ಭಯವಾಗುತ್ತಿದೆ - ಅಮ್ಮ
ಬದುಕೆಂಬ ಗುಮ್ಮನ ವಿವಿಧ ರೂಪಗಳ ಕಂಡು...
ಸದ್ದೇ ಇಲ್ಲದೆ ಒಂದಷ್ಟು ದೂರ ಜೊತೆ ನಡೆದು -
ಅಷ್ಟೇ ನಿಶ್ಯಬ್ದವಾಗಿ ಸರಿದು ಹೋಗುವ
ಎಷ್ಟೊಂದು ಸಂಗತಿಗಳು ಈ ಪುಟ್ಟ ಬದುಕಲ್ಲಿ...
ಕೆಲವು ಬಣ್ಣ ತುಂಬಿ ಹೋಗುತ್ತವೆ...
ಇನ್ಕೆಲವು ಬಣ್ಣ ಅಳಿಸಿ...
ಹುಡುಕುತ್ತೇನೆ ನನ್ನ ನಾನು
ಇಡಿಯಾಗಿ
ಒಡೆದ ಗಾಜಿನ ಚೂರುಗಳಲ್ಲಿ...
ಕಂಡದ್ದು - ಸಾವಿರ ಮುಖಗಳು...
ಯಾವುದೂ ನನ್ನದಲ್ಲ - ಎಲ್ಲವೂ ನನ್ನದೇ...
ಘೋರಿ ಸೇರಿದ ಆಸೆ...
ಗರ್ಭ ತಳೆದ ಹೊಸ ಕನಸು...
ನಿನ್ನೆಯ ಹಳವಂಡ - ನಾಳೆಯ ಕನವರಿಕೆಗಳಲ್ಲಿ...
ಈ ಕ್ಷಣ -
ಅರ್ಧ ಜಗಿದುಗಿದ ತಾಂಬೂಲ...
ನನಗೇ ಅರ್ಥವಾಗದ ನನ್ನ ಬೇಕುಗಳು...
ಕೂಡುವ - ಕಳೆಯುವ
ಗುಣಿಸಿ - ಎಣಿಸುವ...
ಗೊತ್ತಿಲ್ಲದ - ಗುರಿಯಿಲ್ಲದ...
ಕೊನೆ ಕಾಣದ ಅಲೆದಾಟದಲ್ಲಿ...
ಕಳೆದು ಹೋಗುತಿದೆ ಬದುಕು
ಹಾಗೇ ಸುಮ್ಮನೆ...
*****
ಬದುಕೆಂಬ ಗುಮ್ಮನ ವಿವಿಧ ರೂಪಗಳ ಕಂಡು...
ಅಂದು - ನೀ ಹೇಳುತ್ತಿದ್ದ ಕತ್ತಲ ಗುಮ್ಮನ ಬಗೆಗೆ ಭಯವಾದರೆ ಅಡಗಿಕೊಳ್ಳಲೆನಗೆ ನಿನ್ನ ಸೆರಗ ಮರೆಯಿತ್ತು.
ನಿನ್ನ ಮಡಿಲ ಕಂಪಿಗೆ ಎಂಥ ಗುಮ್ಮನ ಭಯವನ್ನೂ ಓಡಿಸಬಲ್ಲ ಬೆಚ್ಚನೆಯ ಬಿಸುಪಿತ್ತು.
ನೋವಾದರೆ ಸಂತೆಯ ನಡುವೆಯೂ ದನಿ ತೆರೆದು ಅತ್ತು ಬಿಡಬಹುದಿತ್ತು.
ಏನೋ ಬೇಕೆನಿಸಿದರೆ ನಿನ್ನೆಡೆಗೆ ಕೈಚಾಚಿ ರಚ್ಚೆ ಹಿಡಿಯಬಹುದಿತ್ತು.
ನಿನ್ನ ಮುದ್ದಿಗೆ - ನನ್ನ ನಗುವಿಗೆ ಊರನೆಲ್ಲ ಸೆಳೆವಂಥ ಸ್ವಚ್ಛ ಸೊಬಗಿತ್ತು.
ಹರಿದ ಮಂಡಿಗೆ, ತರಚು ಗಾಯಕ್ಕೆ - ನಿನ್ನ ಮಮತೆಯ ಮುಲಾಮಿತ್ತು.
