Thursday, January 30, 2014

ಗೊಂಚಲು - ಒಂದು ಸೊನ್ನೆ ಆರು.....

ಹಾಗೀಗೆ.....
(ಆಗೀಗ ಕಾಡುವ ಭಾವಗಳು...)

ಕತ್ತಲೆಯ ತಬ್ಬಿ ನಾ ಕಿರುಬೆರಳಲಿ ಬರೆದ ಮಧುರ ಕಾವ್ಯ – ನಿನ್ನ ಬೆತ್ತಲೆ ಬೆನ್ನ ಹಾಳೆಯ ಮೇಲೆ ನನ್ನ ಹೆಸರು...

***

ಕನಸುಗಳು ಓಡಾಡದ ಕೇರಿಯಲ್ಲಿ ಬದುಕ ಕಾವ್ಯ ಕಟ್ಟ ಹೊರಟವನಿಗೆ ಕತ್ತಲೆಯೇ ಆತ್ಮ ಸಂಗಾತಿ...

***

ಮನಸಿಂದು ಕನಸುಗಳ ಹೆಣದ ಮನೆ...
ಅಲ್ಲಿ ಪ್ರಜ್ಞಾಪೂರ್ವಕವಾಗಿ ಹಚ್ಚಿಟ್ಟ ನಗೆಯ ಹಣತೆಯ ಸುತ್ತ ಕೂಡ ಹೆಣದ್ದೇ ವಾಸನೆ...

***

ಅಂಗಳದಲ್ಲಿ ನಗೆಯ ಹಣತೆ ಹಚ್ಚಿಟ್ಟಿದ್ದೇನೆ - ಹೊರಗೆಲ್ಲ ತಂಪು ಬೆಳಕು...
ಒಳಮನೆಯ ಕತ್ತಲಿಗೆ ಹೊರಗಣ ಬೆಳಕ ದರ್ದಿಲ್ಲ - ಅಲ್ಲಿ ನಿತ್ಯವೂ ನಿರಂತರ ಕನಸುಗಳ ಗರ್ಭಪಾತ...
ತಡೆಯೋಣವೆಂದರೆ ಕಾಲನಿಗೆ ನಮ್ಮ ಯಾವ ಕಾನೂನುಗಳ ಹಂಗೂ ಇಲ್ಲವಲ್ಲ...

*** 

ಖಾಲಿ ಖಾಲಿ ಕಾಗದದ ಹೂವು ನಾನು...
ನೋಟಕ್ಕೆ ಹೂವು ಚಂದವೇ – ಬಣ್ಣ, ಗಂಧಗಳಿಲ್ಲ ಅಷ್ಟೇ – ಅರಳಿ ನಗುವ ಜೀವಂತಿಕೆ ಕೂಡ...
ಹಾಂ, ಸಹಜವಾದುದಲ್ಲವಾದರೂ ಬಣ್ಣವ ಬಳಿಯಹುದೇನೋ ಅಷ್ಟಿಷ್ಟು – ಆದರೆ, ಉಸಿರನೆಲ್ಲಿಂದ ತುಂಬಲಿ...

