ರುಚಿಹೀನ ಮೌನ.....
ಅಂದರೆ ಅವಳೆನ್ನ ತೊರೆದು ಹೋದದ್ದನ್ನು ಕುಲಗೆಟ್ಟ ಕನಸೂ ಒಪ್ಪಿಕೊಂಡುಬಿಟ್ಟಿತೇನೋ...
ಇಂದಿನ ಮುಂಬೆಳಗಿನ ಹಸಿ ಕನಸಲ್ಲೂ ವಿಯೋಗದ್ದೇ ನಡುಕ... 😕
____ ಹನಿಯೊಡೆಯದ ಕಣ್ಣಲ್ಲಿ ಸಾ(ನೋ)ವಿಗೆ ಚಿರಯೌವನ...
*&*&*
ಅಮಾವಾಸ್ಯೆಯ ನಟ್ಟಿರುಳಲಿ ಅರೆ ತೆರೆದ ಕಿಟಕಿಯಾಚೆ ಕಣ್ಣ ನೆಟ್ಟು ತಾರೆಗಳ ಗುಚ್ಛಕೆ ಆಕಾರ ಕೊಡುತ್ತಾ ಕೂರುತ್ತೇನೆ - ಮಾಣೀ ಮನ್ಕ್ಯಳೋ ಅನ್ನುವ ನಿನ್ನ ರೂಪು ಅಲ್ಲೆಲ್ಲೋ ನಗಬಹುದೆಂದು ಹುಡುಕುತ್ತೇನೆ...
ಗಾಳಿಗಂಟಿದ ಕಿಟಕಿಯ ಕೀಲುಗಳ ತುಕ್ಕಿನ ವಾಸನೆ ಇನ್ನೂ ಉಸಿರಿರುವ ನನ್ನನ್ನು ನಂಗೆ ಪರಿಚಯಿಸುತ್ತದೆ...
____ ನಗಬೇಡ ನೀನು, ನಾ ಅಳುವುದಿಲ್ಲ...
ನನ್ನದೇ ಹಳೆಯ ಸಾಲುಗಳಲ್ಲಿ ನಿನ್ನ ನಗೆಯ ಹುಡುಕುವುದು - ಹೊಸತೇನೆಂದರೆ ಈಗ ಇದೊಂದೇ ಖಯಾಲಿ ನನ್ನದು...
ಹಿಂದಿರುಗಿ ನೋಡಿದಷ್ಟೂ ವಿದಾಯದ ಎದೆಯುರಿ / ಕಣ್ಣುರಿ ಬೆಳೆಯುತ್ತಲೇ ಹೋಗುತ್ತಿದೆ / ಬೆಳೆಯುತ್ತಲೇ ಹೋಗುತ್ತದೆ...
ಈ ಮೃತ ಮನಸಿನ ನೆತ್ತಿ ನೇವರಿಸಿದರೆ
ಎದೆ ಕಣಿವೆಯಲಿ ಗಂಗೆ ಉದ್ಭವಿಸಿಯಾಳು...
____ ರುಚಿಹೀನ ಮೌನ...
ಎದೆಯ ಭಾರಕ್ಕೆ ಮೈಸೋತು ಮಲಗಿದರೆ ಕನಸು ಇನ್ನೂ ಭಾರ ಭಾರ...
____ ನೀನಿರಬೇಕಿತ್ತು...
*&*&*
ಅವಳು ನಂಗ್‌ನಂಗೇ ಅಂತ ಕೊಟ್ಟು ಹೋದ ಪ್ರೀತಿ ಮತ್ತು ಬಿಟ್ಟು ಹೋದ ನಿರ್ವಾತ ಎರಡೂ ಮತ್‌ಮತ್ತೆ ಎದೆ ತುಂಬಿ ಕಾಡುತ್ತವೆ...
___ ಅವಳಿಲ್ಲದೆ ಕಳೆದು ಹೋದ ನನ್ನನ್ನು ಇಲ್ಲಿನ ಯಾವ ನಶೆ ಹುಡುಕಿ ಕೊಡಬಹುದು?!
*&*&*
ತಿಂಗಳಾಯಿತು, ಹೀಗೆ ಹೋಗಿ ಹಾಗೆ ಬಂದೆ ಅಂತಂದು ತವರಿಗೆ ಹೋದವಳು ಬರಲೇ ಇಲ್ಲ...
ಮೊದಲಾಗಿ ಅತ್ತಲ್ಲೇ ಕೊನೇಯ ಉಸಿರ ಚೆಲ್ಲಿದ್ದು ಎಷ್ಟು ಗಾಢ ಸಾಯುಜ್ಯ...
____ ಆದರೂ ಕರುಳ ಕುಡಿಗಳ ಹೀಗೆ ಸುಳ್ಳಾಡಿ ನಂಬಿಸಿದ್ದು ಸರಿಯಾ...
ಈ ಆಷಾಢಕ್ಕೆ ವಿರಹವಿಲ್ಲ - ಶ್ರಾವಣಕ್ಕೆ ಹಬ್ಬವಿಲ್ಲ...
