Tuesday, May 1, 2012

ಗೊಂಚಲು - ಹತ್ತು + ಹತ್ತು + ಹತ್ತು.....

ಬಾಲ್ಯ ಹಾಗೂ ಬಾಲಮಿತ್ರರು.....

ಬಾಲ್ಯ ಅಂದರೆ -


ಅಮ್ಮನ ಮಡಿಲು, ಅಜ್ಜನ ಕಥೆ, ಅಜ್ಜಿಯ ಸೀರೆ ಹಾಸಿಗೆ, ಮಾವನ ಮೈಮೇಲೆ ಕೂಸುಮರಿ...
ಅಜ್ಜನ ಕಥೆಗಳಲ್ಲಿನ ಕಾಗೆ, ಗುಬ್ಬಿ, ಹುಲಿ, ಸಿಂಹ, ಮೊಲಗಳ ಜೊತೆಗೆ 'ಬಾಲಮಂಗಳ'ದ ಡಿಂಗ, ಫಕ್ರು, ಲಂಬೋದರ 'ಚಂದಮಾಮ'ದ ರಾಜಕುಮಾರ, ಬಡಬ್ರಾಹ್ಮಣ ಮತ್ತು ತ್ರಿವಿಕ್ರಮನ ಬೇತಾಳ ಕೂಡ ಗೆಳೆಯರಾಗಿ ಪರಿಣಮಿಸಿದ್ದು...
ಹಗಲೆಲ್ಲ ಆಟ, ಸಂಜೆ ಬಾಯಿ ಪಾಠ... 
ಕನಸಲ್ಲೂ ಚಿಣ್ಣಿ - ದಾಂಡು, ಲಗೋರಿ...
ಮಂಡಿಯ ತರಚು ಗಾಯಕ್ಕೆ ಕಾಂಗ್ರೆಸ್ ಗಿಡದ ಎಲೆಯ ಮದ್ದು...
ಪಕ್ಕದ ಮನೆಯ ಹಿತ್ತಲ ಸೌತೆ ಮಿಡಿ, ಮಾವಿನ ಮಿಡಿಗಳು ನಮ್ಮನೆಯ ಉಪ್ಪು ಖಾರದೊಂದಿಗೆ ಸದ್ದಿಲ್ಲದೆ ನಮ್ಮ ಬಾಯಲ್ಲಿ ಕರಗಿದ್ದು...
ತರುತ್ತಲಿದ್ದ ಲಿಂಬು ಪೆಪ್ಪರ್ಮೆಂಟಿನ ಆಸೆಗೆ ಮನೆಗೆ ಬರುವ ನೆಂಟರಿಗಾಗಿ ಕಾಯುತ್ತಿದ್ದದ್ದು...
ರಾತ್ರಿ ಒಬ್ಬನೇ ಎದ್ದು ಧೈರ್ಯವಾಗಿ ಬಚ್ಚಲಿಗೆ ಹೋಗಿ ಉಚ್ಚೆ ಹೊಯ್ದದ್ದು ಕನಸು ಎಂಬುದು ಗೊತ್ತಾದದ್ದು ಹಾಸಿಗೆ ಒದ್ದೆಯಾಗಿ ಬೆಚ್ಚಗಾಗಿ ಎಚ್ಚರಾದಾಗ...
ರಾಡಿ ನೀರಲ್ಲಿ ಎಮ್ಮೆಗಳೊಂದಿಗೆ ಈಜು ಕಲಿತದ್ದು...
ಹುಲಿಮನೆ ಆಟದಲ್ಲಿ ಅಜ್ಜನ ಗೆದ್ದು ರಾಜ್ಯವನ್ನೇ ಗೆದ್ದಂತೆ ದಿನವಿಡೀ ಬೀಗಿದ್ದು...
ಕವಡೆ ಆಟದಲ್ಲಿ ಅಮ್ಮ ಸೋತಾಗ ಯಾಕೋ ನೋವಾಗಿದ್ದು...
ಬೆಟ್ಟೆ ಆಟದಲ್ಲಿ ಐದನೇ ಮನೆಯ ಗೆಲ್ಲುವುದೇ ಬಹು ದೊಡ್ಡ ಕನಸಾಗಿದ್ದದ್ದು...
ತಂಗಿ ನಿದ್ದೆಯಲ್ಲೂ ಕನವರಿಸಿದ್ದು ಕಲರ್ ಕಲರ್ ವಾಟ್ ಕಲರ್...
ನೆಲ್ಲಿ ಕಾಯಿ, ಸಂಪಿಗೆ, ನೇರಳೆ, ಮುಳ್ಳೆಹಣ್ಣುಗಳಿಗಾಗಿ ದಿನವೆಲ್ಲ ಮರಿ ಸೈನ್ಯದಂತೆ ಗುಂಪಾಗಿ ಕಾಡು ಅಲೆದದ್ದು...