***

ಅವತ್ತೊಂದಿನ ಪುಟ್ಟ ಗೆಳತಿ ಹೇಳಿದ್ದಳು “ಏನಕ್ಕೋ ಅಷ್ಟೊಂದು ನಕ್ಕಿದ್ದು – ಯಾಕೋ ಭಯವಾಯಿತು...”
ಮತ್ತೊಬ್ಬ ಗೆಳತಿಯಿಂದ ಮೊನ್ನೆ ಮತ್ತದೇ ಮಾತು “ತುಂಬಾನೇ ನಗ್ತೀಯಪ್ಪ – ನೀ ಖುಷಿಯಾಗಿಲ್ಲ ಅನ್ನಿಸುತ್ತೆ...”
ಅರೇ ತುಂಬು ನಗೆಯೂ ಅಳುವಿನಂತೆ ಕೇಳಿಸುತ್ತಾ...!!!!
ಚಿಕ್ಕವರಿದ್ದಾಗ ಅಮ್ಮ ಅಂತಿದ್ದ ಮಾತು ನೆನಪಾಯ್ತು – ತುಂಬ ನಗಬೇಡ್ರೋ ಆಮೇಲೆ ಅಳಬೇಕಾಗುತ್ತೆ...
ಅಳುವ ಮುಚ್ಚೋದಕ್ಕಾಗಿ ನಗುವುದಾ...?
ಮತ್ತೆ ಅಳಬೇಕಾಗುತ್ತೆಂದು ನಗದೇ ಇರುವುದಾ...??
ಅಳು ಮತ್ತು ನಗು ಎರಡೂ ಉಳಿಸಿ ಹೋಗುವುದು ಒಂದು ಹನಿ ಕಣ್ಣೀರು, ಒಂದು ಸಣ್ಣ ಮೌನ ಅಷ್ಟೇ ಅಲ್ಲವಾ...
ಆದರೂ ನಗೆಯ ಮೌನಕೆ, ಅದರ ಕಣ್ಣೀರಿಗೆ ಬೇರೆಯೇ ಶಕ್ತಿ ಇದೆಯೇನೋ ಬಿಡಿ...
ಹಾಗೆಂದೇ ನನ್ನ ನಗು ಸುತ್ತಣವರಲ್ಲಿ ಒಂದು ಸಣ್ಣ ನಗು ಮೂಡಿಸಿದರೂ, ಅಳು ನುಂಗಿ ನಕ್ಕದ್ದಾದರೂ ಆ ನಗುವಿಗೆ ಸಾರ್ಥಕ್ಯವೇ ಅಲ್ಲವಾ...
ಆದರೂ, ನಗು ಉಕ್ಕಿ ನಗಬೇಕು ಆಗೀಗಲಾದರೂ...

***

ಸಂತೆಯ ನಡುವೆ ಕಳಕೊಂಡ ಶಾಂತಿ ಅಲ್ಲೇಲ್ಲೋ ಖಾಲಿ ಖಾಲಿ ದಾರಿಯ ಕತ್ತಲ ತಿರುವಲ್ಲಿ ದಕ್ಕಿಬಿಟ್ಟೀತು...
ಆದರೆ ಖಾಲಿ ಖಾಲಿ ಒಂಟಿ ದಾರೀಲಿ ಕಾಡುವ ಒಂಟಿತನ ಸಂತೆ ಮಡಿಲಲ್ಲೂ ಕಳೆದು ಹೋಗದೇ ಕೊಲ್ಲುವ ಪರಿಗೆ ಏನೆನ್ನಲಿ...
ಸುತ್ತೆಲ್ಲ ಮಾತು – ನಗುವಿನ ಘಂಟೆ ಜಾಗಟೆ...
ಎದೆಯ ಗರ್ಭಗುಡಿಯ ತುಂಬೆಲ್ಲ ಶಾಶ್ವತ ಸ್ಮಶಾನ ಮೌನ...
ಅಲ್ಲೂ ದೀಪವೇನೋ ಉರಿಯುತ್ತಿದೆ – ಆದರೆ ಸಾವಿನ ಮನೆಯ ದೀಪ  ಕೂಡ ನೋವನ್ನೇ ಪಸರಿಸುತ್ತಲ್ಲವಾ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

6 comments:

 1. "ಸಾವಿನ ಮನೆಯ ದೀಪ ಕೂಡ ನೋವನ್ನೇ ಪಸರಿಸುತ್ತಲ್ಲವಾ..." ಎನ್ನುವ ನಿಮ್ಮ ಮಾತು ಸರ್ವ ವಿದಗಳಲ್ಲೂ ನಿಜವನ್ನೇ ಹೇಳುತ್ತದೆ.
  ಹಲವು ಭಾವಗಳ ಸಮ್ಮಿಲನ ಈ ಪೋಸ್ಟ್ :)

  ReplyDelete
 2. ಶ್ರೀವತ್ಸ ಅವರ ಬರವಣಿಗೆಯ ಮೋಡಿ.... ತುಂಬಾ ಸೊಗಸು !

  ReplyDelete
 3. ಸೊಗಸಾದ ಭಾವನೆಗಳ ಗುಚ್ಛ.....!

  ReplyDelete