Friday, May 1, 2020

ಗೊಂಚಲು - ಮುನ್ನೂರ್ಮೂವತ್ತೆರಡು.....

ಸ್ವಪ್ನ ಸೋಮಪಾನ.....

ನೀಲಿ ಹಾಸಿನ ಮಾಯಾ ಲೋಕದ ಅಲಂಕಾರಗಳಲಿ ಬೆರಗಿಂದ ಕಣ್ಣು ತೋಯುತ್ತ ನಿನ್ನ ಸಹವಾಸದ ನೆನಪಿನೂಟ - ಮಡಿ ಅರಿಯದ ಮನಸಿನ ಕಚಗುಳಿಯ ಮೋಹದಾಟ...
ತಾರೆಗಳ ತೋಟಕ್ಕೆ ಬೇಲಿಯಿಲ್ಲವಷ್ಟೇ - ಬಾನೆಂಬ ಬೆಳಕ ಬಯಲೆನಗೆ ನಿನ್ನ ನಗೆಯಷ್ಟೇ...
ಇಲ್ಲೀಗ ನೀನಿರಬೇಕಿತ್ತು - ಬೆಳದಿಂಗಳಲ್ಲಿ ನೆರಳ ಅಳೆಯುವ ಆಟದಲ್ಲಿ ಎದೆಯ ಹಾಡನು ಮತ್ತೆ ಕೇಳಬಹುದಿತ್ತು...
ಮೋಹ ಕವಿತೆಯಾಗುವ ಮುತ್ತು - ಬೆಳದಿಂಗಳೂಟ ಕವಿತೆ ಈ ಹೊತ್ತು...
#ಮುಸ್ಸಂಜೆ_ಕನಸು...
⇐⇎⇒

ನಿನ್ನ ನೆನಪಿನ ತಂಪಲ್ಲಿ ಸುಡುಸುಡುವ ಮಧ್ಯಾಹ್ನಗಳ ಪ್ರಾರ್ಥನೆ: 
"ಬದುಕು ಬೇಯುವುದಾದರೆ ನಿನ್ನ ತೋಳ ಬೆಂಕಿಯಲ್ಲಿ ಬೇಯಬೇಕು..."
ಸ್ವಯಂ ಬಂಧಿ ಕೋಣೆಯ ತುಂಬಾ ಬಯಕೆ ಧೂಪ ಹೊಗೆಯಾಡುತ್ತದೆ...
ಪರವಶ ಹರೆಯದ ಮೈ ಹೂ ಅರಳಲು ಹೊತ್ತು ಗೊತ್ತಿಲ್ಲ...
#ಸುಭಗತನವ_ಕದಡೋ_ಮಧ್ಯಾಹ್ನಗಳು...
⇐⇎⇒

ಯಾರೂ ಸೋಕಿರದ ಎನ್ನೆದೆಯ ಮಿದುವು ನಿನ್ನ ನೋಟದ ಬಿಸಿಗೆ ಬಿಗಿಯಾಗುವಾಗ - ಕತ್ತಲು ಬಿಚ್ಚಿಕೊಳ್ಳುವ ಮೂರು ಘಳಿಗೆ ಮುನ್ನವೇ ಕನಸ ಸೆರಗು ಸುಖದ ಮೈಮುರಿಯುತ್ತೆ...
ಹೆಣ್ಣೆದೆಯ ಕನಸು ಕಲ್ಪನೆಯಲಿ ಗಂಡು ನೀ ಹಸಿವಾಗಿ ಅರಳುವ ಪರಿಗೆ ಒಂಟಿ ಇರುಳಲ್ಲೂ ನಾಚಿಕೆಯ ಬಳ್ಳಿ ಮೈಯ್ಯೆಲ್ಲಾ ಹಬ್ಬುವುದು - ಪುರುಷಾಕಾರವೇ ನಿನ್ನ ಇನ್ಹೇಗೆ ಹೊಗಳುವುದು...
#ನೀನೀಗ_ಬಿರಿದ_ಮೊಲೆಹೂ_ಕಿಬ್ಬಿಗಳಿಂದ_ಸಿಡಿದ_ಹನಿಹನಿ_ಬೆವರು...
⇐⇎⇒