ಮನೆಯಲ್ಲೇ ಕದ್ದು ತಿಂದ ಕೊಬ್ಬರಿ, ಬೆಲ್ಲದುಂಡೆ...
ಗೆಳೆಯರೊಂದಿಗೆ ಕುಸ್ತಿ - ತಪ್ಪಿದ ಮಗ್ಗಿ - ಮಾಸ್ತರರ ಕೈಯ ನಾಗ ಬೆತ್ತದ ರುಚಿ - ರಾತ್ರಿ ಮಲಗುವ ಮುನ್ನ ದೇವರಲ್ಲಿ ಮೇಷ್ಟ್ರ ಬಗ್ಗೆ ಕಂಪ್ಲೇಂಟು...
ವರ್ಷಕ್ಕೊಮ್ಮೆ ಶಾಲೆಗೆ ಭೇಟಿ ಕೊಡುತ್ತಿದ್ದ ಸಾಯ್ಬ್ರು (ಶಿಕ್ಷಣಾಧಿಕಾರಿ) ಹುಟ್ಟಿಸ್ತಿದ್ದ ಭಯ...(ಈ ಭಯ ನಮ್ಮಷ್ಟೇ ನಮ್ಮ ಮೇಷ್ಟ್ರಿಗೂ ಇರ್ತಾ ಇತ್ತೇನೋ ಎಂಬ ಅನುಮಾನ ನನಗೀಗಲೂ ಇದೆ)
ಪರೀಕ್ಷೆಯ ಭಯವ ಹೋಗಲಾಡಿಸಲು ವಿಫಲವಾಗಿ ಗಣಿತ ಪಟ್ಟಿಯ ನಡುವೆ ಸುಮ್ಮನೆ ಒಣಗುತ್ತಿದ್ದ ಬೇರು ಬಿಡುವ ಎಲೆ ಮತ್ತು ಮರಿಹಾಕುವ ನವಿಲುಗರಿ...
ಎರಡು ಮೂರು ವರ್ಷಕ್ಕೊಮ್ಮೆ ಹೊರಡುತ್ತಿದ್ದ ಶಾಲೆಯ ಪ್ರವಾಸದ ತೀರದ ಸಂಭ್ರಮ - ಆ ಪ್ರವಾಸದ ದಾರೀಲಿ ಜನ ಕಂಡಲ್ಲೆಲ್ಲ ಎಸೆಯಲೆಂದು ತಿಂಗಳ ಮುಂಚಿನಿಂದ ಬರೆಯಲು ಶುರುವಿಡುತ್ತಿದ್ದ ------ ಶಾಲೆಯ ----- ಪ್ರವಾಸಕ್ಕೆ ಜಯವಾಗಲಿ ಎಂಬ ವಿಧವಿಧ ವಿನ್ಯಾಸಗಳ ಚೀಟಿಗಳು...(ಹಿಂತಿರುಗಿ ಬರುವಾಗ ಎಸೆಯಲು -----ಪ್ರವಾಸಕ್ಕೆ ಜಯವಾಯಿತು ಎಂಬ ಚೀಟಿಯನ್ನೂ ಮುಂಚೆಯೇ ಬರೆದಿರುತ್ತಿದ್ದೆವು. ನಮ್ಮ ಗೆಲುವಿನ ಬಗ್ಗೆ ಎಂಥ ಭರವಸೆ...)
ಹುಟ್ಟು ಹಬ್ಬದಂದು ಹೊಸ ಅಂಗಿ ಹಾಕ್ಕೊಂಡು ಎದೆ ಉಬ್ಬಿಸ್ಕೊಂಡು ಶಾಲೆಗೆ ಹೊರಟಾಗ ಸುರಿದ ಮಳೆ - ಮಳೆ ನೀರಿನೊಂದಿಗೆ ಕರಗಿ ಹೋದ ಅಂಗಿಯ ಬಣ್ಣ ಹುಟ್ಟಿಸಿದ ನಿರಾಸೆ...
ಮಲೆನಾಡಿನ ಧೋಮಳೆ - ಎಲ್ಲೆಲ್ಲೂ ಹರಿವ ಕೆಂಪು ನೀರು - ಪ್ಲಾಸ್ಟಿಕ್ ಕೊಪ್ಪೆ - ಅರಲು ಗದ್ದೇಲಿ ಹೊರಳಾಟ...
ಮುಸ್ಸಂಜೆಯಲಿ ಹೊಡತ್ಲ ಸುತ್ತ ಕನಸುಗಳು ಬೆಚ್ಚಗೆ - ಸುಟ್ಟ ಹಲಸಿನ ಬೇಳೆ, ಗೇರು ಬೀಜಗಳ ಘಮ - ಅಜ್ಜ ಹೇಳುವ ಕಥೆಗಳ ಸಂಭ್ರಮ...
ರೇಡಿಯೋದಲ್ಲಿ 'ಯುವವಾಣಿ'ಯ ಚಿತ್ರ ಗೀತೆಗಳ ಸರಿಗಮ...
