Friday, January 25, 2013

ಗೊಂಚಲು - ಐವತ್ತು ಮತ್ತು ಒಂಭತ್ತು.....

ಬೆಳದಿಂಗಳ ನಗು.....
...ಇದು ನನ್ನೆಡೆಗಿನ ನಿಮ್ಮಗಳ ನಿಷ್ಕಾರಣ ಪ್ರೀತಿಯ ಅಭಿಮಾನಕ್ಕೆ ಮತ್ತು ನನ್ನ ಭಾವ ಬರಹಗಳ ಗೊಂಚಲಿಗೆ ಎರಡು ವಸಂತಗಳು ಸಂದ ಸಂಭ್ರಮದ ನಗು...ನಿಮ್ಮ ಪ್ರೀತಿಗೆ ನನ್ನ ನಮನಗಳು...ಈ ಪ್ರೀತಿ ಅನವರತ ಜಾರಿಯಲಿರಲಿ ಇದೇ ರೀತಿ...ಅಕ್ಷರ ಪ್ರೀತಿ ಬೆಸೆಯಲಿ ಬಂಧಗಳ...ವಿಶ್ವಾಸ ವೃದ್ಧಿಸಲಿ - ಶ್ರೀ...

ಹೊರಗೆ ಬೆಳದಿಂಗಳಿದೆ. 
ಬೆಳದಿಂಗಳು ನನಗ್ಯಾವತ್ತೂ ಆಕರ್ಷಣೀಯವೇ.
ಹಾಗೇ ನೋಡ್ತಿದ್ದೆ.
ಏನೋ ಗಡಿಬಿಡಿ ಇರುವಂತೆ, ಯಾರನ್ನೋ ತುರ್ತಾಗಿ ನೋಡಲೇಬೇಕೆಂಬಂತೆ ಒಂದು ಉಲ್ಕೆ ಬಾನಲ್ಲಿ ವೇಗವಾಗಿ ಓಡ್ತಾ ಇತ್ತು.
ಕಣ್ಣಿಗೆ ಕಾಣೋವರೆಗೂ ಅದನ್ನ ನೋಡಿದೆ.
ಎಂಥ ಖುಷಿ ಗೊತ್ತಾ...

ಮೊದಲ್ಯಾವತ್ತಾದ್ರೂ ಬರೆದಿದ್ದೀನಾ.?
ನೆನಪಿಲ್ಲ.
ಏನಂದ್ರೆ -
ಬೆಳದಿಂಗಳ ರಾತ್ರಿಗಳಲ್ಲೂ ವೈವಿಧ್ಯವಿದೆ ಕಣ್ರೀ.
ಹುಣ್ಣಿಮೆಯಂದು ಹೊಳೆವ ಪ್ರಕೃತಿಗೂ, ಬಿದಿಗೆಯಂದು ಕಾಣೋ ಸೃಷ್ಟಿ ಸೌಂದರ್ಯಕ್ಕೂ ವ್ಯತ್ಯಾಸವಿದೆ.
ಬೆಳದಿಂಗಳ ಚೆಲ್ಲೋ ಚಂದಿರನೊಬ್ಬನೇ.
ಕೆಳಗೆ ಅರಳಿ ನಳನಳಿಸೋ ವಸುಧೆಯೂ ಒಬ್ಬಳೇ.
ಆದರೂ ವೈವಿಧ್ಯ.
ಬೆಳದಿಂಗಳು ಪ್ರಖರವಾಗಿರುವ ಪೌರ್ಣಿಮೆಯಂದು ವಸುಧೆ -
ಹಾಲಲ್ಲಿ ಮಿಂದು ಮೈಯೊರೆಸಿಕೊಳ್ಳುವುದನ್ನು ಮರೆತವಳಂತೆ,
ಕಪ್ಪಂಚಿನ ಬಿಳಿಸೀರೆಯನುಟ್ಟು ಪ್ರಚ್ಛನ್ನವಾಗಿ ನಗುತ್ತ ನಿಂತ ಪ್ರಬುದ್ಧ ಚೆಲುವೆಯಂತೆ ಗೋಚರಿಸುತ್ತಾಳೆ.
ಅದೇ ಬಿದಿಗೆ ಮತ್ತು ಆಚೀಚಿನ ದಿನಗಳಲ್ಲಿ -
ಬಾಗಿಲ ಮರೆಯಿಂದ ಅಸ್ಪಷ್ಟವಾಗಿ ಇಣುಕುವ,
ತೆಳ್ಳನೆಯ ನಾಚಿಕೆಯ ತೆರೆ ಹೊದ್ದ,
ಕಡೆಗಣ್ಣಲ್ಲೇ ನೋಡಿ,
ತುಟಿಯಂಚಲ್ಲೇ ನಕ್ಕೂ ನಗದಂತಿರುವ
ಹೊಸ ಹರೆಯದ ಚೆಲುವರಳುವ ಸಮಯದ ಮುಗುದೆಯಂತೆ ಕಂಡು ಪುಳಕವೆಬ್ಬಿಸುತ್ತಾಳೆ.
ಎಂಥ ಸವಿರಸ ರೋಮಾಂಚನ...

