Friday, December 2, 2016

ಗೊಂಚಲು - ಎರಡು ಸೊನ್ನೆ ಸೊನ್ನೆ.....

ಏನೋ ನಾಕು ಸಾಲು..... 
(ಇನ್ನೂರನೇ ಗೊಂಚಲಿನ ಸಂಭ್ರಮದ ಸರಿಗಮ...) 

"ಬದುಕು..."

ಅಲ್ಲೊಂದು ಕಡಲು - 
ಇಲ್ಲೊಂದು ಬಯಲು - 
ಮಂಜು ಮುಸುಕಿನ ಹಾದಿ ಕನಸ ಸುಡುವಂತೆ - 
ಹಗಲಲ್ಲಿ ಇರುಳ ಮಣಿ ಇದ್ದರೂ ಇಲ್ಲದಂತೆ - 
ಕನ್ನಡಿಯು ತೋರಿದಷ್ಟೇ ನನಗೆ ನಾ ಕಾಂಬುವುದು...

ಅಲ್ಯಾರೋ ಸತ್ತು - 
ಇಲ್ಯಾರೋ ಹಡೆದು - 
ಅಲ್ಲಿಗಿಲ್ಲಿಗೆ ಕಾಲನ ಲೆಕ್ಕ ಚುಕ್ತಾ - 
ಬೆನ್ನ ಕಾಣದ ಕಣ್ಣು ಹಿಡಿವ ಜಾಡು - 
ಅಲೆ ತೊಳೆವ ತೀರದಲಿ ಮರಳ ಗೂಡು...

ನನ್ನ ಬೊಗಸೆ - 
ನನ್ನ ನಡಿಗೆ - 
ಕನಸೊಂದು ದಡೆ - 
ನೆನಪಿನದೊಂದು ದಡೆ - 
ಯಾರೋ ಇಟ್ಟ ಎಡೆ - 
ಕಾಗೆಗೊಂದಗುಳು ಪಿತೃ ಋಣವಂತೆ...
_*_*_

ತಾರೆಗಳೊಕ್ಕಲು,
ಚಂದಿರ ಕಂದೀಲು,
ಖಾಲೀ ಖಾಲಿ ಸಾಗರ ಕಿನಾರೆ,
ಚೂರೇ ಚೂರು ಮದಿರೆ
ಮತ್ತು ಪೂರಾ ಪೂರಾ ನೀನು...
ಎದೆಗೇರುವ ನಶೆಯಲಿ
ಸಾವಿನಂಥ ಸಾವೂ ಹೊಟ್ಟೆ ಉರ್ಕೊಂಡು ಸಾಯುವಂತೆ
ಬದುಕನೇ ಆ ಇರುಳಿಗೆ ಬರೆದಿಟ್ಟೇನು...
_*_*_

ನಗು: ಹಿರಿ ಕಿರಿಯ ನೋವನೆಲ್ಲ ಹೆಪ್ಪಿಟ್ಟು ಬಚ್ಚಿಡುವ ಚಂದನೆ ಕುಸುರಿಯ ಭದ್ರ ತಿಜೋರಿ...
ನಗು: ಸಾವನೇ ಸಾಕ್ಷಿಯಾಗಿಸಿಕೊಂಡೂ ಬದುಕ ಉತ್ತಲು ಮತ್ತೆ ಮತ್ತೆ ಹೊಸ ಕನಸ ಹಡೆಯುವ ಅಕ್ಷಯ ಗರ್ಭ...
ನಕ್ಕುಬಿಡು ಉಕ್ಕುಕ್ಕಿ ನದಿಯಾಗಲಿ ಕಣ್ಣು - ಬರಿದಾಗಿ ಮತ್ತೆ ಹಸಿವಾಗಿ, ಗೆಲುವಾಗಲಿ ಎದೆಯ ಮಣ್ಣು...
_*_*_

ಮಲೆನಾಡು - ಬೆಳಗು - ಒಂಟಿ ನಡಿಗೆ ಮತ್ತು ಪೋಲಿ ಮನಸು...
(ನಿನ್ನೆ ಇಳಿಸಂಜೆಯಲೊಂದು ಸಣ್ಣ ಮಳೆಯಾಗಿದೆ...)

