Tuesday, June 5, 2012

ಗೊಂಚಲು - ಮೂವತ್ತು + ಒಂದು.....

ಕತ್ತಲು.....


ಅಂದೂ -
ಮನೆಯ ತಾರಸಿಯ ಮೇಲೆ ಹೀಗೆಯೇ ಅಲೆಯುತ್ತಿದ್ದೆ...
ಆಗೆಲ್ಲ -
ನಿಶೆ ಬೆಳಕ ನುಂಗುವ ಮುನ್ನಿನ ಸಂಜೆಗತ್ತಲ ನನ್ನ ಮೌನಕ್ಕೆ ಎಂಥದೋ ಸೊಗಸಿತ್ತು...
ಬಾನಾಡಿಗಳ ಬಳಗ ಸೇರಿ ಬಾನೆತ್ತರ ಹಾರುತಿತ್ತು ಬಯಕೆ ತುಂಬಿದ ಮನ...
ಗೂಡು ಸೇರುವ ಮುನ್ನ ಕಿರುಚಾಡುತಿದ್ದ ಕಾಗೆ ಕೂಡ ನನ್ನ ಮೌನ ಮುರಿಯುವ ಕೀಟಲೆಯ ಮಿತ್ರನಂತೆ ಕಾಣುತಿತ್ತು...
ಪಿಳಿ ಪಿಳಿ ಬೆಳಕು ಚೆಲ್ಲುತ್ತಾ ನೂರಾರು ಬದುಕುಗಳ ಒಡಲಲ್ಲಿ ತುಂಬಿಕೊಂಡು ದೂರ ತೀರ ಯಾನ ಹೊರಟ ಲೋಹದ ಹಕ್ಕಿ ಬೆರಗು ಮೂಡಿಸ್ತಿತ್ತು...
ನಿದ್ದೆ ಬರಿಸುವ ಕತ್ತಲಿಗೂ ಯಾವುದೋ ಅಪರಿಚಿತತೆಯ ಸೊಗಡಿನ ಸೊಬಗಿತ್ತು...


ಕಾರಣ -
ಅಂದು ಮೊದಲಾಗಿ ನಕ್ಕಿದ್ದಳು
ನೋಡಿ ನನ್ನೆಡೆಗೆ...
ಎನ್ನ ಮನದಿ ಒಲವ ನವಿಲು ಗರಿಬಿಚ್ಚಿತ್ತು...
ಆ ನಗೆ ಬೆಳದಿಂಗಳಲಿ ನನ್ನ ಬದುಕ ಕತ್ತಲೆಲ್ಲ ಕರಗಿ ಹೋದೀತು,
ಆ ಕಣ್ಣ ನಗೆಯ ಪನ್ನೀರಲಿ ಬರಡಾದ ಎನ್ನ ಎದೆಯ ನೆಲ ತುಸು ನೆಂದು ಮಿದುವಾದೀತು,
ಮಿದುವಾದ ಎದೆ ನೆಲದಿಂದ ಹೊಸ ಜೀವೋನ್ಮಾದದ ಸ್ಫೂರ್ತಿ ಗಂಧ ಹೊಮ್ಮೀತು,
ಬದುಕ ಬಳ್ಳಿಯಲಿ ಹೊಸ ಮೊಗ್ಗು ಅರಳೀತು...
ಹೀಗೇ ಎಷ್ಟೆಷ್ಟೋ, ಇನ್ನೂ ಏನೇನೋ ಆಸೆ ತುಂಬಿದ ಭಾವೋನ್ಮಾದ...
ಏಕಾಂತ ಸೀಮೆಯನೇರಿ ಮೌನ ಗಾನ...
ಹಾರು ಹಕ್ಕಿಯ ರೆಕ್ಕೆಯಲಿ, 
ಜೀವ ಸೆಲೆ ಬತ್ತಿದ ಮೇಲೂ ಹಕ್ಕಿಗೆ ತಾವು ಕೊಡುವ ಬೋಳು ಮರದ ಪ್ರೀತಿಯಲಿ, 
ಹಸಿರ ಸಿರಿಯಲಿ, 
ಖಾಲಿ ಬಾನ ಬಯಲಲ್ಲಿ,  
ಕೊನೆಗೆ ನಿರ್ಜೀವ ಕಟ್ಟಡದಲಿ ಕೂಡ,  
ಒಟ್ಟಿನಲ್ಲಿ ನೋಟ ಹರಿದಲ್ಲೆಲ್ಲ ಖುಷಿಯ ಒಲವಿನ ಬಣ್ಣ...