                                  @@@@@


ಮೊನ್ನೆ ದಿನ ಬಿದಿಗೆಯ ಚಂದಿರ ಆಗಸದಿ ನಗುತಲಿದ್ದ.
ಆತ ಚೆಲ್ಲಿದ ಬೆಳದಿಂಗಳು ನೊರೆ ಹಾಲಿನಂತೆ ತೆಂಗು, ಅಡಿಕೆ, ಮಾವಿನ ಮರಗಳ ಮೇಲೆಲ್ಲಾ ಓಕುಳಿಯಾಡುತಿತ್ತು.
ಅಂಗಳದಲಿ ನಿಂತು ನೋಡಿದರೆ ಹಾಯೆನಿಸುವಂತಿತ್ತು.
ಒಂದು ಕ್ಷಣ ಇಂದು ಹುಣ್ಣಿಮೆ ಇರಬಹುದಾ ಅಂತ ಅನುಮಾನ ಪಡುವಷ್ಟು ಬೆಳದಿಂಗಳು.
ಬಿದಿಗೆಯ ಚಂದ್ರ ಹೇಗೆ ಇಷ್ಟೆಲ್ಲ ಬೆಳಗಲು ಸಾಧ್ಯ ಅನ್ನಿಸ್ತು.
ಸೂರ್ಯನಿಂದ ಸ್ವಲ್ಪ ಜಾಸ್ತಿಯಾಗಿ ಬೆಳಕ ಇಸಿದುಕೊಂಡಿರಬಹುದಾ ಅಂತ ಯೋಚಿಸ್ತಿದ್ದೆ.
ಆದ್ರೆ ಅದು ಸರಿಯಾದ ಕಾರಣವಲ್ಲಾ ಅಂತ ನಂಗೇ ಗೊತ್ತಾಗ್ತಿತ್ತು.
ತಲೆಯೆತ್ತಿ ಸರಿಯಾಗಿ ಚಂದ್ರನ್ನ ನೋಡಿದ್ರೆ ಏನೋ ಕಚಗುಳಿಯಿಂದ ಸ್ಫೂರ್ತಗೊಂಡ ಉಲ್ಲಾಸದಂಥದ್ದು ಅವನ ಮೊಗದಲ್ಲಿತ್ತು.
ಏನಿದ್ದೀತು ಕಾರಣ ಅಂತ ಅವನು ಮತ್ತೆ ಮತ್ತೆ ನೋಡುತ್ತಿದ್ದ ಕಡೆಗೆ ತಿರುಗಿ ನೋಡಿದೆ.
ಫಕ್ಕನೆ ಉತ್ತರ ಸ್ಪಷ್ಟವಾಯ್ತು.
ದುಂಡು ಮಲ್ಲಿಗೆಯೊಂದು ಬಿರಿದಂತೆ,
ಯಾವುದೋ ಸವಿ ನೆನಪು ಕೈಜಗ್ಗಿ ಕಾಡಿದಂತೆ,
ಹಾಗೇ ಸುಮ್ಮನೆ
ನೀನಲ್ಲಿ ನಿಂತು ನಗುತಲಿದ್ದೆ...
ಚಂದಿರ ನಿನ್ನ ಕೆನ್ನೆ ಗುಳಿಯನು ತನ್ನ ಬೆಳಕಿಂದ ತಾಕಿ ಉಲ್ಲಸಿತನಾಗುತಿದ್ದ...

ಸಣ್ಣ ಆಸೆ ನನ್ನಲ್ಲಿ...
ನಿನ್ನ ನಗುವ ಹಿಂದಿನ ಮಧುರ ನೆನಪಲ್ಲಿ ನಾನಿರಬಹುದಾ..!!!

ಹುಣ್ಣಿಮೆಯ ದಿನ ಬಿಳಿ ಮೋಡದ ಹದವಾದ ತೆರೆಯೊಂದು ಚಂದ್ರನ ಸುತ್ತುವರಿದರೆ ಅವನ ಸುತ್ತ ತಿಳಿಕೇಸರಿಯ ಬಳೆಯಂಥ ಪ್ರಭಾವಲಯವೊಂದು ಮೂಡಿನಿಲ್ಲುತ್ತದೆ.
ಆ ಸೊಬಗ ನೋಡಿದ್ದೀಯಾ ಒಮ್ಮೆಯಾದರೂ..?
ಆ ಚೆಲುವ ಹೀರಿಕೊಳ್ಳುವುದು ಕಣ್ಣಿಗೊಂದು ಹಬ್ಬ.