ಸೋತ ಆಟ, ಪಾಠಗಳ ನೋವಿಗೆ - ನಿನ್ನ ಭರವಸೆಯ ತಬ್ಬುಗೆಯಿತ್ತು.
ಆಡುತ್ತಾಡುತ್ತಲೇ ಓಡುವ ದಿನಗಳೊಂದಿಗೆ ಅರಿವೇ ಆಗದೆ ಬೆಳೆದುಬಿಟ್ಟೆ.
ನಿನ್ನ ಮಡಿಲಿಂದ ಕೊಸರಿ ಜಗದ ಬಯಲಿಗೆ ಬಿದ್ದುಬಿಟ್ಟೆ.
ಈಗ -
ನಡೆಯಲೇ ಬೇಕಾದ ಬದುಕಿನ ಕೊನೆ ಕಾಣದ ದಾರಿಯ ನಡುವಿನ ವಿಚಿತ್ರ ತಿರುವು, ಕವಲುಗಳ ಎದುರು ಉಸಿರು ಸಿಕ್ಕಂತಾಗಿ ತಡವರಿಸುತ್ತ ನಿಂತಿದ್ದೇನೆ.
ಇಂದು -
ಬೆಳೆದ ಹಮ್ಮು - ತೋರಲೇ ಬೇಕಾದ ಬಿಮ್ಮುಗಳಲಿ
ಎಂಥ ನೋವಿಗೂ ಅಳುವಂತೆಯೂ ಇಲ್ಲ.
ಎಷ್ಟೇ ಖುಷಿಯಾದರೂ ನಗುವು ಸಲ್ಲ.
ಕಾರಣ -
ನಾನತ್ತರೆ ಜಗವೆಲ್ಲ ಒಳಗೇ ನಗುತ್ತೆ.
ನಾ ನಗುತಿದ್ದರೆ ಸುತ್ತಣ ಕಣ್ಣುಗಳಲಿ ಈರ್ಷ್ಯೆ.
ಯಾರ್ಯಾರೋ ಅಂತಾರೆ ಇದೆಯಂತೆ ಬದುಕ ಅಂತ್ಯದಲ್ಲಿಯೂ ಶಾಂತಿ.
ಆದರೆ ನನಗನಿಸುತ್ತೆ ಅಲ್ಲಿರುವುದು ಬರೀ ಸ್ಥಬ್ದತೆ.
ಒಂದಾನುವೇಳೆ ಇದ್ದರೂ ಇರಲಾರದು ಬಿಡು
ನಿನ್ನೆದೆಗೇ ಒದೆಯುತ್ತ ನಿನ್ನೆದೆಯ ಅಮೃತವ ಹೀರುವಾಗ ಇದ್ದಿರುತ್ತಿದ್ದ ಪ್ರಶಾಂತಿ.
ಅಮ್ಮಾ -
ಒಮ್ಮೆ ಈ ಜಗದುಡಿಯಿಂದ ಸೆಳೆದುಕೋ ನನ್ನ ನಿನ್ನ ಮಡಿಲಿಗೆ.
ನಿನ್ನ ಅಂತಃಕರಣದ ಹಾರೈಕೆಯೊಂದೇ ಭರವಸೆಯು ಭವಿತವ್ಯಕೆ...
ಚಂದದ ಪ್ರತಿಕ್ರಿಯೆಗಳಿವೆ... ಒಮ್ಮೆ ಕಣ್ಣಾಡಿಸಿ...
ಒಡೆದ ಗಾಜಿನ ಚೂರುಗಳಲ್ಲಿ ಕಂಡ ಪ್ರತಿಬಿಂಬಗಳು ಪೂರ್ಣವಾಗೇ ಇದ್ದವಲ್ಲವೇ..??
ReplyDeleteಚೂರುಗಳಿಗೂ ಅವುಗಳದೇ ಪೂರ್ಣತೆಯಿಲ್ಲವಾ...?
ಅಮ್ಮನ ಅವಲಂಬನೆ, ಜವಾಬ್ದಾರಿಗಳಿಲ್ಲದ ಕಾಲ ಸದಾ ಸುಖವೇ..!!
ಅವಲಂಬನೆಯಾಚೆ ಬದುಕು ಕಟ್ಟಿಕೊಳ್ಳುವಾಗ ಜವಾಬ್ದಾರಿಗಳು ಕಾಡುವಾಗ..