ಎದೆ ಗೂಡಿನೊಳಗೆ ರಣ ಹೊಕ್ಕು ಕುಣಿವಾಗ ಒಂದಾದರೂ ರಮ್ಯ ಕವಿತೆ ಹುಟ್ಟುವುದಿಲ್ಲ...
ಭಾವದ ಸುಸ್ತಿಗೂ ತೋಯದ ಕಂಗಳಲಿ ಸರಾಗ ನಿದ್ದೆ ಕೂಡುವುದಿಲ್ಲ...
ಮಳೆ ಇರುಳ ಗುಡುಗುಡಿ - ಕರುಳ ಸುಡುತ್ತದೆ ಅವಳ ನೆನಪು...
____ ವಿಯೋಗ...
ನೋವಾದರೆ ನಾನೊಬ್ಬನೇ ನುಂಗಬಹುದು...
ಸುಖಕ್ಕೆ ಅವಳಿಲ್ಲದೇ ಅಪೂರ್ಣ...
ಇವಳ ತೋಳಲ್ಲಿ ಕರಗಿಹೋಗುವ ಕನಸಲ್ಲಿ ಕಳೆದೋಗಿ ಕಳೆದುಕೊಂಡ ಅವಳ ಮಡಿಲ ಮರೆಯಲಾದೀತಾ...
*&*&*
ಅವಳಿಲ್ಲದ ಲೋಕದಲ್ಲಿಯೂ ನಾನು ಖುಷಿಯಾಗಿಯೇ ಇದ್ದೇನೆ...
ಆದರೆ,
ಆಗೀಗ -
ನನ್ನ ಖುಷಿಯ ಕಾಣಲು ಅವಳಿಲ್ಲ ಅನ್ನುವ ಆಳದ ನೋವೊಂದು ಉಮ್ಮಳಿಸಿ ಬರುತ್ತದೆ...
______ ಚಿತೆಯ ಮೇಲವಳ ಇಳಿಸಿ ಬಂದ ಹೆಗಲ ಮುಟ್ಟಿಕೊಂಡು ಸೋಲುತ್ತೇನೆ...
ನಿದ್ರಿಸಬೇಕು ಮಗುವಂತೆ ಇಲ್ಲಾ ಅವಳಂತೆ...
____ ಮತ್ತೆ ನಗುವಾಗ...
ನನ್ನ ನಗುವಿನ ಹಿಂದೆ "ತನ್ನ ಸುತ್ತಿದ ಕತ್ತಲನೂ ಭರಪೂರ ಪ್ರೀತಿಸಿ ಎನ್ನ ಬೆಳಕಿಗೆ ನೂರು ಬಣ್ಣ ತುಂಬಿ 'ಆಯಿ' ಬದುಕಿ ತೋರಿದ ರೀತಿ ಮತ್ತು ನನ್ನ ಸುತ್ತಲಿನವರ ಪ್ರೀತಿಯ ಪಾಲು ಬಹುದೊಡ್ಡದಿದೆ..."
ಉಂಡ ಪ್ರೀತಿ ನಗೆಯಾಗಿ ತೇಗುವಾಗ ಎದೆಯ ತುಂಬಾ ಬದುಕ ಗೆದ್ದ ಭಾವ...
ನನ್ನೊಳಗೊಂದು ಮುಚ್ಚಟೆಯ ತಂಪನ್ನು ಬಿತ್ತಿದ ಅಂತೆಲ್ಲಾ ಪ್ರೀತಿಯ ಪರ್ಜನ್ಯಗಳಿಗೆ ಸದಾ ಕೃತಜ್ಞ...
ನವಿಲ್ಗರಿಯಮೇಲಿನ ಕಣ್ಣ ಹನಿಯಲ್ಲೂ ಕಾಮನಬಿಲ್ಲು...
ಇನ್ನೂ ಇನ್ನಷ್ಟು ಪ್ರೀತಿ ನಗಲಿ - ವಿಶ್ವಾಸ ವೃದ್ಧಿಸಲಿ....
____ ಎನ್ನಾತ್ಮದ ನುಡಿ ನಮನ...
ತೋಳು ಹಿಡಿದು ನಾನು ದೊಡ್ಡವನಾದೆ ಅಂದುಕೊಂಡೆ - ಮುನ್ನಡೆಸಿ ಅವಳು ಮಗುವಾದಳು...
ಮಣಮಣನೆ ಛಳಿಯ ಬಯ್ಯುತ್ತಾ, ಮೈಮರೆತು ನಿದ್ರಿಸಿದವನ ಮೈಮೇಲೆ ಕಂಬಳಿ ಹೊದೆಸಿ ಒಳಹೋಗುತಿದ್ದ ಆಯಿ ಎಂಬ ಬೆಚ್ಚಾನೆ ಲಾಲಿ ಈಗ ಮಗನ ನಿದ್ದೆಯ ಒದೆಯುವ ರಣ ಕನಸಲ್ಲಿನ ಗಡಗಡ ನಡುಗುವ ನೆನಪು...
ಮಗನೆಂಬ ಗೊಡ್ಡು ದೊಡ್ಡಸ್ತಿಕೆ - ಆಯೀ ಎಂಬ ಅಸೀಮ ಮಮತೆ...
No comments:
Post a Comment