ಬಿಸಿಲ ಬೆಳಕನೂ ಸೋಸಿ ತುಸುವೇ ನೆಲಕುಣಿಸೋ ದಟ್ಟ ಕಾಡು - ಕಾಡುತ್ತದೆ ಥೇಟು ಅವಳ ಕಂಗಳಂತೆ...
ನಟ್ಟ ನಡುವಲೊಂದು ಸೊಟ್ಟ ಕಾಲು ಹಾದಿ - ಇರುಳೆಲ್ಲ ಕಾಡಿದವನ ಕೊರಳ ಘಮದಿಂದ ಕೊಸರಿ ಎದ್ದು ಸುಖೀ ಆಲಸ್ಯದಲಿ ಹೆಣೆದ ಅದೇ ಅವಳ ಹೆರಳ ಬೈತಲೆಯಂತೆ...
ನಾಚುತಲೇ ಚುಚ್ಚುತ್ತದೆ ನಾಚಿಕೆ ಮುಳ್ಳು - ನಿತ್ಯವೂ ಅವಳು ಕಣ್ಮುಚ್ಚಿ ನಗುತ ಆಸೆ ಬೆಂಕಿಯ ಬೆಚ್ಚನೆ ತುಟಿಗಳಲಿ ಅವನ ಎದೆ ರೋಮವ ಕಚ್ಚುವಂತೆ...
ಕಾಡು ಹೂವೊಂದು ತೊಟ್ಟು ಕಳಚಿ ಮೈಮೇಲಿಂದ ನೆಲಕ್ಕುರುಳುತ್ತೆ - ನಾಲ್ಕನೆ ದಿನದ ಮುಂಜಾನೆಯ ಸ್ನಾನ ಮುಗಿಸಿ ಕಮ್ಮಗಿನ ಒದ್ದೆ ಹೆರಳನು ಇನ್ನೂ ಮಲಗೇ ಇದ್ದವನ ಮುಖದ ಮೇಲಾಡಿಸೋ ಅವಳ ತುಂಟ ಹಸಿವಿನಂತೆ...
ಅಪರಿಚಿತ ಹಕ್ಕಿಯೊಂದರ ಕುಕಿಲು ಕಾಡಿನಾಳದಿಂದ - ಸುಖದ ಸುಷುಪ್ತಿಯಲಿನ ನಗುವಲ್ಲದ ಅಳುವಲ್ಲದ ಅವಳ ತೃಪ್ತ ಝೇಂಕಾರದಂತೆ...
ಕಾಗೆಯೊಂದು ಕೊಕ್ಕಿನಿಂದ ಬಿಂಕದ ಸಂಗಾತಿಯ ರೆಕ್ಕೆಗಳ ಸವರುತ್ತೆ - ಕಳೆದಿರುಳ ಬೆತ್ತಲೆ ಉತ್ಸವದಲಿ ಅವಳ ಮೈಯ ಏರು ತಿರುವುಗಳಲೆಲ್ಲ ಹುಚ್ಚನಂತೆ ಅಲೆದಲೆದು ನಾನೇ ಬಿಡಿಸಿದ ಮತ್ತ ಮುತ್ತಿನ ರಂಗೋಲಿಗಳ ಈಗ ಸ್ನಾನದ ಮನೆಯಲ್ಲಿ ನಾನೇ ಹುಡುಕುತ್ತೇನೆ ಹೊಸ ಆಸೆಯೊಂದಿಗೆ; ಅವಳೋ ಸುಳ್ಳೇ ನಾಚುತ್ತಾಳೆ...
ಇನ್ನೂ ಏನೇನೋ - ಹೇಳೋಕೆ ನಂಗೂ ಒಂಥರಾsss... ;)
_*_*_

ಸೋತು ಉಸಿರ ತುಂಬಲು - ಎಂದೋ ಮುರಿದಾಗಿದೆ ಕೊಳಲು; ಧಮನಿಯಲಿ ಬಲವಿಲ್ಲ ಪಾಂಚಜನ್ಯವ ಊದಲು...

ಕೊಳಲು: ಬದುಕಿನ ಸೌಂದರ್ಯ - ಬೆಚ್ಚನೆ ಕನಸು - ಮನಸಿನ ಬೆಳಕು...
ಪಾಂಚಜನ್ಯ: ಬದುಕಿನ ವಾಸ್ತವ - ಕಣ್ಣೆದುರಿನ ಸತ್ಯ - ಬುದ್ಧಿಯ ಘರ್ಜನೆ...
ಕೃಷ್ಣನೂ ಸೋತದ್ದೇ ಅಲ್ಲವಾ ಎರಡನೂ ಒಟ್ಟಿಗೇ ಸಲಹಲು...???

