Saturday, June 22, 2013

ಗೊಂಚಲು - ಎಪ್ಪತ್ತಾರು.....

ಹೀಗೊಂದಿಷ್ಟು.....

ಬಾಳ ಪಯಣದ ತುಂಬ
ನಗೆ ಮಲ್ಲಿಗೆಯ ಚೆಲ್ಲಿ 
ಒಲವ ಗೀತೆಯ ನಾನು
ಹಾಡಬಲ್ಲೆನೇನು...
ಆಸೆ ದೋಣಿಯನೇರಿ
ನೋವ ಅಲೆಗಳ ಹಾರಿ
ಮಗುಚಿ ಬೀಳದೆ ನಾನು
ಆ ತೀರದೆಡೆಗೆ ತೇಲಬಲ್ಲೆನೇನು...

ಮರಣದೂರಿನ ಕಡೆಗೆ
ದಾಪುಗಾಲಿನ ನಡಿಗೆ
ಅರೆಕ್ಷಣವೂ ನಿಲ್ಲದೀ
ಕಾಲನಂಬಿನ ಚಲನೆ...
ದಾರಿ ಏರನು ಏರಿ
ಸುಸ್ತಾದ ಈ ಹೃದಯದಲಿ
ಏರಿಳಿವ ಪ್ರತಿ ಉಸಿರಲೂ
ಸತ್ತ ಕನಸಿನ ಹೆಣದ ವಾಸನೆ...

ಇದ್ದಲ್ಲಿ ಇರಲಾರದೀ
ಮಹಾ ಚಂಚಲ ಮನಕೆ
ಎಲ್ಲ ಮೀರುವ ಬಯಕೆ
ಆಗೊಮ್ಮೆ ಈಗೊಮ್ಮೆ...
ಗೆದ್ದುದೇನೂ ಇಲ್ಲ
ಬಾಯಿ ಬೊಗಳೆಯ ಬೆಲ್ಲ
ಕೈ ಮೀರಿದ್ದೇ ಎಲ್ಲ
ಹುಟ್ಟೊಮ್ಮೆ ಸಾವೊಮ್ಮೆ...

6 comments:

  1. ಸತ್ತ ಕನಸಿನ ಹೆಣದ ವಾಸನೆ.
    ಪೂರ್ಣ ಪದ್ಯದ ಲಯಕ್ಕೆ ಇದೊಂದು ಸಾಲು ಯಾಕೋ ಹೊಂದಿಕೊಳ್ಳುತ್ತಿಲ್ಲ ಎನಿಸಿತು. ಉಳಿದಂತೆ ಭಾವ,ಅರ್ಥ, ಲಯಗಳ ಚಂದದ ಕವಿತೆ. ಹೃದ್ಯವಾಗಿದೆ.

    ReplyDelete
  2. ಕೈ ಮೀರಿದ್ದೇ ಎಲ್ಲ
    ಹುಟ್ಟೊಮ್ಮೆ ಸಾವೊಮ್ಮೆ...

    ನೋಡು ಎಷ್ಟು ಚಂದ ಮತ್ತೆ ಅದರ ಸತ್ಯ....
    ೆಲ್ಲ ಕೈಮೀರಿದ್ದೇ ಇರುವಾಗ ತೇಲುವೆನೋ ಮುಳುಗುವೆನೋ
    ಅನ್ನೋ ಚಿಂಂತೆಯೇ ಬೇಡ....
    ತೇಲಿ ದಡಕ್ಕುರುಳಲು ಪ್ರಯತ್ನ ಜಾರಿಯಲ್ಲಿಟ್ಟರಾಯಿತು....
    ಯಾವ ದಡ ಕೇಳಬೇಡ...
    ಮುಗುಚಿ ಬೀಳದೇ ದಡ ಸೇರಿದರೆ
    ಅದೊಂದು ಅನುಭವ ಕಡಿಮೆಯಾದೀತು.....
    ಮುಗುಚಿ ಬೀಳೋಣ...ಎದ್ದು ಹಾರೋಣ...
    ಯಾವುದಕ್ಕೂ ಎಲ್ಲ ಅನುಭವಗಳೂ ಇರಲಿ...

    ಚಂದನೆಯ ಕವಿತೆ.... ಶರಣು......


    ReplyDelete
  3. ವಾಹ್ವ್...ಎಷ್ಟು ಚಂದದ ಸಾಲುಗಳು ..ಬಾಳ ಪಯಣದ ತುಂಬ
    ನಗೆ ಮಲ್ಲಿಗೆಯ ಚೆಲ್ಲಿ
    ಒಲವ ಗೀತೆಯ ನಾನು
    ಹಾಡಬಲ್ಲೆನೇನು...
    ಆಸೆ ದೋಣಿಯನೇರಿ
    ನೋವ ಅಲೆಗಳ ಹಾರಿ
    ಮಗುಚಿ ಬೀಳದೆ ನಾನು
    ಆ ತೀರದೆಡೆಗೆ ತೇಲಬಲ್ಲೆನೇನು...

    ReplyDelete
  4. ತುಂಬಾ ಇಷ್ಟವಾಯಿತು ಗೆಳೆಯ.

    ReplyDelete
  5. ಇಷ್ಟವಾಯ್ತು ಪದಗಳ ಭಾವ ಲಹರಿ .

    ಮಧ್ಯ ನೆನಪಾಗೋ ,ಕಷ್ಟವಾಗೊ,ದುಃಖವಾಗೋ ಒಂದಿಷ್ಟು ಬೇಡದ ಭಾವಗಳನ್ನ ಇದೆ ಸಾಗರದ ಅಲೆಗಳ ಜೊತೆ ತೇಲಿಬಿಡಿ ಕೊಚ್ಚಿಹೋದೀತು ಅದೂ ಮನದಿಂದ .
    ಹಗುರಾದೀತು ಕಣ್ಮನ .
    ತೀರದಲ್ಲಿ ನಿಂತು ದಿಗಂತದೆಡೆಗೆ ಮಂದಹಾಸದ ಕೈ ಚಾಚಿ ,
    ಆಗಸವನೂ ಬಾಚೋ ಇದೇ ಹುರುಪು ,ಉತ್ಸಾಹ ಯಾವತ್ತೂ ಇರಲಿ ಹೀಗೆಯೇ .


    ReplyDelete
  6. ಭಾವನೆ ತೀವ್ರವಾಗಿದೆ.. ದಾಪುಗಾಲಿನ ಪಯಣ ಗುರಿ ಮುಟ್ಟಲಿ.. ಕನಸು ನನಸಾಗಲಿ

    ReplyDelete