ನಿಮ್ಮ ಮೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮ 'ಅಭಿಲಾಷಾ' ಅಂತನ್ನುವುದ ಕೇಳಿ ಒಂದಿಲ್ಲೊಂದು ದಿನ ನಮ್ಮ ಹೆಸರೂ ಬಂದೀತೆಂದು ಕಾಯುತ್ತಿದ್ದುದು...(ನಮ್ಮ ಹೆಸರನ್ನೆಂದೂ ನಾವು ಆಕಾಶವಾಣಿಗೆ ಕಳಿಸಿಯೇ ಇರಲಿಲ್ಲ. ನಾವೇ ಕಳಿಸಬೇಕೆಂಬುದು ಗೊತ್ತೂ ಇರಲಿಲ್ಲ...)
ನಾಗರಪಂಚಮಿಯ ಬೇಳೆ ಒಬ್ಬಟ್ಟನ್ನು ವಿಪರೀತ ತಿಂದು - ಅದು ಹೊಟ್ಟೇಲಿ ಮಾರನೇ ದಿನವೂ ಹಾಗೇ ಉಳಿದು - ಹೂಸು ಬಿಟ್ಟದ್ದು ನಾನಲ್ಲ ಎಂದು ತೋರಿಸಿಕೊಳ್ಳಲು ಬಿಡುವ ಮುನ್ನವೇ ಮೂಗು ಮುಚ್ಚಿಕೊಂಡು ನಗೆಪಾಟಲಾದದ್ದು...
ಚೌತಿಯ ಚಂದ್ರನ ಕಂಡು ಬರುವ ಅಪವಾದಕ್ಕೆ ಹೆದರಿ ಅಜ್ಜಿ ಎಂದೋ ಹೇಳಿದ್ದು ನೆನಪಾಗಿ ಅಮ್ಮನ ಹಿತ್ತಲಲ್ಲಿನ ಕರಿಕೆಸುವಿನ ಗಿಡಗಳನೆಲ್ಲ ಕಡಿದು ಹಾಕಿ ಆಯಿಯ ಕೈಲಿ ಲತ್ತೆ ತಿಂದದ್ದು...(ಕರಿಕೆಸುವ ಕಡಿದರೆ ಅಪವಾದ ಬರಲ್ಲ ಎಂಬುದೊಂದು ನಂಬಿಕೆ)
ದೀಪಾವಳಿಯಂದು ಹಬ್ಬದ ಗುಬ್ಬಿಯ ಕಾಡಿಗೆಯಲ್ಲಿ ಗಡ್ಡ ಮೀಸೆಗಳ ಬಿಡಿಸಿಕೊಂಡು ಊರೆಲ್ಲ ಸುತ್ತಿದ್ದು...
ಅಜ್ಜನ ಸಂಚಿಯಿಂದ ಕದ್ದು ಹಾಕಿದ ಕವಳದಿಂದ ಕೆಂಪಾದ ನಾಲಿಗೆಯ ರಂಗು ಕಂಡು ಪುಳಕಗೊಂಡದ್ದು...
ಮಾವ ಸೇದಿ ಎಸೆದ ಮೋಟು ಬೀಡಿಯ ಕದ್ದು ಸೇದಿ ಕೆಮ್ಮಿ ಕೆಮ್ಮಿ ಸುಸ್ತಾಗಿ ಕಣ್ಣೀರು ಸುರಿದದ್ದು...
ಅಕ್ಕ ದೊಡ್ಡವಳಾದಳೆಂದಾಗ ದೊಡ್ಡವಳಾಗುವುದೆಂದರೆ ಏನೆಂಬುದರ ಬಗ್ಗೆ ವರ್ಷಗಳ ಕಾಲ ತಲೆ ಕೆಡಿಸಿಕೊಂಡದ್ದು...
ಪ್ರೀತಿಯ ದೊಡ್ಡತ್ತೆ ಕಾರಣವನೇ ಹೇಳದೆ ನೇಣಿಗೆ ಶರಣಾದದ್ದು - ಬದುಕು ಕಂಡ ಮೊದಲ ಸಾವು - ಉರಿವ ಚಿತೆಯ ಎದುರು ಸಾವಿನ ಅರ್ಥ ಅಸ್ಪಷ್ಟ...
ಬಾಲ್ಯದ ಬದುಕ ಕಣಜದಲ್ಲಿ ಎಷ್ಟೆಲ್ಲ - ಏನೇನೆಲ್ಲ ಸಿಹಿ ಕಹಿ ನೆನಪುಗಳ ತೆನೆಗಳು...