ನಿಶೆಯ ಕನಸಲ್ಲಿ ಕೂಡಿಯಾಡಿದ ಮಧುರ ಪಾಪದ ಗಾಯ - ಹಗಲೆಲ್ಲ ತುಟಿ ಸವರೋ ನಾಲಿಗೆಯಲಿ ಆ ನೆನಹಿನ ಪೇಯ...
ಕಣ್ಣ ಹಸಿವು - ನಿನ್ನ ಚೆಲುವು - ರುಚಿಯಾದ ಮರುಳು...
#ಸ್ವಪ್ನ_ಸೋಮಪಾನ...
⇐⇎⇒

ಬೆಳದಿಂಗಳು ಕತ್ತಲನು ಹನಿಹನಿಯಾಗಿ ತೊಳೆಯುವಂತೆ ನಿನ್ನಂದವ ಇಷ್ಟಿಷ್ಟೇ ಪರಿಚಯಿಸುತ್ತಾ ಲಾಗಾಯ್ತಿನಿಂದಲೂ ದುಪ್ಪಟಿಯೊಳಗಿನ ಹಸಿ ಹರೆಯದ ಕ್ರುದ್ಧ ಏಕಾಂತಕೆ ಬೆಚ್ಚಾನೆ ಉಸಿರ ಬಣ್ಣ ತುಂಬುತ್ತಿರೋ ಕನಸ ಮುಲುಕುಗಳಿಗೆ ಬೆಳಕಲ್ಲಿ ನೀನೊಂದು ಚೌಕಟ್ಟಿಲ್ಲದ ಅಪರಿಚಿತ ಭಾವ ಎಂಬುದರೆಡೆಗೆ ಕಿಂಚಿತ್ತೂ ಕಸರಿಲ್ಲ ನೋಡು...
#ನೀನೆಂಬೋ_ಸುಖಸ್ವಪ್ನ...
⇐⇎⇒

