Thursday, January 29, 2015

ಗೊಂಚಲು - ಒಂದುನೂರಾ ನಲವತ್ತು.....

ಈ ಹಗಲಿದು ಮುಗಿಯಲೇಬಾರದು.....
(ಮಲೆನಾಡ ಮನದ ಒಂದು ಒಲವ ಬೆಳಗು...)
ಹೀಗಿತ್ತು ಅಲ್ಲಿಯ ಒಡೆತನ...
ದಿನಮಣಿಯ ಮೊದಲ ಸ್ಪರ್ಶಕೆ ಕಂಪಿಸಿ ಇಬ್ಬನಿ ಹನಿಯೊಂದು ಅಡಿಕೆ ಹೆಡೆಯ ತುದಿಯಿಂದ ಕೆಳಜಾರುವ ಘಳಿಗೆಗೆ ಸರಿಯಾಗಿ ನಿದಿರೆಯ ತೋಳಿಂದ ಕೊಸರಿಕೊಂಡು ಮೆಲ್ಲಗೆ ಕಣ್ದೆರೆದೆ...

ಮುಂಬೆಳಗಿನ ಬಂಗಾರದೋಕುಳಿಯ ಹೊತ್ತಲ್ಲಿ ಗೋಪಿ ಹಕ್ಕಿಯೊಂದು ಕಳೆದಿರುಳಲಿ ನನ್ನ ಕನಸಿನೂರ ರಾಜಬೀದಿಯ ತುಂಬ ನಿನ್ನ ಹೆಜ್ಜೆ ಗುರುತು ಮೂಡಿ ನಗೆಯ ಗಂಧವೊಂದು ಸುರುಳಿ ಸುತ್ತಿದ ಸುದ್ದಿಯ ಊರಿಗೆಲ್ಲ ಸಾರುತ್ತಿತ್ತು...

ಆ ಹಕ್ಕಿಗೊರಳನು ಹಿತ ಮುನಿಸಿಂದ ಶಪಿಸುತ್ತ ಮಂಚ ಬಿಟ್ಟಿಳಿದರೆ ಅಂಗಳದ ತುಂಬಾ ಚೆಲ್ಲಿ ರಂಗವಲ್ಲಿಯಂತಾಗಿರುವ ಪಾರಿಜಾತದ ಕುಸುಮ ವಿದಾಯದ ಘಳಿಗೆಯಲೂ ನನ್ನ ನೋಡಿ ಎಲ್ಲ ಅರಿವಾದಂತೆ ನವಿರಾಗಿ ತುಂಟ ನಗೆಯ ಬೀರಿತು...

ಹಲಸಿನ ಮರದ ಕೊಂಬೆಯ ತುದಿಯಲಿ ಅತ್ತಿಂದಿತ್ತ ಬಾಲವನೆತ್ತಿಕೊಂಡು ಸುಳಿದಾಡುತಿದ್ದ ಅಳಿಲಮರಿಯೊಂದರ ಗಡಿಬಿಡಿಯಲೂ ಎಂಥದೋ ಅವ್ಯಕ್ತ ಸಂಭ್ರಮವಿದ್ದಂತಿದೆ...

ಕರುಳಿಗೆ ಕಚಗುಳಿಯಿಡುವ ಹಿತವಾದ ಚಳಿಯೊಂದಿಗೆ ಬೆರೆತ ನಿನ್ನ ಒನಪಿನ ನೆನಪಿನ ಕಾವು ಹಬ್ಬಿ ತಬ್ಬಿ ಮನಸಿದು ಮೈನೆರೆದು ಹೋಯ್ತು...

ನಿದ್ದೆ ಮರುಳಲೇ ಆಯಿಯ ಹೂ ಹಿತ್ತಲಿಗೆ ಹೋದರೆ ಮುತ್ಮಲ್ಲಿಗೆ ಹೂವಿಗೆ ಮುತ್ತಿಟ್ಟು ಅದರೊಡಲ ಜೇನ ಹೀರುತಲಿದ್ದ ದುಂಬಿಯ ಕಂಡು ಕಾಲ ಬೆರಳ ತುದಿಯಿಂದ ನಾಚಿಕೆಯಂಥ ಒಲವ ಸೆಳಕೊಂದು ನೆತ್ತಿಗೇರಿದ ಮೃದುಕಂಪನದನುಭಾವ...

ಗಂಗೆ ಕರುವಿನ ಘಂಟೆ ದನಿಗೆ ಕನಸಲ್ಲಿ ಪಿಸುನುಡಿದ ಮಾತೊಂದು ಮತ್ತೆ ಹೊರಳಿದಂತಾಗಿ ಒಡಲಿನಾಳದಲೇನೋ ಹೊಸದಾದ ಉದ್ವೇಗದುದ್ಗಾರ...

ಹಿಂದಿರುಗಿ ನೋಡಿದರೆ ಪಾಲಿ ಬೆಕ್ಕನು ಗದರುತಿದ್ದ ಪಾಂಡು ಕುನ್ನಿಯ ಕಣ್ಣಲ್ಲೂ ಅಚ್ಚರಿ ಬೆರೆತ ಅಕ್ಕರೆ ನನ್ನೆಡೆಗೆ...

ಅಮ್ಮನ ಕೈಬಳೆಗಳ ಕಣ ಕಣದೊಂದಿಗೆ ಕಲೆತ ನೊರೆ ನೊರೆ ಹಾಲು ಬಿಂದಿಗೆ ತುಂಬೋ ಸದ್ದಿಗೆ ಕಿವಿಗಳನೊಪ್ಪಿಸಿ, ಹಂಡೆಯೊಲೆಯ ಬೆಂಕಿ ನರ್ತನದೆಡೆ ಕಣ್ಣ ನೆಟ್ಟು ಕೂತ ಈ ಬೆಳ್ಳಂಬೆಳಗಲೇ ಹುಚ್ಚೆದ್ದ  ಭಾವಗಳ ಸಂತೆ ನೆರೆದ ಮನದ ಮುಗಿಲು...

ಆಹಾ ಮುಗಿಯಲೇ ಬಾರದು ಈ ಹಗಲು...

*** ಎಂದಾದರೂ ಮತ್ತೆ ಮರಳಿ ಹೊರಳೀತು.... 

2 comments:

 1. ಕವನವೆಂದರೆ ಅದು ಓದುತ್ತಿದ್ದಂತೆ ಕಲ್ಪನೆಯ ನೌಕೆ ಏರಿಸಿ ಹೂರಣದ ಆಳಕ್ಕೆ ಹೊತ್ತೊಯ್ಯಬೇಕು.
  ಹಾಗೇ ಇದೆ ಈ ಕವನ.

  ReplyDelete
 2. ಬೆಳಗಿಗೆ ಇಷ್ಟೊಂದು ಸೊಗಸಾ..?!
  ಆಹಾ ನೀ ವರ್ಣಿಸಿದ ಪರಿ...

  ನನಗೂ ನೀ ಹೇಳಿದ ಹಗಲೇ ಬೇಕೆನ್ನೋ ಹುಚ್ಚುಚ್ಚು ಆಸೆಯೀಗ

  ReplyDelete