಹಿಸಿಕೊಂಡು ಪುರುಷ ನಿರ್ಮಿತ ಸಮಾಜದಲ್ಲಿ ಅವನ ಸರಿಸಮನಾದ ಸ್ಥಾನ ಸ್ಥಾಪಿಸಿಕೊಳ್ಳಬೇಕಿದೆ. ಅದಷ್ಟು ಸುಲಭದ ಮಾತಲ್ಲ. ಬಹುಮಟ್ಟಿಗೆ ಆಕೆ ಆ ಸ್ಥಾನ ಸಂಪಾದಿಸಿಕೊಳ್ಳುವಲ್ಲಿ ಯಶಸ್ವಿಯಾದಂತೆ ಕಂಡುಬಂದರೂ ಅದು ಮೇಲ್ನೋಟದ ಅಂಕಿ ಸಂಕಿಗಳಷ್ಟೇ ಅನ್ನಿಸುತ್ತೆ. ಅವಳ ಇಚ್ಛೆಗೆ ಅನುಸಾರವಾಗಿ ಆಯ್ಕೆ ಮಾಡುವ ಅವಕಾಶವನ್ನು ಅವಳಿನ್ನೂ ಸಂಪೂರ್ಣವಾಗಿ ಹೊಂದಿಲ್ಲ. ಈ ಇಪ್ಪತ್ತೊಂದನೇ ಶತಮಾನದಲ್ಲೂ ಸ್ವಯಂ ಅಥವಾ ಗುಂಪು ನಿರ್ಣಯ ತೆಗೆದುಕೊಳ್ಳುವದರಲ್ಲಿ ವಿಶ್ವಾಸದಿಂದ ದೃಢಪಡಿಸುವ ಸಾಮಥ್ರ್ಯ ಹೊಂದುವಲ್ಲಿ ಮತ್ತು ಸ್ವಯಂ ಪ್ರೇರಿತವಾಗಿ ನಿರಂತರ ಬದಲಾವಣೆಯ ಬೆಳವಣಿಗೆ ಪ್ರಕ್ರಿಯೆಯಲ್ಲಿ ಭಾಗವಹಿಸುವಲ್ಲಿ ಅವಳಿನ್ನೂ ಸಂಪೂರ್ಣ ಸ್ವಾವಲಂಬಿಯಾಗಿಲ್ಲ. ಅಲ್ಲೆಲ್ಲ  ಹೆಚ್ಚಿನ ಸಂದರ್ಭದಲ್ಲಿ ಅವಳ ಕುಟುಂಬದ ನಿರ್ಣಯಗಳೇ ಪ್ರಾಧಾನ್ಯತೆ ಪಡೆಯುವುದು ಸಹಜವಾಗಿದೆ. ಇದಕ್ಕೆ ಆಕೆಯ ಸಹಜವಾದ ಮಾನಸಿಕ ಮೃದುತ್ವವೂ ಕಾರಣವಿರಬಹುದೇನೋ. 

ಇಂತಿಪ್ಪ ಹೊತ್ತಿನಲ್ಲಿ ಮಹಿಳೆ ದೃಢ ಮನಸ್ಸಿನಿಂದ ಸ್ವಯಂ ಪ್ರೇರಣೆಯಿಂದ ಸರ್ಕಾರ ಮತ್ತು ಸಮಾಜ ಕೊಡತಕ್ಕ ಅಲ್ಪ ಸವಲತ್ತು, ಸೌಲಭ್ಯಗಳನ್ನೇ ಇನ್ನಷ್ಟು ಪರಿಣಾಮಕಾರಿಯಾಗಿ ಬಳಸಿಕೊಂಡು ಇನ್ನೂ ಗಣನೀಯವಾಗಿ ಬೆಳೆಯಬೇಕಿದೆ. ಪಡೆಯಬೇಕಾದ ಮೌಲ್ಯಾಧಾರಿತ, ಗುಣಮಟ್ಟದ ಶಿಕ್ಷಣಕ್ಕೆ ಸಂಪೂರ್ಣ ಒತ್ತು ಕೊಡಬೇಕಿದೆ. ತಾನು ಶಿಕ್ಷಿತಳಾಗಿ ಮತ್ತು ತನ್ನ ಮುಂದಣ ಪೀಳಿಗೆ ಇನ್ನಷ್ಟು ಶಿಕ್ಷಣವಂತವಾಗುವಂತೆ ನೋಡಿಕೊಳ್ಳಬೇಕಾದ್ದು ಇಂದಿನ ಮಹಿಳೆಯ ಆದ್ಯ ಕರ್ತವ್ಯ. ಮಹಿಳಾ ಸಮಾಜವನ್ನು ಸಂಪೂರ್ಣ ಶಿಕ್ಷಣವಂತರನ್ನಾಗಿ ರೂಪಿಸಲು ಪೂರ್ಣ ಪ್ರಮಾಣದಲ್ಲಿ ಮಹಿಳೆಯೇ ತೊಡಗಿಕೊಳ್ಳಬೇಕಿದೆ. ಆ ಮೂಲಕ ಇನ್ನಷ್ಟು ಅವಕಾಶಗಳ ದಾರಿ ಮಾಡಿಕೊಂಡು ತನ್ನ ದುಡಿಯುವ ಸಾಮರ್ಥ್ಯವನ್ನು ಹಿಗ್ಗಿಸಿಕೊಳ್ಳಬೇಕಿದೆ. ಹಾಗಾದಲ್ಲಿ ಮತ್ತೊಮ್ಮೆ ಮಾತೃ ಪ್ರಧಾನ ಆಡಳಿತ ವ್ಯವಸ್ಥೆ ಬಂದರೂ ಆಶ್ಚರ್ಯಪಡಬೇಕಿಲ್ಲ.


