Wednesday, May 7, 2014

ಗೊಂಚಲು - ನೂರರ ಮೇಲೆ ಹದಿನೇಳು.....

ಸುರಿದ ಸೋನೆಯು ಸೋಕಿ.....
(ಮಳೆಯ ಭಾವಗಳು...)

ಗೆಳತೀ - 
ಕಣ್ಣ ರೆಪ್ಪೆಯ ತಾಕಿದ ಈ ಸಂಜೆಯ ಈ ಇಲ್ಲಿಯ ಮಳೆ ಹನಿಗಳು ಕಣ್ಣ ಮುಚ್ಚಿ ಕೂತು ಬದುಕ ಪ್ರವಾಹಕ್ಕೆ ಸಿಲುಕಿ ಬಿಟ್ಟೆದ್ದು ಬಂದ ಆ ಊರ ನೆನಪ ಧ್ಯಾನದಲ್ಲಿ ಮುಳುಗುವಂತೆ ಮಾಡುತ್ತವೆ...
ಮೊದಲ ಮಳೆಯ ಘಮದೊಂದಿಗೇ ಮನವ ಸೇರುತ್ತಿದ್ದ ಅಲ್ಲಿಯ ಆಗಿನ ತಲ್ಲಣಗಳೂ ಚೆಂದವಿತ್ತು ಅನ್ನಿಸುತ್ತೆ ಇಲ್ಲಿಯ ಈ ನೀರಸ ನಿರಾಳತೆಗಿಂತ...
ಅನ್ನವೀವ ಊರ ತೆಗಳಬಾರದು ನಾನು - ಆದರೇನು ಮಾಡಲಿ ಮಳೆಗೂ ಸೊಬಗಿಲ್ಲ ಇಲ್ಲಿ...
ಮೈ ಚುಚ್ಚುವ ಮಳೆ ಹನಿಗಳಿಗೆ ಎದೆ ಬಯಲನೊಡ್ಡಿ ನಿಂತು ಕಾಲವೆಷ್ಟಾಯಿತೋ... :(

ಕಪ್ಪು ಹುಡುಗೀ -
ಸಂಜೆ ಸೋನೆಗೆ ಮನದ ಮನೆಯಂಗಳ ನೆನೆದು ಹದವಾಗಿ ಮಿದುವಾದಾಗ ನಿನ್ನ ನೆನಪೆಂಬುದು ಮಳೆಬಿಲ್ಲ ಮಾಲೆ...
ಮನಸೀಗ ನಗುವರಳಿ ಸಂಭ್ರಮಿಸೋ ಗುಲ್ಮೊಹರು ಕಣೇ ಗೆಳತೀ...
ಈ ಸಂಜೆಯ ಮೃದು ಮೌನದಲಿ ಕನಸಾಗಿ ಹೊರಳೊ ಬೆಚ್ಚನೆ ಕವಿತೆ ನಿನ್ನ ಹೆಸರು...
ನನ್ನ ನಾಳೆಯ ಕನಸುಗಳಿಗೂ ನಿನ್ನದೇ ಹೆಸರಿಡಲಾ... ;)

ಕಪ್ಪು ಕಾಳಿಂದಿ -
ಅಲ್ಲಿಯೂ ಮಳೆಯಾಯಿತಾ...? 
ಒಲವು ಹೊಳೆಯಾಯಿತಾ...??
"ತುಂಬ ಖುಷಿಯಾಗ್ತಿದೆ ಕಣೋ ಹುಡುಗಾ, ಪಕ್ಕ ಇದ್ದಿದ್ರೆ ಮುಂಗುರುಳ ಜಗ್ಗಿ ಕೊರಳ ತಬ್ಬಿ ಬಿಡ್ತಿದ್ನೇನೋ" ಅಂತಂದು; 
ನಗೆ ಮಲ್ಲಿಗೆಯ ಘಮದ ಜತೆ ಜತೆಗೆ ನೀನೇ ನೀನಾಗಿ ಕೊಟ್ಟ ಮೊದಲ ಪ್ರೀತಿ ಪಪ್ಪಿ ಸಂದೇಶವಾಗಿ ನನ್ನ ತಲುಪಿತು...
ನನ್ನೀ ಮನವೀಗ ಕಾಗದದ ದೋಣಿಯಲಿ ತೇಲೋ ಮಗುವ ನಗುವಂತಿದೆ...
ಸಂಜೆ ಮಳೆಗೊಂದು ನಮನ... :)