           ~ * ~ & ~ * ~

ಇಂದೂ -
ಅದೇ ಮನೆಯ ಅದೇ ತಾರಸಿಯ ಮೇಲೆ ಅಂದಿನಂತೆಯೇ ಅಲೆಯುತ್ತಿದ್ದೇನೆ...
ಎದುರಿನ ಇಪ್ಪತ್ತಂತಸ್ತಿನ ಕಟ್ಟಡದಾಚೆ ಸೂರ್ಯ ಮೆಲ್ಲಗೆ ತಲೆ ಮರೆಸಿಕೊಳ್ಳುತ್ತಿದ್ದಾನೆ...
ಸುತ್ತಲೂ ನಿಧಾನವಾಗಿ ಜೀವ ತಳೆಯುತಿರುವ ಕತ್ತಲು..
ಇಷ್ಟಿಷ್ಟಾಗಿ ಸಂಜೆಯೊಂದು ಸಾಯುತ್ತಿದೆ...
ನನ್ನೊಳಗೆ ಸಾವಿನಂಥ ಮೌನ...
ಹಾಡುವ ಕೋಗಿಲೆ ದನಿಯೂ ಕರ್ಕಶ...
ಸುಡುವ ಬೆಳದಿಂಗಳು...

ಕಾರಣ -
ನನ್ನ ನಾಳೆಗಳಿಗಾಗಿ ಕಾಯದೇ ಕಳೆದು ಹೋದ ಅವಳು
ಮತ್ತು
ಕಳೆದು ಹೋಗದೇ ಕಾಡುವ ಅವಳ ನೆನಪುಗಳು...


 ~ * ~ & ~ * ~


ಮೊನ್ನೆ ಅಲ್ಲೆಲ್ಲೋ ಮತ್ತೆ ಸಿಕ್ಕಳು...
ಕಣ್ಣಲ್ಲಿ ಸಣ್ಣ ನೀರ ಅಲೆ...
ಕಾರಣ ಗೊತ್ತಾಗಿಲ್ಲ...
ಮತ್ತೆ ನೋಡಿದ ಖುಷಿಗಾ..?
ತನ್ನ ಕಳಕೊಂಡ ಮೇಲೂ ಬದುಕಿರುವನಲ್ಲಾ ಎಂಬ ನೋವಿಗಾ..??

ಹಾಂ -

ಅವಳೆಂದರೆ - 
"ನಿನ್ನೆ ನಾನು ಕಂಡಿದ್ದ ನಾಳೆಗಳೆಡೆಗಿನ ಕನಸುಗಳು....."

^### %%% ###^

'ಗಲ್ಫ ಕನ್ನಡಿಗ' ಈ - ಪತ್ರಿಕೆಯಲ್ಲಿ 08-06-2012 ರಂದು ಪ್ರಕಟಿತ

8 comments:

  1. ಮೊದಲ ಸಲ ಹೃದಯ ಗರಿ ಬಿಚ್ಚಿದ ಅನುಭವ
    ಚರ್ಮ ಸುಕ್ಕು ಗಟ್ಟಿದರೂ ಹೊಸ ಹೊಸದರಂತೇ
    ಇರುತ್ತಂತೆ.....

    ಇನ್ನು ನಮ್ಮ ನಿಮ್ಮಂಥವರಿಗೆ ಕೇಳಬೇಕಾ.......?

    ಎಷ್ಟು ಜನರಿಗೆ ಅವಳೇ ಸಿಕ್ತಾಳೆ.......
    ಗರಿ ಬಿಚ್ಚಿಸಿದವಳು.....!!!!!

    ಒಳ್ಳೊಳ್ಳೆ ಸಾಲುಗಳು.......