ಅವತ್ತೂ ಹಾಗೇ ಆಗಿತ್ತು...
ಅದ್ಯಾರದೋ ಮದುವೆ ಮನೇಲಿ ಗೆಳತಿಯರ ಹಿಂಡಿನ ನಡುವೆ ತಿಳಿಕೇಸರಿ ಸೀರೆಯಲಿ ನಗುತ ಕಂಗೊಳಿಸುತ್ತಿದ್ದ ನಿನ್ನ ಮೊದಲಬಾರಿ ನಾ ಕಂಡಿದ್ದೆ.
ಸಮ್ಮೋಹಿತನಾದ ನನ್ನಲ್ಲಿ ಹಗಲಲ್ಲೇ ಆ ಹುಣ್ಣಿಮೆ ಚಂದಿರನ ಕಂಡಂಥ ಭಾವ ಸಮ್ಮಿಲನ...

ಹುಡುಗೀ -
ನಿನ್ನ ಮುಂಗುರುಳ ಸುರುಳಿಯಲಿ ಬಂಧಿಯಾದ ನನ್ನ ಮನಸಲೀಗ ಒಲವಿನಲೆಗಳ ಅಬ್ಬರ...
ಮೊದಲೆಲ್ಲ ಬೆಳದಿಂಗಳ ಬೆಳಕಲ್ಲಿ ಭುವಿಯ ನೋಡಲು ಎಷ್ಟು ಸೊಗಸಿತ್ತು.
ಈಗೀಗ ಚಂದ್ರನ ನೋಡಿದರೆ ನಿನ್ನೇ ನೋಡಿದಂತಾಗಿ ಇಹವ ಮರೆವ ನನ್ನ ಮನದ ಪರಿಯ ಹೇಗೆ ಹೇಳಲಿ ನಿನಗೆ...

ನನ್ನ ಒಲವಿನ ಕನಸ ತುಂಬ ನೀನೇ - ಬರೀ ನೀನೇ
'ಪೌರ್ಣಿಮೆ....'

ಚಿತ್ರ ಕೃಪೆ : ಅಂತರ್ಜಾಲದಿಂದ...

6 comments:

  1. ನಿನ್ನ ನಗುವ ಹಿಂದಿನ ಮಧುರ ನೆನಪಲ್ಲಿ ನಾನಿರಬಹುದಾ..!!!

    ಮಧುರವಾದ ಕಲ್ಪನೆ....

    ಮತ್ತೆ ಮತ್ತೆ ಮನಸನ್ನು ಮೃದುವಾಗಿಸಲು..... ರೋಮಾಂಚನಗೊಳಿಸಿಕೊಳ್ಳಲು ಬೆಳದಿಂಗಳಿನ ಆಹ್ಲಾದ ಸಾಕು.... ಭಾವಗಳ ಗೊಂಚಲು ಒಂದಕ್ಕೆ ನೂರಾಗುವುದು ಹಾಗೆಯೇ....

    ಎರಡು ವರ್ಷ ಸಂದಿದೆ......
    ಇದೇ ಎರಡು ಹನ್ನೆರಡು ಇಪ್ಪತ್ತೆರಡು........ ಎರಡೆರಡಾಗಿ ನೂರಾಗಲಿ..... ಶುಭ ಹಾರೈಕೆ ಸದಾ......

    ReplyDelete
  2. ನಿಮ್ಮ ಬ್ಲಾಗ್ ಎರಡು ವರ್ಷ ಯಶಸ್ವಿಯಾಗಿ ಪೂರೈಸಿದ್ದಕ್ಕೆ ಅಭಿನಂದನೆಗಳು....ಶ್ರೀ... :))

    ReplyDelete
  3. ಅಭಿನಂದನೆಗಳು ....ಈ ಗೊಂಚಲು ಬೆಳೆಯುತ್ತಲೇ ಇರಲಿ.....ಸುಂದರ ಬರಹ...ಧನ್ಯವಾದಗಳು...

    ReplyDelete
  4. ಮನೋಹರ ಬರಹಗಳ ಸರದಾರ ಕಂಚೀಮನೆ. ಅಭಿನಂದನೆಗೆಳು. :)

    ReplyDelete
  5. ತುಂಬಾ ರಮಣೀಯ ಚಿತ್ರಣ ಹುಣ್ಣಿಮೆಯದ್ದೂ ಮತ್ತೆ ಅದರಂಥದೇ ಆ ಹುಡುಗಿಯ ವ್ಯಕ್ತಿತ್ವದ್ದೂ...

    ReplyDelete
  6. ಅಭಿನ೦ದನೆಗೆಳು ಶ್ರೀವತ್ಸ... ಹುಣ್ಣಿಮೆಯ ಚೆಲುವನ್ನು ಬಹಳ ಚೆನ್ನಾಗಿ ವರ್ಣಿಸಿದ್ದೀರಿ...

    ReplyDelete