ಜಗದ ಎಲ್ಲ ಹೆಣ್ಣು ಜೀವಗಳಿಗೂ 'ಮಹಿಳಾ ದಿನಾಚರಣೆ'ಯ ಹಾರ್ದಿಕ ಶುಭಾಶಯಗಳು...
ಮುಂಬರುವ ಪ್ರತಿ ದಿನವೂ ನಿಮ್ಮ ದಿನವಾಗಲಿ...


ಚಿತ್ರ ಕೃಪೆ : ಅಂತರ್ಜಾಲದಿಂದ...

ವಿ.ಸೂ. : ಈ ಬರಹ ಇ-ವಾರಪತ್ರಿಕೆ "ಪಂಜು"ವಿನ ಮಾರ್ಚ್ 8ನೇ 2013ರ  ವಿಶೇಷ ಸಂಚಿಕೆಯಲ್ಲಿ ಪ್ರಕಟವಾಗಿದೆ...
ಕೊಂಡಿ : http://www.panjumagazine.com/?p=1303

6 comments:

 1. ಶ್ರೀ… ಮಹಿಳೆ ಹೇಗೆ ಆಧುನಿಕವಾಗುತ್ತಿದ್ದಾಳೆ, ಸದ್ಯ ಆಕೆಯ ಬೆಳವಣಿಗೆ ಹೇಗಿದೆ, ನಗರ ಮಾತ್ರವಲ್ಲದೆ ಹಳ್ಳಿಗಳಲ್ಲೂ ಮಹಿಳಾ ಅಭಿವೃದ್ದಿ ಯಾವ ತೆರನಾಗಿದೆ ಮುಂತಾದ ವಿಚಾರಗಳ ಬಗ್ಗೆ ಮಾತಾಡಿ ಮುಂದಿನ ಆಕೆಯ ಕರ್ತವ್ಯಗಳೇನು ಎಂಬುದನ್ನು ನೀವು ಹೇಳಲು ಮರೆಯುವುದಿಲ್ಲ.. ಮಹಿಳಾ ದಿನಾಚರಣೆಗೆ ಸಕಾಲಿಕ ಲೇಖನ..

  ReplyDelete
 2. ತುಂಬಾ ಚೆಂದದ ಬರಹ ಇಷ್ಟವಾಯಿತು..

  ಧನ್ಯವಾದಗಳು ..

  ReplyDelete
 3. ಇಳೆಯಲ್ಲಿರುವ ಮಹಾ ಶಕ್ತಿಯ ಬಗ್ಗೆ ಸೊಗಸಾಗಿ ವರ್ಣಿಸಿದ್ದೀರ ಶ್ರೀ. ಹೆಣ್ಣು ವಿದ್ಯುತ್ ಶಕ್ತಿಯಿದ್ದಂತೆ ಸರಿಯಾದ ಬಳಕೆ ಬೆಳುಕು ನೀಡುತ್ತದೆ..ಇಲ್ಲದೆ ಹೋದರೆ ಶಾಕ್ ನೀಡುತ್ತೆ. ಸುಂದರ ಬರಹ ಇಷ್ಟವಾಯಿತು

  ReplyDelete
 4. ತುಂಬಾ ಚಂದದ ಬರಹ. ಪ್ರತಿಯೊಂದು ಸಾಲೂ ಅರ್ಥಪೂರ್ಣ . ಬರೆಯುತ್ತಿರಿ.

  ReplyDelete
 5. ಮಹಿಳಾ ದಿನಾಚರಣೆ ಗೌರವಿಸುತ್ತಾ ತಾವು ತಂಡ ಈ 64ನೇ ಸಂಚಿಕೆ ಬಹಳ ಮಾರ್ಮಿಕವಾಗಿದೆ.

  ReplyDelete