    ReplyDelete
  2. ವಾಹ್ !...

    ಎಂಥಹ ಸುಂದರ ಚಿತ್ರಣ.. ಈ ಭಾವಗೊಂಚಲು !

    ReplyDelete
  3. ಅಂದು ಅವಳು ನಕ್ಕಾಗ, ಕರ್ಕಶವಾಗಿ ಕೂಗುವ ಕಾಗೆಯು ಕೀಟಲೆ ಮಾಡುವಂತ ತುಂಟ ಮಿತ್ರನಂತೆ ಕಂಡು ಇಂದು ಅವಳಿಲ್ಲದಾಗಾ ಕೋಗಿಲೆಯ ದನಿಯು ಕರ್ಕಶವಾಗಿ ಕೇಳುತ್ತದೆ..!!!! ಕನಸುಗಳೇ ಹಾಗೆ ಗರಿಗೆದರಿದಾಗ ಆಗಸಕ್ಕೆ ನೆಗೆಯುವಷ್ಟು ಹಗುರವಾಗಿಸಿದರೆ, ಕೈಗೆಟುಕದಾದಾಗ ಭುಮಿಯಲ್ಲಿಯು ನಿಲ್ಲಲಾರದಷ್ಟು ಭಾರವಾಗಿಸಿಬಿಡುತ್ತವೆ.. ಭಾವಗಳ ಗೊಂಚಲುಗಳು ಅದ್ಭುತವಾಗಿವೆ

    ReplyDelete
  4. ಮೆಚ್ಚಿದ ತಮಗೆಲ್ಲ ಧನ್ಯವಾದಗಳು...
    ಈ ಪ್ರೀತಿ ಹೀಗೇ ಇರಲಿ...

    ReplyDelete
  5. ತು೦ಬಾ ಅದ್ಭುತವಾದ ಸಾಲುಗಳು....:) ಇಷ್ಟವಾಯಿತು. ಕನಸುಗಳೇ ಹಾಗೆ.... ಮತ್ತೆ ಆ ಕನಸುಗಳು ನಿಮ್ಮ ಬಾಳಿನಲ್ಲಿ ಬಾಡದ೦ತೆ ಅರಳಲಿ......:)

    ReplyDelete
  6. ಅಂದೂ:
    ಇದು ನಮ್ಮದೇ ಕನಸ್ಸಿನ ಚಿತ್ರಣ.

    ಕಾರಣ:
    ಇದು ನನಗೆ ಹಳೆ ನೆನಪುಗಳನೆಲ್ಲ ಮೀಟಿ ಹಾಕಿದ ಕವನ.

    ಇಂದೂ:
    ಮೂರ್ತತೆ ಅಮೂರ್ತತೆಯ ಸ್ಪಷ್ಟ ಸಂಕೇತ.

    ಕಾರಣ:
    ಕಳೆದುಕೊಂದ ಒಲವಿನ ವಿಷಾದ.

    ಮತ್ತು ಉಪಸಹಾರ:
    ಮತ್ತೆ ಕಂಡಾಗ ಚಿಮ್ಮುವ ಆ ಕಣ್ಣಂಚಿನ ಹನಿಗಳಿವೆಯಲ್ಲ ಅವು ನೂರು ಕಥೆಗಳ ಬರೆಯುವವು!

    ನನ್ನ ಬ್ಲಾಗಿಗೂ ಸ್ವಾಗತ.

    ReplyDelete
    Replies
    1. ಧನ್ಯವಾದಗಳು ಬದರೀನಾಥ್ ಜಿ...ನನ್ನ ಬ್ಲಾಗಿಗೆ ಆತ್ಮೀಯ ಸ್ವಾಗತ...
      ನಿಮ್ಮ ಹಲವಾರು ಬರಹಗಳನ್ನು ಓದಿದ್ದೇನೆ...ತುಂಬಾ ಇಷ್ಟಪಟ್ಟಿದ್ದೇನೆ ಕೂಡ...
      ಈ ಅಕ್ಷರ ಪ್ರೀತಿ ಹೀಗೇ ಮುನ್ಸಾಗಲಿ...

      Delete