ಜಗತ್ತು ಗಮನಿಸುತ್ತಿದೆಯೆಂಬ ಭಾವ ಕಾಡುವಾಗ -
- ನಾವು ಜಾರುತ್ತೇವೆ ಬದುಕಿನಿಂದ ಕೆಳಗೆ, ಸಹಜ ಆನಂದಗಳಿಂದ ಹೊರಗೆ
ಅರಿವು ಮೂಡಿದಂತೆ ಸಹಜ ಸುಖ ಕಳೆದುಹೋಗುತ್ತದಾ...??
ದೊಡ್ಡವರಾದಂತೆ ಬದುಕು ನಮ್ಮತನಗಳ ಮೀರಿ ಜಗತ್ತಿನ ಕೈಗೆ ಸಿಲುಕುತ್ತದಾ...??
ನಮ್ಮ ಬದುಕನ್ನ ಜಗತ್ತಿನ ಕಣ್ಣಿಂದ ನೋಡುವ ಅಂತೆಯೇ ಬದುಕುವ ಹಠಕ್ಕೆ ನಾವೇಕೆ ಸಿಲುಕುತ್ತೇವೆ...??
ಅಮ್ಮನೆದೆಯ ಅಮೃತ ಹೀರುವಾಗ ಸಿಕ್ಕ ಪ್ರಶಾಂತತೆ ಅಮ್ಮನಿಗಾ ಅಥವಾ ಮಗುವಿಗಾ
ಅರಿವಿಲ್ಲದನುಭವ ಪ್ರಶಾಂತತೆಯಾ..?? ಆಗಿನ ಪ್ರಶಾಂತತೆಯ ಪ್ರತಿಬಿಂಬಗಳ ಈಗಿನ ಬದುಕಲ್ಲಿ ಹುಡುಕುತ್ತಿದ್ದೇವಾ...?? ಶಾಂತಿ ಬದುಕಿನದಾ, ನಮ್ಮ ಮನಸ್ಸಿನದಾ...???
ಒಡೆದ ಕನ್ನಡಿ ಚೂರುಗಳಲ್ಲಿ ಹರಡಿಬಿದ್ದ ಪ್ರತಿಬಿಂಬಗಳ ಹಂಗಿಲ್ಲದೆ
ಸಹಜ ಬದುಕ ಕನ್ನಡಿಯಾಚೆ ಬದುಕಲಾರೆವಾ...??
ಎಲ್ಲವಕ್ಕೂ ಉತ್ತರ ಹುಡುಕಲೇ ಬೇಕಾ...???
ಎಲ್ಲ ಪ್ರಶ್ನೆಗಳ ಮೀರಿ, ಪ್ರತಿಬಿಂಬಗಳ ಹಂಗಿಲ್ಲದ ಬದುಕು ನಮ್ಮದಾಗಲಿ
ಬದುಕೇ ಅಮ್ಮನ ಮಡಿಲಾಗಿ ಲಾಲೈಸಲಿ
ಅಂತಃಕರಣದ ತುಂಬ ಜಗತ್ತಿನಳಿವಿಗೆ ಮೀರಿದ ಶಾಂತಿ ಧಕ್ಕಲಿ....
ಬರಹಕ್ಕಿಂತ ಕಮೆಂಟೇ ಉದ್ದವಾಯಿತಾ...??
ಏನ್ಮಾಡ್ಲಿ, ಬರಹ ಹಾಗಿದೆ... ಚೆನ್ನಾಗಿದೆ ಎನ್ನುವ ಔಪಚಾರಿಕತೆ ಮತ್ತೆ ಬೇಕಾ...????
ಎಲ್ಲವಕ್ಕೂ ಉತ್ತರ ಹುಡುಕಲೇ ಬೇಕಿಲ್ಲ...ಆದರೂ ಪ್ರಶ್ನೆ ಕಾಡುವುದ ಬಿಡುವುದಿಲ್ಲ...
Deleteಹುಡುಕಾಟ ಯಾತರದೋ ಗೊತ್ತಿಲ್ಲ...ಆದರೂ ತಡಕಾಟ ತಪ್ಪಿದ್ದಲ್ಲ...