ನನ್ನ ಪ್ರೇಮವೇ -
ನೆನೆದು ಬಂದೆಯಂತೆ ನೀನು - ಹನಿವ ಸೋನೆಗೆ ಕಣ್ಣು ಹೊಡೆದು...
ನಿನ್ನ ಒದ್ದೆಯಾದ ಮೈಯ ತಬ್ಬಿ ಒದ್ದೆ ಮುದ್ದೆಯಾಗುವಾಸೆ ನನದು... ;)
ನಮ್ಮೀರ್ವರ ಮನದ ಬಿಸಿ ಉಸಿರಿಗೆ ಮಳೆಯ ತಂಪೂ ನಾಚಬೇಕು - ಸೋಲಬೇಕು - ನಲಿಯಬೇಕು...
ಇಂದಿನ ಹೊಸ ರೋಮಾಂಚವೊಂದು ನಾಳೆಗಳಲೂ ಕಾಡಬೇಕು...
ನಾ ಬರುವವರೆಗೆ ಒದ್ದೆಯಾಗಿಯೇ ಇರುವುದು ಹೇಗೆ - ಚಿಂತಿಸಬೇಡ...
ಬೆರಳ ಬೆಸೆದು ಕಾಯುತ್ತ ಕೂರವಾ ಇನ್ನೊಂದು ಮಳೆಗೆ...
ಈ ಕ್ಷಣವೇ ಬರಲಾ ನಿನ್ನೂರಿಗೆ... ;)

ನನ್ನ ದಾಹವೇ -
ಮಳೆ ಸುರಿದ ರಾತ್ರಿಯಿದು ಮೈ ಮನಸು ತಂಪಾಗಿದೆ...
ಮಲಗೆನ್ನ ಮುದ್ದುಮರೀ,
ನಿದ್ದೆ ಕಣ್ಣ ರೆಪ್ಪೆಯ ತಬ್ಬಿ, ನನ್ನ ಕನಸು ನಿನ್ನ ಮನಸ ಮುದ್ದಿಸಿ ಜೀವ ಭಾವ ಝೇಂಕರಿಸಲಿ...
ನಿನ್ನೊಳಗನ್ನು ನನ್ನೊಲವು ತುಂಬಿ, ಜೀವ ದುಂಬಿ ರೆಕ್ಕೆಬಿಚ್ಚಿ ಹೊಸ ಜೀವನ್ಮುಖೀ ನಾಳೆಗೆ ಈ ಇರುಳು ಮುನ್ನುಡಿಯಾಗಲಿ...

ಬಾನ ಬೋರ್ಗರೆವ ಪ್ರೀತಿಯಿನ್ನೂ ಬಾಕಿಯಿದೆ - ಬೆಳಗಲೂ ಮೋಡವಿದೆ...
ಕಪ್ಪು ಮೋಡದಂತ ನನ ಹುಡುಗೀ -
ಬೆಳಗಿಗೊಂದು ನಗೆಯ ರಂಗೋಲಿಯನಿಡಬಾರದೇನೆ ಚೆಲುವೆ - ನನ್ನ ದಿನಕೆ ನೂರು ಬಣ್ಣ ಬಂದೀತು...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

2 comments:

  1. ಅಲ್ಲಿಯೂ ಮಳೆಯಾಯಿತಾ...?
    ಒಲವು ಹೊಳೆಯಾಯಿತಾ...??

    Yeshtu chanda bareyutti... bhaavagala soneyalli naavuu kocchi hoguva haage...

    Ishtavaayitu..
    MaLeya haadugalu...

    ReplyDelete