ಇಷ್ಟಾಗಿಯೂ - ಸದಾ ವಿರಹಿ ರಾಧೆ, ವಿಧಾತ ಕೃಷ್ಣ ಈರ್ವರೂ ಕನಲುತ್ತಾರೆ ನನ್ನೊಳು...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

3 comments:

 1. ನನ್ನ ಬೊಗಸೆ -
  ನನ್ನ ನಡಿಗೆ -
  ಕನಸೊಂದು ದಡೆ -
  ನೆನಪಿನದೊಂದು ದಡೆ -
  ಯಾರೋ ಇಟ್ಟ ಎಡೆ -
  ಕಾಗೆಗೊಂದಗುಳು ಪಿತೃ ಋಣವಂತೆ... - ಇದು ತುಂಬಾ ಇಷ್ಟವಾಯ್ತು.

  ಎಲ್ಲವೂ ವಿಭಿನ್ನ ಶೈಲಿಯ ಸಾಲುಗಳು ಎಂದಿನಂತೆ ನಾವು ಹೇಳುವುದೇ ಬೇಡ. ಬದುಕು ಬವಣೇ, ಸಾವು ನೋವು... ಎಲ್ಲಕ್ಕೂ ನಿಮ್ಮದೇ ಭಾವದ ಗೊಂಚಲು.

  ಅವಳ ನೆನಪು ಹಲವು ಬಗೆ... ರಾಧೆ-ಕೃಷ್ಣರು ನಿಮ್ಮೊಳಗೆ
  ಸಾಗುತಿರಲಿ ಭಾವನಾ ಸಂಮೋಹನ

  ReplyDelete
 2. ನನ್ನ ಬೊಗಸೆ -
  ನನ್ನ ನಡಿಗೆ -
  ಕನಸೊಂದು ದಡೆ -
  ನೆನಪಿನದೊಂದು ದಡೆ -
  ಯಾರೋ ಇಟ್ಟ ಎಡೆ -
  ಕಾಗೆಗೊಂದಗುಳು ಪಿತೃ ಋಣವಂತೆ...
  _*_*_

  ತಾರೆಗಳೊಕ್ಕಲು,
  ಚಂದಿರ ಕಂದೀಲು,
  ಖಾಲೀ ಖಾಲಿ ಸಾಗರ ಕಿನಾರೆ,
  ಚೂರೇ ಚೂರು ಮದಿರೆ
  ಮತ್ತು ಪೂರಾ ಪೂರಾ ನೀನು...
  ಎದೆಗೇರುವ ನಶೆಯಲಿ
  ಸಾವಿನಂಥ ಸಾವೂ ಹೊಟ್ಟೆ ಉರ್ಕೊಂಡು ಸಾಯುವಂತೆ
  ಬದುಕನೇ ಆ ಇರುಳಿಗೆ ಬರೆದಿಟ್ಟೇನು...

  ಈ ಸಾಲುಗಳಿಗೆಲ್ಲ ಹೊಗಳಿಕೆಯ ಮಾತುಗಳು ನನ್ನಲ್ಲಿಲ್ಲವೋ ಗೆಳೆಯ... ಎಲ್ಲಿಂದಲಾದರೂ ಕಡ ತಂದೇನು...

  ReplyDelete
 3. ನನ್ನ ಬೊಗಸೆ -
  ನನ್ನ ನಡಿಗೆ -
  ಕನಸೊಂದು ದಡೆ -
  ನೆನಪಿನದೊಂದು ದಡೆ -
  ಯಾರೋ ಇಟ್ಟ ಎಡೆ -
  ಕಾಗೆಗೊಂದಗುಳು ಪಿತೃ ಋಣವಂತೆ...
  _*_*_

  ತಾರೆಗಳೊಕ್ಕಲು,
  ಚಂದಿರ ಕಂದೀಲು,
  ಖಾಲೀ ಖಾಲಿ ಸಾಗರ ಕಿನಾರೆ,
  ಚೂರೇ ಚೂರು ಮದಿರೆ
  ಮತ್ತು ಪೂರಾ ಪೂರಾ ನೀನು...
  ಎದೆಗೇರುವ ನಶೆಯಲಿ
  ಸಾವಿನಂಥ ಸಾವೂ ಹೊಟ್ಟೆ ಉರ್ಕೊಂಡು ಸಾಯುವಂತೆ
  ಬದುಕನೇ ಆ ಇರುಳಿಗೆ ಬರೆದಿಟ್ಟೇನು...

  ಈ ಸಾಲುಗಳಿಗೆಲ್ಲ ಹೊಗಳಿಕೆಯ ಮಾತುಗಳು ನನ್ನಲ್ಲಿಲ್ಲವೋ ಗೆಳೆಯ... ಎಲ್ಲಿಂದಲಾದರೂ ಕಡ ತಂದೇನು...

  ReplyDelete