ಎಲ್ಲ ಪ್ರಶ್ನೆಗಳ ಮೀರಿ, ಪ್ರತಿಬಿಂಬಗಳ ಹಂಗಿಲ್ಲದ ಬದುಕು ನಮ್ಮದಾಗಲಿ
ಬದುಕೇ ಅಮ್ಮನ ಮಡಿಲಾಗಿ ಲಾಲೈಸಲಿ
ಅಂತಃಕರಣದ ತುಂಬ ಜಗತ್ತಿನಳಿವಿಗೆ ಮೀರಿದ ಶಾಂತಿ ಧಕ್ಕಲಿ ಎಂಬ ಸದಾಶಯ ಒಳ್ಳೆಯದೇ...ಆದರೆ ಅದು ಅಷ್ಟು ಸುಲಭಕ್ಕೆ ದಕ್ಕದಲ್ಲ...ಅಲ್ಲೇ ಬದುಕು ತಳಮಳಿಸುವುದು...
ಆತ್ಮೀಯ ಮಿತ್ರನ ಪ್ರಜ್ಞಾವಂತ ಪ್ರತಿಕ್ರಿಯೆಗೆ ಧನ್ಯವಾದಗಳು...:):):)
ಸುಂದರ ಭಾವಗಳನ್ನು ಮೈಗೂಡಿಸಿಕೊಂಡಿರುವ ಹೃದಯವಂತರು ನೀವು.ಚೆಂದ ಕವಿತೆಯ ಲಯವನ್ನು ಅನುಭವಿಸಿಕೊಂಡಿದ್ದೀರಿ. ರಚ್ಚೆ ಹಿಡಿದ ಏನೋ ’ಬೇಕುಗಳು" , ಅಲ್ಲಲ್ಲಿ ನಿಲ್ಲುವ,ಒಳ ಸುಳಿಯುವ ವರ್ಜಿಸಲೆತ್ನಿಸುವ "ಬ್ರೇಕುಗಳು" ಇಲ್ಲಿರುವ ಸಾಲುಗಳಲ್ಲಿ ಕಾಣುತ್ತಿದ್ದೇನೆ.
ReplyDeleteಧನ್ಯವಾದಗಳು ರವಿ ಸರ್...
Deleteನಿಮ್ಮ ಪ್ರೀತಿ, ವಿಶ್ವಾಸ ಹೀಗೇ ಇರಲಿ...
ನೋವಾದರೆ ಸಂತೆಯ ನಡುವೆಯೂ ದನಿ ತೆರೆದು ಅತ್ತು ಬಿಡಬಹುದಿತ್ತು.
ReplyDeletetumba ishtavaayitu.. eko kavite manassige naatitu. heege bareyuttiri :)
ಧನ್ಯವಾದಗಳು ವಾಣಿ...
Deleteಹುಡುಕುತ್ತೇನೆ ನನ್ನ ನಾನು
ReplyDeleteಇಡಿಯಾಗಿ
ಒಡೆದ ಗಾಜಿನ ಚೂರುಗಳಲ್ಲಿ...
ಕಂಡದ್ದು - ಸಾವಿರ ಮುಖಗಳು...
ಯಾವುದೂ ನನ್ನದಲ್ಲ - ಎಲ್ಲವೂ ನನ್ನದೇ...
ಒಡೆದ ಗಾಜಿನ ಚೂರುಗಳಲ್ಲಿಯಾದರೂ ಬಿಂಬ ಇರುವುದು ಇಡಿಯಾಗಿಯೇ.....
ಬಿಂಬ ಇಡಿಯಾಗಿಯೇ ಇದ್ದರೂ ಅದನ್ನು ಸೂಕ್ಷ್ಮವಾಗಿ ಗಮನಿಸಲು ಮನಸ್ಸು ಹದವಾಗುತ್ತಿಲ್ಲವಾ....?
ಒಂದೇ ಪ್ರಭೆ ಹತ್ತಾಗಿ ಹರಡಿ ಹನಿ ಹನಿಯಾಗಿ ಹತ್ತು ಕಡೆ ಕಿರಣ
ಪ್ರಭಿಸುವುದಕ್ಕಾಗಿ ಈ ಭಿನ್ನತೆ ಅಂದುಕೊಂಡರೆ.......?
ಕೂಡುವ - ಕಳೆಯುವ
ಗುಣಿಸಿ - ಎಣಿಸುವ.. ಆಟದಲ್ಲಿ......