***&&&***

ಆಲದ ಬಿಳಲಿನ ಜೋಕಾಲಿಯಲಿ ಜೀಕುತ್ತ ಜೀಕುತ್ತಲೇ ಕಳೆದು ಹೋದ ಬಾಲ್ಯ ಮತ್ತು ಬಾಲ್ಯದ ಗೆಳೆಯರನ್ನು ಎಂದಿಗಾದರೂ ಮರೆಯೋಕೆ ಸಾಧ್ಯವಾ..? 
ನೋ ಛಾನ್ಸ್.
ನಾವೆಷ್ಟೇ ದೊಡ್ಡೋರಾದ್ರೂ - ಬದುಕು ನಮ್ಮನ್ನು ಎಷ್ಟೇ ಎತ್ತರಕ್ಕೊಯ್ದು ನಿಲ್ಲಿಸಿದ್ರೂ - ವರ್ಷ ನೂರಾಗಿ ಮೃತ್ಯುಮುಖಿಯಾಗಿ ಕುಳಿತು ಕ್ಷಣಗಣನೆ ಮಾಡುತ್ತಿರುವಾಗಲೂ ನೆನಪಾದರೆ ಮೊಗದಿ ಮಂದಹಾಸವೊಂದನು ಮೂಡಿಸಬಲ್ಲದ್ದು ಹೆಚ್ಚಾಗಿ ಬಾಲ್ಯ ಮತ್ತು ಬಾಲಮಿತ್ರರೊಂದಿಗೆ ಬೆಸೆದ ಮಧುರ ಕ್ಷಣಗಳ ನೆನಪುಗಳೇನೇನೋ...
ನೋಡಿದ್ದೆಲ್ಲ ನವನವೀನವಾಗಿ ಕಾಣುತ್ತಿದ್ದ ಆ ಕಾಲ ಎಷ್ಟು ಚೆಂದಗಿತ್ತಲ್ಲವಾ...
ಎಲ್ಲ ಕಿತ್ತಾಟಗಳ ನಡುವೆಯೂ ಹಬ್ಬಿ ನಿಲ್ಲುತ್ತಿದ್ದ ಸುಂದರ ಗೆಳೆತನಕ್ಕೆ ಎಂಥ ಕಸುವಿತ್ತಲ್ಲವಾ...
ನೆನೆಸಿಕೊಳ್ಳುತ್ತಿದ್ದರೆ ಎಂಥದೋ ಅರಿಯದ ರೋಮಾಂಚನ...