ಹೇ ಗುಡುಗಿನ ನಗೆಯವನೇ -
ನನ್ನ ನನಗೆ ಕೊಟ್ಟು ಹೋಗು...
ನಿನ್ನೆದೆಯಲಿನ ಕರಡಿ ಪ್ರೀತಿ - ಕಣ್ಣಲ್ಲಿನ ರಕ್ಕಸ ಬಯಕೆ - ಅಲ್ಲೇ ಡ್ರಾ ಅಲ್ಲೇ ಬಹುಮಾನ ಅನ್ನುವಂತ ಚೂರೂ ಕಸರಿಲ್ಲದ ವಾಚಾಳಿತನ - ಹುಸಿ ಮುನಿಸಿಗೂ ಭಯಬಿದ್ದು ಮಾರು ದೂರ ಓಡೋ ಮಳ್ಳು ಬೋಳೇತನ - ಬೆನ್ನಲ್ಲೇ ಅಟ್ಟಾಡಿಸಿ ಕಾಡಿ ಹೆಣ್ಣಾಸೆ ಅರಳಿಸುವ ಹುಚ್ಚುಚ್ಚು ತುಂಟತನ - 'ತೋಳ ಬಂಧಕೆ ಸಿಕ್ಕಿ ನೋಡು' ಅನ್ನುವಾಗಲೆಲ್ಲ ಸ್ವರ್ಗಾನೇ ಕದ್ದು ತಂದು ನಡುವ ಮೇಲಿಟ್ಟೀಯೇನೋ ಅನ್ನಿಸಿ ಒಂದೊಮ್ಮೆ ಕರಗಿಬಿಡೋ ಕಳ್ಳಾಸೆ ಮೂಡಿಸೋ ಪರಮ ಪೋಲಿತನ - ಎಲ್ಲೋ ಒಂದೆಡೆ ನೆಲೆ ನಿಲ್ಲುವ ಸಾಚಾತನ ಇಲ್ಲದ ಜಾರ ನೀನೆಂದು ಬೈಯ್ಯುವಾಗಲೂ ಈ ಕ್ಷಣ ಪೂರಾ ಪೂರಾ ನಿನ್ನವನು ಎಂದು ನನ್ನೆದೆ ಮಿದುವನು ಮಗುವಂತೆ ಸವಿದು ಹಿಗ್ಗಿ ಹಿಗ್ಗಿಸುವ ಕಳ್ಳತನ - ಹಸಿಕಾಮದಬ್ಬರ ಇಳಿದ ಮೇಲೂ ಬೆವರಿನಂಟು ಆರಗೊಡದೆ ಎದೆಗವುಚಿಕೊಂಡು ಮತ್ತೆ ಮತ್ತೆ ಮುತ್ತಿನ ಲಾಲಿಯೊಡನೆ ಕುಚ್ಚು ತಟ್ಟಿ ಸವಿ ನಿದ್ದೆಗೆಳೆಯೋ ಅಪರೂಪದ ಗಂಡಸುತನ...
ಇಂಥವೇ ಸಣ್ಣ ಸಣ್ಣ ಕಾರಣಗಳು ಅಲೆಅಲೆಯಾಗಿ ಭಾವಕೋಶದಲಿ ತುಯ್ದು ನಿನಗಾಗಿ ಕಾಯುವ, ಎಲ್ಲ ಬೇಲಿಗಳ ಮುರಿದು ನಿನ್ನೆದೆಗೆ ಹಾಯುವ ಹೆಣ್ಣಾಗಿಸಿಬಿಡುತ್ತೆ ಕಣೋ ನನ್ನ - ಗಂಡು ದರ್ಪವಿಲ್ಲದ ನಿನ್ನ ಹಗುರ ಸ್ಪರ್ಶ ಸೋಕಿದ್ದು ಮೈಯ್ಯನಾದರೂ ಅದರ ಗುರುತುಳಿದದ್ದು ಮನದಲ್ಲಿ ಕಣಾ ಬೈರಾಗೀ...
ಇವನೆಲ್ಲ ಹೇಳಬಹುದೋ, ಹೇಳಬಾರದೋ ನಾ ನಿನಗೆ - ಹೇಳಿದರೂ, ಹೇಳದೇ ನುಂಗಿದರೂ ಮರು ಹಗಲು ನಿನ್ನ ಹೆಗಲಲ್ಲಿ ತಿರುಗಿ ನೋಡದ ಜೋಳಿಗೆ...
ನಿನ್ನ ಕೂಡಿದ, ಕೂಡಬಹುದಾದ ಕಾಡು ಹಾದಿಯ ಮಗ್ಗುಲ ಕಿರು ತೊರೆಯ ನೀರ ತಂಪು ಮೈ ಕೊರೆದಷ್ಟೂ ಏಕಾಂತ ಸುಡುತಲಿದೆ...
ಆವರ್ತನದಲಿ ಎರಡನೇ ಇರುಳು ನೀ ನೆಲೆ ನಿಂತ ಕೇರಿಯ ಹೆಸರಿದ್ದರೆ ಹೇಳೋ...
ಅಂಟಿಕೊಳ್ಳುವ ಭಯದಲ್ಲಿ ಅದೆಷ್ಟು ಊರೂರು ಅಲೆಯುವಾ ಮರುಳೋ...!!
#ಹೆಸರಿಲ್ಲದ_ಕಪ್ಪು_ಹುಡುಗಿ...
⇐⇎⇒

ಊರು ಮುಗಿಯುವ ಕೊಟ್ಟಕೊನೇ ತಿರುವಿನಲ್ಲೂ ಮತ್ತದೇ ನೆನಹು - ಆ ಚಣ ಆ ಮನೆಯ ಒಳಜಗ್ಳಿಯ ತಿಳಿಗತ್ತಲಲ್ಲಿ ಸುತ್ತ ಸುಳಿದ ಮೋಹದ ನೆರಳು...
ಹರೆಯವ ಘಮ ಘಮಿಸಿ ಕಾಯದ ಒಳ ಭಾವಗಳಿಗೆಲ್ಲ ಹಸಿ ಬಿಸಿ ಕಾವು ತುಂಬಿದ ಆ ಆಸೆ ಕಂಗಳ ಜೀವದ ಹೆಸರು ಕೇಳಲು ಸೋತೆ...
#ನೀನು...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

No comments:

Post a Comment