ಕಾಣದ್ದನ್ನು ಕಾಣುವ ಅಲೆದಾಟದಲ್ಲಿ....
ಮೊದಲಿನದಕ್ಕಿಂತ ಬದುಕು ಹೆಚ್ಚು ಶೃತಿಯಾಗುತ್ತಿಲ್ಲವಾ.....
ಹಾಗನಿಸುತ್ತಿಲ್ಲವಾ?...
(ಮನೆಯ ಮಣ್ಣಿನ ಗಂಧದಲ್ಲಿ ಬೆಳೆಸ ಬಯಸಿದ ಕನಸುಗಳ,
ಅಮ್ಮನೊಡನೆಯ ನಿತ್ಯ ಮಧುರತೆಯ ಕ್ಷಣಗಳ ಹೊರತಾಗಿ)
ಈ ಹೊರತಾಗಿ... ಯಲ್ಲೇ ಎಲ್ಲಾ ಇತ್ತು ಅದು ಬೇರೆ ಮಾತು ಬಿಡು)
ಮಗುವಿದ್ದಾಗಿನ ಪ್ರಶಾಂತತೆಯನ್ನು ಈಗಿನ ವಾತಾವರಣದಲ್ಲಿ ಹುಡುಕೋದು ಅಂದ್ರೆ........
ಪ್ರಶಾಂತತೆ ಅಂದರೆ ಇದು ಇರಬಹುದು ಅಂತಾ ನಾವು ಅಂದುಕೊಳ್ಳಬಹುದಷ್ಟೇ.....
ಸಂಪೂರ್ಣತೆ ಕಷ್ಟ...
ನಾಳೆಯ ಬಗೆಗಿನ ಭರವಸೆಯಿಂದ ಇಂದು ಕಣ್ತುಂಬ ನಿದ್ರಿಸಬಲ್ಲೆವಾದರೆ ಅದಕ್ಕೆ ಅಂತರಾಳದಲ್ಲೆಲ್ಲೋ ಯಾವುದೋ ಒಳಿತಿನ ಸಂಪೂರ್ಣತೆಯ ನಿರೀಕ್ಷೆಯೇ ಅಲ್ಲವಾ ಕಾರಣ...
Deleteಆ ನಿರೀಕ್ಷೆ ಸುಳ್ಳಾದಾಗ ಹುಡುಕಾಟ ಶುರು...ನಿಜವಾದರೆ ನಂತರ ಇನ್ನೊಂದು ಒಳಿತಿನ ಹುಡುಕಾಟ...
ನಂಗನಿಸುತ್ತೆ ಒಟ್ಟಾರೆಯಾಗಿ ಬದುಕೊಂದು ಯಾತರದೋ ಹುಡುಕಾಟ...ಯಾತರದೆಂದು ಗೊತ್ತಿಲ್ಲ... ಒಟ್ಟಿನಲ್ಲಿ ಏನೋ ಗೊಂದಲ...
ಒಡೆದ ಗಾಜಿನ ಚೂರುಗಳಲ್ಲಿಯಾದರೂ ಬಿಂಬ ಇರುವುದು ಇಡಿಯಾಗಿಯೇ.....
ಬಿಂಬ ಇಡಿಯಾಗಿಯೇ ಇದ್ದರೂ ಅದನ್ನು ಸೂಕ್ಷ್ಮವಾಗಿ ಗಮನಿಸಲು ಮನಸ್ಸು ಹದವಾಗುತ್ತಿಲ್ಲವಾ....?
ಗೊತ್ತಿಲ್ಲ...ಈಗ ಹಾಗೇ ಅನ್ನಿಸ್ತಿದೆ - ನನಗೆ ಸಹನೆ ಸಾಲದೇನೋ...
ಕಾಣದ್ದನ್ನು ಕಾಣುವ ಅಲೆದಾಟದಲ್ಲಿ....
ಮೊದಲಿನದಕ್ಕಿಂತ ಬದುಕು ಹೆಚ್ಚು ಶೃತಿಯಾಗುತ್ತಿಲ್ಲವಾ.??