ಬಾಲ್ಯ ಕಳೆದು ಪ್ರೌಢರಾಗಿ, ಯೌವನವಂತರಾಗಿ ಬದುಕಿನ ಸಾಧ್ಯತೆಗಳ ವಿಸ್ತಾರದ ನಿರಂತರ ನಿರೀಕ್ಷೆಯಲ್ಲಿ - ನಿರೀಕ್ಷೆಗಳ ಕನಸ ಸ್ತಂಭ ಉರುಳದಂತೆ ಕಾಪಾಡಿಕೊಳ್ಳಬೇಕಾದ ಒತ್ತಡದಲ್ಲಿ - ಸ್ವಂತ ಬದುಕು ಕಟ್ಟಿಕೊಳ್ಳುವ ಭರದಲ್ಲಿ ಬಾಲ್ಯದ ಮಿತ್ರರೆಲ್ಲ ದಿಕ್ಕಿಗೊಬ್ಬರಾಗಿ ಬೇರಾಗಿ ಚೆದುರಿ ಹೋದರೂ, ವರ್ಷಾಂತರಗಳ ಕಾಲ ಭೆಟ್ಟಿಯೇ ಆಗದಿದ್ದರೂ, ಯಾವುದೇ ಸಂವಹನ ಸಾಧ್ಯವಾಗಿಲ್ಲದಿದ್ದರೂ, ಬದುಕಿನ ಜಂಜಡಗಳು ಹಣ್ಣಾಗಿಸಿದ್ದರೂ ಬಾಲ್ಯ ಮತ್ತು ಆ ಕಾಲದ ಗೆಳೆಯರೊಂದಿಗೆ ಕಳೆದ ಮಧುರ ಕ್ಷಣಗಳ ನೆನಪು ಸದಾ ಹಚ್ಚ ಹಸಿರು...
ಎಲ್ಲ ಅನಿಶ್ಚಿತತೆಗಳ ನಡುವೆ ನೆನಪೊಂದೇ ಶಾಶ್ವತ ಅನ್ನಿಸಿಬಿಡುತ್ತಲ್ಲವಾ...
ನೆನಪು ಪ್ರಕೃತಿ ನಮಗಿತ್ತ ವರ...(ಕೆಲವೊಮ್ಮೆ ಶಾಪ ಕೂಡ - ಆ  ಮಾತು ಬೇರೆ)

ಬಾಲ್ಯದಲ್ಲಿ ನಾವೂ ಶಕ್ತಿವಂತರಾಗಬೇಕು - ನಾವೂ ಸ್ವತಂತ್ರ ನಿರ್ಧಾರಗಳನ್ನ ತಗೋಬೇಕು - ನಮ್ಮ ಮಾತನ್ನ ಎಲ್ರೂ ಕೇಳೋಹಂಗಾಗ್ಬೇಕು - ಹಾಗೆಲ್ಲ ಆಗ್ಬೇಕೂಂದ್ರೆ ಆದಷ್ಟು ಬೇಗ ನಾವು ದೊಡ್ಡೋರಾಗ್ಬೇಕು ಅಂತೆಲ್ಲ ಅಂದ್ಕೋತಿದ್ದ ನಾವುಗಳೇ  ಈವತ್ತು ಹಾಗೆಲ್ಲ ಆದ ಮೇಲೆ ಯೋಚಿಸಿದ್ರೆ ಬಾಲ್ಯದ ಆ ದಿನಗಳೇ ಎಷ್ಟು ಚೆನ್ನಾಗಿತ್ತು ಅನ್ನಿಸುತ್ತಲ್ಲವಾ..???
ಅದೇ ಏನೋ ಬದುಕಿನ ವೈಚಿತ್ರ್ಯ...
ಸಿಗೋದಿಲ್ಲ ಅಂತ ಖಾತ್ರಿ ಇದ್ದೂ ಅದಕಾಗಿ (ಕಳೆದುಹೋದದ್ದಕ್ಕಾಗಿ) ಹಂಬಲಿಸೋದು - "ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ" ಎಂಬ ಕವಿವಾಣಿಯಂತೆ...

ಆದರೂ ಈ ನೆನಪುಗಳಿಗೊಂದು ಸಲಾಮ್...


ಚಿತ್ರ ಕೃಪೆ : ಅಂತರ್ಜಾಲದಿಂದ ಪಡೆದದ್ದು.



8 comments:

  1. ಅಬ್ಬಾ....! ಒಂದೇ ಓಘದಲ್ಲಿ ನನ್ನ ಬಾಲ್ಯವನ್ನೆಲ್ಲ ಸುತ್ತಿ ಹಾಗೆ ಎಲ್ಲಾ ಘಟನೆಗಳನ್ನು ತಾರಿಸಿ ಬಂದುಬಿಟ್ಟೆ. ತುಂಬಾ ಚೆನ್ನಾಗಿದೆ. ಎಡವಿದ್ದರಿಂದ ಹಿಡಿದು ಅತ್ತಿದ್ದರವರೆವಿಗೂ ಬರೆದಿದ್ದೀರ... ಇಂದಿನ ಯಾಂತ್ರಿಕ ಸ್ಥಿತಿಯಲ್ಲಿ ನಮ್ಮನ್ನು ನಾವು ನೆನಪಿಸಿಕೊಂಡರೆ ಬೇಸರವಾಗುತ್ತದೆ....