ಹೌದು ನೋವುಗಳು - ಹೊಸ ಅನುಭವಗಳು ಬದುಕನ್ನು ಹೆಚ್ಚು ಪಕ್ವವಾಗಿಸುವುದು ನಿಜವೇ ಆದರೂ ಆ ಪಕ್ವತೆ ಬರುವ ಮುಂಚಿನ ಕ್ಷಣಗಳನ್ನು ಎದುರಿಸುವುದು ಅಷ್ಟು ಸುಲಭ ಅನ್ನಿಸ್ತಿಲ್ಲ...
ಪ್ರಶಾಂತತೆ ಅಂದರೆ ಮಗುವಿನ ಮೊಗದ ನಿಶ್ಯಬ್ದ ಮುಗ್ಧತೆಯೇನೋ ಎಂಬ ಭಾಸ...ಅದೀಗ ನಮಗೆ ಸಿಗದಲ್ಲ...ಅದಕ್ಕೇ ಇಷ್ಟೆಲ್ಲ ಗೊಂದಲ...
ಹೌದು ಸಂಪೂರ್ಣತೆ ಸಾಧ್ಯವಿಲ್ಲ...ಹಾಗಂತ ಅಪೂರ್ಣತೆ ಕಾಡದೆಯೂ ಇರುವುದಿಲ್ಲ...
ಹಾಗಾಗಿ ಹುಡುಕಾಟ ತಪ್ಪಿದ್ದಲ್ಲ...ನಮಗೆ ಇಷ್ಟವಿರಲಿ ಇರದಿರಲಿ...
ಅರ್ಥವಾಗುತ್ತಿಲ್ಲ...ನನ್ನ ವಿಚಾರ ಪಥದಲ್ಲಿಯೇ ತಪ್ಪಿದೆಯಾ - ಬದುಕನ್ನು ನೋಡುವ ಪರಿಯಲ್ಲೇ ಏನೋ ಐಬಿದೆಯಾ..??
ಆದರೆ ಒಂದಂತೂ ಸತ್ಯ. ಸದಾ ಪ್ರಶ್ನೆಗಳು ಕಾಡುತ್ತಲೇ ಇರುತ್ತವೆ ಬದುಕಿನೆಡೆಗೆ...ನನಗೆ ಬೇಕಿರಲಿ ಬೇಡದಿರಲಿ...
ಮಿತ್ರಾ - ನಿನ್ನ ಪ್ರೀತಿಯ ಪ್ರತಿಕ್ರಿಯೆಗೆ ಶರಣು...
ಕಾಣದ್ದನ್ನು ಅನುಭಾವಿಸುವ
ReplyDeleteಅನುಭಾವಿಸಿದ್ದನ್ನು ವರ್ಣಿಸುವ
ಕಲೆ ಬಲು ಮಧುರ
ಬಾವನೆಗಳು ಭಗಿಲೆದ್ದು ಬಂದಾಗ
ಅಥವಾ ತಣ್ನಗೆ ಕೊರೆದಾಗ
ಮಾತೃವಲ್ಲ,
ಬೇಸರ ಮೂಡಿದಾಗ
ಪ್ರಶ್ನೆಗಳು ಉದ್ಭವಿಸುತ್ತವೆ
ಪ್ರತಿ ಪ್ರಶ್ನೆಗೂ ಉತ್ತರ ಸಿಗುವುದಿಲ್ಲ
ಕೆಲ ಬಾವನೆಗೆ ಸಾಂತ್ವಾನವಿಲ್ಲ
ಹಾಗೆಂದು, ಬಾವನೆಗಳು ಪ್ರಶ್ನೆಗಳು
ಮರೆಯಾದೀತೆ
ಅದು ಬದುಕು! ಅದು ಜೀವನ!!
ಅದು ಪರಿಬಾವಿಸುವಿಕೆಯ ವೈಕಲ್ಯವಲ್ಲ
ವೈಚಾರಿಕ ಧಾಟಿಯ ವ್ಯತ್ಯಯವಲ್ಲ.
ಅಮ್ಮಂದಿರೇ ಹಾಗೆ
ಬಾವ-ಬಾವನೆಗಳ ಬುಗ್ಗೆಗಳ ಹಾಗೆ
ಚಂದನೆಯ ಪ್ರತಿಕ್ರಿಯೆಗೆ ಧನ್ಯವಾದಗಳು...
Deleteನಿಮ್ಮ ಈ ವಿಶ್ವಾಸ ಹೀಗೇ ಇರಲಿ...