    ReplyDelete
    Replies
    1. ಮೆಚ್ಚುಗೆಗೆ ಧನ್ಯವಾದಗಳು ಮೋಹನ್ ಜಿ...

      ಈ ಪ್ರೀತಿ ವಿಶ್ವಾಸ ಹೀಗೇ ಇರಲಿ...

      Delete
  2. ನೀವೊಬ್ಬ ಸೃಜನಶೀಲ ಬರವಣಿಗೆಗಾರ ಎಂಬುದು ಸಾಭೀತಾಗಿದೆ. ಶುಭವಾಗಲಿ.
    ಇಂಗ್ಲೀಷಿನಲ್ಲಿ ಹೇಳುವುದಾದರೆ..... very very good

    ReplyDelete
  3. ರವಿ ಸರ್ ನಿಮ್ಮ ಪ್ರೀತಿಗೆ ಕೃತಜ್ಞ....

    ReplyDelete
  4. soooper anna :) heege odiskondu hoyitu.......... nanu matte heege bareyabeku anista ide :(/.....

    ReplyDelete
  5. ಆಸ್ವಾದಿಸಿದ ನೆನಪುಗಳ ಸ್ವಾದವನ್ನು ಆಸ್ವಾದಿಸಿದಂತೆ ಹೇಳೋದು ಕಷ್ಟ....

    ಆದರಿದು ಸಲೀಸಾಗಿ ನಮ್ಮೆಡೆಗೆ ಬಂದಂತಿದೆ...
    ಡಿಟ್ಟೋ ಬಾಲ್ಯವೇ ಎದುರಿಗೆ ಕಂಡ ಹಾಗೆ....

    ವೈರಾಗ್ಯ ಬಂದ ಮನುಷ್ಯನಿಗೂ ಬಿಡಲಾಗದೇ ಇರೋದು
    ನೆನಪುಗಳೊಂದೇ ಅಂತೆ.....
    ಅಂದ ಮೇಲೆ ಚಿತ್ತಾರದ ಮನಸ್ಸಿನ ನಮ್ಮನ್ನು ಕೇಳಬೇಕೆ?

    ಚಂದ ಬರದ್ಯೋ ದೋಸ್ತಾ...............

    ReplyDelete
  6. ಬಾಲ್ಯ ನೆನಪುಗಳ ಕಣಜ.
    ಅಲ್ಲಿ ವಿಹರಿಸಿದಷ್ಟು ದವಸ-ದಾನ್ಯ ಸಿಗುತ್ತದೆ.
    ಬಹುಷಃ ಎಲ್ಲರ ಬದುಕಲ್ಲೂ ಬಾಲ್ಯದ ನೆನಪು ಮಧರಾನುಭೂತಿ ಆಗಿರಲೇ ಬೇಕು.
    ಅಂಥಹುದೊಂದು ಬಾಲ್ಯವನ್ನು ಕಾಪಿಟ್ಟು ಕೊಟ್ಟ ಭೂತಾಯಿಗೆ, ಹೆತ್ತಮ್ಮನಿಗೆ, ಕಷ್ಟವನ್ನೆಲ್ಲ ತಮ್ಮಲ್ಲಿಟ್ಟುಕೊಂಡು
    ಮಧುರ ಕ್ಷಣಗಳನ್ನು ಮಾತ್ರ ನಮಗೆ ನೀಡಿದ ಸಹವಾಸಿಗಳಿಗೆ, ಭರವಸೆ ನೀಡಿದ ಅಪ್ಪನಿಗೆ, ವಿಶ್ವಾಸ ನೀಡಿದ ಸ್ನೇಹಿತರಿಗೆ ಜೈ

    ReplyDelete
  7. ನೆನಪುಗಳ ಮಾತು ಮಧುರ..

    -ನಿಮ್ಮ ಬರಹ ಓದಿದ ಮೇಲೆ ಇಂತದ್ದೊಂದು ಬದುಕಿನ ಪುಟಗಳನ್ನೂ ಅಕ್ಷರಗಳಲ್ಲಿ ದಾಖಲಿಸಬೇಕೆಂಬ ಆಸೆ ನನಗೂ ಆಗಿದೆ

    ReplyDelete